Wednesday, 29 April, 2009

Wednesday, 22 April, 2009

ಚಿತ್ರ ೧೦೧ಚಿತ್ರಕವನದ ನೂರರ ಗಡಿಯನ್ನ ದಾಟುತ್ತ ನಮ್ಮೊಂದಿಗಿರುವ ಎಲ್ಲ ಸಾಹಿತ್ಯಾಸಕ್ತರಿಗೂ ಅನಂತ ವಂದನೆಗಳು. "ಚಿತ್ರಕವನ" ಹೆಸರು ಸೂಚಿಸುವಂತೆ ಕೇವಲ ಕವನ ಪ್ರಕಾರಕ್ಕೆ ಸೀಮಿತವಾಗಿರದೆ, "ಚಿತ್ರ" ನಿಮ್ಮಲ್ಲಿ ಮೂಡಿಸುವ ಭಾವನೆಗಳ ಬರಹ ಕೂಡ ಆಗಿರಬಹುದು. ಇಲ್ಲಿಯವರೆಗೆ ಹೆಚ್ಚಿನ ಆಸಕ್ತರು ಕವನ ಪ್ರಕಾರವನ್ನೆ ಬರೆದಿದ್ದಾರೆ ಮುಂದೆ ವಿಭಿನ್ನ ಪ್ರತಿಕ್ರಿಯೆಗಳು ಮೂಡಿಬರಲಿ ನಿಮ್ಮಿಂದ ಎಂದು ಆಶಿಸುತ್ತ.

ವಂದನೆಗಳು
ಚಿತ್ರಕವನ ಬಳಗ

...

ತವಿಶ್ರೀ:

ದೇಶದ ನಾಡಿ
ಸುಗ್ಗಿ ಬಂತೋ ಅಣ್ಣ ಸುಗ್ಗಿ
ನಮ್ಮೆಲ್ಲರ ಹೃದಯ ಹಿಗ್ಗಿ ಹಿಗ್ಗಿ
ಮನೆ ಅಂಗಳದಲಿ ತುಂಬುವುದು ಕಾಳು
ಎಲ್ಲರಿಗೂ ಸಿಗುವುದು ಕೂಳು

ಮಾರಣ್ಣ ಸಿಂಗಣ್ಣ
ಕೊಯ್ಲು ಕೊಯುವರು ಹೊಲದಲಿ
ಮೂಟೆ ಮೂಟೆ ರಾಗಿ ಭತ್ತ
ಸುರಿವರು ಮಾಳದಲಿ

ಸಾಕವ್ವ ಮಾರವ್ವ
ಬನ್ನೀರೆ ಜೊಳ್ಳನು ತೂರೂವಾ
ಜೊಳ್ಳ ತೂರಿ
ಕಾಳನು ಕೇರೂವಾ

ಕಾಳಲೇ ಕೂಳು
ಕೂಳಲೇ ಬಾಳು
ಎಲ್ಲ ಸೇರಿ ದುಡಿಯುವಾ
ದೇಶದ ನಾಡಿಯ ಮಿಡಿಯುವಾ


Tuesday, 14 April, 2009

ಚಿತ್ರ ೧೦೦ತವಿಶ್ರೀ:


ಪ್ರತಿಕ್ರಿಯೆಗಳು ಬರಲಿ, ಬರದಿರಲಿ, ಮನ ಮುದುಡಿಸಿಕೊಳ್ಳದೆಯೇ, ವಾರಕ್ಕೊಂದರಂತೆ ಶತಕ ಚಿತ್ರಗಳನ್ನು ಇತ್ತು, ಅನಿಸಿಕೆಗಳನ್ನು ಮೂಡಿಸಲು ಹಲವು ಮನಗಳಿಗೆ ಅನುವು ಮಾಡಿ ಕೊಟ್ಟ ಅಮರ, ಶ್ರೀ ಮತ್ತು ಶ್ರೀನಿಧಿಯವರುಗಳಿಗೆ ಮನಃಪೂರ್ವಕ ಕೃತಜ್ಞತೆಗಳು ಹಾಗೂ ಅಭಿನಂದನೆಗಳು

ಸ್ವಹಿತದೆಡೆಗೇ ಮನ ಮತ್ತೆ ವಸಂತನಾಗಮನ
ಮತ್ತೆ ಮತ್ತೆ ತರು ಲತೆಗಳಲಿ ನವ ಚೇತನ
ನೇಸರನ ತೀಕ್ಷಣತೆಗೆ ಒತ್ತು ಕೊಡುವ ಕಾಲ
ಬರುತಿದೆ ನೀರಿಗಾಗಿ ಬಾಯಿ ಬಿಡುವ ದಿನ

ಮೇಲೇರುತಿದೆ ಉರಿ ಬಿಸಿಲು
ಕಾಲ್ಕೆಳಗೆ ಸುಡು ಕಲ್ನಾರು
ಮರ ಒಣಗಿದರೇನು
ಗಿಡ ಚಿಗುರಿದರೇನು

ಇಂದಿನ ಹಸಿವು ತಣಿಸಬೇಕು
ಮಕ್ಕಳ ನಾಳೆ ಸುಗಮವಾಗಿರಿಸಿರಬೇಕು
ಇದೇ ನನ್ನ ಹಂಬಲ
ಇದಕಾಗೇ ನನ್ನ ಚಿಂತನೆ

ಒಮ್ಮೆ ಕೂಗಿದೆ ನಾನು
ಮಗು ಬೀಳುತಿರಲು,
ಅದ ಹಾಡೆಂದರು
ತಾವು ನಲಿದರು :(

ಹಸಿವಲಿ ನರಳಿದೆ
ಅದನರ್ಥ ಮಾಡಿಕೊಳ್ಳದವರು
ಅದನೂ ಹಾಡೆಂದರು
ಕಥೆ ಕವನ ಕಟ್ಟಿದರು

ಕವಿಯಂತೆ ಮನ ಓಡಿಸಿದರು
ಕಪಿಯಂತೆ ಮರದೆಡೆಗೆ ನೋಟವಿಟ್ಟರು
ನನ್ನಿಂದ ಇನ್ನೂ ಹೆಚ್ಚು ಅಪೇಕ್ಷಿಸಿದರು
ಎನ್ನ ತಿಳಿಯದಾದರು
ತಿಳಿಯಲು ಇಚ್ಛೆಯೂ ಇಲ್ಲದವರು
ತಮ್ಮ ಸಂತಸವೇ ಮಿಗಿಲೆಂದವರು

ನನ್ನಳಲು ನನಗೇ ಗೊತ್ತು
ಮೂಢರಿಗೇನು ತಿಳಿದೀತು!
ನನ್ನ ಸ್ನೇಹಿತೆ ಕಾಗೆಯ
ವೈರಿ ಎಂದರು, ಎನ್ನ ಹೊನ್ನಶೂಲಕೇರಿಸಿದರು

ನಿಮಗೇನು ಗೊತ್ತು? ಹೇಗೆ ತಾನೆ ಗೊತ್ತಾಗಬೇಕು
ನಾನೇನೇ ಉಲಿದರೂ ಹಾಡೆಂದು ಅರ್ಥೈಸುವಿರಿ

Thursday, 9 April, 2009

ಚಿತ್ರ ೯೯
ತವಿಶ್ರೀ:
ನೀರ ಗುಳ್ಳೆ, ಜೀವದ ಸಂಕೇತ

ಮೊನಚು ಹುಲ್ಲಿನ ಕೊನೆಯಲಿ
ಗಟ್ಟಿ ಹಿಡಿತದಿ ಕುಳಿತಿಹ
ಮುತ್ತಿನೋಪಾದಿಯಲಿಹ
ಯಾವ ಕ್ಷಣದಲೂ ಮಾಯವಾಗಬಹುದಾದ

ಗರಿಕೆಯ ಒಣಗದಂತೆ ಕಾಪಾಡುವುದು
ದರ್ಪದ ತೋರಿಕೆಯ ಕೊಡುತಿಹುದು
ಈಗಿಹ ಗುಳ್ಳೆ ಇನ್ನೊಂದು ಕ್ಷಣ ಇರದಿರಬಹುದು
ಹಸುರು ಗರಿಕೆ ಒಣಹುಲ್ಲಾಗುವುದು

ಗುಳ್ಳೆ ಒಡೆಯಲೂಬಹುದು
ಆಸಕ್ತಿಯ ವಿರಕ್ತಿಗೊಳಿಸಬಹುದು
ಮುತ್ತಾಗಲೂಬಹುದು
ಮುಡಿಯೇರಬಹುದು

ರಾಗಕೆ ವಿರಾಗವ ತೋರುವುದು
ವಿರಾಗದಿ ತರಂಗವ ತೂರುವುದು
ಹುಟ್ಟಿಗೆ ಸಾವನು ತೋರಿಪುದು
ಜೀವ ಜೀವನ ಮರ್ಮವ ಜಗಕೆ ಸಾರುವುದು

ಬಿಳಿ ಬಣ್ಣಕೆ ಜೀವ ಕೊಡುವುದು
ಕಾಮನಬಿಲ್ಲನು ಸೃಷ್ಟಿಸಬಹುದು
ಜೀವರಾಶಿಗೆ ತಂಪೆರೆಯಬಹುದು
ಜ್ವಾಲೆಯ ನಂದಿಸಲೂ ತಿಳಿದಿಹುದು

ಆತನ ಕರುಣೆ ಇಲ್ಲದೇ
ನಿಂತಿಲ್ಲ ಈ ಹುಲ್ಲು
ನಿಲಲಾರದು - ಅಲ್ಲಾಡಲಾರದು
ಎಲ್ಲವೂ ಆತನ ಕರುಣೆಗೆ ಕಾದಿಹುದು

ಈ ಗುಳ್ಳೆ ತಿಳಿ ಹೇಳುತಿದೆ
ಜೀವನದ ಮರ್ಮ
ಅಂಟಿಯೂ ಅಂಟದಂತಿರು
ಇಂದಿಹುದು ಇಲ್ಲದಿಹುದು
ಮುಂದಿನ ಕ್ಷಣ ಇಲ್ಲದಿರಬಹುದು

Wednesday, 1 April, 2009

ಚಿತ್ರ ೯೮ತವಿಶ್ರೀ:

ಮೌನ ಗೋಪುರ (ಟವರ್ ಆಫ್ ಸೈಲೆನ್ಸ್)


ನಾನೂ ನೀನೂ ಜೋಡಿ
ಹೆಜ್ಜೆ ಇಡುವ ಅತ್ತ ಇತ್ತ ನೋಡಿ
ಕೆಳಗಿಹರು ಕುಶಾಗ್ರಮತಿಗಳು
ಸ್ವರ್ಗ ತೋರಿಸುವುದು ವಿದ್ಯುತ್ತಿನ ತಂತಿಗಳು

ಕಾಲ ಬುಡದಲ್ಲಿಲ್ಲ ಆಹಾರ
ನೆಲದ ಹುಳು ಹೊಟ್ಟೆ ಸೇರಲೊಲ್ಲ
ಹಸಿವ ಮರೆಯುವುದೆಂತು
ಹರಿದು ತಿನ್ನಲು ಕಾಯುತಿಹರು ಕೆಳಗೆ ನಿಂತು

ದೂರವಿರಲಿ ಜೋಡಿ ತಂತಿಗಳು
ಮಸಣ ಸೇರಿಸುವುವು ಅವು ಸೇರಲು
ಸೇರದಿರದಂತೆ ಜೋಪಾನವಿರಲಿ
ಬಿಸಿಲೇನು ಮಳೆಯೇನು ಕಾಲು ಗಟ್ಟಿ ಇರಲಿ

ಮಾನವನ ಹೆಣ ಬಂದು ಬೀಳಲಿ ಬಾವಿಯಲಿ
ನಮ್ಮೀರ್ವರ ನಿರೀಕ್ಷೆ ಅದೇ ಆಗಿರಲಿ
ನೀರಿರದ ಬಾವಿಯಲಿ ನಮ್ಮ ಸರಕು ಬರಲು
ಗುರಿಯಿರಲಿ ಬಾವಿಯೊಳ ನಾವು ಸೇರಲು

ನಿಸರ್ಗದಿಂದ ಬಂದ ಜೀವ ನಿಸರ್ಗ ಸೇರಲಂತೆ
ಇದೇ ಅವರ ತತ್ವವಂತೆ
ನಾವುಗಳೇ ಮೋಕ್ಷ ತೋರಿಪ ದೈವವಂತೆ
ಏನಾದರೇನಂತೆ ಎಂತಾದರೇನಂತೆ
ನಮ್ಮ ಹೊಟ್ಟೆ ತುಂಬಿದರೆ ಸಾಕಂತೆ
ಇದೇ ನಮ್ಮ ತತ್ವವಂತೆ