Monday, 31 December, 2007

ಚಿತ್ರ- ೩೪ಸತೀಶ ಹೇಳುವಂತೆ ನಾಳೆಯ ಕನಸುಗಳನು ನಿರುಕಿಸುವುದು ಒಳಿತು

ಅಲ್ಲಿನ ಬಸದಿ ಬಿಡಾರಗಳು
ಶೀಲ ಗೋಪುರಗಳು ನಕ್ಷತ್ರಿಕೆಗಳು
ಹಚ್ಚನೆ ಹಸಿರು ಹೂವಿನ ಚಿತ್ತಾರದ ವನ
ಅದೆಷ್ಟೋ ಮೆಟ್ಟಿಲುಗಳನ್ನು ಏರಿ ಬರೋ ಜನ.

ಹಗಲು ರಾತ್ರಿ ಶ್ರಮಿಸಿ ನೀರುಣಿಸಿ
ಹಸಿರನ್ನ ಹಸಿರಾಗಿಸಿಟ್ಟುಕೊಂಡಿರೋ
ಸಾಹಸಿಗರ ನಡುವೆ
ಬಿಸಿಲಿನಲಿ ಬಸವಳಿದ ಗೋಡೆಗಳ
ಬಿರುಕಗಳನ್ನು ಅವಲೋಕಿಸುತ್ತಲೋ
ಅಲ್ಲಲ್ಲಿ ಹುದುಗಿಸಿದ ಚಿತ್ರಗಳ
ಮನಸಿನೊಳಗಿರುವುದನು ಓದುತ್ತಲೋ
ದೇವರ ಪಟವಿಟ್ಟು ಹಣದಿಂದ ಮುಚ್ಚಿದ
ದೇಗುಲ ವ್ಯವಸ್ಥೆಗೆ ಎತ್ತನಿನಿಂದ ಸುತ್ತಿದರೇನು?

ದೂರದ ಖಾಲಿ ಬಸದಿಗಳ ನೆರಳಲಿ
ಪಿಸುಮಾತಿನಲೇ ಸಂವಾದಿಸುವ ಕೊರಳಲಿ
ನವ್ಯತೆಗೆ ಕರಗುವ ಮೈ ಮನಗಳ ನೋಡುತ್ತಾ
ಎಷ್ಟು ಹೊತ್ತು ಕುಳಿತರೂ
ಹಿಂಗದ ಹಸಿವು ದಾಹಗಳ ಮುಂದೆ
ಸೌಂದರ್ಯದ ವರ್ಣನೆಗೆ ಬಿಡುವೆಲ್ಲಿ ತಂದೆ?

ಪಕ್ಕದಲ್ಲಿದ್ದು ಕಣ್ಣಿಗೆ ಕಾಣ್ವುದು ಹಸಿರು
ಬಿಸಿಲಿನಲ್ಲಿ ಬೆಂದು ಹೋಗ್ವುದು ಉಸಿರು
ಕಟ್ಟಿ ಮುಂಡಾಸ ಕೈ ಚೆಲ್ಲಿ ಕುಳಿತು
ನಾಳೆಯ ಕನಸುಗಳನು ನಿರುಕಿಸುವುದು ಒಳಿತು.

Monday, 24 December, 2007

ಚಿತ್ರ- ೩೩ಪುಣೆಯ ಕುಮಾರಸ್ವಾಮಿ, ತಮ್ಮ 'ರಣಧೀರ ಶಿವಾಜಿ' ಕವನದಲ್ಲಿ ಅಜ್ಜ ತನ್ನ ಮೊಮ್ಮಗನಿಗೆ ಇತಿಹಾಸ ಪುಟಗಳನ್ನು ತೆರೆದಿಟ್ಟಿದ್ದು ಹೀಗೆ:

ಅಜ್ಜ ಯಾರ ಮೂರ್ತಿ ಇದು
ಎಷ್ಟೊಂದು ಗಂಭೀರ ವರ್ಚಸ್ಸು
ಯಾರು ಈ ತೇಜೋ ಪುರುಷ
ಹೇಳು ನನಗೆ ಮೂರ್ತಿಯ ಕಥೆಯನ್ನ

ಮೊಘಲರ ಅಟ್ಟಹಾಸ ಹುಟ್ಟಡಗಿಸಿ
ಪಶ್ಚಿಮ ದೇಶದ ಕೆಂಪು ಮೂತಿಗಳ ತೇಜೋವದೆ ಮಾಡುತ್ತ
ಆಹತಕೆ ಸಿಕ್ಕು ನರಳಿದ ಹಿಂದೂನೆಲವನ್ನು
ಮತ್ತೇ ಸಲಹಿದ ಧೀರೋತ್ತಮ ಶಿವಾಜಿ ಈತನು

ಅಳಿದ ವಿಜಯನಗರ ಸಾರ್ಮಾಜ್ಯದ ನೆಲದಲ್ಲಿ
ಬಸವಳಿದು ಹೋಗಿದ್ದ ಹಿಂದುಗಳ ಹಿಂಡಲ್ಲಿ
ಗಂಡುಗಲಿಯಂತೆ ಗರ್ವದಿಂದ ಮೇಲೆದ್ದು ಬಂದು
ನರ ರಾಕ್ಷಸರ ಒಡಲ ಸೀಳಿದ ಅಂಜದ ಗಂಡಿವನು

ರಾಮಧಾಸರಿಂದ ಧರ್ಮ ರಕ್ಷಣೆಯ ದೀಕ್ಷೆತೊಟ್ಟು
ಮಾವಳಿಗಳಿಂದ ಸೈನಿಕ ದಂಡು ಕಟ್ಟಿ
ಸಯ್ಯಾದ್ರಿ ಶಿಕರದಲ್ಲಿ ಕೋಟೆಗಳ ಕಟ್ಟಿ
ಶತ್ರುಗಳ ರಟ್ಟೆಯನು ಹುಟ್ಟಡಗಿಸಿದ ರಣಧೀರನು

ಜೀಜಾಮಾತೆಯ ಶ್ರೀರಕ್ಷೆಯಲ್ಲಿ
ದಾದಾಜಿ ಕೊಂಡದೇವ ಗುರು ಮಾರ್ಗದರ್ಶನದಲ್ಲಿ
ವೇದ ಶಾಸ್ತ್ರ ಪುರಾಣಗಳ ಅರಿತ ನಿಪುಣನು
ಇಂದು ನಮೆಲ್ಲರಿಗಾಗಿಹನು ಮಾರ್ಗದರ್ಶಕನು

ಸಯ್ಯಾದ್ರಿಯ ಶಿಕರದಲ್ಲಿ ಕೋಟೆ ಕೊತ್ತಲಗಳಲಿ
ಗುಡಿ ಗೋಪುರದಲ್ಲಿ ಕಾಡು ಕೊಲ್ಲಿಗಳಲ್ಲಿ
ಹಿಂದೂ ದರ್ಮದ ಕೀರ್ತಿದ್ವಜವ ಹಾರಿಸಿದ
ಅಮರ ಕೀರ್ತಿವಂತನು ಈ ಶಿವಾಬನು

ಮೊಮ್ಮಗ ಸಿನಿಕನಾಗಿ ಇತಿಹಾಸದ ಬಗ್ಗೆ ಹೇಳಿದ ತಾತನ ಮೇಲೆ ಹರಿಹಾಯ್ದಿದ್ದು, ಸತೀಶ ಅವರು ನಮ್ಮ ಎದುರಿಗೆ 'ಅದೇನು ಕಥೆ ಅಂತ ಹೇಳ್ತೀರೋ ತಾತ?' ಎನ್ನುವ ಕವನದಲ್ಲಿ ಓದುಗರಿಗೆ ಹೇಳಿದ್ದು :

ತೋಪು ಮತಾಪು ಪಿರಂಗಿಗಳನೆಲ್ಲ ಎತ್ತರದ
ಕಟ್ಟೆ ಏರಿಸಿ ಸುತ್ತಲನು ನಂದನವನವ ಮಾಡಿ
ಅದೆಷ್ಟೋ ಜನರು ರಕ್ತ ಸುರಿಸಿ ಬೆಳೆದ ನಾಡ
ನೆಲವ ಹಸಿರಿನಿಂದ ಕಂಗೊಳಿಸಿ ಅದೇನು
ಕಥೆ ಅಂತ ಹೇಳ್ತೀರೋ ತಾತ?

ಸ್ವಾತಂತ್ರ್ಯಾ ಅಂತ ಅದೇನೇನೋ ಹೇಳ್ತೀರಾ
ಅದು ನಮ್ಮೊಳಗಿದೆಯೋ ಅಥವಾ ಹೊರಗೋ
ಕಥೆ ಹೇಳೋರ್ ಪ್ರತಿಮೆಗಳನೆಲ್ಲ ಏರಿಸಿಡ್ತೀರಾ
ಮೇಲಿನ ಕೊಳೆಯನು ತೊಳೆಯದ ಅದೇನು
ಕಥೆ ಅಂತ ಹೇಳ್ತೀರೋ ತಾತ?

ಪರಂಗಿಯವ್ರನ್ನ ಒಳಗಡೆ ಯಾಕ್ ಬಿಟ್‌ಗೊಂಡ್ರಿ
ಹಾಗೆ ಬಂದೋರನ್ನ ಬೆಳೆಯೋಕ್ ಯಾಕ್ ಬಿಟ್ರಿ
ಅಂದೇ ನಿಮ್ಮೊಳಗಿರದಿದ್ದ ಒಗ್ಗಟಿನಿಂದ ಕಲಿತದ್ದೇನು
ಏನೇನೋ ಪ್ರಶ್ನೆಗೆ ಉತ್ತರವೇ ಸಿಗದ ಅದೇನು
ಕಥೆ ಅಂತ ಹೇಳ್ತೀರೋ ತಾತ?

ಅಂದು ಸಿಡಿಯದೇ ಉಳಿದ ತೋಪು ಮತಾಪುಗಳು
ನೀರು ನೆಲವ ಕಂಡಿರದ ಅದೆಷ್ಟೋ ಬೀಜಗಳು
ಇಂದು ಜಗವನ್ನೇ ಜನರು ಸಣ್ಣದನಾಗಿ ಮಾಡುವ ಹೊತ್ತಿಗೆ
ಎಲ್ಲಿಂದೆಲ್ಲಿಗೆ ಹೊರಡುತ್ತಿದ್ದೇವೆಂದು ತೋರದ ಅದೇನು
ಕಥೆ ಅಂತ ಹೇಳ್ತೀರೋ ತಾತ?

Monday, 17 December, 2007

ಚಿತ್ರ- ೩೨ಅಸತ್ಯ ಅನ್ವೇಷಿ ಯವರು ಬರೆದಿರುವುದು:

ಹಾಯಾಗಿ ಮಲಗಿರೋ ರಸ್ತೆ ಹಾಸುಗೆ ಮೇಲೆ
ಜೀವನದ ನಿರ್ಜೀವ ಚಕ್ರಗಳ ಓಡಾಟ;

ಬದುಕ ಬೆಂಗಾಡಿನಲಿ ಬಂದು ಹೋಗುವವರಿಹರು
ಉಂಡು ಹೋಗುವರು, ಕೊಂಡೂ ಹೋಗುವರು;

ಜೀವನದ ಬಂಡಿಯಲಿ ನೋವು ನಲಿವುಗಳು ಅವಿರತ
ತೊಲಗುತಲಿರುವುದೇ ಜಂಜಡವು ಅನವರತ?

ಕುಮಾರ ಸ್ವಾಮಿ ಕಡಾಕೊಳ್ಳ ಯವರು ತಮ್ಮ " ಆವರ್ತನ " ಎಂಬ ಕವನದಲ್ಲಿ ಅಭಿಪ್ರಾಯ ತಿಳಿಸಿದ್ದು ಹೀಗೆ:

ಕಾನನದ ಒಡಲು ಸೀಳಿ
ತರು ಲತೆಯ ಮೂಲ ಅಡಗಿಸಿ
ಅಟ್ಟ ಹಾಸದಿ ಹಾಸಿ ಮಲಗಿದೆ
ದಿಟ್ಟರಾರು ನನ್ನ ಮೆಟ್ಟಿನಿಲ್ಲಲು ಎಂದು ಬೀಗುತ ಅದೋ ದಾರಿ ಅಲ್ಲಿ

ಬಿಟ್ಟು ಬಿಡದೆ ಮತ್ತೆ ಹುಟ್ಟಿ ಬೆಳೆದಿವೆ ಬದಿಯಲಿ
ಆಲ ಅಲಸು ಬೇಲ ಬೇವು ಮರಗಳು
ಅಡರಿ ಹಬ್ಬಿವೆ ಲತೆಗಳು ತರುಗಳ ಆಸರೆಯಲಿ
ಹಾದಿಗೆ ಉತ್ತರಕೊಟ್ಟಂತೆ ಉಲಿಯುತಿವೆ ಹಕ್ಕಿಗಳು ಮರದಮೇಲೆ

ದಾರಿ ತರು ಲತೆ ಹಕ್ಕಿ ಪಿಕ್ಕಿಯ ನಡುವೆ
ಯಾರು ಮಿಗಿಲೆಂದು ವಾದವ ನಡೆದಿರಲು
ಘಟ ಘೋರ ಘರ್ಜನೆ ಮಾಡುತ್ತ ದಿಟ್ಟ ದ್ವನಿಯೊಂದು
ನಾನೇ ಮಿಗಿಲೆಂದು ಬಂದಿತು ಮಾನವ ದಂಡೊಂದು

ಕುಡಿಸಿ ತೈಲನು ಹಚ್ಚಿ ಒಡಲಿಗೆ ಕಿಚ್ಚನು
ಉರುಳುವ ಗಾಲಿಗಳ ಸೂತ್ರವನು ಹಿಡಿದು ಕಾಲಲ್ಲಿ
ಇಚ್ಚೆಗನುಸಾರ ನಿರ್ಜೀವದ ಓಟವನು ಬದಲಿಸುತ
ನಾನೆ ಸರದಾರ ಈ ಸೃಷ್ಟಿಗೆಲ್ಲ ಎಂದು ಬೀಗಿನಲಿ

ಮೌನವೆ ಮಾತಾಗಿ ಹರಿದಿತ್ತು ಜಲ ಝರಿಯು
ಮೂಖ ತಾನಾಗಿ ಕೇಳಿತ್ತು ಪ್ರೆಶ್ನೆಯೊಂದು
ಹೊನಲು ಹಸಿರಾಗಲು ಬಿಸಿಲು ತನಿಯಾಗಲು
ಧರೆಯು ಉಸಿರಾಡಲು ಕಾರಣರು ಯಾರೆಂದು?

ಎಲ್ಲ ನೋಡಿಯು ನೋಡದಿಹನಂತೆ
ನಸು ನಕ್ಕು ಇಣುಕುತಿಹನು ಬಾನಿನೊಡೆಯ
ಚೆಲ್ಲಿ ಬೆಳಕನು ಉಣಿಸುತ ಜೀವಾಗ್ನಿಯನು
ನಡೆಸಿಹನು ಸೃಷ್ಠಿಯನು ಮಾಡುತ ಆವರ್ತನ

ನಾನು ನಾನಲ್ಲ ಎಲ್ಲರಲು ನಾನಿಲ್ಲ
ನಾನಾಗಿರುವ ಸೃಷ್ಠಿಯು ನನ್ನದಲ್ಲ
ಏನು ಇಲ್ಲದೆ ಎಲ್ಲ ನನ್ನದೆಂದು ಬಂದಿಸುವ ಹುನ್ನಾರದಿ ಮೆರೆವ
ಮನುಜ ಜೀವನ ಆವರ್ತನ ಎಂತ ಅನರ್ಥ

ಸತೀಶ ಅವರ ಶಬ್ದಗಳಲ್ಲಿ "ಬಿಳಲಿನ ಅಳಲು"

ಯಾವಾಗ್ ನೋಡುದ್ರೂ ಗುಯ್ ಅನ್ನೋ ಗಾನ
ತುಂಬಿದ್ ರೋಡೂ, ಪಕ್ಕದಿ ಉದ್ದಕೆ ಹಾಸಿದ ಮರಗಳ
ಸಾಲನ್ನ್ ನೋಡೂ, ನಿಂತಿರೋ ಜೀವ ಓಡೋ ಬದುಕು.

ಯಾವತ್ತಿದ್ರೂ ಎಷ್ಟೇ ಬೆಳೆದ್ರೂ ಹೂವೇ ಇರದ ಆಲ
ಬಿಳಲಿನ ಬೆಳೆಯು, ಎಲ್ಲಾ ಕಡೆಗೂ ಉದ್ದಕೆ ಚಾಚಿ
ಹರಡುವ ಕಳೆಯು, ಬೆಳೆಯುವ ಬವಣೆ ಹಿಗ್ಗುವ ಬಯಕೆ.

ಯಾವನೇ ಇರಲಿ ಸೃಷ್ಟಿಯ ಮುಂದೆ ಸಣ್ಣವನೆಂಬ ಚಿತ್ರ
ಓಡುವ ಮಂದಿ, ಥರ ಥರ ವಾಹನ ತರುವಾ ಧೂಳಲಿ
ನಮ್ಮೊಳು ಬಂಧಿ, ದೂರಕೆ ದೂರಕೆ ಹೋಗುವ ಕಾತರ.

Monday, 10 December, 2007

ಚಿತ್ರ- ೩೧

ಕುಮಾರ ಸ್ವಾಮಿ ಕಡಾಕೊಳ್ಳ ಅವರ ಕಲ್ಪನೆಯ ಗಾಳಿಪಟ
1.

ಅಕ್ಕ ಪಕ್ಕ ನೀಲಿ
ನಡುವೆ ಕೆಂಪು ಹಸಿರು ಹಳದಿ ಪಟ್ಟಿ

ಅಡ್ಡ ಉದ್ದ ಕಡ್ಡಿ
ಕಟ್ಟಿ ಬಲು ಗಟ್ಟಿ

ಸೂತ್ರದಾರ ಕಟ್ಟಿ
ಬಾಲೊಂಗೋಚಿ ಹಚ್ಚಿ

ಬಿಚ್ಚಿ ದಾರದ ಕಟ್ಟು
ತೂರಿ ತೂರಿ ಎತ್ತಿ

ಗಾಳಿಗೆದುರಿಗೆತ್ತಿ
ಬಯಲಲಿ ತೇಲಿಬಿಟ್ಟು

2.

ಕಲಿಸಿ ಕೊಡೋ ಅಪ್ಪ
ಇನ್ನು ತಡ ಯಾಕ

ಮೇಲೆ ನೋಟ ಇಟ್ಟು
ಕಲ್ಲಟೆದು ಜಾರಿ ಬಿದ್ದು

ತರಚಿ ಆದ ಗಾಯ
ಇಲ್ಲ ಅದರ ಧ್ಯಾನ

ಮತ್ತೆ ಎದ್ದು ಬಿದ್ದು
ಎಲ್ಲರಲು ಮುಂದೆ ಇದ್ದು

ಎತ್ತರೆತ್ತರ ಎತ್ತರಕೆ
ಹಾರಿಸಿ ನನ್ನ ಪಟ

ದಾರ ಹಿಗ್ಗಿ ಹಿಗ್ಗಿ
ಹೋಗಿ ನುಗ್ಗಿ ಮುಂದೆ

ನಿನ್ನೆ ಸೋಲಿಸಿದವನ
ಬೆನ್ನ ಅಟ್ಟಿ ಅಟ್ಟಿ

ಟಾಗ ಆಕಿ ಅದಕೆ
ಸೊಂಟಾ ಮುರಿ ಬೇಕ

3.

ಕಪ್ಪು ಬಿಳಿಯ ಮೋಡ
ಜೊತೆಗೆ ನಿನ್ನ ಆಟ

ಹಾರೊ ಹಕ್ಕಿ ಜೊತೆ
ಏನು ನಿನ್ನ ಮಾತ

ಸುಡುವ ರವಿಯ ಕಣ್ಣ
ಏರಲು ಭಯಾವೇನಣ್ಣ

ಗಾಳಿ ಜೊತೆ ಹಾರಿ
ಬೆಟ್ಟದ ತುದಿಗೆ ಹೋಗಿ

ನೋಡುವೆ ಅಲ್ಲಿ ಇಣುಕಿ
ಕಾಣುವೆ ನಾನು ಬಲು ಸಣ್ಣ

ಗಿರಕಿ ಹಾಕಿ ಹಾಕಿ
ಎತ್ತ ತಿರುಗಿ ಹೋಗ್ತಿ

ಬರುತ್ತಾರೆ ನೋಡ
ಹಿಂದೇ ಹಾಕಲು ನಿನ್ನ

ನೀಲಿ ಬಯಲ ಆಟ
ಎಂತಾ ಸೊಗಸ ಐತಾ

ನಿನ್ನ ಜೊತೆ ಆಟ
ಎಂತ ಹಸನಾಗೈತ

ಪಡುವಣ ದಿಕ್ಕಿನಾಗೆ
ರವಿಯು ಆತುರದಾಗೆ

ಹೊತ್ತು ಆಯಿತು ಎಂದು
ಜಾರಿ ಹೋಗುತ್ತಾನೆ

ಮುಗಿಲ ಮಾರಿ ಬಣ್ಣ
ತಿರುಗಿದೆ ಕೆಂಪಗೆ ಅಣ್ಣ

ಮನೆಗೆ ಹೋಗೋಣ ಈಗ
ಇಳಿದೋ ಬಾರೋ ಬೇಗಸತೀಶ ಅವರು ಹೇಳುವಂತೆ- ಗಟ್ಟಿ ಇರಬೇಕು ಆಧಾರ ಸೂತ್ರ

ಹಳ್ಳ ಕೊಳ್ಳಗಳನ್ನೂ ತೂರಿಕೊಂಡು
ಬಯಲಿನ ಬೆನ್ನನ್ನೂ ಸವರಿಕೊಂಡು
ಎಲ್ಲಿಂದ ಅದೆಲ್ಲಿಗೋ ಹಾರೋ ಗಾಳಿ
ಅದರ ಜೊತೆಗೇ ಸುಳಿವ ಧೂಳಿ
ವಿಶಾಲ ನಭವೇ ಮಿತಿ ಎನ್ನೋ ಆಟ
ಅಲ್ಲಿ ಎತ್ತರವನ್ನು ಮೀರುವುದೇ ಹೂಟ.

ಮೇಲಿನ ಕೆಳಗಿನ ನೀಲಿಯ ನಡುವೆ
ರಂಗನು ಬಳಿದಿಹ ನನ್ನಯ ಚೆಲುವೆ
ಬಾಲವು ಇದ್ದರೂ ಹೆಸರಿಗೆ ಮಾತ್ರ
ಗಟ್ಟಿ ಇರಬೇಕು ಆಧಾರ ಸೂತ್ರ
ದಿಕ್ಕಿರದ ದೂರದಲಿ ಹಾರುವ ಸಾಧನೆ
ಒಮ್ಮೆ ಗಾಳಿ ನಿಂತರೆನ್ನುವ ಯೋಚನೆ

ಹಾರುವ ಹಾರಿಸುವ ತಂತ್ರವಿರುವಂತೆ
ಇಲ್ಲಿ ಬರಿಗಾಲು ಬರಿಗೈ ಇದ್ದರೇನಂತೆ
ಮೋಜು ಪಡೆಯಬೇಕು ತಂದೆ ಮಕ್ಕಳು
ಕೈ ಹಿಡಿದು ನಡೆಸದಿಹ ಬಾಳ ಕತ್ತಲು
ಎಂದೂ ಬೆಳೆಯ ಬೇಕು ಮುಗಿಲ ಮೀರಿ
ದಿನದಿನವೂ ಹತ್ತಿರವಾಗಲಿ ಹಿಡಿದ ಗುರಿ.

Monday, 3 December, 2007

ಚಿತ್ರ- ೩೦
ಸತೀಶ ಅವರು ಹೇಳಿದ್ದು... ನಾವೂ ಯೋಳು ಮಂದಿ

ನಾವೂ ಯೋಳು ಮಂದಿ
ಎಂಟೆದೆ ಗಂಟನು ಸೊಂಟಕೆ ಕಟ್ಟಿ
ಚೆಂದ ಚಿತ್ತಾರದ ಬಣ್ಣವ ಹೊದ್ದು
ಕೈಗೆ ಕಡಾಯಿಯ ಕಿಣಕಿಣ ಸದ್ದು
ದುಡಿಯೋ ಜೀವವ ದೂಡುತಲಿದ್ದು
ಮುಷ್ಟಿಯ ಹಿಟ್ಟಿಗೆ ಕಾಳಗ ನಡೆಸುವ.

ನಾವೂ ಯೋಳು ಮಂದಿ
ಯಾಡೀ ಯಾಡೀ ಎನ್ನುತ ಕರೆಯುವ
ಪರದೆಗೆ ರಂಗನು ಉಗಿದು ಒಮ್ಮೆಲೆ
ಕೈ ಕೈ ಹಿಡಿದು ಒಮ್ಮತ ತೋರುತ
ದಿನವಿಡಿ ದುಡಿತ ಬೆನ್ನದು ಬಾಗುತ
ಬಡಬಾನಲದ ಉರಿ ಹರಿಸುತಲಿರುವ.

ನಾವೂ ಯೋಳು ಮಂದಿ
ಸಿಂಬೆಯ ಜೊತೆಗೆ ಹುಟ್ಟಿದ ತಲೆಯು
ಮರಳು ಚಾಣಾ ಸುತ್ತಿಗೆ ಕುಟ್ಟಲು ಕಲ್ಲು
ಹಿಂದಿನ ಗೋಡೆಗೆ ಹೊತ್ತೆವು ನೀರು
ನೋವನು ದಪ್ಪ ಚರ್ಮದ ಸುಕ್ಕಿಗೆ ಮುಕ್ಕಿಸಿ
ಹಗುರ ಮನಸಿನ ಭಾರದ ಹೊಟ್ಟೆಯ
ನಾವೂ ಯೋಳು ಮಂದಿ.


ಸೀಮಾ ಹೇಳಿದ್ದು...

ಪ್ರತಿಯೊಂದು ಬಟ್ಟೆಗೂ ಬೇರೆ ಬಣ್ಣ,
ಪ್ರತಿಯೊಂದು ಸನ್ನಿವೇಶಕ್ಕೂ ಅದರದೇ ಬಣ್ಣ.
ಪ್ರತಿಯೊಬ್ಬ ಮನುಷ್ಯನಿಗೂ ಬೇರೆಯದೇ ಬಣ್ಣ,
ಎಲ್ಲರೂ ಮನಸ್ಸಿನಲ್ಲೂ ಒಂದೊಂದು ಬಣ್ಣ;
ಈ ಜಗತ್ತೊಂದು ಬಣ್ಣದ ಪೊಟ್ಟಣ!

Monday, 26 November, 2007

ಚಿತ್ರ - ೨೯


ರಾಧಾಕೃಷ್ಣ ಆನೆಗುಂಡಿ ಅವರ ಕಲ್ಪನೆಯಲ್ಲಿ ಹದಿನಾರರ ಕನಸುಗಳು...

ಇನ್ನೂ ವರುಷ ಹದಿನಾರು
ಕನಸುಗಳು ಸಾವಿರ
ಮೊಗೆದಷ್ಟು ಮುಗಿಯುವುದಿಲ್ಲ....

ಸೂರ್ಯ ಮುಳುಗುವ ಬಗ್ಗೆ ಕಾತುರ
ಕೆಂಪಾಗುವುದಾದರು ಹೇಗೆ ಎನ್ನುವುದೇ ಪ್ರಶ್ನೆ
ಕಡಲಲ್ಲಿ ಮಾಯಾವಾಗುವುದಾದರು ಹೇಗೆ ?

ಹಂಚಿಕೊಳ್ಳಲು ಸಾಕಷ್ಟಿದೆ
ಕಡಲ ಅಲೆಯ ಅಬ್ಬರದ ನಡುವೆ ಆಲಿಸುವವರಾದರು ಯಾರು?
ಮನಸ್ಸೆ ಹೀಗೆ ಒಮ್ಮೆ ಅಬ್ಬರಿಸಿದರೆ
ಮತ್ತೊಮ್ಮೆ ಶಾಂತವಾಗುತ್ತದೆ.

ಕನಸುಗಳು ಅಷ್ಟೆ ಕಡಲ ಅಬ್ಬರಕ್ಕಿಂತ ಭಿನ್ನವಲ್ಲ.
ವರ್ಷ ಬದಲಾದಂತೆ ಕನಸು ಬದಲಾಗುತ್ತದೆ
ಅದಕ್ಕೆ ಚಿಂತೆ ಹದಿನಾರು ದಾಟುವುದಾದರು ಹೇಗೆ.


ಸತೀಶ ಅವರ ನೋಟದಲ್ಲಿ ಗಾಳಿಗಣಗಿಸುವ ಅಲೆಗಳು...

ಇಲ್ಲಿ ಯಾರೋ ಕುಳಿತು ನೋಡಿಯೇ ನೋಡುವ
ನಂಬಿಕೆಯಲ್ಲಿ ಮರದ ಧಿಮ್ಮಿಗಳ ಆಸನಗಳ ಸಾಲು
ಅದೋ ಅಲ್ಲಿ ಯಾರು ಬರಲಿ ಬರದಿರಲಿ ಎನ್ನುವ
ಬಂದು ಹೋಗುವ ಗಾಳಿಗಣಗಿಸುವ ಅಲೆಗಳ ಪಾಲು.

ಅದೆಷ್ಟೋ ದೂರದಲ್ಲಿರುವ ಅದ್ಯಾವುದೋ ಲೋಕದಲ್ಲಿ
ಎಂದೋ ಹರಳುಗಟ್ಟುವ ಕನಸುಗಳು ಅಲೆಗಳಂತೆ
ಯಾವುದ್ಯಾವುದೋ ನದಿ ನೀರು ಬಂದು ಸೇರಿ ಕೂಡಿದಲ್ಲಿ
ಜಂಗಮದ ರೂಪವನು ಹೊದ್ದುಕೊಂಡ ತೆರೆಗಳಂತೆ.

ಶತಮಾನ ಬಾಳುವಂತೆ ಉಸುಕಿನಲ್ಲಿ ಹುದುಗಿಸಿದ ಆಸನಗಳು
ನೀರಿದ್ದರೂ ನೊರೆಯಿದ್ದರೂ ಬೇರುಗಳನ್ನು ಚಿಗುರಿಸಲಾರವು
ಪದೇ ಪದೇ ಬಂದು ಹಿಂದೆ ಹೋಗುವ ಅಲೆಯ ದಿಬ್ಬಣಗಳು
ದಡವನ್ನು ಅಪ್ಪಿ ಹಿಡಿದು ಆವರಿಸಿದ ಮರಳನ್ನು ತೋಯಿಸಲಾರವು.

ನೀನೇನೇ ಹೇಳು ಗೆಳೆಯಾ...
ಬರಿಯ ಅಲೆಯನಷ್ಟೇ ನೋಡದಿರು ಎನ್ನುವುದು ನಮ್ಮ ನಿಯಮ
ಈಗ ಕೈ ಮೈಗೆಲ್ಲ ನಮ್ಮ ಬರಹಗಳನು ಅಂಟಿಸಿಕೊಳುವ ಕಾಲದಲಿ
ನಾವೇಳಿಸೋ ಪ್ರತೀ ಅಲೆಗಳಲೆ ನಮ್ಮನಳೆವುದೇ ಮರ್ಮ.


ಸೀಮಾ ನೋಡಿದ್ದು ಬೇರೆಯಾಗುತ್ತಿರುವ ಗೆಳೆಯರನ್ನು...

ಹುಟ್ಟಿದ್ದು ಎಲ್ಲೋ, ಬಾಲ್ಯ ಇನ್ನೆಲ್ಲೋ
ಓದಿದ್ದು ಮಾತ್ರ ಜೊತೆಯಲ್ಲಿ
ಕನಸ ಕಟ್ಟುತ್ತಾ ಕಾಲ ಕಳೆಯುವುದು ಮಾತ್ರ ಇಲ್ಲಿ...
ಇದೇ ಸಮುದ್ರದ ದಡದಲ್ಲಿ.

ಕಣ್ಮುಚ್ಚಿ ಒಡೆಯುವುದರಲ್ಲಿ
ಮುಗಿದೇ ಹೋಯಿತು ಓದು ನೋಡು,
ಇನ್ನೇನಿದ್ದರೂ ಜೀವನದಲ್ಲಿ
ಅರಸುತ್ತಾ ಹೋಗುವುದು ಬೇರೇನೋ ಜಾಡು.

ಕವಲೊಡೆಯುತ್ತಿದೆ ಜೀವನದ ದಾರಿ...
ಈ ಸಮಯದಲ್ಲಿ ಒಂದೇ ಹಾರೈಕೆ ಸರಿ.
ಇದ್ದರೂ ನೀನು ದೇಹದಿಂದ ದೂರ,
ಇರು ಎಂದೆಂದೂ ಮನಸ್ಸಿಗೆ ಹತ್ತಿರ.

ಆದರೂ ಏಕೋ ಕೊರಗುತ್ತಿದೆ ಮನಸ್ಸು...
ಕೂಡಿ ಕಟ್ಟಿದ ಕನಸು ಮಾತ್ರ ಜೊತೆಯಲ್ಲಿ,
ನಿನ್ನಂತಹ ಗೆಳೆಯ ಇರುವುದಿಲ್ಲ ಬಳಿಯಲ್ಲಿ.
ಕೂಡಿ ಬಂದರೆ ಕಾಲ
ಮುಂದೆಂದಾದರೂ ಜೊತೆಯಾಗೋಣ ಇಳಿ ವಯಸ್ಸಿನಲ್ಲಿ.

Monday, 19 November, 2007

ಚಿತ್ರ - ೨೮
ಸತೀಶ ಅವರ ಕೀಲಿಮಣೆಯಿಂದ... ಏನವ್ವಾ ತಾಯಿ...

ಏನವ್ವಾ ತಾಯಿ ಆಸೆ ಆಮಿಷ ಹೊತ್ಕೊಂಡ್ ಕುಂತೀ
ಆಸೆ ಆಮಿಷ ಇದ್ದೋರ್ ಯಾರೂ ತೋರ್ಸೋದಂತೂ ಇಲ್ಲ
ಸಾಲಾ ಮೈಮೇಲ್ ಬಿದ್ದು ರೌದ್ರ ನರ್ತನ ಮಾಡೋ ಮುನ್ನ
ಸರತೀ ಸಾಲಲ್ಲಿ ನಿಂತ್ಕೊಳೋದು ಒಳಿತು ನೀನು ನಿನ್ನತನವನ್ನ.

ಏನವ್ವಾ ನೀನು ಎಲ್ಲಾರ್ ಮುಂದ ಅಂಗಡಿ ತಕ್ಕೊಂಡ್ ಕುಂತೀ
ಕನ್ಸೂ ಮನ್ಸುಗಳನೆಲ್ಲಾ ಯಾರೂ ಬಿಚ್ಕೊಂಡ್ ಕೂರೋದಿಲ್ಲ
ಕಾಲಾ ಎದ್ದೂ ಮುಂದಿನ ಮನೆಗೆ ಹೋಗೋ ಒಳಗೇ ತನ್ನ
ಕಾಲ ಮೇಲೆ ನಿಂತ್ಕೊಳೋದ್ ನೀನು ನೋಡೋದ್ ಚೆನ್ನ.

ಏನವ್ವಾ ಮಗಳೇ ಸಂಪ್ರದಾಯ ಮೈ ಮೇಲ್ ಹೊದ್ಕೊಂಡ್ ಕುಂತೀ
ಆಚಾರ ವಿಚಾರಗಳೆಲ್ಲ ಇಂದು ದಿಣ್ಣನೆ ಬದಲಾಗ್ತಿರೋ ಕಾಲ್ದಲ್ಲಿ
ನಿನಗೊಬ್ಳಿಗೇ ಏಕೆ ಹಿಂದಿನದನ್ನು ಮುಂದಕ್ಕೊಯ್ಯುವ ತವ್ಕಾ
ಕೇಳಿಲ್ಲೇನೂ ನಿನ್ನ ವಾರಿಗೆಯವರ ಹಡೆದವ್ವರೂ ಮರುಹುಟ್ಟಿರೋ ಗಮ್ಕಾ.

ಏನವ್ವಾ ನೀನು ಮುರಾ ಸಂಜೆಗೆ ರಂಗನು ಮೆತ್ತೋರ್ ಹಾಗೆ ಕುಂತೀ
ಅಪ್ಪಾ ಅಣ್ಣಾ ಮನೇಗ್ ಇನ್ನೇನ್ ಬಂದೇ ಬಿಟ್ರೂ ಅನ್ನೋ ಹೊತ್ನಲ್ಲಿ
ಹೊಟ್ಟೇ ಪಾಡಿನ್ ರಾತ್ರೀ ರೊಟ್ಟೀ ಹುಡುಕೋ ನಮ್ಮ ಬೀಡಲ್ಲಿ
ಬದಲೀ ಯಾಕೆ ಹೆಣ್ಣು ಮಕ್ಳೂ ಹಿಂಗೇ ಇರ್ಲಿ ಎನ್ನೋ ನಮ್ಮ ನಾಡಲ್ಲಿ.


ಸಿಂಧು ಅವರ ನೋಟ... ಬದುಕು!

ಕವಡೆ ಬೀಸಿದಾಗಲೆಲ್ಲ
ಬಿದ್ದಿದ್ದು ವಚ್ಚಿ
ಒಂದೊಂದೇ ಹೆಜ್ಜೆ ಇಟ್ಟು
ಮುನ್ನಡೆದ ಬದುಕ
ಹಾದಿಯ ತುಂಬ
ಬಿಸಿಲು ನೆರಳಾಟ
ಯಾರದೋ ಕಣ್ ಸೆಳೆದು
ಕವಡೆ ಜೋತಿಷ ನುಡಿಯೆ
ಬರುವ ದಕ್ಷಿಣೆಗೆ
ಸರಿಹೋದೀತು
ಸೆಟ್ಟರಂಗಡಿಯ ಲೆಕ್ಕ
ದಿನಕೊಂದು ಹೊತ್ತು ಉಂಡರೆ
ಅದೇ ಸುಖ.

ಕವಡೆಯ ಬೀಸಿ
ತಮ್ಮ ನಾಳೆಯ ತಾವೆ ತಿಳಿವವರು
ಕೂರುವರು ಇಲ್ಯಾಕ
ನಮ್ಮ ನಾಳೆ ನಿನ್ನೆಗಳೆಲ್ಲ ಒಂದೇ,
ಇಂದೇ!
ತಿಳಿಯುವ ತಿಣುಕಾಟವಿಲ್ಲ
ಬರಿದೆ
ಬದುಕಬೇಕಿದೆ!

ಜೋತಿಷ ಕೇಳಿದ ಮಂದಿ
ಪಾರ್ಕು ದಾಟುವ ಮುನ್ನವೆ
ಮರೆತವರು
ನಾನು ಮರೆಯುವ ಹಾಗಿಲ್ಲ
ನನ್ನ ಮೂಗಿಗೇ ಕವಡೆ!

ಬೀಳಲಿ ಒಂದಾದರೂ
ಚಿತ್ತ!! ಭಾರ!! ಎಂಬಾಸೆ
ಉಂಹೂಂ
ಬರೀ ವಚ್ಚಿ
ಪ್ರತೀ ಸಲಿಯೂ
ಬೆರಳಸಂದಿಯಲೆ ನುಸಿದು ಹೋಗುವ
ಗಿಚ್ಚಿ..


ಮನಸ್ವಿನಿ ಅವರ ಕಲ್ಪನೆಯಲ್ಲಿ...

ದೀಪದ ಬೆಳಕಲ್ಲಿ
ಹಳೆಯ ಸಾಮಾನು
ಹರಡಿ ಕೂತಿದ್ದೇನೆ
ಚಂದದ ಗೊಂಬೆಗಳಲ್ಲ
ಅಂದದ ಬಳೆಗಳಲ್ಲ
ನನ್ನ ಮಣೆ,ಕವಡೆ
ಆಡುವ ಹೊತ್ತಲ್ಲ
ಜೊತೆಯಲಿ ಯಾರಿಲ್ಲ
ಹಿಂದೆ ಮಲಗಿರೋ ಅವ್ವ
ದೀಪವಾರಿಸಹತ್ತಿದ್ದಾಳೆ
ಬೈಯುತ್ತಿದ್ದಾಳೆ
ಸಾಮಾನು ಕಟ್ಟಿಟ್ಟು
ಆಸೆಗಳನ್ನ ಮುಚ್ಚಿಟ್ಟು
ಮಲಗುತ್ತೇನೆ ಈಗ!

Monday, 12 November, 2007

ಚಿತ್ರ - ೨೭
ಈ ಚಿತ್ರದ ಬಗ್ಗೆ ಸತೀಶ ಹೇಳಿದ್ದು ಮೇಲೇ-ಕೆಳಗೆ

ಕೆಳಗಡೆ ಹೋಗೋ ಭಾರ ಇದ್ರೇ ತಾನೆ
ಮೇಲಕ್ಕ್ ಹೋಗೋರ್ ಅಗೋದ್ ಹಗುರ
ಮೇಲೇ-ಕೆಳಗೇ ಹೋಗೋದೇನಿದ್ರೂ
ಮಕ್ಕಳ ಮನಸಿಗೆ ಅದೇ ಸಡಗರ.

ಕಣ್ಣೂ ಕೂದಲು ತೋರಿಸಿ ನೋಡುವ
ಪಾಲು ಕೇಳದ ಗೋಡೆಯ ಮುಖಗಳು
ಮೇಲೋ-ಕೆಳಗೋ ಇದ್ದುದು ಇರಲಿ
ಎಂದೂ ನಗೆಯ ನಿಲ್ಲಿಸದ ಸೂತ್ರಗಳು.

ಗಾಳಿಯ ಹೊಡೆತಕೆ ಬಾಳೆಯ ಕುಡಿಯು
ತನ್ನೊಳು ತಾನೆ ಹರಿದಿಹುದು
ಸಂತಸಕೆ ಹಿನ್ನೆಲೆ ಗೋಡೆಯ ಮೇಲೆ
ತನ್ನಯ ಭಾರಕೆ ತಾನು ಬಾಗಿಹುದು.

ಮೇಲೆ ಹೋದೋರ್ ಜೀಕೀ ಜೀಕಿ
ಕೆಳಗೆ ತರುವುದು ಒಂದು ಬಗೆ
ಈಗಾಗಲೇ ಕೆಳಗೆ ಇಳಿದು ಬಿಟ್ಟವರು
ತಮ್ಮಯ ಭಾರಕೆ ನಕ್ಕ ನಗೆ.


ಮತ್ತು ಸೀಮಾ ಹೇಳಿದ್ದು ಈ ಕೆಳಗೆ...

ಮಕ್ಕಳಾಟದಲ್ಲಿ ಮೇಲಕ್ಕೂ, ಕೆಳಕ್ಕೂ ಹೋಗೋದೆ ಒಂದು ಮಜಾ,
ದೊಡ್ಡವರಿಗೆ ಜೀವನದಲ್ಲಿ ಮೇಲಕ್ಕೂ, ಕೆಳಕ್ಕೂ ಅನುಭವಿಸೋ ಸಜಾ.

ಮಕ್ಕಳೆನ್ನುತ್ತಾರೆ, ದೊಡ್ಡವರು ಮಾಡುವ ಕೆಲಸ ಚೆನ್ನ.
ದೊಡ್ಡವರೆನ್ನುತ್ತಾರೆ, ನೀನು ಮಗುವಾಗಿಯೇ ಇರು ಚಿನ್ನ.

ಮಕ್ಕಳಾಗಿದ್ದಾಗಲೇ ಮುಗಿದು ಹೋಯಿತು ಎಲ್ಲಾ ಆಟ;
ನಂತರದಲ್ಲೆನಿದ್ದರೂ ಜೀವನ ಜಂಜಾಟ.

ಅದಕ್ಕೇ ಇರಬೇಕು ಕವಿ ಹೇಳಿದ್ದು...
ಓ ಸಮಯವೇ ಒಮ್ಮೆ ಹಿಂದಿರುಗಿ ನೋಡು,
ಇದೊಂದು ರಾತ್ರಿಯ ಮಟ್ಟಿಗೆ ನನ್ನನ್ನು ಮಗುವನ್ನಾಗಿ ಮಾಡು.

Monday, 5 November, 2007

ಚಿತ್ರ - ೨೬
ಹಚ್ಚಿರುವ ದೀಪ ಕಿಚ್ಚಾಗದಿರಲಿ, ಶಾಪವಾಗದಿರಲಿ ಎಂಬ ಹಾರೈಕೆ ಸತೀಶ ಅವರದ್ದು.

ಹಚ್ಚಿರುವ ಬೆಳಕು ಉರಿಯುತಿರಬೇಕು
ನಮ್ಮನಿಮ್ಮೆಲ್ಲರ ಸಂಭ್ರಮವಾಗಬೇಕು
ಬೆಳಕಿನ ಬುಡ ಕತ್ತಲಲ್ಲೇ ಇರಲಿ ಸುತ್ತ
ನೆರೆಹೊರೆ ಮುಕ್ತವಾಗಿರಲಿ.

ದೊಡ್ಡವರು ಚಿಕ್ಕವರನು ಕೈ ಹಿಡಿದು ನಡೆಸಿ
ಬಾಳಿನುದ್ದಕ್ಕೂ ಬರೀ ಒಳಿತನ್ನೇ ಹರಸಿ
ಎಣ್ಣೆ ಮುಗಿಯುವವರೆಗಿನ ಬೆಳಕಿನ ಶಾಂತ
ಪ್ರಕಾಶ ಶುದ್ಧವಾಗಿರಲಿ.

ಕಿಚ್ಚಾಗದಿರಲಿ ಊರು ಮನೆ ಕಾಡು ಕಬಳಿಸಿ
ದಳ್ಳುರಿಯಾಗದಿರಲಿ ನಡುವೆ ದ್ವೇಷ ಬೆಳೆಸಿ
ಶಾಂತ ಜ್ಯೋತಿಯ ಜ್ವಾಲೆ ಕ್ರೋಧವಾಗುತ್ತಾ
ವೈಮನಸ್ಯ ಹುಟ್ಟದಿರಲಿ.

ನಮಗೂ ನಿಮಗೂ ಎಲ್ಲರಿಗೂ ಬೇಕೇ ಬೇಕು ದೀಪ
ಒಂದನ್ನೊಂದು ಸೇರಿ ಬೆಳೆಯೋ ಬೆಳಕು ಆಗೋದಿಲ್ಲ ಶಾಪ.


ಜಗದ ಹಿತ ಬಯಸುವಲ್ಲಿ ಸಹನೆ ಮುಗಿಯದಿರಲಿ ಎಂಬ ಹಾರೈಕೆ ಸೀಮಾ ಅವರದ್ದು.

ತನ್ನನ್ನು ತಾನೇ ಸುಟ್ಟುಕೊಂಡು
ಜಗತ್ತಿಗೆಲ್ಲ ಬೆಳಕನ್ನು ಕೊಡುತ್ತದೆ, ಈ ದೀಪ.
ಅದು ತಾಳ್ಮೆಯ ಪ್ರತೀಕ.
ಆದರೆ ಆ ತಾಳ್ಮೆ ಎಲ್ಲಿಯವರೆಗೆ?
ಎಣ್ಣೆ ಮುಗಿಯುವವರೆಗೆ.

ಆ ದೀಪದಂತೆಯೇ ನನ್ನನ್ನು ನಾನು ಸುಟ್ಟುಕೊಂಡು
ಜಗದ ಹಿತ ಬಯಸಬಲ್ಲೆ.
ಆದರೆ ಎಲ್ಲಿಯವರೆಗೆ?
ಸಹನೆಯೆಂಬ ಎಣ್ಣೆ ಮುಗಿಯುವವರೆಗೆ
ಓ ದೇವರೇ, ನನ್ನ ಸಹನೆ ಮುಗಿಯದಿರಲಿ!

Monday, 29 October, 2007

ಚಿತ್ರ - ೨೫
ಸಾಂಗತ್ಯದ ರಾಗವ ಹಾಡೋಣ ಎಂದು ಸತೀಶ ಪರಿಸರದ ಬಗ್ಗೆ ಕಳಕಳಿಯನ್ನು ಸೂಚಿಸಿದ್ದು...

ಬೆಟ್ಟವ ಕಡಿದು ಬೋಳು ಮಾಡಿದರು
ತುಂಬದು ತೀರದು ಹಾಹಾಕಾರ
ಮನೆಯನು ಮಾಡಲು ಜಾಗವ ಕೊಟ್ಟರು
ಮರೆಯುವ ಮಾನವ ಉಪಕಾರ.
ನುಣ್ಣಗೆ ಇದ್ದ ದೂರದ ಬೆಟ್ಟವು

ಮೋಡದ ಮಿತ್ರನು ಆಗಿತ್ತು
ಇದ್ದ ಕಾಡನು ಕಳೆಯಲು ನಾವು
ಜಲವದು ದೂರವೇ ಹೋಗಿತ್ತು.

ಕೋಟೆ ಕೊತ್ತಲ ಜೈಲಿನ ಕಂಬಿ
ಎಲ್ಲವು ಮನುಷ್ಯನ ಸೃಷ್ಟಿಗಳು
ದೂರದಿ ನಗುವ ದೇವನ ನಂಬಿ
ಹಾದು ಹೋಗುವವು ಮೋಡಗಳು.

ಆಗಿದ್ದಾಯ್ತು ಏತಕೆ ಚಿಂತೆ
ಬೆಳಕಿನೆಡೆಗೆ ನಾವು ನೋಡೋಣ
ಸೃಷ್ಟಿಯ ಸೊಬಗಿಗೆ ಕೈ ಮುಗಿಯುತೆ
ನಾವು ಸಾಂಗತ್ಯದ ರಾಗವ ಹಾಡೋಣ.


ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಎಂಬ ಗಾದೆಯನ್ನು ನೆನೆಪಿಸುವಂತೆ ಸೀಮಾ ಬರೆದಿದ್ದು...

ದೂರದಲ್ಲಿ ಕಾಣುತ್ತಿರುವ ಗುಡ್ಡಗಳಲ್ಲಿ ಹಸಿರು ಹಾಸು,
ಇಲ್ಲಿಯ ಗುಡ್ಡಗಳಲ್ಲೋ ಬರಿದೇ ಕಲ್ಲು, ಮಣ್ಣು, ಬಿಸಿಲು.
ಅಲ್ಲಿ ಹೋಗಿ ವಿರಮಿಸುವೆ ಎಂದುಕೊಂಡಿತು ಹೃದಯ.
ಅಷ್ಟರಲ್ಲಿಯೇ ಹೃದಯಕ್ಕೆ ತಿಳಿ ಹೇಳಿತು ಮನಸ್ಸು.
ಸುಮ್ಮನಿರು,
'ದೂರದಲ್ಲಿರುವುದು ಯಾವತ್ತೂ ಸುಂದರ.
ಹತ್ತಿರ ಹೋದರೆ ಅದಕ್ಕೂ ಇದಕ್ಕೂ ಇಲ್ಲ ಹೆಚ್ಚಿನ ಅಂತರ.'

Monday, 22 October, 2007

ಚಿತ್ರ - ೨೪
"ಪ್ರಾರ್ಥನೆ" ಎನ್ನುವ ಕವನದಲ್ಲಿ ಶಾಂತಲಾ ಭಂಡಿಯವರು ಈ ಚಿತ್ರದ ಬಗ್ಗೆ ಹೇಳಿದ್ದು ಹೀಗೆ:

ಕನವರಿಸದ ನೆನಪಿಲ್ಲದ
ಮುಗ್ಧ ಖಾಲಿ ಕಣ್ಣುಗಳು
ಮುಚ್ಚಿ ಪ್ರಾರ್ಥಿಸಿದರೆ ಒಳಗಡೆ ಇನ್ನೇನೋ!

ತುಂಬುವಾ ಮನಸ್ಸು ಹಾಡುತ್ತಿದೆ ಮತ್ತೇನೋ
ಬಾಯಲ್ಲಿ ಗುನುಗುನು ಸದ್ದು
ಬಾಲಿಶದ ಕಣ್ಣು
ಒಂದಿಷ್ಟು ಕಲ್ಪನಾರಹಿತ ವಾಸ್ತವ
ಮತ್ತೊಂದಿಷ್ಟು ಮಾತ್ರ ಖಾಲಿ ಖಾಲಿ
ಜೊತೆ ಒಂದಿಷ್ಟು ರೆಡಿಮೇಡ್ ಖುಷಿ!
ಪ್ರಾರ್ಥಿಸುವ ಕೆಲಸಕ್ಕೆ ಮನಸಿಲ್ಲ,
ಜಾರುಬಂಡಿಯು ಅಲ್ಲಿ ಕಾಯುತ್ತಿದೆ
ಇಲ್ಲಿ ಮೈಮನಸು ಕಟ್ಟಿ ಗಟ್ಟಿಆಗಿ ಎಲ್ಲೆಲೂ ಕತ್ತಲು
ಬಿಡು ಎಂದಾಗ ಮತ್ತದೇ ಬೆಳಕು
ಹುಳಿಮಾವು ಕೊಯ್ದು ತಿಂದಷ್ಟು ಖುಷಿ

ಕಣ್ಮುಚ್ಚಿ ಕನಸುಂಡು, ನೆನಪಿಸಿ, ಪ್ರಾರ್ಥಿಸಿ
ಅಳುವ ಕೆಲಸ ಯೌವನದಿ ಕಟ್ಟಿಟ್ಟ ಬುತ್ತಿ.
ನಮ್ಮೀ ಬಾಲ್ಯಕ್ಕಿದು ಬರಿ ಶಿಸ್ತು ಅನಿಸದಾ?
ಮಾಸ್ತರೇ ಕಣ್ಣು ಬಿಡಲಾ ಒಂದುಸಲ?

ಸಿಂಧು ಅವರು ಬರೆದಿದ್ದು ಹೀಗೆ :

ಪ್ರೀತಿಯೇ ದೇವರೆಂದವನ ನೆನೆದು..
------------------------------

ಗುಣವಿರುವ ಮಕ್ಕಳೆಲ್ಲರ ಪ್ರಾರ್ಥನೆ
ಎಲ್ಲಿಯೂ ಇರಬಹುದಾದ ಗುಡಿಯ ದೇವಗೆ.

ಪ್ರಾರ್ಥಿಸಲು ಕೇಳಿಕೊಂಡವರಾರೋ,
ಅವರ ಅಹವಾಲೇನಿದೆಯೋ
ಇವರು ಮಾತ್ರ..
ತೆರೆದುಕೊಂಡು ಜಗವ ನೋಡಲು ಹಟ ಮಾಡುವ
ಕಣ್ಣು ಮುಚ್ಚಿ
ಕೈಮುಗಿದು..
ಒಂದು ಕ್ಷಣ ಹಿಂಚುಮುಂಚಾದರೆ
ಪ್ರಾರ್ಥಿಸುವವರೇ ದೇವರಾಗಿಬಿಡಬಹುದು..!

ಕಣ್ಣು ಮುಚ್ಚಿ
ಕೈ ಮುಗಿದರೆ
ಸಿಕ್ಕೇ ಸಿಗಬಹುದೆಂಬ
ನಿಮ್ಮ ನಂಬಿಕೆಯ ಪಂಚಾಮೃತ
ನನಗೂ ಬೇಕಲ್ಲ ಕಿನ್ನರ ಜೀವಗಳೇ

ಹಿರಿಯರ ಜಗತ್ತಿನ ತರ್ಕಸಮುದ್ರದ
ಮೊಣಕಾಲುದ್ದ ನೀರಿನಲ್ಲಿ
ನಿಮ್ಮ ಹೊಳೆಗೆ ಸೇರುವ
ಹಿನ್ನೀರ ಮೆಟ್ಟಲು ಹುಡುಕುತ್ತಿರುವೆ
ಸಿಗಬಹುದೇ?!

ಸತೀಶ ಬೇಡುವುದಾದರೂ ಏಕೆ? ಎನ್ನುವ ಕವನದಲ್ಲಿ ಚಿತ್ರವನ್ನು ಸೆರೆಹಿಡಿದಿದ್ದು ಹೀಗೆ :

ಒಳಗಿರುವ ದೇವನ ನೋಡಲು ಕಣ್ಣ ಮುಚ್ಚಬೇಕೇಕೆ
ಬೇಕಿರುವ ವರವ ಬೇಡಲು ಕೈಯ ಜೋಡಿಸಬೇಕೇಕೆ

ಎಂದೋ ತೋರಿಸಿ ಯಾರೋ ಹೇಳಿಕೊಟ್ಟ ಮಾತ್ರಕ್ಕೆ
ಬಡವ-ಬಲ್ಲಿದರ ಒಡಲೊಳಗಿನ ಆಕ್ರಂದನದ ಸೂತ್ರಕ್ಕೆ
ಒಂದೇ ವಾರಿಗೆಯವರೆಲ್ಲ ಬೇಡಿಕೆಯನೆಂದು ನಿಲ್ಲಿಸುವೆವು
ಅನುದಿನವೂ ನಮ್ಮಯ ಪ್ರಾರ್ಥನೆಯೇಕೆ ಸಲ್ಲಿಸುವೆವು.

ಎಲ್ಲಾ ಕಡೆಗೂ ಇರುವ ದೇವರನು ಬೇಡುವುದಾದರೂ ಏಕೆ
ಸೃಷ್ಟಿಯು ತೋರಿಸೋ ಆಟದ ಜೊತೆಗೆ ಬೇರೆಯ ಪಾಠ ಬೇಕೆ
ಯಾರೂ ಕಾಣದ ದೇವನ ಕುರಿತು ಏತಕೆ ನಮಗೆ ಮೋಹ
ಎಷ್ಟೇ ಬೇಡಿ ಎಲ್ಲೇ ಹೋದರು ಹಿಂಗದು ತೀರದ ದಾಹ.

ವರವನು ಪಡೆಯಲು ಮೌನದ ಮೊರೆಯನು ಹೊಕ್ಕೆವು ನಾವು
ತಿರುತಿರುವಲ್ಲು ರೋಚಕವೆನಿಸುವ ಬದುಕದು ದೊಡ್ಡ ತಾವು
ನಾವೂ ನೀವೂ ಕಲಿಯುವ ಪಾಠ ಎಂದಿಗೂ ಎಲ್ಲೂ ನಿಲ್ಲೋಲ್ಲ
ಸವಾಲನು ಎಸೆವ ತಂತ್ರದ ಎದಿರು ನಮ್ಮಯ ಆಟ ನಡೆಯೋಲ್ಲ.

Monday, 15 October, 2007

ಚಿತ್ರ - ೨೩
ಸತೀಶ ಕನಸುಗಳು ಹಾರಿ ಹೋದಾವು ಜೋಕೆ ಎಂದು ಮನೋಜ್ಞವಾಗಿ ಬರೆದಿದ್ದು ಹೀಗೆ;

ಇಲ್ಲದ ತಾವಿನಿಂದ ಇರುವ ಭೂಮಿಗೆ ಗುಳೆ ಬಿದ್ದ ಹೆಣ್ಣೇ
ಅಂದು ಬಿಸಿಲಲಿ ಬಳಲಿ ಇಂದು ತಂಪಿನಲಿ ಕರಗುವ ಕಣ್ಣೇ
ಜೋಡಿಸದಿರು ಕಣ್ಣಾಲಿಗಳ ಕನಸುಗಳು ಹಾರಿ ಹೋದಾವು ಜೋಕೆ.

ಹೊಸ ಕೈಂಕರ್ಯಕೆ ತೊಡಗಿಕೊಂಡು ಬಿರುಸಾದ ಕೈ
ಹಿಂದಿನ ಸಂಪ್ರದಾಯದವನು ಹೊತ್ತು ತರಲಾರದ ಮೈ
ಮರುಗದಿರು ಹಳೆಯದಕೆ ಕನಸುಗಳು ಹಾರಿ ಹೋದಾವು ಜೋಕೆ.

ಇರುವಷ್ಟು ದಿನ ಹೆಚ್ಚು ಗೋಚುವುದೇ ನಿಯಮ
ಕಂಡಿದೆಲ್ಲವ ಬಾಚಿ ಬದಿಗಿಡುವುದೇ ಸಂಭ್ರಮ
ಯೋಚಿಸದಿರು ನಾಳೆಗೆ ಕನಸುಗಳು ಹಾರಿ ಹೋದಾವು ಜೋಕೆ.

ಗುಳೆ ಬಂದವರಿಗೆ ಸಿಗುಬಹುದಾದ ಕಳೆಗುಂದದ ವೇಷ
ಹಿನ್ನೆಲೆಯಲಿ ಹೊಳೆಯುವ ಚಹಾದ ಎಲೆಗಳ ಮೋಹ ಪಾಶ
ಹಿಂತಿರುಗಿ ಹೋಗದಿರು ಕನಸುಗಳು ಮತ್ತೆ ಹುಟ್ಟದಿರಬಹುದು ಜೋಕೆ.


ಎಮ್. ಡಿ. ಅವರು ನಾನು ಏನಾದೆ ಎಂದು ಬರೆದಿದ್ದು...

ನಾನು ಏನಾದೆ !
ಕಣ್ಣ ನೀರಾದೆ
ನೀರ ಹನಿಯಾದೆ
ಹನಿಯ ನೋವಾದೆ
ನೋವಿನ ಗಾಯಾದೆ
ಗಾಯ ಹೂವಾದೆ
ಹೂವು ಮುಳ್ಳಾದೆ
ಮುಳ್ಳ ಕೊನೆಯಾದೆ
'ಕೊನೆ'ಯ ವಿಷವಾದೆ
ವಿಷದ ಮತ್ತಾದೆ
ಮತ್ತಿನ ಮುತ್ತಾದೆ
ಮುತ್ತಿನ ಸರವಾದೆ
ಸರದ ಕೊರಳಾದೆ
ಕೊರಳ ಉರುಳಾದೆ
ಉರುಳ ಉಸಿರಾದೆ
ಉಸಿರ ಭಾರವಾದೆ
ಭಾರ ಮರವಾದೆ
ಮರದ ಬೇರಾದೆ.
ಬೇರಿಗೆ ನೀಡಿದ
ನೀರು,
ಅದು ನೀನಾದೆ
ನಾನು ನೀನಾದೆ
ನಾನು ನೀನಾದೆ

Monday, 8 October, 2007

ಚಿತ್ರ - ೨೨ಹೊತ್ತಿರೋ ಅಮ್ಮನ ಹಿಡಕೊಂಡು (ಅರ್ಥಾಥ್ ಮರ್ಕಟ ಕಿಶೋರ ನ್ಯಾಯ) ಅಂತ ಸತೀಶ ಹೇಳಿದ್ದು...

ತನ್ನಾ ಮರಿಯನು ಬೆನ್ನಾ ಮೇಲೆ ಹೊತ್ತು ಸಾಗೋ ಕಾಯ್ಕ
ಕುದಿಯೋ ರಸ್ತೆ ಬೆದರ್ಸೋ ವಾಹನ ಸದಾ ಅದೇ ಮಾಯ್ಕ
ದಾಟ್ ಬೇಕ್ ಅನ್ನೋದ್ ಬದ್ಕು ನಿಲ್ ಬೇಕ್ ಅನ್ನೋ ದೃಷ್ಟಿ.

ಅರ್ಧಾ ರಸ್ತೆ ಸೀಳ್ಕೊಂಡ್ ಹೋಗೋ ಹಳದೀ ಪಟ್ಟೇ ಸಾಲು
ಬರೀ ಅರ್ಧಾ ಸವಾಲ್ ತೋರ್ಸೋ ನೋಡೋರ್ ನೋಟದ್ ಪಾಲು
ಓಡ್ ಬೇಕ್ ಅನ್ನೋದ್ ಮನ್ಸು ಹಾರ್ ಬೇಕ್ ಅನ್ನೋ ಮತಿ.

ಹೆತ್ತು ಹೊತ್ತು ದಾರೀ ತೋರ್ಸಿ ನಡೀ ಬೇಕ್ ಅಮ್ಮ ಮುಂದೆ
ಹೊತ್ತಿರೋ ಅಮ್ಮನ ಹಿಡಕೊಂಡ್ ಮರಿ ಕೂತಿರೋದೇ ದಂದೆ
ನಡೀ ಬೇಕಾದ್ದು ಅಮ್ಮ ಕೈ ಜಾರಿ ಬಿದ್ರೇನಾದ್ರೂ ಬರ್ತಾನಂತೆ ಗುಮ್ಮ.

ಮಂಗಗಳೆಲ್ಲ ಮಾನವ್ರಾಗಿ ಕಾಡ್‌ಗಳ್ ಹೋಗೀ ಊರ್‌ಗಳ್ ಬೆಳ್ದೂ
ಯಾವ್ದೋ ಊರು ಎಲ್ಲೋ ದಾರಿ ಹುಡುಕೋದೇಕೆ ಸಿಕ್ಕಿರೋದ್ ಕಳ್ದೂ
ಈ ಕಡೆ ಮಂಗ್ಯಾ ಆ ಕಡೆ ಮನ್ಶಾ ಬಟ್ಟೇ ಇಲ್ಲದ ಬದ್ಕು ಬಿಳಿಕಪ್ಪಿನ ಚಳಕು.


ಜೀವನವೆಂದರೆ ಹೀಗೇನಾ? ಎಂದು ಸೀಮಾ ಹೇಳಿದ್ದು...

ಎದುರಿಸುತ್ತಾ ಹೋಗಬೇಕು ಗಂಡಾಂತರ
ಆಗದಂತೆ ನೋಡಿಕೊಳ್ಳಬೇಕು ಆವಾಂತರ.

ಒಂಟಿಯಾಗಿ ಸಾಗುವುದು ಸಾಧ್ಯವಿಲ್ಲ ಎಂದೆಂದೂ
ಹೊತ್ತೊಯ್ಯಬೇಕು ಅವಲಂಬಿಸಿದವರನ್ನೂ.

ಇರುವುದೊಂದೇ ಜೀವನದಲ್ಲಿ ಏನು ಮಾಡಲು ಸಾಧ್ಯ?
ಆತ್ಮಬಲವೊಂದಿದ್ದರೆ ಅಸಾಧ್ಯ ಎನಿಸಿದ್ದೊ ಕೂಡ ಸಾಧ್ಯ.

ಜೀವನದಲ್ಲಿ ಎದುರಿಸದಿದ್ದರೆ ಗಂಡಾಂತರ
ಇರುವೆವು ನಾವು ಈಚೆ ತೀರ.
ಹೋಗುವರು ನಮ್ಮಿಂದ ಎಲ್ಲರೂ ದೂರ ದೂರ
ಮಹತ್ವಾಕಾಂಕ್ಷೆ ಎಂಬ ಆಚೆ ತೀರ.

Monday, 1 October, 2007

ಚಿತ್ರ - ೨೧


' ಹಳದಿ ಹಾಸು ' ಎನ್ನುವ ಕವನದ ಮೂಲಕ ಸತೀಶ ತಮ್ಮ ಎಂದಿನ ಮನೋಜ್ಞವಾದ ಶೈಲಿಯಲ್ಲಿ ಬರೆದಿದ್ದು ಹೀಗೆ :

ಜಗಕೆ ಬಿಳಿಯ ಬಣ್ಣವ ಹೊಮ್ಮಿಸುವ ಬಾನಿಗೆ
ತಿಳಿ ಹಳದಿ ಹೊದಿಸುವ ಹುಚ್ಚು ನಿನಗೇಕೆ
ತನ್ನೊಳಗೆ ಇಹವನ್ನೇ ಮುಚ್ಚಿಕೊಳುವ ಗೂಡಿಗೆ
ಕೆಳಗಿನವರು ನೋಡದ ಹಾಗೆ ಮಾಡುವೆ ಏಕೆ.

ನಿನ್ನೊಳಗಿನಾಸೆ ಆಂತರ್ಯಗಳು ಹೊಮ್ಮುವುದಕೆ
ಇದ್ದಿರಬಹುದು ಜೊತೆಯಾಗಿ ಪೀನ ಬಣ್ಣ
ನಿನ್ನಾಸೆ ಅಮಲುಗಳು ಹುಚ್ಚೆದ್ದು ಕುಣಿವುದಕೆ
ಮೈ ಮರೆಸುವುದೇಕೆ ಜನರ ಕಣ್ಣ.

ಸೂರ್ಯ ಪ್ರಭೆ ಜಗಕೆಲ್ಲ ಹಂಚುತಿಹ ಕಾಲದಲಿ
ಹಳದಿಯ ಹೊರತು ನೀನೇಕೆ ಎಲ್ಲವನು ಹೀರಿಕೊಳುವೆ
ಮನ ಬಂದಂತೆ ಹರಡಿ ಬಿಡುಬೀಸಾದ ನಭದಲ್ಲಿ
ನಿನ್ನ ಸತ್ಯವನು ನೀನೇ ಏಕೆ ಮಾರಿಕೊಳುವೆ.

ತೆರೆದಿರುವ ಅಂಗಳಕೆ ಹೊಚ್ಚಿಹುದು ಸಾಕು ಹಳದಿ ಹಾಸು
ಸಂಭ್ರಮದ ಒಳಗಿನ ತುಮುಲಗಳ ತೆರೆದು ನಗೆಯ ಸೂಸು.

ಸೀಮಾ ಹೇಮಂತ ಋತುವಿನ ಬಗ್ಗೆ ಬರೆದಿದ್ದು ಹೀಗೆ :

ಮರಯವಿರೇಕೆ ಹೇಮಂತನ?

ಹೇಮಂತ ಓಕುಳಿಯಾಡಿದ್ದಾನೆ ತಂದು ಬಣ್ಣ;
ಬಾನಿಗೆಲ್ಲ ಮೆತ್ತಿದ್ದಾನೆ ಅರಿಶಿಣ.
ಎಲ್ಲಾ ಋತುಗಳೂ ಹೊಂದಿವೆ ಚಂದದ ಬಣ್ಣ;
ತೆರೆದು ನೋಡಬೇಕು ಮನದ ಕಣ್ಣ.
ಜೀವನದಿ ಪ್ರತಿಯೊಂದು ಕ್ಷಣವೂ ತಂದು ಅದರದೇ ಬಣ್ಣ;
ಅರಳಿಸುವಂತೆ ಮಾಡುತ್ತದೆ ಕಣ್ಣ.
ವಸಂತ ಹಸಿರಾದರೆ, ಹೇಮಂತ ಉಸಿರಾದಾನು,
ಹಾರೈಸುವಿರೇಕೆ ಕೇವಲ ವಸಂತನ?
ಮರೆಯದಿರಿ ಸ್ವಾಗತಿಸಲು ಹೇಮಂತನ.

ಸಿಂಧು ‘ ಹೂವ ಚೆಲ್ಯಾರೆ ಬಾನಿಗೆ?! ‘ ಎನ್ನುವ ಕವನದಲ್ಲಿ ನಮ್ಮೆದುರಿಗೆ ಚಿತ್ರವನ್ನು ಬಣ್ಣಿಸಿದ್ದು ಹೀಗೆ :

ಕಣ್ಣೆತ್ತಿ ನೋಡಿದಾಗ
ಕಂಡಿದ್ದರೆ ಹೀಗೊಂದು ಹೂಚೆಲ್ಲಿದ ಆಕಾಶ,
ನಮ್ಮ ನೋಟದ ಮೊನಚಷ್ಟು ಕಡಿಮೆಯಾಗುತ್ತಿತ್ತೇನೋ?
ಯಾರಿಗೆ ಗೊತ್ತು
ಎಲ್ಲಿ ಹೂಬಿರಿದ ಮರ ಕಂಡರೂ
ನೆನಪಾಗುತ್ತದೆ
ಬಾಲ್ಯದ ಹಸಿರುಗುಡ್ಡದಲ್ಲಿ
ಹೂವರಳಿ ನಿಂತ ದೇವಕಣಗಿಲು,
ಶಾಲೆಯ ದಾರಿಯ ರಂಜಲು
ಅವನು ಕಾದು ನಿಂತಿರುತ್ತಿದ್ದ,
ಆಕಾಶಮಲ್ಲಿಗೆಯ ಮರದಿಂದ ಬಾಗಿದ
ಹೂ ಗೊಂಚಲು ಗೊಂಚಲು..
ಮತ್ತು
ಹೂವಿನ ಕಂಪನ್ನ ಬದುಕಿನ ತಂಪನ್ನ
ಜೋಡಿಸಿ ನೇಯ್ದ ಕೆ.ಎಸ್.ನ ಕವಿತೆಯ ಸಾಲುಗಳು..

ಮನಸ್ವಿನಿಯವರು ಈ ಕೆಳಗಿನಂತೆ ಹೇಳಿದ್ದಾರೆ :

ಹೂಮಳೆ
**************
ಯಾರಿಟ್ಟಿಹರು ಹಳದಿ ಗೊಂಚಲ
ಮೋಡಗಳಾಗಿ?
ಭುವಿಗೆ ಚಪ್ಪರವಾಗಿ
ಸುರಿದೀತೆ ಹೇಮ ಮೇಘ!
ಹೂಮಳೆಯಾಗಿ
ನನಗಾಗಿ, ನಿನಗಾಗಿ
ಮತ್ತೆ ಧಾರಿಣಿಗಾಗಿ
ಮೈ ಮನಗಳ ತಣಿಸೀತೆ!
ಗಗನ ಕುಸುಮ ಬಿರಿದು, ಸುರಿದು
ಮನದಂಗಳಗಳ ತಣಿಸೀತೆ!
ಹೂಮಳೆಯಾಗಿ

Monday, 24 September, 2007

ಚಿತ್ರ - ೨೦


ಸತೀಶ ಅವರು 'ನೆರಳಿಗೊಂದು ನೆಲೆ' ಯಲ್ಲಿ ಬರೆದದ್ದು ಹೀಗೆ...

ಜನರೆಲ್ಲ ನಗರಗಳಲ್ಲೇ ತುಂಬಿಹರೇ ಹೊರತು
ಸ್ವಚ್ಛಂದ ಗಾಳಿಯಾಡುವಲ್ಲಲ್ಲ
ಈಗಾಗಲೇ ಕುಳಿತ ಆಸನಗಳ ಆಸೆಯೇ ಹೊರತು
ಖಾಲಿ ಬಿದ್ದ ಆಸನಗಳ ಮೇಲಲ್ಲ.

ಪ್ರತಿ ಆಸನಕೂ ಪಕ್ಕದಲಿ ನೆರಳನೊಡ್ಡಿದರೂ
ಬಿಸಿಲಲಿ ಬೇಯುವ ಬಯಕೆ
ಎಂದೂ ಕೆಸರಾಗದ ಇಟ್ಟಿಗೆ ಹಾಸಿದರೂ
ಹಿಂಗದ ದಾಹ ನೆಲಕೆ.

ಕೆಸರೂ-ಮಣ್ಣೂ ನಿಧಾನವಾಗಿ ನೆಲವ ಕ್ರಮಿಸಿ
ಜೊತೆಗೆ ಅದೆಲ್ಲೆಲ್ಲಿಂದಲೋ ಎಲೆಗಳು ಹಾರಿ
ಬಾಗಿದ ರೆಂಬೆಕೊಂಬೆಗಳು ಒಂದನ್ನೊಂದು ರಮಿಸಿ
ಹಸಿರಾಗಿರುವ ಎಲೆಗಳ ತುದಿಯಿಂದ ನೀರು ಜಾರಿ.

ನೆರಳಿದೆ ಆಸನವಿದೆ ಕೆಸರಿರದ ಜಾಗವಿದೆಯೆಂದರೂ
ಕೂತು ಸ್ವಚ್ಛಂದವನು ಆಸ್ವಾದಿಸುವ ಮನವಿಲ್ಲ
ನೆರಳ ಸೂಸುವ ನೆಪದಲ್ಲಿ ಕೊಂಬೆಗಳು ಬಳುಕಿವೆಯಾದರೂ
ನೆರಳಿಗೊಂದು ನೆಲೆ ತೋರಿಸೋ ಬಿಸಿಲಿಲ್ಲ.Monday, 17 September, 2007

ಚಿತ್ರ - ೧೯
ಸತೀಶ ತಮ್ಮ "ಎಲ್ಲೋ ಹುಟ್ಟಿದ್ ಮರಾ ಯಾರೋ ಕೊಡೋ ರೂಪಾ
ದಲ್ಲಿ
" ಹೇಳಿದ್ದು


ಸುತ್ಗೇ ಚಾಣಾ ಹಿಡ್ಕೊಂಡು ಕುಕ್ಕರಗಾಲಲ್ ಕುತ್ಗೊಂಡು
ಭೀಷ್ಮನ್ನ್ ಹುಬ್ಬಿನ್ ಒಳಗಿನ್ ದೃಷ್ಟೀಲ್ ನೋಡಿದ್ದನ್ನೇ ನೋಡ್ಕೊಂಡು
ಎಲ್ಲೋ ಹುಟ್ಟಿದ ಮರಕ್ ನೀನೂ ಏನೋ ರೂಪಾ ಕೊಡ್ತೀಯಾ
ರಚ್ಚೇ ಹಿಡಿದಾ ಮಕ್ಕಳ ಹಾಗೆ ಚಕ್ಕಳೆಯನ್ನು ಹರಡ್ತೀಯಾ.

ಕಲ್ಲಲ್ಲ್ ಕೆತ್ತೋದ್ ಕಷ್ಟಾ ಅಂತ ಮರವನ್ನ್ ಜನ ಹಿಡ್ಕೊಂಡ್ರು
ಬಂದಿದ್ದ್ ಬುದ್ದೀ ನೋಡಿದ್ದ್ ವಿಷ್ಯಾ ಅಂತಾ ಕಾಯ್ಕಾ ಕಂಡ್ಕೊಂಡ್ರು
ಕೆತ್ತೋರೆಲ್ಲ ಬಡಗೀ ಅಲ್ಲ ಬಿಟ್ಟೋರೆಲ್ಲ ಹೊರಡೋದಿಲ್ಲ
ಏನೋ ರೀತೀ ಯಾವ್ದೋ ನೀತಿ ಬಗ್ಸಿದ ಗೋಣಿಗೆ ತಿಳಿಯೋದಿಲ್ಲ.

ಯಾವ್ದೋ ಜಾತಿ ಏನೋ ಮರ ಸುತ್ಗೇ ಉಳಿ ಒಂದೇ ಪರ
ನೋಡೋರ್ ನೋಟಾ ವಕ್ರಾ ಇದ್ರೂ ನಿನ್ನಯ ಗೆರೆ ಒಂದೇ ಥರ
ಏಟಿನ್ ಮೇಲೇ ಏಟದು ಬಿದ್ದು ಸಣ್ಣಗೆ ತಾನು ಧೂಳದು ಎದ್ದು
ಗಟ್ಟೀ ಇರೋವ್ ಸುಮ್ನಿರೋವಾಗ ಹಾರೋವೆಲ್ಲ ಮಾಡ್ತಾವ್ ಸದ್ದು.

ಕೆಲಸಕೆ ನೇರಾ ಬೇಕೋ ಅನ್ನೋ ನಿನ್ನಾ ಸೀಸದ ಕಡ್ಡೀ ಆಧಾರ
ಪದೇ ಪದೇ ನೋವನು ತಿಂದು ನೇರದೆ ಹುಟ್ಟುತ್ತಲ್ಲಾ ಆಕಾರ.

Sunday, 9 September, 2007

ಚಿತ್ರ - 18
ಬಾಳಹಾದಿಯಲ್ಲಿ , ಸಾಧನೆಯ ಹಿಂದೆ ನಡೆದು ದೂರದಲ್ಲಿರುವ ಅನುಜನ ಬಗ್ಗೆ ಹೇಳಿದ್ದು – ಸೀಮಾ

ನನ್ನ ಪ್ರೀತಿಯ ತಮ್ಮ,
ಸಾಧನೆಯ ಹಾದಿಯಲ್ಲಿ ನೀನು ಹೋದೆ ದೂರ ದೂರ
ನಾನು ಇರಲು ಈಚೆ ತೀರ;
ದೇಹದಿಂದ ಇದ್ದರೂ ದೂರ
ಮನದಲ್ಲಿದೆ ಪ್ರೀತಿ ಅಪಾರ.
ಬಾಲ್ಯದ ಅನ್ಯೋನ್ಯತೆ ಇನ್ನೂ ಇದೆ
ಕೂಡಿ ಕಟ್ಟಿದ ಕನಸೂ ಜೊತೆಯಲ್ಲಿದೆ.
ತೀರ ಬೇರೆಯಾದರೇನು?
ಬೇರೆಯಾಗೇವು ನೀನು-ನಾನು,
ಮರೆಯಲಾರೆವು ಕೂಡಿ ಆಡಿದ ಆ ದಿನಗಳನು.

ಜತೆಗಾರನಾಗಬೇಕಿದ್ದ ಗೆಳೆಯ ಒಂಟಿಗತಿಯಲಿ ತನ್ನನ್ನು ಬಿಟ್ಟು ಹೊರಟಾಗ ಮಹಿಳೆಯ ದೃಷ್ಟಿಯಲಿ ನಿಂತು ರಂಜು ಹೇಳಿದ್ದು :

ಜೀವನ ಯಾತ್ರೆಯಲ್ಲಿ ಇಬ್ಬರೂ ಜೊತೆಗೂಡಿ
ನಡೆಯುತ್ತೇವೆಂದೇ ಬಾಳದಾರಿಯಲ್ಲಿ ಒಂದಾಗಿದ್ದು..
ಆದರೆ ಈಗ ನೀ ಮುಂದೆ ಮುಂದೆ ನಡೆದಿರುವೆ..
ನಾನು ನಿನ್ನ ವೇಗ ಪಡೆಯಲಾರದೇ ಹಿಂದೆ ಉಳಿದಿರುವೆ;
ಈಗ ಸುಸ್ತಾಗಿ ನಿಂತಿರುವೆ.
ನೀನು ನನ್ನೊಂದಿಗೆ ನಡೆದು ಈಗ ನನ್ನ ಹಿಂದಿಕ್ಕಿ
ಮತ್ತೊಂದು ತೀರದೆಡೆಗೆ ಹೊರಟಿರುವೆ..
ನಾನು ನಿನ್ನ ಕರೆದರೂ, ನೀನು ಕೇಳಿಸಿಯೂ ಕೇಳಿಸಿಕೊಳ್ಳದವನಂತೆ
ಮುಂದುವರೆದು ಈಗ ನನ್ನ ಕೂಗಿಗೂ ಸಿಗದವನಾಗಿರುವೆ.
ಆದರೆ ಗೆಳೆಯ, ಒಮ್ಮೆ ನನ್ನೆಡೆಗೆ ನೋಡಲಾರೆಯಾ?
ನನ್ನನ್ನೂ ನಿನ್ನೊಂದಿಗೆ ಕರೆದುಕೊಂಡು ಹೋಗಲಾರೆಯಾ?
ನಾನು-ನೀನು ಇನ್ನೊಮ್ಮೆ ಒಂದಾಗಿ ಜೊತೆಗೂಡಿ ನಡೆಯಲಾರೆವಾ?

ವಿಕ್ರಮ ಹತ್ವಾರ ದಿಟ್ಟ ಹೆಂಗಸಿನ ರೂಪ ತೆರೆದಿಟ್ಟಿದ್ದು ‘ ನಾನೊಂದು ತೀರ ‘ ದಲ್ಲಿ :

ಯಾಕಲೇ ಬಸಿಯಾ, ಹೆಂಗೈತ್ಲಾ ಮೈಗೆ?. ಏನಂತ್ ಮಾಡಿದ್ದೀಲೇ
ನನ್ನ; ಇನ್ನೊಂದ್ ಕಿತಾ ತಿರುಗ್ ನೋಡಿದ್ರೆ ಗ್ರಾಚಾರ ಬುಡಸ್ಬಿಡ್ತೀನಿ.
ಅಲ್ ಕುಂತಿರೋ ಜೋಡಿ ನೋಡಿ ನಿಂಗೆ ಮತ್ತೆ ನನ್ ತಾವ ಬರ್ಬೇಕು
ಅಂತ ತೆವಳಾ?. ಮತ್ ನೋಡು, ತಿರುಗ್ ನೋಡ್ಬೇಡ ಬೋ..ಕೆ.
ಓಯ್ತಾ ಇರು ಓಯ್ತಾ ಇರು.

ಸತೀಶಬದಲಾದ ಸ್ವರೂಪ’ ಎನ್ನುವ ಕವಿತೆಯ ಮೂಲಕ ಪ್ರತಿಬಿಂಬಿಸಿದ್ದು ಆಧುನಿಕ ಮಹಿಳೆಯ ರೂಪವ :

ಹಲವು ಸಂಸ್ಕೃತಿಯನು ಮೈವೆತ್ತ ಮಹಿಳೆ
ತಲೆಮಾರಿನ ಒಬ್ಬೊಂಟಿ ಸಂವಾದದ ಕಹಳೆ

ಗಂಡಸಿನ ಬಟ್ಟೆ ತೊಟ್ಟು, ಸೊಂಟಕೆ ಕೈ ಇಟ್ಟು
ಕೂದಲ ಮೇಲ್ಕಟ್ಟಿ ಕರಿಮಣಿ ಧರಿಸಿ ನಿಲ್ಲಬೇಕು
ಅತ್ತೆ-ಮಾವ, ನಾದಿನಿ ಮೈದುನರ ಜೊತೆಗೆ
ಏಗುವುದೂ ಅಲ್ಲದೇ ಗಂಡನಿಗೆ ತಕ್ಕವಳಾಗಬೇಕು.

ಬದಲಾದ ಪ್ರಬುದ್ಧತೆಯಲಿನ ಮಗುವಿನಿಂದ ಹಿಡಿದು
ವೃದ್ದಾಪ್ಯದಲ್ಲಿನ ತಂದೆ-ತಾಯಿ ಅತ್ತೆ-ಮಾವರೊಂದು ಕಡೆ
ಒಬ್ಬರ ಸಂಬಳ ಸಾಲದ ಸಂಸಾರದ ಹಾಡಿಗೆ
ಜೋಡಿಸಬೇಕು ಧ್ವನಿಯ ತಾನು ಅದೇ ದಿಟ್ಟ ನಡೆ.

ಸದಾ ಜಗಳ ತಂದು ಒಡ್ಡೋ ಸಂಸಾರ ಜಂಜಡವೆಂಬ
ಬಂಡಿಯ ಹೊತ್ತು ತೂಗಿ ಸಾಗಬೇಕು ನೊಗವ
ಕೂಡಿಸೋ ಶಕ್ತಿಗಳಿಗಿಂತ ಕಳೆಯೋ ಶಕ್ತಿಯೇ ಹೆಚ್ಚೇ
ಕೊನೆಗೆ ಬಾಯಿಗಳನು ತುಂಬ ಬೇಕು ಅನ್ನವೆಂಬ ನಗುವ.

ಎತ್ತ ನೋಡಿದರೂ ಅತ್ತ ನೆರೆಯ ನೀರೇನೋ ಇದೆ
ಸಮುದ್ರ-ಸಾಗರ ಸಣ್ಣಗುಂಡಿಗಳ ನಡುವೆ ನಾನು ಕಾಣದೆ.

Monday, 3 September, 2007

ಚಿತ್ರ - 17
ಅನಿವಾಸಿಯವರು ಹೈಕು ಮಾದರಿಯಲ್ಲಿ ಬರೆದಿದ್ದು :
ನಾಳೆಯ ಎಳೆ ಬೆಳಕು
ಹೊರಳಿ ಬಂದು ಮೂಸಿ ಮೈ
ತಿಕ್ಕಿ ಬಾಲವಾಡಿಸುವಾಗ
ಬೇರು ಬಿಳಲು
ಆಳಕ್ಕಿಳಿದ
ಆಲಕ್ಕೆ ಒಳಗೊಳಗೇ ಪುಲಕ.

ಶ್ರೀತ್ರಿ ಕಾಲನ ಕ್ರೌರ್ಯವನ್ನು ನೇಗಿಲಿಗೆ ಹೋಲಿಸುತ್ತಾ ಹೇಳುತ್ತಾರೆ :
ಅವ್ವನ ಮೈತುಂಬಾ
ಕ್ರೂರ ಕಾಲ ಎಳೆದ
ನೇಗಿಲ ಗುರುತುಗಳು!

ಅವಶ್ಯಕತೆ ಇದ್ದಾಗ ಬರದ ಮಗನ ನೆನಪಿನಲ್ಲಿರುವ ತಾಯಿಯ ಬಗ್ಗೆ ಬರೆದಿದ್ದು ಸಾಗರ್ :
ಬಿಸಿಲಿನ ಜಳವ ಅಡ್ಡ ಹಾಕಿದ
ಆ ಸೀರೆಯ ಸೆರಗು
ಇಂದು ಬಿಸಿಲಿನಲಿ ಒಣಗುತಿರಲು
ಅದನ್ನು ಹೊದ್ದ ನನ್ನಮ್ಮ
ಬಾರದ ಮಗನ ನೆನಪಿನಲಿ
ಬಾಡಿ ಹೋಗಿಹಳು ..

ವಿಕ್ರಮ ಹತ್ವಾರ ಕಾವ್ಯಮಯವಾಗಿ ಮನಸಿಗೆ ಮುಟ್ಟುವಂತೆ ಈ ಕೆಳಗಿನಂತೆ ಬರೆದಿದ್ದಾರೆ :
ಇನ್ನೂ....
ಹೀರಿ ಮುಗಿಸು,
ಉಳಿದ ನರ
ನಾಡಿಗಳೂ ಸೆಟೆದು ನಿಂತಿವೆ.

ನಡಿಗೆ ಕೊನೆಗೊಂಡು
ದಾರಿಯಲ್ಲೊಂದು ನೆಲೆ ಕಂಡು
ಮುಖದ ಹಂಗಿಲ್ಲದೆ ಮಿಂದು
ಚೆಂದದೊಂದು ಸೀರೆಯುಟ್ಟು
ಮಂಡಿ ಮಡಚಿ
ಮುದ್ರೆ ಬಿಗಿದು
ಕುಳಿತಿದ್ದೇನೆ.
ಕಾಲದ ಬಳಿಕ ಇನ್ನೇಕೆ-
ಕಾಲ ಬಳಿ ಬೆಳಕು?.

ಅವನ ನಮ್ರತೆ ನುಡಿಯಿತು-
ನಡೆದು ಬಂದವರ ನಮಿಸಲು,
ಕಾಲ ಕಾಣಿಸುವ ಬೆಳಕು.

ಸಿಂಧು ಅವರು ತಮ್ಮ ‘ಅರ್ಘ್ಯ ಪಾದ್ಯ’ ಎಂಬ ಕವಿತೆಯ ಮೂಲಕ ಓದುಗರಿಗೆ ಹೇಳಿದ್ದು :
ಚೆಲುವು,ಕಸುವು, ಚಲನ
ಎಲ್ಲ ಕಾಲನಿಗೆ ಮಣಿದು
ಸುಕ್ಕಾಗಿ,ಮುದುಡಿ,ನಿಶ್ಚಲವಾಗಿ
ಕುಳಿತ ಗಳಿಗೆಯಲ್ಲೂ
ಕತ್ತಲೆಯ ಮರೆಹೋಗದೆ
ಬೆಳಕ ಬರವ ಕಾಯುತ್ತ
ಕೂತ ದೇಹದ ಗುಡಿಯ ದೇವಿಯೇ
ನಿನಗೆ ಹೊನ್ನಗಿಂಡಿಯ ಹೇಮಧಾರೆಯ
ಅರ್ಘ್ಯ ಪಾದ್ಯ..
ಇನ್ನೇನ ಕೊಡಲಿ
ಏನ ಹರಸುವೆ ಅಮ್ಮಾ..?

ಎಲ್ಲ ಸುಕ್ಕಿನ ಹಿಂದೆ ಮಿರುಗಿದ ಸೊಬಗು
ಸುಸ್ತಾಗಿ ಕೂತ ಮೈಯ ಒಳಗೆ ಅಂದು ಮೆರೆದ ಚೈತನ್ಯ
ಮಡಚಿ ಕೂತ ಕಾಲ್ಗಳ ಆಸರೆಗೆ ಅವತ್ತಿನ ನಡಿಗೆ
ಎಲ್ಲ ಕಳೆದು ಕೂತ ಭಾವದಲ್ಲಿ
ಉಳಿದೆಲ್ಲ ಪಡೆದು ಹರಿಯಿಸಿದ ಬೆಳಕ ಪ್ರಭಾವಳಿ..
ನೆರಳ ಕೊಡಲು ಬಿಸಿಲು ಬೇಕು,
ಬೆಳಕು ಹೊಳೆಯಲು ಕತ್ತಲಿರಬೇಕು..

ಹರಸಲೇನಿದೆ ಮಗುವೆ..
ಮಣಿಯುವುದು ಮುಖ್ಯ,
ಮಣಿದವಗೇ ಬೆಳಕಿನ ಸೌಖ್ಯ!

ತನ್ನ ಹರೆಯದ ದಿನಗಳನ್ನು ನೆನೆಯುತ್ತಿರುವ ವೃದ್ದೆಯ ಬಗ್ಗೆ ಬರೆದಿದ್ದು ಸುಶ್ರುತ ದೊಡ್ಡೇರಿ:
ಹೀಗೆ ಕಾಣಿಸುತ್ತೀನಷ್ಟೇ;
ನನ್ನ ಹೃದಯದಲ್ಲಿನ ನೆನಪುಗಳಿಗೆ
ಇನ್ನೂ ಸುಕ್ಕು ಆವರಿಸಿಲ್ಲ ನಲ್ಲಾ...
ಹೀಗಿಲ್ಲಿ ಕೂತಾಗ, ಈ ಮುದಿ ಕಣ್ಣುಗಳಿಗೆ
ಲಲನೆಯರ ಹರಿದಾಟ ಕಂಡಾಗ,
ನನ್ನ ಹರೆಯದ ದಿನಗಳ ನೆನಪಾಗುತ್ತದೆ...
ನಿನ್ನ ನೆನಪಾಗುತ್ತದೆ...

ನಾನು ಬಿಸಿಲಲ್ಲಿ ಹೋಗುವಂತಾದರೆ ನೀನು ಕೇಳುತ್ತಿದ್ದೆ:
"ನಾ ನಿನ್ನ ಛತ್ರಿಯಾಗಲೇ?
ಸಾಲು ಮರವಾಗಿ ದಾರಿಗೆ ತಂಪಾಗಲೇ?
ಅಥವಾ ಮೋಡವಾಗಿ ಆ ಸೂರ್ಯನನ್ನೇ ಮುಚ್ಚಿಬಿಡಲೇ?"
ನಿನ್ನ ಪ್ರೀತಿ ಮಾತುಗಳೇ
ನನಗೆ ಲತಾಕುಂಜವಾಗುತ್ತಿದ್ದವು.

ಆದರೆ ಹೀಗೆ ಮ್ಯಾಲಿನದ್ಯಾವುದೋ ಲೋಕಕೆ
ನನಗಿಂತ ಮುಂಚೆ ಹೊರಟು ಹೋದೆ ಯಾಕೆ?

ಹಾಂ, ಈಗ ನಾನು ಹೇಳಿದ ಮೇಲೆ ತಪ್ಪಿನ ಅರಿವಾಗಿ,
ಹಳೆಯ ಭರವಸೆಗಳ ನೆನಪಾಗಿ
ಮೋಡವಾಗಿ ಹೋಗಿ ರವಿಯನ್ನು ಮುಚ್ಚಿಬಿಟ್ಟೀಯಾ..!

ಬದುಕ ವಿಪರ್ಯಾಸಗಳಿಗೆ ದೃಷ್ಟಾಂತ ನಾನೀಗ:
ದಿನಕರನ ಕಣ್ಣು ಚುರುಕಾಗುತ್ತಿದ್ದಂತೆ
ಹೊರಬರಬೇಕು ನಾನು ದಿನವೂ...
ಬಿಸಿಲು ತಾಕಿದರೆ ಮಾತ್ರ ಈ ಸುಕ್ಕು ಚರ್ಮ
ಕೊಂಚ ಮಿದುವಾಗುತ್ತದೆ;
ಯಾರಾದರೂ ಮುಟ್ಟಿದರೆ, ತಟ್ಟಿದರೆ
ಸಧ್ಯ, ಅರಿವಾಗುತ್ತದೆ...

ನಿನ್ನ ಪ್ರೀತಿ ನೆರಳ ನೆನಪು ಸಾಕು ಬಿಡು:
ನೀನು ಬೆರಳ ನೀಡಿ ಕರೆದುಕೊಳ್ಳುವನಕ
ಬೆಚ್ಚಗೆ ಬದುಕಿಕೊಂಡಿರುತ್ತೇನೆ.

ಸಾಯುವವರೆಗಾದರೂ ಉಳಿದುಕೊಳ್ಳಬೇಕಲ್ಲ ಮಾರಾಯಾ..!

ಪ್ರಶ್ನೇ ಮೇಲ್ ಪ್ರಶ್ನೇ’ ಅಂತ ಬರೆದಿದ್ದು ಸತೀಶ :
ಸುಮ್ನೇ ಯಾಕ್ ಕುಂತಿ ನಡೀ ತಾಯೀ
ಬೆಳ್ಳಂಬೆಳಗು ಬಿದ್ದತಿ ಕಾಣಂಗಿಲ್ಲೇನು?
ನೆತ್ತೀ ಸುಡೋ ಬಿಸ್ಲು, ಕಂಡ್ರೂ ಕಾಣ್ದಿರೋ ಮಕ್ಳು
ಇರೋರೆಲ್ಲಾ ಇದ್ರೂ ಯಾರೂ ನೋಡಂಗಿಲ್ಲೇನು?

ಮೈಯಿನ್ನ್ ನರಾ ಕಾಣಾಕ್ ಹತ್ತಿ
ಒಣಗಿದ್ ಜೀವಾ ಜೋತ್‌ಗ್ಯಂಡ್ ಬತ್ತಿ
ಹೋದದ್ದೆಲ್ಲಾ ಹಳೇ ನೆಪ್ಪು ಅಂತಾ ಕುಂತ್ಯೇನು?

ಜೀವಾ ಸತ್ರೂ ಬೆಳ್ಯೋ ಉಗುರಾ
ಅಸೇ ಕನ್ಸೂ ಎಷ್ಟೋ ದೂರಾ
ನಿಜಾ ತೋರ್ಸೋ ಬೆಳಕನ್ ನೀನು ನೋಡಿದ್ದೀಯೇನು?

ಬಡವ್ರ ಕಾಲು ಎಂದೂ ಮುಂದೆ
ಬಾಯಿ-ಕೈ ಇರೋವೇ ಹಿಂದೆ
ತಲೆಯಾಗೇನೂ ಇಲ್ಲಾ ಎಂದು ಯಾರದು ಅಂದೋರು?

ಮುದ್ದಿನ ಮಾತಿಗೆ ಮರುಳಾಗಲ್ಲ
ಸೀರೇ-ಹೆಂಡಕೆ ಮಾರ್ ಹೋಗಲ್ಲ
ಅಂತಾ ಹೇಳ್ತಾ ನಿನ್ನಯ ಮತವನು ಮಾರಿದ್ದೀಯೇನು?

ಕಾಲಿಗಷ್ಟೇ ಬೆಳಕನ್ನ್ ತೋರ್ಸೋ
ಪ್ರಶ್ನೇ ಮೇಲೇ ಪ್ರಶ್ನೇ ಕೇಳ್ಸೋ
ಬುದ್ದೀ ಇದ್ದೋರ್ ಹಾಗೆ ಮಾಡೋರಿಂದ ದೂರಿದ್ದೀಯೇನು?

Monday, 27 August, 2007

ಚಿತ್ರ - 16

ಸಾಗರ ಅವರು ಹೇಳಿದ್ದು :


ನನ್ನ ಪ್ರೀತಿಯ ಹುಡುಗಿ ,
ನಾನು ಜನರ, ಆತ್ಮೀಯರ ಮಧ್ಯದಲ್ಲಿದ್ದರೂ ಇತ್ತೀಚಿನ ದಿನಗಳಲ್ಲಿ ತೀವ್ರವಾಗಿ ಒಬ್ಬಂಟಿಯಾದಂತೆ ಅನಿಸಿಬಿಡುತ್ತಿದೆ.
ಈ ಶೂನ್ಯ ಸ್ಥಿತಿ ನನ್ನ ನೆರಳು. ಎಲ್ಲ ಒಬ್ಬಂಟಿತನಕ್ಕೆ ,ಶೂನ್ಯತೆಗೆ ಉತ್ತರವನ್ನು ಅರಸಿ ಬಸವಳಿಯುವುದು ಕೊನೆಗೆ Relax ಆಗುವುದು ' ನಿನ್ನ ಧ್ಯಾನವೆಂಬ ' ಜಗಲಿಯಲ್ಲಿ., ನಿನ್ನ ನಿಷ್ಕಳಂಕ, ಹೃದಯಪೂರ್ವಕ ನಗುವಿನ ಮನಮೋಹಕ ಕ್ಷಣಗಳ ಆ ಮಧುರ ನೆನಪಿನಲ್ಲಿ. ಈ ಧ್ಯಾನ ಮೋಹಕವಾದದ್ದು. ಕಾರಣ ಈ ಧ್ಯಾನಕ್ಕೆ ಸಾಕ್ಷಿ ಭಾವವೇ ನೀನು !
ನಿನ್ನ ಸ್ಥಿತಿವಂತಿಕೆಗೆ ಎರಡು ಮಾತಿಲ್ಲ. ನೀನು ಭಾವನೆಗಳ ಆಗರ. ನೀನು ಜೊತೆಯಲ್ಲಿದ್ದರೆ ಭಾವನೆಗಳ ದಾರಿದ್ರ್ಯವಿಲ್ಲ.ನಾನು ಧನ್ಯ! ನೀನು ನನ್ನ ಯೌವ್ವನಕ್ಕೆ ಒಂದು ಅರ್ಥ ನೀಡಿದವಳು, ನಿನ್ನ ನಿಷ್ಕಳಂಕ ಪ್ರೇಮದಿಂದ....

ಸತೀಶ , ತಮ್ಮ ಎಂದಿನ ಲಯಬದ್ದ ದಾಟಿಯಲ್ಲಿ ಬರೆದಿದ್ದು :
'ಅತ್ತಲೋ ಇತ್ತಲೋ ಬೇಗನೇ ಹೊರಡಿ '
ನಿಂತು ಹೊರಡುವ ಪಯಣಿಗರು ನಾವು
ಯೋಚಿಸಿ ಆಯ್ದುಕೊಳ್ಳುವೆವೊಂದು ತಾವು
ಎತ್ತೆತ್ತಲಿಂದ ಹುಲುಸಾಗಿ ಬಂದ ಭೌದ್ಧ ಕರ್ಮ
ಬಿರು ಬೇಸುಗೆಗೂ ಬಾಡದೆಮ್ಮ ಹಳದಿ ಚರ್ಮ.

ಕಿರಿದಾದ ಗಲ್ಲಿಯಲೂ ಸ್ವಚ್ಛತೆಯ ಮಂತ್ರ
ಓರೆ ಕಣ್ಣ ನೋಟದಲಿ ಅಡಗಿಹುದು ವಿಶ್ವಸೂತ್ರ
ಪೂರ್ವದಾ ಪೂರ್ವ ನಮ್ಮೊಳಗೆ ಇಹುದು
ಹೊರ ಹೊಮ್ಮೋ ತತ್ವ ಹೊಸದು.

ಚಂಚಲದ ಚಿತ್ತ ಮೈವೆತ್ತ ಪುರುಷನದು
ಚಿತ್ತಾರವಿಹ ನಿಲುವಂಗಿಯಷ್ಟೇ ಹೊಸದು
ಅಚಲವಾಗಿಹ ಅಬಲೆಯೊಲುಮೆಯಡಿ
ಶತಶತಮಾನಗಳ ಹಸೆಯ ಹಾಡಿ.

ಕೈ ಬೀಸಿ ಸಮಯ ಮುಂದೆ ಹಾಯುತಿದೆ
ಈ ಘಳಿಗೆ ಸಿಗದೇ ಹಾಗೇ ಹೋಗುತಿದೆ
ಬಲುಬೇಗ ನಿರ್ಧರಿತ ನೆಮ್ಮದಿಯ ಫಲ
ಆಳಿಗೊಂದರಂತೆ ಅವರದೇ ಆದ ಚೀಲ.

ಕಾಲನು ಜೋಡಿಸಿ ನಿಂತರದಾಗದು
ಕಾಲವು ಹಾಗೇ ಸುಮ್ಮನೆ ಹೋಗ್ವುದು
ಅತ್ತಲೋ ಇತ್ತಲೋ ಬೇಗನೇ ಹೊರಡಿ
ಮುಂದಿನ ಪಾತ್ರಕೆ ತಡೆಯದ ಗಡಿಬಿಡಿ.

ಪಾರಿಜಾತ ಅವರು ಬರೆದಿದ್ದು ಈ ರೀತಿಯಲ್ಲಿ :
ಕಳೆದುಹೋದರು ಎಂದು ಎಮ ನೋಡಿ ಮರುಗದಿರಿ
ನಮ್ಮ ಪಥದಲಿ ನೇರ ನಡೆಯುತಿಹೆವು
ಸುತ್ತಲಿನ ಜಗಕಿಂತ ಬೇರೆಯಲ್ಲವು ನಾವು
ನಮ್ಮ ಮನದಲಿ ದ್ವಿಧೆಯು ಕಾಣಸಿಗದು
ಚಿಗುರು ಹೊಸದಾದರೂ ಬೇರು ಹಳೆಯದೆ ತಾನೆ
ಬೇರನ್ನು ಬಿಡದೆ ನಾವ್ ಹಿಡಿದಿರುವೆವು
ಸಂಪ್ರದಾಯವ ಬಿಟ್ಟು ಕದಲದೆಯೆ ಇದ್ದರೂ
ಹೊಸದರಂಗೀಕಾರ ನಮಗೆ ಹಳತು!

ಶ್ರೀತ್ರಿಯವರು ' ಜಾಕಿಚಾನ್ 'ದಲ್ಲಿ ಬರೆದಿದ್ದು ಹೀಗೆ :
ನಡು ದಾರೀಲಿ ಏನ್ ಕಂಡು
ಬೆಕ್ಕಸ ಬೆರಗಾಗ್ ನಿಂತೆ ನೀನು?
ಶೂಟಿಂಗ್ ಮುಗೀತು ಪ್ಯಾಕಪ್ ಆಯ್ತು
ಮೇಕಪ್ ತೆಗಿ ಅಯ್ಯಾ ಜಾಕಿಚಾನು!

ಯಾವ ಸಿನಿಮಾ ಅಂತೆ ಇದು
ಮತ್ತೊಂದ್ ರಷ್ ಅವರ್ರು?
ಯಾವುದೋ ಒಂದು ಕೇಳ್ದೋರ್ ಯಾರು
ನಿಮ್ಮ ಹಾಗೆ ನಾವೂ ಈಗಲೇ ಬಂದೋರು!

Monday, 20 August, 2007

ಚಿತ್ರ - 15
ಅಗೋಚರತೆಯಲಿ ಅರ್ಥ ಹುಡುಕುವ ಬದುಕಿನ ಸಂಜೆಯಲ್ಲಿರುವವರ ಅನಿಸಿಕೆ -ಬರೆದಿದ್ದು ಆರ್ಬಿ
ನಾನು ಪ್ರತಿ ಸಾಯಂಕಾಲವೂ ಇವತ್ತು ಏನಾದರೋದು ಘಟಿಸುತ್ತದೆ ಎಂದು ಕೊಂಡೇ ಸೂರ್ಯನ ಸಾವನ್ನು ಕಣ್ಣಾರೆ ನೋಡುತ್ತಾ ಅಗೋಚರವಾದದ್ಯಾವುದಕ್ಕೋ ಕಾಯುತ್ತಿರುತ್ತೇನೆ.
ಯಾವುದಕ್ಕಾಗಿ ?
ಯಾರಿಗಾಗಿ ?
ಯಾವತ್ತಿನಿಂದ?
ಮತ್ತು ಯಾವತ್ತಿನ ತನಕ ?
ಎಂಬ ಪ್ರಶ್ನೆಗಳಿಗೆ ಉತ್ತರವನ್ನೇ ಹುಡುಕದೆ ಸುಮ್ಮನೆ ಕಾಯುತ್ತೇನೆ.
ಬೇಸಿಗೆಯ ಬಿಸಿಲಿಗೆ ತಿಂಗಳುಗಳ ಕಾಲ ಕಾದು ಕಾಯ್ದ ಬಂಡೆಗಳು, ಗುಡ್ಡಗಳು , ಸಸ್ಯಗಳು ಮಳೆಗಾಳದ ಮಳೆಗೆ ತಣ್ಣಗಾದರೂ ಆಗುತ್ತವೆ.
ಆದರೆ ನಾನು ? ......
(ಕೊನೆಗೆ ಮತ್ತೆ ಮೊದಲಿನಂತೆ ಪ್ರಶ್ನೆ - ನನ್ನ ಗೂನು ಬೆನ್ನಿನಂತೆ !)
ನಾನು ಕಾಯುತ್ತಲೇ ಇರುತ್ತೇನೆ.
ನನ್ನ ನಾಳೆ ಕಾಣದ ಜೀವನದ ಹಾದಿಯಲ್ಲಿ ....

ತಮ್ಮದೆ ಆದ ಲಯದಲ್ಲಿ ಎಂದಿನಂತೆ ಅರ್ಥಪೂರ್ಣವಾಗಿ ಸತೀಶ 'ಕಪ್ಪು ಬಿಳುಪು ಕತ್ತಲು ' ಎನ್ನುತ್ತಾ ಹೇಳಿದ್ದು :
ಕಪ್ಪು ಬಿಳುಪು ಕತ್ತಲಲ್ಲಿ ನಾಳೆ ಚಿಂತೆ ಚಿತ್ತದಲ್ಲಿ
ಎತ್ತ ದಾರಿ ಎತ್ತ ಪಯಣ ಎನ್ನುವಂತೆ ಆಗಿದೆ.

ಮಾರ್ಕ್ಸ್ ಗಡ್ಡ ಹಳೆಯದಾಯ್ತು ಮುದುಕ ಗಡ್ಡ ಬೆಳೆದು ನಿಂತು
ಕಪ್ಪು ಬಿಳುಪು ಕತ್ತಲಲ್ಲಿ ಒಬ್ಬೊಂಟಿ ಯಹೂದಿಯಾಗಿ
ಮುಂದೆ ಎಂದೋ ಬೂದಿಯಾಗಿ.

ಹಣೆಯ ಮೇಲೆ ಸಣ್ಣ ನೆರಿಗೆ ಯಾರೋ ಕರೆಯದಿದ್ದ ಕರೆಗೆ
ಕಪ್ಪು ಬಿಳುಪು ಕತ್ತಲಲ್ಲಿ ನಿರಾಶ್ರಿತವಾದ ಚಿಂತನೆ
ನೆಲದ ದೃಷ್ಟಿ ಮಂಥನೆ.

ಆಸೆ ಅಮರಿ ಬೆಳೆಯುತಿಲ್ಲ ಬಾಸೆ ಕೊಸರಿ ಮೊಳೆಯುತಿಲ್ಲ
ಕಪ್ಪು ಬಿಳುಪು ಕತ್ತಲಲ್ಲಿ ಒಂದೇ ಒಂದು ರಾಗವು
ಸಹಜವಾದ ಯೋಗವು.

ಚೀಲದಲ್ಲಿ ಚಿಂತೆ ಕೆಲವು ಬೆನ್ನ ಮೇಲೆ ಭಾರ ಹಲವು
ಕಪ್ಪು ಬಿಳುಪು ಕತ್ತಲಲ್ಲಿ ಶೂನ್ಯದಾಚೆ ಲೋಕದ
ಕಣ್ಣ ತಣಿಸೋ ಮಾಟದ.

ಕಪ್ಪು ಬಿಳುಪು ಕತ್ತಲಲ್ಲಿ ನಾಳೆ ಚಿಂತೆ ಚಿತ್ತದಲ್ಲಿ
ನೋವು ನಲಿವು ಎರಡೂ ಸೇರಿ ಹೊಸತು ಭಾವ ಹುಟ್ಟಿದೆ.

ದ್ವಂದ್ವದಲ್ಲಿರುವವನ ಮನಸ್ಥಿತಿ/ಆಲೋಚನೆಯ ಬಗ್ಗೆ ಹೇಳಿದ್ದು -ಸೀಮಾ
ಎಡವಿದೆನೇಕೆ?

ಎಡವಿದೆ ನಿಜ; ಎಂದೂ ಮಾಡದ ತಪ್ಪನ್ನು
ಇಂದೇಕೆ ಮಾಡಿದೆ? ನನ್ನ ಅಗಾಧ ತಾಳ್ಮೆ ಎಲ್ಲಿ ಹೋಯಿತು?

ಆದರೂ ಹಿಂತಿರುಗಿ ಅವಲೋಕಿಸಲು ಏನೋ ಆತಂಕ, ಭಯ.
ಹಿಂತಿರುಗಿ ನೋಡದಿರಲು ಕಾಡುವುದು ಪಾಪ ಪ್ರಜ್ಞೆ.

ಮುಂದಿರುವ ಜೀವನ ಬರೀ ಕತ್ತಲು...
ಹಿಂದಿರುವ ಬೆಳಕಿನ ಕಡೆಗೆ ಮತ್ತೊಮ್ಮೆ ತಿರುಗಿ ನೋಡಲೇ?

ಕಳೆದು ಹೋದ ಜೀವನದಬಗ್ಗೆ ಆಲೋಚಿಸುವವನ ಶೈಲಿಯಲಿ ರಾಘವೇಂದ್ರ ಪ್ರಸಾದ ಬರೆದಿದ್ದು :
ಏಲ್ ಮರ್ತೆ ಕೋಣೆ ಬೀಗ?
ಗಲ್ಲಿ ಮರೀಲಿಲ್ಲ
ಗೂಡ್ ಮರೀಲಿಲ್ಲ
ಏಲ್ಲೊ ಮರ್ತೆ ಕೋಣೆ ಬೀಗ.

ಏಲ್ ಹೊದ್ವು ನನ್ ಮರಿಹಕ್ಕಿಗಳು?
ರೆಕ್ಕೆ ಬಲ್ತಿಲ್ಲ
ಕೊಕ್ಕೆ ಬನ್ದಿಲ್ಲ
ಏಲ್ಲೊ ಹೊದ್ವು ನನ್ ಮರಿಹಕ್ಕಿಗಳು.

ಏಲ್ ಕಳ್ದ್ಹೊಯ್ತು ನನ್ ಟೈಮು?
ನೋವು ಮರ್ರ್ತಿಲ್ಲ
ಗಾಯ ಮಾಸಿಲ್ಲ
ಏಲ್ಲೊ ಕಳ್ದ್ಹೊಯ್ತ್ ನನ್ ಟೈಮು.

ರವಿ ಬೆಳಗೆರೆಯವರ 'ಮಾಂಡೋವಿ' ನೆನಪಿಸುವ ಶೈಲಿಯಲಿ ಸಿಂಧು ಅವರು ಹೇಳಿದ್ದು ಈ ರೀತಿ :
ಹುಡುಕಲೇ..ಬೇಡವೇ?

ಎಲ್ಲವಳೆಲ್ಲವಳೆಲ್ಲವಳೂ?
ಈ ಕಂಬದಲ್ಲೂ ಇಲ್ಲ..!
ದಿನಾ ದೇಗುಲದ ಅಂಗಳದಲ್ಲಿ
ಆಡುವಾಗ ಈ ಕಂಬದ ಹಿಂದೇ
ಅಡಗುವ ಅವಳೆಲ್ಲಿ?
ಯಾವ ಗಿಡದ ಹಿಂದೆ ನಿಂತಿರಬಹುದು
ಯಾವ ಮೊಗ್ಗಿನ ತೆರೆಹೊದ್ದು..?
ಯಾವ ಕಟ್ಟೆಯ ಕೆಳಗೆ ಅವಿತಿರಬಹುದು
ಯಾವ ಕುಸುರಿಯ ಕಲೆ ಹೊದ್ದು?
ಇನ್ನೆಲ್ಲಿ ಹೋಗಿರಬಹುದು
ಅಲ್ಲಿ ಬಲೂನಿನವನ ಬಳಿ ಮಕ್ಕಳಿಲ್ಲ..
ಜೋಕಾಲಿಯಿರುವೆಡೆ ಪ್ರವೇಶದ ಸಮಯವಲ್ಲ..
ಹುಡುಕಲೇ..ಬೇಡವೇ?
ಸುಮ್ಮನೆ ಕೂತರೆ
ಅವಳ ಕೈಗಳೇ ಬಂದು ಬಳಸವೇ?
ಯಾವುದಕ್ಕೂ ಇರಲಿ
ಒಮ್ಮೆ ನಶ್ಯವ ಸೇದಿಬಿಡಲೆ
ಆಕ್ಷೀ ಕೇಳಿದರೆ ಓಡಿಬರಬಹುದು.
ಬೆಟ್ಟವೇ ಮೊಹಮ್ಮದನ ಬಳಿಗೆ ಬಂದಂತೆ
ಅವಳೇ ಕರುಣಿಸಿ ಒಲಿಯಬಹುದು..
ಗುಣವಿರುವ ಮಗುವಲ್ಲವೇ
ಗುಡಿಯ ದೇವರಿಗಿಂತ ಮಿಗಿಲಹುದು..

'ನಾನಿನ್ನು ಯುವಕ ' ಎನ್ನುತ್ತಾ ಶ್ರೀತ್ರಿಯವರು ಹೇಳಿದ್ದು :

ನಾನಿನ್ನೂ ಯುವಕ!

ಹಾಲುಗಲ್ಲದ ಹಸುಳೆ ಇದ್ದಾಗ
"ಮಗು" ಎಂದು ಕರೆದು
ಅಪ್ಪಿ ಮುದ್ದಿಸಿದಿರಿ ;

ಅಂಗಿ ಚಡ್ಡಿ ತೊಟ್ಟು
ಸ್ಲೇಟು ಬಳಪ ಹಿಡಿದು
ಶಾಲೆಗೆ ಹೊರಟು ನಿಂತಾಗ
"ಹುಡುಗ" ಎಂದು ಹುರಿದುಂಬಿಸಿದಿರಿ ;

ಮೀಸೆ ಮೊಳೆತು ಆಸೆ ಬೆಳೆದು
ಹರಯದ ಹುರುಪು
ತೋಳುಗಳಲ್ಲಿ ಖಂಡಗಟ್ಟಿದಾಗ
"ಯುವಕ" ಎಂದು ಉಬ್ಬಿಸಿದಿರಿ ;

ಈಗಲೂ ಹಾಗೇ ಇದೆ
ನನ್ನ ಮಗುವಿನ ಮನಸ್ಸು
ಈಗಲೂ ಹಾಗೇ ಇದೆ
ಕಂಡಿದ್ದೆಲ್ಲ ಕಲಿಯುವ ಹುಮ್ಮಸ್ಸು
ಈಗಲೂ ಕಣ್ಮುಂದೆ ಬರತ್ತೆ
ಹರಯದಲ್ಲಿ ಕಂಡ ಕನಸು

ಮತ್ತೆ ಈಗೇಕೆ ನೀವೆಲ್ಲ
ನನ್ನ "ಮುದುಕ" ಅಂತೀರಿ?

Monday, 13 August, 2007

ಚಿತ್ರ - 14ಬಂಡಿಯ ಓಟ ಸುತ್ತಲ ನೋಟ ಎನ್ನುವ ಕವನದ ಮೂಲಕ ಸತೀಶ ಹೇಳಿದ್ದು

ಬೆಟ್ಟದ ತಪ್ಪಲ ಸುರಂಗದ ಬಳಿಯಲಿ
ದೂರಕೆ ಬಂಡಿಯು ಓಡುತಿದೆ
ಬಂಡಿಯ ಓಟವು ಒಂದು ಬಗೆ
ಸುತ್ತಲ ನೋಟವು ಹಲವು ಬಗೆ.

ಮುಖಗಳು ಹಲವು ನೂರಿರಬಹುದು
ಎರಡೇ ಎರಡು ಕಾಣುತಿವೆ
ಡಬ್ಬಿಗಳು ತಮ್ಮನು ಎಳೆದೆಳಕೊಂಡು
ಒಂದೇ ದಿಕ್ಕಲಿ ಸಾಗುತಿವೆ.

ಒಟ್ಟಿಗೆ ನಡೆದು ಹೊತ್ತು ಸಾಗುವ
ಪೂರ್ಣಪಕ್ಷದ ದ್ವಾದಶ ಡಬ್ಬಿಗಳು
ಎಷ್ಟೇ ದೂರ ಪಯಣ ಬೆಳೆಸಿದರೂ
ದೂರವೇ ಉಳಿಯೋ ಕಂಬಿಗಳು.

ಮಣ್ಣಿನ ಮೇಲೆ ಜಲ್ಲಿಯ ರಾಶಿ
ಜಲ್ಲಿಯ ಮೇಲೆ ಉಕ್ಕಿನ ಕಂಬಿ
ಕಂಬಿಗೆ ತಿಕ್ಕೋ ಬಗೆ ಬಗೆ ಗಾಲಿ
ಗಾಲಿಗೆ ಅಂಟಿದ ಉಕ್ಕಿನ ಡಬ್ಬ
ಡಬ್ಬದಲಿರುವ ಹಲವು ಮನಸ್ಥಿತಿ
ಮನಕಿದೆ ಬೇರೆ ದಿಕ್ಕಿನ ಪಯಣ
ಅಂತಹ ಪಯಣಕೆ ಯಾರೋ ಕಾರಣ
ಎಲ್ಲರೂ ಒಂದೇ ಎನ್ನುವ ಹೂರಣ.

ಉದ್ದಕೆ ಬೆಳೆದೂ ಅಡ್ಡಕೆ ಚಾಚುವ
ಜನ ಬದಲಾದಂತೆ ತಾ ಬದಲಾಗುವ
ತನ್ನದೇ ದಾರಿಯ ತಾನು ಹಿಡಿದು
ಅಳುಕಿಲ್ಲದೆ ಗುರಿಯ ಕಡೆಗೆ ನಡೆದು
ಬೆಟ್ಟದ ತಪ್ಪಲ ಸುರಂಗದ ಬಳಿಯಲಿ
ದೂರಕೆ ಬಂಡಿಯು ಓಡುತಿದೆ
ಬಂಡಿಯ ಓಟವು ಒಂದು ಬಗೆ
ಸುತ್ತಲ ಓಟವು ಹಲವು ಬಗೆ.

ರಾಘವೇಂದ್ರ ಪ್ರಸಾದ ಅವರು ಎಂದಿನಂತೆ ಆಂಗ್ಲಭಾಷೆಯಲ್ಲಿ ಬರೆದ ಕನ್ನಡ ಕವಿತೆಯನ್ನು ಅನುವಾದಿಸಿದಾಗ ದೊರೆತಿದ್ದು
ಅಂಕು ಡೊಂಕಿನ ಹಳಿಗಳ ಮೇಲೆ
ಕೊಂಕು ಬಿಂಕದ ಪಯಣ
ಸುಂಕವಿಲ್ಲದ ಸಮಾಧಿಯೆಡೆಗೆ
ತಂಗು ತಣಿಸುವ ನಿಲ್ಧಾಣ.

ನಿನ್ನೆಯ ನೆನಪುಗಳ ಬಂಡಿ
ನಾಳೆಯ ಕನಸುಗಳ ಕೊಂಡಿ.

ನಲಿಯುವ ನಯನಗಳ ನಾಟ್ಯ
ಉಲಿಯುವ ಹೃದಯಗಳ ಕಾವ್ಯ.

ಬೆಂದ ಬಯಕೆಗಳ ಬಯಲು
ನೊಂದ ಮನಗಳ ಕುಯಿಲು.

ಬದುಕೆ ಒಂದು ನಿರಂತರ ಪಯಣ
ಜೀವನ್ಮರಣಗಳೇ ಇಲ್ಲಿ ನಿಲ್ಧಾಣ.

ಅಂಕು ಡೊಂಕಿನ ಹಳಿಗಳ ಮೇಲೆ
ಕೊಂಕು ಬಿಂಕದ ಪಯಣ
ಸುಂಕವಿಲ್ಲದ ಸಮಾಧಿಯೆಡೆಗೆ
ತಂಗು ತಣಿಸುವ ನಿಲ್ಧಾಣ.

Monday, 6 August, 2007

ಚಿತ್ರ - 13ಭಾವಜೀವಿ ಮಾರ್ಮಿಕವಾಗಿ ಬರೆದಿದ್ದು ಹೀಗೆ :
*ಮುಚ್ಚುಳವಿಲ್ಲದ ಕ್ಯಾನ್*
ಬಟ್ಟೆಯೆ ಖುರ್ಚಿ, ಬಟ್ಟೆಯೆ ಮಂಚ
ತಣ್ಣೀರಿಗದ್ದಿದ ಬಟ್ಟೆಯೆ ನಮ್ಮ ಹೊಟ್ಟೆಗೆ ಒಮ್ಮೊಮ್ಮೆ
ಟ್ಯಾಕ್ಸಿಲ್ಲ, ಬಿಡಾರದ ಬಾಡಿಗೆಯೆ ಗೋಳಿಲ್ಲ
ಮನೆಯಿಂದ ಕದ್ದೊಯ್ಯಲು ಏನೂ ಇಲ್ಲ
ಸುಟ್ಟ ಪಾತ್ರೆ, ಮುಚ್ಚುಳಿರದ ಕ್ಯಾನ್ ,
ಸವೆದು ಕುಬ್ಜಗೊಂಡ ಪೂರಕೆಯೇ ನಮಗೆಲ್ಲ
ದೂರದೆಲ್ಲಿಂದನೂ ನೀರು ಹೊತ್ತು
ಆಕಾಶದ ಸೂರಿನಡಿ, ರಸ್ತೆಯ ಬದಿಯಲ್ಲೆ ಸ್ನಾನಿಸಿ
ಖಾಲಿಯಾದ ಸುಟ್ಟ ಪಾತ್ರೆ ಕ್ಯಾನಲ್ಲೆಲ್ಲಾ
ಪ್ರೀತಿಯನ್ನು ತುಂಬಿಡುತ್ತೇವೆ
ಕದ್ದು ಹೋದೀತೆಂಬ ಭಯವಿಲ್ಲದೆ!

ಪಾರಿಜಾತ ಅವರು ನೂತನ ಶೈಲಿಯಲ್ಲಿ ಸಂಸ್ಕೃತದಲ್ಲಿ ಬರೆದಿದ್ದು ಹೀಗೆ :
वीथीतटेष्वुशितमस्तु सुरालये वा
चीनाम्बरं धरतु वाथ विदीर्णचीरम् ।
अश्नातु मृष्टमनिशं बत वा कुभैक्ष्यम्
माता सदैव सुतलालन एव तृप्ता ॥

ರಸ್ತೆಬದಿಯಲ್ಲಿರಲಿ ಸುರರ ಮನೆಯಲ್ಲಿರಲಿ, ಚೀನಾಂಬರ ಧರಿಸಿರಲಿ
ಹರಿದುದನ್ನುಟ್ಟಿರಲಿ, ಮೃಷ್ಟಾನ್ನವುಣ್ಣಲಿ ಭಿಕ್ಷೆಯನು ಭಕ್ಷಿಸಲಿ,ತಾಯಿಗೆ
ತೃಪ್ತಿ ಸಿಗುವುದು ಮಗುವಿನ ಲಾಲನೆಯಲ್ಲಿಯೇ ಅಲ್ಲವೇ!

" ನಾವು ಬಡುವ್ರಲ್ಲಾ ಸಾಮೀ " ಅಂಥ ಹೇಳಿದ್ದು ಸತೀಶ ಅವರು :
ಏನ್ ಸಾಮೀ ನೀವೂ ತಗಡಿನ್ ಡಬ್ಬೀ ಒಳಗೆ
ಬಡ್‍ತನದ ಚಿತ್ರ ತೆಗಿತೀನಿ ಅಂತ ಕುಂತೀರಲ್ಲಾ
ನಾವಿರೋ ಸೀಮೇ ಜನ ಎಲ್ಲಾ ಹಿಂಗೇಯಾ
ಗೊತ್ತಿದ್ದೂ ಎಲ್ಲ ಅರಿದೋರಂಗ್ ಆಡ್ತೀರಲ್ಲಾ.

ತಲಿಮ್ಯಾಗೆ ಸೂರು ಸುತ್ಲೂ ಗ್ವಾಡೆ ಇಲ್ಲದೇನೂ
ನಮ್ ಬದ್ಕೇ ನಮ್ಮನ್ ನಡಸ್ತಾ ಇಲ್ವೇನು?
ಎಲ್ಲಾನೂ ತೆರೆದ ಬಯಲಲ್ಲೇ ನಡೆಸೋ ಜನ್ರ
ಸೊಂಟದ ದಾರಾನೂ ಗಟ್ಟೀ ಅಲ್ವೇನು?

ನೀರೂ-ನಿಡಿ ಉಳ್ಸೀ ಬೆಳ್ಸೋ ದೊಡ್ಡ್ ಮಾತು ಗೊತ್ತಿಲ್ಲ
ನಮ್ ಜನ್ರ ಶೋಕಿ-ಜೋಕಿ ಇವೆಲ್ಲ ಇರೋವೇಯಾ
ಹಾಳ್ ಗ್ವಾಡೇ ನೋಡುದ್ರೇನೇ ತಿಳಿಯಾಕಿಲ್ವಾ
ಈ ಸುತ್ಲೂ ನಮ್ಮಂಥೋರ್ಗೇನೂ ಕಮ್ಮೀ ಇಲ್ಲಾ.

ನಾವು ಬಡುವ್ರಲ್ಲಾ ಸಾಮೀ ನಾವಿರೋದೇ ಹಿಂಗೆ
ನಿಮ್ ಕಣ್ಣಿಗ್ ಕಂಡು ಕರುಳು ಚುರುಕ್ ಅಂದ್ರೆ ಹೆಂಗೆ?

ರಾಘವೇಂದ್ರ ಪ್ರಸಾದ.ಪಿ ಸಿನಿಕರಾಗಿ ಹೇಳಿದ್ದು ಹೀಗೆ :
ಭಾರತ ಪ್ರಕಾಶಿಸುತ್ತಿದೆ
ತಳ ಸುಟ್ಟ ಪಾತ್ರೆಯಲ್ಲಿ
ಬಟ್ಟೆ ಕಾಣದ ಬೆತ್ತಲೆ ದೇಹದಲ್ಲಿ
ಹೊಟ್ಟೆ ಹಸಿದ ಕರುಳ ಕುಡಿಯಲ್ಲಿ
ಕನಸೇ ಕಾಣದ ಫುಟ್ ಪಾತ್ ಕಂಗಳಲಿ ನಿಜ ಭಾರ ಪ್ರಕಾಶಿಸುತ್ತಿದೆ !

Monday, 30 July, 2007

ಚಿತ್ರ - 12
ಸಿಂಧು ಆಸ್ಪತ್ರೆಗೆ ಭೇಟಿನೀಡಿದ ಹಿರಿಯ ದಂಪತಿಗಳ ಮನಸನ್ನು ಬಿಚ್ಚಿಡುತ್ತಾರೆ...

ನಾವಿಬ್ಬರು..
-----------
ನಾವಿಬ್ಬರೂ ಇಲ್ಲಿ
ಮಾರ್ಥಾಸ್ ಆವರಣದ ಬೆಂಚಿನಲ್ಲಿ
ಸುತ್ತ ಜಂಗುಳಿ
ಗುಂಪಿನಲ್ಲೂ ಒಬ್ಬರಿನ್ನೊಬ್ಬರ
ಕೈಹಿಡಿದು, ತಬ್ಬಿ ಸಾಂತ್ವನದ ಹೊರಳು

ನಾವಿಬ್ಬರೂ ಇಲ್ಲಿ
ಹೊಳೆವ ಬೆಳಗಿನ ಚುರುಚುರು ಬಿಸಿಲಲ್ಲಿ
ಡಾಕ್ಟರ್ ದೇವತೆಯ ಟೋಕನ್ ಪಡೆದು
ದರ್ಶನಕೆ ಕಾದು
ಮುಂದೇನು ಎಂಬ ಧಾವಂತವ
ದಬ್ಬಿ ಚೀಲದಲ್ಲಿಟ್ಟು
ಪತ್ರಿಕೆಯ ಸುದ್ದಿಯ ಕುತೂಹಲದ ಓದು,
ಈ ಬಾಗಿಲಲ್ಲಿ ಬಂದವರು ಎಮ್ಮವರೆ
ಅಲ್ಲಿ ನಿಂತು ಕೂಗುವುದು ನಮಗೆಯೇ
ಸುತ್ತೆಲ್ಲ ನೋಟದ ಹೊರಳು..

ನಾವಿಬ್ಬರೂ ಇಲ್ಲಿ,
ಜಂಗುಳಿಯಲ್ಲಿ, ಎಳೆಬಿಸಿಲಿನಲ್ಲಿ..
ಇಳಿಸಂಜೆ ಮನದಲ್ಲಿ.
ಮನಕಿಳಿವ ಕತ್ತಲೆಯಲಿ
ನಕ್ಷತ್ರವೋ ಮೋಡಮುಸುಕೋ
ರಿಪೋರ್ಟು ಹೇಳಬೇಕಿದೆ..

ಎಲ್ಲರೊಡನೆ ಕಾದು ಕೂತಿದ್ದರೂ
ನಾವಿಬ್ಬರೇ ಇಲ್ಲಿ,
ಇಲ್ಲ ನಾನು ಹೇಳುವುದಿಲ್ಲ
ಬಹುಶಃ ಮಕ್ಕಳಿರಬೇಕು ಆಫೀಸಿನಲ್ಲಿ..

ಪಾರಿಜಾತ ಬಾಳಸಂಜೆಯ ಪಯಣಿಗರನ್ನು ಹೀಗೆ ಬಣ್ಣಿಸುತ್ತಾರೆ...

೧.
ಜನ್ಮಜನ್ಮಗಳ ಸಹಚರರಿವರು
ಜೀವನಯಾತ್ರೆಯ ಪಯಣಿಗರು
ಬಾಳಿನ ಸಂಜೆಯ ಸೊಬಗ ಹೀರುವರು
ಜೊತೆಜೊತೆಯಾಗಿಯೆ ನಲಿಯುವರು

೨.
ಕಣ್ಣಲಿ ಸೋಡ ಇದ್ದರೇನಂತೆ
ಚೆಲುವು ನೋಡುವರ ಕಣ್ಣಲ್ಲಿ!
ಅವರ ಕಣ್ಣಿಗಿವರೆಂದೂ ತರುಣಿಯೆ,
ಇವರ ಕಣ್ಣಿಗವರೂ ತರುಣ!

ಚಿತ್ರದಲ್ಲಿರುವವರ ನಿರ್ವಿಕಾರತೆಯನ್ನು ಸತೀಶ್ ವಿವರಿಸುವುದು ಹೀಗೆ...

ನೀವೂ ಮತ್ತು ನಿರ್ವಿಕಾರತೆ
---------------------
ಏನ್ ಸಾರ್ ಫುಟ್‌ಪಾತ್ ಮಧ್ಯೇ ಕೂತಿದ್ದೀರಲ್ಲಾ ಚೇರ್ ಹಾಕಿ
ನಿಮ್ ಸುತ್‌ಮುತ್ಲೂ ಅದೇನೇನೋ ಆಗ್ತಾ ಇದ್ರೂ
ನಿಮ್ ನಿರ್ವಿಕಾರತೇನೇ ಎಲ್ರನ್ನೂ ಹೆದರಿಸೋ ಹಾಗಿದೆ ನೋಡಿ.

ನಿಮ್ ಹಿಂದೇ, ಅಲ್ಲೇನೋ ಸಿನಿಮಾ ಶೂಟಿಂಗ್ ನಡೀತಿರೋ ಹಾಗಿದೆ
ಇಲ್ಲಾಂದ್ರೆ ಈ ಕಾಲ್ದಲ್ಲಿ ಒಬ್ರನ್ನ್ ಒಬ್ರು ಆಲಂಗಿಸೋ ಮಾತಿದೆಯೇ?
ಕಾಲ ಕೆಟ್ಟೋಯ್ತು ಅಂದ್ರಾ, ಆ ಕಾಲ ಯಾವಾಗ್ ಕೆಡ್ಲಿಲ್ಲಾ ಹೇಳಿ?

ಹೌದು, ಈಗಿನ್ ಕಾಲ್ದಲ್ಲಿ ನೀವು ಎಲ್ಲವನ್ನೂ ಗಟ್ಟಿಯಾಗಿ ಹಿಡ್ಕೊಂಡಿರಬೇಕು
ನಿಮ್ ಚೇರೂ ನಿಮ್ ಚೀಲ ನಿಮ್ ಛತ್ರಿ ಜೊತೆಯಲ್ಲಿರೋ ನಿಮ್ಮನೆಯವರನ್ನೂ,
ಕಾಯ್ತಾ ಇರೋ ನಿಮ್ಮನ್ನ ಏಮಾರಿಸೋಕೆ ಎಷ್ಟೋ ಜನ ಕಾಯ್ತಾ ಇರ್ತಾರೆ.

ಮಗಳು ಮದುವೆ ಮಾಡೋ ಯೋಚ್ನೆ ನಿಮ್ ತಲೇಲಿರಬಹುದು
ಸವೆದ ಬದುಕಿಗೆ ಬಸವಳಿದ ಜೀವ್ನಾ ನಿಮ್ಮದಾಗಿರಬಹುದು
ಹಾಗಿದ್ದೂ ದೈನಂದಿನ ವಿದ್ಯಮಾನಕ್ಕೆ ಸ್ಪಂದಿಸೋ ನಿಮ್ಮ ನೀತಿ ದೊಡ್ದೇ.

ನಾನಾ ಸವಾಲುಗಳಿಗೆ ಒಗ್ಗಿಕೊಂಡಿರೋ ನಿಮಗೆ ಸಾಂತ್ವನವಿದೆಯೋ ಗೊತ್ತಿಲ್ಲ
ಇನ್ನೂ ಕಣ್‌ಬಿಡ್ತಾನೆ ಕೊರಗ್ತಿರೋ ನಮಗೆ ಮಸ್ಸಾಜ್ ಪಾರ್ಲರ್ ಇದೆಯಲ್ಲಾ!

Monday, 23 July, 2007

ಚಿತ್ರ - 11ರಾಘವೇಂದ್ರ ಪ್ರಸಾದ್ ಪಿ. ಕಾಯುವುದೇ ಜೀವನದ ಧ್ಯೇಯ ಎನ್ನುತ್ತಾರೆ...

ಕಾಯುವುದೇ ಜೀವನದ ಧ್ಯೇಯ
ನಂಬಿಕೆಯಲ್ಲೇ ತೇಲುವುದು ಈ ಪಯಣ
ಬಂದೇ ಬರುವುದು ನಮ್ಮ ಜೀವನದ ರೈಲು
ತಂದೆ ತರುವುದು ಸಂತಸ ನೆಮ್ಮದಿಯ ಹುಯಿಲು.


ಸತೀಶ್ ಕಾಯುವ ಬಗೆಯ ಆಯಾಮಗಳನ್ನು ವಿವರಿಸುವುದು ಹೀಗೆ...

ಹೋಯಿತು ಬಂಡಿ ಎಂದು ಚಿಂತೆ ಮಾಡುವ ಹೊತ್ತು ಇದಲ್ಲ
ಮುಂದೆ ಬರಬಹುದಾದ ಬಂಡಿಯ ದಾರಿಯ ನೋಡಲ್ಲ
ಕಾಯುವಾಗ ಕಲ್ಪನೆ ನೂರು ಭಾವನೆ ಹಲವು ಬಗೆ
ಕೈ ಕಾಲ್ ಮೈ ಚಾಚಿಕೊಂಡು ಕೂರುವ ನಮ್ಮೊಳಗೆ.

ನಮ್ಮ ನಿಲುವಿಗೆ ತಕ್ಕ ನಮ್ಮ ಚೀಲ, ಚೀಲಕ್ಕೆ ತಕ್ಕ ನಿಲುವು
ಒಂದೇ ಒಂದು ದೃಶ್ಯದಲ್ಲಿ ವೈವಿಧ್ಯತೆ ಹತ್ತು ಥರವು
ಭಿಕ್ಷುಕನಿಂದ ಹಿಡಿದು ಧೀಮಂತನವರೆಗೆ ವಿಧವಿಧ ಯೋಚನೆ
ಹಿನ್ನೆಲೆಯಲ್ಲಿ ಹೊಸವಿನ್ಯಾಸದ ಹಲವು ರಚನೆ.

ಹತ್ತು ಜನ ನಾವು ಇಹೆವು ಹತ್ತು ರೀತಿ
ಗಾಡಿ ಬರದಿಹುದೇ ಇಂದು ಎನ್ನೋ ಭೀತಿ
ಸುಮ್ಮನೇ ಕೂತು ಕಾಲ ಕಳೆವುದೇ ಸರಿ
ಇರುವೊಬ್ಬ ಮಹಿಳೆಗೂ ಸ್ಥಾನವಿರದ ಪರಿ.

ಬೆತ್ತಲೆ ತಂತಿ ತಿರುಗದ ಪಂಖ ಒತ್ತಾಸೆಯ ಮನಗಳು
ಚೌಕದ ಅಂಕದ ದೀನತೆಯ ಜೊತೆಗೆ ಹೊರಗಿನಿಂದ ಬಂದ ಕರೆಗಳು.


ನಿರಂತರ ಚಲಿಸುವ ರೈಲಿಗೆ ಕಾಣುವ ವಿವಿಧ ಚಿತ್ರಗಳನ್ನು ಹೀಗೆ ಬಣ್ಣಿಸಿದ್ದಾರೆ ಸುಶ್ರುತ ದೊಡ್ಡೇರಿ ...

ಬರುವ ರೈಲಿಗಾಗಿ ಕಾಯುತ್ತಿರುವ ಜೀವಗಳು;
ಸರಕು ಸಾಗಿಸುವ ಹಮಾಲಿಗಳು;
ಗಡ್ಡದವನ ಚಪ್ಪಲಿಗಳು;
ಎಲ್ಲಿಯದೋ ದನಿಯನ್ನು ಆಲಿಸುತ್ತಿರುವ ಇಲ್ಲಿಯ ಕಿವಿ;
ದೊಣ್ಣೆಯ ಅಜ್ಜನ ಮುಖದಲ್ಲಿನ ಬಳಲಿಕೆಯ ಸಹಿ;
...ಕಣ್ಣಿಗೆ ಕಾಣುವ ಚಿತ್ರಗಳು

ಯುವಕನ ಕವರಿನಲ್ಲಿರುವ ಬಿಸಿ ಚಪಾತಿ;
ಟ್ರಾಲಿ ಬ್ಯಾಗಿನ ಸವೆದ ಗಾಲಿ;
ಎಂದೂ ತಿರುಗದ ಫ್ಯಾನಿನ ಪಂಕದ ಪಕ್ಕದ ಗಾಳಿ;
ಯುವಕನ ಕನ್ನಡಕದ ಬಿಂಬವಾಗಿರುವ ಮ್ಯಾಗಜೀನಿನ ಫೋಟೋ;
...ಕಷ್ಟ ಪಟ್ಟರೆ ಕಾಣುವ ಚಿತ್ರಗಳು

ಇನ್ನೂ ದೂರದಲ್ಲಿರುವ ರೈಲಿನಲ್ಲಿ ಇದೇ
ಸ್ಟೇಷನ್ನಿಗಾಗಿ ಕಾಯುತ್ತಿರುವ ಜೀವಗಳು;
ಅಳುತ್ತಿರುವ ಮಗುವಿಗೆ ಹಾಲೂಡಿಸುತ್ತಿರುವ ತಾಯಿ;
ಕಡಲೇಕಾಯಿ ಮಾರುವವನ ಚೀರು;
ಚಾಲಕನ ಸಹಾಯಕನ ಆಕಳಿಕೆ;
ಟಾಯ್ಲೆಟ್ಟಿನಲ್ಲಿ ಸೋರುತ್ತಿರುವ ನಲ್ಲಿ;
ಒಡೆಯನ ನಿದ್ರೆಗೆ ದಿಂಬಾಗಿರುವ ಏರ್‌ಬ್ಯಾಗ್;
...ಕಲ್ಪಿಸಿಕೊಂಡರೆ ಕಣ್ಣಮುಂದೆ ಬರುವ ಚಿತ್ರಗಳು

ನಿರಂತರ ಚಲಿಸುವ ರೈಲಿಗೆ ಇವೆಲ್ಲಾ ನಿರತ ಚಿತ್ರಗಳು..

Monday, 16 July, 2007

ಚಿತ್ರ - 10


ಇದು ಶ್ರೀನಿಧಿಯ ಕ್ಯಾಮರಾದಲ್ಲಿ ಸೃಷ್ಟಿಯಾದ ಚಿತ್ರ.
ದೇವಸ್ಥಾನಕ್ಕೆ ಬರುವ ಭಕ್ತನು ಭಿಕ್ಷುಕನೇ ಅಲ್ಲವೇ ಎನ್ನುತ್ತಾರೆ ಪಾರಿಜಾತ
1.ಜಗವ ಕಾಯುವನನ್ನು ಬೇಡುತಿರುವರು ಒಳಗೆ
ಅವರನ್ನು ಕಾದಿಹೆವು ನಾವಿಲ್ಲಿ ಹೊರಗೆ
ಕೋಟಿಗಟ್ಟಲೆ ಹಣವು, ಬಂಗಲೆಯು ಬೇಕಿಲ್ಲ
ಹಸಿವ ತಣಿಸಲು ಸಾಕು ಕಾಸೈದು ನಮಗೆ
2.ಒಳಗೆ ಇರುವವರನ್ನು "ದಾನಿಗಳು" ಎನ್ನುವರು
ಆದರೂ ಅವರೆಲ್ಲ ಭಿಕ್ಷುಕರೆ ತಾನೆ?
ನಮಗೇಕೆ ಈ ಪಟ್ಟಿ, ತಿಳಿಯದಾದೆವು ನಾವು
ನಿಮಗೆ ತಿಳಿದರೆ, ನಮಗೆ ತಿಳಿಹೇಳಿ ನೀವು !
ಭಿಕ್ಷುಕರ ವೇದನೆಯನ್ನು ಮನೋಜ್ಞವಾಗಿ ಹೇಳಿದ್ದು ಗುಹೆ

ಅ)
ಬೇಡುತಿಹೆವು ಬಾಗಿಲಲಿ
ಬಾಡುತಿಹೆವು ಬಿಸಿಲಿನಲಿ
ಇದು ನಾವು ನೀಡುವ ಕಾಟವಲ್ಲಯ್ಯ
ನಮ್ಮ ಹೊಟ್ಟೆಪಾಡಿನ ಪೀಕಲಾಟವಯ್ಯ

ಬ)
ಫೋಟೊ ತೆಗೆಯೆಯುವಾ ಶ್ರೀನಿಧಿ?
ಬದಲಾಗದು ನಮ್ಮೀ ದುರ್ವಿಧಿ...

ಸಣ್ಣ ಕಥೆಯ ಮೂಲಕ ಸುಶ್ರುತ ಹೇಳಿದ್ದು

ನಾವೂ ನಿಮ್ಮವರೇ..ನಿನ್ನೆ ರಾತ್ರಿ ಆಫೀಸಿನಿಂದ ಮನೆಗೆ ಮರಳುತ್ತಿದ್ದಾಗ ಬಸ್‍ಸ್ಟಾಂಡಿನಲ್ಲಿ ಒಂದು ಅಪರಿಚಿತ ಮಗು ನನ್ನ ಪ್ಯಾಂಟನ್ನು ಜಗ್ಗಿ 'ಅಣ್ಣಾ' ಅಂತು. ಒಡ್ಡಿದ ಅದರ ಕೈಯಲ್ಲಿ ಒಂದು ರೂಪಾಯಿ, ಐವತ್ತು ಪೈಸೆಯ ನಾಣ್ಯಗಳಿದ್ದವು. ಅದರ ಮುಖವನ್ನು ಎಲ್ಲೋ ನೋಡಿದಂತಿದೆ ಅನ್ನಿಸಿತು. ತಕ್ಷಣ ನನಗೆ ಈ ಚಿತ್ರ ನೆನಪಾಯಿತು. ಇಲ್ಲಿ ಕುಳಿತಿರುವ ಜನರ ಪೈಕಿಯದೇ ಈ ಮಗು ಅಂತ ನನಗೇಕೋ ಬಲವಾಗಿ ಅನ್ನಿಸಿತು. ಈ ಎದುರಿಗೆ ಕುಳಿತ ಅಜ್ಜನ ಮುಖವನ್ನೇ ಹೋಲುತ್ತಿದೆ ಈ ಕೂಸಿನ ಮುಖ. ಅಂದರೆ ಈ ಕೂಸು ಈ ಅಜ್ಜನ ಮಗಳ ಮಗು ಆಗಿರಬಹುದು. ಅಥವಾ ಸೊಸೆಯ ಮಗು ಆಗಿರಬಹುದು. ಇಲ್ಲವೇ ತಂಗಿಯ ಅತ್ತಿಗೆಯ ಮಗಳ ಅತ್ತೆಯ ಮೊಮ್ಮಗುವೂ ಆಗಿರಬಹುದು. 'ಆಗಿರಬಹುದು' ಏನು, ಆಗಿರಲೇಬೇಕು.

ನಾನು ಆ ಮಗುವಿನ ಕೈ ಹಿಡಿದು ಕೇಳುತ್ತೇನೆ: 'ಏನು ನಿನ್ನ ಹೆಸರು?' ಮಗು ಗಾಭರಿಯಾಗುತ್ತದೆ. ನನ್ನ ಕಣ್ಣು ತಪ್ಪಿಸುತ್ತದೆ. ಕೈ ಬಿಡಿಸಿಕೊಂಡು ಓಡಲು ಅಣಿಯಾಗುತ್ತದೆ. ನಾನು ಮತ್ತೆ ಅದನ್ನು ಹಿಡಿದುಕೊಳ್ಳುತ್ತೇನೆ. 'ನಿನ್ನ ಊರು ಯಾವುದು?' -ಕೇಳುತ್ತೇನೆ. ನನ್ನ ಭಾಷೆ ಅರ್ಥವೇ ಆಗುವುದಿಲ್ಲವೇನೋ ಎಂಬಂತೆ ಪಿಳಪಿಳನೆ ಹೊಸ ಜೀವಿಯನ್ನು ನೋಡುವಂತೆ ಕಣ್ಣು ಮಾಡುತ್ತದೆ ಮಗು. 'ಹೀಗೆ ಭಿಕ್ಷೆ ಬೇಡುವುದು ತಪ್ಪು, ಶಾಲೆಗೆ ಹೋಗಬೇಕು ನೀನು' ಎನ್ನುತ್ತೇನೆ. ಮಗು ನನ್ನನ್ನು ಪಕ್ಕಕ್ಕೆ ತಳ್ಳಿ (ಅಬ್ಬ! ಎಷ್ಟು ಶಕ್ತಿ!) ಓಡತೊಡಗುತ್ತದೆ. ಸಾವರಿಸಿಕೊಂಡ ನಾನೂ ಹಿಂಬಾಲಿಸಿಕೊಂಡು ಓಡುತ್ತೇನೆ. ಮಗು ತನ್ನ ಜಾರುವ ಜೋಳಿಗೆಯನ್ನು ಹೆಗಲಿಗೇರಿಸಿಕೊಳ್ಳುತ್ತ, ಬೆನ್ನಟ್ಟಿಕೊಂಡು ಬರುತ್ತಿರುವ ನನ್ನನ್ನು ಹಿಂದಿರುಗಿ ನೋಡುತ್ತ ನೋಡುತ್ತ ಓಡುತ್ತಿದೆ... ಪ್ರಾಣಭೀತಿಯಿಂದ ಓಡುತ್ತಿದೆ...

ಓಡಿ ಓಡಿ ಅದು ಸೀದಾ ಇದೇ ದೇವಸ್ಥಾನದ ಬಳಿ ಬಂದಿದೆ. ಪುಟಪುಟನೆ ಈ ಮೆಟ್ಟಿಲುಗಳನ್ನೇರಿ, ಅಗೋ, ಆ ಆರನೇ ಮೆಟ್ಟಿಲಿನ ಮೇಲಿನ ತಾಯಿಯ ಬೆನ್ನ ಹಿಂದೆ ಅವಿತುಕೊಂಡಿದೆ. ಏದುಸಿರು ಬಿಡುತ್ತಾ ಬಂದ ನಾನು ಆರನೇ ಮೆಟ್ಟಿಲನ್ನೂ ದಾಟಿ ಮುಂದುವರೆದಿದ್ದೇನೆ... ದೇವಳದ ಹೊರಗೆ ಬಿಡೋಣವೆಂದು ನೋಡಿದರೆ ಕಾಲಲ್ಲಿ ಚಪ್ಪಲಿಯೇ ಇಲ್ಲ! ಹಾಗೇ ಒಳನಡೆದಿದ್ದೇನೆ. ಕೈ ಮುಗಿದು ಮಂಗಳಾರತಿ ಪಡೆದಿದ್ದೇನೆ. ಕಾಣಿಕೆ ಹಾಕೋಣವೆಂದು ಜೇಬಿಗೆ ಕೈ ಹಾಕಿದರೆ ಬಿಡಿಗಾಸೂ ಇಲ್ಲ! ಓಡುವ ಭರದಲ್ಲಿ ಎಲ್ಲಾ ದಾರಿಯಲ್ಲೇ ಬಿದ್ದುಹೋಗಿದೆ. ನನ್ನ ಮೊಬೈಲು, ವಾಚು, ವ್ಯಾಲೆಟ್ಟು, ಬಾಚಣಿಕೆ, ಪೆನ್ನು, ಕರ್ಚೀಫು.. ಎಲ್ಲಾ ಎಲ್ಲೋ ಬಿದ್ದುಹೋಗಿವೆ. ನನ್ನ ಬಟ್ಟೆಯನ್ನೆಲ್ಲಾ ಒಮ್ಮೆ ನೋಡಿಕೊಳ್ಳುತ್ತೇನೆ: ಪೂರ್ತಿ ಧೂಳು, ಮಣ್ಣು, ಅಲ್ಲಲ್ಲಿ ಹರಿದು ಹೋಗಿದೆ..

ಯಾಕೋ ನನಗೆ ಅಳು ಬರುತ್ತದೆ.. ನಾನು ಅನಾಥನೆಂಬ ಭಾವ ಆವರಿಸಿಕೊಳ್ಳುತ್ತದೆ.. ವಾಪಸು ಮನೆಗೆ ಹೋಗುವ ದಾರಿ ಸಹ ಗೊತ್ತಿಲ್ಲ.. ಒಂದೊಂದೇ ಮೆಟ್ಟಿಲು ಇಳಿಯುತ್ತೇನೆ.. ಆರನೇ ಮೆಟ್ಟಿಲಿಗೆ ಬಂದಾಗ ಅದೇ ಕೂಸು 'ಬಾ ಮಾವಾ.. ಕೂತುಕೋ..' ಎನ್ನುತ್ತದೆ. ಕುಡಿಯಲು ನೀರು ಕೊಡುತ್ತದೆ.. ತನ್ನ ಜೋಳಿಗೆಯಿಂದ ರೊಟ್ಟಿಯ ಚೂರು ತೆಗೆದು ಕೊಡುತ್ತದೆ.. ನನ್ನ ಜೀವಮಾನದಲ್ಲೇ ತಿಂದಿರದ ಒಣಕಲು ರಾಗಿ ರೊಟ್ಟಿ.. ನಾನದನ್ನು ಮುಕ್ಕುತ್ತೇನೆ.. ನನ್ನನ್ನು ನಿಧಾನಕ್ಕೆ ಕೈ ಹಿಡಿದು ನಡೆಸಿಕೊಂಡು ಹೋಗಿ ಈ ಅಜ್ಜನ ಪಕ್ಕ ಕೂರಿಸುತ್ತದೆ. 'ಬಾರಪ್ಪಾ ಕೂತುಕೋ.. ನೀನೂ ನಮ್ಮವನೇ.. ಇಲ್ಲಿ ಎಲ್ಲಾ ನಮ್ಮವರೇ.. ಯಾರೂ ಅನಾಥರಲ್ಲ.. ಒಬ್ಬರಿಗೊಬ್ಬರು ಹೇಗೋ ಸಂಬಂಧಿಕರು..' ಎನ್ನುತ್ತಾನೆ ಅಜ್ಜ. ನನಗೂ ಅದು ಹೌದೆನಿಸುತ್ತದೆ. ಬಹುಶಃ ನಾನು ಈ ಅಜ್ಜನ ನಾದಿನಿಯ ತಮ್ಮನ ಹೆಂಡತಿಯ ಅಣ್ಣನ ಭಾವನ ಷಡ್ಡಕನ ಮಗನಿರಬೇಕು ಎನಿಸುತ್ತದೆ.. ಅಜ್ಜನ ಪಕ್ಕ ಕೂತ ನಾನು ಜನ ಕಂಡದ್ದೇ ಜೋರಾಗಿ ಅರಚುತ್ತೇನೆ: 'ಅಮ್ಮಾ.. ಅಣ್ಣಾ.. ಭಿಕ್ಷಾ..' ಮತ್ತೂ ಜೋರಾಗಿ ಅರಚುತ್ತೇನೆ: 'ದಾನ ಮಾಡೀ ತಾಯೀ..' ಇನ್ನೂ ಜೋರಾಗಿ, ನನ್ನ ಕನಸಿನ ಲೋಕದಿಂದ ಹೊರಬರುವಷ್ಟು ಜೋರಾಗಿ ಅರಚುತ್ತೇನೆ: 'ನಾನೂ ನಿಮ್ಮವನೇ.. ದೂರದ ಸಂಬಂಧಿಕ.. ಸ್ವೀಕರಿಸಿ ಸ್ವಾಮೀ..'

md ಹೇಳಿದ್ದು

"ವಕ್ತ್ ಸೆ ದಿನ್ ಔರ್ ರಾತ್
ವಕ್ತ್ ಸೆ ಕಲ್ ಔರ್ ಆಜ್
ವಕ್ತ್ ಕಾ ಹರ್ ಶಯ್ ಗುಲಾಮ್
ವಕ್ತ್ ಕಾ ಹರ್ ಶಯ್ ಪೆ ರಾಜ್ .."

ಎಷ್ಟೊಂದು ನೋವು ಆ ಮುದುಕನ ದನಿಯಲ್ಲಿ. ಗೋಣೆತ್ತದೆ ಜೀವನದ ಬಗ್ಗೆ ಗೊಣಗುತ್ತಲೇ ಹಾಡುತ್ತಿದ್ದಾನೆ, ಆ ಆರನೆ ಅಗಲವಾದ ಮೆಟ್ಟಿಲಲ್ಲಿ ಕುಳಿತಿರುವ ಪಿಚ್ಚು ಕಣ್ಣಿನ ಭಿಕ್ಷುಕ.
"ಭಿಕ್ಷುಕ ಅವನು ! ಹಾಗಾದರೆ ನೀನು?" ಎಂದು ಕೇಳಿತು ನನ್ನ ಒಳಮನಸ್ಸು.
"ನಾನು ಭಿಕ್ಷುಕನ ಹಾಗೆ ಕಾಣಿಸುತ್ತೀನೋ?". ಅರೆ ಯಾರದು ಕೇಳಿದ್ದು? ಯಾರೋ ಮೂರ್ಖರು ಇರಬೇಕು.
'ನಾನು' ಮೂರು ಡಿಗ್ರೀ, ಎರಡು ಮನೆ (ಹಳೆಯದ್ದು ಮತ್ತು ಹೊಸದೊಂದು), ಒಂದು ಕಾರು, ಲಕ್ಷಗಳಲ್ಲಷ್ಟೇ ಇರುವ ಬ್ಯಾಂಕ್ ದುಡ್ಡು, ಇವುಗಳೆಲ್ಲದರ ಮಾಲೀಕ, ಕಂಪನಿಯ ಅಧಿಕಾರಿ, ಸಾಕಷ್ಟು ಗೆಳೆಯರು ಸಂಪಾದಿಸಿರುವ ಸ್ನೇಹ ಜೀವಿ, ಹೆಂಡತಿ-ಮಕ್ಕಳೊಂದಿಗೆ ಸುಖ ಸಂಸಾರಿ. ನನ್ನನ್ನು ಈ ಪ್ರಶ್ನೆ ಕೇಳುವವನು ಮೂರ್ಖನೇ ಇರಬೇಕು.

"ಪಾಪಾ, ೧ ರುಪಿ ಪ್ಲೀಸ್. ಆ ಬೆಗ್ಗರಗೆ ಡೊನೇಟ್ ಮಾಡ್ತೀನಿ"
"ಒ.ಕೆ. ಮೈ ಸ್ವೀಟ್ ಚೈಲ್ಡ್. ಯು ಸೀ ದೆ ಆರ್ ಪೂರ್ ಪೀಪಲ್. ಬಟ್ ಬ್ಲಡಿ ಬೆಗ್ಗರ್ಸ್."
"ಶ್ರೀನಿ ಇದೆಲ್ಲ ಭಾಷಣ ಮಗೂಗೆ ತಿಳಿಯುತ್ತಾ? ನೀವೊಂದು. ಹೇ ಚಿನ್ನು ಬಾ ಇಲ್ಲಿ. ಇದು ತಗೊ ೫ ರುಪೀಸ್. ಗಿವ್ ಇಟ್ ಟು ದ್ಯಾಟ್ ಸಿಂಗಿಂಗ್ ಬೆಗ್ಗರ್. ಮ್ಮ್"

"ನಿಶಾ, ನಿನಗೆ ಗೊತ್ತಲ್ಲ. ನಾನು ಹೇಗೆ ಅಂತ. ಏನಾದರೂ ಕೆಲಸ ಮಾಡಿ ದುಡ್ಡು ಗಳಿಸಿ ಹೊಟ್ಟೆ ಹೊರಕೋಳ್ಳೋಕಾಗದಿರೋ ಲೇಜಿ ಬುಲ್ಲ್ ಶಿಟ್ ಅವರು. ಅವರಿಗೆ ಹೀಗೆ ಐದೈದು ರೂಪಾಯಿ ದಾನ ಧರ್ಮ ಅಂತ ಕೊಟ್ರೆ ಹೇಗೆ. ಆ ದುಡ್ಡು ಈ ಹೆಸರು, ಮನೆ, ಕಾರು, ಈ ೩೫೦೦೦ ರೂ ಮೊಬೈಲು ಇವನ್ನೆಲ್ಲಾ ನಾನು ಗಳಿಸಿದ್ದೇನೆ. ಯಾರೋ ಬಂದು ನನಗೆ ಭಿಕ್ಷೆ ಕೊಟ್ಟು ಹೋಗಿಲ್ಲ. ತಿಳೀತಾ?"

"ಶ್ರೀನಿ, ಪ್ಲೀಸ್"

"ಲಿಸನ್ ಲಿಸನ್ ಟು ಮಿ. ಈ ಕೆಲಸ ನನ್ನ ಕೈಲಿರದಿದ್ರೆ ನಿನ್ನ ತಂದೆ ನಮ್ಮ ಪ್ರೀತಿನ ಒಪ್ಪಿಕೊಂಡು ನಮ್ಮ ಮದುವೆಗೆ ಹೂಂ ಅಂತಿದ್ದ್ನಾ? ಇಲ್ಲ. ನೋಡು ನಾನು ಹೇಳಿದ್ದರಲ್ಲಿ ತಪ್ಪೇನಿಲ್ಲ. ಈ ನನ್ನ ಯಶಸ್ಸು, ನಾನು ಇಂಡಷ್ಟ್ರಿಯಲ್ಲಿ ಮಾಡಿದ ಹೆಸರು, ಈ ಬಂಧು-ಬಳಗ, ಗಳಿಸಿದ ದುಡ್ಡು ಇದೆಲ್ಲ ನನ್ನ ಕೇವಲ ನನ್ನ ಪರಿಶ್ರಮದ ಫಲ. ಇದನ್ನ ನನ್ನಿಂದ ಯಾರು ಕಿತ್ತುಕೊಳ್ಳೋಕಾಗಲ್ಲ. ಅಂಡರ್ಸ್ಟಾಂಡ್"

"ಆಯ್ತು ನಿಮ್ಮ ವಿಚಾರಧಾರೆ ನಿಮಗೆ ಇರಲಿ. ನನಗೆ ಅವನು ಕುಳಿತಿದ್ದಾನಲ್ಲ ಆ ಮುದುಕ ಅವನು ಭಿಕ್ಷುಕ, ನಾನು ಆ ದೇವರಿಗೆ ಭಿಕ್ಷುಕಿ.ಇದು ನನ್ನ ವಿಚಾರಧಾರೆ. ಸಿಂಪಲ್. ಚಿನ್ನು...."

ಮರದ ಮೇಲಿರುವ ಎಲೆ ಆ ಸೃಷ್ಟಿಕರ್ತನ ಅಪ್ಪಣೆಯೊಂದಿಗೆ ಅಲ್ಪ ಸ್ವಲ್ಪ ಭಯದಿಂದ ಓಲಾಡಿ ಸುಮ್ಮನಾಯಿತು. ಇರುವೆಗಳ ಸಾಲು ಮುಂಬರುವ ಮಾಸಕ್ಕೆ ಅಂತ ಕಾಳು-ಕಡಿ ಕೂಡಿಡುವಲ್ಲಿ ನಿರತವಾಗಿವೆ. ಗಾಡಿಗಳು ಜೀವನವನ್ನು 'ಬೇಗ ಬೇಗ ಕೆಲಸವಾಗಬೇಕು, ತಲುಪಬೇಕು' ಅನ್ನುವವರಿಗೆ ಸಾಧನಗಳಾಗಿ ಓಡುತ್ತಿವೆ. ಆ ಲಾರಿಗಾಡಿ ಚಕ್ರಕ್ಕೆ ಒಂದು ಚಿಕ್ಕ ತೊಡಕಾಗಿ ಶ್ರೀನಿಯ ರುಂಡ ಬಂದಿದೆ. ಅಷ್ಟೆ.

ಯಾವುದರ ಮಾಲೀಕ ಯಾರು ಅನ್ನೋದು ಗೊತ್ತಿರೋನಿಗೆ, ಎಲ್ಲದರ ಮಾಲೀಕ ಯಾರು ಅನ್ನೋದು ತಿಳಿಯಳಿಲ್ಲ.
ನಾನಂತೂ ಮೂರ್ಖನಲ್ಲ !!. ಯಾರದು ಹೇಳಿದ್ದು?? ಬರೆಯುವವನೋ ಅಥವಾ ಓದುವವನೋ

"ಶ್ರೀನೀ............" ಚೀತ್ಕಾರ.

ನೀಲಗ್ರಿವ ಹೇಳಿದ್ದು
ಶ್ರೀನಿಧಿಯೆಂಬ ಹೆಸರನ್ನು ಇಟ್ಟು
ನತ-ಭಾಗ್ಯರ ಚಿತ್ರವ ಸೆರೆಹಿಡಿದಿರಲ್ಲ! :)
ಹೆಸರಲ್ಲಿ ಏನುಂಟು ಚಿತ್ರವನು ನೋಡಿ
ಅನ್ನುವಿರಿ ನೀವೆಂದು ನನಗೆ ಗೊತ್ತು

ಶ್ರೀಕಲಾ ಹೇಳಿದ್ದು
ಆ ವೃದ್ಧ...

ಎದುರಿಗೆ ಕುಳಿತ ವೃದ್ಧನನ್ನು ನೋಡುವಾಗ ಆ ವೃದ್ಧನದೇ
ನೆನಪಾಗುತ್ತದೆ. ಆತನೂ ಹೀಗೆ ಕುಳಿತಿರುತ್ತಿದ್ದ. ಕುಕ್ಕರುಗಾಲಿನಲ್ಲಿ,
ತಲೆಗೊಂದು ಟವೆಲ್ ಸುತ್ತಿಕೊಂಡು, ಮಾಸಲು ಬಟ್ಟೆ ತೊಟ್ಟು..
ಬದುಕ ನೋಡುತ್ತಿದ್ದುದು ಆತ ಇಂತಹುದ್ದೇ ಮಬ್ಬು
ಕನ್ನಡಕದೊಳಗಿಂದ. ಕೈಗಳಲ್ಲಿ ಇದೇ ಹಿಂಜರಿಕೆ. ಮುಖದಲ್ಲಿ
ಇಂತಹುದ್ದೇ ನಿರ್ಭಾವ.
ದಿನವೂ ಆತನನ್ನು ನೋಡುತ್ತಿದ್ದೆ. ಇದೇ ಭಂಗಿ,ಇದೇ ಭಾವ.
ಆದರೆ ಒಂದು ವ್ಯತ್ಯಾಸ.
ಈತನಿಗೆ ಒಂದು ಮೆಟ್ಟಿಲು ಸವೆದಾಗ ಇನ್ನೊಂದು ಮೆಟ್ಟಿಲು. ಗುಡಿಸಲ
ಕನಸ ಹಂಚಿಕೊಳ್ಳಲು ಜತೆಗಾರರು.
ಆತ ಕುಳಿತಿರುತ್ತಿದ್ದುದು ವಸಂತದಲ್ಲಿ ಕೆಂಪು ಹೂ ಬಿಡುವ ಒಂಟಿ
ಮರದ ಕೆಳಗೆ ಒಂಟಿಯಾಗಿ!

ಶ್ಯಾಮಾ ಅವರ ಅನಿಸಿಕೆ
"ಅಮ್ಮ ತಾಯಿ ಭಿಕ್ಷೆ ಹಾಕಿ"
ಯಾರದ್ದೋ ಧ್ವನಿ ಮನೆ ಬಾಗಿಲ ಹತ್ತಿರ ಕೇಳುತ್ತಲೇ ಅಮ್ಮ ಹೆಳುತ್ತಿದ್ದಳು "ನೋಡು ಯಾರೋ ಭಿಕ್ಷುಕರು, ಭಿಕ್ಷೆ ಹಾಕಿ ಕಳ್ಸು".

ಕಿಟಕಿಯಿಂದಲೇ ಹೊರಗೆ ನೋಡಿ ಹೆಳುತ್ತಿದ್ದೆ "ಅಮ್ಮ ಅವಳೇ ನಮ್ಮ ಫ್ರೆಂಡ್ ಭಿಕ್ಷುಕಿ ಅಜ್ಜಿ"

ಇದೇನಿದು ಭಿಕ್ಷುಕರೂ ಫ್ರೆಂಡ್ಸಾ ಅಂತ ಅನ್ನಿಸಬಹುದು. ಹೌದು. ಆ ಭಿಕ್ಷುಕಿ ಅಜ್ಜಿ ವಾರಕ್ಕೊಂದು ದಿನ ಖಾಯಂ ಆಗಿ ಭಿಕ್ಷೆ ಬೇಡಲು ಬರುತ್ತಿದ್ದಳು ಮನೆ ಬಾಗಿಲಿಗೆ. ತುಂಬಾ ಒಳ್ಳೇ ಅಜ್ಜಿ. ಜಾಸ್ತಿ ಕಾಟ ಕೊಡುತ್ತಿರಲಿಲ್ಲ. ಕೊಟ್ಟಷ್ಟು ತೆಗೆದುಕೊಂಡು ಸುಮ್ಮನೇ ಹೋಗುತ್ತಿದ್ದಳು. ಒಮ್ಮೊಮ್ಮೆ "ಕುಡಿಯಲು ನೀರು ಕೊಡೆ ಮಗಳೆ" ಅಂತಲೂ ಕೇಳುತ್ತಿದ್ದಳು. ಅಂಥ ಸಮಯದಲ್ಲಿ ಅವಳು ಮನೆಯ ಕಟ್ಟೆಯ ಮೇಲೆ ಕೂತರೆ ಏನಾದರೂ ತನ್ನ ಬಗ್ಗೆ ಹೇಳಿಕೊಳ್ಳುತ್ತಿದ್ದಳು.
"ಇಷ್ಟು ವಯಸ್ಸಾಗಿದೆಯಲ್ಲ ಯಾಕೆ ಭಿಕ್ಷೆ ಬೇಡುತ್ತಿಯ. ನಿಂಗೆ ಮಕ್ಕಾಳಿಲ್ವಾ ನೋಡಿಕೊಳ್ಳೋಕೆ" ಅಂತ ಕೆಳಿದ್ದಕ್ಕೆ ಅವಳ ಮಗ ಸೊಸೆ ಸತ್ತುಹೋಗಿರುವುದಾಗಿಯೂ, ಅವರ ಮಗುವನ್ನು ಇವಳೇ ಸಾಕುತ್ತಿರುವುದಾಗಿಯೂ ದುಃಖ ತೋಡಿಕೊಂಡಿದ್ದಳು.

ಮಳೆಗಾಲದಲ್ಲಿ ಆಕೆ ಭಿಕ್ಷೆ ಬೇಡಲು ಬರುತ್ತಿರಲಿಲ್ಲ. ಆಗೆಲ್ಲ ಯಾವಾಗಲಾದರೂ ದೇವಸ್ಥಾನಕ್ಕೆ ಹೋದಾಗ ಇದೆ ಈ ಚಿತ್ರದಲ್ಲಿರುವಂತೆ ಮೆಟ್ಟಿಲ ಮೇಲೆ ಕೂತಿದ್ದವಳು ನಮ್ಮನ್ನು ನೋಡಿ ಗುರುತಿಟ್ಟು ಮಾತಾಡಿಸುತ್ತಿದ್ದಳು. ಅವಳನ್ನು ನೋಡಿದಾಗಲೆಲ್ಲ ಇಂಥವರ ಕಷ್ಟಕ್ಕೆ ಕೊನೆಯಿಲ್ಲವೆ? ಬಾಳ ಮುಸ್ಸಂಜೆಯಲ್ಲಿ ಇವರ ಕಣ್ಣಿಂದ ಜಾರುವ ಹನಿಗಳನ್ನು ಒರೆಸುವ ಕೈಗಳಿಲ್ಲವೇ? ಅನ್ನಿಸುತ್ತಿತ್ತು. ಈಗ ವಾರಕ್ಕೊಮ್ಮೆ ಬರುವ ಆ ಅಜ್ಜಿ ನಮ್ಮನೆ ಬಾಗಿಲಿಗೆ ಬರುವುದೇ ಇಲ್ಲ. ದೇವಸ್ಥಾನದ ಮೆಟ್ಟಿಲ ಬಳಿಯೂ ಕಾಣುವುದಿಲ್ಲ. ಆಕೆ ಇಲ್ಲದಿರಬಹುದು ಈ ಲೋಕದಲ್ಲಿ, ಆದರೆ ಅಂಥ ಇನ್ನೆಷ್ಟೋ ಜನ ಇನ್ನೂ ಆ ಮೆಟ್ಟಿಲ ಮೇಲೆ ದಿನಾ ಕಾಣುತ್ತಾರೆ. ಆ ಮೆಟ್ಟಿಲುಗಳ ಮೇಲೆ ಅವಳ ಹೆಜ್ಜೆ ಗುರುತುಗಳ ಮೇಲೆ ಇನ್ನೆಷ್ಟೋ ಅಂಥದೆ ಹೆಜ್ಜೆ ಗುರುತುಗಳು. ಬರೀ ನೋಟದಲ್ಲಿ ಮರುಕ ಸೂಸಿ ಮುಂದೆ ಹೋಗುವ ನಮ್ಮಂಥ ಅದೆಷ್ಟೋ ಕಣ್ಣುಗಳು.
ಸತೀಶ ಹೇಳಿದ್ದು

ಕೂಡ್ ಹಾಕಿರೋ ದೇವ್ರು
ಇಪ್ಪತ್ತೊಂದು ಮೆಟ್ಲನ್ನ್ ದಾಟಿ ಕೂಡ್ ಹಾಕಿರೋ ದೇವ್ರನ್ನ
ಕದ್ಕೊಂಡ್ ಯಾರೂ ಹೋಗ್ದೇ ಇರ್ಲಿ ಎಂದು ಕಾಯ್ತಾ ಇರೋ ನಮ್ಮನ್ನ
ಭಿಕ್ಷುಕರೆಂದು ಕರ್‌ದವ್ರ್ ಯಾರು, ಬೇಡ್ದವರೆಂದು ಜರೆದೋರ್ ಯಾರು?

ನಮ್ ದೇಶ್‌ದೋರೇ ನಮ್ ನಮ್ ಚಿತ್ರಾ ತೇಗೀತಾ ಹೋದ್ರೆ ಹೇಗೆ
ದೀನತೆಯನ್ನು ಎಂದೂ ಯಾರೋ ನೋಡ್ಲೇ ಇಲ್ಲಾ ಅನ್ನೋ ಹಾಗೆ
ಬಿಸಿಲಿಗೆ ನೆರಳಾ ಆಸರೆ ಎಲ್ಲಿ, ಹೊಟ್ಟೆಯ ತುಂಬಿಸೋ ಒಸಗೆ ಎಲ್ಲಿ?

ದೇವ್ರು ದರ್ಶನಕ್ ಬರೋ ಜನ ಹೊತ್ತು ತರೋ ಅಂತಃಕರಣ
ನಮ್ಮನ್ನಿಲ್ಲಿ ದಿನಂಪ್ರತಿ ಕೂರೋ ಹಾಗ್ ಮಾಡಿರೋ ಕಾರಣ
ಇನ್ನುಳಿದ ಪ್ರಶ್ನೆಗಳಿಗೆ ಉತ್ತರವೇನು, ನಮ್ಮಯ ಚಿತ್ರ ಮೆಚ್ಚುಗೆಯೇನು?

ಸೋಂಬೇರಿಗಳೆಂದು ಜರೀ ಬೇಡಿ
ಹಾಳ್ ಹೊಟ್ಟೇ ಸಂಕ್ಟಾ ಮರೀಬೇಡಿ
ನಮ್ ಮಕ್ಳೆಲ್ಲಾ ಕೈ ಕೊಟ್ಟ್ ಹೋದ್ವು ಯಾವ್ದೋ ರಾಗಾ ಹಾಡಿ
ಇಂದಿನ ಸ್ಥಿತಿಗೆ ನೀವೂ ಕಾರ್ಣಾ ನಮ್ಮಯ ದುಸ್ಥಿತಿ ನೋಡಿ.

ಯೋಚಿಸ್‌ಬೋದೂ ನೀವು ಕೆಲವು ಖಾಲಿ ಮೆಟ್ಲೂ ಯಾಕೆ
ಮೇಲಕ್ ಹತ್ತಿ ಹೋದವ್ರು ಇಲ್ಲಿಗೆ ಬರ್‌ಬಹುದು ಮುಂದೆ ಜೋಕೆ!

ಸನತ್ ಕೂಡ ಸಣ್ಣ ಕಥೆಯ ಮೂಲಕ ಹೇಳಿದ್ದು


"ಅಯ್ಯಾ...ಅಮ್ಮಾ....."

"ಅಯ್ಯಾ...ಅಮ್ಮಾ.....ಧರ್ಮಾ ಮಾಡಿ"
" ಏಯ್ ನಿಂಗಣ್ಣಾ, ಯಾರೋ ಅಲ್ಲಿ ಫೋಟೋ ಓಡಿತಾವ್ರೆ"
"ಅಯ್ಯಾ ಸುಮ್ಕಿರು ,ಈ ಫೋಟೋದವರೆಲ್ಲಾ ಅಂಗೇಯಾ,ಸುಮ್ಕೆ ನಿತ್ತು ನಮ್ಮ ಪೊಟೋ ಒಡ್ದು ಮಜಾ ನೋಡ್ತಾರೆ"
"ಒಡ್ಕೊಂಡೂಗ್ಲಿ ಬುಡಣ್ಣ"
"ಒಡ್ಕೊಂಡೂಗ್ಲಿ ಅಂತೆ ಒಡ್ಕೊಂಡೂಗ್ಲಿ..ಅದನ್ನ ಯಾರ್ಗಾರು ಮಾರಿ ಯಾವುದಾರು ಪೇಪರ್ ಗೆ ಮಾರ್ಕಂಡು ಕಾಸ್ ಮಾಡ್ಕೊತಾರೆ"
"ಕಾಸು ಮಾಡ್ಕೊತಾರೆ ,ಅವರ ನಸೀಬು"
"ನಸೀಬಂತೆ ನಸೀಬು..ನಮ್ಮ ಪೊಟೋ ತಗಂಡಿ ಕಾಸ ಮಾಡೋದು ತಪ್ಪಲ್ಲಾ ಕಣಣ್ಣಾ.. ನಮಗೆ ಒಂದು ಪೈಸೆನೂ ಹಾಕದೇ ಓಗ್ತಾರೆ, ಮನುಸ್ಸತ್ವ ಇಲ್ಲದ ಜನಾ"
"ಈ ಕಲಿಕಾಲದಾಗೆ ಎಲ್ಲಾರೂ ಒಳ್ಳೇರು ಇರೋಕಾಯಿತದ ಹೇಳು"
"ಹುಂ ಹೂಂ ನೀನು ಹೇಳೂದು ಸರಿನೇ ಅನ್ನು ಅದ್ರೂ...ಈ ಪ್ಯಾಟೆ ಜನ ಯಾಕೋ ಸರಿ ಯಿಲ್ಲ"
"ಸರಿ ಇರ್ಲಿ ಇಲ್ಲದೇ ಇರ್ಲಿ ..ನಿಂಗ್ಯಾಕೆ ಯಾರೋ ಪುನ್ಯಾತ್ಮರು ಹಾಕೋ ಧರ್ಮದಲ್ಲಿ ನಮ್ಮ ಜೀವನ ಸಾಗೋತ್ತೆ ಅದೇ ಸಾಕು"
"ಎನೋಪ್ಪಾ ಭಗ್ವಂತ ಇಟ್ಟಂಗೆ ನಮ್ಮದೇನೈತೆ"
"ಅಲ್ಲಾ ಕಣಣ್ಣ್ಸಾ..ಈ ಹಳ್ಳೀ ಹೈಕಳು ಸರಿ ಇದಾವೆ ಅಂತ ನೀನು ಯೋಳೋದಾ..ಈಗ ನೋಡು ನಿನ್ನ ಮಗ ನಿನ್ನ ಮನೆಯಿಂದ ಹೊರಗಡೆ ಹಾಕಿ ಎಲ್ಲಾ ಕಾಸು ಲಾಟ್ರಿಗೆ ಹಾಕಿಲ್ವಾ"
"ಬೇ***,ಅದು ಯಾವ ಕಾಲದಲ್ಲಿ ಹುಟ್ಟಿದ್ನೋ ಶನಿ..ನಮ್ಮ ವಂಸನೇ ಹಾಳ್ಮಾಡೋಕೆ..ಥಥ್"
"ಈ ಮಗನೆಲ್ಲಾ ಈ ತರ ಬೈಬಾರ್ದು ಕಣಣ್ಣಾ"
"ನೀ ಸುಂಕಿರಮ್ಮಾ..ನಿಂಗೇನು ಗೊತ್ತಾಯಿತದೇ ನನ್ನ ಕಷ್ಟ"
"ಏ..ನಿಂಗೊಬ್ಬಂಗೇಯಾ ಕಸ್ಟ ಇರೋದು ನಾವೆಲ್ಲಾ ಇಲ್ಲಿ ಮಾರಾಜರ್ ತರ ಅದೀವಿ.."
"ಹುಂ ಇವತ್ತುಗು ನಾನು ಹಳ್ಳಿಲಿದ್ರೆ ಮಾರಾಜಂತರನೇ ಬದೀಕಂಡಿರ್ ತಿದ್ದೇ"
"ಆಯ್ತಾ..ನಿಮ್ಮುದೆಲ್ಲಾ..ಅಯ್ಯನೋರು ಮೆಟ್ಟಿಳಿದು ಬರ್ತಾವ್ರೆ ಪ್ರಸಾದನೋ ಎನಾದ್ರು ಹಾಕಿದ್ರೆ ಸಾಕು ಒಟ್ಟೆ ಚುರ್ರ್ ಅಂತದೇ"
"ಅಯ್ಯಾ...ಅಮ್ಮಾ....."

Monday, 9 July, 2007

ಚಿತ್ರ ೯


ಕಿಶೋರ್ ಕೈ ಚೀಲದಿಂದ ಬಂದಿದೆ ಈ ಚಿತ್ರ...
-----------------------------------------------------------------------
ಮುದ್ದುಕರಡಿಗಳ ಮೇಲಿನ ವೈವಿಧ್ಯಮಯ ನೋಟಗಳು...

ಪಾರಿಜಾತರ ನೋಟದಲ್ಲಿ ತುಂಟು ಕರಡಿಚಿಣ್ಣರು ಅಮ್ಮನಿಂದ ತಪ್ಪಿಸಿಕೊಳ್ಳುವ ಹುನ್ನಾರ ಹಾಕಿದ್ದಾರೆ...

ಕಿಟಕಿಯ ಸರಳುಗಳಾಚೆಯ ಜಗವದು

ಎಷ್ಟು ಸುಂದರವು, ನೋಡಿದೆಯಾ?

ಚಿಗುರಿದ ಮರಗಳು, ಅರಳಿದ ಹೂಗಳು

ಕರೆದಿವೆ ನಮ್ಮನು, ಕೇಳಿದೆಯಾ?


ಮಾವಿನ ಮರದಲಿ ಜೇನಿನ ಗೂಡಿದೆ

ಜೇನನು ಕೀಳಲು ಹೋಗೋಣವೇ?

ಹಲಸಿನ ಹಣ್‍ಗಳು ಕಳಿತಿವೆ ಮರದಲಿ

ಹಣ್ಣನು ಬಿಡಿಸುತ ಮೆಲ್ಲೋಣವೇ?


ನಮ್ಮ ಚೇಷ್ಟೆಗಳು ಮೀರಿದವೇ ಮಿತಿ?

ಚಿಣ್ಣರ ಮೇಲೆಯೆ ಹಠ ಸರಿಯಾ?

ಕೂಡಿ ಹಾಕಿಹಳು ಅಮ್ಮನು ನಮ್ಮನು

ಏನ ಮಾಡುವುದು, ಯೋಚಿಸೆಯಾ?


ಸರಳುಗಳ ಪರಿಧಿ ದಾಟಿ ಹಾರುವ ಹಂಬಲವನ್ನು ದೀಪಕ್ ಚುಟುಕಿಸಿದ್ದಾರೆ...

ಹಕ್ಕಿಯಾಗಿ ನಲೀಬೇಕು

ಮುಂದಿನ ಮರದಿ

ಬೇಡವಾಗಿದೆ

ಈ ಸರಳುಗಳ ಪರಿಧಿ

ಶ್ರೀತ್ರೀಯ ಸಣ್ಣ ದುನಿಯ... :)

ನಾನು ಮತ್ತು ನನ್ನ ಗೆಳೆಯ
ಬಲು ಸಣ್ಣದಿದೆ ನಮ್ಮ ದುನಿಯ!

ಅರಿವಿಗೆ ನಿಲುಕುವ ಎಲ್ಲವೂ ನೋಟಕನದೇ ಎನ್ನುತ್ತಾರೆ ಸುಪ್ತದೀಪ್ತಿ ...

ನೋಟ ಮತ್ತು ನೋಟಕ
----------------------
ಓಡುವ ಬಂಡಿಯ ಕಿಟಕಿಯ ಒಳಗೆ
ನೀನು, ನಾನು;
ನೋಡುವ ನೋಟಕೆ ಎಲ್ಲಿದೆ ಪರಿಧಿ
ಭೂಮಿ, ಬಾನು;
ಅರಿವಿಗೆ ನಿಲುಕುವ ಎಲ್ಲವೂ ನಮದೆ
ಊರು, ಕಾನು;
ಓಡುವ ಬಂಡಿಯ ಕಿಟಕಿಯ ಹೊರಗೆ
ಆನು, ತಾನು.

ಸುಶ್ರುತ ದೊಡ್ಡೇರಿ ನೋಟಕ್ಕೆ ಚೌಕಟ್ಟು ಬೇಡವೆನ್ನುತ್ತಾರೆ...

ಶ್..! ಸದ್ದು ಮಾಡಬೇಡಿ..
ಪುಟ್ಟ ಗೊಂಬೆಗಳು ಜಗವ ನೋಡುತಿವೆ..

ಹೇಳಿಕೊಡದಿರಿ:
ಅಗೋ ಅದು ಮರ,
ಅಲ್ಲಿ ಹಾರುತಿರುವುದು ಹಕ್ಕಿ,
ಬಗ್ಗಿ ಮೇಯುತಿರುವುದು ಕುರಿ,
ಜೋರು ನಡೆಯುತಿರುವವನು ಮನುಷ್ಯ
...ಬೇಡ, ಹೇಳಿಕೊಡದಿರಿ.

ಅವಕ್ಕೆ ಕಂಡಂತೆ ನೋಡಲಿ ಅವು;
ಯಾರಿಗೆ ಗೊತ್ತು, ಅಲ್ಲಿ ಕಾಣುತಿರುವುದು
ಮರವಷ್ಟೇ ಅಲ್ಲದೇ ಎಲೆಯ ಮೇಲಿನ ಇಬ್ಬನಿ ಹನಿಯನ್ನು
ಕುಡಿಯುತ್ತಿರುವ ಅಳಿಲ ದಾಹವಾಗಿರಬಹುದು;
ಹಕ್ಕಿಯಷ್ಟೇ ಆಗಿರದೆ ಅದರ ಕಣ್ಣಲ್ಲಿನ
ಕಳೆದುಹೋದ ಸಂಗಾತಿಯ ಹುಡುಕಾಟವಾಗಿರಬಹುದು;
ಕುರಿಯಷ್ಟೇ ಆಗಿರದೆ ಅದರ ಮೈಮೇಲೆ ಕುಳಿತು
ಉಣುಗು ಹೆಕ್ಕುತ್ತಿರುವ ಕಾಗೆಯ ಹಸಿವಾಗಿರಬಹುದು;
ಮನುಷ್ಯನಷ್ಟೇ ಆಗಿರದೆ ಈ ಜಗವನ್ನೆಲ್ಲ ಕೊಳ್ಳೆ ಹೊಡೆಯಬೇಕೆಂಬ
ಅವನ ಜೋರು ನಡಿಗೆಯಲ್ಲಿನ ಆತುರವಾಗಿರಬಹುದು;
ಏನು ಬೇಕಾದರೂ ಕಂಡೀತು ಗೊಂಬೆಗಳ ಕಣ್ಣಿಗೆ..

ಇದು ಇದೇ, ಇದು ಇಷ್ಟೇ, ಎಂದು
ಚೌಕಟ್ಟು ಹಾಕಬೇಡಿ.
ಅದು ಕಿಟಕಿಯಾಚೆಗಿನ ಲೋಕ:
ಏನು ಬೇಕಾದರೂ ಇದ್ದೀತು ಅಲ್ಲಿ..

ಶ್ಯಾಮಾ ಸೃಷ್ಟಿಸಿದ ಪುಟ್ಟಿ, ಮುನಿಸಿಕೊಂಡ ಮುದ್ದು ಕರಡಿಗಳನ್ನು ಹೀಗೆ ಒಲಿಸಿಕೊಳ್ಳುತ್ತಾಳೆ..

ಪುಟ್ಟಿಯ ಹಾಡು
-------------
ಮುನಿಸೇಕೆ ನನ್ನ ಮೇಲೆ
ಓ ಚಿನ್ನಾರಿ ಕಿನ್ನರಿ,
ಕಿಟಕಿಯಾಚೆ ನೋಡಿದ್ದು ಸಾಕಿನ್ನು
ತಿರುಗಿ ನನ್ನೆಡೆಗೆ ನೋಡಿರಿಲ್ಲಿ
ನಾ ನಿಮ್ಮ ಪುಟ್ಟಿ ಕರೆಯುತ್ತಿದ್ದೇನೆ ನಿಮ್ಮನ್ನು,
ಆ ಸರಳುಗಳ ಬಂಧನವೇಕ ನಿಮಗೆ?
ಸರಳುಗಳ ಆಚೆ ಚೆನ್ನಾದ ಲೋಕವಿದೆ,
ಬನ್ನಿ ಮುನಿಸು ಬಿಟ್ಟು ಅಲ್ಲಿ ಆಡೋಣ ನಾವು
ಅಗೋ ಅಲ್ಲಿ ಓಡೋಣ ಹಾರೋಣ ಕುಣಿಯೋಣ,
ಅಮ್ಮ ಕೊಟ್ಟ ಮಿಠಾಯಿ
ಇಗೋ ಇಲ್ಲಿದೆ ನನ್ನ ಕೈಯಲ್ಲಿ,
ಅದನು ಸವಿಯುತ್ತಾ ನಲಿಯೋಣ ನಾವು

ವಿಕ್ರಮ್ ಹತ್ವಾರ್ ಕಿಟಕಿಯಾಚೆಗೂ ಕಣ್ಣಿದೆ, ಸ್ವಲ್ಪ ಹೊರಹೋಗಿ ಅಡ್ಡಾಡಿ - ಎನ್ನುತ್ತಾರೆ...

ಹೊಸಿಲು ಮೀರಬೇಕಿಲ್ಲ
ಕಿಟಕಿಯಾಚೆಗೂ ಕಣ್ಣಿದೆ,
ಮನೆಯೊಳಗೆ ಕತ್ತಲೆಯೋ ಬೆಳಕೋ ತಿಳಿದಿಲ್ಲ
ಹೊರಗೊಂದಿಷ್ಟು ಮಜವಿದೆ.

ಒಳಗೇ ಇದ್ದೇವೆ,
ಬೆನ್ನು ಹಾಕಿದ್ದಲ್ಲ,
ಮುಖ ತೋರುವುದಿಲ್ಲ,
ಸ್ವಲ್ಪ ಹೊರ ಹೋಗಿ
ಅಡ್ಡಾಡಿಕೊಂಡು ಬನ್ನಿ.

ಸತೀಶ್ ಬಟ್ಟೆಯ ಮುದ್ದು ಕರಡಿಗಳಿಗೆ ಜೀವ ತುಂಬಿ, ಕರಡಿಯ ಪಾಡಿಗೊಂದು ಶಬ್ದಚಿತ್ರ ಬರೆಯುತ್ತಾರೆ...

ಯಾರೂ ಕೊಳ್ದೇ ಹಾಗೆ ಇರ್ಲಿ ಜೊತೇಲಿರೋ ಬಂಟ
---------------------------------------

ನಾಡಿನೊಳಗೆ ತರುವಾ ಮುನ್ನ ಕಾಡ್ನಲ್ಲಿದ್ವಿ ನಂಬಿ
ನಮ್ಮಲ್ಲಿದ್ದ ನಿಜವನ್ ತೆಗೆದು ಹೊಟ್ಟೇಲ್ ಹತ್ತಿ ತುಂಬಿ
ಬೆಳಕೇ ಬೀಳ್ದೇ ಇದ್ದೋರನ್ನ ಹೊಳೆಯೋ ಹಾಗೆ ಮಾಡಿ
ಕಣ್ಣಲ್ಲಿ ಜೀವಾ ಇರದೇ ಇದ್ರೂ ನಮ್ದೇ ಒಂದು ಮೋಡಿ.

ಬೆನ್ನ ತೋರ್ಸಿ ಕುಳಿತಿದ್ದೇಕೆ ಅಂತ ಕೇಳ್ತೀರೆನೋ
ಬೆಳಕನ್ ಕಾದು ಕುಳಿತಾ ನಮ್ಮನ್ ಕೊಳ್ತೀರೇನೋ
ದೊಡ್ಡ ದೊಡ್ಡ ಸರಳಿನ್ ನಡುವೆ ನಾವೇ ನುಸುಳೋದಿಲ್ಲ
ನಡೆಸೋರ್ ಯಾರೂ ಇಲ್ದೇ ನಾವೇ ನಡೆಯೋದಿಲ್ಲ.

ಹೊರಗಡೆ ಇರೋದ್ ಕಾಡೇ ಅಂತ ಹೇಳೋದ್ ಕೇಳಿದ್ದೀವಿ
ಹೊರಗಿನ್ ಜನ ನಮ್ಮನ್ ದುರುಗುಟ್ಟಿ ನೋಡೋದ್ ನೋಡಿದ್ದೀವಿ
ಇಷ್ಟೊಂದು ಬೆಳಕು ಬಿದ್ದಿದ್ರೂನೂ ಅವ್ರ ಕಣ್ಣಣ್ಣೆಲ್ಲಾ ಕತ್ಲೆ
ಮೈ ಮೇಲ್ ಬಟ್ಟೇ ಹಾಕ್ಕೋಂಡಿದ್ರೂ ಮನ್ಸಲ್ಲೆಲ್ಲಾ ಬತ್ಲೆ.

ಬೆನ್ನಿಗ್ ಆಸ್ರೆ ಇಲ್ದಂಗ್ ಆಗಿ ಬಗ್ ಹೋಗ್ತಿದೆ ಸೊಂಟ
ಯಾರೂ ಕೊಳ್ದೇ ಹಾಗೆ ಇರ್ಲಿ ಜೊತೇಲಿರೋ ಬಂಟ.

ಪುಟ್ಟ ಪುಟ್ಟ ಅಳತೆಗಳೇ ಕಣಜ ತುಂಬಿಸುತ್ತವೆ ಅನ್ನುತ್ತಾರೆ ಸಿಂಧು ...

ಸೇರು-ಪಾವು...
-------------
ಸೇರು ಪಾವು
ಕೂತಿದೀವಿ ನಾವು ಕಿಟಕಿಯಲ್ಲಿ
ನಮ್ಮ ಪುಟ್ಟ ನೋಟದಲ್ಲಿ
ಕಂಡಿದ್ದನ್ನು ಅಳೆಯುತ್ತಾ
ಕಾಣದ್ದು ನಿಮ್ಮ ಕಣ್ಣಿಗೆ ಬಿಟ್ಟ ಚಿತ್ರ
ಪುಟ್ಟ ಪುಟ್ಟ ಅಳತೆ
ಅಳೆದು ತುಂಬಿದಾಗಲೆ ಕಣಜ.. !

ಪುಟ್ಟದೊಂದು ಹಸಿರ ಮೊಳಕೆ,
ಚಿಟ್ಟದೊಂದು ಹಕ್ಕಿ ಉಲಿ,
ಸುತ್ತ ಚದುರ ಜಾಗದಲ್ಲಿ ಪ್ಲಾಸ್ಟಿಕ್ ಎಸೆಯದೆ
ಹರಿವ ಮಳೆಯ ಹನಿಗಳನ್ನ ಇಂಗಲು ಬಿಟ್ಟರೆ
ಪುಟ್ಟ ಪುಟ್ಟ ಅಳತೆಯ
ದೊಡ್ಡ ಕಣಜ ತುಂಬಿ ತುಳುಕದೆ!

ಚಿತ್ರಕವನಕ್ಕೊಂದು ಪುಟ್ಟ ಮೈಲಿಗಲ್ಲು...

MD ಹಿಂದಿಯಲ್ಲಿ ಕವನ ಬರೆದು ಚಿತ್ರಕವನಕ್ಕೊಂದು ಪುಟ್ಟ ಮೈಲಿಗಲ್ಲು ಹಾಕಿದ್ದಾರೆ, ತಮ್ಮ ಕವನದಲ್ಲಿ ಅವರು ದಿವ್ಯವಾಗಿ ಮೈಮರೆಸಿದ ಪ್ರೀತಿ ಏನೂ ಅಲ್ಲದೆ ಹಗಲುಗನಸಾಗಿ ಭೂತಕಾಲ ಸೇರಿದ್ದಕ್ಕೆ ನುಡಿಚಿತ್ರ ಕಟ್ಟಿದ್ದಾರೆ...

बादलों पे उडते आसमान
उससे आगे अपने सितारों का जहां
न रात थी न गहन था वहां
बस हम ही हम थे किसी का क्या वहां

दिलें, अरमान, ख्वाब, प्यार और साथ

एक दूजे के हम थे
सोचो क्या कम थे
कहने को हम थे, जब सोचा तो लगा
न मैं था ना तुम थे

एक धडकन, एक सांस, एक ख्वाब और एक मौत
---------------------------------------------
ದೀಪಕ್, ಮತ್ತು MD - ಇವರ್ಯಾಕೋ ತಮ್ಮ ಗುರುತು ಹೇಳಿಕೊಳ್ಳಲು ನಾಚಿಕೊಳ್ಳುತ್ತಿದ್ದಾರೆ, ಇದಕ್ಕೆ ಏನು ಹೇಳಲಿ? ಹೊಸ ನೋಟಗಳನ್ನು ನೀಡಿದ ಕವಿ/ಕವಯಿತ್ರಿಯರ ಪರಿಚಯ ಚಿತ್ರಕವನದ ಮೂಲಕ ಆದರೆ ಎಲ್ಲರಿಗೂ ಸಂತೋಷ...

Sunday, 1 July, 2007

ಚಿತ್ರ - ೮

ಈ ವಾರ ಮತ್ತೆ ಜಗಲಿ ಭಾಗವತರ ಸಂಚಿಯಿಂದ ಬಂದ ಚಿತ್ರ. ಕವನವಲ್ಲದೆ ಪುಟ್ಟ ಬರಹಗಳನ್ನೂ ಬರೀಬಹುದು.

=======================================
ಈ ಪುಟಾಣಿಗಳು ಪ್ರೇರೇಪಿಸಿದ ಭಾವದೋಟ ಇಲ್ಲಿದೆ...
=======================================

ಬಾಲ್ಯದ ಸ್ವಚ್ಛಂದವನ್ನು ನಿರಾತಂಕವಾಗಿ ಅನುಭವಿಸಲು ಹೇಳುತ್ತಾರೆ ಸುಪ್ತದೀಪ್ತಿ...

ಆನಂದ, ಸ್ವಚ್ಛಂದ ಈಗಲೇ ಅನುಭವಿಸು ಕಂದ
ಮುಂದೆ ಇದ್ದದ್ದೇ ಕಟ್ಟುಪಾಡುಗಳ ಬಂಧ
ಅದು ಸರಿ, ಇದು ತಪ್ಪುಗಳ ಹೊರೆ
ತೊಳೆಯದಿರಲಿ ನಿನ್ನ ಕ್ರಿಯಾಶೀಲತೆಯ ತೊರೆ

ಪ್ರಭೆ ಮುಗ್ಧ ಮಕ್ಕಳಿಗೆ ಶುಭ ಹಾರೈಸುತ್ತಾರೆ...

ಹರಿವ ನೀರ ತೊರೆಯಲಾಟ
ಆಡುತಿಹರು ಚಿಣ್ಣರು,
ಕಾಣದಿವರ ಮೊಗದಿ ಕಪಟ
ಮಕ್ಕಳೆಂದೂ ಮುಗ್ಧರು.

ಹೊಟ್ಟೆ ಬಟ್ಟೆ ಚಿಂತೆಯಿಲ್ಲ ಇವಕೆ
ಆಟವೊಂದೆ ಜೀವನ,
ಕೆಸರ ನೀರ ಮದ್ಯದಲ್ಲು
ಕಾಣ್ವರಿವರು ನಲಿವನ.

ಮಂದಹಾಸ ಹೀಗೆ ಇರಲಿ
ಇವರ ಮುಖದಲೆಂದಿಗೂ,
ಹರಿವ ನೀರಿನಂತೆ ಇರಲಿ
ಇವರ ಬದುಕು ಎಂದಿಗೂ.

ಮಕ್ಕಳ ತುಂಟತನ, ತರ್ಕರಹಿತ ವಿಚಾರಲಹರಿಗಳ ಮೇಲೆ ವಿನೂತನ ಸಂಭಾಷಣೆ ರೂಪದ ಪುಟ್ಟ ಕಥೆ ಹೆಣೆದಿದ್ದಾರೆ ಸುಶ್ರುತ...

ಚಿತ್ರಕ್ಕೂ ಮುಂಚೆ:

"ಏ, ನೀರಾಟ ಆಡನ ಬಾರಾ ಮಹೇಶಾ..."
"ಎಲ್ಲಿ?"
"ಕಾದ್ಗೆಲಿ.. ಯಾವ್ಥರ ನೀರು ಹರೀತಾ ಇದ್ದು ಗೊತ್ತಿದಾ?"
"ಹೂಂ, ನಾ ಆಗ್ಲೆ ಅಪ್ಪಯ್ಯನ ಜೊತಿಗೆ ತ್ವಾಟಕ್ಕೆ ಹೋಗಕ್ಕರೆ ನೋಡಿದಿ.."
"ನಾನೂ ಅಷ್ಟೇ.. ಸುಮಾರು ಮೀನೂ ಇದ್ವಲೇ.."
"ಏ, ಮೀನು ಹಿಡಿಯನಾ?"
"ಅಪ್ಪಯ್ಯಂಗೆ ಗೊತ್ತಾದ್ರೆ ಬೈತ.."
"ಏ ಬಾರಾ ಮಾರಾಯಾ.. ಬೇಗ ಬಪ್ಪನ.."
"ಅಮ್ಮ ಸ್ನಾನ ಮಾಡುಸ್ತಿ ಅಂತ ಹೇಳಿ ಅಂಗಿ-ಚಡ್ಡಿ ಎಲ್ಲ ಬಿಚ್ಸಿ ಹಾಕಿದ್ದು..!"
"ಥೋ ಅಡ್ಡಿಲ್ಲೆ ಬಾರಾ ಮಾರಾಯಾ... ನಾನೂ ದುಂಡಗೇ ಇಲ್ಯನಾ?"
"ನೆಡಿ ಹಂಗರೆ ಹೋಪನ.."
"ಏ ಗೌತಮಾ, ನಿಮ್ಮನೆಲಿ ಒಂದು ದೊಡ್ಡ ಸೌಟು ಇದ್ದಲಾ.. ಭಟ್ರು ಜಿಲೇಬಿ ಎತ್ತೋ ಸೌಟು.. ಜಾಲ್ರಿ ಸೌಟು.. ಅದ್ನ ತಗಂಬಾರಲೇ.."
"ಅದು ಎಂಥಕೆ?"
"ಅದ್ರಗೆ ಮೀನು ಹಿಡಿಯದು ಸುಲ್ಭ.."
"ಓಹ್ ಹೌದು..! ತರ್ತಿ ತಡಿ.."

ಚಿತ್ರದಲ್ಲಿ:

"ಏ ಇಲ್ಲಿ ಬಾರಾ.. ಇಲ್ಲಿ ಸುಮಾರು ಮೀನು ಇದ್ದು.."
"ಏ ನಂಗೆ ಹೆದ್ರಿಕೆ ಆಗ್ತು.. ಮೀನು ಕಚ್ತಲ್ಯನಾ?"
"ಥೋ ಎಂಥು ಆಗ್ತಲ್ಲೆ ಮರಾಯ.. ನಮ್ಮನೆ ಆಳು ದ್ಯಾವಪ್ಪ ಅವ್ರೆಲ್ಲ ಇದ್ನೇ ತಿಂತ"
"ಶೀ! ಹೆಂಗೆ ತಿಂತ್ವೇನ ಮೀನು..!"
"ನಾವು ಹಿಡ್ದು ನಮ್ಮನೆ ಬಾವಿಗೆ ಹಾಕನ.. ಚನಾಗಿರ್ತು.."
"ಹೌದು ಹೌದು, ಬಾ.. ಏ, ಇದೇ, ಇಲ್ನೋಡು.. ಗುಂಪಿಗೆ ಗುಂಪೇ ಇದ್ದು ಇಲ್ಲಿ.. ಇಲ್ಲಿ ಬಾರಾ ಗೌತಮಾ.."
"ವ್ಹಾವ್! ತಡಿ, ಸೌಟು ಹಾಕ್ತಿ... ಶ್... ಸುಮ್ನಿರು.. ನೀರು ಕಲಕಡ.."
"ಸಿಕ್ಚನಾ?"
"ಹಾ! ಬಂತು ನೋಡು.. ಎರ್ಡು ಪುಟಾಣಿ ಮೀನು.. ಹೇ..!"
"ಅಯ್ಯೋ.. ಒದ್ದಾಡ್ತಾ ಇದ್ದು.."
"ಆ ಹೊಂಬಾಳೆ ತಗಳಲೇ.. ಅದ್ರಗೆ ಇಟ್ಕಂಡು ಹೋಪನ.."

ಮನದಲ್ಲಿ ಮುಂದುವರೆದ ಚಿತ್ರ:

"ಇವತ್ತು ಅಮ್ಮ ನೀರು ಸೇದಕ್ಕರೆ ಕೊಡಪಾನದಲ್ಲಿ ಒಂದು ಮೀನು ಬಂದುಬಿಟ್ಟಿತ್ತು..!!"
"ಓಹ! ಇದು ಹಂಗರೆ ನಾವು ಅವತ್ತು ತಂದು ಬಿಟ್ಟಿದ್ದೇ ಮೀನು..?"
"ಹೂಂ, ಅದೇಯ.. ಅವತ್ತು ಮರಿ ಇತ್ತಲಾ? ಇವತ್ತು ಸುಮಾರು ದೊಡ್ಡಕಾಗಿತ್ತು.."
"ಕೊನಿಗೆ ಎಂಥ ಮಾಡಿದಿ ಅದನ್ನ?"
"ಅಮ್ಮಂಗೆ ಗಾಭ್ರಿ ಆಗಿ ಮತ್ತೆ ಬಾವಿಗೇ ಹಾಕ್ಬುಡ್ಚು!"
"ಓಹ್! ಇನ್ನೊಂದು ದಿನ ಸಿಕ್ಕಿರೆ ಅದ್ನ ಹೊಂಬಾಳೆಲಿ ಹಾಕ್ಯಂಡು ಮತ್ತೆ ತಗಂಡ್ ಹೋಗಿ ಕಾದ್ಗೆಲೆ ಬಿಡನ ಅಕಾ?"
"ಹೂಂ, ಅಡ್ಡಿಲ್ಲೆ, ಹಂಗೇ ಮಾಡನ.."


ಬಟ್ಟೆ - ಬೆತ್ತಲೆ - ಬಾಲ್ಯ - ಮುಪ್ಪುಗಳ ಸರಪಣಿಯ ಬಗ್ಗೊಂದು ಸ್ಥಿತಪ್ರಜ್ಞ ನೋಟ ವಿಕ್ರಮ್ ಹತ್ವಾರ್-ರಿಂದ

ಬೆತ್ತಲೆ

ನೀರಿದ್ದರೆ ಸಾಕು ಆಟಕ್ಕೆ,
ನೋಟದೆಲ್ಲೆಡೆ ಬೆರಗು
ಬಾಲ್ಯ ಬದುಕಿರುವವರೆಗೆ.

ಬೆತ್ತಲೆಯ ಮುಜುಗರ,
ಕೆಟ್ಟ ಕುತೂಹಲ,
ಬಟ್ಟೆ ಮೇಲಿನ ಮೋಹ-
ಬಾಲ್ಯ ತೀರಿದ ಮೇಲೆ
ಮುಪ್ಪು ಹುಟ್ಟುವವರೆಗೆ.

’ಮುಪ್ಪು ಹುಟ್ಟುವವರೆಗೆ’,
ಕೆಲವರಿಗದು ಹುಟ್ಟುವುದೇ ಇಲ್ಲ.


ಸತೀಶ್ ಬರಹದಲ್ಲಿ ಅಣ್ಣ ತಮ್ಮನಿಗೆ 'ಈಗೇಕೆ ಯೋಚ್ನೆ' ಅನ್ನುತ್ತಾನೆ...

ಈಗೇಕೆ ಯೋಚ್ನೆ

ಏನ್ ಅಣ್ಣಾ ನೀನು, ಮೀನ್ ಹಿಡಿಯೋಕೆ ಅಂತ
ಕರಕೊಂಡ್ ಬಂದು ಹರಿಯೋ ನೀರಿಗೆ ದೊಣ್ಣೇ
ನಾಯ್ಕನ ಅಪ್ಪಣೇ ಯಾಕೆ ಅಂತ ಕೇಳೋದೂ ಅಲ್ದೇ
ಈಗ ರೂಲರ್ ಹಾಕಿ ಹರಿತಾ ಇರೋದನ್ನ ಅಳಿತೀನೀ ಅಂತ
ಕೂತಿದ್ದೀಯ್ಯಲ್ಲಾ...
ನಿನಗೇನಾದ್ರೂ ಬುದ್ಧೀ ಇದೆಯಾ ಅಂತ
ನಾನೇನಾದ್ರೂ ಕೇಳಿ
ನೀನೇನಾದ್ರೂ ಸಿಟ್ನಲ್ಲಿ ನನ್ನ ಹೊಡೆಯೋಕಂತ
ಬರೋದಿಲ್ವಲ್ಲಾ, ಕೊನೆಗೆ...ಏನಾದ್ರೂ ಆಗ್ಲಿ
ನಾವ್ ಮೀನ್ ಹಿಡಿಯೋಕ್ ಹೋಗಿದ್ವೀ ಅಂತ
ಯಾರ್ ಹತ್ರಾನೂ ಹೇಳ್ದೇ ಇದ್ರೆ ಸಾಕು, ಅಷ್ಟೇ.

ತಮ್ಮಾ ಕೇಳು, ಬಗ್ಗಡದ ನೀರಲ್ಲಿ ಬಗ್ಗಿಸಿ ಸೊಂಟಾ
ಕೆಲ್ಸಾ ಮಾಡೋರ್ ಗೋಳು
ಗದ್ದೇ ನಾಟಿ ಮಾಡೋರೆಲ್ಲ, ಬೀಜ ಬಿತ್ತಿ ಬೆಳೆಯೋರೆಲ್ಲ
ಇಂಥಾ ಕೆಸರನ್ನ ನಂಬಿ ನಾಚೋದಿಲ್ಲ... ಅಲ್ದೇ
ಬೇರೆ ದೇಶದ್ ಜನ್ರೆಲ್ಲ ಅದೇನೇನೆಲ್ಲ ತಿಂದ್ಕೊಂಡು
ಎಲುಬಿನ್ ಹಂದ್ರಾನ್ ಮುಚ್ಕೊಂಡು
ಉಳಿದೋರ್ ಕಷ್ಟಾನ್ ಅರಿದೋರ್ ಹಾಗೆ
ದಪ್ಪಾ ಚರ್ಮಾನ್ ಬೆಳೆಸ್ಕೊಂಡು
ಬತ್ತಲೆಯಾಗಿ ನಿಲ್ಲೋದಕ್ಕೂ ಹೇಸೋದಿಲ್ಲ ಅಂತ
ನಮ್ಮ್ ಮೇಷ್ಟ್ರು ಹೇಳ್ತಿದ್ರು... ಜೊತೆಗೆ
ನಾನೂ ನೀನೂ ಈ ದಿನ
ನಮ್ಮಯ ನೋಟವ ನೋಡೋಣ
ನೀರಲಿ ಆಟವ ಆಡೋಣ
ಸಿಕ್ಕೋ ಮೀನು ಸಿಕ್ಕಿದ್ರೂನೂ
ತಗೊಂಡ್‌ಹೋಗಿ ಸಾಕೋದಿನ್ನೂ
ನಮ್ಮಲಿ ಉತ್ತರವಿರದಂಥ ಬಲುದೊಡ್ಡಾ ಪ್ರಶ್ನೆ
ಅಂಥಾ ಕಷ್ಟದ ಕೆಲ್ಸಕ್ಕೀಗೇಕೆ ಯೋಚ್ನೆ.

ನೀರಲ್ಲಿ ಆಡುತ್ತಿರುವ ಮಕ್ಕಳನ್ನು ತಡೆಯದಂತೆ ಸಿಂಧು ಮಕ್ಕಳ ಅಮ್ಮನಿಗೆ ಹೇಳುತ್ತಾರೆ..

ನೀರಾಡಲಿ, ಥಂಡಿಯಾದ್ರೆ ಕಷಾಯ ಕೊಡಬಹುದು..

ಬೆರಗು ಕಣ್ಣು ಕಂಡ ನೋಟ
ಒದ್ದೆ ಮೈಲಿ ಹೊಳೆವ ಮಾಟ
ಚಳಿಯಲ್ಲೂ ಏನೋ ಆಟ,
ಅಣ್ಣನ ಕೈಗೆ ಸಿಕ್ಕಿಬಿದ್ದ ಅಚ್ಚರಿ-
-ಯನ್ನು, ತಮ್ಮನ ಅರ್ಥವಾಗದ ಕುತೂಹಲ
ಮುದ್ದಿಸುತ್ತಿದೆ..
ಒಂದೇ ಅಚ್ಚರಿಗೆ ಹಲನೋಟ
ಮತ್ತೆ ಮತ್ತೆ ನೋಡಬೇಕೆನಿಸುವ ಸೆಳೆತ

ಬೇಡ ಮಕ್ಕಳ ಅಮ್ಮಾ
ಸ್ವಲ್ಪ ಹೊತ್ತು ಅಲ್ಲೇ ನಿಲ್ಲು,
ನೀರಾಡಲಿ, ಥಂಡಿಯಾದ್ರೆ ಕಷಾಯ ಕೊಡಬಹುದು,
ಇವತ್ತು ಅವರ ಚಿಲ್ಟೂ ಕೈಗಳಲ್ಲಿ
ನೀರು,ಮರಳು,ಪುಟ್ಟ ಗಪ್ಪಿ ಮೀನು ಹಿಡಿಯಲು ಬಿಡದೇ ಇದ್ದರೆ,
ನಾಳೆ ನಮ್ಮಂತೆಯೇ ದೊಡ್ಡವರಾಗಿ
ಬಾಲ್ಯದ ಖುಷಿ ಬೆರಳ ಸಂದಿಯಲ್ಲಿ ಸೋರಿಹೋಗಿ
ಆ ಪುಟ್ಟ ಕೈಗೆ ಲೇಖನಿ ಮಾತ್ರ ಗೊತ್ತಿರುತ್ತದೆ,
ನೀರಿನಾಳ, ಮೀನಿನ ನುಣುಪು, ಮರಳ ಬಿಸುಪು,
ಬದುಕಿನ ತಂಪು,
ಮನದಲ್ಲಿ ನೆಲಸದೆ
ಅಲ್ಲೆ ಹೊಳೆಬದಿಯಲ್ಲೆ ಉಳಿದುಬಿಡುತ್ತದೆ.

ಸ್ವಲ್ಪ ಹೊತ್ತು ಅಲ್ಲೇ ನಿಲ್ಲು,
ನೀರಾಡಲಿ, ಥಂಡಿಯಾದ್ರೆ ಕಷಾಯ ಕೊಡಬಹುದು

Monday, 25 June, 2007

ಚಿತ್ರ - 7ಕವಿತೆ ನೇಯ್ದವರು...

ದಡದಿ ತಂಗಿರುವ ಆಸೆ ದೋಣಿಯನೇರಿ
ಬದುಕ ನೀಲಿ ಸಮುದ್ರದಲಿ ಸಾಗಿ
ಪರಿಶ್ರಮದ ಹುಟ್ಟುಹಾಕಿ ಮೀಟಿ
ಕಷ್ಟದಲೆಗಳ ಹಿಂದೆ ನೂಕಿ
ದಿನದ ಬುತ್ತಿಯ ಹಿಡಿದು ಬಲೆಬೀಸಿ
ನಾಳೆಗೂ ಒಂದಷ್ಟು ಉಳಿಸಿ

ಮತ್ತದೇ ದಡಕೆ ಹಿಂದಿರುಗಿ ಮಲಗುವ ಮುನ್ನ-
ಹೊಲಿಯಲೇಬೇಕಿದೆ ಹರಿದು ಹೋಗಿರುವ ಕನಸ ಬಲೆಗಳನ್ನ...

- ಸುಶ್ರುತ ದೊಡ್ಡೇರಿ

ನೇಯುತ್ತೇವೆ ನಾವು....

ಕನಸುಗಳ ಹೆಣೆಯುತ್ತೇವೆ, ಇಳಿಗಾಲದಲ್ಲಿ
ಹೊರೆಹೊರುವ ಬಲವೀಯುತ್ತೇವೆ ಬಲೆಗೆ
ಹೆಣೆದೇ ಹೆಣೆಯುತ್ತೇವೆ, ಬುತ್ತಿಗಳ ನೆನಪಲ್ಲಿ
ಇಂದು ತಂದಿದ್ದನ್ನು ನಾಳೆಗೆ ಉಳಿಸಿಕೊಳ್ಳುವವರೆಗೆ.

ನೆಲೆಯಿಲ್ಲದ ನೀರಿನಲ್ಲಿ ನಮ್ಮ ಜೀವ ಸೆಲೆ
ಸೆಳೆತದೊಳಗೆ ಎಳೆಯಬೇಕು ಜೀವ ಬಲೆ
ಅಲೆಯೆದುರಿನ ಬದುಕು, ಅಸಂಖ್ಯ ಜೀವ ನೆಲೆ
ಅಳೆದೂ ಅಳೆಯಲಾಗದ ಅದಮ್ಯ ಜೀವ ಕಲೆ.

"ಹೊಯ್" ಅಂದಾಗ ಸೇರಿಕೊಳ್ಳುವ ಬಲ
ಒಂದಾಗಿ ದುಡಿದಾಗ ಕೂಡಿಕೊಳ್ಳುವ ಬಲ
ಹಲವು ಹಸ್ತಗಳಲ್ಲಿ ಗುರಿಯೊಂದರ ಬಲ
ಸೇರಿ ಬಾಳುವಲ್ಲಿ ನಾಳೆಗಳಿಗೆ ಬೆಂಬಲ.

- ಸುಪ್ತದೀಪ್ತಿ

ಎರಡು ಪೂರಕ ಸ್ವಗತ

ಜಲವಾಸಿ - ಮೀನ ರಾಶಿ:
ಗೊತ್ತಿದೆ ನೀನು ಹಿಡಿಯುತ್ತೀ ಅಂತ
ಆದ್ರೂ ಬಂದು ಸಿಗುತ್ತೇನೆ ನಾನು ಗಾಳಕ್ಕೆ
ನಾನೇನೋ ತಿನ್ನಲು ಹೋಗಿ ಸಿಕ್ಕಿಬಿದ್ದೆ ನಿನಗೆ
ಎಂಬ ಭಾವದ ಆಟವೆಷ್ಟು ಚೆನ್ನ
ಅದು ಸಾವಿನಾಟವಾದರೂ.

ಸುಮ್ಮನೆ ಹೊರಟಿದ್ದೆವು ನಾವು ಗೆಳೆಯರ ಗುಂಪು
ಏನೂ ತಿನ್ನಲಲ್ಲ, ಯಾವುದನ್ನೂ ಕಚ್ಚಲಲ್ಲ
ಇದ್ದಕ್ಕಿದ್ದಂತೆ ಬಂದೆರಗಿ ಹಿಡಿದುಬಿಟ್ಟಿದೆ
ಬಲೆ ತಾನೇ ತಾನಾಗಿ, ಇದು ಬೇಕಿರಲಿಲ್ಲ
ಇಲ್ಲಿ ಆಟವಿಲ್ಲ, ಮಾಟವಿಲ್ಲ, ಬರಿಯ ಸಾವಿನ ಹೂಟ!

ನೆಲವಾಸಿ-ಧನುರ್ ರಾಶಿ:
ಬಿರುಬಿಸಲು, ಸುರಿವ ಮಳೆ-ಗಾಳಿ, ಅಬ್ಬರಿಸುವ ಕಡಲು
-ಗಳ ಮಧ್ಯೆ ನಮ್ಮ ಜೀವ ಹಿಡಿದು, ನಿಮ್ಮ ಜೀವ ಕಳಚಿ
ಮಾರ್ಕೆಟಲ್ಲಿ ಕಾಯುವ ಕೈಗಳಲ್ಲಿ ನಿಮ್ಮನ್ನೆಸೆದು
ಮನೆಯಲ್ಲಿ ಕಾಯುತ್ತಿರುವ ಕೈಗಳಿಗೆ
ಊಟ ಹಿಡಿದು ಹೋಗುತ್ತೇವೆ ನಾವು;
ಇಲ್ಲ ಇದು ಆಟವಲ್ಲ, ನಮಗೆ ಬರಿಯ ಬದುಕು.

ಅಲ್ಲಲ್ಲಿ ಹೊಲಿಗೆ ಬಿಟ್ಟ ಬದುಕಿನ ಕಿಂಡಿಗಳ
ಗೋಡೆ ಬೀಳದಿರಲು, ಹೊಲಿಯುತ್ತಿದ್ದೇವೆ-
ಹಿಡಿದಿಟ್ಟ ನೀವು ತಪ್ಪಿ ಹೊಗದಿರಲು.
ಇದು ಆಟವಲ್ಲ, ಹರುಕು
ಬದುಕಿನ ತೇಪೆ.

ಆಟ ಆಗ ಮಾತ್ರ, ಸುಮ್ಮನೆ ಹೊರಟ
ನಿಮಗರಿವಾಗದಂತೆ ಬೀಸಿ ಹಿಡಿವಾಗ,
ಕ್ಷಣ ಮಾತ್ರ ಆಟ, ಮತ್ತೆಲ್ಲ ಬದುಕು.

- ಸಿಂಧು

ಭಲೆ ಬಲೆ!

ಜೀವಜಲವ ಹುಡುಕುವಂಥ ಸಾವಿರ ಕಣ್ಣಿನ ಬಲೆ
ಬಿಡಿಸಬೇಕು ಹೆಣೆಯಬೇಕು ಬದುಕೆನ್ನುವ ಕಲೆ
ಗೋಣು ಬಗ್ಗಿಸಿ ದುಡಿಯದಿರೆ ಸುಟ್ಟೇಬಿಡುವ ಸೂರ್ಯ
ಯಾರು ಇರಲಿ ಯಾರು ಬಿಡಲಿ ನಿಲ್ಲದು ಕೈಂಕರ್ಯ.

ಹಲವು ನೀರ ತನ್ನೊಡಲಲಿ ಬಿಟ್ಟು ದೂರ ಸಾಗಿಹುದು
ಹಲವು ತೀರ ಕಂಡು ತಾನು ಪೋಣಿಸಿ ನೋಡಿಹುದು
ಭಲೆ ಬಲೆ ಎಂದವರಷ್ಟೇ ಏನೋ ಅರಿತ ಮಹಾಜಾಲ
ನೀರನಷ್ಟೇ ಅಲ್ಲ ಗಾಳಿಯನೂ ಸೋಸಿಬಿಡುವ ಛಲ.

ತೇವವೆಲ್ಲಿ ಒಣಗಿಹೋಯ್ತು ಜೀವಜಲದ ಮರೆಯೇ
ನೀರಿರದ ಕಡಲಿಗೆ ನಾವೆ ದೂಕುವುದು ಸರಿಯೇ
ತಮ್ಮ ಕೆಲಸ ತಾವು ಕಂಡು ಒಣಗುತಿಹರು ಪಾಪ
ಇವರ ನಡುವೆ ಒಂಟಿ ತಾನು ಛತ್ರಿ ಹಿಡಿದ ಭೂಪ.

ಭಲೆ ಎನ್ನುತ ಅದೇ ನೀರಿಗೆ ಬೀಸುವುದು ನಮ್ಮ ಬಲೆ
ಸಿಗುವುದು-ಬಿಡುವುದು ಎಲ್ಲ ಆ ದೇವನಿಗೆ ಬಿಟ್ಟ ಕಲೆ.

- ಸತೀಶ್

Monday, 18 June, 2007

ಆರನೆಯ ಚಿತ್ರ

Satish ಚಿತ್ರದೊಳಗಿನ ನಿರಾಶೆಗೆ, ನಿರ್ಲಿಪ್ತತೆಗೆ ದನಿಯಾಗಿದ್ದಾರೆ...

ನಾವಿರುವ ದೇಶ ಹಳ್ಳಿ

ಬಡತನದಿ ಸೊರಗಿ ಬಿಸಿಲಿನಲಿ ಕರಗಿ
ಅರಿತಿಹೆವು ಇಹದ ಮರ್ಮ
ತಂಪಿನಲಿ ಕುಳಿತ ಬಿಳಿ ಅಂಗಿ ಜನರು
ಕಂಡಿಹರೆ ನಮ್ಮ ಕರ್ಮ

ಇಂದಿನಾ ಕೂಳು ಮುಂದಿನಾ ಬಾಳು
ನಮ್ಮ ನೋಟ ಕಟ್ಟ ಕಡೆಗೆ
ದಿನದಿನವು ನಿಮ್ಮ ಮುನ್ನಡೆಸುತಿರಲಿ
ನಾವು ಕೊಟ್ಟ ತೆರಿಗೆ

ಕಳವಳದ ಕಣ್ಣು ತಳಮಳವೆ ಇನ್ನು
ನೆರಳನೂ ಸುತ್ತೋ ಬಳ್ಳಿ
ಎದೆ ನಿಮದು ಎದ್ದು ಹಾರಿದರೆ ಏನು
ನಾವಿರುವ ದೇಶ ಹಳ್ಳಿ

ಕೈಗಂಟು ಮಂಡಿ ಬರಿ ಕಾಲ ಬಂಡಿ
ಸೂರಾಗೆ ಹುಲ್ಲು ಹಾಸು
ತಿಳುವಳಿಕೆ ಬೆಳೆದು ಅರಿವಳಿಕೆ ಕಳೆದು
ದೂರಾಗೆ ನಮ್ಮ ಕಾಸು

ವರುಷಗಳು ಉರುಳಿ ಪ್ರತಿ ಪಕ್ಷ ತೆರಳಿ
ದಿನಕೊಂದು ರಾಜ ಮಂತ್ರ
ನಮ್ಮೊಳಗಿನಾ ಸ್ವರವು ಬದಲಾಗದಾಯ್ತು
ಉಳಿದಿಹುದೇ ಹೊಸತು ತಂತ್ರ


ಸಿಂಧು Sindhu ಇಲ್ಲಿ ಚೋಮನದುಡಿಯ ಬೆಳ್ಳಿಯರನ್ನು ಕಂಡಿದ್ದಾರೆ, ಅವರನ್ನು ಚಿತ್ರ ತೆಗೆದವರ ಜತೆ ಮಾತಾಡಿಸಿದ್ದಾರೆ...

ಬೆಳ್ಳಿಯರು..

ನೆರಳಿನಲ್ಲಿ ಅವಳು, ಬೆಳಕಿನಲ್ಲಿ ಇವಳು
ಬೆಂಗಡೆ ಹಬ್ಬಿದ ತೊಂಡೆಬಳ್ಳಿಯ ಕುಳಿರು.
ನೆರಳ ತಂಪು ಸುಖವೊ, ಬೆಳಕ ಹೊಳಪು ಚೆಲುವೊ?
ನಕ್ಕ ನಗೆಯಲ್ಲಿ ಇಣುಕಿದ್ದು ನಾಚಿಕೆಯ ಮುಳ್ಳೊ?
ಕಡ್ಡಿಪುಡಿ ತಿಂದು ಕಪ್ಪಗಿದ್ದರು ಹೊಳೆವ ಹಲ್ಲೊ?
ಚೋಮನ ಬೆಳ್ಳಿಯ ಹಲ ರೂಪಗಳೊ?
ಫ್ಯಾಶನ್ ಬಿಚ್ಚಮ್ಮಗಳ ಅಣಕಗಳೋ?

ಉರಿಬಿಸಿಲಲ್ಲಿ, ಹೂಟಿ ಮಾಡಿ ಸುಸ್ತಾಗಿ ಆಸರಿಗೆ ಕೂತ್ರೆ ಕೂಸೆ,
ನೀ ಯೆಂತ ಕಪ್ಪು ಡಬ್ಬಿ ಹಿಡಿದು ಬಣ್ಣದ ಚಿತ್ರ ತೆಗಿಯೂದು
ಅಂದು ನಕ್ಕವರ ನಗುವಲ್ಲಿ -
ವಿಷಾದ ಕಂಡಿತೆ - ನಿಮ್ಮದು ಕೆಂಪು ಹಾದಿ, ದಲಿತ ಚಳುವಳಿಯೂ ಇರಬಹುದು..
ರಸ್ಟಿಕ್ ಬ್ಯೂಟಿ ಅನಿಸಿತೆ - ಇಂಗ್ಲಿಷ್ ಕವಿತೆ ಓದಿ ಕನ್ನಡ ಬರೆವವರ ಬೀದಿ,
ಅಯ್ಯೋ ಇದೆಲ್ಲ ನೋಡಕ್ಕೆ ಸಮಯವೆಲ್ಲಿ ಅಂದಿರೇ - ಯಶಸ್ಸಿನ ಬೆನ್ನು ಹತ್ತಿದ ಬಿಸಿನೆಸ್, ಐಟಿ-ಬೀಟಿ ಮಂದಿ..
ಬದುಕಿನ ಬನಿ ಹನಿಯಾಗಿ ಹರಿಯಿತೆ-
ಒಲವು ಚೆಲುವು ಅಳಲು ಕೂಡಿ ನಕ್ಕ ನೂರು ನೋಟ ಕಂಡಿತೆ?
ಹಾಗಿದ್ದರೆ, ನೀವು ನೊಂದ ಹೃದಯದ ಹಾಡು ಕೇಳುತ ಜೊತೆಗೂ ಹಾಡಿ,
ವರ್ಗೀಕರಣವೆಲ್ಲ ನಮಗೇಕೆ, ರಾಜಕೀಯಕ್ಕೆ, ಮಾಧ್ಯಮಗಳಿಗೆ ಬಿಡಿ.

ಅವರನ್ನೇ ಕೇಳಿ, ನಕ್ಕು, ಹಿಂದೆ ಒರಸಿಕೊಳ್ಳುತ್ತಾ ಎದ್ದು ಹೋಗುತ್ತಾರೆ,
ಆಸರಿ ಕುಡಿದಾಯಿತು, ಕೆಲಸ ಮಾಡಲು ಬಿಡಿ...

Monday, 11 June, 2007

ಐದನೆಯ ಚಿತ್ರ
Alpaznaನಿರೀಕ್ಷೆ ಹೀಗಿದೆ...

ನಿರೀಕ್ಷೆ

ಬಂದೀತೆ ಹೊಸಬೆಳಕು
ತೊಳೆದೀತೆ ಹಳೆ ಕೊಳೆಯ?

ಮರಳೀತೆ ಉಸಿರು
ಅರಳೀತೆ ಹಸಿರು?

ಈಡೇರುವುದೇ ಆಸೆ?
ಇಲ್ಲಾ, ಬದುಕು ಬರಿ ಕನಸೆ?


Srikanth.K.S(ಶ್ರೀಕಾಂತ) ಕೆಲ ಕ್ಷಣಗಳಷ್ಟೇ ಉಳಿದಿವೆ ಎನ್ನುತ್ತಾರೆ...

ಬಾಳ ಸಂಜೆಯ ಸೂರ್ಯಾಸ್ತದಲಿ,
ಹಸುರೆಲೆಯುದುರಿ ಕಳೆಯಿತು ಮನ್ವಂತರ,
ಮತ್ತೆ ಜಲವನು ಕಂಡು ಹಿಗ್ಗಿಲ್ಲ, ನಿಟ್ಟುಸಿರೊಂದು ಜಾರುವುದು ಸುಮ್ಮನೆ,
ಮಿಂಚಿದ ಕಾಲ, ಉಳಿದಿರುವುದು ಕೆಲ ಕ್ಷಣಗಳಷ್ಟೇ...

ಸಿಂಧು Sindhu ಹೊಸ ನೋಟ ಕಾಣದೆ? ಕೇಳುತ್ತಾರೆ...

ಸಾವಿರಗಟ್ಟಳೆ ಮನೆಯಲ್ಲಿ ದೀಪ ಹೊತ್ತಿಸಬೇಕಿದೆ,
ತಂತ್ರಜ್ಞಾನದ ಕೈ ಹಿಡಿದು ದೇಶ ಮುನ್ನಡೆಯಬೇಕಿದೆ..,
ಹಲವರಿಗಾಗುವ ನೂರ್ಮಡಿ ಅನುಕೂಲಕ್ಕೆ
ಕೆಲವರು ಕಷ್ಟಗಳ ಹಲ್ಲುಕಚ್ಚಿ ಭರಿಸಬೇಕಿದೆಯಮ್ಮಾ.. ಎಂದಿರಿ.
ಮಕ್ಕಳ ಕೊರಳಿಗೆ ಯಾವತ್ತೂ ಕಿವಿಯಾದವಳಲ್ಲವೆ ನಾನು..


ಹರಿವ ನೀರು ಹಿನ್ನೀರಾಯಿತು,
ಜೀವಜಲದ ಸ್ಪರ್ಶದಿಂದ ಹಸಿರಾಗಿ ನಗುತ್ತಿದ್ದ ಕಾಡು-
ನಿಂತ ನೀರಿನ ಭಾರ ಹೊತ್ತು ಮುಳುಗಡೆಯಾಯಿತು.
ಅಮ್ಮ ಎಂದ ಮಕ್ಕಳ ಕೈಹಿಡಿದೆ ನಾನು,
ಮಾತು ಬಾರದ ಸಂತಾನದ ಹಸಿರು ಒಣಗಿ ಉರುವಲಾಯಿತು.

ಸಾವಿರಗಟ್ಟಲೆ ಮನೆಗಳ ಬೆಳಕಿನ ಮೂಲ-
ಹಲ್ಲು ಕಚ್ಚಿ ಒಣಗಿ ನಿಂತಿದೆ ನೋಡು;

ಗುಡಿ ಕಟ್ಟುವುದು ಬೇಡ ಮಗೂ,
ಕೃತಜ್ಞತೆಯಿಂದೊಮ್ಮೆ ತಲೆ ಬಾಗಿಸಬಾರದೆ?
ಮುಳುಗಿಸಿ ನಿಂತ ಹೊನಲೇ ಬಿಡದೆ ಜೊತೆ ಕೊಟ್ಟಿದ್ದಾಳೆ-
ಒಣಗಿ ಕೊರಡಾದ ಹಸಿರಿನ ದುಃಖ ಒರೆಸಲು!
ಬೆಳಕಿನಿಂದ ಕೋರೈಸಿದ ನಿನ್ನ ಕಣ್ಣಿಗೆ ಹೊಸ ನೋಟ ಕಾಣದೆ?!


ಶ್ಯಾಮಾ ಒಂಟಿ ಮರದ ಸ್ವಗತವನ್ನು ಹೀಗೆ ಹೇಳುತ್ತಾರೆ...

** ಒಂಟಿ ಮರದ ಸ್ವಗತ **

ಬಾಳ ಮುಸ್ಸಂಜೆಯಲ್ಲಿ ನಿಂತ ಒಂಟಿ ಮರ ನಾನು
ಹಸಿರೆಳೆಗಲುದುರಿ ಬರೀ ಒಣ ರೆಂಬೆ ಕೊಂಬೆಗಳೊಡೆಯ ನಾನು
ನನಸಾಗದ ಕನಸುಗಳನ್ನೆಲ್ಲ ಕಣ್ಣ ಮುಂದೆ ಹರವಿಕೊಂಡು,
ಸಂಜೆಗಣ್ಣಿನ ಹಿನ್ನೋಟದಲ್ಲಿ
ದಿನ ದೂಡುತ್ತಿರುವೆ ನಾನು
ನನ್ನ ಒಡನಾಡಿಗಳಿಲ್ಲ ನನ್ನೊಡನೆ, ಎಲ್ಲ ಕಥೆಯಾಗಿ ಹೋದರು,
ಯಾರದೋ ಮನೆಯ ದೀಪ ಬೆಳಗಲೆಂದು ತಾವು ಬಲಿಯಾಗಿ ಹೋದರು,
ಆ ಕಾಲದ ಹಸಿರು ವೈಭವ ಈಗ ಬರೀ ಕಥೆ, ನಾನೇ ಕಥೆಗಾರ
ನಾಳೆ ನಾನಿದ್ದರೂ ಇರದಿದ್ದರೂ,ಆ ಸೂರ್ಯನೆ ಎಲ್ಲದಕ್ಕೂ ಸಾಕ್ಷಿದಾರ,
ನಾಳೆ ನಾನಿರುವೆನೆಂಬ ಭರವಸೆ ಇಲ್ಲ ನನಗೆ,
ಆದರೂ ಮನದಲ್ಲಿನ್ನೂ ಆಸೆ ಬತ್ತಿಲ್ಲ ಕಣ್ಣೆದುರಿಗೆ ಹೊಳೆಯುವ ಕನಸು ಸತ್ತಿಲ್ಲ,
ಮತ್ತೊಮ್ಮೆ ಹಸಿರು ಚಿಗುರೊದೆಯುವುದು,
ಆ ಹಸಿರು ವೈಭವ ಮರುಕಳಿಸುವುದು

ಏಕೆಂದರೆ ಇಂದು ಸೂರ್ಯ ಮುಳುಗಿದರೇನಾಯಿತು
ಭರವಸೆಯಿದೆ ನನಗೆ
ನಾಳೆ ಮತ್ತೆ ಬಂದೇ ಬರುತ್ತಾನೆ ಸೂರ್ಯ
ಜೀವ ಕಳೆಯ ತುಂಬಲೆಂದು....


suptadeepti "ಬೇಕಾಗಿತ್ತು...." ಅನ್ನುತ್ತಾರೆ...

"ಬೇಕಾಗಿತ್ತು...."

ಬೇಕಾಗಿತ್ತು ಒಂದಿಷ್ಟೇ ಇಷ್ಟು
ನೀರು, ಗಾಳಿ, ಬೆಳಕು
ಕರಗುವಷ್ಟು ಕೊಟ್ಟೆಯಲ್ಲ
ಉಸಿರಾರುವವರೆಗೂ

ಯಾರಿಗೂ ಇಲ್ಲವೆನ್ನದೆ
ನೆರಳಾದೆ, ಮನೆಯಾದೆ
ಕರುಳು ನೆನೆಯುವಂತೆ
ನಿಂತಿದ್ದೇನೆ, ಖಾಲಿ ಮನ.

ದೇವರಾಜ್ಯದಲ್ಲಿ ತಾಳ್ಮೆಯಿದೆ
ಕತ್ತಲಿಲ್ಲ, ಸತ್ಯವಿದೆ
ಆವರಿಸುವ ನಿರ್ಲಿಪ್ತದಲ್ಲೂ
ಇನ್ನಾರದೋ ಬಾಳ್ವೆಯಿರಲಿ

ಬೇಕಾಗಿತ್ತು ಇನ್ನೊಂದೇ ಒಂದು
ದಿನ, ಘಂಟೆ, ನಿಮಿಷ
ನಗುವಿಗೆ ದನಿಯಾಗಲು
ಮಡಿಲ ಮಗುವಾಗಲು.


Satish 'ಸುತ್ಲೂ ಗಂಗೆ ತುಂಬ್ಕಂಡಿದ್ರೂ ಕಳೆಯೋದಿಲ್ಲ ಶಾಪ' ಎಂದು ಹಪಹಪಿಸುತ್ತಾರೆ....:-)

ಬರೀ ಖ್ಯಾತಿ ಬಂದೋಯ್ತು

ಒಬ್ನೇ ನಾನು ಸುಮ್ನೆ ನಿಂತಿದ್ದೇನೆ ಹೀಗೆ
ಭೂತ ಮೈಮೇಲ್ ಬಂದು ಬದುಕಿ ಸತ್ತೋರ್ ಹಾಗೆ
ಸುತ್ಲೂ ಗಂಗೆ ತುಂಬ್ಕಂಡಿದ್ರೂ ಕಳೆಯೋದಿಲ್ಲ ಶಾಪ
ಜೊತೇಲಿದ್ದೋರ್ನ್ ಕೇಳ್ಲೇ ಬೇಡಿ, ದೇವ್ರೇ ಗತಿ ಪಾಪ

ಎಲ್ಗೋ ನೀರು ಯಾರ್ಗೋ ಬೆಳೆ
ಬೆಟ್ಟಾ-ಗುಡ್ಡದ್ ಮಧ್ಯೆ ನಮ್ಮನ್ ಹೊತ್ಗಂಡ್ ಇಳೆ
ಪ್ರಾಣಿ-ಪಕ್ಷೀ ಒಂದ್ ಕಾಲ್ದಲ್ಲಿ ಆಡ್ಕೊಂಡಿದ್ವು ಇಲ್ಲಿ
ನೀರಿನ್ ಕೆಳಗೆ ಪಟ್ನಾ ಇದ್ರೂ ಖಾಲಿಯಾದ ಗಲ್ಲಿ

ಹರಿಯೋ ನೀರ್ಗೆ ಕಟ್ಟೇ ಕಟ್ಟೋದೇನೂ
ಹಿನ್ನೀರ್ಗೆ ಜನಾ ಹೆದರಿ ದಿನಾ ಸಾಯೋದಂದ್ರೇನು
ಹೊಟ್ಟೇ ತುಂಬೋ ಮಾತೂ ದೂರಾ ಉಳ್ದೋಯ್ತು
ಎಲ್ರ ಕಣ್ಗೂ ಹಸ್ರು ಕಂಡು ಬರೀ ಖ್ಯಾತಿ ಬಂದೋಯ್ತು

ಎಲ್ಲಾ ನೆನಪೂ ಕೂಡಿ-ಕಳೆದು ನಿಂತಿದ್ದೇನೆ ನಿತ್ಯಾ
ಮೋಟ್ ಮರ ಗಾಳಿಗ್ ಮಿಂಡಾ ಅನ್ನೋ ಮಾತು ಸತ್ಯಾ

Monday, 4 June, 2007

ನಾಲ್ಕನೆಯ ಚಿತ್ರ


ಈ ಚಿತ್ರ ಭಾಗವತರ ಸಂಚಿಯಿಂದ ಹೊರಬಂದಿದೆ...

ನಿಮ್ಮ ಕವನಗಳನ್ನು ಅಥವಾ ಬರಹಗಳನ್ನು ಕವನಗಳಿಗೆ / ಬರಹಗಳಿಗೆ ಮೀಸಲಾದ ಜಾಗದಲ್ಲಿ ಬರೆಯಿರಿ. ಆಮೇಲೆ ಅವೆಲ್ಲವನ್ನೂ ಅಲ್ಲಿಂದ ಇಲ್ಲಿಗೆ ಎತ್ತಿಕೊಳ್ಳಲಾಗುವುದು.

ಈ ಚಿತ್ರ ಸೃಷ್ಟಿಸಿದ ಭಾವ-ಬೆರಗು-ಬೆಡಗು ಇಲ್ಲಿದೆ...

ಸುಶ್ರುತ ದೊಡ್ಡೇರಿ ಚಿತ್ರವೇ ಕವನವಾದ ಹೊತ್ತು ಹೇಗಿತ್ತೆಂದು ಹೀಗೆ ವರ್ಣಿಸುತ್ತಾರೆ...

ಆಗತಾನೇ ಮಳೆ ಬಂದು ಹೋಗಿತ್ತು

ಭಾರವಾಹನಗಳಿಂದ ರಾತ್ರಿಯಿಡೀ ಮೈನೇವರಿಸಿಕೊಳ್ಳುವ ಕಪ್ಪು
ರಸ್ತೆ ಸ್ನಾನ ಮಾಡಿ ಸುಸ್ತಾರಿಸಿಕೊಳ್ಳುತ್ತಿತ್ತು;
ಬಿಸಿಯುಸಿರು ಬಿಡುತ್ತಿತ್ತು;
ಹಬೆಯಾಡುತ್ತಿತ್ತು

ಇಕ್ಕೆಲದ ಮರಗಳಿಂದ ನೀರಿನ್ನೂ ತೊಟ್ಟಿಕ್ಕುತ್ತಿತ್ತು
ಮಳೆ ನೀರ ಮುತ್ತಿಗೆ ಮಣ್ಣು ಕೆಂಪಾಗಿತ್ತು;
ಘಮ್ಮೆನ್ನುತ್ತಿತ್ತು;
ಗಾಳಿಗೆ ಮತ್ತೇರಿಸುತ್ತಿತ್ತು

ಅಲ್ಲಿ ಪ್ರಕೃತಿಯೇ ಚಿತ್ರವಾಗಿತ್ತು
ಮತ್ತು,
ಅದು ಚಿತ್ರವೇ ಕವನವಾದ ಹೊತ್ತು!!


ಶ್ಯಾಮಾ ವರ್ತಮಾನಕ್ಕೂ ಭೂತಕ್ಕೂ ಭವಿಷ್ಯಕ್ಕೂ ಸೇತುವೆ ಕಟ್ಟಿದ್ದಾರೆ...

**ಒಂದು**
ಆಗಷ್ಟೇ ಹೊಯ್ದು ನಿಂತ ಮಳೆಗೆ
ಒದ್ಡೆಯಾದ ಆ ನೆಲ
ಇಕ್ಕೆಲಗಳಲ್ಲಿ ಬಿದ್ದ ಆ ಎಲೆ ಹೂಗಳೊಡಗೂಡಿ
ಮಣ್ಣು ಸೂಸುತ್ತಿರುವ ಆ ಕಂಪು...
ಮುಗಿಲೆತ್ತರಕ್ಕೆ ಬೆಳೆದು ನಿಂತ ಆ ಮರಗಳು ಎಲೆಗಳ ಸಂದಿನಿಂದ
ಉದುರಿಸುತ್ತಿರುವ ಆ ಪುಟ್ಟ ಪುಟ್ಟ ಹನಿಗಳು
ಆಹಾ ಸ್ವರ್ಗವೆಂದರೆ ಇದೇ ಇರಬೇಕು..

**ಎರಡು**
ಮನವು ವರುಷಗಳಷ್ಟು ಹಿಂದೆ ಓಡಿ ಯೋಚಿಸುತ್ತಿದೆ
ಹಿಂದೊಮ್ಮೆ ಇಂಥದೆ ದಾರಿಯಲ್ಲಿ ಬೆನ್ನಿಗೊಂದು ಚೀಲ ಏರಿಸಿ
ಶಾಲೆಯಂಗಿ ತೊಟ್ಟು ಎತ್ತಿ ಕಟ್ಟಿದ ಆ ಎರಡು ಜಡೆಗಳನ್ನು ಕುಣಿಸುತ್ತಾ
ದಣಿವರಿಯದೇ ಓಡುತ್ತಿದ್ದೆ...
ಪಟ ಪಟನೆ ಮರವುದುರಿಸಿದ ಹನಿಗಳನ್ನು ಬೊಗಸೆಯಲ್ಲಿ ಹಿಡಿದು ಕುಣಿಯುತ್ತಿದ್ದೆ
ಈಗ ನಿಧಾನವಾಗಿ ಹೆಜ್ಜೆ ಮೇಲೆ ಹೆಜ್ಜೆ ಹಾಕುತ್ತಿದ್ದೇನೆ
ಓಡಬೇಕೆಂದರೂ ಓಡಲಾಗುತ್ತಿಲ್ಲ

** ಮೂರು **
ಮಳೆ ಬಿದ್ದು ಹೋದ ಮೇಲೆ ಬೀಸುವ ಆ ತಂಪು ಗಾಳಿಗೆ ಮುಖವೊಡ್ದಿ
ನಿಂತಿದ್ದೇನೆ.... ರಸ್ತೆಯನ್ನು ಕಣ್ಣು ಹಾಯುವ ವರೆಗೂ
ನೋಡಿದಾಗ, ಮನದಲ್ಲಿ ಒಂದು ಪ್ರಶ್ನೆ ಮೂಡಿತು
ಒಂದು ರಸ್ತೆಗೆ ಗೆರೆ ಎಳೆದು ಎರಡು ಭಾಗ ಮಾಡಿದ್ದಾರೆ ಯಾಕೋ?
ನಿನ್ನೊಡನೆಯೇ ಹೆಜ್ಜೆ ಹಾಕಬೇಕೆಂದುಕೊಂಡಿದ್ದ ನನಗೆ,
ನಂಗೊಂದು ದಾರಿ ನಿಂಗೊಂದು ದಾರಿ ಅಂತ ತಿಳಿ ಹೇಳುವುದಕ್ಕೋ?


ಮನಸ್ವಿನಿ ಹಳೆಯ ದಾರಿ ಮುಂದೆ ಸಿಕ್ಕೀತು ಅನ್ನುತ್ತಾರೆ...

ಎಲ್ಲೋ ಸಾಗಬೇಕಿದ್ದ ದಾರಿ
ಮತ್ತೆಲ್ಲೋ ತಿರುವ ತೋರಿ
ಹಳೆಯ ದಾರಿಯಿಂದ ಸರಿದು
ತಿರುವ ಸುತ್ತಿ ಮುಂದುವರಿದು
ಬಹು ದೂರ ಬಂದಾಗ
ಹಿಂದೆ ತಿರುಗಿ ನೋಡಿದಾಗ
ಹಳೆಯದೆಲ್ಲ ನೆನಪಾಗಿ
ಮನಸು ಮತ್ತೆ ಭಾರವಾಗೆ
ನಗುತಲೆ ಮುಂದುವರಿವೆ
ಹಳೆಯ ದಾರಿ ಮುಂದೆ
ಮತ್ತೆ ಸಿಕ್ಕೀತೆಂದು

ಸಿಂಧು Sindhu ’ಕಂಡ ಎಲ್ಲವನ್ನೂ ಹೇಳಲಾಗುವುದಿಲ್ಲ’ ಎನ್ನುತ್ತಾರೆ...

ಅಲ್ಲಿ ಫ್ರೇಮಿನೊಳಗೆ ಮಳೆಗೆ ತೋಯ್ದ ಹಾದಿ,
ಇಲ್ಲಿ ಫ್ರೇಮಿನಾಚೆ ಎಂದೂ ಇಂಕಿನಿಂದ ನೆನೆಯದ
ಈ-ಅಕ್ಷರಗಳ ಶರಧಿ.

ಕಂಡ ಚಿತ್ರವನ್ನೇ ಕಾಣಲಾಗುವುದಿಲ್ಲ,
ವಿವರಿಸುವುದು ಹೇಗೆ?
ಅಲ್ಲಿ ನೆನೆದ ಮರಗಿಡಗಳ ಸಾಲಿನ
ತಂಪನ್ನ ಇಲ್ಲಿ ಬೆಂದ ಮನಕ್ಕೆ ಹಾಯಿಸುವುದು ಹೇಗೆ?

ನಡೆಸಿಕೊಂಡು, ಓಡಿಸಿಕೊಂಡು, ಟಾರಿಸಿಕೊಂಡು, ಬಣ್ಣದ ಗೆರೆ ಹಚ್ಚಿಸಿಕೊಂಡು,
ಸುಸ್ತಾದ ದಾರಿ, ಮಲಗಿದೆ ಮಳೆಗೆ ಮೈಯೊಡ್ಡಿ,
ಮಾತು, ಕತೆ, ಕವಿತೆ ಯಾಕೆ ಮಾಡಬೇಕು ಅಡ್ಡಿ..

ಮಳೆ,ಬರಿಯ ದಾರಿ,ಒದ್ದೆ,ಶುಷ್ಕತೆ, ಬೆಳಕು-ನೆರಳು,
ಬಂದ ದಾರಿ, ಹೋಗಬೇಕಿರುವ ದೂರ..
ಯಾವುದೂಂತ ಬರೆಯುವುದು..?!

ಕಣ್ಣ ಪ್ರತಿಫಲನ, ಕಂಡ ವಸ್ತುವಿಗಿಂತ ನೂರು ಪಟ್ಟು,
ಅದಕ್ಕೇ ಕಂಡ ಚಿತ್ರವನ್ನಷ್ಟೇ ಕಾಣಲಾಗುವುದಿಲ್ಲ..
ಹಾಗೇ, ಕಂಡ ಎಲ್ಲವನ್ನೂ ಹೇಳಲಾಗುವುದಿಲ್ಲ.


Satish ನುಣ್ಣಗಿನ ರಸ್ತೆ ತಮಗೆ ಹೊಸದೆನ್ನುತ್ತಾರೆ...

ನುಣ್ಣಗಿನ ರಸ್ತೆ

ಇಷ್ಟು ನುಣ್ಣಗಿನ ರಸ್ತೆ, ನಮಗದು ಹೊಸದು
ನಮ್ಮ ಊರುಗಳಲ್ಲಿ ಇಲ್ಲಿನ ಹಾಗಿರದು
ಪ್ರಗತಿಪರ ದೇಶಗಳಲ್ಲಿನ ನಾಯಕರ ನೆನಸುವ ಹಾಗೆ
ನಮ್ಮಲ್ಲಿಲ್ಲದಿರುವ ಈ ಮರಗಳ ಸೋಗೆ!

ನಮ್ಮಲ್ಲಿನ ರಸ್ತೆಗಳು ಬಣ್ಣ ಬಳಿದುಕೊಳುವುದಿಲ್ಲ
ಹಾಗಾಗಿ ತಮ್ಮ ಬಣ್ಣವನೆಂದೂ ಕಳೆದುಕೊಳುವುದಿಲ್ಲ
ಒಮ್ಮೊಮ್ಮೆ ಆ ಕ್ಷಣಕ್ಕೆ ಬಣ್ಣ ಬಳಿದುಕೊಂಡೂ
ಹೆಚ್ಚುತನ ಮೆರೆದಿವೆ ಬಿಳಿ-ಹಳದಿ-ಕಪ್ಪುಗಳ ಕಂಡು!

ಹಾದಿಯನ್ನು ಸವೆಸಬಲ್ಲ ಬದಿಯ ಆಕರ್ಷಣೆ
ಆ ಕ್ಷಣಕ್ಕೆ ಹಾಕಬಹುದಾದ ತೋರ್ ಮಣೆ
ಎಲ್ಲಿ ಒಣಗಿದ ಎಲೆ-ಹುಲ್ಲು ಮಣ್ಣಿಗೆ ವ್ಯತ್ಯಾಸವಿಲ್ಲವೋ
ಅಲ್ಲಿ ಇನ್ಯಾವ ಕ್ರಾಂತಿ ಅದು ಹೇಗೆ ಸಾಧ್ಯವೋ!

ಈ ಎತ್ತರಕೆ ಮುಸುಕಿದ ಮೋಡವನು ಇಬ್ಬನಿಯೆಂದು ಕರೆದು
ಇನ್ನೆಷ್ಟೋ ಹೊತ್ತು ಬಿಟ್ಟು ಹುಟ್ಟಬಹುದಾದ ಕಿರಣಗಳ ಜರೆದು!