Wednesday, 28 January, 2009

ಚಿತ್ರ ೮೯ತವಿಶ್ರೀ :

ಅನುಭವ ಪಾಠಶಾಲೆ

ಸೇರು ಅಚ್ಚೇರು ಪಾವು ಚಟಾಕು
ಚಟಾಕಿಗೊಂದು ಕೊಸರು
ಇಂದಾಗಿಹುದು ಕೈ ಮೈ ಕೆಸರು
ಮುಂದಾಗುವುದು ಇವರ ಬಾಳು ಮೊಸರು

ವಾದದಲ್ಲಿ ಸೇರಾಗುವನು ಸವ್ವಾಸೇರು
ವಾಹನ ರಿಪೇರಿಯಲ್ಲಿ ವಯಸ್ಸಿಗೆ ಮೀರಿದ ಮೇರು
ತಿಳಿಯದ ವಿಷಯವೇ ಇಲ್ಲ
ಅಕ್ಷರ ಜ್ಞಾನ ಮಾತ್ರ ಇಲ್ಲವೇ ಇಲ್ಲ

ಅಬ್ರಹಾಂ ಸಲೀಂ ಮುಕ್ತರ್ ರೇ ಇವನ ಗುರುಗಳು
ಸರಿಯಾಗಿ ಕಲಿಯದಿದ್ದರೆ ಸ್ಪ್ಯಾನರ್ ನ ಏಟುಗಳು
ಮೈ ಕೈ ಎಲ್ಲೆಲ್ಲೂ ಗಾಯದ ಕಲೆಗಳು
ನಯ ನಾಜೂಕನ್ನೇ ಅರಿಯದ ಅಬ್ಬೇಪಾರಿಗಳು

ಈ ಅಮೀರನ ಹಿಂದೆ ನಾಲ್ಕು ಮರಿಗಳು
ನೋಡಲು ಮಾತ್ರ ಅವರು ಕುರಿಗಳು
ಕೆಣಕಿದರೆ ಹಸಿದ ಹೆಬ್ಬುಲಿಗಳು
ಅಮ್ಮೀಜಾನ್ ಮುಂದೆ ಬಾಲ ಮುದುರಿದ ಮರಿಗಳು

ಮನೆಯೊಳಗಿರುವುದು ಒಂದೇ ಕೋಣೆ
ದಿನಕೊಂದು ಊಟಕೆ ಒಂದೇ ತಾಟು
ಮಲಗಲು ನೆಲವೇ ಸುಪ್ಪತ್ತಿಗೆ
ಮಳೆ ಬಿಸಿಲು ಛಳಿಗೆ ಛಾವಣಿಯ ಹೊದಿಕೆ

ನಿನ್ನೆಯ ನೆನಪಿಲ್ಲ
ನಾಳೆಯ ಪರಿವೆ ಇಲ್ಲ
ಎಲ್ಲಿಂದ ಬಂದೆವೆಂಬ ಅರಿವಂತೂ ಇಲ್ಲವೇ ಇಲ್ಲ
ಎಲ್ಲಿಗೆ ಹೋಗುವುದೋ ಗೊತ್ತಿಲ್ಲ

ಆಗಾಗ ಬರುವರು ಕ್ಯಾಮೆರಾ ಹಿಡಿದ ಮಂದಿ
ಎಮ್ಮ ಚಿತ್ರವೇ ಅವರಿಗೆ ಆಹಾರಕೆ ದಾರಿ
ಸ್ನಾನ ಕಾಣದ ಮೈ, ಜಡ್ಡುಗಟ್ಟಿದ ಮುಖ
ದಲ್ಲಿ ಅದೇನು ಕಾಣುವರೋ, ಕಾಣಿಸುವರೋ!

ತಿಳಿದ ಅಯ್ಯನವರು ಹೇಳುವರು -
ನಾವೇ ಹೆಚ್ಚಿನ ತಿಳುವಳಿಕೆಯವರು
ಯಾರಿಗೂ ದೊರೆಯದ, ನಮಗೆ ದೊರೆತಿಹುದು
ಅನುಭವ ಪಾಠಶಾಲೆ


ಕುಮಾರಸ್ವಾಮಿ ಕಡಾಕೊಳ್ಳ:
ಹಳ್ಳಿ ಬೀಡು

ಹಳ್ಳಿ ಬೀಡಿದು
ಒಳ್ಳೆ ನಾಡಿದು
ಸುತ್ತೆಲ್ಲ ನೋಡಲು
ಗರಿಯ ಗುಡಿಸಲು

ತುಂಟ ಪೋರರು
ಮುಗುದ ಹಸುಳೆಯರು
ಕುಂಟಬಿಲ್ಲೆಯನಾಡುವ
ಹೆದಗಾರ ಬಂಟರಿವರು

ಪಾಟದ ಪರಿವಿಲ್ಲ
ಆಟದಲಿ ಬಿಡುವಿಲ್ಲ
ಕೊಳಕಿಗೆ ಕನಲಿಲ್ಲ
ನಲಿವಿಗೆ ಕೊರಗಿಲ್ಲ

ನಡುಹಗಲ ಬಿಸಿಲು
ಬೆಳಕಿನ ಗಮ್ಮತ್ತು
ಬಿಸಿಲಗುದೆರೆಯ ಬೆನ್ನೇರಿ
ಬೆವರು ಹನಿದಿತ್ತು

ಮೇಲು ಕೀಳಿಲ್ಲ
ಬಡವ ಬಲ್ಲಿದನ ಗೆಂಟಿಲ್ಲ
ಮೊಗದಲ್ಲೋಂದೇ ಕಳೆ
ನಗುತ ನಲಿವ ಕಳೆ

ಇಲ್ಲಿಲ್ಲ ಸೋಗು
ಏನೀದ್ದರು ಸೀದ
ಹೊರಹೊಳಗೂ ಒಂದೇ
ಇದೇ ಅಲ್ಲವೆ ನಾಕ!!


ಸ್ವಾಮಿ.ಕಡಾಕೊಳ್ಳ
ಪುಣೆ

Wednesday, 21 January, 2009

ಚಿತ್ರ ೮೮ತವಿಶ್ರೀ:
ಮೋಜಿನ ವಸ್ತು

ಗೇರ್ ಗೇರ್ ಮಂಗಣ್ಣ
ಕಡ್ಲೆಕಾಯ್ ತಿನ್ನಣ್ಣ
ಕೈ ಮೈ ಕೆರ್ಕೊಳಣ್ಣ
ನಿನ್ನ ನೋಡಿ ನಾ ನಗೋಣ

ಹಿಂದೆ ಹೇಳ್ತಿದ್ರು
ಮಂಗನ ಆಟ ನೋಡಲು ಚಂದ
ಅದನ ನೋಡಲೆಂದೇ ನೀ ತಾ ಬಂದ
ಹಾದಿ ಬೀದಿಯಲೂ ಮಂಗನ ನೋಡುತ ನಿಂದ

ಈಗೆಲ್ಲಿ ಮಂಗ
ಮಂಗ ಮಾಯ - ಬದಲಿಗೆ
ಎಲ್ಲೆಲ್ಲಿ ನೋಡಲೂ ಕಾಣುವಿರಿ
ಜೋಡಿ ಮಂಗ

ಕಂಬಿಯ ಮೇಲೆ ಕುಳಿತಿಹೆ ನಾನಿಲ್ಲಿ
ಕಲ್ಲು ಹಾಸಿನ ಮೇಲೆ ಜೋಡಿ ಎದುರಲ್ಲಿ
ನಾ ಮಾಡುತಿಹ ಚೇಷ್ಟೆ ಈಗೆಲ್ಲಿ
ಅದನೆಲ್ಲ ಅಭ್ಯಸಿಸುತಿಹರು ಅವರಲ್ಲಿ

ಮಂಗನೆದುರು ನೋಡಿ ಜೋಡಿ ಮಂಗ
ಲಾಲ್ ಬಾಗ್ ಕೆರೆ ಏರಿಯ ಮೇಲೆ
ಮರದ ಕೆಳಗೆ ತಣ್ಣನೆಯ ನೆರಳಲ್ಲಿ
ಅವರನೇ ನೋಡಲು ಪೋಲೀ ರಂಗ

ಸಂಜೆಯ ಇಳಿಗೆಂಪಿಗೆ
ಮೈ ಕಾಯುಸುತಿಹೆ
ರಾತ್ರಿಯ ತಂಪು ತಡೆಯಲು
ಶಕ್ತಿ ಶೇಖರಿಸುತಿಹೆ

ಜನಗಳೆಲ್ಲ ಬರುತಿಹರಿಲ್ಲಿ
ತೋಟವ ನೋಡಲಲ್ಲ
ಎನ್ನ ನೋಡುವ ತವಕವಂತೂ ಇಲ್ಲ
ನಿಸರ್ಗವ ಸವಿಯಲಂತೂ ಅಲ್ಲವೇ ಅಲ್ಲ
ಈ ಜೋಡಿಗಳ ಲಲ್ಲೆ ಸರಸ ಸಲ್ಲಾಪ ನೋಡಲು
ತಿನಿಸಿಲ್ಲದೇ ಬಾಯಿ ಚಪ್ಪರಿಸಲು

ಈಗ ಹೇಳಿ
ಮೋಜಿನ ವಸ್ತು - ಚಿತ್ರದಲಿ ಕಾಣಿಸುತಿಹ ಮಂಗವೋ ಅಥವಾ ಮರೆಯಲಿರುವ ಆ ಜೋಡಿಯೋ! :P

Tuesday, 13 January, 2009

ಚಿತ್ರ ೮೭ಕುಮಾರಸ್ವಾಮಿ ಕಡಾಕೊಳ್ಳ:

ರಾಗಿ ಬೆಳಸೆ
ರಾಗಿಯ ಹೊಲ ನೋಡು
ತೂಗೋ ತೆನೆ ಕಾಣು
ಬೆಳೆಸೆಯ ಬಯಕೆ ಬಂತು
ಬಾಯಲ್ಲ ನೀರು ತುಂಬ್ತು

ಉತ್ತರೆ ಮಳೆ ಬಂತು
ಒತ್ತಾಗಿ ಕಾಳ್ ತುಂಬ್ತು
ಮ್ಯಾರ್ಯಾಗೆ ಮೆದೆ ನಿಂನ್ತು
ಸುಗ್ಗಿ ಸೊಗಸು ಅಂತು

ಹಕ್ಕಿಗಳ ಹಿಂಡು ಬಂತು
ಇರುವೆಗಳು ಸಾಲುಕಂಡ್ತು
ಹುಟ್ಟೆಲ್ಲ ತಿಂದುಉಡ್ತು
ಉಳಿದಿದ್ದು ನಮಗಂತು

ಒಕ್ಕಲಿಗನ ಕಣತುಂಬ್ತು
ತುರುಗಳಿಗೆ ಮೇವಾಯ್ತು
ವರುಶಕ್ಕೆ ಕೂಳಾಯ್ತು
ನಾಳೆನ ತಲ್ಲಣ ಬಿಡ್ತು

ಹೆಂಗಪ್ಪಿನ ರಾಗಿಕಾಳು
ತಿಂದರೆ ಬ್ಯಾನೇ ದೂರು
ರಾಗಿತಿಂದವನ ನೋಡು
ಬೀಮನೇ ಅಂತೆ ಕೇಳು

ಕುಡಿಯ ಬೆಳಸಿದ ಕಾಳು
ಬಿಸಿಲು ಮಳೆಯಲಿ ಮಿಂದು
ಉತ್ತುಬಿತ್ತಿ ಬೆವರ ಹುಯ್ದು
ಹೊತ್ತು ಹೊತ್ತಿನಲಿ ಎದ್ದು

ಕುಡಿಯಾನ ಕೆಲಸದಾಗ
ನಾಡಿನ ಬದುಕೇ ಐತಿ
ಅಂತ ಒಕ್ಕಲಿಗನಿಗೆ
ನೂರು ಸಾಣು ಹೇಳು

ಕುಡಿಯ-ಒಕ್ಕಲಿಗ
ಸಾಣು- ವಂದನೆ, ನಮನ
ಹುಟ್ಟು- ಸೃಷ್ಠಿ

ಕುಕೂಊ(ಕುಮಾರಸ್ವಾಮಿ ಕಡಾಕೊಳ್ಳ)

ತವಿಶ್ರೀ:

ಭೂದೇವಿ
ಪುಟ್ಟ ಪುಟ್ಟ ಕಾಳು
ಕಪ್ಪು ಕಂದು ಬಣ್ಣದ ಕಾಳು
ಜೀವಿಗಳೆಲ್ಲವುಕೂ ಕೂಳು
ಕಣ್ಣು ಹಾಯುವವರೆವಿಗೆ ಸಾಲು ಸಾಲು

ಕೋಟಿ ಕೋಟಿ ಜೀವಿಗಳ ಶಕ್ತಿದಾತ
ಅಣುವಿನಲಣುವಿನ ರೂಪ
ಇದನರಿಯದೇ ಹತ್ತಿಕ್ಕುವವನು ಗಾಂಪ
ಜಗದಳಿವುಳಿವಿಗೆ ಆಗುವನು ಶಾಪ

ತುಂಬಿ ತುಳುಕುತ್ತಿದೆ ರಾಗಿ ತೆನೆ
ಬಡವನ ಹೊಟ್ಟೆ ತುಂಬುವ ಹಾಲ್ಗೆನೆ
ಕಟಾವಿಗೆ ಕಾಯುತ್ತಿದೆ
ಜೊಳ್ಳು ತೂರಿ ಗಟ್ಟಿ ಇಳಿಸಲು ಕಾಯುತ್ತಿದೆ
ಮಾರುಕಟ್ಟೆಯಲ್ಲಿ ರಾರಾಜಿಸಲು ಹವಣಿಸುತ್ತಿದೆ
ಮುದ್ದೆಯ ನುಂಗಲು ಲೋಕದ ಬಾಯಿ ಕಾಯುತ್ತಿದೆ

ಇದಲ್ಲವೇ ಭೂ ತಾಯಿಯ ಕರುಣೆ
ಹೊರುವಳು ಒಂದು ಕಾಳಿಗೆ ಕೋಟಿ ಕಾಳು ಕೊಡುವ ಬವಣೆ
ಕಡು ಕಷ್ಟಗಳ ಕೊಡಲೂ, ಹೊಮ್ಮಿಸುವಳು ಶಾಂತಿ ರೂಪ
ತಿಳಿ ಈಕೆಯೇ ದೈವ ಸ್ವರೂಪ

Wednesday, 7 January, 2009

ಚಿತ್ರ ೮೬
ಸುಪ್ತದೀಪ್ತಿ :
ಮೂಲಿಕೆ ಮದ್ದಿನಂಗಡಿ...

ಹಳೆಯವಿವು ಮನೆ ಮದ್ದು
ಸಕಲ ರೋಗಕೆ ಬಾಣ
ಎಲ್ಲ ತೊಂದರೆಗುಂಟು
ಇಲ್ಲಿಯೇ ಕೊನೆಯಕ್ಷಣ
ಬನ್ನಿರೈ ಕೊಳ್ಳಿರೈ
ಒಂದು ಸಲ ಪರೀಕ್ಷಿಸಿ
ಅಲೋಪತಿಗಿಂತಲೂ
ಸುರಕ್ಷಿತ, ವೀಕ್ಷಿಸಿ.