Wednesday 29 July, 2009

Thursday 23 July, 2009

ಚಿತ್ರ ೧೧೨



ತವಿಶ್ರೀ :

ಎತ್ತ ನೋಡಿದರತ್ತ ಹಸುರು
ಕಾನನ ಸಿರಿಯ ವೈಭವ
ಮೇಲೆ ತಣ್ಣನೆ ಮೋಡದ ಹೊದಿಕೆ
ಕೆಳಗೆ ಕುಳಿರ್ಚಳಿಯ ಹಾಸುಗೆ

ಎಲ್ಲೂ ಬಿತ್ತಿರದ ಬೆಳೆ
ಎಲ್ಲೆಲ್ಲೂ ಬೆಳೆದಿಹ ಕಳೆ
ಆ ನೆಲಕೆ ಬೇಕಿಹುದೀ ಮಳೆ
ಎಲ್ಯಾರಿಗೂ ಬೇಡದ ಮಳೆ

ಹನಿ ಹಾಕುತಿಹ ಜಟಿಪಿಟಿ ತಾಳ
ಹೊಟ್ಟೆ ಕೇಳುತಿಹೆ ಬಿಸಿ ಬಿಸಿ ಹಪ್ಪಳ
ಬಿಡಿಸಿದಾಗ ಬಿಚ್ಚಿ ತಲೆ ಕಾಯುವ ಛತ್ರಿ
ಅದಿಲ್ಲದಿರೆ ನಿಸರ್ಗಕೆ ತಲೆದಂಡ :)

Thursday 16 July, 2009

ಚಿತ್ರ ೧೧೧


ತವಿಶ್ರೀ :

ಪತ್ತೇದಾರ ಪುರುಷೋತ್ತಮ ಲಾಂಗ್ ಓವರ್ ಕೋಟು, ಫೇಲ್ಟ್ ಹ್ಯಾಟು, ಕಪ್ಪು ಕನ್ನಡಕ, ಗಮ್ ಬೂಟ್ಸ್ ಧರಿಸಿ ಹೊರಟಿದ್ದಾನೆ. ಜನ ದನ ಯಾವುವೂ ಇಲ್ಲದ ಈ ಪ್ರದೇಶದಲ್ಲಿ ಇವನಿಗೇಕೀ ವೇಷ? ಜನನಿಬಿಡ ಈ ಕಾಡು ಗುಡ್ಡ ಬೆಟ್ಟದಲಿ ಇವನಿಗೇನು ಕೆಲಸ? ಜೀವನದಲ್ಲೆಂದೂ ಟ್ರೆಕ್ಕಿಂಗ್ ಹೋಗದವನಿಗೆ ಈ ವೇಷ ಎಲ್ಲಿ ಸಿಕ್ಕಿತೋ ಏನೋ? ಅದೂ ಅಲ್ಲದೇ ಅವನೊಬ್ಬನೇ ಯಾಕೆ ಟ್ರೆಕ್ಕಿಂಗ್ ಹೋಗುತ್ತಿದ್ದಾನೆ. ಸಾಮಾನ್ಯವಾಗಿ ಅವನೆಲ್ಲಿಗೇ ಹೊರಟರೂ ಅವನ ಅಸಿಸ್ಟೆಂಟ್ ಕಿರಾತಕ ಕಿಟ್ಟಣ್ಣ ಬೆಂಗಾವಲಾಗಿ ಇದ್ದೇ ಇರುತ್ತಾನೆ. ಆದರಿವತ್ತು ಪುರುಷೋತ್ತಮನೊಬ್ಬನೇ ಹೋಗುತ್ತಿದ್ದಾನೆ. ಏನೋ ವಿಚಿತ್ರವಾಗಿದೆಯಲ್ಲ, ಎಂದು ನಾನವನನ್ನು ಹಿಂಬಾಲಿಸಿದೆ.

ಭರ ಭರ ದಾಪುಗಾಲು ಹಾಕಿ ಹೋಗುತ್ತಿದ್ದವನನ್ನು ಸಮೀಪಿಸಲು ನಾನು ಓಡಲೇ ಬೇಕಾಯಿತು. ಈ ಮಧ್ಯೆ ಓಡುತ್ತಿರುವಾಗ ನನ್ನ ಚಪ್ಪಲಿಯ ಉಂಗುಷ್ಠ ಕಿತ್ತು ಹೋಯಿತು. ಚಪ್ಪಲಿಗಳನ್ನು ಅಲ್ಲಿಯೇ ಬಿಸಾಕಿ ಹಿಂದೆ ಓಡಿದೆ. ಅನತಿ ದೂರದಲ್ಲಿರಲು, ಪುರುಷೀ ಅಂತ ಕೂಗಿದೆ. ಚಿರಪರಿಚಿತ ಧ್ವನಿ ಕೇಳಿದರೂ ಆತ ಹಿಂದೆ ನೋಡಲಿಲ್ಲ. ಏನೋ ಅಚಾತುರ್ಯ ಸಂಭವಿಸಿದೆ ಎಂದಂದುಕೊಂಡು, ಇನ್ನೂ ರಭಸದಿಂದ ಓಡಿ, ಆತನ ಓವರ್ ಕೋಟನ್ನು ಹಿಂಭಾಗದಿಂದ ಜಗ್ಗಿ ಆತನನ್ನು ನಿಲ್ಲಿಸಿದೆ.

’ಏನಯ್ಯಾ ಇದು ವೇಷ? ಯಾಕಯ್ಯಾ ನನ್ನ ಕರೆಗೂ ಓಗೊಡುತ್ತಿಲ್ಲ? ಎಲ್ಲಯ್ಯಾ ನಿನ್ನ ಕಿರಾತಕ ಹಿಂಬಾಲಕ?’ ಎಂದೆಲ್ಲ ಪ್ರಶ್ನೆಗಳನ್ನೂ ಒಂದೇ ಉಸುರಿನಲ್ಲಿ ಉಸುರಿದೆ. ಓಡು ನಡಿಗೆಯಲ್ಲಿದ್ದ ಆತನೂ ಏದುಸಿರು ಬಿಡುತ್ತಿದ್ದ. ಮೇಲಕ್ಕೆ ಬೆರಳೆತ್ತಿ, ಖಿನ್ನ ಮುಖವನ್ನು ನನ್ನೆಡೆಗೆ ಪ್ರದರ್ಶಿಸಿದ. ಒಂದೆರಡು ಕ್ಷಣಗಳ ತರುವಾಯ, ’ಇನ್ನೆಲ್ಲಿಯ್ಯ ಕಿಟ್ಟಣ್ಣನಯ್ಯಾ? ಆತನ ಕೊಲೆ ಆಗಿದೆ. ನಿನಗೇ ಗೊತ್ತಿರುವಂತೆ ನಿನ್ನೆ ನಾನೂ ಮತ್ತು ಕಿಟ್ಟಣ್ಣ ಇದೇ ಕಾಡಿನ ಸರಹದ್ದಿನಲಿ, ಯಾವುದೋ ಕೇಸೊಂದಕ್ಕಾಗಿ ಬಂದೆವು. ಕಾಡಿನ ಮುಖದಲ್ಲಿಯೇ ಇರುವ ಪಾಳು ಬಂಗಲೆಯಲ್ಲಿ ಉಳಿದುಕೊಂಡಿದ್ದೆವು. ಇಂದು ಬೆಳಗಿನ ಜಾವ ನಾಲ್ಕು ಘಂಟೆಯ ವೇಳೆಯಲ್ಲಿ, ಬಹಿರ್ದೆಶೆಗೆಂದು ಹೋಗಿದ್ದ ಕಿಟ್ಟಣ್ಣನನ್ನು, ಹಿಂದಿನಿಂದ ಯಾರೋ ಮಚ್ಚಿನಲ್ಲಿ ಹೊಡೆದು, ಸಾಯಿಸಿದ್ದಾರೆ. ಆತನ ರುಂಡವೊಂದು ಮಾತ್ರ ಈ ಕಾಡಿನ ಬಂಗಲೆಯ ಹಿಂಭಾಗದಲ್ಲಿ ಸಿಕ್ಕಿದೆ. ಆತನ ಮುಂಡ ಎಲ್ಲಿ ಹೋಯಿತೋ ತಿಳಿಯದಾಗಿದೆ. ಅದನ್ನು ಹುಡುಕ ಹೊರಟಿರುವೆ. ಅದಕ್ಕಾಗಿಯೇ ಯಾರಿಗೂ ಹೇಳದೇ, ಎಲ್ಲಿಯೂ ನಿಲ್ಲದೇ ನಾನೊಬ್ಬನೇ ಹೊರಟು ಬಂದಿರುವೆ. ಈಗ ಪೊಲೀಸರೂ ನನ್ನ ಕಡೆ ಸಂಶಯಾಸ್ಪದವಾಗಿ ನೋಡುತ್ತಿದ್ದು, ನನ್ನ ಹಿಂದೆಯೇ ಬಿದ್ದಿದ್ದಾರೆ. ಮೊದಲೀಗ ನಾನು ನನ್ನನ್ನು ಪೊಲೀಸರಿಂದ ರಕ್ಷಿಸಿಕೊಳ್ಳಬೇಕು. ನಂತರ ಕಿಟ್ಟಣ್ಣನ ಮುಂಡವನ್ನು ದೊರಕಿಸಿಕೋಬೇಕು. ಇದುವರೆವಿಗೆ ಯಾರಿಗೂ ಈ ವಿಷಯವನ್ನು ಅರುಹಿಲ್ಲ. ನೀನೇ ಮೊದಲಿಗ. ನನಗೆ ಸಾಥಿ ನೀಡುವೆಯಾ? ಆಗುವುದಿಲ್ಲ ಎಂದು ಮಾತ್ರ ಹೇಳಬೇಡ’.

ಏನೂ ಕೆಲಸವಿಲ್ಲದೇ, ಬರಹಕ್ಕೂ ಮನಸಿಲ್ಲದ ನಾನು ಪುರುಷೋತ್ತಮನೊಂದಿಗೆ ಹೊರಡಲು ತಕ್ಷಣ ಒಪ್ಪಿಗೆ ನೀಡಿದೆ.

ಇದು ಇಲ್ಲಿಯವರೆವಿಗೆ ನಡೆದಿರುವ ಪ್ರಸಂಗ. ನಮ್ಮ ಕೆಲಸ ಆದ ನಂತರ ಮುಂದಿನ ವರದಿಯನ್ನು ನಿಮ್ಮ ಮುಂದಿಡುವೆ. ಅಲ್ಲಿಯವರೆವಿಗೆ ತಾಳ್ಮೆಯಿಂದಿರಿ. ಯಾರಿಗಾದರೂ ನನಗಿಂತ ಮೊದಲೇ ಈ ಕೇಸಿನ ಬಗ್ಗೆ ಗೊತ್ತಾದರೆ, ಅವರು ಇಲ್ಲಿ ಬರಹವನ್ನು ಮುಂದುವರೆಸಬೇಕೆಂದು ಕೋರುವ

ಇತಿ ನಿಮ್ಮ

೯೯೯

Wednesday 8 July, 2009

ಚಿತ್ರ ೧೧೦



ತವಿಶ್ರೀ :

ಇದೇನಾ ಜಲಸಮಾಧಿ


ಗಾಳಿಯೊಡನೆ ಹಾರಿದ ಆಷಾಢ
ಹಿಂದೆಯೇ ಸೋ ಎನುವ ಶ್ರಾವಣ
ಎಲ್ಲೆಲ್ಲೂ ಎಡಬಿಡದ ಮುಸಲಧಾರೆ
ಕಳೆ ಕೀಳಲು ಹೊರಟಿಹಳು ನೀರೆ

ಸುರಿಯುತಿದೆ ಜೋರಿನ ಮಳೆ
ತಂಪಾಯಿತು ಕಾದು ರೋಸಿದೆ ಇಳೆ
ಹೊರಗೆ ತೊಳೆಯುತಿದೆ ಕೊಳೆ
ಒಳಗೆ ಕಲ್ಮಶದ ಹೊಳೆ

ಇಳಿಯುತಿದೆ ಗಾಜಿನ ಹೊರಗೆ ಹನಿ
ಪಸೆ ಆರಿದ ಬಾಯೊಳಗಿಲ್ಲ ಹನಿ
ಕಗ್ಗತ್ತಲ ನಿರ್ಮಿಸಿದ ಕಾರ್ಮೋಡ
ಆವ ಕಾಲದಲಿ ಚಕ್ರ ನೋಡುವುದು ಹೊಂಡ

ಮೊರೆತದ ಜಲರಾಶಿ ಒಳನುಗ್ಗಲು
ಸೆಟೆದುಕೊಳ್ಳುತಿಹ ಬಾಗಿಲು
ಇಂಧನವು ಕೈ ಮುಗಿದು ಮಲಗುತಿರಲು
ಭೋರ್ಗರೆಯುತಿದ್ದ ಕಾರು ತಣ್ಣಗಾಗಲು
ಆಗೊಲೊಲ್ಲದು ಒಳೆಗೆಳೆದ ಉಸಿರು ಹೊರಗೆ ಬಿಡಲು

ಸೂಚನೆ:

೨೦೦೭ನೆಯ ಇಸವಿ ಜುಲೈ ತಿಂಗಳಿನಲಿ ಇಂತಹ ಸನ್ನಿವೇಶಗಳು ಮುಂಬಯಿಯಲ್ಲಿ ಸಂಭವಿಸಿ ಹಲವು ಮಂದಿ, ತಾವು ಪ್ರಯಾಣಿಸುತ್ತಿದ್ದ ಕಾರಿನೊಳಗೇ ಸಾವನ್ನಪ್ಪಿದರು.

Thursday 2 July, 2009

ಚಿತ್ರ ೧೦೯



ತವಿಶ್ರೀ:

ರಾಮು, ಪುಟ್ಟ, ಪುಟ್ಟಿ ಮತ್ತು ಕೃಷ್ಣ ಗೆಳೆಯರು. ಅದೊಂದು ಭಾನುವಾರ. ಒಮ್ಮೆ ರಾಮುವಿನ ತಂದೆ ಮನೆಯಲ್ಲಿರಲಿಲ್ಲ. ಕಛೇರಿಗೆ ಪ್ರತಿದಿನ ಒಯ್ಯುತ್ತಿದ್ದ ಬೈಸಿಕಲ್ಲನ್ನು ಮನೆಯಲ್ಲಿಯೇ ಬಿಟ್ಟು, ಸಂತೆಯಿಂದ ತರಕಾರಿ ತರಲು ಹೋಗಿದ್ದರು. ಎಂದಿನಂತೆ ಅಮ್ಮ ಊರ ಬಾವಿಯಿಂದ ಸಿಹಿನೀರನ್ನು ತರಲು ಹೋಗಿದ್ದಳು. ತುಂಟ ರಾಮು ತನ್ನ ತಮ್ಮ ಕೃಷ್ಣ ಮತ್ತು ಪಕ್ಕದ ಮನೆಯ ಪುಟ್ಟ ಪುಟ್ಟಿಯನ್ನು ಜೊತೆ ಮಾಡಿಕೊಂಡು ಮನೆಯ ಪಕ್ಕದಲ್ಲಿರುವ ಉದ್ಯಾನವನದಲ್ಲಿ ಸೈಕಲ್ ಕಲಿಸಲು ಕರೆದೊಯ್ದನು.

ರಾಮುವಿಗೆ ಸೈಕಲ್ ಸವಾರಿ ಮಾಡಲು ಬರುತ್ತಿತ್ತು. ಆದರೆ ಇನ್ನು ಮೂವರು ಚಿಣ್ಣರಿಗೆ ಅದು ತಿಳಿಯದು. ಬಹಳ ದಿನಗಳಿಂದ ’ಸೈಕಲ್ ಸವಾರಿ ಕಲಿಸಿಕೊಡೆಂದು’ ರಾಮುವನ್ನು ಪೀಡಿಸುತ್ತಿದ್ದವರಿಗೆ ಇಂದು ಸಕಾಲ ಒದಗಿತ್ತು. ಸ್ವತಂತ್ರ ಪಕ್ಷಿಯಂತೆ ರಾಮುವು ಉದ್ಯಾನವನವನ್ನು ಒಂದು ಸುತ್ತು ಹಾಕಿದ ನಂತರ ಒಂದೇ ಕೈನಲ್ಲಿ ಸೈಕಲಿನ ಕೈಪಿಡಿಯನ್ನು ಹಿಡಿದು ಇನ್ನೊಂದು ಸುತ್ತು ಹಾಕಿದ. ತದನಂತರ ಪುಟ್ಟಿಯನ್ನು ಹಿಂದೆ ಕುಳ್ಳಿರಿಸಿಕೊಂಡು ಒಂದು ಸುತ್ತು ಹಾಕಿ, ನಂತರದ ಸುತ್ತಿನಲ್ಲಿ ಮುಂದೆ ಪುಟ್ಟ ಮತ್ತು ಹಿಂದೆ ಪುಟ್ಟಿಯರನ್ನು ಸುತ್ತು ಹಾಕಿಸಿದ. ಇದೆಲ್ಲವನ್ನೂ ತದೇಕಚಿತ್ತದಿಂದ ನೋಡುತ್ತಿದ್ದ, ಸೈಕಲ್ ಸವಾರಿ ಬಾರದ ಕೃಷ್ಣ ತನಗೂ ಒಂದು ಸುತ್ತು ಕೊಡು ಎಂದ. ಅದಕ್ಕೆ ಉತ್ತರವಾಗಿ ರಾಮುವು, ಮೊದಲು ಹಿಂದೆ ಕುಳಿತು ಒಂದು ಸುತ್ತು ಹೋಗೋಣ ಬಾ, ನಂತರ ನೀನು ಕಲಿಯುವಂತೆ ಎಂದು ಹೇಳಿದ. ಸ್ವಲ್ಪ ಮೊಂಡು ಸ್ವಭಾವದ ಕೃಷ್ಣ ಅಷ್ಟು ಸುಲಭಕ್ಕೆ ಅಣ್ಣನಿಗೆ ಮಣಿಯಲಿಲ್ಲ. ತನಗೆ ಸವಾರಿ ಬರುವುದೆಂದೂ, ತಕ್ಷಣವೇ ಸೈಕಲನ್ನು ತನಗೆ ಕೊಡಬೇಕೆಂದೂ, ಇಲ್ಲದಿದ್ದರೆ ಅಪ್ಪ ಅಮ್ಮನಿಗೆ ಹೇಳಿ ತಕ್ಕ ಶಾಸ್ತಿ ಮಾಡಿಸುತ್ತೇನೆಂದೂ ಹೆದರಿಸಿದ. ಈ ಮಾತುಗಳಿಗೆ ಹೆದರಿದ ರಾಮುವು ಸೈಕಲನ್ನು ಕೃಷ್ಣನಿಗೆ ಕೊಟ್ಟುಬಿಟ್ಟನು. ಸುಲಭದಲ್ಲಿ ಮೊದಲ ಬಾರಿಗೆ ತನ್ನ ಕೈಗೆ ಸೈಕಲ್ ಸಿಕ್ಕಿದ ಸಂಭ್ರಮದಲ್ಲಿ ಹೀಗೆ ಹಾಡು ಹೇಳಿಕೊಂಡು ಸವಾರಿ ಮಾಡಲು ಅಣಿಯಾದ, ಪುಟ್ಟ ಕೃಷ್ಣ.

ಸೈಕಲೇರಿ ಹೋಗುವಾ ಒಂದು ಸುತ್ತು
ಬಾರೇ ಜುಟ್ಟು, ಬಾರೋ ಪುಟ್ಟು, ಬಾರೋ ಕಿಟ್ಟು
ಮನೆಯಲ್ಲಿಲ್ಲ ಅಮ್ಮ ಅಪ್ಪ
ಇನ್ಯಾರ ಭಯ ನಮಗಿಲ್ಲಪ್ಪ

ನಾನೇ ನಿಮಗೆಲ್ಲ ಲೀಡರ್
ಇಲ್ಲೀಗ ಸೈಕಲಿನ ಡೀಲರ್
ಹೇಳಿದಂತೆ ನೀವು ಕೇಳದಿರೋ
ನಿಂಗೊಂದ ಛಾನ್ಸು ಕೊಡುವಿನೆರೋ

ಹಾಡುತಾ ಆಡುತಾ ನಮ್ಮ ಪುಟ್ಟು
ಹಾಕಿದ ಉದ್ಯಾನವನವ ಒಂದು ಸುತ್ತು
ಹಿಂದಿನ ಚಕ್ರಕ್ಕೆ ಮುಳ್ಳೊಂದು ಚುಚ್ಚಿತ್ತು
ಠುಸ್ಸೆಂದು ಅದರೊಳ ಗಾಳಿ ಇಲ್ಲವಾಗಿತ್ತು

ಸೈಕಲಿಂದ ಕೆಳಗೆ ಬಿದ್ದ
ಆಸರೆ ಇಲ್ಲದೇ ಮೇಲೇಳೇದಾಗಿದ್ದ
ಪೆಡಲು ಬಾರಿನ ಮಧ್ಯೆ ಕಾಲು
ಅರಳಿದ್ದ ಮುಖ ಜೋಲು ಜೋಲು

ಏಳಲಾಗದೇ ನೋವೆಂದು ಒದರಿದ್ದ
ರಾಮುವಿನ ಆಸರೆಯಲಿ ಮನೆ ಸೇರಿದ್ದ
ಕಾಲಿನ ಮೂಳೆ ಮುರಿದಿತ್ತು
ನೋವಿನಿಂದ ಕಣ್ಣೀರು ಸುರಿದಿತ್ತು

ಅಪ್ಪ ಅಮ್ಮಗೆ ತಿಳಿಯದೇ ಸೈಕಲಿಗೆ ಬಂದದ್ದು ತಪ್ಪೆಂದರಿವಾಗಿತ್ತು.


ಸುಪ್ತದೀಪ್ತಿ :

ಬೇಸಿಗೆ ರಜೆಯಲಿ ಬಾಡಿಗೆ ಸೈಕಲು
ಜೊತೆಯಲಿ ನಡೆದರು ಬೀದಿಯ ಮಕ್ಕಳು
ಊರಿನ ತೋಪಲಿ ಹೊಸದೇ ಆಟ
ಅರಿಯದ ಕಿರಿಯಗೆ ಹಿರಿಯನ ಪಾಠ

ಕತ್ತರಿ ಕಾಲು ಹಾಕುತ ಏರು
ಪೆಡಲ್ ತುಳಿದು ಹಿಡಿ ಹ್ಯಾಂಡಲ್ ಬಾರು
ಹಾದಿಯ ಮೇಲೆ ಇರಬೇಕು ಗಮನ
ಕಲಿಕೆಯೇನಲ್ಲ ರಾಕೆಟ್ ವಿಜ್ಞಾನ

ನೀನೂ ಬಾರಮ್ಮ, ಮುಂದಿನ ಸುತ್ತಿಗೆ
ನಾವಿದ್ದೇವೆ ಭಯಬೇಡ, ಹತ್ತು ಮೆಲ್ಲಗೆ
ಎಲ್ಲರಿಗೂ ಇದೆ ಸಮಯಾವಕಾಶ
ಕಲಿಕೆಗೆ ಕೊಡುವನು ಸೈಕಲಂಗಡಿ ಪಾಷ