Monday, 25 February, 2008

ಚಿತ್ರ - ೪೨


ಶ್ರೀನಿಧಿ ಅವರು ತೆಗೆದ ಛಾಯಾಚಿತ್ರ

ಬಳ್ಳಿ ಗೆಜ್ಜೆ

ಮುಂದಲಿಗೆಯ ಅಂಚಿನಲ್ಲಿ
ಒಂದು ಚಿಲುಮೆ ಹೊರಳು
ನೆಳಲು ಬೆಳಕಿನಾಟದಲ್ಲಿ
ನಿನ್ನ ಘಲಿಲು ಘಲಿಲು

ಇಟ್ಟ ಹೆಜ್ಜೆ ಜಾಡಿನಲ್ಲಿ
ಬಳ್ಳಿ ನಡೆಯ ಕುರುಹು
ಸುತ್ತ ಸರಿವ ನಾಡಿಯಲ್ಲಿ
ಜೀವಸೆಲೆಯ ಹೊಳಹು

ಎತ್ತಲಿರುವ ಭಾರದರಿವು
ಇರದ ಪುಟ್ಟ ಮುಕುಟ
ಎದ್ದುನಿಂತ ಧೀರನಂತೆ
ಬೆಣ್ಣೆ ಮುದ್ದೆ ಬೆಟ್ಟ

ಘಲ್ಲು ಗುಲ್ಲು ಮನೆಯಲೆಲ್ಲ
ತುಂಬಿಸಿದ್ದ ನಡಿಗೆ
ಈಗ ಮೌನದಾಟವಲ್ಲ
ನೋಟ ಬೇಕು ಅಡಿಗೆ
-ಸುಪ್ತದೀಪ್ತಿ

ಅಂಗೈಯಗಲದ ಆಸೆ

ಇಟ್ಟು ನೋಡಿದರೆ ಸಾಲದು
ಕಟ್ಟ ಬೇಕು ತಾಯಿ
ಬಿಳಿ ಬೆಳಕಿನ ಮೋಹದೆದುರು
ಆಸೆ ಕಿರಣದ ಹಾಯಿ.

ತೊಟ್ಟ ಗೆಜ್ಜೆಯೊಂದೇ ಸಾಕೇ
ಜೊತೆಗಿರಲಿ ನಾದ ನಿನಾದ
ಎಂಥ ಆಳದಲ್ಲೂ ಅಂಕೆಯಿರಲಿ
ನಿನ್ನ ಮೋದ ಕಾಮೋದ.

ವಸ್ತು ಸ್ಥಿತಿ ಸ್ಪಷ್ಟವೇನು
ಹೊಸತನದಲಿ ಹೊಳೆದು
ನಿಲ್ಲದಿರಲಿ ಅಭಿಯಾನ
ಉಗುರಿನ ಕೊಳೆ ತೆಗೆದು.

ಇಷ್ಟವಾಗಿ ಸ್ಪಷ್ಟವಾಯ್ತು
ನಿನ್ನ ಮನದ ಕನ್ನಡಿ
ಅಂಗೈಯಗಲದ ಆಸೆಗಿಷ್ಟು
ಬರೆದಂತೆ ಹೊಸ ಮುನ್ನುಡಿ.
-ಸತೀಶ

Monday, 18 February, 2008

ಚಿತ್ರ - ೪೧


ಕುಮಾರಸ್ವಾಮಿ ಕಡಾಕೊಳ್ಳ ಅವರ ಕಲ್ಪನೆಯಲ್ಲಿ ಅನಾಥರು;

ದಿಕ್ಕಿಲ್ಲದ ಅನಾಥೆ ನೀನು
ದಿಕ್ಕು ಹುಡುಕುತ ನಿಂತೆ
ದೂರ ದಾರಿಯ ನಡುವೆ
ದಕ್ಕದ ಖುಷಿಯ ಬೆದಕುತ

ಎತ್ತಹೋಗಲು ದಿಕ್ಕು ಕಾಣದಿರಲು
ದಿಟ್ಟಿಸಿರುವೆ ಅತ್ತ ಇತ್ತಲು
ನೀಳ ಉಸಿರಲು ದಿಟ್ಟೆ ನೀನು
ನಿಲ್ಲೇನೆಂದೂ ಶಪತ ನಿನ್ನೋಳು

ನಿನಗೆ ನೀನೆ ಭಾರ
ನಿನಗಲ್ಲ ಇವನೊಬ್ಬ ಭಾರ
ಜೊತೆಗೂಡಿದ ಅನಾಥನ
ಹೊತ್ತು ಹೋಗುವೆ ದೂರ

ಬಿಡದೆ ಬೆನ್ನತ್ತಿಹುದು ಕಷ್ಟ
ನಿನ್ನ ನೆರಳಂತೆ ಹಿಡಿದು
ಒಡಲ ಹಸಿವಿನ ಜ್ವಾಲೆ
ಸುಡುವ ಬಿಸಿಲಿನಂತಿಹುದು

ಟೊಂಕಕ್ಕೆ ಕಟ್ಟಿ ಅರಿವೆ
ಗಂಟು ಹಾಕಿ ಬಿಗಿತಪ್ಪದಂತೆ
ಟಂಕವಾದರೇನಂತೆ ಜೋಲಿ ತಪ್ಪದೆ
ಜೊತೆಗೆ ಕರೆದೊಯ್ಯುವೆ ಅವನನು

ಎಲ್ಲೋ ಬಿದ್ದ ಬಣ್ಣದ ಬಟ್ಟೆ
ಎಕ್ಕಿ ಹುಟ್ಟಿರುವೆ ಚಂದದಿ
ತಲೆಗೆ ಕಟ್ಟಿರುವೆ ಅರಿವೆ
ಬಿಸಿಲಿಂದ ರಕ್ಷಣೆ ಅರಸಿ

ಎಲ್ಲಿ ಹೋದರು ಜನ್ಮದಾತರು
ಕಾಡುವ ಅಗೋಚರ ಭಾವದೋಳ್
ಹುಡುಕಿ ಅವರನು ಎಲ್ಲರೊಳ್
ಬಿಡದೆ ನಡೆಸಿರುವೆ ಬದುಕನು

ಒಡಲಚೀಲವ ತುಂಬಿಸಲು
ಗಂಗಳ ಹಿಡಿದು ಕರಗಳಲ್ಲಿ
ಬೇಡುವೆ ಬಯಲಲ್ಲಿ ದಿನವು
ನೊಡುವ ಮನವು ಕರಗುವಂತೆ

ನಿನ್ನ ಕಂಡ ಕ್ಷಣ ಮನವು
ಕೆಂಡವಾಯಿತು ಕಾರಣ ನೆನದು
ಬಂದು ಬಿಡು ನನ್ನ ಜೊತೆಗೆಂದು
ಕರೆವ ದೈರ್ಯ ಸಾಲದು ಯಾಕಿನ್ನು??

ಸಾಲದೆನ್ನದಂತೆ ಇದ್ದು ಎಲ್ಲದು
ಸಾಲದೇಕೋ ಕರುಣೆ ನನ್ನೋಳು
ನಿನ್ನ ಬವಣೆಯ ಹಂಚಿಕೊಳ್ಳಲು
ಯಾಕೆ ನನ್ನೋಳು ಮೀನಾ ಮೇಷವು??

ಸೂರು ಇಲ್ಲದೆ ತಿರೆಯೋಳ್
ಯಾರು ಇಲ್ಲದ ಅನಾಥೆ ನೀನು
ಸಾರವಿಲ್ಲದೆ ಬದುಕಿ ನಡೆಯುವ
ಭಾವ ಶೂನ್ಯ ಅನಾಥ ನಾನು !!


ಸಿಂಧು ಅವರ ಸ್ವಗತ;

ಪುಟ್ಟ ಬೆನ್ನಿಗಿದ್ದಾನೆ,
ಈಚೀಚೆಗಷ್ಟೇ ಹುಟ್ಟಿದ್ದು,
ಹೋದ ಮಳೆಗಾಲದಲ್ಲಿ,
ಈಗ ಬಿರುಬಿಸಿಲ ಬೇಸಿಗೆ
ಅಮ್ಮ ರಸ್ತೆ ಕೆಲಸಕ್ಕೆ.
ನನ್ನ ಬೆನ್ನಿಗೆ
ಪುಟ್ಟನ ಬುಟ್ಟಿ
ಕೈಗೆ ಜೋತಿಷದ ಮಣಿಸರ
ಕಾಲ ಕೆಳಗಣ ನೆರಳು
ಪುಟ್ಟಕಿದೆ ನಮ್ಮಂತೆ
ದಾರಿ ದೂರವಿದೆ
ಬಿಸಿಲು ಹರಡಿದೆ
ಸುತ್ತ ದೊಡ್ಡವರ ಸಂತೆ
ಕೇಳಬೇಕಿದೆಯಾ ಬನ್ನಿ
ಹೇಳಬಲ್ಲೆ ನಿಮ್ಮ ನಾಳಿನ ಕತೆ.
ನಮ್ಮದೇನಿದೆ!
ನಿನ್ನೆಗಳ ನೆನಪಿಲ್ಲ
ನಾಳೆಗಳ ಕಾಯುವುದಿಲ್ಲ
ಇಂದಿನ ತುತ್ತಿನ ಚೀಲ ಎಂದಿಗೂ ತುಂಬುವುದಿಲ್ಲ..
ಏನಾದರಾಗಲಿ,
ಈ ಬಿಸಿಲು ಕಳೆದ ಕೂಡಲೇ
ಓಡಬೇಕಿದೆ ಅಲ್ಲಿಗೆ..
ಬಿಡಾರದ ಹತ್ತಿರ
ಹೊಂಗೆಯ ನೆರಳಲಿ
ಅಪ್ಪ ಕಟ್ಟಿದ ಸೀರೆ ಜೋಲಿ
ಹೊಟ್ಟೆ ಹಸಿದರೇನಂತೆ,
ಜೀಕುತ್ತಿದ್ದರೆ ತಂಪು ಗಾಳಿ
ಬಿಳಿ ಬಿಳಿ ಹೂವಿನೋಕುಳಿ,
ಪುಟ್ಟನಿಗೂ ನಗೆ
ಕೆನ್ನೆ ತುಂಬ ಕುಳಿ..


ಸತೀಶ ಅವರ ಕಲ್ಪನೆ ಯಾರೂ ಹೋಗದ ದಾರಿ;

ಚಿಕ್ಕ ವಯಸಿಗೇ ಭಾರವನು ಹೊತ್ತೆ ತಾಯಿ
ಬಿಡಲೊಲ್ಲದು ನಿನ್ನ ಬೆನ್ನಿಗಂಟಿದಾ ಬಾಯಿ
ನೀನು ಕುಳ್ಳೋ ನಿನ್ನ ನೆರಳು ಕುಳ್ಳೋ
ಬೆನ್ನಿಗೇರಿಸಿದ ಅಪ್ಪ ಅಮ್ಮ ಮರುಳೋ.

ಛಳಿ ಇರುವ ಲೋಕಕ್ಕೆ ಹಸನಾದ ಹೊದಿಕೆ
ಬಿಸಿಲಿಗೋ ಇರಬೇಕು ಬಗೆಬಗೆಯ ಮಡಿಕೆ
ಹೂಡಿಕೆ ಕೂಡಿಕೆ ಎಂದು ದಿಕ್ಕು ದೆಸೆ ಬಗೆದರು
ಮರುಕ ಹುಟ್ಟಿದವನೆಲ್ಲ ಬೀದಿಗೆತ್ತಿ ಎಸೆದರು.

ನೀ ಮುಂದೋ ತಾ ಮುಂದೋ ಎನುವ ಲೋಕ
ರೂಪ ಭಾಷೆ ಬಣ್ಣಗಳೋ ಅನೇಕಾನೇಕ
ಬಡತನವು ಬುದ್ಧಿಗಂಟಿದ ಭ್ರಮೆಯಂತೂ ಅಲ್ಲ
ಇಲ್ಲದವರಿಗೆ ಇರುವುದನು ಹಂಚುವ ಕಾಲವಿಲ್ಲ.

ದಾರಿ ರೂಪಿಸಿಕೊಂಡು ಹೊಟ್ಟೆ ತುಂಬುವುದು ಬಾಳು
ನಮ್ಮ ನೆರಳನು ನಾವು ಮೀರಿ ನಡೆದರೆ ಹಾಳು
ಸುತ್ತಲೂ ಬೆಳಕಿರುವ ಜಗವಾದೀತು ಉದಾರಿ
ಯಾರೂ ಹೋಗದ ಎಲ್ಲ ಕಡೆಗೆ ಹುಟ್ಟೀತೆ ದಾರಿ.

Monday, 11 February, 2008

ಚಿತ್ರ - ೪೦


ನೆನಗೊಂಜನ್ - ತಕೆ ದೇವಸ್ಥಾನಕ್ಕೆ ಹೋಗುವ ಹಾದಿಯಲ್ಲಿ ಕ್ಲಿಕ್ಕಿಸಿದ ಒಂದು ಛಾಯಾಚಿತ್ರ (ಅನಿಕೇತನ)

ಛಿದ್ರಗೊಂಡಿದ್ದ ಕನಸುಗಳು ಒಂದುಗೂಡಿವೆ ಎಂದು ತನ್ ಹಾಯಿ ಹೇಳಿದ್ದು;
ಒಂಟಿ ದಾರಿ..


ಇದೇ ತರಹದ ಹಾದಿಯಲ್ಲಿ ಅದೆಷ್ಟು ಬಾರಿ ನಡೆದಿಲ್ಲ ನಾನು? ಅದೇ ತಿರುವಿನ ಬಳಿಯ ಕಲ್ಲ ಮೇಲೆ ಎಷ್ಟು ಬಾರಿ ದಾರಿಗಾಣದೆ ಕುಳಿತಿಲ್ಲ? ಜೊತೆಗಿದ್ದದ್ದು ಇಬ್ಬರೇ.. ನಾನು ಮತ್ತು ನನ್ನ ಛಿದ್ರ ಕನಸುಗಳು.. ಅವುಗಳ ಒಟ್ಟುಗೂಡಿಸಲು ಪ್ರಯತ್ನಿಸಿ ಸೋತಿದ್ದೆ.

ಈಗ ತಿರುವಿದೆ. ಅದೇ ಒಂಟಿ ದಾರಿ. ಆದರೆ ಕನಸುಗಳಿಗೊಂದು ರೂಪು ಸಿಕ್ಕಿದೆ. ಜೊತೆಗೆ ನೀವಿದ್ದೀರಿ. ದಾರಿ ತಪ್ಪುವ ಭಯವಿಲ್ಲ!


ನೋಡುವ ನೋಟ ಬೇರೆ ಅದರೂ ಸೇರುವ ತೀರ ಒಂದೇ ಎಂದು ಕುಮಾರಸ್ವಾಮಿ ಕಡಾಕೊಳ್ಳ ಹೇಳಿದ್ದು;
ಜೊತೆ ಪಯಣ


ಈ ಪಯಣ ನಮ್ಮದು
ಬಾಳಿನ ದೂರ ಪಯಣ
ನಸುನಗುತ ಹಸನಾಗಿ
ಜೊತೆಯಾಗಿ ಸಾಗಿಸೋಣ

ಏಳು ಬೀಳಿನ ಬಾಳು
ಅಂಕು ಡೊಂಕಿನ ಜಾಡು
ನುರಿತು ಅರಿವಿನೋಳು
ನಡೆಸೋಣ ದಿಟ್ಟ ಬಾಳು

ದುಃಖ ದುಮ್ಮಳಗಳು
ಬಿಡದ ಬವಣೆಗಳು
ಮರೆತು ಎಲ್ಲಾ ಗೋಳು
ಬದುಕೋಣ ಜಗದೋಳು

ಬಿರುಕುಗಳು ಸಹಜ
ಮನಸ್ಸುಗಳ ನಡುವೆ
ಬೆಸೆಯೋಣ ಹಸನಾಗಿ
ಸ್ನೇಹದ ಸೋಗಿನಲಿ

ಹಚ್ಚ ಹಸುರಿನ ಬಯಲು
ಪ್ರೀತಿ ತುಂಬಿದ ಮನವು
ಜೊನ್ನ ಜೇನ ಸವಿಯು
ಇದ ಅರಿತು ಬಾಳಲು

ನಿನ್ನ ನನ್ನೋಳು ಬೇದ
ಇವರು ಅವರೊಳು ಬೇದ
ಬೇದಗಳು ಇರಲು ನೂರು
ಖೇದ ಖಂಡಿಸಿ ಬಾಳು

ನೋಡೋ ನೋಟ ಬೇರೆ
ನಡೆವ ದಾರಿ ಬೇರೆ
ಉಡುಗೆ ತೊಡುಗೆ ಬೇರೆ
ನಾವು ಸೇರುವ ತೀರ ಒಂದೇ

ಮನಕೆ ಭಾವದ ತಂತು
ಬಿಗಿದು ನುಡಿಸು ನಂಟು
ನೆನಪಿನ ಶೃತಿ ರಾಗ ಲಯವು
ಹೊಮ್ಮಿಸಿ ಬಾಳಿನ ಸರಿಗಮ

ಮುಂದೆ ನಡೆದರೆ ಗೊತ್ತಿಲ್ಲದೆ ಇರುವ ಯಾವುದೋ ಬದುಕಿದೆ ಎಂದು ಸತೀಶ ಹೇಳಿದ್ದು;
ತಿರುಗುಗಳು ಅಪಾರ

ಯಾರೋ ಅಗೆದು ಮುಚ್ಚಿದ ರಸ್ತೆ
ಬೆಚ್ಚಗೆ ಹೊದ್ದು ಮಲಗಿದ ವ್ಯವಸ್ಥೆ
ತಿರುಗಿನಲ್ಲಿ ದಿವ್ಯ ದೃಷ್ಟಿಯ ಮಸೂರ
ಪಯಣದ ತಿರುಗುಗಳು ಅಪಾರ.

ತಿರುಗುವ ಒಂದು ಕಾಲು ಮುಂದೆ
ಮರುಗುವ ಮತ್ತೊಂದು ಅದರ ಹಿಂದೆ
ಎತ್ತಲು ಸುತ್ತಲು ಮುತ್ತಿದ ವನರಾಶಿ
ಕತ್ತಲ ಬುಡಕೆ ದಿಕ್ಕೇ ಕಾಣದ ಖುಷಿ.

ಮುಂದಿನ ರಸ್ತೆ ಎಲ್ಲಿಗೋ ಪಯಣ
ಯಾರದೋ ಗುರಿಗೆ ಯಾರೋ ಕಾರಣ
ಕರಿಯ ರಸ್ತೆಗೆ ಕರಿಯ ಹಿಮ್ಮಡಿ
ಅಡಿ ಅಡಿ ಇಟ್ಟೇ ತಲುಪುವ ಗಡಿ.

ಅರಿವಿಗೆ ಬಾರದು ಮುಂದಿನ ಹಾದಿ
ನಡೆಯುತ ಹೋದರೆ ತೆರೆವ ವಿಧಿ
ಯಾರೋ ಅಂದರು ತಿರುವನು ನಂಬಿದೆ
ಮುಂದೆ ನಡೆದರೆ ಅದೇನೋ ಬದುಕಿದೆ.


Monday, 4 February, 2008

ಚಿತ್ರ- ೩೯


ಈ ಚಿತ್ರವನ್ನು 'ಅನಿಕೇತನ' ಅವರು ಟೋಕಿಯೋದ ಮೇಜಿ ಜಿಂಗು ಉದ್ಯಾನವನದಲ್ಲಿ ತಮ್ಮ ಕೆಮರಾದಲ್ಲಿ ಸೆರೆ ಹಿಡಿದಿದ್ದಾರೆ.

ಕುಮಾರಸ್ವಾಮಿಯವರು ತಮ್ಮ “ಮೂವರಲ್ಲಿ ಯಾರು ಹೆಚ್ಚು?” ಎನ್ನುವ ಕವನದಲ್ಲಿ ಮೂರು ಮನಸ್ಸಿನ ನಡುವಿನ ವಾದ ವಿವಾದವನ್ನು ಈ ಪರಿ ಹಂಚಿಕೊಂಡಿದ್ದಾರೆ.

ಮೂರು ಮನಸ್ಸುಗಳ ನಡುವೆ
ನಡೆದಿದೆ ವಾದ ವಿವಾದ
ಬದುಕೆಂದರೇನು ಶ್ರೇಷ್ಟ ಯಾವುದು
ನಾನೆ ಹೆಚ್ಚು ನನ್ನ ವಾದವೆ ಹಚ್ಚು
ಮೂವರಲಿ ಒಂದೇ ಕೆಚ್ಚು ನಾನೆ ಹಚ್ಚು

ಮನಸ್ಸು ಒಂದು..
ಸಾಲು ಬೆಟ್ಟ ಹಬ್ಬಿದ ಹಸಿರು ಒದಿಕೆ
ತರು ಲತೆ ಪುಷ್ಪ ಚೆಲ್ಲಿದಾ ಬಣ್ಣ
ಕೋಗಿಲೆ ಕಾಜಾಣ ಗುಬ್ಬಚ್ಚಿ ಗಿಡುಗ
ಗಂದರ್ವ ಭಾಷೆಯ ಗೀತೆ ಗಾಯನ
ಕೇಳಿ ನಲಿಯುತ ಮಾಡುವ ಪಯಣ
ಜಿಂಕೆ ಸಾರಂಗ ನರಿ ತೋಳ ಹುಲಿ
ನೆಗೆದೋಟ ಘರ್ಜನೆ ನಡೆಯುವ ಬೇಟೆ
ಪ್ರಕೃತಿ ಸಿರಿ ಸಂತೆಯಲ್ಲಿ ಜಾರಿ
ಅವರಂತೆ ನಾವಾಗಿ ನಾವೆ ಅವರಾಗಿ
ಸವಿದು ಮುಸ್ಸಂಜೆ ಹೊನ್ನ ಬಣ್ಣ
ತಾರೆ ತುಂಬಿದ ನಭೋಮಂಡಲ
ನೀಲಾಸಾಗರ ಏರಿ ಬರುವ ತೆರೆ
ನೋಡಿ ಸವಿಯುತ್ತ ನಾವೆ ಪ್ರಕೃತಿಯಾಗಿ
ಎಲ್ಲದರೊಳಗೊಂದಾಗಿ ಜೀವಿಸುವುದೇ
ನೈಜ ನಿಜ ಕಲೆಯೇ ಬದುಕು

ಮನಸ್ಸು ಎರಡು

ಪ್ರೀತಿ ಸರಸ ಸಲ್ಲಾಪ
ಬಾಹುಬಂದನ ಬಿಸಿ ಅಪ್ಪುಗೆ
ಕೆಂದುಟಿಯ ಸವಿ ಚುಂಬನ
ಚೆಲುವ ಸೌಂದರ್ಯ ನೋಟದೂಟ
ರತಿಯಾಟ ಶೃಂಗಾರ ಮಾಯಾವಿ
ರಸ ನಿಮಿಷ ಸವಿಯಲು ರಸದೂಟ
ಇದುವೇ ನಿಜವಾದ ರಸ ಜೀವನ

ಮನಸ್ಸು ಮೂರು ...

ಕಾಂಚಣ ಝಣ ಝಣ ಕೈಲಾಸ
ಅಧಿಕಾರ ಅಕ್ರಮಣ ಗಳಿಕೆ ಉಳಿಕೆ
ಒಡೆಯನಾದರೆ ಹಣ ಆಸ್ತಿಗೆ
ಕಟ್ಟಿದರೆ ಕೋಟಿ ಕೋಟಿ ಕಾಂಚಾಣ ರಾಜ್ಯ
ಶರಣು ಹೊಡೆಯುವರು ಗುಲಾಮರಾಗಿ
ಅನುಭವಿಸುವ ಹಕ್ಕು ನನ್ನದು
ಬೇಕು ಎಲ್ಲದು ಬೇರೆಯವರ ಚಿಂತೆ ಸಲ್ಲದು
ನಾನೇಳಿದಂತೆ ಕೇಳಲು ಹಣದ ತಾಕತ್ತು
ಕರುಣಿಸಿದರೆ ಬದುಕಿಗೇ ಆಪತ್ತು

ಮನುಷ್ಯನಿಗೊಂದು ಮನಸ್ಸು
ಮನಸ್ಸಿಗೊಂದು ನೋಟ
ನೋಟಕ್ಕೆ ಎಲ್ಲರು ದಿಟ
ಯಾರು ಇವರಲ್ಲಿ ಹಚ್ಚು
ನೋಟ ನಿನ್ನಲ್ಲಿ ಬಿಚ್ಚು

ಬದುಕುವ ನಿಜ ಮಾರ್ಗ
ಅರಿಯುವ ರಾಜಮಾರ್ಗ
ಅರಿತು ನಿನ್ನೋಳಗೆ
ನುರಿತು ಬದಿಕಿನೊಳಗೆ

ಬಾಳಿನ ನಿಜ ನೋಟ
ಕಾಣು ನಿನ್ನೋಳಗೆ
ಎಲ್ಲರಿಗೆ ಒಳಿತಾಗುವ
ದಿಟ್ಟ ಅಂತರನೋಟ

"ನಮಗ್ಯಾಕ್ ಅವರವರ ಯಾಚ್ನೆ" ಎನ್ನುವ ಕವನದಲ್ಲಿ ಸತೀಶ ತಮ್ಮ ಎಂದಿನ ಕವನದ ಚಾಪನ್ನು ಮೂಡಿಸಿದ್ದು ಈ ಕೆಳಗಿನಂತೆ:

ಪಶ್ಚಿಮಕ್ಕ್ ನೋಡೋ ಪೂರ್ವದ ಜನ್ರಿಗೆ
ಛಳಿಯಾಗಿರ್ಲಿಕ್ಕ್ ಸಾಕು
ತಮ್ಮದೇ ಹಳೇ ಸ್ವತ್ತೇ ಇದ್ರೂ
ಉಳಿದೋರ್ ವಸ್ತು ಬೇಕು

ಚಿಕ್ಕ ಜಾಗ ಹೆಚ್ಗೆ ಜನ
ಎಲ್ಲಾ ಒಟ್ಗೇ ಕೂತು
ಚೊಕ್ಕ ಜಾಗ ಚಿಕ್ಕ ಜನ
ಅವ್ರು ಆಳಿದ್ದೇ ಬಂತು.

ವಿಶ್ವಕ್ಕೆಲ್ಲ ಶಾಂತಿ ಮಂತ್ರ
ಹಂಚೋಕ್ ಮಾತ್ರ ಮುಂದೆ
ಅಲ್ಲಿಂದಿಲ್ಲಿಗೆ ದಳ್ಳಾಳೀ ಅಂತ
ಸುಳಿದಾಡೋದೇ ದಂದೆ.

ದೂರ್‌ದಲ್ಲಿ ಮರ ಹಿಂದಿನ್ ಬೆಳಕು
ಮುಳುಗೋಗುತ್ತೋ ಏನು
ಎಲ್ಲೋ ಕುಳಿತು ಸಮಯ ಸಾಗ್ಸೋ
ಜನರಿಗೆ ಕಾಣೋ ಬಾನು.

ತಲೆಗೊಂದ್ ಟೋಪಿ ಹೆಗಲಿಗೆ ಚೀಲ
ನಡಿತಿರೋ ಸಮಾಲೋಚ್ನೆ
ಯಾರೋ ಕುಳಿತು ಏನೋ ಮಾಡ್ಲಿ
ನಮಗ್ಯಾಕ್ ಅವರವರ ಯಾಚ್ನೆ.