Wednesday 31 December, 2008

ಚಿತ್ರ ೮೫



ಸುನಾಥ:

ಹಳೆಯ ವರ್ಷದ ಇರುಳು ಚಳಿಯಲ್ಲಿ ಮುಗಿಯುತ್ತಿದೆ.
ಹೊಸ ವರ್ಷವು ಹೊಸ ಬೆಳಕನ್ನು ತರಲಿ.


ತವಿಶ್ರೀ:

ನಿಶ್ಶಕ್ತ ಮುಂಜಾವು

ಮುಂಜಾವಿನ ಮಬ್ಬುಗತ್ತಲು
ಮಂಜು ಕವಿದ ಬಿಳಿಪರದೆ
ಎದುರೇನೂ ಕಾಣದು
ಕಣ್ಣು ಉಜ್ಜಿ ಉಜ್ಜಿ ಹೆಜ್ಜೆ ಇರಿಸಬೇಕು

ಕಂದೀಲಿನ ಕಿರುಗಣ್ಣ ನೋಟದಾನ
ಅಬ್ಬೇಪಾರಿ ವಿದ್ಯುತ್ತಿನ
ಯುಕ್ತಿಯಿಲ್ಲದ ಶಕ್ತಿಯ ಕಿರುದಾನ
ನೋಡುಗರಿಗೆ ದಾನದಷ್ಟೇ ದೃಷ್ಟಿ

ಶತಪಥಗಳಿಂದಾಚೆ ಕಾರ್ಗತ್ತಲು
ಎದುರಾದುದಕೆ ಚೇತನದ ಢಿಕ್ಕಿ
ಕಣ್ಣಿದ್ದೂ ಕುರುಡುತನಕೆ ಸಿಕ್ಕಿ
ರೆಕ್ಕೆಯಿದ್ದೂ ಹಾರಲಾರದಿದು ಹಕ್ಕಿ

ಗಾಡಿಯೇರಿರುವ
ಸಾಮಾನು ಸರಿರಾತ್ರಿವರೆವಿಗೆ
ಗಿರಾಕಿಗಳ ಮನ ಒಲಿಸಲು ಪ್ರಯತ್ನಿಸಿ
ಸುಸ್ತಾಗಿ
ಹೊದ್ದು ಮಲಗಿದೆ
ಛಳಿಗೆ ಅಲ್ಲಾಡಲು ಆಗದಾಗಿದೆ

ಕ್ಷಣ ಮಾತ್ರದಲಿ
ನೇಸರನ ಆಗಮನ
ಯುಕ್ತಿಯೊಡಗೂಡಿದ ಶಕ್ತಿಯ ವರದಾನ
ಮಂಜಿನ ಪಲಾಯನ
ನಿಶ್ಶಕ್ತರಿಗೂ ಶಕ್ತಿಯ ಫಲಪ್ರದಾನ

ವಿದ್ಯುತ್ತಿಗಿಹುದು ನೇಸರನ ಶಕ್ತಿ
ಆದರಿಲ್ಲ ಆತನ ಯುಕ್ತಿ
ಅಂಧಕಾರ ಜಗಕೆ ಕೊಡಬಲ್ಲ ಮುಕ್ತಿ

ಕಗ್ಗತ್ತಲು ತುಂಬಿರುವ
ಹೊರಗಣ್ಣ ತೆರೆದರೇನು
ಮುಚ್ಚಿದರೇನು
ಅಜ್ಞಾನದ ಮಂಜಿನಿಂದ
ಏನೂ ಕಾಣದು - ಅರಿವಾಗದು
ಪ್ರಕೃತಿ ದೈವ ನೇಸರನಿಂದಲ್ಲವೇ
ಒಳಗಣ್ಣು ತೆರೆವುದು?

ನೇಸರನ ನಂಬು
ಒಳಗಣ್ಣ ತೆರೆ


ಮಾಗಿಯ ಚಳಿ ಮಾಯುತ್ತಿದ್ದಂತೆ ಸಂಭ್ರಮದ ಸಂಕ್ರಾಂತಿಯ ಎದುರುಗೊಳ್ಳುವಿಕೆ

Wednesday 24 December, 2008

ಚಿತ್ರ ೮೪



ತವಿಶ್ರೀ:

ಬಂಜೆ

ಮಾನವ:
ಎಷ್ಟು ಮೇಲೆ ದೃಷ್ಟಿ ಹರಿಸಿದರೇನಂತೆ
ನೀ ಮೇಲ ಹೋಗಲಾರೆ,
ಬೆಳೆಯಲಾರೆ, ಟಿಸಿಲೊಡೆಯಲಾರೆ
ಬದುಕ ನೀಡಲಾರೆ
ನೀನೊಂದು ಬಂಜೆ
ಆದರೂ ಯಾರಿಗೂ ಅಂಜೆ
ಉಗ್ರವಾದ, ಭೂಕಂಪ ನಿಸರ್ಗ ಕೋಪ ಎಲ್ಲವನ್ನೂ ಸಹಿಸೆ
ಬಂಜೆಯ ಪಟ್ಟದ ಮುಂದೆ ಅವೆಲ್ಲ ತೃಣಮಾತ್ರ

ಮರದ ಅಳಲು:

ಇನಿತು ಕಾಲ ನಿನ್ನ ಸಲುಹಿದುದ ಮರೆತೆಯಾ?
ಅಂದು ಅನ್ನ ಉಣಿಸಲು
ಎನ್ನ ಹೊಗಳಿ ಅಟ್ಟಕೇರಿಸಿದೆ
ನಾ ದೇವ ಸಮಾನ ಎಂದುಲಿದೆ
ಹಿಂದಿನಿಂದಲೇ ಎನ್ನ ಕರುಳ ಬಳ್ಳಿಯ ಕಡಿದೆ
ಅಂಗೋಂಪಾಂಗಗಳ ಕತ್ತರಿಸಿ
ತತ್ತರಿಸುವಂತಾಗಿಸಿದೆ
ಎನ್ನುಸಿರ ನಿಲ್ಲಿಸಿದೆ

ಮಾನವ:

ಕಡು ಕಷ್ಟವೇ ನಿನ್ನಾಹಾರ
ಸುಖವೆಂದರೇನೆಂದೇ ನೀ ತಿಳಿಯೇ
ಈ ಭೂಮಿಗೆ ನೀ ಭಾರ
ಎಷ್ಟು ನೇಸರನ ಶಕ್ತಿ
ಉಂಡರೇನಂತೆ
ಎಷ್ಟು ನೀರು ಗೊಬ್ಬರ
ಉಣಿಸಿದರೇನಂತೆ
ಉರುವಲಿಗೆ ಮಾತ್ರ ಬರುವ
ನೀನೊಂದು ಬಂಜೆ

ಮರದ ಅಳಲು:

ಯಾಕಿಂಥ ಬೆರಕಿತನ ನಿನಗೆ
ನಿನ್ನ ಸುಖದೆಡೆಗೇ ಆಲೋಚನೆ
ನಾನಿರುವುದು ಕೇವಲ ಯಾಚನೆಗೆಯೇ?
ಇಲ್ಲಿಯವರೆವಿಗೆ ನಾ ಜಗವ
ಸಲುಹಿದುದ ಮರೆಯುವುದಾ?
ಎನ್ನ ಈ ಸ್ಥಿತಿಗೆ ಯಾರು
ಕಾರಣ? ನೀನಲ್ಲವೇ?
ನಿನ್ನ ಕೃತ್ರಿಮತನಕ್ಕೆ
ಎನ್ನ ಹೀಗಳೆವುದು ಸರಿಯೇ!

Wednesday 17 December, 2008

ಚಿತ್ರ ೮೩




ತವಿಶ್ರೀ:

ಹಾರೋಣ ತೇಲೋಣ

ಆತ:
ಹಿಡಿಯಬಲ್ಲೆಯಾ ನೀ ಎನ್ನ
ಜೂಟ್ ಜೂಟ್ ಜೂಟ್
ಸನಿಹ ಬರಲಾರೆ ನೀ ಎನ್ನ
ಹಿಡಿದಿಹೆನು ನಾ ಪ್ಯಾರಾಚೂಟ್

ಆಕೆ:
ಹಾರಿ ಏರಿ ನೀ ಬಂದೆ
ಓಡುತಿಹೆ ನೀ ಎನ್ನ ಮುಂದೆ
ಬಾರದಿರಲೇ ನಾ ನಿನ್ನ ಹಿಂದೆ
ಎನ್ನ ಇರಿಸಿಕೋ ನಿನ್ನ ಮುಂದೆ

ಆತ:
ನಿನಗೆ ಗೊತ್ತೇ ಇದರ ಫೀಲಿಂಗು
ಹೆಸರಿಗಿದು ಪ್ಯಾರಾಸೈಲಿಂಗು
ಆಗಸದಲಿ ಸಡ್ಡು ಹೊಡೆಯುವುದೊಂದು ಥ್ರಿಲ್ಲಿಂಗು
ಪರಲೋಕದಲಿ ತೇಲಿಸುವುದು ಇದರ ಗುಂಗು

ಆಕೆ:
ನಿನ್ನ ಮನದಿಂಗಿತ ನನಗೂ ತಿಳಿವುದು
ನಾನೂ ನಿನ್ನೊಂದಿಗೆ ತೇಲಬಹುದು
ಕಾಮನಬಿಲ್ಲಿನ ಕಮಾನು ಏರುವಾ
ದಿಕ್ಕಿಗಂತವಿರುವುದ ತೋರುವಾ

Wednesday 10 December, 2008

ಚಿತ್ರ ೮೨



*ಎಸ್ ಕೆ ಕುಮಾರಸ್ವಾಮಿ ಅವರು ಕಳುಹಿಸಿದ ಚಿತ್ರ

ತವಿಶ್ರೀ :

ಸಮಜೋಡಿ
ಪುಟ್ಟ ಪುಟ್ಟ ಹೆಜ್ಜೆಯನಿಡು
ನಿನ್ನ ಕೈಗಳನು ನನ್ನಲಿಡು
ಅಲ್ಲಿ ದೂರಕೆ ಹೋಗುವಾ
ಹೊಟ್ಟೆ ಹಸಿವವರೆವಿಗೆ ಆಡುವಾ

ಎನಗಿಲ್ಲ ಜೊತೆಗೆ ಯಾರೂ
ನಿನ್ನ ಜೊತೆಯಾಗುವೆನು ಬಾರೋ
ಇಬ್ಬರಿಗೂ ತಣ್ಣಗಿಹ ನೆತ್ತರು
ಕ್ಷಣದಲಿ ಮೂಡುವುದು ಮುನಿಸು

ಹಣೆಗೆ ಕೆನ್ನೆಗೆ ಇಡುವರು ದೃಷ್ಟಿ ಬೊಟ್ಟು
ಎಲ್ಲ ನಿನ್ನ ಮುದ್ದಾಡುವರು
ಈ ಮನೆಗೆ ನಾನೇ ದೃಷ್ಟಿ ಬೊಟ್ಟು
ಎನ್ನ ನೋಡಿ ನಿಟ್ಟುಸಿರನಿಡುವರು


ಸೂಟು ಬೂಟು ಹಾಕಿ ಹಾಕಿ ಸುಸ್ತಾಗಿದೆಯಂತೆ
ಒಂದು ಜೀವನದ ಏರಿನಲ್ಲಿ ಇನ್ನೊಂದು ಇಳಿವಿನಲ್ಲಿ
ಮನೋಸ್ಥಿತಿ ಒಂದೇ
ಈಗ ಹೇಳಿದ್ದು ಇನ್ನೊಂದರೆಕ್ಷಣದಲ್ಲಿ ಮರೆವು

ಗಾಳಿಗೆ ಹೊಯ್ದಾಡುವಂತಿರುವ ಹೂವಿನಂತಹ ತಲೆ
ಬೆಳ್ಳಿಯಂತೆ ಫಳಫಳಿಸುವ ತಲೆಗೂದಲು
ಇಬ್ಬರಲೂ ಕಾಣುವರು ಬೊಚ್ಚು ಬಾಯಿ
ಇಬ್ಬರೂ ತೂಗುವರೇ ತಕ್ಕಡಿಯಲಿ ಒಂದೇ ಸಮ

ಇಲ್ಲಿ ನೋಡಿ ಇನ್ನೊಂದು ಅಂತಹದೇ ನಡುಗುವ ತಲೆ
ಗೆಜ್ಜೆಯ ನಾದದಿ ಮೂಡುವುದು ಘಲ ಘಲ ಸದ್ದು
ಬಾಯಲಿ ನವಲುತಿರುವ ಪೇಪರಿನ ಚೂರು
ತಲೆ ತುಂಬಾ ಮಿರಮಿರ ಹೊಳೆಯುತಿರುವ ಕಪ್ಪನೆ ಕೇಶರಾಶಿ

ಕೈ ಬಾಯಿ ಸನ್ನೆಯಲೇ ಇಬ್ಬರದೂ ಸಂವಾದ
ಇಬ್ಬರಿಗೂ ಅಕ್ಕ ಪಕ್ಕದವರ ಅರಿವೇ ಇಲ್ಲ
ಅರೆಮನಸ್ಕರಾಗಿ ಒಂದೆಡೆ ನಿಲ್ಲದ ಮನ
ಇವರ ಮನ ಹಿಡಿದಿಡುವುದೊಂದೇ ಆದ ಗಾನ

ಅರುವತ್ತರ ಅರುಳು ಮರುಳಿನ ಅಜ್ಜನದು ಮಗುವಿನ ಮನಸು
ಇಬ್ಬರಿಗೂ ಈಗ ಹೇಳಿದ್ದು ಮರುಘಳಿಗೆಯಲಿ ಮರೆವು
ಒಬ್ಬರದು ಸುಕ್ಕುಗಟ್ಟಿಹ ಚರ್ಮ, ಉಡುಗುತ್ತಿರುವ ಚೈತನ್ಯ
ಇನ್ನೊಂದರದು ಕೋಮಲ ತೊಗಲು, ಪುಟಿದೇಳುತಿಹದು ಅನನ್ಯ

Tuesday 2 December, 2008

ಚಿತ್ರ ೮೧



















ಜೋಗಿ:
ಕೊಳಲೇ
ಕೊಳದಿರಲೇ


ತವಿಶ್ರೀ:
ಜಾತ್ರೆ
ಅಂದಂತೆ ಬರಗೂರಲಿ ಪುಟ್ಟ ಸಂತೆ
ಅಡುಗೆಗೆ ಬೇಕು ತರಕಾರಿಯ ಕಂತೆ

ಅಪ್ಪನಿಗೆ ಅಮ್ಮನ ಅಣತಿಯಂತೆ
ಸಹಾಯಿಸಲು ನಾನೂ ಹೋಗಬೇಕಂತೆ

ಅಪ್ಪ ತರಕಾರಿಯ ಆರಿಸುತಿರಲು ಅತ್ತ
ಪುಟ್ಟನ ಕಣ್ಣು ಜಾತ್ರೆಯ ಬಣ್ಣಗಳ ಸುತ್ತ
ಬಾಯಿ ನೀರೂರಿಸುವ ಸಿಹಿತಿಂಡಿಗಳು
ಮನದಲೇನೇನೋ ಆಮಿಷಗಳು

ಬರಗೂರ ಜಾತ್ರೆಯಲಿ ಪಡಪೋಶಿ ಗುಂಡ
ಬೆಂಡು ಬತ್ತಾಸು ಆಟಿಕೆಗಳ ರಾಶಿಯ ಕಂಡ
ಎಷ್ಟೊಂದು ತುತ್ತೂರಿಗಳ ನೋಡಿ
ತೆರೆಯಿತು ಅವನ ಪುಟ್ಟ ಬಾಯಿ

ತುತ್ತೂರಿ ಮಾರುವನ ನೋಡಿದ ಕಿಟ್ಟ
ಹಿರಿ ಹಿರಿ ಹಿಗ್ಗುತಿಹ ಪುಟ್ಟ
ಪೀಪಿ ಬಲೂನು ಆಟಿಕೆಗಳ ನೋಡಿ
ಮುಚ್ಚದಾಯಿತು ಪುಟ್ಟನ ಬಾಯಿ

ಇತ್ತಂತೆ ತೆರೆದ ಬಾಯಿ ತೆರೆದಂತೆ
ಕಾಣದ ಸ್ವರ್ಗವ ಕಂಡನಂತೆ
ಬಾಯೊಳೊಂದು ನೊಣವ ಸೇರಿ
ಮತ್ತೆ ಜಗಕೆ ಇಳಿದನೀ ಪೋರ


Wednesday 26 November, 2008

ಚಿತ್ರ ೮೦

ತಿರುಕ ಹೇಳುತ್ತಾರೆ:


ಮನೆಯ ಬಾಗಿಲಿಗೆ ಬಂದವರು
ಒಳಗೆ ಬರಲಾರದವರು
ಅದೇಕೆ ಹಾಗೆ ನಿಂತಿಹರೋ
ಬನ್ನಿರೈ ಮಿತ್ರರೇ ಬನ್ನಿರೈ

ಅದೇನೋ ಸಂಶಯ
ಎಲ್ಲಿಲ್ಲದ ಭಯ
ಎಮ್ಮಲ್ಲಿಲ್ಲ ಬೆಳಕು
ಎಲ್ಲೆಲ್ಲಿ ನೋಡಿದರೂ ಕೊಳಕು

ಒಳಗಿರುವುದೇನೋ
ಸಿಂಹವೋ ನರಭಕ್ಷಕನೋ
ನಾನೊಂದು ಹಸುಳೆ
ಹೆಜ್ಜೆಯ ಸಪ್ಪಳಕೂ ಹೆದರುವವಳೇ

ಒಳ ಬರಲು ಹಾದಿ ಹದ ಮಾಡಿಹುದು
ಮಾಗಿರುವ ಹಣ್ಣು ನಿಮ್ಮ ಹಡಪದಲ್ಲಿಹುದು
ಒಳಗೆ ಸೊಗಸಾದ ಜೇನಿಹುದು
ಸೇರಿಸಿ ಮಿಶ್ರಿಸಿ ತಿನ್ನುವ ಬನ್ನಿರೈ

ನನ್ನ ಹೆಸರಂತೆ ಮೊಲ
ಪ್ರೀತಿಯಿಂದ ಅಮ್ಮ ಕರೆವುದು ಕಮಲ
ಕೊಡುವೆಯಾದರೆ ನೀನೊಂದು ಗಜ್ಜರಿ
ತೋರುವೆ ಒಳಬರುವ ದಾರಿ

ಹೆದರದಿರಿ ಬೆದರದಿರಿ
ಒಳಬಂದು ಬೆದರಿಸದಿರಿ
ನೀವು ನನ್ನವರು ನಾನು ನಿನ್ನವಳು
ಬನ್ನಿರೈ ಒಳ ಬನ್ನಿರೈ ಹೆದರದೇ ಬನ್ನಿರೈ

Thursday 20 November, 2008

ಚಿತ್ರ ೭೯



ತಿರುಕ ಅವರ ಕವನ:

ಅರ್ಜುನನ ರಥದ ಮೇಲೆ
ಕೃಷ್ಣನ ಸಾರಥ್ಯದೊಂದಿಗೆ
ಅನಾದಿ ಕಾಲದಿಂದ
ಎಂದೂ ಇಳಿಯಲಿಲ್ಲ
ಇಳಿಯುವುದಿಲ್ಲ
ಹಾರದೇ ಇರುವುದಿಲ್ಲ
ಆಗಿರುವೆ ರಾಷ್ಟ್ರದ ಲಾಂಛನ
ತ್ಯಾಗ ಬಲಿದಾನಗಳ ಸಂಕೇತ

ಏರುತಿಹುದು
ಹಾರುತಿಹುದು
ಭಗವಾ ಧ್ವಜ
ಮಂದಿರದ ಸಂಕೇತ
ಜನಜೀವನದ ದ್ಯೋತಕ
ಉದ್ದಗಲ ಅಲೆಯುತ್ತಿರುವ
ಅಳೆಯುತ್ತಿರುವ ಸಮುದ್ರಕೆ
ಮಿತಿಯ ತೋರುತಿಹೆ

ಒಂದೆಡೆ ಕಮರಿ,
ಕಬಳಿಸಲು ಸಂಚು ಹಾಕುತಿಹ ಸಮುದ್ರ
ಅದರ ಭೋರ್ಗರೆತ
ಆಸರೆಗೆ ಬಂಡೆಯೊಂದಿಹುದು
ಅದೊಂದುದಿನ ಕರಗಬಹುದು
ಇನ್ನೊಂದೆಡೆ ಭಕ್ತರ ಹೊಳೆ
ಎನ್ನ ಮೇಲಿನ ಅಪಾರ ಭಕ್ತಿ
ಅವರ ಮೇಲೆ ಎನಗಿಹುದು ನಿಸ್ಸಂದೇಹ ನಂಬುಗೆ
ಸಮುದ್ರದಿಂದ ಕಾಪಾಡುವುದು
ಭಗವಾಧ್ವಜ ರಕ್ಷತಿ ರಕ್ಷಿತಃ

ರವಿಯು ಇಳಿದರೇನು
ಏರಿದರೇನು
ಧ್ವಜ ಹಾರುತಲೇ ಇರುವುದು
ಜನರಲಿ ನಂಬುಗೆಯ ಮೂಡಿಸುವುದು
ಭಗವಾಧ್ವಜ ರಕ್ಷತಿ ರಕ್ಷಿತಃ

Wednesday 12 November, 2008

ಚಿತ್ರ ೭೮



ತಿರುಕ ಅವರ ಕವನ :

ನಿಸರ್ಗ ಶಕ್ತಿ


ನೀರ ನೋಡಿದೊಡೆ ಮನದಲಿ ಕುಣಿದಾಟ
ಮಿತಿ ಇಲ್ಲದ ಸಮುದ್ರದಲಿ ನೊರೆಯಾಟ
ಅಂಕೆ ಶಂಕೆಯಿಲ್ಲದ ಮೆರೆದಾಟ
ಹೆತ್ತವರ ಒಡಲಿಗೆ ನೀಡುವುದು ಪರದಾಟ

ಕಡಲ ತೀರ ಸೇರಲು
ಮಕ್ಕಳ ಮನದಲಿ ತವಕ
ಕಡಲ ತೀರದಲಿ ನೀರ ನೊರೆ
ಬದಿಯ ಪ್ರಪಂಚವ ಮರೆ

ಹೆಜ್ಜೆ ಮುಂದಾದೊಡೆ ಪೂರ್ವಜರ ನೆನಪು
ತನುವಾಗುವುದು ಕಡಿವಾಣವಿಲ್ಲದ ಹುಚ್ಚು ಕುದುರೆ
ಕಾಲ ತಳದಿ ಉಸುಕಿನ ಕೊರೆತ
ಮುಂದಿಹುದು ಅಲೆಗಳ ಭೋರ್ಗರೆತ

ಕೈ ಬೀಸಿ ಕರೆಯುತಿಹ ಕಡಲ ನೋಡಿ
ಸುಮ್ಮನಿರಲಾದೀತೇ?
ಮೊದಲಾಯ್ತು ನೀರಿನೊಡನೆ ಚೆಲ್ಲಾಟ
ತುಂಟ ಮಿತ್ರರೊಡಗೂಡಿ ಚೆಂಡಾಟ

ಅಲೆಯೊಡನೆ ಚೆಂಡಿನ ಸೆಳೆದಾಟ
ಮರಳಿ ತರಲು ಮಕ್ಕಳ ಪರದಾಟ
ದೂರ ದೂರಕೆ ನೀರಿನ ಎಳೆದಾಟ
ನಿಸರ್ಗ ದೈವದ ಶಕ್ತಿಯ ಮೆರೆದಾಟ

ಒಂದರೆಚಣದ ಆನಂದ
ಆನಂದದಿ ಮೇಲೇರಿ ಪರಮಾನಂದ
ಅಣು ಆತ್ಮವು ನಿಸರ್ಗ ಪರಮಾತ್ಮನೆಡೆಗೆ
ಮಿಲಿತವಾಗುವುದೆಂತಹ ದುರ್ದೈವ! :D :(

Friday 7 November, 2008

ಚಿತ್ರ ೭೭



















ಚಿತ್ರ ೭೭ ಕ್ಕೆ ಬರೆದ ಕವನಗಳು

ಹರೀಶ ಮಾಂಬಾಡಿ ಅವರ ಕವನ -

ಹಿಂದಿರುಗಿ ನೋಡದೆ
ಸಾಗು ಮುಂದಕೆ..
ಕಳೆದು ಹೋದದ್ದಕ್ಕೆ
ಚಿಂತಿಸಿ ಫಲವೇನು?
ಹೆಜ್ಜೆಯಿಡುವಾಗ
ಜಾಗ್ರತೆ..! ಹಗ್ಗ
ತುಂಡಾಗಿ ಬಿದ್ದರೆ
ಯಾರೂ ರಕ್ಷಣೆಗಿಲ್ಲ
ಏಕೆಂದರೆ ನೀನ್ಯಾರಿಗೂ ಆಗಲ್ಲ
ಹುಲು ಮಾನವ


ತಿರುಕ ಅವರ ಕವನ-
ಮುಗಿಯದ ಓಟ

ಹಿಂತಿರುಗಿ ನೋಡದೆಯೇ ಮೇಲೆ ಮೇಲೆ ಏರುವಿಕೆ
ಹಿಂದಿನದ ನೆನೆಯದೇ ಮುಂದಿನದ ನಿರೀಕ್ಷಿಸದೇ
ಹಾದಿ ಸವೆಸುವಿಕೆ,
ತುಂಬಿಹುದು ಮನದಲಿ ಹಂಬಲಿಕೆ -
ಹಾದಿಯಲಿ ಇಡುವ ಹೆಜ್ಜೆ
ಗಳೆಲ್ಲವುಗಳ ಛಾಪು ಮೂಡಿಸುವಿಕೆ
ಪತಾಕೆ ಹಾರಿಸುವ ಬಯಕೆ ...

ಎಲ್ಲರೂ ಇಚ್ಛಿಸುವುದು
ನಿರಾಯಾಸದ ಏರುವಿಕೆ
ತುತ್ತ ತುದಿಯಲಿ ಚಿರಂತನ ನಿಲುವ ಬಯಕೆ
ಕಣ್ಬಿಡುತಿಹ ಅರುಣಗೆ ಸಡ್ಡು ಹೊಡೆಯಲು
ಪೋರನ ಓಟ

ದಣಿವು ಕಡಿಮೆ ಮಾಡಲು ಸೋಪಾನ
ಇಕ್ಕೆಲಗಳಲಿರುವ ಕಮರಿಯಲಿ
ಬೀಳದಂತೆ ತಡೆ ಗೋಡೆ
ಏರುವಾಗ ಆಸರಿಸಲು ಕೈ ಪಿಡಿ
ಪೋರನಿಗೆ ಅದರವಶ್ಯಕತೆಯಿಲ್ಲ :)

ಬಯಕೆ ಈಡೇರುವುದಾ?
ಕಾಣುತಿಹುದೆಲ್ಲವೂ ಸುಳ್ಳಾ?
ಕಾಣದ ತುತ್ತ ತುದಿ ಕಂಡವರಿಹರಾ?
ಕಂಡವರು ಮತ್ತೆ ಕೆಳಗೆ ಬಂದಿಹರಾ?
ಹೋದವರು ಮತ್ತೆ ಬರುವರಾ? ...

ಕಳೆದು ಹೋದುದ ಮತ್ತೆ ಪಡೆಯಬಹುದಾ?
ಮುಂದಾಗುವುದ ಈಗಲೇ ಕಾಣಬಹುದಾ? ...


ಕುಮಾರ ಸ್ವಾಮಿ ಕಡಾಕೊಳ್ಳ ಅವರ ಕವನ -
ದೂರದೊಂದು ತೀರ

ಒಂದು ಎರಡು ಮೂರು
ಎಶ್ಟು ಮೆಟ್ಟಿಲು
ಸೇರಲು ತೀರ?
ಬಿಡಿಸಿದಶ್ಟು ಬಿಚ್ಚುವ
ಕನಸಿನ ಬಯಲು
ಸೋಜಿಗ ಅಹುದಲ್ಲವೆ
ಬದುಕಿನ ಆಳ

ಹತ್ತಿ ಹೋಗುವೆನೆ
ಬೆದರಿ ಬಳಲದೆ
ಬದುಕಿನ ಆ ತೀರಕೆ
ಕಾಣುವೆನೆ ಕಂಡ
ನೂರು ಕನಸುಗಳ
ನುಣುಪು ಬಣ್ಣದ
ಬೆಚ್ಚನೆಯ ನೋಟವನಲ್ಲಿ
ಇಚ್ಚೆಯು ಬಂದಾಗ?

ಬೆಚ್ಚನೆಯ ಹೊದಿಕೆ
ನೊಚ್ಚನೆ ಇರಲು ಅಟ್ಟೆ
ಇದ್ದರು ಏನೆಂತೆ
ಬದುಕಿನ ಮುಂದೆ?
ಎದೆಗಾರಿಕೆಯೊಂದು
ಎದೆ ಆಳದಲ್ಲಿ
ಎದರಿಸಲು ಬೇಕಲ್ಲವೆ
ಬರುವ ಬವಣೆಗಳನು
ಇದುರುಗೊಳ್ಳಲು

ಆ ತೀರ ಬಲ್ಲವರಿಲ್ಲ
ಕೇಳಿ ತಿಳಿಗೊಳ್ಳಲು
ತಿಳಿಯಲೋದವರು
ಮರಳಿ ಬಂದಿಲ್ಲ
ತಿಳಿದು ಇಲ್ಲಿಯ
ದಿಟ ಇರುವಿಕೆಯನ್ನು
ಮುಟ್ಟುವೆನು ಅರಿಯಲು
ಬದುಕಿನಾಚೆಯ ತೀರವನು


ಕುಕೂಊ.....
ಪುಣೆ

Wednesday 29 October, 2008

ಚಿತ್ರ ೭೬





ತಿರುಕ ಅವರ ಕವನ:
ಎರಡು ದೀಪಗಳು

ನಾವು ಹಚ್ಚಿಟ್ಟ ಹಾಗೆ ಉರಿವ
ಉರಿದು, ಬೆಳಗುವ ಈ ದೀಪ
ಆ ದೀಪ ಪ್ರದೀಪ - ಸಂದೀಪ
ತನ್ನತನವ ಬದಿಗೊತ್ತಿ
ಜಗವ ಬೆಳಗಿಸುವ ಈ ದೀಪಗಳು

ಒಂದಕೆ ಬೆಂಕಿಯೆಂಬ ಹೊತ್ತಿಸುವಿಕೆ
ಇನ್ನೊಂದಕೆ ಆತ್ಮವೆಂಬ ಜಾಗೃತಗೊಳಿಸುವಿಕೆ
ಇದು ಕ್ಷಣಗಳಲಿ ನಂದುವ ದೀಪ
ಅದು ಯುಗಗಳವರೆವಿಗೆ ತೋರುವ ದೀಪ

ವಯಸ್ಸು ಕಳೆದುಕೊಳ್ಳುತಿಹ ಈ ದೀಪ
ವಯಸ್ಸು ತುಂಬಿಕೊಳ್ಳುತಿಹ ಆ ತೇಜೋದೀಪ
ತೋರಿದ ಕಡೆಗೆ ಹರಿವ ನೋಟಗಳು
ತನ್ನತನವ ತೋರ್ಪಡದಿಹ ಈ ದೀಪ
ದಿಗಂತಕೂ ಅಂತ ತೋರುವ
ಕಾತರ, ನಿರೀಕ್ಷೆ ಹೊಂದಿರುವ ಆ ದೀಪ

ಪುಟ್ಟ ದೀಪ
ಬೆಳಗುತಿಹುದು
ದೊಡ್ಡ ಕೋಣೆ
ಬೆಳಗಬಲ್ಲದು ದೊಡ್ಡ ಜಗತ್ತು
ತನ್ನ ಮನೆಯ ಕತ್ತಲಲಿಟ್ಟು
ಊರೆಲ್ಲಾ ಬೆಳಗುವುದು
ಅವುಗಳ ನಂದದಂತೆ ಕಾಪಾಡುವ

ಜಗದ ಒಳಿತಿಗಾಗಿ, ಆ ಸರ್ವಶಕ್ತನಲಿ ಬೇಡುವೆ - ಎಂದಿಗೂ ದೀಪಗಳು ನಂದದಿರಲಿ
ಹೊಳೆಯುತ, ಹೊಳೆಸುತ, ನಳಿಸುತ ದೇದೀಪ್ಯಮಾನವಾಗಿರಲಿ

ಈ ದೀಪ - ಮೋಂಬತ್ತಿ
ಆ ದೀಪ - ಪುಟ್ಟ ಪೋರ


ಕುಮಾರ ಸ್ವಾಮಿ ಕಡಾಕೊಳ್ಳ ಅವರ ಕವನ -


ಬೆಳಗುಂಟು ಕತ್ತೆಲೆಯ ಒಡಲಾಳದಿ
ಕತ್ತಲೆಯುಂಟು ಬೆಳಗಿನ ಬುಡದಲ್ಲಿ
ನಗುವುಂಟು ನೋವಿನಾಟದಲೂ
ಏನುಂಟು ಏನಿಲ್ಲ ಬದುಕಲ್ಲಿ ತಿಳಿಯಲಾಗದು

ಹಸಿವುಂಟು ಹಂಬಲಿಸಿ ಕೂಳು ಹುಡುಕಲು
ನೋವುಂಟು ಕಳೆದ ನಲಿವನುಡುಕಿಸಲು
ಅಳುವುಂಟು ನಗುವಿನ ದಾರಿ ತೋರಲು
ಬವಣೆಯುಂಟು ಬದುಕಿನ ಹೆದ್ದಾರಿಯಾಗಲು

ಬೆಳಗಿದೆ ನನಗಿರುವ ಕತ್ತಲಾದಿಯಲ್ಲಿ
ನಡೆವೆ ದೂರ ದೂರಕೆ ಅಷ್ಟೆ ಸಾಕಲ್ಲವೆ?
ಕಣ್ಣಲ್ಲಿ ಗೆಲುವುಂಟು ಕಾಣುವ ಕಾತುರ ಉಂಟು
ಕಾದಾಡುವೆ ಬದುಕಿನಲಿ ಗುರಿಯ ಕಾಣಲು

ಬವಣೆಯಲ್ಲೂ ಬಳಲಿಕೆಯಲ್ಲೂ ಕಾಣುವೆ ಬೆಳಕನು
ಕಿರಿದಾದರೇನು ಹಿರಿದಾದರೇನು ದಾರಿತೋರದೇನು?
ಹುಟ್ಟಿರುವೆ ಗೆಲುವಲು, ಇದುವೆ ನಾಕಾಣುವೆ
ಗೆಲುವೆಂದು ನನ್ನದು ಈ ಬೆಳಕೇ ಮುನ್ನಡೆಸುವುದು

Wednesday 22 October, 2008

ಚಿತ್ರ ೭೫



















ತವಿಶ್ರೀ ಅವರ ಕವನ:

ಜೀವನವಿಷ್ಟೇ!

ಇದೇ ಕೈಲಾಸ ಇದೇ ವೈಕುಂಠ
ಇಲ್ಲೇ ಸ್ವರ್ಗ ಇಲ್ಲೆ ನರಕ

ಜೀವನವಿಷ್ಟೇ!

ಏಳು, ತೊಳೆ, ಸಾರಿಸು, ಬಾಡಿಸು
ಇಟ್ಟು ಉರ್ಳಿ ಸಾರು
ಅಬ್ಬಕ್ಕೆ ಮಾತ್ರ ಬಾಡು

ಒಲದಾಗೆ ಗೇಯುತಿಹರು ಮಗ ಅವರು
ಸಿಲ್ವಾರ ತಟ್ಟೆ ಪಾತ್ರೆ (ಅಲ್ಯೂಮಿನಿಯಮ್)
ತಲೆಗೇರಿಸಿದೆ ಸಿಂಬಿ
ಒತ್ತು ಉಣ್ಣಕ್ಕಿಕ್ಕಲು ನಾ ಒಂಟೆ

ಹಾದಿಯಲಿ ಹಳ್ಳ ಕೊಳ್ಳ
ಅವುಗಳ ಅರಿವಿಲ್ಲದೇ ನಡೆದಿಹ ನಾ ಮಳ್ಳ
ತುಂಬಿಸಬೇಕಲ್ಲ ಬಳ್ಳ
ತೂರಬೇಕಲ್ಲ ಜೊಳ್ಳ
ನಾವೆಂದಿಗೂ ಆಗೆವು ಕಳ್ಳ

ಎತ್ತುಗಳಿಗೆ ಉಣಿಸು ನೀರು ಕಟ್ಟು
ಮನೆಗೆ ಬಂದು ಎರಡಗುಳು ಗತುಕು
ಹಸುವಿಗೆ ತಿನ್ನಲು ಹುಲ್ಲು, ಬೂಸಾ
ಪಸೆಯಾರಿಸಲು ಬಾನಿಗೆ ನೀರು

ಸಂಜೆ ಬರುವ ಎತ್ತುಗಳಿಗಾಗಿ
ಕೊಟ್ಟಿಗೆಯಲಿ ಎಲ್ಲ ಒತ್ತಟ್ಟು
ಗಂಗೆ ಕೊಡುವ ಹಾಲು ಕರೆ
ಗಂಡ ಮಕ್ಕಳ ಆರೈಕೆ

ಸವೆಸಿದ್ದೇ ಹಾದಿ
ಇಟ್ಟದ್ದೇ ಹೆಜ್ಜೆ
ಆಲಿಸಿದ್ದೇ ಗೆಜ್ಜೆ

ಬಸ್ವೇಸರ ಜಾತ್ರೆಯಲಿ
ಆತ ಕೊಡಿಸಿದ ಕಾಸಿನ ಸರ
ಅಮ್ಮ ಇತ್ತ ಕಾಲುಂಗುರು ಮೂಗುತಿ

ತೆಲಿಗೆ ಹಚ್ಚುವೆ ಕೈಯೆಣ್ಣೆ
ಕಾಲಿಗೆ ಮೆಟ್ಟುವೆ ಹವಾಯಿ
ಕಾಸಿನಗಲದ ಕುಂಕುಮ ಹಣೆಯಲಿ
ಅರಿಸಿನ ಪಟ್ಟೆ ಕೆನ್ನೆಯಲಿ

ಮುನಿಯನೇ ಎನ್ನ ದೈವ
ಚಂದ್ರಿ ಸೋಮರಲ್ಲೇ ಎನ್ನ ಭಾವ
ಎನ್ನ ರಕ್ಷಕ ಹುಣಿಸೇ ಬರಲು

ಎಮಗೆ ಆರ ಚಿಂತೆಯಿಲ್ಲ
ಯಾರಿಗೂ ನಮ್ಮ ಚಿಂತೆಯಿಲ್ಲ
ಹಂಗಿಲ್ಲ
ಜೀವ ಯಾತ್ರೆಗೆ ಎಣೆಯಿಲ್ಲ

ಜೀವನವಿಷ್ಟೇ!



Wednesday 15 October, 2008

ಚಿತ್ರ ೭೪


ಶ್ವೇತ:
ಇಂದೇತಕೋ ಪ್ರಕೃತಿ ಸೌಂದರ್ಯ ಸವಿಯುವ ಮನಸಾಗಿದೆ.

ಶ್ರೀನಿವಾಸ್:

ರೀಕ್ಷೆ

ಮುಗಿಯಿತೇ ವಾರ್ಷಿಕ ಪರೀಕ್ಷೆ
ಮುಂದಿನ ಎತ್ತ ಕಡೆ ಹೆಜ್ಜೆ ಇಡುಬೇಕೆಂಬ ನಿರೀಕ್ಷೆ
ಮದುವೆಯಾಗಿ ಗಂಡ ಮಕ್ಕಳ ಸಂಭಾಳಿಕೆಯೋ
ಎದುರಿಸುಬೇಕೇ ಅತ್ತೆ ನಾದಿನಿಯರ ದಬ್ಬಾಳಿಕೆಯೋ
ಕೆಲಸ ಸೇರಿ ಲೋಕದ ಸಂಭಾಳಿಕೆಯೋ
ಎದುರಿಸುವುದೇ ಸಹವರ್ತಿಗಳ ತುಂಟಾಟಿಕೆಯೋ

ಮರೆಯಾಗಿ ಹೋಯಿತೇ ಲಂಗ ದಾವಣಿ
ಎಲ್ಲಿ ಹುಡುಕಬೇಕೀಗ ಸೀರೆಯನುಡುವ ನೀರೆ
ಲೋಕದಲಿ ಎಲ್ಲ ತಲೆಕೆಳಗು - ಗಂಡಿನಂತೆ ಕಾಣುವ ಹೆಣ್ಣು
ಹೆಣ್ಣಿನಂತೆ ಕಾಣುವ ಗಂಡು

ಕರದಲಿರುವುದೇನು ಮೊಬೈಲೋ
ಕಾಫಿಯ ಲೋಟವೋ
ಪುಂಖಾನುಪುಂಖವಾಗು ಹೊರಹೊಮ್ಮುತಿಹುದು
ಸಿಗರೇಟಿನ ಹೊಗೆಯೋ

ಎಲ್ಲೆಲ್ಲೂ ಹರಡಿಹುದು
ಸಂಸಾರದಿ ಕಳಚಿದ ತರಗೆಲೆ, ಹಣ್ಣೆಲೆ
ಎನ್ನ ಜೀವನವೂ ಹೀಗೆಯಾ?
ಅಪ್ಪ ಅಮ್ಮ ಅಣ್ಣ ತಂಗಿಯರ ತೊರೆದ
ಅಬ್ಬೇಪಾರಿ ಮುದುಡುತಿಹ ಚಿಗುರೆಲೆ :(

ದಾಮೋದರ:

ತರಗೆಲೆಗಳು ನೆಲಕ್ಕುರುಳುತ್ತಲೇ ಇವೆ, ದಿನ, ವಾರ, ತಿಂಗಳು ಸರಾಗ ಪಯಣದಲ್ಲಿವೆ, ನಮಗೆ ಹೊಸ ಕನಸು,ಹೊಸ ಕ್ಷಣ, ನವ ಉಲ್ಲಾಸಗಳ ನಿರೀಕ್ಷೆಯಲ್ಲೇ ಕಾಯುತ್ತೇವೆ,ನವ ಹರುಷಕ್ಕಾಗಿ.


ಸತೀಶ್:
ಸುಖದ ಚಿಂತನೆ


ಕಳೆದು ಹೋದ ಕಾಲವನು ಹುಡುಕುವೆ ಏಕೆ
ಹಣ್ಣೆಲೆಯ ಪರಿ ಉದುರಿದ ನೆನಪುಗಳು ಬೇಕೆ

ಏರುವಾಗಿಹ ಅರ್ಭಟ ಇಳಿಯುವಲಿ ಕಾಣಲಿಲ್ಲ
ಏರಿ ಇಳಿಯುವ ಸೂತ್ರದ ನಿಷ್ಠೆಗೆ ಭಿನ್ನ ಸಲ್ಲ
ಮುಸ್ಸಂಜೆ ಪದರುಗಳು ಹಗಲ ಕೊನೆ ಉಸಿರು
ಹರಡಿದ ಅವಶೇಷಗಳ ಅಡಿಯ ಹುಲ್ಲ ಹಸಿರು.

ಕುದಿವ ಬದುಕಿನ ಕಟ್ಟಕಡೆಗಿಹುದು ಬಿಳಿಯ ಕಟ್ಟೆ
ಸಿಕ್ಕ ಕಾವಿಗೆ ಬಿರುಕು ಬಿಡುವ ಶಾಂತಿ ಮೊಟ್ಟೆ
ಸುತ್ತುವ ಆತ್ಮಗಳ ನಡುವೆ ಏಳುಬೀಳುವ ಕಲ್ಪನೆ
ನಾಳೆ ಹೋಗುವ ದೇಹದ ಸುಖದ ಚಿಂತನೆ.

Tuesday 7 October, 2008

ಚಿತ್ರ ೭೩




ತಿರುಕ ಹೇಳುತ್ತಾರೆ:

ಬೇಕಿತ್ತೇ ಈ ಐಷಾರಾಮ

ಅಮಾವಾಸ್ಯೆಯ ರಾತ್ರಿಯೋ!
ಹುಣ್ಣಿಮೆಯ ಬೆಳದಿಂಗಳೋ?
ಎಂಬ ಅನುಮಾನವೇ
ಕಣ್ಣು ಕೋರೈಸುವ ದೀಪಾಲಂಕೃತ ಮನೆಯೇ?
ಮನೆಯಲ್ಲ ಸ್ವಾಮಿ ಇದು ಅರಮನೆ
ಅರ್ಧ ಮನೆ ಅರ್ಧ ಗೋರಿ :(

ಅತ್ತ ನೋಡುವ ಬದಲು ಇತ್ತ ನೋಡಿ ಸ್ವಾಮಿ
ನನ್ನ ಕಡೆಯೊಮ್ಮೆ ನೋಡಿ
ನಮ್ಮ ಗುಡ್ಲಿನ ಕಡೆಗೊಮ್ಮೆ ಕಣ್ಣು ಹಾಯಿಸಿ
ಕಟ್ಟುಕಥೆಯ ಕೇಳುವ ಬದಲು
ಪಟ್ಟಪಾಡಿನ ವ್ಯಥೆಯ ಕಡೆಗೊಮ್ಮೆ
ಕಿವಿಗೊಡಿ

ಅರಮನೆಯ ಕಟ್ಟಲು ನಮ್ಮವರೂ ಇದ್ದರು
ಅಂದಿನಿಂದ ಇಂದಿಗೂ ನಾವು ಬಡವರು
ಒಂದು ಸಂತತಿಯ ಐಷಾರಾಮಕ್ಕೆ ಬೆವರು ತೆತ್ತರು
ಬೆವರಿನಂತೆ ಸುರಿದುದು ಅವರ ನೆತ್ತರು

ಅಣ್ಣಗಳಿರಾ, ಅಕ್ಕಗಳಿರಾ - ಏಳಿರಿ ಎದ್ದೇಳಿರಿ
ಸಾಕಿನ್ನು ನಮಗೆ ಈ ಉಪವಾಸದ ಆಚರಣೆ
ಕೋಟಿ ಜನರು ನಮ್ಮ ಕೆಲಸ ನೋಡಿ ಸಂತೋಷಿಸುವುದು ಸಾಕು
ಗೇಣು ಹೊಟ್ಟೆಗೆ ಎರಡಗುಳು ಅನ್ನವು ಬೇಕು

ಮುನಿಯ ಮಂಜಣ್ಣ
ರಾಜಪ್ಪ ಕರೀಮಣ್ಣರ
ಬೆವರು ರಕ್ತ ಮಾಂಸ ಮೂಳೆಗಳೇ
ಅಡಿಪಾಯದ ಕಲ್ಲುಗಳು
ಗೋಡೆಯ ಇಟ್ಟಿಗೆಗಳು

ನಮ್ಮ ನಿಮ್ಮ ಪಿತೃಗಳು ಬುನಾದಿಯಾದರು
ತಣ್ಣನೆಯ ಹವೆಯಲಿ ಕುಳಿತವರು
ಬೆಚ್ಚನೆ ಹಬೆಯಲಿ ಮಿಂದವರು
ಎಂದೂ ಬೆವರು ಸುರಿಸದವರು
ಸುಖದ ಸೋಪಾನದಲಿ ತೇಲಿದವರು


ನಾವೆಲ್ಲ ಒಂದೇ
ಮನುಜ ಕುಲ ಒಂದೇ
ಕನ್ನಡಮ್ಮನ ಮಕ್ಕಳೆಲ್ಲ ಒಂದೇ
ಎಮ್ಮೆಲ್ಲರದೊಂದೇ ನೆಲವೆಂಬುದ ಮರೆತವರು

ಎಮ್ಮ ಭಿಕ್ಷೆಯಲಿಯೂ
ಆರನೆಯ ಒಂದು ಭಾಗ ರಾಜಧನವ ಕಸಿದುಕೊಂಡವರು
ರಾಜ ಮಹಾರಾಜರಿವರು - ರಾಜ್ಯವಾಳಿದವರು
ಮುಗ್ಧ ಜನಗಳ ಅಳಿಸಿದವರು
ತಮ್ಮ ಪುಂಡಾಟಗಳ ಮೆರೆಸಿ
ಬಡವರ ಹೆಜ್ಜೆ ಗುರುತುಗಳ ಅಳಿಸಿದವರು

ಅಂದು ಶೋಷಿಸಿದವರವರು
ಇಂದು ಶೋಷಿಸುತಿರುವವರಿವರು
ಎಂದಿಗೆ ನಮ್ಮ ಪೋಷಿಪರು

ಈ ವ್ಯರ್ಥ ಆಚರಣೆ ನಮಗೆ ಬೇಕಿತ್ತೇ?



ಸತೀಶ್ ಕವನ ಹೀಗಿದೆ:

ವಿಸ್ಮಯದ ಬೆಳಕು

ನಾಡು ಬೆಳಗಿತು ತೋಪು ಹಾರಿತು
ಎಲ್ಲೆಡೆ ವಿಜಯದ ಸಂಭ್ರಮವು
ಡಿಂಡಿಮ ನುಡಿಯಿತು ಗುಂಡಿಗೆ ಬಡಿಯಿತು
ಬೆಳಕಿನೆಲೆ ನೋಟದ ವಿಸ್ಮಯವು.

ವಿಶ್ವವು ನಮ್ಮೆಡೆ ನೋಡುವುದಣ್ಣ
ಇತಿಹಾಸದುದ್ದಕು ಅಲಂಕಾರ
ದಸರೆ ಬೆಳಕಲಿ ಮುಗಿಲಿಗು ಬಣ್ಣ
ರಾಕ್ಷಸ ಗುಣಗಳ ಸಂಹಾರ.

ಸೂರಿರುವ ನಾವು ಬೇರಿನೆಡೆ ನೋವು
ಗುರಿಯತ್ತ ನೋಟ ನಿರ್ಲಕ್ಷ್ಯ ತಾರದಿರಲಿ
ಓಡುತಲೆ ನಾವು ಬೆಳಕಿನಡಿಯ ತಮವು
ನುಡಿ ಹಳೆಯದನು ಮರೆಸದಿರಲಿ.

ಅರಿಯುವ ಪರಿ ಹಳೆಯದನು ಹಳಿಯದಿರಲಿ
ಇಂದಿನ ಸರಿ ನಿನ್ನೆ ನಾಳೆಗಳ ತೂಗುತಿರಲಿ.

Wednesday 1 October, 2008

ಚಿತ್ರ ೭೨


ಚಿತ್ರ ೭೨ ಕ್ಕೆ ತವಿಶ್ರೀ ಮತ್ತು ಸತೀಶ್ ಅವರು ಬರೆದ ಕವನಗಳು ಹೀಗಿವೆ

ತವಿಶ್ರೀ ಅವರ ಕವನ -

ಪಾಡು

ನಾನೊಬ್ಬ ಅಲೆಮಾರಿ
ಬಂದಿಹೆನು ಅನ್ನವರಸಿ ಆ ಊರಿನಿಂದ
ಅನ್ನ ಸಿಗದ ಊರಿನಿಂದ
ಈ ಊರಿಗೆ
ಅನ್ನ ನೆಲೆ ಪುಕ್ಕಟೆಯಾಗಿ ನೀ
ಡುವ ಊರಿಗೆ

ಕಾಲೇಜು ಮೆಟ್ಟಿಲ ಹತ್ತಿದವಗೆ
ಕೂಲಿ ಮಾಡಲು ಇಷ್ಟವಿಲ್ಲ - ತರವೂ ಅಲ್ಲ
ಗಡ್ಡ ಬೋಳಿಸಲು,
ಬಟ್ಟೆಗಂಟಿದ ಕೊಳಕ ತೆಗೆಯಲು
ಚಂದ ಕಾಣಲು ಹಣವಿಲ್ಲ
ಜೇಬು ಬರಿದೇ ಬರಿದು :(


ಬಿಟ್ಟ ಗಡ್ಡ - ಕಟ್ಟಿದ್ದ ಮುಂಡಾಸ ನೋಡಿ
ಹುಚ್ಚನೆಂದರು
ಕಡಿದರೆ ನಾಲ್ಕು ಮಂದಿಗೆ ಅನ್ನವಾಗುವನೆಂದರು
ಯಾವುದೋ ಪತ್ರಿಕೆಯಲಿ ಕಂಡ
ಉಗ್ರಗಾಮಿಯ ನೆನೆದು
ಉಗ್ರಗಾಮಿಯೆಂಬ ಪಟ್ಟಕಟ್ಟಿದರು
ತಮ್ಮ ಮನೆಯ ಅಂಗಳವ
ಪರಿವೀಕ್ಷಿಸುತಿಹನೆಂದು -
ಪೊಲೀಸರಿಗೆ ದೂರಿತ್ತಿಹರು
ಹೊಡೆದರು - ಬಡಿದರು
ಸಾಯುವಂತೆ ಮಾಡಿದರು
ಅಕ್ಕನ ಮಕ್ಕಳಂತೆ ಕಾಣುವ
ಮುದ್ದು ಮಕ್ಕಳ ಮುಟ್ಟಗೊಡದಾದರು
ಇವರಿಗೆ ಎದುರಾಡಲು,
ಸತ್ಯವ ಮುಂದಿಡಲು
ನಾ ಅಶಕ್ತ

ನನ್ನಪಾಡು ಪಡುತ್ತಿರುವ
ತದೇಕಚಿತ್ತದಿ
ನಾಯಿಯ ವೀಕ್ಷಿಸುತಿಹೆ
ನಾಯಿಗೆ ನನ್ನ ಪಾಡೇ!
ನನಗೆ ನಾಯಿ ಪಾಡೇ?


ಸತೀಶ್ ಅವರ ಕವನ -

ಏನ್ ಹೇಳೋಣ ಹೇಳಿ?

ಮೈಮೇಲಿನ ಅಂಗಿ ಕಟ್ಟಿದೆ ಹರಳು
ಸಾಲದ್ದಕ್ಕೆ ತಲೆ ಏರಿ ನಿಂತ ಬಟ್ಟೆಗಳು
ಬೇರೆ ಕಡೆ ಹೋಗುವ ಪ್ರಚೋದನೆ
ತರುವ ಆಲೋಚನೆಯನ್ನು ಕುರಿತು
ಏನ್ ಹೇಳೋಣ ಹೇಳಿ?

ದೂರ ನಿಂತ ಮಗನ ಓದು ನಾಳೆ
ಬರುವ ಮಗಳಾ ಮದುವೆ ಇನ್ಯಾರೋ
ಎಲ್ಲೋ ಹುಡುಕೀ ಬಿದ್ದು ಎಂದವರೆಂದೋ
ದಿನದ ಬದುಕಿಗೆ ನೊಂದವರ ಕುರಿತು
ಏನ್ ಹೇಳೋಣ ಹೇಳಿ?

ಅರ್ಥವ್ಯವಸ್ಥೆ ಹಗಲೇ ಕಂಗಾಲಾಯ್ತು
ದಿಕ್ಕೆಟ್ಟ ಸಂಜೆ ಬಾಡಿ ಹಾಳಾಯ್ತು
ಹಾಕಿದ ಹಣವೂ ಸೋರಿ ಹೋಗುತಿದೆ
ನಾಳೆಯ ನೆಮ್ಮದಿ ಇಲ್ಲದವರ ಕುರಿತು
ಏನ್ ಹೇಳೋಣ ಹೇಳಿ?

ಮುಚ್ಚಿದ ಬಾಗಿಲು ತೆರೆಯದ ಅಂಗಡಿ
ಮನೆ ಮನಗಳಲಿ ಮಸುಕಾದ ಕನ್ನಡಿ
ಕೈ ಕಟ್ಟಿ ನಿಂತರೂ ಕರೆಯದ ಜನರ
ಬರಿ ಬೀದಿಯಲ್ಲಿ ಹಾರುವ ಧೂಳನು ಕುರಿತು
ಏನ್ ಹೇಳೋಣ ಹೇಳಿ?

ಎಲ್ಲಾ ಇಂದು ತಿನ್ನುವ ಕೂಳಿನ ಕರ್ಮ
ಬರಿ ಉರಿಬಿಸಿಲಿನಲಿ ನಲುಗಿದೆ ಚರ್ಮ
ವಠಾರದಿ ಠಿಕಾಣಿ ಹೂಡಿ ಮೆರೆದೂ
ಮೌನದಿ ನೋಟವ ಹರಿಸುವವರ ಕುರಿತು
ಏನ್ ಹೇಳೋಣ ಹೇಳಿ?

Wednesday 24 September, 2008

ಚಿತ್ರ ೭೧



ಚಿತ್ರ ೭೧ ಕ್ಕೆ ತವಿಶ್ರೀ ಮತ್ತು ಸತೀಶ್ ಅವರು ಬರೆದ ಕವನಗಳು ಹೀಗಿವೆ

ತವಿಶ್ರೀ ಅವರ ಕವನ -
ಸಿರಿ ನಾಡು


ಇತ್ತ ನೋಡು ಕಲ್ಪವೃಕ್ಷಗಳ ನಾಡು
ಸುತ್ತಲೂ ಹರಡುತಿದೆ ರವಿಯ ತಂಪಿನ ಜಾಡು
ಕಂಗೊಳಿಸುತಿಹುದು ಲಲಿತ ಕಲೆಗಳ ಬೀಡು
ಜಾನುವಾರು ಹಕ್ಕಿಗಳು ಸೇರುತಿವೆ ಗೂಡು

ಯಾರೆಂದರು - ಸಾಯುತಿಹುದು ಈ ನಾಡು
ಬೆಳಗಿ ಜಗಮಗಿಸುತಿಹುದು ಕಗ್ಗತ್ತಲೆಯ ಕಾಡು
ಬೆಳಕ ಮೂಡಿಸಿದುದು, ರವಿ ಮೀರಿಸಿದ ಕವಿ
ಬೆಳಕಿನ ಜಾಡ ಹುಡುಕು ಹೊರಟಿಹನು ರವಿ

ಎಂದಿನಂತೆ ಬೈಗಿನಲಿ ಕಣ್ಬಿಟ್ಟನು ನಮ್ಮ ರವಿ
ಸುತ್ತಲೂ ಕತ್ತಲಿನ ಬದಲು ಕಂಗೊಳಿಸುವ ಸವಿ
ಮೂಗಿಗೆ ಬಡಿಯುತಿಹುದು ಶ್ರೀಗಂಧದ ಹವೆ
ಭೂತಾಯಿಯ ಮಡಿಲಿನಿಂದ ಹೊರಹೊಮ್ಮುತಿಹುದು ಹಬೆ

ಹಸಿದು ಬಳಲಿದವಗೆ ತಂಪೆರೆಯುವ ಬೊಂಡ
ಉಡುಗುತಿಹ ಶಕ್ತಿಗೆ ಚೈತನ್ಯ ತುಂಬುವ ಹಯನು
ಜಗವ ಸಾಗಿಸುತಿಹ ಚಕ್ರದ ಚಕ್ಕದ ಬಂಡಿ
ಯಾರೂ ಕಂಡಿರದ ಹೊನ್ನಿನ ಗಿಂಡಿ

ನಗರಗಳ ಜಂಜಾಟದ ಸೋಂಕಿರದ
ಹಳ್ಳಿನಾಡಿದು ನಾಗರೀಕತೆಯ ಬುನಾದಿ
ಯಾವುದಿದೀ ವಿಪರೀತದ ಶಕ್ತಿ?
ಪಂಚಭೂತಗಳಿಗೂ ಸಡ್ಡೊಡೆಯುವ ಯುಕ್ತಿ
ಸಿರಿಯ ಮಡಿಲಲಿ ತುಂಬಿ ತುಳುಕಿಸಿಹ ಕನ್ನಡಮ್ಮ
ಅಹರ್ನಿಶಿ ಇರಲಿ ಇವಳ ಮೇಲೆ ನಮ್ಮೆಲ್ಲರ ಭಕ್ತಿ


ಸತೀಶ್ ಅವರ ಕವನ -
ಎಲ್ಲೂ ನಿಲ್ಲದ ನಡೆ

ಕಗ್ಗತ್ತಲು ಕಾಡುವಾಗ ನೆಲೆಸಿತ್ತು ಶಾಂತಿ
ಬಾನ ರವಿ ಬಂದ ಕ್ಷೋಭೆಗಳ ತಂದ
ಭುವಿಯನ್ನು ಬೆಳಗಿ ಓಟದಲಿ ಪಳಗಿ
ಮತ್ತೆ ಕತ್ತಲಾಗುತ್ತಿದ್ದಂತೆ ನಾಚಿ ನೀರಾಗಿ
ತನ್ನ ಆವರಣದಲಿ ಓಕುಳಿ ಚೆಲ್ಲಿ
ಎಲ್ಲಾ ಕಡೆಗೂ ಕಿರಣಗಳು ಚೆಲ್ಲಾಪಿಲ್ಲಿ
ಹರಡುವಂತೆ ಮಾಡಿ ದಿನನಿತ್ಯದ ಮೋಡಿ
ಕತ್ತಲನು ಸುತ್ತ ಹರವಿ ಮತ್ತೆಲ್ಲೋ ಓಡುತಿಹನು ರವಿ.

ಇವನ್ನೆಲ್ಲಾ ನೋಡಿಯೂ ನೋಡದೆಯೇ
ತಲೆತೂಗುವ ತೆಂಗುಗಳ ತಪ್ಪೇನು
ಮುಗಿಲಿನೆಡೆಗೆ ಚಿಮ್ಮುವ ಮರದುತ್ಸಾಹಕೆ
ಅಡ್ಡ ಬೀಸುವ ಗಾಳಿ-ಕಿರಣಗಳ ಒಪ್ಪೇನು.

ಇಲ್ಲಿ ಸತ್ತು ಮತ್ತಿನ್ನೆಲ್ಲೋ ಹುಟ್ಟುವ ಸೂರ್ಯ
ದಿನ ಸಾಯುವವರಿಗೆ ಅಳುವ ಕಾರ್ಯ
ಜೋಪಡಿಯಲ್ಲಿ ಜೊಂಪಿನಲಿ ಮಲಗಿ
ಆಸೆ ಕಂಡಂತೆ ಸುಖನಿದ್ರೆಯಲಿ ಮುಲುಗಿ
ಕಂಡೂ ಕೈಗೆ ಸಿಗದ ಕನಸುಗಳ ನಂಬಿ
ಕಿರಣಗಳು ಹಾಯಿ ದೋಣಿಯ ತುಂಬಿ
ಒಂದು ಎಡೆಯಿಂದ ಮತ್ತೊಂದು ಕಡೆಗೆ
ಎಂದೋ ಹೊರಟ ಎಲ್ಲೂ ನಿಲ್ಲದ ನಡೆಗೆ.

Tuesday 16 September, 2008

ಚಿತ್ರ ೭೦



ಚಿತ್ರ ೭೦ ಕ್ಕೆ ತವಿಶ್ರೀ, ಕುಮಾರ ಸ್ವಾಮಿ ಕಡಾಕೊಳ್ಳ ಮತ್ತು ಸತೀಶ್ ಅವರು ಬರೆದ ಕವನಗಳು ಹೀಗಿವೆ

ತವಿಶ್ರೀ ಅವರ ಕವನ -

ಯಾಕುಂದೇಂದು ತುಷಾರ ಹಾರ ಧವಳಾ
ಯಾ ಶುಭ್ರ ವಸ್ತ್ರಾನ್ವಿತಾ
ಯಾ ವೀಣಾ ವರದಂಡ ಮಂಡಿತ ಕರಾ
ಯಾ ಶ್ವೇತ ಪದ್ಮಾಸನಾ ...

ಕಂಡಲ್ಲೆಲ್ಲಾ ಕಾಣುವುದು ಕಪ್ಪು ಬಿಳುಪು
ಕೆಳಗೆ ಜಾರುತಿಹುದು ಜಾರಿಸುತಿಹುದು ಹಿಮ
ಅಲ್ಲಲ್ಲಿ ಅದರಡಿ ಕಾಣುತಿಹುದು ಕರಿಕಲ್ಲು
ದಿಗಂತದಲಿ ಕಣ್ಮುಚ್ಚಾಲೆ ಆಡುತಿಹುದು ಕಾಮನಬಿಲ್ಲು

ಅಪ್ಪ ಅಮ್ಮ ಅಣ್ಣ ಅಕ್ಕ ತಮ್ಮ ತಂಗಿ
ಎಲ್ಲರೂ ಏರಿಸಿರುವುದು ಕಪ್ಪನೆಯ ಚೊಣ್ಣ ಷರಾಯಿ
ಇವಗೆ ಏರಿಸಿರುವುದು ಕೆಂಪನೆಯ ದಿರಿಸು
ಕೆಲವರಿಗೆ ಮಾತ್ರವಂತೆ ಕೈಗೆ ಗವಸು

ಅಲ್ಲಲ್ಲಿ ಅಬ್ಬೇಪಾರಿಯಾಗಿ ನಿಂತಿಹವು ಬೋಳು ಮರಗಳು
ಎಂದು ನೆಲಕಚ್ಚುವೆನೋ ಎಂಬ ಹೆದರಿಕೆ
ಕಾಲಿಟ್ಟ ಕಡೆ ಜೊರ್ರನೆ ಜಾರುವ ಜಾರಿಕೆ
ಮಜ ಮಾಡಲು ಏಕೆ ಹಿಂಜರಿಕೆ

ದೀಪವಿರದ ಕಂಬಗಳು
ಬೆಳಗಿನ ಹೊತ್ತಿನಲ್ಲೂ ಆವರಿಸಿರುವುದು ಕತ್ತಲು
ಅಲ್ಲಲ್ಲಿ ಕಾಂಬರುವ ನೆಲದಲಿನ ಹೊಂಡಗಳು
ಭೂ ತಾಯಿಯ ಮೊಗದಲಿ ಸಿಡುಬಿನ ಕಲೆಗಳು

ಕುಹಕರದೂ ತಲೆಯ ಕಾಯಲು
ಕುಹಕವರಿಯದ ಛತ್ರಿಗಳು
ಎಲ್ಲಿದ್ದರೇನ್ ಯಾರಾದರೇನ್
ತನು ಬಿಚ್ಚಿ ನಿಲ್ಲುವುದು ಕಾಯಕವಲ್ಲವೇನ್

ಅಲ್ಲಿ ನಿಂತಿರುವುದೊಂದು ಮುರುಕು ಮಂಟಪ
ಯಾರೂ ಹೇಳುವವರಿಲ್ಲ ಅಯ್ಯೋ ಪಾಪ!
ಕೈಯಿಲ್ಲ ತನುವಿಲ್ಲ
ರಕ್ಷಕನಾಗಿರಲು ಕಾಲು ತಲೆ ಎರಡೇ ಸಾಕಲ್ಲ

ಆರ್ತಸ್ವರದಲ್ಲಿ ಕೇಳಿಬರುತಿದೆ
’ಎಮ್ಮ ಪ್ರಾಣ ಸಂಕಟ
ನಿಮಗೆ ಮೋಜಿನ ಕೋಣೆಯಾ?’


ಕುಮಾರ ಸ್ವಾಮಿ ಕಡಾಕೊಳ್ಳ ಅವರ ಕವನ -

ಬೆಳ್ಳಿಯಂತೆ ಹರಡಿದೆ
ಸುತ್ತಲೂ ಬಿಳಿ ನೀರ್ಗಲ್ಲು
ಮುತ್ತಿದೆ ಆಡಲು ಮಂದಿ
ಸುರಿವ ಮಂಜನಲ್ಲೂ

ಬಾನು ಕವಿದಿದೆ ಮಂಜು
ನೆಲವು ಮುತ್ತಿದೆ ಮಂಜು
ಮರೆಯಾಗಿದೆ ಮರದೆಲೆ
ಹುದುಗಿ ಹೋಗಿದೆ ಮನೆ

ಮಯ್ಕೊರೆವ ಚಳಿಯಲ್ಲೂ
ಮಯ್ಮರೆತಿದೆ ಮಂದಿ
ಮಾತೆಲ್ಲ ನಡುಗುತಿರೆ
ಆವಿಯಾಗುತಿದೆ ಉಸಿರು

ಆಟಕ್ಕೆ ಅಣಿಯಾಗಿ
ತುಂಟರು ಜೊತೆಯಾಗಿ
ಹೊದ್ದು ಬಂದಿಹರು
ದಪ್ಪ ತುಪ್ಪಳ ಅಂಗಿ

ಗಾಳಿಯ ಸುಳಿವಿಲ್ಲ
ಬೆಳಗಿನ ಸೆಳಪಿಲ್ಲ
ಕವಿದಂತೆ ಕಾವಳು
ತಳವೆಳಗು ತಲೆಯೋಳು

ನೀರ್ಗಲ್ಲು ಬಿರಿಯಾದರು
ಕರಗುವುದು ಬಿಸಿತಾಗಲು
ಮೂಡ ನನ್ನೀ ಮನವು
ಅರಿಯದೊ ನಿಸರ್ಗವನು

** ಕುಕೂಊ....
ಪುಣೆ


ಸತೀಶ್ ಅವರ ಕವನ -
ಏನು ಮಾಯೆ ಯಾವ ಮೋಹ


ಒಂದು ರೂಪ ಆಕಾರದಿಂದ ಇನ್ನೊಂದಕೆ
ಬದಲಾಯಿಸುವ ಎಲ್ಲೆಡೆ ನೀರು ನೀರು
ಒಂದು ಕಾಲ ಆಕಾಶದಿಂದ ಮತ್ತೊಂದಕೆ
ಹರಿ ಹಾಯುವ ನೀರಿನ ಜೋರು ಜೋರು.

ಒಂದು ಚಿತ್ರ ಮತ್ತೊಂದನು ಬೇರ್ಪಡಿಸುವ
ಭ್ರಮೆಯ ನೆರಳನು ದೂರುವ ಏಕ ಚಿತ್ತ
ಒಂದು ಕಣ ಅದರ ಗುಂಪನು ಹೋಲದಿರುವ
ಕೊಳೆಯ ಮೇಲೆ ಬಿಳಿ ಹಾಸು ಸುತ್ತ ಮುತ್ತ.

ಕಪ್ಪು ಕತ್ತಲ ಕಣಗಳ ಒಡಲಲ್ಲಿ ಹುದುಗಿಕೊಂಡು
ಬರಿ ಬೆಳಕನ್ನು ಬಿಂಬಿಸೋ ಭ್ರೆಮೆಯೇ
ಕಪ್ಪು ಆಕಾಂಕ್ಷೆಗಳ ಕುದಿಸಿ ಒಳಗಿಟ್ಟುಕೊಂಡು
ಸುಕ್ಕಿನ ಮುಖವನ್ನು ಸಮನಾಗಿಸೋ ಕ್ಷಮೆಯೆ.

ಏನು ಲೀಲೆ ಯಾವ ಚಿತ್ತ ದಿನಕೊಂದರ ವಿಶೇಷ
ಬೆಚ್ಚಗೆ ಹೊದ್ದ ನೆಲವ ಬೆಚ್ಚಗೆ ಹೊದ್ದು ನೋಡುವ ಪರಿ
ಏನು ಮಾಯೆ ಯಾವ ಮೋಹ ಉಳಿದ ಅವಶೇಷ
ಸಮನಾದ ಧೃವ ಪ್ರದೇಶ ಮುಚ್ಚಿಕೊಂಡ ಒರಟು ಗಿರಿ.

Tuesday 9 September, 2008

ಚಿತ್ರ ೬೯



ಚಿತ್ರ ೬೯ ಕ್ಕೆ ತವಿಶ್ರೀ, ಸತೀಶ್ ಮತ್ತು ಕುಮಾರ ಸ್ವಾಮಿ ಕಡಾಕೊಳ್ಳ ಅವರು ಬರೆದ ಕವನಗಳು ಹೀಗಿವೆ

ತವಿಶ್ರೀ ಅವರ ಕವನ -
ದೇವನ ಕನ್ನಡಿ


ಹೋಗುತಿಹೆ ನೀ ಎತ್ತ
ನಿನಗೆ ನಾ ಹಾದಿ ತೋರಿಸಿದತ್ತ
ಅದೋ ಹೊರಡು ದಿಗಂತದತ್ತ
ನಾನಿಲ್ಲದೇ ನೀನಿಲ್ಲ
ಒಬ್ಬಂಟಿಯೆಂಬ ಹೆದರಿಕೆ ಸಲ್ಲ

ನಿನ್ನ ಮೈಮೇಲೆ ಹರಿದಾಡುವವರಿನ್ನೆಷ್ಟು?
ಎಲ್ಲರ ಭಾರವ ತಡೆಯಬಲ್ಲೆಯೇನು?
ಒಳಿತಲ್ಲವೀ ನಿನಗೀ ಅಹಂಕಾರ
ನೀ ಆಗಿರುವೆ ಪರಾವಲಂಬಿ
ಈ ಭುವಿಯ ಮೇಲೆ

ನೋಡತ್ತ ಸುಂದರ ಕಾನನ ಸಿರಿ
ಇಂದಿಹುದು ನಾಳೆ ಇರುವುದಾ?
ಬಾ ಇಂದೇ ನಿನಗೆ ಅದರ ರುಚಿ ಉಣಿಸುವೆ
ನಾಳೆ ಮೆಲುಕಾದರೂ ಹಾಕುವಿಯಂತೆ
ಇಂದು ಉಣದಿದ್ದರೆ ನಾಳೆಗಿನ್ನೆಲ್ಲಿಯ ಮೆಲುಕು
ಸಮುದ್ರ ತೀರದಲಿ ಹೆಜ್ಜೆ ಛಾಪಿಸಿದ ಉಸುಕು

ಹೊಕ್ಕುವೆ ಸುರಂಗದಲಿ
ನಿನ್ನ ನಂಬಿದವರಿಗೆ ಹಾದಿ ತೋರುವೆ
ಕಾಲಿಡದ ಕಾನನದಲಿ
ಹೊರತರುವೆ ಕತ್ತಲಲಿ
ಕಣ್ಣಿದ್ದರೂ ಕಾಣದವಗೆ ಬೆಳಕ ತೋರಿಸುವೆ

ತೋರು ನೀ ನಿಸರ್ಗ ದೇವಿಯ ಸಿರಿ
ಜನ ಕಾಣದ ದೇವನ ಪರಿ
ನಿನಗಿಲ್ಲವೇ
ಜೀವ
ಹೀಗಳೆಯುವ ಭಾವ
ಎಲ್ಲವನೂ ಸಹಿಸಿ
ಓಡುವೆ, ಓಡುತಲಿರುವೆ
ಒಂದೆಡೆ ನಿಲ್ಲದಿರುವೆ
ನೀನಾದರೂ ಸಮಾಜದ ಕಣ್ಣ ತೆರೆ
ಕಾಣದ ದೇವನ ಮರ್ಮವ ತೋರೆ


ಸತೀಶ್ ಅವರ ಕವನ -
ಕೊನೆಯಾಗದ ಅಹವಾಲು

ಇಲ್ಲಿ ತೆರೆ ಸರಿದಿಹ ಸರಿ ಸವಾಲು
ನಿಲ್ಲದೆ ಓಡುವ ನೋಟದ ಪಾಲು.

ಕತ್ತಲೆಯಿಂದ ಬೆಳಕಿನವರೆಗೆ
ಬೆಳಕಿನಿಂದ ಬಲು ದೂರದವರೆಗೆ
ನಿಲುಕಿಹ ದೃಷ್ಟಿ ಎಲ್ಲೋ ದೂರ
ಹತ್ತಿರ ಕತ್ತಲು ನೆಳಲು ಅಪಾರ
ಬಾನೂ ಭೂಮಿ ಕೂಡುವ ಸ್ಥಳವು
ಹತ್ತಿರ ಸಿಕ್ಕೂ ಕೈಗೆ ದೂರವು.

ಜೊತೆಜೊತೆಯಾಗಿಹ ಉಕ್ಕಿನ ಕಂಬಿ
ಹತ್ತಿರವಿದ್ದೂ ಸೇರವು ನಂಬಿ
ಯಾರಲಿ ನಂಬಿಕೆ ಏನೋ ಕಷ್ಟ
ಜಾಡಿರದ ಗೂಡಿಗೆ ಏನೋ ನಷ್ಟ
ಗುಡ್ಡವ ಸೀಳುವ ಸುರಂಗ ಮಾರ್ಗ
ಬೇಗುದಿಯಲ್ಲಿ ಕೊಳೆಯುವ ವರ್ಗ.

ಎಲ್ಲೋ ತೆರೆದು ಹೊರಟಿಹ ದೂರಕೆ
ತಿಳಿ ಹೇಳುವ ಜಾಡಿನ ಕುಹಕಕೆ
ಗಾಳಿಯ ತೀಡಿ ಸ್ವಾಗತ ಬೀರೋ
ಹಚ್ಚನೆ ಹಸಿರಿನ ಎಲೆಗಳ ತೇರೋ
ಮಾರ್ಗವು ಕೊನೆಯಾದಂತೆ ಕಂಡೂ
ತಿರುಗಿ ನೋಡದೆ ಹೊರಟಿಹ ದಂಡು.

ಅಲ್ಲಿ ತೆರೆ ಸರಿಸಿಹ ಸರಿ ಸವಾಲು
ಕೊನೆಯಾಗದ ಪರಿ ಅಹವಾಲು.


ಕುಮಾರ ಸ್ವಾಮಿ ಕಡಾಕೊಳ್ಳ ಅವರ ಕವನ -
ಹಳಿ ಬಂಡಿ

ಉದ್ದುದ್ದ ಕಬ್ಬಿಣದ ಎರಡು ಹಳಿ
ಹಡ್ಡಡ್ಡ ಹಳಿ ಬಿಗಿ ಹಿಡಿತಕೆ ಬೆಲಗು
ಒಟ್ಟಿಗೆ ಬಿಗಿಯಾಗಿ ಹಿಡಿದು ಕಟ್ಟಿರಲು
ನಾನು ಹಳಿಬಂಡಿ ಓಡಲು ಅಣಿನೋಡು

ತೆವಳ ಬೇಕು ಹಳಿಯ ಮೇಲೆ
ನುಸುಳ ಬೇಕು ನೆಲದಿಡ್ಡಿಯೊಳಗೆ
ತಪ್ಪಿದರೆ ದಾಯ ಮುಕ್ಕುವುದು ಬದುಕು
ತಪ್ಪಿಗೆ ಹೊಣೆಯಾರು ತಿಳಿಸುವರು ಯಾರು?

ಗುಡ್ಡ ಏರುವೆನು ಅಡ್ಡ ಬಂದರೇನು
ಹಳ್ಳ ದಾಟುವೆನು ಅಗಲ ಆಳ ಇದ್ದರೇನು
ಸುತ್ತು ಬಳಸು ಎನ್ನುವ ಪರಿವೆನಗಿಲ್ಲ
ಗಾಲಿಯ ಹಡಿಯಲ್ಲಿ ಹಳಿ ನೀನು ಮಲಗಿರಲು ಸಾಕು

ಹಿಂದೆ ಅಮರಿ ಅಡರಿದೆ ಕಾವಳು
ಮುಂದೆ ನುಸುಳಿದರೆ ಬೆಂಬೆಳಗು
ಬೆಳಗು ಕಾವಳುಗಳ ತೆರಹು ತಿಳಿಯದೆನಗೆ
ನೀ ತೋರಿದಂತೆ ತೆವಳುವುದೆನ್ನ ಕೆಲಸ

ಅದು ಇದು ಎಂಬ ಗೆಂಟು ಮಡಿ ಎನಗಿಲ್ಲ
ಹೊತ್ತು ಸಾಗುವೆನು ಒಡಲಲ್ಲಿಟ್ಟದನ್ನು
ತೋರಿಸಿದಂತೆ ನಡೆಯುವುದೆನ್ನ ದಿಟ
ಸೋಲಿಗೆ ನೆಪ ನೀನಲ್ಲದೆ ನಾನಾಲ್ಲವಲ್ಲ

ನನ್ನ ಬದುಕಿನ ಎಳೆ ಮನುಜ ನಿನ್ನ ಹಿಡಿತದಲಿ
ಎಳೆವಾಡಿಸಿದಂತೆ ಅಡುವನು ನಾನು
ಓಡಲು ಅಣಿಯಾಗಿಹೆನು ಈಗ ಓಡಲೇನು
ನೀನೇಳಿದಂತೆ ನುಗ್ಗುವುದೊಂದೆನ್ನ ಬದುಕು

ಕುಕೂಊ...
ಪುಣೆ

ಒರೆ ತಿಳಿವು:
ಗೆಂಟು-->ತೆರಹು--> ಭೇದ
ಬೆಲಗು--> ಕಟ್ಟಿಗೆ, ಲೋಹದ ಅಡ್ಡ ಪಟ್ಟಿ
ನೆಲದಿಡ್ಡಿ---> ಸುರಂಗ
ಹಳಿಬಂಡಿ-->ರಯ್ಲು, ಉಗಿಬಂಡಿ, ಹೊಗೆಬಂಡಿ

Tuesday 2 September, 2008

ಚಿತ್ರ ೬೮



ಚಿತ್ರ ೬೮ ಕ್ಕೆ ತ್ರಿವೇಣಿ,ತಿರುಕ ಮತ್ತು ಸತೀಶ್ ಅವರು ಬರೆದ ಕವನಗಳು ಹೀಗಿವೆ

ತ್ರಿವೇಣಿ ಅವರ ಕವನ -
ಕಾಲದ
ಗಂಟೆ


ತುಂಬಿದ ಶಾಂತಿಯ ಕೆಣಕುವ ಹಾಗೆ
ಮನಸನು ತಲ್ಲಣ ಗೊಳಿಸುವ ಹಾಗೆ
ಎಲ್ಲಿಂದಲೇ ತೂರಿ ಬಂದಿತು ಶಬ್ದ
ಕಲಕೇ ಹೋಯಿತು ದಿವ್ಯ ನಿಶ್ಯಬ್ದ !

ಅಂತರಾಳದ ಆಳಕ್ಕಿಳಿದು
ಮೊಳಗುತ್ತಲಿದೆ ಕಾಲದ ಕೂಗು
ಹನಿಹನಿ ಆಯುವು ಸೋರುವ ಮುನ್ನ
ಜನ್ಮ ಸಾರ್ಥಕಗೊಳಿಸಿಕೊ ಚಿನ್ನ !

ಆಯಿತೇ ಮಗನಿಗೆ ವಿದ್ಯಾಭ್ಯಾಸ ?
ಆದೀತು ಮಗಳ ಮದುವೆಯೂ ನಿರಾಯಾಸ
ತೀರಿತು ತಾನೇ ಮಾಡಿದ ಸಾಲ ?
ಬರಿ ಕನವರಿಕೆಯಲಿ ಕಳೆಯಿತೇ ಕಾಲ ?

ಆಗಿತ್ತೇ ನಿನ್ನಿಂದ ಅನ್ಯರಿಗುಪಕಾರ ?
ಆಗಿರಲಿಲ್ಲ ತಾನೇ ನೀನಾರಿಗೂ ಮಣಭಾರ ?
ನಿನ್ನ ಬಾಳಿಗೂ ಒಂದು ಅರ್ಥವಿತ್ತೇ ?
ಇಲ್ಲ, ಬರೀ ಕುಯುಕ್ತಿಯಲಿ ವ್ಯರ್ಥವಾಯ್ತೇ?

ಅರೆಬರೆದಿಟ್ಟ ಗ್ರಂಥ ಏನಾಯ್ತು ?
ಆಪ್ತ-ಮಿತ್ರರ ಭೇಟಿ ಎಂದಾಯ್ತು ?
ಪ್ರಪಂಚ ಪರ್ಯಟನ, ಕಾಶಿ ಯಾತ್ರೆ ?
ಮುಗಿಸಿರಿ ಬೇಗ ; ಮುಗಿಯಲಿದೆ ಜಾತ್ರೆ !

ಗಣಗಣ ಬಡಿದಿದೆ ಕಾಲದ ಗಂಟೆ
ಅದಕೆದುರಾಡುವ ಧೀರರು ಉಂಟೇ?
ಬಂದ ದಾರಿಯಲ್ಲಿ ಇರಲಿ ಹೆಜ್ಜೆ ಗುರುತು
ಒಯ್ಯುವುದೇನಿಲ್ಲ ಸುಕೃತಗಳ ಹೊರೆ ಹೊರತು!

- ತ್ರಿವೇಣಿ


ತಿರುಕ ಅವರ ಕವನ -
ಒಂದು ಗಂಟೆಯ ಕಥೆ


ಕಾಲದ ಪರಿವೆ ಇಲ್ಲದೇ ಮಲಗಿದವರ
ಬಡಿದೆಬ್ಬಿಸುವ ಗಂಟೆ
ತಾನೇ ಮಲಗಿದೆಯೇ?
ಕಾಲವೊಂದಿತ್ತು - ಊರಿಗೊಂದೇ ಗಂಟೆ
ಕೋಟೆ ಬಾಗಿಲಲಿ ಜೊತೆ ಇರುತ್ತಿತ್ತೊಂದು ಹೆಂಟೆ
ಬೋರಜ್ಜಿಯ ಕನಸಿನೊಂದಿಗೆ
ಮರೆಯಾಯಿತು ಆ ಹೆಂಟೆ
ಒಬ್ಬಂಟಿಗನಾಗಿ ಬಿಟ್ಟು ಹೋಗಿತ್ತು

ಮಾದೇಶನ ಮಾಲೀಶು ತಾಲೀಮಿನೊಂದಿಗೆ
ನಡೆದಿತ್ತು ನನ್ನ ಕೈಂಕರ್ಯ
ಅಲಾರಮ್ಮು ಪಟಾಲಮ್ಮುಗಳ ಹಾವಳಿ
ಎಲ್ಲರ ಕೈಗಳಲ್ಲಿ ಬಗೆ ಬಗೆಯ ಗಡಿಯಾರದ ಸರಪಳಿ
ಮಾದೇಶನಿಗೆ ವಯೋಧರ್ಮದ ಬವಳಿ
ಪಿಂಚಣಿ ಇಲ್ಲದ ನಿವೃತ್ತೊ ನನಗೆ ಬಂದ ಬಳುವಳಿ

ಮಾಲಿಕನಿಲ್ಲದೇ ಕಿಲುಬುಗಟ್ಟುತ್ತಿದೆ
ಕೇಳುವವರಿಲ್ಲವೆಂದು ಹಲುಬುತ್ತಿದೆ
ಒಂದು ಕಾಲಕೆ ಗಟ್ಟಿಯಾಗಿ ಹೊಸೆದಿದ್ದ
ಮಜಬೂತವಾಗಿದ್ದ ಹಗ್ಗ
ಉಸಿರಿಲ್ಲದ ಪುಗ್ಗದಂತೆ ಸುರುಟಿಹೋಗುತ್ತಿದೆ
ಎಳೆ ಮಗುವೂ ಕತ್ತರಿಸಬಹುದಂತಾಗುತ್ತಿದೆ

ಎನಗೀಗ ಉಳಿಗಾಲವಿಲ್ಲ
ಕಾಲಕಸಕ್ಕಿಂತ ಕಡೆಯಾಗಿಹೆನಲ್ಲ
ಎನ್ನತ್ತ ಒಂದು ದೃಷ್ಟಿಯೂ ಮೂಡುತ್ತಿಲ್ಲವಲ್ಲ

ಅಗ್ನಿಶಾಮಕ ದಳದಲಿ
ನನಗೂ ಉಂಟು ಭಾಗ
ದೇಗುಲ ಇಗರ್ಜಿ ಮಂದಿರಗಳಲ್ಲಿ
ದಾಸಯ್ಯನ ಜೋಳಿಗೆಯ ಬದಿಯಲ್ಲಿ
ಭಾಗಮ್ಮನ (ಹಸು) ಕೊರಳಿನಲ್ಲಿ
ವಿರಾಜಿಸುತಿಹೆ
ಅಲ್ಲೆಂದು ಬರುವುದೋ ಎನಗೆ
ಕೊನೆಗಾಲ!
ಸವಕಳಿಸುತ್ತಿಹ ನನಗೆಂದು
ದೊರೆವುದು ವಿಶ್ರಾಂತ ಜೀವನ
ಪಿಂಚಣಿ
ಮುಂದೊಮ್ಮೆ ನಾನೂ
ದರ್ಜಿಸುವೆ ಎನ್ನ ಪಳೆಯುಳಿಕೆ.


ಸತೀಶ್ ಅವರ ಕವನ -
ಸದ್ದು ಮಾಡದ ಘಂಟೆ


ಸುಮ್ಮನಿರುವವರು ಮಾಡುವರೆ ಸದ್ದು
ಚಲಿಸುವಿಕೆಗೇ ತಗುಲಿಕೊಂಡಿಹ ಮದ್ದು

ಗುಡಿ ಇಲ್ಲದ ಘಂಟೆ ಪಡೆ ಇಲ್ಲದ ಸೈನ್ಯ
ಹಳೆಯದನು ಈವರೆಗೆ ನೆಚ್ಚಿಕೊಂಡಿಹ ದೈನ್ಯ

ಸೆಣಬು ನಾರು ಹತ್ತಿ ಎಳೆಗಳಿಗೆ ಜೋತುಕೊಂಡು
ಹೊಸ ಸೂರು ತಲೆಮಾರುಗಳಿಗೆ ಆತುಕೊಂಡು

ದೂರದವರೆಗೆ ಪಸರಿಸುವ ಗಾಳಿ ಬದಲಾಯ್ತೆ
ಗಳಘಂಟೆಯೊಳಗಿನ ಲೋಹ ಸರಿಹೋಯ್ತೆ

ಹಿಂದಿನದಕು ಇಂದಿನದಕು ತಳುಕಿಕೊಂಡಂತೆ
ಹಳೆ ನಾದವನು ಆಲಿಸುವ ಕಿವಿಗಳು ಬದಲಂತೆ

ನಿಂತಲ್ಲೇ ನಿಂತವುಗಳಿಗೆ ಸ್ಪಂದಿಸುವ ಹಕ್ಕಿಲ್ಲ
ಬೇಕು ಬೇಕೆಂದಲ್ಲಿ ಓಡುವವುಗಳಿಗೆ ದಿಕ್ಕಿಲ್ಲ

ಇಂದಿನ ಸೂರ್ಯನು ಮರೆಯಾಗುವ ಮುನ್ನ
ಹಲವನ್ನು ಬೆಸೆವ ಇಂದನ್ನು ನೋಡುವುದು ಚೆನ್ನ.

Tuesday 26 August, 2008

ಚಿತ್ರ ೬೭



ಚಿತ್ರ ೬೭ ಕ್ಕೆ ತಿರುಕ,ಸತೀಶ್ ಮತ್ತು ಕುಮಾರ ಸ್ವಾಮಿ ಕಡಾಕೊಳ್ಳ ಅವರು ಬರೆದ ಕವನಗಳು ಹೀಗಿವೆ

ತಿರುಕ ಅವರ ಕವನ-
ಸಿದ್ಧತೆಗೆ ಚಿಂತನೆ


ಎತ್ತಲೋ ದೃಷ್ಟಿ - ಯಾವುದೋ ಚಿಂತೆ
ಹಳೆಯ ಕಡತದಲ್ಲಿ ಸಿಲುಕಿದ ನೋಟ
ಮೆಲುಕು ಹಾಕುತ್ತಲೇ ಕರಿಗೂದಲು
ಬಿಳಿಯಾಯಿತು
ಅದನೂ ಮನ ತಿಳಿಯದಾಯಿತು
ತಿಳಿದೊಡನೆ ಮನ ತಿಳಿಯಾಯಿತು
ಮುಂದಿನ ಅವಘಡವ
ಚಿಂತಿಸಿ ಮನ ಹೆಪ್ಪುಗಟ್ಟುತ್ತಿತ್ತು

ತಲೆಯ ಮಾಸಿದ ಬಟ್ಟೆ
ಯೊಳಗಣ ತಿಗಣೆ ತಿಳಿಯದಾಯಿತು
ಕಚ್ಚಿ ನೆತ್ತರು ಹೀರಿ
ನವೆಯಾದೊಡೆ - ಚಿಂತೆಯ ಕ್ಷಣ
ಗಳು ನಲಿವಾಯಿತು

ಗಾಡಿಯ ಹಿಡಿಯುವುದೇ ಒಂದು
ಚಿಂತೆಯಾಗಿತ್ತು
ಗಾಡಿಯೊಳಗೆ ಕುಳಿತೆಡೆ
ಮುಂದಾಗುವುದರ
ಚಿಂತೆ ಮನೆ ಮಾಡಿತ್ತು

ಕೊಟ್ಟ ಹೆಣ್ಣು ಕುಲಕ್ಕೆ ಹೊರಗು
ಮಗಳ ಕಳುಹಿಸಿದೆಡೆ ಅಂದುಕೊಂಡದ್ದು
ತಪ್ಪಾಗಿತ್ತು
ಹೀನರ ದುಷ್ಕೃತ್ಯಕ್ಕೆ ಮಗು ಬಲಿಯಾಗಿತ್ತು
ಮುಂದಾಗುವುದರ
ಚಿಂತೆ ಮನೆ ಮಾಡಿತ್ತು

ಅಂದು - ಕೂಸುಗಾಣದ ಮನೆಗೆ
ಅಂಬೆಗಾಲಿಟ್ಟು ಬಂದು
ಮನವೆಂಬ ದುಕಾನು
ಮನೆಯೆಂಬ ಉಗ್ರಾಣವ ತುಂಬಿತ್ತು
ನಕ್ಕು ನಲಿದು ಎಲ್ಲರ ಹಸಿವು ಹಿಂಗಿಸಿತ್ತು

ಇಂದು - ಕೂಸುಕಾಣದ ಮನೆಯ
ತುಂಬಿತ್ತು
ಗಂಡ, ಮಾವ, ಅತ್ತೆಯರ
ಹೀಗಳಿಕೆಗೆ ತುತ್ತಾಗಿತ್ತು
ತನ್ನ ಬಾಳಿಗೆ ತಾನೇ ಕುತ್ತಾಗಿತ್ತು


ಸತೀಶ್ ಅವರ ಕವನ -
ಎತ್ತಲೋ ಓಡುತಲಿರುವ ಮನಸ


ಇಣಕಿ ಹಾಕೋ ಮುಖಗಳು ಇರಲಿ
ಹಣಕಿ ಹಾಕೋ ಯೋಚನೆ ಸಾಕು
ಮೈ ಮನ ಸೇರಿಸಿ ಎಲ್ಲ ಆವರಿಸಿ
ಹೊಚ್ಚಿದ ದುಗುಡ ತೆಗೆದು ಬಿಸಾಕು.

ದೂರದ ದೃಷ್ಟಿ ನಿರಿಗೆಯ ಮುಖವು
ಎತ್ತಲೋ ಓಡುತಲಿರುವ ಮನಸು
ಒಟ್ಟಿಗೆ ಸಾಲಲಿ ನಿಂತು ನೋಡುತಿಹ
ಹಾಯಿ ದೋಣಿಯ ಗಾಳಿಯ ಕನಸು.

ಹತ್ತಿರದ ನಿಲುವಿಗೆ ಇನ್ನಷ್ಟು ದೂರ
ಮತ್ತೆ ಬಾರವು ನಿನ್ನೆಯ ನೋಟಗಳು
ಇಂದನು ಹಾರಿಸಿ ಕರೆದೊಯ್ಯುತಿವೆ
ಕಾಳಜಿ ನಾಳೆ ಎನ್ನುವ ಸಂತೆಗಳು.

ಏತಕೆ ಚಿಂತೆ ಸೊರಗುವುದಂತೆ
ಮನಸೆಂಬುವ ದೊಡ್ಡ ಬಡಪಾಯಿ
ಕಷ್ಟವೋ ಸುಖವೋ ಅಳಿಯದೆ ಇರಲಿ
ಗೆದ್ದೇ ಗೆಲ್ಲುವೆನೆಂಬ ಸಿಪಾಯಿ.


ಕುಮಾರ ಸ್ವಾಮಿ ಕಡಾಕೊಳ್ಳ ಅವರ ಕವನ -
ನೆಚ್ಚಿಕೆ

ಬಿಳಿ ಚಿಮ್ಮುರಿಯ
ಹುರಿಮಾಡಿ ಬಿಗಿದಿರಲು
ಎಂತ ಠೀವಿಯ ನೋಟ
ಸುಕ್ಕಾದರೂ ಮೈಮಾಟ

ಹುರಿ ಮೀಸೆ ಇಲ್ಲ
ಹುರಿಯಾಯಿತು ಗಲ್ಲ
ತೊದಲಾಯಿತು ಸೊಲ್ಲು
ಈತ ಬದುಕೆಲ್ಲ ಬಲ್ಲ

ನೆಟ್ಟ ನೋಟಕ್ಕಿಲ್ಲ
ಬೆದರಿಕೆಯ ಕಾಟ
ಇಳಿ ವಯಸ್ಸಿನಲ್ಲೂ
ಪದುಳವಾದ ನೋಟ

ಸುತ್ತುವರಿದರು ಸುತ್ತ
ಬವಣೆಗಳ ಗುಚ್ಚ
ಬದಲಾಗಲಿಲ್ಲ ಈತನ
ಬದುಕಿನ ಬಯಲಾಟ

ಇದ್ದರೆಷ್ಟು ಸಿರಿ
ಸಾವು ತಪ್ಪುವುದಿಲ್ಲ
ತಪ್ಪಿಸುವರು ಯಾರಿಲ್ಲ ಇದ
ತಿಳಿದು ತೆಪ್ಪಗೆ ಕುಂತನಲ್ಲ

ಯಾರೀಗೋ ದಾರಿಯಲಿ
ಕಾದಿರಲು ಬಾಳಿನಲಿ
ಕಾಣರೊಬ್ಬರು ಇಲ್ಲಿ
ಕಂಡೆನೆಂಬ ನೆಪದಲ್ಲಿ

ಗಲ್ಲಕ್ಕೆ ಕೈಯುಂಟು
ಆತು ಕುಂತಿರಲು
ಗೆಲುವಿನಲಿ ಕುಳಿತಿಹನು
ಗೆಲುವೆನೆಂಬ ನಂಬುಗೆಯಲಿ

** ಕುಕೂಊ...

Wednesday 20 August, 2008

ಚಿತ್ರ ೬೬

I

ಚಿತ್ರ ೬೬ ಕ್ಕೆ ಸ್ಪಂದಿಸಿದವರು ತಿರುಕ, ಶ್ರೀಕಾಂತ ಮತ್ತು ಸತೀಶ್.

ತಿರುಕ ಅವರ ಕವನ -
ಅಂತರಾಳದ ಅನಿಸಿಕೆ


ನಾ ಬಿರಿದ ಹೂ
ನೀ ಹಸಿದ ದುಂಬಿ
ಎಮ್ಮದೆಲ್ಲಿಗೆಲ್ಲಿಯ ನಂಟು?
ನಮ್ಮಿಬ್ಬರಲಿರುವುದು ವೈರತ್ವವೋ?
ಸ್ನೇಹವೋ?
ಎನ್ನ ರಸವ ಹೀರುವುದು ನಿನ್ನ ಕರ್ಮ
ನಿನ್ನ ಪಾದ ಸ್ಪರ್ಶಕೆ ಹಾತೊರೆವುದು ನನ್ನ ಧರ್ಮ
ಜಗಕೆ ಬೇಕಿಹುದು
ನಾವಿಬ್ಬರು ಕೂಡಿಡುವ ಗಂಟು

ಕಷ್ಟಕಾಲಕೆ ಕೂಡಿಡುವುದು
ನಮ್ಮ ಧರ್ಮ
ಸುಲಭದಲಿ ಅದ ಕಳೆದುಕೊಳ್ಳುವುದೂ
ನಮ್ಮ ಕರ್ಮ
ಪ್ರತಿ ಸಲವೂ ನನ್ನ ನಿನ್ನ
ಸಮುದಾಯವ ಮೋಸಿಸುವರೇ
ಈ ಮಹಾಜನರು
ನಮ್ಮ ಕುಡಿಕೆಯು ಅವರದೇ ಆಸ್ತಿ
ಎಂದು ತಿಳಿದವರು

ಎನ್ನ ಮಕರಂದವೇ ನಿನಗೆ ಆಸರೆ
ನೀ ಮಾಡುವ ಪರಾಗ ಸಂಚಲನೆಗೇ ಎನ್ನ ಕಾತರ
ಎನ್ನ ಸಂತತಿಯ ಬೆಳವಣಿಗೆಯ ನಿನ್ನ ಧರ್ಮ
ಜಗಕೆ ಆಸರೆಯ ನೀಡುವುದೇ ನಮ್ಮೀರ್ವರ ಕರ್ಮ

ಕಾಣದ ದೇವನ ಮುಡಿಗೆ ಎನ್ನದೇ ಅಲಂಕಾರ
ಅಭಿಷೇಕಕೆ ನಿನ್ನದೇ ಮಧುವಿನ ಪರಿಕಾರ
ನಾವಿಬ್ಬರೂ ಕೂಡಿ ಸಾರಬಹುದೇ ಸಮರ
ಆಗಲಿ ಸರಿಯೇ ನಮ್ಮೀರ್ವರ ಹೆಸರು ಅಮರ

ಕೊಡು ನಿನ್ನ ಸಮ್ಮತಿ!
ಮಾಡುವೆ ಮಧುವ ವಿಷದ ಬಟ್ಟಲು
ಮೊನಚು ಕೊಂಡಿಯಿಂದ ಆತನಲಿ ಜಾರಲು
ಕಾಣುವನು ಹಂತಕನು ಕೊನೆ ಗತಿ


ಶ್ರೀಕಾಂತ ಅವರ ಕವನ -
ಜೇನುನೊಣದ ಕಲೆಯ ಕಲಿ!

ಜೇನುನೊಣವು ಸುಮದ ಮೇಲೆ
ಕುಳಿತಿಹುದನು ನೋಡು ಅಲ್ಲಿ!
ಜೇನುತುಪ್ಪದಾಸೆ ಬಿಟ್ಟು
ಜೇನುನೊಣದ ಕಲೆಯ ಕಲಿ!

ಸುಮದ ನಗುವು ನಂದದಂತೆ
ಜೋಪಾನದಿ ನೋಡಿಕೊಂಡು
ಮಕರಂದವ ಹೀರುತಿರುವ
ಜೇನುನೊಣದ ಕಲೆಯ ಕಲಿ!

ಹಲವು ಸುಮಗಳಿಂದ ತಾನು
ಮಕರಂದವ ಆಯ್ದು ತಂದು
ಜೇನುತುಪ್ಪ ಮಾಡ ಹೊರಟ
ಜೇನುನೊಣದ ಕಲೆಯ ಕಲಿ!

ಸುಮದಲಿಹುದು ಹಲವು ರುಚಿ;
ಬೇರೆ ರುಚಿಯ ಹೀರಿಕೊಳದೆ
ಸಿಹಿಯು ಮಾತ್ರ ಹೀರಿಕೊಳುವ
ಜೇನುನೊಣದ ಕಲೆಯ ಕಲಿ

ಸುಮದ, ನೊಣದ ಸೊಗಸು ಮಾತ್ರ
ಕಂಡು ತೃಪ್ತಿಯಾಗಬೇಡ!
ನರಗೆ ಪಾಠವಿಹುದಿಲ್ಲಿ!
ಜೇನುನೊಣದ ಕಲೆಯ ಕಲಿ!

ಜಗದ ಜನದಿ ಹಲವು ಗುಣ;
ಸಿಹಿಗುಣಗಳ ಮಾತ್ರ ಹೀರಿ
ಉಳಿದುದನು ತ್ಯಜಿಸೆಂಬ
ಜೇನುನೊಣದ ಕಲೆಯ ಕಲಿ!

ಹೀರಿಕೊಂಡ ಸಿಹಿಗುಣಗಳು
ಸೇರಿ ನಿನ್ನ ಗುಣವಾಗಲಿ
ಎಂದು ಪಾಠ ಹೇಳುತಿರುವ
ಜೇನುನೊಣದ ಕಲೆಯ ಕಲಿ!

ಯಾವ ಹಾನಿ ಮಾಡದಂತೆ
ಸುಗುಣಗಳನು ಸಂಪಾದಿಸು;
ನನ್ನ ನೋಡಿ ಕಲಿ ಎಂಬ
ಜೇನುನೊಣದ ಕಲೆಯ ಕಲಿ!

ಜೇನುತುಪ್ಪದಾಸೆ ಬಿಡು!
ಜೇನುನೊಣವು ನರಗೆ ಗುರು!
ಜೇನುನೊಣದ ಪಾಠ ಕೇಳಿ
ಜೇನುನೊಣದ ಕಲೆಯ ಕಲಿ!


ಸತೀಶ್ ಅವರ ಕವನ -
ಹೂವು-ದುಂಬಿ

ಒಂದೇ ಒಂದು ನೆಲೆಯಲ್ಲಿ ಇದ್ದು
ಒಂದೇ ದಳದಲ್ಲಿ ಒಟ್ಟೊಟ್ಟಿಗೆ ಎದ್ದು
ಬಣ್ಣಗಳ ಆಗರ ಹೂಗಳ ಪಾಲು.
ಅದೆಲ್ಲೋ ಬೀರಿ ಮತ್ತಿನ್ನೆಲ್ಲೋ ಹಾರಿ
ಹಲವು ಮಕರಂದವನು ಕುಟ್ಟಿ ಹೀರಿ
ಒಂದರ ನಂತರ ಬರುವ ದುಂಬಿ ಸಾಲು.

ಸಿಕ್ಕ ಬೆಳಕಿನ ಕ್ಷಣಗಳನು ಎಣಿಸುವ
ಚಿಕ್ಕ ಮೊಗ್ಗಾಗಿ ಹಿಗ್ಗಿ ಹಾತೊರೆಯುವ
ಒಂದೇ ಗಿಡದಲಿ ಕಂಗೊಳಿಸುವ ಹೂಗಳು.
ಒಂದೇ ರಾಣಿಯ ಮೊಟ್ಟೆಯ ಕೂಸು
ಅವಳು ಹೇಳಿದ್ದೇ ಇವರ ಆಜ್ಞೆಯ ಹಾಸು
ಸಾಮ್ರಾಜ್ಯವನು ಕೊಳ್ಳೆ ಹೊಡೆವ ದುಂಬಿಗಳು.

ಇಂದು ಇದ್ದು ನಾಳೆ ಇರದ ನಮ್ಮದೇ ತತ್ವ
ನಾವು ನಮ್ಮವರೊಳಗೆ ನಮ್ಮ ಅಂತಃಸತ್ವ
ಕೊರಗು-ಮರುಗು ಇರದೆ ಸದಾ ನಗುವ ಜೀವ.
ದಿನವು ಅಲ್ಲಲ್ಲಿ ಬಿದ್ದು ಅದೆಲ್ಲಿಂದಲೋ ಕದ್ದು
ಸಾವಿರ ಸರದಾರರು ಸದಾ ಸಿಹಿಯ ಮೆದ್ದು
ರೆಕ್ಕೆ ಬಡಿದಂತೆಲ್ಲಾ ಸದಾ ಕುರ್ರೆನ್ನುವ ಭಾವ.

ನಾವು ನಮ್ಮದೆಂಬ ಸೃಜನಶೀಲತೆ ದೊಡ್ಡದು
ಒಂದಿದ್ದು ನಾಳೆ ನೂರಾಗುವ ಬದುಕು ಸಣ್ಣದು
ಎಲ್ಲಿರಲಿ ಬಿಡಲಿ ನಮ್ಮತನವೆನ್ನುವುದು ಮುಖ್ಯ.
ಹತ್ತು ಹಲವು ಕಡೆ ಹಾರಿ ಹೀರುವ ಬಾಳು ಚೆನ್ನ
ಇದ್ದಷ್ಟು ದಿನ ಆದಷ್ಟು ಹೆಚ್ಚು ಕೂಡಿ ಕಳೆವ ಮುನ್ನ
ಹೂಂಕರಿಸಿ ನಮ್ಮತನವನು ತೋರುವ ಸಖ್ಯ.


Friday 8 August, 2008

ಚಿತ್ರ ೬೫



ಅನ್ನದಾತ ಚಿತ್ರಕ್ಕೆ ಸ್ಪಂದಿಸಿದವರು ಸತೀಶ್ ,ಕುಮಾರ ಸ್ವಾಮಿ ಕಡಾಕೊಳ್ಳ ಮತ್ತು ತಿರುಕ.

ಸತೀಶ್ ಅವರ ಕವನ-
ರೈತನ ಹಾಡು


ಇಷ್ಟಾ ಇರ್ಲಿ ಕಷ್ಟಾ ಇರ್ಲಿ
ದಿನವೂ ಗೆಯ್ಯೋ ಕಾಯ್ಕ
ದೇವ್ರು ಕೊಟ್ಟ ಭೂಮೀ ಮೇಲೆ
ಈ ಮನ್ಷನ್ದೇನು ಮಾಯ್ಕ.

ಮಣ್ಣಿಗ್ ನೀರು ಹಾಯ್ಸಿ ತೊಯ್ಸಿ
ನಾಟಿ ನೆಡೋ ಕೆಸ್ರು
ಬೀಜಾ ಬಿತ್ತಿ ಪಸ್ಲು ಬೆಳೆದು ಒಂದೇ
ದಿನಕ್ ಬರೋದಿಲ್ಲ ಹಸ್ರು.

ಸೂರ್ಯಾ ಹುಟ್ಟಿ ಬರೋಕ್ ಮುನ್ನ
ಎದ್ದು ಹೊಲದ್ ಕಡೆ ನಡ್ದು
ಇಂದು ದುಡ್ದು ಎಂದೋ ತಿನ್ನೋ
ನಮ್ ಬಾಳೇ ದೊಡ್ದು.

ಕೈಯಲ್ ಕಸುವು ಮೈಯಲ್ ಉಸ್ರು
ಇರೋವಾಗ್ಲೇ ಕಾಲ
ಇಂದು ದುಡ್ದು ಇಡ್ದೇ ಹೋದ್ರೆ
ತುಂಬೇಕಲ್ಲ ಹೊಟ್ಟೇ ಅನ್ನೋ ಚೀಲ.

ಆಟಕ್ಕುಂಟು ಲೆಕ್ಕಕ್ಕಿಲ್ಲ
ಈ ರೈತಾಪಿ ಸಂಸಾರ
ಸತ್ಯಾ-ನ್ಯಾಯಕ್ ಎಂದೂ ಉಳಿವು
ಅನ್ನೋ ಪಾಪಿ ವಿಚಾರ.

ದೇಶ ದೊಡ್ಡಕ್ ಮೇಲಕ್ ಬಂದ್ರು
ಎಲ್ರೂ ತಿನ್ನೋದ್ ಅನ್ನಾನೇ
ಅನ್ನವ ಕೊಟ್ಟ ಕೈಯನು ಮರೆತವ
ತನ್ನನು ತಾನೇ ಮರಿತಾನೆ.

ಕುಮಾರ ಸ್ವಾಮಿ ಕಡಾಕೊಳ್ಳ ಅವರ ಕವನ -
ಶ್ರಾವಣ ಮಳೆ

ಶ್ರಾವಣ ಬಂತು
ಹದಮಳೆ ತಂದಿತು
ಒಡ್ಡೆಲ್ಲ ತುಂಬಿತು
ಗದ್ದೆ ಕೆಸರಾಯಿತು

ತಪ್ಪಿದರೆ ಹದ
ಕೈಕೊಟ್ಟೀತು ಪೈರು
ಇಲ್ಲವಾದೀತು ಮುಂದೆ
ಸುಗ್ಗಿಯ ಕೂಳು

ನೇಗಿಲ ಹೊಡೆಯೋಣ
ಹೊಲ ಹದಮಾಡೋಣ
ಒಡ್ಡು ಹಾಕೋಣ
ಮಡಿಗಳ ಕಟ್ಟೋಣ

ಹಸಿರು ಸರಬು
ತುಳಿಯುತ್ತ ಮಡಿಯಲ್ಲಿ
ಬದುವು ಸವರುತ್ತ
ಎಂಡೆ ಹಾಕೋಣ

ಬತ್ತದ ಅಗೆ ಕೀತ್ತು
ಗೊಬ್ಬರ ಹಾಕುತ್ತ
ನಾಟಿ ಮಾಡೋಣ
ಪೈರು ಬೆಳೆಯೋಣ

ಕೈಕೆಸರಾದರೆ
ಬಾಯಿಮೊಸರಂತೆ
ಕೆಸರಲ್ಲಿ ನೆಟ್ಟು ಸಸಿಯ
ಬೆಳೆಯೋಣ ನಾವು ಬತ್ತ

ಕೂತು ಉಂಡರೆ
ಕುಡಿಕೆ ಹೊನ್ನು ಸಾಲದು
ಮೈಬಗ್ಗಿಸಿ ದುಡಿಯೋಣ
ದೇಶಕೆ ಅನ್ನವ ನೀಡೋಣ

** ಕುಕೂಊ...

ತಿರುಕ ಅವರ ಕವನ -
ನಾ ಹೆಚ್ಚೋ ಇವ ಹೆಚ್ಚೋ?!


ಆಗಸ ತೂತಾಗಿದೆ
ಜಾಲರಿಯಿಂದ ನೀರು ತೊಟ್ಟಿಕ್ಕುತ್ತಿದೆ
ಕೈ ತುಂಬಾ ಕೆಲಸ ಕಾಯುತ್ತಿದೆ
ಆಗಬೇಕಿದೆ
ಸಮಯಕೆ ಸರಿಯಾಗಿ ಉತ್ತು ಬಿತ್ತುವಿಕೆ
ನಾನಲ್ಲ ಕೆಲಸಗಳ್ಳ
ಮೈ ಮುರಿದು ಕಾಯಕ ಮಾಡುವೆ
ಉಣಿಸಿ ತಣಿಸಿ ಭೂತಾಯಿಯ ಕಾಪಾಡುವೆ
ಕೈತುಂಬ ಅನ್ನ ಉಣುವೆ
ನಂಬಿದವರ ಕಾಪಾಡುವೆ
ಮುಂಬರುವ ಬಿತ್ತನೆಗೆ
ಬೀಜ ಗೊಬ್ಬರ ಅಣಿ ಮಾಡುವೆ
ಹೆಚ್ಚಾದುದ ಮಂಡಿಗೆ ಹಾಕುವೆ
ಉಣ್ಣಲು ಉಡಲು ಕೈ ಬಿಚ್ಚುವೆ
ಎನ್ನ ಜೇಬು ಮಾತ್ರ ಖಾಲಿ ಖಾಲಿ
ತಲೆಯಿಟ್ಟಲ್ಲಿ ಹೊಡೆಯುವೆ ಜೋಲಿ

ಮಂಡಿಯವ ಹೆಚ್ಚಿನ ಹಣಕೆ ಮಾರುವ
ಕುಂಡಿ ಎತ್ತದೇ ಒಂದೆಡೆ ಕುಳಿತಿರುವವ
ಒಂದೂ ಹನಿ ಬೆವರು ಸುರಿಸಿದವ
ಬೊಕ್ಕಸ ಮೇಲೆ ಮೇಲೆ ಏರಿಸುತಿಹ
ಎನ್ನ ಹೆಚ್ಚಿನ ಖರ್ಚಿಗೆ ಹಣ ಕೊಡುವ
ಚಕ್ರಬಡ್ಡಿ ಸುಸ್ತಿಬಡ್ಡಿ ಹೇರಿ ಸುಸ್ತಾಗಿಸುವ
ದುಡಿದು ಬೆಳೆದ ಸಿರಿಯ
ಹೀನಾಯ ಬೆಲೆಗೆ ಸೆಳೆವ
ಮನ ಬಂದ ಬೆಲೆಗೆ ಮಾರಿ ದೊಡ್ಡವನಾಗುವ
ಕಾಣದ ದೇವನ ಕೃಪೆ ಪಡೆಯುವ
ಮತದಾರನ ಒಡೆಯನ ಸಲಹುವ
ತನ್ನ ಸಂತತಿಯ ತನ್ನಂತೆ ಇರಿಸುವ
ನನ್ನ ಸಂತತಿಯ ನನ್ನಂತೆ ಇಳಿಸುವ

ನಾ ಹೆಚ್ಚೋ ಇವ ಹೆಚ್ಚೋ?!

Tuesday 29 July, 2008

ಚಿತ್ರ ೬೪



ಚಿತ್ರ ೬೪ ಕ್ಕೆ ಸತೀಶ್ , ತಿರುಕ ಮತ್ತು ಕುಮಾರ ಸ್ವಾಮಿ ಕಡಾಕೊಳ್ಳ ಅವರು ಕವನಗಳನ್ನ ಬರೆದಿದ್ದಾರೆ.

ಸತೀಶ್ ಅವರ ಕವನ -
ನಿಂತಲ್ಲಿ ನಿಂತವರ ಕಷ್ಟ


ನಿಂತಲ್ಲೇ ನಿಂತವರ ಸಮಸ್ಯೆಗಳು ಒಂದಾದ್ರೆ
ಸದಾ ಚಲನೆಯಲ್ಲಿರೋ ಕಷ್ಟಾ ಇನೊಂದ್ ಥರ
ಅಲ್ಲಲ್ಲೇ ಬದಲಾಗೋ ಋತುಮಾನ ಕಾಲನ
ಮೋಡಿಗೆ ಒಳಗಾಗದೆ ಬದುಕೋದೇ ದುಸ್ತರ.

ಆನೆ ಕುದುರೆ ಓಡಾಡಿ ಸೈನ್ಯದವ್ರು ಕಾದಾಡಿ
ದೇಶಕ್ಕೆ ತಾನೇ ಬಾಗಿಲು ಅನ್ನೋ ಮಹಾದ್ವಾರ
ಇಂದು ಸೂರೇ ಇಲ್ದೇ ದಿಕ್ಕಿಗೆ ದಿಕ್ಕು ತಪ್ಪಿಸಿ ನಿಂತ
ಅವಶೇಷಗಳೆಡೆ ದಿಕ್ಕೆಟ್ಟ ಪ್ರವಾಸಿಗರ ಮಹಾಪೂರ.

ಎಲ್ಲಾ ಬದಲಾಗುತ್ತೆ, ಕಾಲ ಹೇಳೋದನ್ನ ಕೇಳಿ-ಬಿಡಿ
ಎಲ್ಲಾ ಸರಿಹೋಗುತ್ತೆ, ಸುತ್ಲೂ ಆಗೋದನ್ನ ನಂಬಿ-ನೋಡಿ.

ಗೋಪುರವನ್ನಾದ್ರೂ ಕಟ್ಟಿ ಗುಂಬಜವನ್ನಾದ್ರೂ ನಿಲ್ಲಿಸಿ
ಕೋಟಿ ವರುಷಗಳ ಲೆಕ್ಕದ ಪ್ರಕೃತಿಗೇನಾಯ್ತು
ಒಂದು ರೂಪದ ವಸ್ತುವಿನಿಂದ ಮತ್ತೊಂದನ್ನು ನಿರ್ಮಿಸಿ
ಕೆರೆಯಿಂದ ಕೆರೆಗೆ ನೀರನ್ನು ಚೆಲ್ಲಿದಂತಾಯ್ತು.

ಏನೂ ಇರದ ಜಾಗೆಯಲ್ಲಿ ಇನ್ನೊಂದೇನನ್ನೋ ಕಟ್ಟಿ
ಬರಿಗೈಯಲ್ಲಿ ಹೋಗುವವರಿಗೆ ಕೊಂಡೊಯ್ಯುವ ಬಯಕೆ
ವಿಪರ್ಯಾಸವೆನ್ನೋಣವೇ ಬಾಗಿಲುಗಳಿರದ ಗೋಡೆ ತಟ್ಟಿ
ನೋಡಿ ಹಳೆಯದರಿಂದ ಹೊಸತನ್ನು ಕಲಿವ ಉತ್ಸಾಹಕೆ.

ತಿರುಕ ಅವರ ಕವನ -
ಶಿಥಿಲ ಆಧಾರಿಯ ವ್ಯಥೆಯ ಕಥೆ

ಕೇಳುವಿರೇನು ಎನ್ನ ಕಥೆ
ನಂತರ ಹಳಿಯದಿರಿ ’ಇದು ಬರೀ ವ್ಯಥೆ’
ಹೇಳದಿರೆ ಎನ್ನ ಮನ ಕುದಿವುದು
ಹೇಳಿದರೆ ಸ್ವಲ್ಪ ದುಃಖ ತಣಿವುದು

ಒಮ್ಮೆ ನಂಬಿದ್ದರು ಎನ್ನ ಮಂದಿ ಹಲವು
ಎನ್ನ ಸಲಹಲು ಮುಂದೆ ಬಂದವರು ಕೆಲವು
ವೈರಿಗಳ ಅಟ್ಟಹಾಸ ಮೊಟಕುತ್ತಿದ್ದೆ
ನಂಬಿದವರ ನಿಶ್ಚಿಂತ ನಿದ್ರೆಗೆ ಅನುವಾಗುತ್ತಿದ್ದೆ

ಅನುಚಣ ಮೈ ಮರೆತು ಕಣ್ಮುಚ್ಚಿದ್ದೆ
ಗುಂಡು ಮದ್ದುಗಳಿಗೆ ಬಲಿಯಾಗಿದ್ದೆ
ಕೈಗಳು ನಿಸ್ಸಹಾಯಕವಾಗಿ ನೆಲದ ಮೇಲೆ ಮಲಗಿರಲು
ಚೇತನ ನಿಶ್ಚೇತನವಾಗಿ ಮರುಗುತಿರಲು

ವೈರಿಯ ದೇಶ ಭಾಷೆ ಜಾತಿ ಮತ
ಗಳ ಹೇಳಿ ಪ್ರಯೋಜನವೇನು?
ಆತ ಮತ್ತೆ ಕೈಗೆ ಸಿಗುವನೇನು?
ಆತನ ಮಕ್ಕಳು ಮಾಡಿದ ತಪ್ಪೇನು?
ಶಿಕ್ಷಿಸಲರ್ಹರೇನು?
ಕಳೆದುದ ಮತ್ತೆ ಪಡೆದೇನೇ?

ಎಮ್ಮ ಸಂತತಿಯ ನೋಡಿಹರಿಲ್ಲಿ
ಎನ್ನ ತುಂಡು ಕಾಲು ಕೈಗಳ ನೋಡಲು ಬಂದಿಹರಿಲ್ಲಿ
ಎನ್ನ ದುಃಖದ ಚಿತ್ರವ ತೆಗೆಯುತಿಹರಿಲ್ಲಿ
ಅವರಿವರಿಗೆ ತೋರಿಸಿ ನಲಿಯುವರಲ್ಲಿಲ್ಲಿ

ಎಮ್ಮ ಸಂತತಿಗಳು ದಂಡು ದಂಡಾಗಿಹರಿಲ್ಲಿ
ತಮ್ಮ ತೀಟೆಗಳ ತೀರಿಸುಕೊಳ್ಳುವರು ನನ್ನ ಬದಿಯಲ್ಲಿ
ತಮ್ಮ ನೆನಪುಗಳ ಕಲ್ಲುಗಳಲಿ ಕೆತ್ತುತ್ತಿಹರು
ಇರುವ ಅಲ್ಪ ಸ್ವಲ್ಪ ಅಂಗವನೂ ತುಂಡರಿಸುತಿಹರು

ಹಳೆಯ ಶತ್ರುವಿನ ಸಂತತಿಯ ಹೀಗಳೆಯಲೋ
ಎನ್ನ ಸಂತತಿಯ ಶಪಿಸಲೋ
ತಿಳಿಯದಾಗಿದೆ - ತಿಳಿಯ ಪಡಿಸುವಿರಾ
ಓ ಮಹಾ ಜನಗಳೇ!
ನಿಮ್ಮ ರಕ್ಷಿಸಿದವನ ರಕ್ಷಿಸುವಿರಾ?
ದಯನೀಯ ಕೂಗ ಕೇಳುತಿಹಿರಾ!

ಕುಮಾರ ಸ್ವಾಮಿ ಕಡಾಕೊಳ್ಳ ಅವರ ಕವನ -
ಗೋಡೆಯ ಕಿವಿಮಾತು

ಪಾಳು ಬಿದ್ದವು ಹೇಗೆ
ಅನಾಥವಾದವು ಏಕೆ
ಯಾವ ನೆನಪಿಗಾಗಿ
ನಿಂತಿರುವವು ಕಾಣೆ
ಗುಡಿ ಗೋಪುರವೋ
ಗುಂಬಾಜ್ ಮಸೀದಿಯೋ
ಏನೇನೋ ಹೆಸರುಗಳು
ನಾವುಗಳೇ ಇಟ್ಟೆವು
ಸಾಕ್ಷಿಯಾರು ಇದಕೆ

ನಡೆದಿತ್ತು ಒಡ್ಡೋಲಗ
ನೆರೆದ ಜನಗಳ ನಡುವೆ
ಮೆರೆವ ರಾಜನ ಮುಂದೆ
ಮಂತ್ರಿ ಮಹೋದಯನ
ಸೂತ್ರಗಳ ಜೊತೆಗೆ
ತಾಣವಾಗಿಗೆ ಇಂದು
ಗೂಬೆ ಪಾರಿವಾಳಕೆ
ಬಿಲವಾಯಿತು ಸಂದು
ಹಾವು ಇಲಿ ಓತಿಕೇತಕೆ

ಕಟ್ಟಿಸಿದರೋ ಯಾರೋ
ಯಾವ ಉದ್ದೇಶಕೋ
ಕಟ್ಟಿದರು ಯಾರೋ
ಇಟ್ಟು ಇಟ್ಟಿಗೆ ಕಲ್ಲು
ಗಾರೆ ಮಣ್ಣನ್ನು
ಗುಟ್ಟು ಬಿಟ್ಟು ಕೊಡೆನು
ಎನ್ನುವಾ ಗತ್ತಿನಲಿ
ಮೋಟಾಗಿ ಗೋಟಂತೆ
ನಿಂತಿರುವವು ಗೋಡೆಗಳು
ಘಾಟಿ ಗಾಳಿಗೆ ಅಂಜದೆ
ಸುರಿವ ಮಳೆಗೆ ಕರಗದೆ

ಬರುವರು ಜನಗಳು
ದಿನಾಲು ಹಿಂಡುಹಿಂಡಾಗಿ
ನೋಡಲು ಎಲ್ಲವನು
ಕೇಳಿದ ಕಥೆಯೊಂದರ
ಸಾಕ್ಷಿಗೆ ಇದುಎಂದು
ಯಾವುದು ಸರಿಯೋ
ಯಾವುದು ತಪ್ಪೋ
ಇತಿಹಾಸದ ಗೋಜಿಗೆ
ಈಗ ನಮಗೇಕೆ
ಗೋಡೆಯ ಕಿವಿಮಾತು
ಅಲಿಸಿ ಅರಿಯಬೇಕಷ್ಟೆ

ಯಾವುದು ಶಾಶ್ವತವಲ್ಲ
ನಶ್ವರಕೆ ಅಂಟಿದರೆ
ಯಾರಿಗೂ ಶಾಂತಿಯಿಲ್ಲ
ಇದನು ಅರಿತವರಿಗೆ
ಬದುಕೆಲ್ಲ ಬೆಳಕಂತೆ
ಇದುವೆ ಗುಟ್ಟಂತೆ
ಗುಟ್ಟು ರಟ್ಟಾಯಿತಂತೆ
ನೀ ಕಲಿ ಇದರಿಂದ
ನಾನೇಳುವುದೇ ಇಷ್ಟನ್ನ

**ಕುಕೂಊ..

Tuesday 22 July, 2008

ಚಿತ್ರ ೬೩



ಚಿತ್ರ ೬೩ ಕ್ಕೆ ತಿರುಕ,ಸತೀಶ್ ಮತ್ತು ಕುಮಾರ ಸ್ವಾಮಿ ಕಡಾಕೊಳ್ಳ ಅವರು ಕವನಗಳನ್ನ ಬರೆದಿದ್ದಾರೆ.

ತಿರುಕ ಅವರ ಕವನ -

ನಿಸರ್ಗ ಉಳಿಸಿರಿ
ಛಳಿಯಾದರೇನು
ಮಳೆ ಇದ್ದರೇನು
ತಲೆ ಎತ್ತಿ ನಿಲ್ಲಬಲ್ಲೆನೇ ನಾನು
ಬಿಸಿಲಿನ ಭರಾಟೆಗೂ ತಲೆ ಬಗ್ಗಿಸಲಾರೆ

ನೀವಿನ್ನೂ ಕಂದ
ನನ್ನ ನೆರಳಲಿ ಬೆಳೆಯಬೇಕಿಂದಿನಿಂದ
ಕಲಿಯುವುದು ಬಹಳವಿದೆಯೆಂದೆ
ನನ್ನೆತ್ತರಕೆ ಈಗಲೇ ನೀವೇರಲಾರೆ!
ಸ್ವಲ್ಪ ಕಾಲ ಯಾಕೆ ಕಾಯಲಾರೆ?

ಹಿಂದೊಮ್ಮೆ
ನಮ್ಮದೂ ಆಗಿತ್ತು
ತುಂಬಿದ ಕುಟುಂಬ
ಅಕ್ಕ ಅಣ್ಣ, ತಮ್ಮ ತಂಗಿ
ಅಪ್ಪ ಅಮ್ಮರ ಕೂಡಿದ
ತುಂಬು ಸಂಸಾರ

ಕ್ರೂರಿಗೆ ತನ್ನ ಹೊಟ್ಟೆಪಾಡಿನ ಚಿಂತೆ
ದೋಚಿದ್ದು ವನರಾಶಿಯ ಕಂತೆ ಕಂತೆ
ತುಂಬಿದ್ದು ತಮ್ಮೊಡಲೆಂಬ ಬೊಂತೆ
ಯಾರಿಗಾದರೂ ಇದೆಯಾ ನಿಸರ್ಗದ ಚಿಂತೆ

ಕಚಕ್ಕನೆ ಒಡಹುಟ್ಟಿದವರ,
ಹುಟ್ಟಿಸಿದವರ ಕತ್ತರಿಸುವಿಕೆ
ಬೆಳೆಯುವುದರ ಜೊತೆಗೆ
ಹೆಗಲ ಮೇಲೆ ಎರಡು ಕಂದಮ್ಮಗಳ ಸಲಹುವಿಕೆ

ನನ್ನೊಡನಿರುವುದೆರಡೇ ಕಂದ
ನಾ ಕಾಪಾಡಬೇಕಿರುವುದು ಇಂದಿನಿಂದ
ನಿಮ್ಮಂತೆ ನಾವೂ ತಿಳಿಯುವಿರೆಂದೆ
ನಮ್ಮೆಲ್ಲರಲಿಹ ಚೈತನ್ಯ ಒಂದೇ

ಒಂದರೆಚಣ ಚಿಂತಿಸು
ನಿನ್ನ ಚೈತನ್ಯ ಎನಗಿಂತ
ಭಿನ್ನ ಹೇಗೆಂದು?


ಎಮ್ಮ ನೆಲಸಮ ಮಾಡಹೊರಟಿರುವಿರೇ
ಅದರಿಂದ ನಿಮ್ಮ ಉಳಿಗಾಲವಿದೆಯೇ
ಮತ್ತೆ ಕಾಣಬಲ್ಲಿರೇ ನಿಸರ್ಗ ಸೌಂದರ್ಯ
ತಣ್ಣನೆ ನೀರೊಡಲ ವಾತಾವರಣದ ಔದಾರ್ಯ

ಚಿಂತಿಸಿ
ಚಿಂತಿಸಿ ಮಥಿಸಿ ಮುನ್ನಡೆಯಿರಿ
ಎಮಗೂ ಜೀವಿಸಲವಕಾಶ ನೀಡಿರಿ


ಸತೀಶ್ ಅವರ ಕವನ -

ಒಂಟಿ ಮರದ ಸ್ವಗತ
ಮೋಡದ ಮಳೆ ನಾಡಿನಲ್ಲಿ
ಹೇಳ ಹೆಸರಿಗೆ ಇರುವ ಮರ
ಸುತ್ತಲೂ ಇದ್ದವರನು ಕಳೆದುಕೊಂಡು
ಒಬ್ಬಂಟಿಯಾಗಿ ಕರೆವ ಮರ.

ದಿನವೂ ಮೋಡಗಳು ಬಂದರೇನು
ಹೋದರೇನು ಹೆಸರಿಗೆ
ಹನಿಯ ನೀರು ಸುರಿಸಲಿಲ್ಲ
ಆರ್ತನಾದೆ ಬರವಿಗೆ.

ತೆಳುವಾದ ಇಬ್ಬನಿ ಹನಿ
ತಡೆದೀತು ಸೂರ್ಯ ರಶ್ಮಿ
ಹಾಳೂರಿಗೆ ಉಳಿದ ನಾನು
ನನಗೊಬ್ಬನಿಗೇನು ಕಮ್ಮಿ.

ಎಲ್ಲೆಲ್ಲೂ ಕುರುಚಲು ಹಮ್ಮಿಕೊಂಡು
ಬೋಳು ಬೋಳಾದ ಬೆಟ್ಟ ಕಣಿವೆ
ಇದ್ದಂತೆ ಇರುವಲ್ಲಿಂದ ಹಿಡಿದು ದೂರದ
ಖಾಲಿ ನಭಕೆ ಏರುವ ಗುರಿಯ ಬಾಳ್ವೆ.

ನಾನೊಬ್ಬನೇ ಇರುವ ನಾಡಿಗೆ
ಮೋಡಗಳು ಬಂದರಷ್ಟು ಹೋದರೆಷ್ಟು
ಇರುವಷ್ಟು ದಿನವು ಇಲ್ಲಿ ಮುಂದೆ
ಬಿದ್ದು ಹೋಗುವ ಬದುಕಿಗಷ್ಟು.

ಕುಮಾರ ಸ್ವಾಮಿ ಕಡಾಕೊಳ್ಳ ಅವರ ಕವನ -

ಮುತ್ತಿತು ಮೋಡ
ಕವಿದಂತೆ ಕತ್ತಲು
ಹನಿಯಾಗಿ ಹವೆ
ಜಿನುಗಿ ಮಳೆಯಾಗಿ
ಇಳಿಯುತಿದೆ ಧರೆಗೆ
ಜೀವ ಸೆಲೆಯಾಗಿ
ಹಸಿರಾಗಿ ಮೂಡಿ
ಉಸಿರಾಯಿತು ಬದುಕು


Tuesday 15 July, 2008

ಚಿತ್ರ ೬೨



ಚಿತ್ರ ೬೨ ಕ್ಕೆ ತಿರುಕ ಮತ್ತು ಸತೀಶ್ ಅವರು ಕವನಗಳನ್ನ ಬರೆದಿದ್ದಾರೆ.
ತಿರುಕ ಅವರ ಕವನ -
ಪೋಷಣೆ.
೨೪ ಲೋಹದ ಸಲಾಕೆಗಳ ಚೌಕದೊಳಗೆ
ಹಿಡಿದಿಟ್ಟ ಚೇತನದ ಮುಖವಾಡ
ಫಳಫಳಿಸುವ ಕಂಗಳು
ಎತ್ತಲೋ ಕಣ್ ನೋಟ
ಇನ್ನೆತ್ತಲೋ ಮನದೋಟ
ಚಂಚಲ ಚಿತ್ತವಾದರೂ ಅರಸುತಿಹುದೇನು?

ಅಮ್ಮನ ಎದುರು ನೋಡುವಿಕೆಯೇ?
ತಿನಿಸು ತರಹೋದ ಅಕ್ಕನ ನಿರೀಕ್ಷೆಯಾ?
ಹೊಸ ಪಾಟಿ ಪುಸ್ತಿಕೆ ತರುವ ಅಪ್ಪನಾ?
ಒಮ್ಮಿಂದೊಮ್ಮೆಲೇ ಕಾಣದಾದ ಜಗವಾ?

ಅದೆತ್ತಲಿಂದ ಬಂತದು ಗಾಳಿ ಮಳೆ?
ಬಿಡಲಾಗದ ಕಣ್ಣನೂ ಝಗ್ಗೆನಿಸಿದಾ ಪ್ರವಾಹ
ಎವೆ ಮುಚ್ಚಿ ಬಿಡಲು
ಕಂಡಿದ್ದೆಲ್ಲವೂ ಕಾಣದಾಯಿತಲ್ಲ!
ಏನಾಯಿತು?
ಎಲ್ಲಿ ಹೋಯಿತು?

ಯಾವ ವಸ್ತುವಿನ ಪರದೆಯಲಿ ಈ ಕಣ್ಮುಚ್ಚಿದರೇನು
ಪುಟ್ಟನ ನೋಟವ ಹಿಡಿಯಲಾದೀತೇ?
ಕಂಗಳ ನೋಟ ಬದಲಿಸಲಾದೀತೇ?
ಆಸೆ ಆಕಾಂಕ್ಷೆಗಳ ಹೊತ್ತಿರುವ,
ಸಾಧಿಸದಿರುವುದ ಸಾಧಿಸುವ
ಪಣ ತೊಟ್ಟಿರುವ ಮನವ ಸೆರೆಹಿಡಿಯಲಾದೀತೇ?

ನಿಸರ್ಗ ಘೋರತೆಗೆ ಬಲಿಯಾದ ಪುಟ್ಟ ಕಂದಮ್ಮನ
ಮರಳಿ ಬಾಳ್ವೆ ಪಥದಲಿ ಇರಿಸಲು
ಇಂತಹ ಮನಕೆ, ತನುವಿಗೆ ನೀರೆರೆದು ಉಣಿಸಿ ತಣಿಸಿ ಪೋಷಿಸುವುದು
ಎಮ್ಮ ಕರ್ತವ್ಯ ಅಲ್ವೇ?

ಪೋಷಿಸಿ! ಎಮ್ಮನು ನಿಲ್ಲಿಸಿರುವ
ಈ ಜಗಕೆ ಋಣ ಸಲ್ಲಿಸುವಿಕೆ
ಪೋಷಿಸಿದವರ ನೆನಪಲಿ
ನೀಡಬಹುದಾದ ತರ್ಪಣ,
ಮುಂದಿನ ಪೀಳಿಗೆಗೆ
ನಾವು ಕೊಡಬಹುದಾದ
ಕೊಡಬೇಕಾದ ನೆರವಿನ ಹಸ್ತ
ನಮ್ಮ ಕರ್ತವ್ಯ
- ಅಲ್ವೇ?


ಸತೀಶ್ ಅವರ ಕವನ -
ಕಂಬಿಯ ಹಿಂದೆ ನಿಂತಿಹ ಪೋರ.
ಅಲ್ವೋ ಪೋರ ನಿನ್ನ ವಾರಸೆಯವರ
ಜೊತೆ ಹೊರಗೆ ಆಡಿಕೊಳ್ಳೋದ್ ಬಿಟ್ಟು
ಮಹಾ ನಿರೀಕ್ಷೆಯನು ಹೊತ್ತ ಕಣ್ಣ ಬೊಂಬೆ
ಮುಖದಲ್ಲಿ ದೊಡ್ಡ ಶಾಂತಿಗೆ ಜಾಗ ಕೊಟ್ಟು
ಹೋಗೀ ಹೋಗಿ ಯಾವುದೋ ಬಯಲಿನಲಿ
ವರಸೆಗಳ ಬಿಚ್ಚೋ ಬದಲು ಹೀಗೆ ಅಡಗೋದೇ?

ಅದ್ಯಾವ ಗಂಡಾಂತರ ಬಂದು ಬಿಡಬಹುದು
ಅದೇನು ಕೇಡು ಕಾದು ಕುಳಿತಿರಬಹುದು
ಕುಣಿದು ಕುಪ್ಪಳಿಸುವ ಬಾಲಕ ಕಂಬಿಯ ಹಿಂದೆ
ಚಕ್ರಾಧಿಪತಿ ಸ್ನಾನದ ಸಮಯಕೆ ಕಿರೀಟ ತೊಟ್ಟಂತೆ.

ಅಡ್ಡ ಉದ್ದಗಲಕ್ಕೂ ಹೆಣೆದ ತಂತಿಗಳು ಕಂಬಿಗಳು
ಯಾವ ಸ್ವಾತಂತ್ರ್ಯವನ್ನೂ ಹೊರಗೆಡುಹದ ಜಂತಿಗಳು
ತಬ್ಬಲಿತನವೆನ್ನುವುದು ಬರೀ ಮನಸಿನಾ ಸೋಗು
ಒಂದೇ ಕಡೆ ಗೂಡುಕಟ್ಟಿ ಅಲ್ಲಿಲ್ಲಿ ಸುತ್ತಿದಿಹ ಕೊರಗು
ಚಲನವೆನ್ನುವುದಕೆ ಒಂದು ನೆಲೆ ಇದ್ದಂತೇನಿಲ್ಲ
ನಿಂತಲ್ಲೇ ನಿಂತು ಚಿಂತಿಸುವುದಕೆ ಫಲವಿಲ್ಲ.

ಏನೂ ಮಾಡದೆ ಇದ್ದಲ್ಲೇ ಇರುವುದು ಒಂದು ಆಯ್ಕೆ
ಕಷ್ಟವೋ ಸುಖವೋ ಬೇರೆ ದಾರಿಯ ಹುಡುಕುವ ಬಯಕೆ
ಇಷ್ಟ ಪಟ್ಟು ಯಾವುದೋ ಒಂದು ದಾರಿಯ ಹಿಡಿದ ಮೇಲೆ
ಎಲ್ಲೋ ಬಾಗಿಲುಗಳು ತಂತಾನೆ ತೆಗೆದುಕೊಳ್ಳುವ ಲೀಲೆ.

Monday 7 July, 2008

ಚಿತ್ರ ೬೧



ಚಿತ್ರ ೬೧ ಕ್ಕೆ ಕುಮಾರ ಸ್ವಾಮಿ ಕಡಾಕೊಳ್ಳ, ತಿರುಕ, ಸತೀಶ್ ಮತ್ತು ವಿಜಯ ಅವರು ಕವನಗಳನ್ನ ಬರೆದಿದ್ದಾರೆ.

ಕುಮಾರ ಸ್ವಾಮಿ ಕಡಾಕೊಳ್ಳ ಅವರ ಕವನಗಳು -
ನನ್ನಂಗೆ ನೀನು.

ಹೇ..ನೀನು ನನ್ನಂಗೆ ಇದಿಯಲ್ಲ
ನುಂಗೋ ಹಂಗೆ ನೋಡ್ತಿಯಲ್ಲ
ನಾನು ನಿನ್ನ ಬಿಡಾಕಿಲ್ಲ
ನಕ್ಕರೆ ಸುಮ್ಮನಿರಾಕಿ ಅಲ್ಲ

ಚೋಟುದ್ದ ಇದಿಯಲ್ಲ
ನನ್ನ ಟೈ ಕೊಡ್ತೀಯೋ ಇಲ್ಲೋ
ನಕ್ಕು ನನ್ನ ಕಾಡಿಸ್ಬೇಡ
ಸಿಟ್ಟೇರಿದರೆ ನಾನು ತಡಿಯೋದಿಲ್ಲ

ನನ್ನ ಹೆಸರು ಹೆಸರು ಕಾಯಿ
ನಿನ್ನೆಸರು ಸವತೇ ಕಾಯಿ
ನೀನೇನು ಹೇಳ್ದಿದ್ರೆ ಬದನೇ ಕಾಯಿ
ನಿನ್ನ ಮೂಗು ತೊಂಡೇಕಾಯಿ

ಹೇ.. ನೀನು ಅತ್ಲಾಗೆ ಹೋಗ್ತಿಲ್ಲ
ನಾ ಕಿಸ್ದಾಂಗೆ ಕಿಸಿತೀಯಲ್ಲ
ಇನ್ನೂ ನನ್ನ ಹೀಂಗೆ ನೋಡ್ಬೇಡ
ನೀನೇನು ನನ್ನ ಕೂಡೇ ಬರಾಕಿಕಲ್ಲ

ನೀನು ಬರಿ ನನ್ನಂಗಿದೀಯ
ನಾನು ಮಾಡಿದಂಗೆ ಮಾಡ್ತೀಯಲ್ಲ
ಮೂಕಿಹಾಂಗೆ ಕಣ್ಣು ತಿರ್ವುತೀಯಲ್ಲ
ನನ್ನ ಕೂಡೆ ಯಾಕೆ ಮಾತಾಡಕಿಲ್ಲ

ನಾ ಹೇಳೋ ಹಾಡು ನೀನು ಹಾಡ್ತೀಯ?
ಶಾಲೇಗೆ ನನ್ನ ಜೊತೆಗೆ ಬರ್ತೀಯ?
ನಮ್ಮ ಕೂಡೇ ಇರ್ತೀಯ?
ಚಾಕ್ಲೇಟ್ ಕೊಟ್ರೆ ತಿಂತೀಯಾ?

ನೀನೇನು ನನ್ನ ಮಾತು ಕೇಳ್ತಿಲ್ಲ
ನಿನ್ನ ಕೂಡೆ ಸಹವಾಸ ನಾ ಮಾಡಕಿಲ್ಲ
ಅಮ್ಮನಿಗೆ ಹೋಗಿ ಹೇಳ್ತೀನಿ
ದೊಣ್ಣೆ ಏಟು ಕೊಡುಸ್ತೀನಿ

** ಕುಕೂಊ..


ತಿರುಕ
ಅವರ ಕವನ -
ಸ್ವಗತ.

ಅಪ್ಪಾ - ತತ್ತಾ ನಾಕಾಣೆ! ನಾಕಾಣೆ, ನಾ ಕಾಣೆ - ಈಗೆಲ್ಲಿದ್ಯೋ ಕಾಸು - ಎಲ್ಲೆಲ್ಲಿ ನೋಡಿದ್ರೂ ನೋಟು, ಲೋಟು, ಗಿಲಾಸು, ಬರೀ ಲಾಸು.

ಇದೇನೋ ಏರ್ ಕಟಿಂಗ್ ಸಲೂನಾ? ಅಲ್ವೊ ಲೇ ಕೋತಿ - ಒಂದೇ ಕನ್ನಡಿ ಇದ್ರೆ ಅದು ಮನೆ ಅಲ್ವೇನೋ! ಸಲೂನಿನಲ್ಲಿ ನಾಲ್ಕೂ ಕಡೆ ಕನ್ನಡಿ ಇರತ್ತಲ್ವೇನೋ ಗೂಬೆ!!

ಲೇ ಮೊಂಡು ಮೂಗು ಮೂದೇವಿ,

ಬಾಯಿ ತೆಗಿ ಅನ್ಬೇಡಲೇ! ಮುಂದಿನ ಮೂರು ಹಲ್ಲು ಅರ್ಧ ಉದುರಿವೆ - ಇಲ್ಲ ಕಣೋ, ನಿನ್ನೆ ಒದೆಸಿಕೊಂಡದ್ದಕ್ಕಲ್ಲ, ಮೋರಿ ದಾಟಕ್ಕೆ ಹೋಗಿ, ಮುಗ್ಗುರಿಸಿ ಬಿದ್ದಾಗ ಮುರಿದು ಹೋಗಿವೆ. ಇನ್ನರ್ಧ ಉಳಿದಿದೆ, ಅದೇನೋಪ್ಪ - ಹಲ್ಲು ಹಾಗೇ ಉಳಿಯತ್ತೆ, ಮತ್ತಿನ್ನು ಮುಂದಕ್ಕೆ ಹುಟ್ಟೋಲ್ಲ ಅಥವಾ ಬೆಳ್ಯೋಲ್ಲ ಅಂತ ಯಾರೋ ಹೇಳ್ತಿದ್ರು.

ನಾನೊಬ್ಬ ಹುಡುಗ - ಗೊತ್ತಾಗತ್ತಪ್ಪ ನೀನೇನ್ ಹೇಳ್ಬೇಡ ಅನ್ಬೇಡ್ರೀ, - ನನ್ನ ಹೆಸರು ಸುಂದರ - ನನ್ನಮ್ಮ ಕರೆಯೋದು ಸುರಸುಂದರಾಂಗ, ಅಯ್ಯಯ್ಯೋ ಸುಂದರಾಂಗ ಅಂತ ಹೇಳಿ, ಕೋಲ್ಮೂತಿ ಕಾಶೀನಾಥ ಅವರಿಗೆ ಹೋಲಿಸ್ಬೇಡ್ರಪ್ಪಾ, ಸುಂದ್ರೂ ಅಂದ್ರೂ ಸಾಕು, ಓಯ್ ಹುಡ್ಗ ಅಂದ್ರೂ ಸಾಕು - ನನ್ನಪ್ಪ ಕರೆಯೋದು ಅಂಗಿ ಹಾಕಿರೋ ಮಂಗ ಅಂತ.

ಶಾಲೆಯಲ್ಲಿ ಎಲ್ಲರೂ ನನ್ನನ್ನು ಕರೆಯೋದು ರಾಜಕುಮಾರ ಅಂತ - ಅಲ್ವೇ ಒಂದ್ಸಲ ನನ್ ಮುಖ ನೋಡಿ, ಅಲ್ಲಲ್ರೀ - ಕನ್ನಡಿಯಲ್ಲಲ್ಲ, ಮುಂದೆ ಬಂದು ನಿಂತ್ಕೊಂಡು ನನ್ ಮುಖ ನೋಡ್ರೀ, ನಾನ್ ಹೇಗ್ ಕಾಣ್ತಿದ್ದೀನಿ ಅಂತ. ಹೌದು - ಹುಟ್ಟಿದಾಗಿಂದ್ಲೂ ನಾ ಹಿಂಗೇನೇ! ಸ್ಫುರದ್ರೂಪಿ - ಮನ್ಮಥನಪರಾವತಾರ - ಅಯ್ಯಯ್ಯೋ ಮಣ್‍ಮೆತ್ತ ಅನ್ಬೇಡ್ರೀ, ಮನ್ಮಥ, ಮನ್ ಮಥ. ಅಪ್ಪಟ ಕನ್ನಡಿಗ, ನಮ್ಮಮ್ಮ ಕನ್ನಡದೋರು ರೀ, ಅಕ್ಕಪಕ್ಕದವ್ರೆಲ್ರೂ ಅವರನ್ನ ಕನ್ನಡಮ್ಮ ಅಂತಾನೇ ಕರ್ಯೋದು, ಯಾಕೇಂದ್ರೆ ಅಕ್ಕ ಪಕ್ಕದವರ್ಯಾರಿಗೂ ಕನ್ನಡ ಬರೋಲ್ಲ, ಹೌದಲ್ವೇ! ಬೆಂಗಳೂರಿನಲ್ಲಿ ಕನ್ನಡ ಮಾತನಾಡೋವ್ರು ಇದಾರಾ. ಭೂತಗನ್ನಡಿಯಲ್ಲಿ ನೋಡ್ಬೇಕಾ. ಹುಂ! ಏನ್ಮಾಡೋದು, ಅಕ್ಕ ಪಕ್ಕದ ರಾಜ್ಯದವ್ರನ್ನೆಲ್ಲಾ ಏನು, ದೂರದ ಬಿಹಾರಿ, ಯುಪಿಯವರನ್ನೆಲ್ಲಾ ಕರೆದು ತಂದು ನಾವು ಮಾತ್ರ ಊರ ಹೊರಗಿದ್ದೀವಿ, ಹೌದು ನಮ್ಮದು ದೊಡ್ಡ ಮನಸ್ಸು, ದೊಡ್ಡ ಹೃದಯ, ಇತರರಿಗೆ ಮನ್ನಣೆ ಕೊಟ್ಟು, ಮನೆ ಕೊಟ್ಟು, ಮಣೆ ಹಾಕಿ ಊಟಕ್ಕೆ ಹಾಕಿ, ನಾವು ಮಾತ್ರ ಮನೆಯಿಂದಾಚೆಗೆ ಹೋಗಿ, ಉಪವಾಸ ಮಲಗ್ತೀವಿ, ಇದೇ ನಮ್ಮ ದೊಡ್ಡತನ, ದಡ್ಡತನ. ಇನ್ನು ಸಾವಿರ ವರ್ಷ ಆದ್ರೂ ನಮ್ಗೆ ಬುದ್ಧಿ ಬರೋಲ್ಲ ರೀ. ಇತರೆ ಭಾಷೆಯವರನ್ನು ನೋಡಿ ಕಲೀಬೇಕು, ಆದ್ರೆ ಕಲಿಯೋಕೆ ಯಾಕೋ ಮನಸ್ಸೇ ಇಲ್ವಲ್ಲ. ತಲೇನೇ ತಿರುಗೋಲ್ಲ ಅನ್ನತ್ತೆ. ಯಾರದ್ರೂ ಶಾಕ್ ಕೊಟ್ರೆ ತಲೆ ಸ್ವಲ್ಪ ಗಿರ್ ಅನ್ಬೋದೇನೋ!!!

ಲೇ! ತಲೆ ಕೂದಲು ಮುಟ್ಬೇಡಲೇ - ಕೆದರಿಹೋಗತ್ತೆ, ಮೊದ್ಲೇ ಎಣ್ಣೆ ಬೇರೆ ಹಾಕಿಲ್ಲ. ಕಷ್ಟಪಟ್ಟು ಬಾಚ್ಕೊಂಡಿದ್ದೀನಿ. ಅಮ್ಮ ಒಂದ್‍ಕ್ಷಣದಲ್ಲಿ ಬಾಚ್ಬಿಡ್ತಾಳೆ. ಆದ್ರೆ ಇವತ್ಮಾತ್ರ, ನಾನೇ ಅವ್ಳಿಗೆ ಹೇಳ್ದೆ, ನೀನೇನ್ ಬಾಚ್ಬೇಡ, ನಾ ದೊಡ್ಡನಾಗಿದ್ದೀನಲ್ಲ, ನಾನೇ ಬಾಚ್ಕೋತೀನಿ ಅಂತ. ಈ ರೀತಿ ಸೆಟ್ಟಿಂಗ್ ಮಾಡಕ್ಕೆ ಅರ್ಧ ಘಂಟೆ ಆಗಿದೆ ಗೊತ್ತಾ? ಮತ್ತಿನ್ನೊಂದು ತಿಂಗ್ಳಾದ್ಮೇಲೆ ಮುನಿಯನ ಹತ್ರ ಸೆಟ್ ಮಾಡ್ಸ್ಕೋಬೇಕು. ಈ ಸಲ ಶಾರೂಕ್ ಕಟ್ ಮಾಡ್ಸ್ಕೊಬೇಕು. ಆದ್ರೆ ಆ ಹುಚ್ಮುಂಡೆ ಹೆಚ್‍ಎಮ್ ಇದ್ದಾಳಲ್ಲ, ಸಣ್ಣಗೆ ಕಟ್ ಮಾಡ್ಸಿಕೊಳ್ದಿದ್ರೆ, ತಲೆಗೆ ಕ್ಲಿಪ್ ಹಾಕ್ಬಿಡ್ತಾಳೆ. ಈ ದರಿದ್ರ ಸ್ಕೂಲ್ ಯಾವಾಗ ಮುಗಿಯತ್ತೋ, ಕಾಲೇಜ್ಗೆ ಯಾವಾಗ ಹೋಗ್ತೀನೋ ಏನೋ. ಕಾಲೇಜ್ನಲ್ಲಿ ಹೇಗ್ಬೇಕಾದ್ರೂ ಹೋಗ್ಬೋದಂತೆ, ಗೊತ್ತಾ. ಹರ್ದಿರೋ ಪ್ಯಾಂಟ್ ಹಾಕ್ಕೊಳೋದೂ ಒಂದು ಸ್ಟೈಲ್ ಅಂತೆ.

ಅಯ್ಯೋ ಕಾಡು ಹರಟೆ ಹೊಡ್ಯೋದೇ ಆಯ್ತು - ನನ್ಜೊತೆ ಯಾರಿದ್ದಾರೆ ಮಾತಾಡಕ್ಕೆ. ಶಾಲೆಯಲ್ಲಿ ಎಲ್ಲರೂ ನನ್ನನ್ನು ಮುಸುಂಡಿ ಅಂತ ಮಾತನಾಡಿಸೋದೇ ಇಲ್ಲ. ಈ ಕನ್ನಡಿ ಒಂದೇ ನನ್‍ಪಾರ್ಟಿ. ನನ್ನನ್ನು ನೋಡ್ಕೊಂಡು, ನಾನೊಬ್ನೇ ಮಾತಡ್ಕೋಬೋದು. ಆದ್ರೆ ಹಿಂದೆಯಿಂದ ಯಾರಾದ್ರೂ ಬಂದೋರು, ಏನೋ ಹುಚ್ಚ ಅಂತಾರೆ. ಅಮ್ಮ ಒಬ್ಳೇ ಸರಿ. ಸುಮ್ನೆ ನಕ್ಕು, ತಲೆ ಸವರಿ ಹೋಗ್ಬಿಡ್ತಾಳೆ.

ಸ್ಕೂಲಿಗೆ ಹೊರಡೋ ಸಮಯ ಆಗ್ತಾ ಬಂತು. ಕನ್ನಡಿ ಮುಂದೆ ನಿಂತೇನದು ಕೋತಿ ಮೂತಿ ಮಾಡ್ತಿದ್ದೀಯೆ? ಸರಿ ನಾನಿನ್ನು ಹೊರಡ್ತೀನಿ. ಸಂಜೆ ಬಂದ್ಮೇಲೆ ಮಾತಾಡೋಣ, ಆಯ್ತಾ?

ನಾನೇ ರಾಜಕುಮಾರ - ಕನ್ನಡ ತಾಯಿಯ ಪ್ರೀತಿಯ ಕುವರ
ಅನೀತಿ ಅಳಿಸಿ ನ್ಯಾಯವ ಉಳಿಸಿ, ಶಾಂತಿಯನಿಳಿಸಲು ಬಂದ ಪ್ರೇಮ ಕಿಶೋರ

ರಾಜ್ ಕುಮಾರ್...s


ಸತೀಶ್ ಅವರ ಕವನ -
ನಗೆಗೇನು ಗೊತ್ತು.

ಹೊಟ್ಟೆಯಲಿ ಗೊಣಗುವ ಹಲವು ಸಂಕಟಗಳಿರುವಾಗ
ಮುಖದ ಮೇಲೆ ಹುಟ್ಟುವ ಶುಷ್ಕ ನಗೆಗೇನು ಗೊತ್ತು
ಜಗವನೇ ಗೆಲ್ಲುವೆನೆಂಬ ಭಂಡ ಧೈರ್ಯ ತುಂಬಿರಲು
ಎಷ್ಟೋ ಕಷ್ಟಗಳನು ನೇಯುವ ಮತ್ತೊಂದು ಕುತ್ತು.

ಜಾಗರೂಕ ಚೇತನ ಹೊರರೂಪಿಗೆಂದು ಆಗಷ್ಟೇ
ಕಣ್ತೆರೆದ ಚಿಗುರು ಬೆಳಕಿನೊಲು ಹಿಡಿದಿರಲು ಕನ್ನಡಿ
ತಾನು ಮತ್ತು ತನ್ನ ಬಿಂಬದ ನಡುವಿನ ದೂರದ
ಹೊಸತೇನೋ ಆಟವನು ಗೆದ್ದ ಹರ್ಷವದು ಇಮ್ಮಡಿ.

ಮನಸು ತನ್ನೆದುರು ಹೊಸತೇನನೋ ಕಲ್ಪಿಸಿಕೊಂಡು
ಯಾರದೂ ಚಿತ್ರಕೆ ಇನ್ಯಾರದೋ ಮುಖವಿಟ್ಟಿರಬಹುದು
ಈ ರೂಪ ಆ ರೂಪ ಹಲವು ಬಹುರೂಪಗಳಿರುವಲ್ಲಿ
ಜನ್ಮ ಜನ್ಮದ ಪಯಣಕೆ ಬಾಲ್ಯದ ನೆಲೆ ಸಿಕ್ಕಿರಬಹುದು.

ಶುಷ್ಕ ನಗೆಗೇನು ಗೊತ್ತು ಹುಟ್ಟಿದ್ದರೆ ತಾನೆ ಸಾಯೋದು
ತಾನೇ ಒಂದು ನೆಲೆ ಕಾಣದ ಮನಸು ಚಿಂದಿ ಆಯೋದು.


ವಿಜಯ
ಅವರ ಚುಟುಕು ಸಾಲುಗಳು-

ನಗುವೆಂಬುದು ಕನ್ನಡಿಯೊಳಗಿನ ಗಂಟಲ್ಲ
ದುಗುಡ ದುಃಖಗಳು ವಾಸ್ತವದ ನೆಂಟರಲ್ಲ
ಮಗುವಿನ ಮುಗ್ಧತೆಯು ಮರೆಯಾಗದಿರಲಿ
ಸಾಗುವುದು ಬಾಳು, ಪ್ರೀತಿ ನಿನ್ನ ಭಂಟನಿಲ್ಲಿ

Monday 30 June, 2008

ಚಿತ್ರ ೬೦



ಚಿತ್ರ ೬೦ ಕ್ಕೆ ತಿರುಕ,ಸತೀಶ್, ವಿಜಯ ಮತ್ತು ಕುಮಾರ ಸ್ವಾಮಿ ಕಡಾಕೊಳ್ಳ ಅವರು ಕವನಗಳನ್ನ ಬರೆದಿದ್ದಾರೆ.

ವಿಜಯ ಅವರ ಚುಟುಕು ಸಾಲುಗಳು.

ದೂಡದಿರಲಿ ಮುಗಿಲ ಬೀಸಿ ಗಾಳಿ
ಬಾರದಿರಲಿ ಬಿಸಿಲು ಮೋಡ ಸೀಳಿ
ನೀರಾಗಿ ಸುರಿಯಲಿ ಕಪ್ಪಿಟ್ಟ ಬಾನು
ಮನದ ಮುಗಿಲಾಗಲಿ ಹಗುರ ತಾನು.

ಕುಮಾರ ಸ್ವಾಮಿ ಕಡಾಕೊಳ್ಳ ಅವರ ಕವನಗಳು -
ಕರೆ

ಬಾನು ತೇಜನು
ಸುತ್ತಿ ನಭವನು
ನಿತ್ಯ ಕಾಯಕ
ಮಾಡಿ ನಡೆದಿಹನು

ಬೆಳಗಿ ಇಳೆಯನು
ಕಿರಣ ಕುಂಜದಿ
ಕತ್ತೆಲೆಯ ಗೂಡಿನು
ಸೇರುವ ನಿರತನು

ಹೊನ್ನ ರಶ್ಮಿಯ
ಗೋಧೂಳಿ ಸಮಯ
ಕಾರ್ಮೋಡ ಮುತ್ತಿ
ಹನಿಯಾಗುವ ಕ್ಷಣಗಣನೆ

ಸುಳಿಯಾಗಿ ಗಾಳಿ
ಬೋರೆಂದು ಬೀಸಿ
ತರುಲತೆ ಬಾಗಿತೂಗಿ
ವನವೆಲ್ಲ ತಲ್ಲಣ

ಸಿರಿಯಲ್ಲಿ ಧರೆಯು
ಉಸಿರಾಗಿ ಹಸುರು
ಬೀಗಿದೆ ಹರ್ಷದಿ
ಸುರಿವ ಮಳೆಯಲ್ಲಿ

ಪ್ರಕೃತಿಯ ಮೈಸಿರಿ
ಮನೋಹರ ನೋಟ
ನೀನೋಡಲು ಬಾಗೆಳೆಯ
ಗಿರಿಶಿಕರದ ತುದಿಗೆ

** ಕುಕೂಊ...

ಕವಿಸಮಯ

ಆಕಾಶ ಮುತ್ತಿರಲು
ಮೋಡಗಳ ದಂಡು
ರವಿಯು ಮರೆಯಲ್ಲಿ
ಕೆಂಪಾಗಿ ಕಾಣಲು
ಬೆಟ್ಟದ ತುದಿಯಲ್ಲಿ
ಅವಳು ಬರುವಳೆಂದು
ನಾನಿಂತು ಕಾದಿರಲು
ಕಾಣುವುದೆಲ್ಲ ಅವಳ
ರೂಪದಂತೆ ತಳವೆಳಗು

ಮೋಡಕ್ಕೆ ಹನಿಯಾಗಿ
ಸುರಿಯುವ ತವಕ
ಹನಿಯು ನದಿಯಾಗಿ
ಹರಿಯುವ ನೆನಹು
ನದಿಯು ಸಾಗರವನು
ಸೇರುವ ಕನಸು
ಬೆಳಕು ಬಣ್ಣವಾಗಿ
ಬಾನಲ್ಲಿ ಬಾಗಿಬಿಲ್ಲಾಗಿ
ನನ್ನವಳ ಮೊಗವನ್ನು
ತೋರುವ ಸಿರಿಯು

ಸಂಜೆ ಸಂಭ್ರದಲಿ
ಸೃಷ್ಠಿ ನಾಚಿರಲು
ತುತ್ತ ತುದಿಯಲ್ಲಿ
ನಾನಿಂತು ನೋಡಲು
ಅವಳ ನೆನಪೊಂದು
ಮನದಾಗಸದಲ್ಲಿ ಮೂಡಲು
ಮಾತು ಮೌನವಾಗಿ
ಕೊರಳು ಮೂಕವಾಗಲು
ನನ್ನೆದಯ ಕವಿಭಾವ
ಕಾವ್ಯವಾಗಿ ಚಿಮ್ಮಲು
ಬರೆದೆ ನಾನಾಗ
ಅವಳ ಮೌನರಾಗ

**ಕುಕೂಊ...

ತಿರುಕ
ಅವರ ಕವನ -
ಯಾರೀತ?

ಎಂದೂ ಬರಡಾಗದ
ವಸುಂಧರೆಯ ಕಂದ
ನಂಬಿದ
ಆ ದೇವರನೆಂದೂ ಪೊರೆವ
ಪೋರ
ಅಣುವ ನೋಡಿ
ಚರಿತೆಯ ಮೂಡಿಸಬಲ್ಲ
ಚತುರ
ತಾಯ ಭಾಷೆಯೇ ಸರ್ವಸ್ವ
ವೆಂದು ತಿಳಿದ, ತಿಳಿಸುವ
ಕುವರ
ಒಮ್ಮೆ ಕಣ್ಣಲಿ ಕಣ್ಣಿಡಲು
ಮನ ಗೆಲುವ
ಪೋರ

ತನ್ನ ಕೋಣೆಯ ಕತ್ತಲಲ್ಲಿಟ್ಟು
ಜಗಕ್ಕೆಲ್ಲಾ ಬೆಳಕನೀಯುವ
ದೀಪ
ಪಾಪ
ತಾನುರಿದು
ಶಕ್ತಿಯನೆಲ್ಲವನೂ ಕಳೆದು
ನಂಬಿದ ನಂಬದವರಿಗೆಲ್ಲರಿಗೂ
ಚೇತನವೀಯುವ ಪುಟ್ಟ ಪಾಪ
ಬೆಳಕಿನ ಸ್ವರೂಪ
ಶಕ್ತಿಯ ಜನಕ

ಉಜ್ಜಿದಷ್ಟೂ ಹೊಳಪನೀವ
ಅನರ್ಘ್ಯ ರತ್ನ
ತಾನು ಅನ್ನ ಕಾಣ
ದಿದ್ದರೂ ಪರವಾಗಿಲ್ಲವೆನ್ನುವ
ಜಗಕೆ ಅನ್ನವೀಯುವ
ಕಾಯಕವ ತೊರೆಯದ
ಅನ್ನದಾತ
ನಂಬಿದ ಭೂತಾಯಿಯ ಪೊರೆದು, ಹೊರೆದು
ಮೆರೆಸುವ

ಯಾರೀತ?

ಸತೀಶ್ ಅವರ ಕವನ -
ಮುಸುಗುಗಟ್ಟಿದ ಬಾನದಾರಿ

ಮೋಡದ ಮರೆಯಲಿ ಸೂರ್ಯ ಜಾರಿದಂತೆ
ಅದೆಲ್ಲಿಂದಲೋ ಕಾರ್ಮೋಡಗಳು ಬಂದವಲ್ಲ
ಈಗಾಗಲೇ ಕಿಚ್ಚೆದ್ದು ಬೆಳ್ಳಗೆ ಹೊಳೆದ ಜಗಕೆ
ಮಳೆಯ ಸೂಸುವ ನೆಪದೆ ಕಪ್ಪು ಮುಸುಕಿತಲ್ಲ.

ಅದೇನೋ ಬುಗುರಿಯ ಹಾಗೆ ತಿರುಗೋ ಜಗವಂತೆ
ಇಂದಿಲ್ಲಿ ಕಪ್ಪು ಮತ್ತೆ ಇನ್ನೆಲ್ಲೋ ಬಿಳುಪು ಸಹಜ
ಇನ್ನೇನು ಇಲ್ಲಿ ಬಿದ್ದೇ ಹೋದ ಸೂರ್ಯ ಎನ್ನುವಾಗ
ಇನ್ಯಾವುದೋ ನೆಲೆಯಲ್ಲಿ ಆಗಷ್ಟೆ ಉದಯಿಸುವ ನಿಜ.

ನಿನ್ನೆ ಶಾಂತಿ ಇಂದು ಆರ್ಭಟ ಹಲವು ರೀತಿನೀತಿ
ಅಬ್ಬರವ ತೋರೋ ಮುಸುಗುಗಟ್ಟಿದ ಬಾನದಾರಿ
ಹಳೆಯದನೆಲ್ಲವ ಬೇಡವೆಂದರೂ ಹೊತ್ತು ತಿರುಗೋ
ಈ ಸಮಯದ ತತ್ವವ ನೆತ್ತಿಯ ಮೇಲಿಟ್ಟ ಬಾಳದಾರಿ.

ಬರೀ ತಿರುಗುತಿರುವ ಸೂರ್ಯ ಮಂಡಲಕೋ ಹಲವು ಬಗೆ
ನಾಳೆ ಎನ್ನುವ ನಮ್ಮದೋ ಹೊಟ್ಟೆಯಲಿ ಹೂತಿಟ್ಟ ನಗೆ.

Tuesday 24 June, 2008

ಚಿತ್ರ ೫೯




ಚಿತ್ರ ೫೯ ಕ್ಕೆ ತಿರುಕ,ಸತೀಶ್ ಮತ್ತು ಕುಮಾರ ಸ್ವಾಮಿ ಕಡಾಕೊಳ್ಳ ಅವರು ಕವನಗಳನ್ನ ಬರೆದಿದ್ದಾರೆ.

ಕುಮಾರ ಸ್ವಾಮಿ ಕಡಾಕೊಳ್ಳ ಅವರ ಕವನ -
ಎತ್ತಿನಾ ಗಾಡಿ

ನಮ್ಮ ತಾತ ಮಾಡಿಸಿದ್ದು
ಇದು ಗುಂಬದ ಚಕ್ಕಡಿ|

ಚಂದಾಗಿ ಉರುಳುತೈತೆ
ಯಾರು ಇದಕೆ ಸಾಟಿ|

ಬಿತ್ತಲು ಬೀಜ ಹೊತ್ತು ಬಂದೈತೆ
ನಮ್ಮ ಎತ್ತಿನಾ ಗಾಡಿ|

ನಿನ್ನೆ ತಾನೆ ಸುರಿದೈತೆ
ವೈನಾಗಿ ರೋಹಿಣಿ ಮಳೆ|

ಎತ್ತು ಹೆಗಲು ಊಡ್ಯಾವೆ
ಕೂರಿಗೆಯ ನೊಗಕೆ|

ಹೆಜ್ಜೆ ಇಡುತ ನಡೆದಾವೆ
ಸಾಲುಗಳ ನಡುವೆ|

ಗಾಳಿ ಸುಳಿದಾಡೈತೆ
ತಿರುಗಿ ಸುಳಿಸುಳಿಯಾಗಿ|

ಬತ್ತದುಲ್ಲು ಅರಡ್ಯಾತೆ
ಅತ್ತಿತ್ತ ಎತ್ಯತ್ತಲಾಗೆ|

ನೀಲಿ ಆಗಸದಾಗೆ ತೇಲಾವೆ
ನೋಡು ಬಿಳಿ ಬಿಳಿ ಮೋಡ|

ಇಂದು ಸಂಜೆ ಬರಬೌದು
ನಿನ್ನೆಯಂತೆ ಜೋರು ಮಳೆ|

ಬದುವಿನಾಗೆ ಬೆಳೆದಾವೆ
ಆಲ ಹಲಸು ಹುಣಿಸೆ ಮರ|

ಹಸುರಿನಲ್ಲಿ ತುಂಬಿ ಬೀಗ್ಯಾವೆ
ಎಂಷ್ಟು ಚಂದ ನೋಡ|

ಬಾರೋ ಗೆಳೆಯ ನೋಡಿ ಬರುವ
ನಮ್ಮ ಹಳ್ಳಿಯ ಸೊಬಗ|

ನಾವು ಕುಂತು ಓಡಿಸೋಣ
ಪುಳಕದಿ ನಮ್ಮ ಎತ್ತಿನ ಗಾಡೀ|

**ಕುಕೂಊ...


ತಿರುಕ
ಅವರ ಕವನ -

ಮೊಗವೆತ್ತಿ ನೀ ಹೇಳೇ
ನೊಗವೆತ್ತಿ ನಡೆದುದು ಸಾಕಾಯಿತೇ!
ಹಿಡಿದು ಬಂದ ಹಾದಿಯ ಒಮ್ಮೆ ಅವಲೋಕಿಸು
ಹರಿದ ಪಾದಗಳ ಚರ್ಮವೊಮ್ಮೆ ನಿರುಕಿಸು

ಹರಿದುದು ಮತ್ತೆ ಸೇರುವುದು
ಕಳೆದುದಕೆ ಮತ್ತೆ ಕೂಡುವುದು
ಇದುವೇ ಜಗದ ನಿಯಮ
ಜೀವನ ಪರಿಯ ತಿಳಿ ಹೇಳುವ ಆಯಾಮ

ಬೆನ್ನ ಮೇಲಿನ್ನೂ ಹೊರೆ ಇರುವುದು
ಬಗಲಿನ ಹಯನು ಜೀವ ಹೊರೆವುದು
ಕಾಯಕವಿನ್ನೂ ಕಾಯುತಿಹುದು
ಅರೆಕ್ಷಣದ ಬಳಲಿಕೆ ಆರುತಿಹುದು

ಏಳು ಏಳಿನ್ನು, ನಡೆ ನಡೆ
ಕಟ್ಟು ಆ ಹೆಡೆಮುಡೆ
ಸಂಸಾರದ ಗಾಡಿಯ ಎಳೆಯುವಾ
ದಿಗಂತಕೆ ಕೊನೆಯ ತೋರುವಾ


ಸತೀಶ್
ಅವರ ಕವನ -
ಹಳಿ ಕಟ್ಟಿದ ಗಾಲಿ

ನಿಂತಿರುವ ಗಾಡಿ ಚಲನೆಯನೆ ತೀಡಿ
ನೊಗಕಡ್ಡಲಾಗಿ ಮಲಗಿ ದೊಡ್ಡ ಕಂಬ
ಅಲ್ಲಲ್ಲಿ ಚೆದುರಿ ಹೊಡೆ ಹಾರಿ ಮೋಡ
ಮುಕ ಹಾರಿ ಕುಂತಿತ್ತು ಚಂದ್ರ ಬಿಂಬ.

ನೊಗ ಕಟ್ಟಿ ಎಳೆದು ಮಿಣಿ ಕಣ್ಣಿ ಮೀಟಿ
ಒಣ ನೆಲವು ಮೆಂದ ಹುಲ್ಲ ಹರಿವು
ಚೆದುರಿದಾ ಹುಲ್ಲು ಹರಡಿದಾ ನೆರಳು
ಅಗೆದಂತೆ ಮಣ್ಣಿನ ಬಣ್ಣ ಅರಿವು.

ಇದ್ದಾರೆ ಬಹವು ಎರೆಡೆರಡು ಗಾಲಿ
ಒಡನೆ ಸಮತೂಕ ಸಂಸಾರ ನೌಕೆ
ಹಳಿ ಕಟ್ಟಿ ಸುತ್ತ ಕೋಲುಗಳ ಪಾತ್ರ
ಉರಿ ಬಿಸಿಲಿನಲಿ ಹಿಂಗದಾ ಬಯಕೆ.

ಇತ್ತ ಎತ್ತು ಇಲ್ಲ ಅತ್ತ ಗೊತ್ತೇ ಇಲ್ಲ
ನಿಂತು ಹಾಡುವರ ತತ್ವ ಸಮವೋ
ಅರೆ ಸುಟ್ಟ ಸೌದೆ ಬರೆ ಕಟ್ಟ ಕಾಯ್ದೆ
ಒಳಗೆ ಏನಿಹುದು ಬಾಹ್ಯತಮವೋ.

Friday 13 June, 2008

ಚಿತ್ರ ೫೮



ಚಿತ್ರ ೫೮ ಕ್ಕೆ ತಿರುಕ ಮತ್ತು ಸತೀಶ್ ಅವರು ಕವನಗಳನ್ನ ಬರೆದಿದ್ದಾರೆ.

ತಿರುಕ ಅವರ ಕವನ -

ಪಾಣಿಗ್ರಹಣ

ಗೃಭ್ಣಾಮಿ ತೇ ಸೌಭಗತ್ಯಾಯ ಹಸ್ತಂ ಮಯಾ ಪತ್ಯಾ ಜರದಷ್ಟಿರ್ಯತಾ ಸಃ|
ಭಗೋ ಅರ್ಯಮಾ ಸವಿತಾ ಪುರಂಧಿರ್ಮಹ್ಯಂ ತ್ವಾದುರ್ಗಾರ್ಹಪತ್ಯಾಯ ದೇವಾಃ||
ಗೃಭ್ಣಾಮಿ ತೇ ಸೌಭಗತ್ಯಾಯ ಹಸ್ತಂ ಮಯಾ ಪತ್ಯಾ ಜರದಷ್ಟಿರ್ಯತಾ ಸಃ|
ಭಗೋ ಅರ್ಯಮಾ ಸವಿತಾ ಪುರಂಧಿರ್ಮಹ್ಯಂ ತ್ವಾದುರ್ಗಾರ್ಹಪತ್ಯಾಯ ದೇವಾಃ||

ಋಗ್ವೇದ ಸಂಹಿತಾ 10.85.36


ಆಹಾಆ ನನ್ಮದ್ವೆಯಂತೆ| ಆಹಾಆ ನನ್ಮದ್ವೆಯಂತೆ ...

ಹೆಜ್ಜೆಯ ಗುರುತ ನೀ ಛಾಪಿಸುತಿರೆ
ಅದರೊಳು ಎನ್ನ ಹೆಜ್ಜೆ ಇಟ್ಟು
ಹಿಂದೆ ಹಿಂದೆ ಬರುವೆ ನಾ

ನೂರ್ಕಾಲ ಜೊತೆ ಜೊತೆಯಾಗಿ ಬಾಳುವ
ಜೋಡಿ ಬೇರ್ಪಡುವುದು ಬೇಡ ಎಂದು ಬೇಡುವ
ಮುಕ್ಕೋಟಿ ದೇವತೆಗಳ ಕರುಣೆಯ ಕೋರುವ
ಸಂಸಾರ ಸಾಗರದಲಿ ಜೊತೆಜೊತೆಯಾಗಿ ಈಸುವಾ

ಹತ್ತು ಹತ್ತು ಪವನು ಬಳೆಗಳು
ತೊಡಿಸಿಹೆ
ಆಗಲಿ ಅದು ಎನಗೆ ಕೈಕೋಳ
ನನ್ನಲಿಯ ಕೋಳ ನಿನ್ನ ಸುಪರ್ದಿಯಲಿ
ನಿನ್ನಲಿಹ ಕೋಳ ನನ್ನ ಸುಪರ್ದಿಯಲಾಗಲಿ
ಅದರ ಕೀಲಿ ಕೈ ಕೈಗೆ ಸಿಗದಂತಿರಲಿ


ನಕಲೀ ಶಶಿರೇಖನಾಗಿ ದುರ್ಯೋಧನ
ಪುತ್ರ ಲಕ್ಷ್ಮಣಕುಮಾರನ ಲೇವಡಿಪಡಿಸಿದ
ಅಭಿಮನ್ಯು ವಿವಾಹಕೆ ಸಹಾಯಿಸಿದ
ಕೈ ಹಿಂಡುವ ಆ ಚೇಷ್ಟೆಯ ಮಾಡದಿರು ವೀರ
ನೀ ಎಂದಿಗೂ ನನ್ನ ಜೊತೆಗಾರ


ಸತೀಶ್ ಅವರ ಕವನ -
ಇಂದಿನ ಜೋಡಿಯ ಸವಾಲುಗಳು ಹಲವು

ಇಂದಿನ ಜೋಡಿಯ ಸವಾಲುಗಳು ಹಲವು
ನೊಗವನು ಕಟ್ಟಿ ಒಟ್ಟಿಗೆಳೆದರಷ್ಟು ಸಾಲದು
ಜೀವನ ಪೂರ್ತಿ ಬಿಗಿ ಜೋಡಿಯ ಬದುಕನು
ಎದುರಿಸಿ ಮುಂದೆ ಏನೇ ಬರಲಿ ಆದದ್ದು.

ಈ ಬಂಧಕೆ ಯಾವುದೇ ದೃಷ್ಟಿ ತಾಗದಿರಲಿ
ಸಂಸಾರದಲಿ ಅನ್ಯೋನ್ಯತೆ ಬಲು ಮುಖ್ಯ
ಏನೇ ಏಳು ಬೀಳು ಬಂದರೂ ಎದುರಿಸುತಿರಲಿ
ಒಬ್ಬರಿಗೊಬ್ಬರು ಅರಿತು ಬಾಳುವ ಸಖ್ಯ.

ಹೊಸತು ಹಳೆಯದರ ನಡುವೆ ಬೆರೆತು ಬಾಳುವ
ಜೋಡಿಗೋ ಹಲವು ಅವಿನಾಭಾವ ಸಂಬಂಧಗಳು
ಇಬ್ಬದಿಯ ನೆಂಟರು ಇಷ್ಟರು ಮೂಗು ತೋರಿಸದಿರಲಿ
ಇನ್ನೂ ಬೆಳೆದು ಬಾಳಬೇಕು ಮೊಳೆತ ಚಿಗುರುಗಳು.

ಬಿಳುಪಿನ ಬೆನ್ನಲೆ ಕಪ್ಪಿರೊ ಹಾಗೆ ಮುಪ್ಪಿನ ಮಾತು
ನೋಟಕೆ ಹೀಗೆ ಬೆರೆತು ಬಾಳುವುದಾಗಲಿ ದಿನಮಂತ್ರ
ಅಲ್ಲಲ್ಲಿ ಕಷ್ಟಗಳು ಬರುವುದು ಸಹಜವೆನ್ನುವುದಾದರೆ
ಅವಕೆ ಒಡನೆಯೇ ಹುಟ್ಟಲಿ ಎದುರಿಸೋ ಜಯತಂತ್ರ.

Monday 9 June, 2008

ಚಿತ್ರ ೫೭



ಚಿತ್ರ ೫೭ ಕ್ಕೆ ಟೀನಾ, ತವಿಶ್ರೀ ,ಸತೀಶ್ ಮತ್ತು ಕುಮಾರ ಸ್ವಾಮಿ ಕಡಾಕೊಳ್ಳ ಅವರು ಕವನಗಳನ್ನ ಬರೆದಿದ್ದಾರೆ.

ಟೀನಾ ಅವರ ಕವನ -
ಬೆಳಕು ಮುಗಿವ ಮುನ್ನ
.

ಇಲ್ಲಿ ನಾನು ಪುಸ್ತಕ ದೀಪ
ಜತೆಯಾಗಿ
ಕತ್ತಲೆಯ ಅನುಭೂತಿ
ಇನ್ನೇನು ಮುಗಿದೇಹೋಯಿತು ಎಣ್ಣೆ
ಅಕ್ಷರ ನುಂಗುವ
ಕಣ್ಣ ನೋಟ
ಕಾಣದ್ದ ಕಂಡುಕೊಂಡೇನೆ ನಾನು
ಎಂದಾದರು?
ಮುಗಿದು ಹೋಗಬಹುದು
ಪುಟ್ಟ ಹುಳಗಳ ಭರಾಟೆ
ಅಮ್ಮ ಎದ್ದು
ನಿದ್ದೆಯಲೆ ಮುದ್ದಾಗಿ
'ಎಣ್ಣೆ ತುಂಬಿಸಲೆ ಮಗು?
ಮಂದವಾಗಿದೆ ಬೆಳಕು
ಕಣ್ಣಿಗೆ ಪೆಟ್ಟು
ಕಾಫಿ ಬೇಕೆ?'
ಅಂದಂತೆ
ಅನ್ನಿಸಿ
ನಾನು ನೋಡುವೆ
ಬೆನ್ನಹುರಿಯಲ್ಲೇಳುವ
ನೋವ ಅದುಮಿ
ಆಕಳಿಸಿ
ಇದೆಲ್ಲವ ಒಳಗಿಳಿಸಬೇಕು
ಜೋಪಾನವಾಗಿ
ದೀಪದಲಿ
ಬೆಳಕು ಮುಗಿವ ಮುನ್ನ.


ತವಿಶ್ರೀ ಅವರ ಕವನ -

ಚಂಗನೆ ನೆಗೆಯುವ
ಮೃಗ, ಮನೆ ಮನಗಳ ಹಿಗ್ಗಿಸುವ
ಕಸ್ತೂರಿ
ಎನಗೆ ತಿಳಿದಿಹುದಿದೊಂದರದೇ ಅಕ್ಕರಗಳು
ಕನ್ನಡ ಎಂಬ ಕಸ್ತೂರಿ ಆಕರಗಳು
ಕಣ್ಮುಚ್ಚಿಯೂ ಓದಬಲ್ಲೆ
ಆ ಪದಗಳ
ಮುದ್ರಿಸಿರದ - ಮನಗಳು ಮೂಡಿಸುವ
ಆ ಮಾತುಗಳ

ಆದರೇನು!
ಪರೀಕ್ಷೆಯ ಎದುರಿಸಲು
ಅಮ್ಮನ ಕೆಂಗಣ್ಣ ತಂಪಾಗಿಸಲು
ಹಿಡಿಯಲೇಬೇಕು ಹೊತ್ತಿಗೆಯ
ನೆಡಲೇಬೇಕು ದೃಷ್ಟಿಯ
ಅಕ್ಷರಗಳ ಮೇಲೆ
ಓಡಿಸಲೇಬೇಕು ಪುಟಗಳ
ನನಗೇ ಮೋಸಿಸುವೆಯಾ
ಬೆಳಕೆಂಬ ರವಿಯ ಬಂಟ

ಹಿಗ್ಗಬೇಡ!
ನೀ ನೇಸರನ ಬಂಟನೆಂದು
ತಿಳಿಯದೇ ನಿನ ಶಕ್ತಿಯ
ನಾ ತಿಳಿಯನೇ ನಿನ್ನ

ಎತ್ತಲೋ ನೋಡುತಿಹ
ಎನಗೆ ಒಂದಗುಳು
ಬೆಳಕ ನೀಡದವ
ನೀ ನಿಷ್ಕರುಣಿ
ಕತ್ತಲಿಗ್ಯಾಕೆ ಬೇಕಿಹುದು
ನಿರುಪಯೋಗಿ ನಿನ್ನ ಕರುಣೆ

ತಿಳಿಯದೇ ನಾನೆಲ್ಲಿ
ನೋಡುತಿಹೆ
ಸಹಾಯಿಸಬಾರದೇ
ಎನ ಕಂಗಳಿಗೆ ದೃಷ್ಟಿಯ ನೀಡಲು
ಎತ್ತಲೋ ನೋಡುವ ನಿನಗಿರಲಿ
ಎನ ಬಹಿಷ್ಕಾರ
ಇಗೋ ಮುಚ್ಚುವೆ ಪುಸ್ತಕವ
ಹೊದೆಯುವೆ ಚಾದರವ
ಕಾಣುವೆ ಹಗಲು ಕಾಣದ ಕನಸ :P

ಸತೀಶ್ ಅವರ ಕವನ -
ಬೆಳಕಿನ ನಂಟು ಕತ್ತಲ ಗಂಟು.

ಅಂದು ಬ್ರಾಹ್ಮೀ ಮಹೂರ್ತದೆ ಎದ್ದು
ಆಗಾಗ್ಗೆ ಅಲ್ಲಲ್ಲಿ ತೂಕಡಿಸಿ ಬಿದ್ದು
ಹೊತ್ತಿಗೆಯ ಭಾರವನು ತಾ ಹೊತ್ತು
ಓದಿದ್ದೆಲ್ಲವು ತಲೆಗೆ ಹತ್ತದೆ ಬೇಸತ್ತು.

ಬುದ್ದಿವಂತರೊಳಗೆ ದಡ್ಡ ತಾನಾಗಿ
ದಡ್ಡರೊಳಗೆ ತನ್ನ ದಡ್ಡತನವ ನೀಗಿ
ಏನೋ ಹೇಳಿ ಇನ್ನೇನನ್ನೋ ಮಾಡಿ
ಪುಸ್ತಕದ ಬದನೆಕಾಯಿ ಪಲ್ಯದಿ ಬಾಡಿ.

ಓದಿ ಕಡಿದು ಕಟ್ಟಿ ಹಾಕಿದ ಸಮಯವೇ
ಇತಿಹಾಸ ಮರುಕಳಿಸುತಲೇ ಇಲ್ಲವೇ
ಮೈ ಮುರಿದು ಕೆಲಸ ಮಾಡುವ ಬದಲು
ಪುಸ್ತಕದ ನೆಪ ಹಾಸಿಗೆಯ ಸಂಗ ಹಗಲು.

ಈ ಹೊತ್ತಿಗೆಯ ಪದರಗಳು ಮೇಲೆ ಕೆಳಗೆ
ಬೆಳಕು ಕಾಣುವುದು ಒಂದೊಂದೇ ಪುಟಗಳಿಗೆ
ಒಂದು ಪುಟ ಬೆಳಕಿಗಾದಂತೆ ನಂಟು
ಉಳಿದವಕ್ಕಂತೂ ಸದಾ ಕತ್ತಲ ಗಂಟು.

ಕುಮಾರ ಸ್ವಾಮಿ ಕಡಾಕೊಳ್ಳ ಅವರ ಕವನ -
ಜ್ಞಾನದ ಸುಳಿವು.

ಕತ್ತಲೆಯ ನಮ್ಮ ಬದುಕನ್ನು
ಜ್ಞಾನ ತಿರೆಗೊಯ್ಯವ
ಅದೋ ಅಲ್ಲಿ ಹೊನಲು ಚೆಲ್ಲಿದೆ
ಇದೋ ಇಲ್ಲಿ ಹೊತ್ತಿಗೆ ಸಾರದೊಂದಿಗೆ

ಬಾಳು ಅಜ್ಞಾನದ ಸೆಳವು
ಬಿಡಿಸಿಕೊಳ್ಳಲು ಬೇಕು ಜ್ಞಾನದ
ಸುಳಿವು, ಅನುಭವಗಳ ತೆವಳು
ಎದೆಗುಂದದೆ ಹುಡುಕುವ ಗೀಳು

ಹುಡುಕೋಣ ಜ್ಞಾನವನ್ನು
ಅನುಭಗಳನು ಅಡಗಿಸಿಕೊಂಡು
ಹೊತ್ತಿಗೆಯಲ್ಲೂ ಭಿತ್ತಿಗಳಲ್ಲೂ
ಬಿತ್ತಿ ಬೆಳೆಸೋಣ ಜ್ಞಾನ ಬುದ್ಧಿಯನ್ನು

ಬೆಳಕಿನ ಬಲದಿಂದ ಕತ್ತಲೆಯ ಕೇಡು
ಜ್ಞಾನದ ಬಲದಿಂದ ಅಜ್ಞಾನದ ಕೇಡು
ಮೌನದ ಬಲದಿಂದ ಜಂಜಾಟದ ಕೇಡು
ಪ್ರೀತಿಯ ಬಲದಿಂದ ದ್ವೇಷದ ಕೇಡು

** ಕುಕೂಊ...

Monday 2 June, 2008

ಚಿತ್ರ ೫೬




ಚಿತ್ರ ೫೬ ಕ್ಕೆ ಕುಮಾರ ಸ್ವಾಮಿ ಕಡಾಕೊಳ್ಳ, ತವಿಶ್ರೀ ಮತ್ತು ಸತೀಶ್ ಅವರು ಕವನಗಳನ್ನ ಬರೆದಿದ್ದಾರೆ.

ಕುಮಾರ ಸ್ವಾಮಿ ಕಡಾಕೊಳ್ಳ ಅವರ ಕವನ -
ಹಸುಳೆ

ಹಾಲುಗಲ್ಲದ ಹಸುಳೆ
ತೂಗಾಡುವ ತಲೆಯೆ
ತೊದಲಾಡುವ ನುಡಿಯೆ
ಹಾಲು ಮೆತ್ತಿದ ತುಟಿಗಳೇ
ತೊಡಕಾಗುವ ಹೆಜ್ಜೆಗಳೇ
ಕಾಂತಿಯುಕ್ಕುವ ಕಂಗಳೇ
ಕಿಲಕಿಲ ಮಂಜುಳ ನಗುವೆ
ಕೆದರಿದ ನಯ ಕೂದಲೇ
ಕರಿ ಕಾಡಿಗೆ ಸಿಂಚಿತೆ
ಕಿವಿಯ ಓಲೆಯ ಭೂಷಿತೆ
ಸುಕೋಮಲ ಸ್ಪರ್ಷವೆ
ನೆಲದ ಮೇಲೆ ತೆವಳುವೆ
ಬಿಸಿಲ ಕುದುರೆ ಏರುವೆ
ಹಸಿವನು ಕಣ್ಣೀರಲೇ ತೋರುವೆ
ಕೋಪಕೆ ನಿನಗಾರು ಸರಿಯೇ
ಸಿಕ್ಕಿದ್ದೆಲ್ಲ ನಿನ್ನ ಆಯುಧವೆ
ಚಂದ್ರನನೇ ಬೇಕೆನ್ನುವೆ
ಬೆಂಕಿಯಲ್ಲಿಯು ನುಗ್ಗುವೆ
ಹುಲಿಯ ಬೆನ್ನನ್ನಾದರು ಏರುವೆ
ಅಂಜಿಕೆ ನಿನಗೆಲ್ಲಿದೆ?
ಅಮ್ಮನನು ಬಿಡದಪ್ಪುವೆ
ಅವಳೇ ಬೇಕು ಸಧಾ ನಿನಗೆ
ಎಲ್ಲರಲು ಪ್ರೀತಿಯುಕ್ಕಿಸುವೆ
ನಿನಗೆ ಆದೇವನು ಸಮವೆ?

** ಕುಕೂಊs....
ಪುಣೆ


ತವಿಶ್ರೀ ಅವರ ಕವನ -
ಮಗುವಿನ ಕೋರಿಕೆ

ಕೈನಲಿರುವುದು ಏನದು
ಆಟದ ಸಾಮಾನಿನಂತೆ ತೋರುವುದು
ನನ್ನ ಕೈಗೆ ಕೊಡೋ
ಕೊಡದಿರೆ ಅಮ್ಮನ ಕರೆವೆ

ನೀ ಚಿತ್ರ ತೆಗೆಯುವೆಯಾ
ಅಮ್ಮ ಮೊಗವ ತೊಳೆವರೆಗೆ ಕಾಯುವೆಯಾ
ಮೊಗದಲಿ ಲೇಪಿಸಿಲ್ಲ ಪವುಡರು
ಬದಲಿಸಿಲ್ಲ ಬೆಳಗಿನ ದಿರಿಸು
ಸ್ವಲ್ಪ ಕಾಲ ತಡೆಯುವೆಯಾ?

ಮೊಂಡಂತೆ ನನ್ನ ಮೂಗು
ಬೊಚ್ಚಂತೆ ನನ್ನ ಬಾಯಿ
ಕೆದರಿದೆಯಂತೆ ತಲೆಗೂದಲು
ಪಿಸಿರು ಕಾಣುವುದಂತೆ ಕಣ್ಣಲಿ
ಇವಾವುದೂ ಬಾರದ ಚಿತ್ರ ತೆಗೆಯುವೆಯಾ?

ಅವರಿವರ ಮಾತಿಗೆ ನೀ ಹೆದರಬೇಡ
ಎನ್ನ ಚಿತ್ರ ತೆಗೆಯಲು ದೃಷ್ಟಿಯಾಗದು
ತಗುಲದಂತೆ ಹಚ್ಚಿದೆಯಲ್ಲ ಬೊಟ್ಟು
ನೋಡುವೆಯಾ!
ಒಮ್ಮೆ ಆ ಡಬ್ಬ ನನ್ನ ಕೈಗೆ ಕೊಟ್ಟು

ಸುಂದರ ಚಿತ್ರ ನೀ ತೆಗೆದುಕೊಡಲು
ರೂಪದರ್ಶಿ ನಾನಾಗಬಲ್ಲೆ
ಒಂದೆಳೆ ಸರವ ನೂರೆಳೆ ಮಾಡಬಲ್ಲೆ
ಅದರಲಿ ನಿನಗೂ ಪಾಲು ಕೊಡಬಲ್ಲೆ
ತೆಗೆಯುವೆಯಾ ಸುಂದರ ಚಿತ್ರ ಒಂದನು?


ಸತೀಶ್ ಅವರ ಕವನ -
ನಮ್ಮ ಮನೆಯ ಪುಟ್ಟ ಪಾಪ

ಎನೇನೋ ಬೊಟ್ಟುಗಳನ್ನು ತಿದ್ದಿ ತೀಡಿದ ಅಮ್ಮ
ಮುದ್ದಿಸಿ ಮಲಗದಿರೆ ಹೆದರಿಸಿ ಬರುವನೆಂದು ಗುಮ್ಮ
ಸಂಪ್ರದಾಯವೆಂದು ದೊಡ್ಡ ರೂಪವೊಂದನು ಕೊಟ್ಟು
ಆಸೆ ಮೋಡಗಳ ಕುರುಳನು ಹಾಗೇ ಹಾರಲು ಬಿಟ್ಟು.

ಮಲಗಿದಲ್ಲೇ ಹಣೆ ನೇವರಿಸಿ ದಿವ್ಯ ದಿರಿಸು ತೊಟ್ಟ ತಂದೆ
ಹುಟ್ಟುವ ಸೂರ್ಯನ ಜೊತೆ ಆರಂಭವಾಗುವ ದಂದೆ
ವಾರಕ್ಕೆರಡೇ ದಿನ ಮುಖ ನೋಡುವುದಕ್ಕೆ ಸಿಕ್ಕು
ರಾತ್ರಿ ಉಂಡು ಮಲಗಿದ ನಂತರ ನೋಡಿ ನಕ್ಕು.

ಕುಟುಂಬ ಯೋಜನೆಯ ಫಲವೋ ಜಾಗತಿಕರಣದ ಒಲವೋ
ನಮ್ಮ ಚಿಕ್ಕ ಕುಟುಂಬಗಳ ಬೆರಳೆಣಿಕೆಯ ಜನರ ಬಲವೋ
ತಮ್ಮನಿದ್ದರೆ ತಂಗಿಯಿಲ್ಲ, ತಂಗಿಯಿರೆ ಅಕ್ಕನಿಲ್ಲದ ಬಳಗ
ಅತ್ತು ಕರೆಯುವುದಿರಲಿ ಕಿತ್ತು ಖುಷಿ ಪಡಲೂ ಬಾರದ ವಾಲಗ.

ದಿವ್ಯತೆ ಇರಲಿ ಇಲ್ಲದಿರಲೀ ದೂರದೃಷ್ಟಿ ಇರಲೇ ಬೇಕಾದ ಕಾಲ
ಸುತ್ತಲೂ ಸ್ಪರ್ಧೆಯನು ಮೈಗೂಡಿಸಿಕೊಂಡಿರುವ ನೆಲ-ಜಲ.

Tuesday 27 May, 2008

ಚಿತ್ರ ೫೫



ಚಿತ್ರ ೫೫ ಕ್ಕೆ ಅರುಣ್ ಮತ್ತು ಸತೀಶ್ ಅವರು ಕವನಗಳನ್ನ ಬರೆದಿದ್ದಾರೆ.


ಅರುಣ್ ರ ಕವನ -
ಹಣದಾತುರದಿಂ ಸೌಧಮಾಗಿರ್ಪುದುಮೊಳಗೆ

ಹೆಣದಾತುರದಿಂ ವಿಹರಿಪುದು ಹದ್ದು ನಭದಿ

ಹೆಣದ ನಾತ ಹೊಡೆಯಲು ಧನನುಂಗಿರ್ದ ಸ್ಥಳದಿಂ

ಹೊಣೆಯಾರಿಗೆಲೊ - ಚಿತ್ರಕವನ


ಸತೀಶ ರ ಕವನ -
ಮಹಲಿನ ಜೊತೆಗಿನ ಗತ್ತು

ನಿಂತಲ್ಲೇ ನಿಂತ ಸೌಧ ಸ್ವಚ್ಛಂದವಾಗಿ ತೆರೆದ ಮುಗಿಲು

ಕದ್ದು ಕಾಯುವ ಹದ್ದು ಕಾಣುವ ಮಲಗೆದ್ದ ಹಗಲು

ಬದುಕಿ ಸಾಯುವ ಆಹಾರ ಹೊಟ್ಟೆ ಗೋರಿಯ ಸೇರಿ

ಹಾರುವ ಪಕ್ಷಿಯ ಮನಸು ಸೌಧದ ತುದಿ ನಭವ ಮೀರಿ.

ಅಂತಹದೇನಿರಬಹುದು ಇದೆಲ್ಲದರ ವಿಶೇಷ

ಸುತ್ತಲ ಪ್ರತಿಯೊಂದೂ ಮೇಲೆ ಏರುವ ವೇಷ

ಅದ್ಯಾವುದೋ ಕಾರಣಕೆ ಮೇಲ್ಮುಖವ ಮಾಡಿ

ಮೇಲೆ ಹೋದಂತೆಲ್ಲ ತಮ್ಮ ಕೆಳಗಷ್ಟೇ ತೋಡಿ.

ಆಹಾರವೆಂದೂ ಈ ಜಗವು ಹುಡುಕುವ ರತ್ನ

ಎಲ್ಲ ಜೀವರಾಶಿಗಳ ಒಂದೊಂದು ಥರದ ಯತ್ನ

ಇಂದು ಇರದ ನಾಳೆಗಳಿಗೆ ಕೂಡಿ ಹಾಕುವರೆಷ್ಟು

ನಿನ್ನೆ ಇಂದಿನವರೆಗೆ ಹಸಿದೇ ಹಲಬುವರಷ್ಟು.

ಹಾರುವ ಹದ್ದಿನ ಕಷ್ಟ ನಿತ್ಯ ಹಸಿರಿನವರಿಗೇನು ಗೊತ್ತು

ನಾವು ಗುರುತಿಸಿಕೊಂಡ ಮಹಲಿನ ಜೊತೆಗೆ ನಮ್ಮ ಗತ್ತು.

Wednesday 21 May, 2008

ಚಿತ್ರ ೫೪



ಈ ಬಾರಿಯ ಚಿತ್ರಕ್ಕ ಕುಮಾರ ಸ್ವಾಮಿ ಕಡಾಕೊಳ್ಳರು ಮೂರು ಕವನಗಳನ್ನ ಬರೆದಿದ್ದಾರೆ.

** ಗೊಡ್ಡ ಮೇಷ್ಟ್ರುಗಳು **

ಎಂತ ಹೆಡ್ಡರೋ ಈ ಗೊಡ್ಡ ಮೇಷ್ಟ್ರುಗಳು|
ಗುಡ್ಡಗಾಡಿನೋರಿಗಿಂತ ದೊಡ್ಡ ದಡ್ಡರು||

ದೇವರೇ ಇಲ್ಲಂತ ದಿನವೆಲ್ಲ ಬೊಗಳೆ ಹೇಳ್ತಾರೆ|
ಮುಂದಿನ ದಿನ ಬೂದಿ ಬಳ್ಕಂಡ್ ಗುಡಿಗೆ ಹೋಗ್ತಾರೆ||

ಬೀಡಿ ಸಿಗರೇಟ್ ದೇಹಕ್ಕೆ ಕೆಟ್ಟದ್ದಂತ ಕೂಯ್ತಾರೆ|
ಗೋಡೆ ಮರೆಯಲ್ಲಿ ಹೋಗಿ ತಾವೆ ಹೊಗೆ ಬಿಡ್ತಾರೆ||

ತಮ್ಮ ಕೆಲಸ ತಾವೆ ಮಾಡ್ಕೋಬೇಕಂತ ಕೊರಿತಾರೆ|
ಚಹ ಕಾಫಿ ನೀರು ಬೀಡಿ ತರಲು ನಮ್ಮನೇ ಕಳಸ್ತಾರೆ||

ಅಪ್ಪ ಅಮ್ಮ ದೇವರ ಸಮಾನ ಅಂತ ವೇದಾಂತ ಹೇಳ್ತಾರೆ|
ತಮ್ಮ ಅಪ್ಪ ಅಮ್ಮನ್ನೇ ಮನೆಯಿಂದ ಆಚೆ ದೂಕಿದ್ದಾರೆ||

ರಾಮ ಕೃಷ್ಣ ಬುದ್ಧ ಬಸವ ಅಲ್ಲ ಕ್ರಿಸ್ತ ಎಲ್ಲರು ಒಂದೇ ಅಂತ್ಹೇತಾರೆ|
ಊರಲ್ಲೇಲ್ಲಾ ನಮ್ಮ ದೇವರೆ ದೊಡ್ಡದಂತ ಕೂಗಾಡ್ತಾರೆ||

ವರದಕ್ಷಿಣಿ ಮಹಾಪಾಪ ಅನ್ನೋ ಪಾಠನ ಆಪಾಟಿ ಹೇಳ್ತಾರೆ|
ಊರಲ್ಲಿ ಎಲ್ಲರಿಗಿಂತ ಇವರೆ ಜಾಸ್ತಿ ವರದಕ್ಷಿಣೆ ತೊಗೊಂತಾರೆ||

ಸುಳ್ಳು ಹೇಳ್ಬಾರ್ದು ಅಂತ ನಮಗೆ ಹೊಡೆದು ಹೊಡೆದು ಹೇಳ್ತಾರೆ|
ಮೇಲಿನ ಇಷ್ಟೆಲ್ಲ ಸುಳ್ಳನ್ನ ಮುಂಜಾನೆಯಿಂದ ಸಂಜೆವರಿಗೆ ಹೇಳ್ತಾರೆ||

ಹೇಗೆ ನಂಬೋದು ಇವರನ್ನ ನಂಗೇನು ತಿಳಿವಲ್ದೂ|
ಏನಾದರು ಆಗಲಿ ನಾಳಿಂದ ಇಂತ ಶಾಲೇಗೆ ಬರಬಾರದು||


** ಅಲ್ಲಿದೆ ನಮ್ಮೂರು **

ಅಲ್ಲಿದೆ ನಮ್ಮೂರು
ಅಂದ ಚಂದದ ತವರೂರು|
ಇಲ್ಲಿಂದ ನಡದೋದರೆ
ಘಳಿಗೆಯಲಿ ಸಿಕ್ಕುವುದು||

ಹೋಗಿ ಬರೋಣವೇ
ಆಡುತ್ತ ನಾವಿಂದು|
ಅಜ್ಜ ಅಜ್ಜಿಯ ಕೂಡಿ
ಕೇಳೋಣ ನಮ್ಮೂರಿಗೆ ಬಾ ಎಂದು||

ಕಬ್ಬು ಬೆಳೆದಿರುತೈತೆ
ನಮ್ಮ ದಿನ್ನೆಯ ಹೊಲದಲ್ಲಿ|
ಸಿಗಿಸಿಗಿದು ತಿನ್ನುತ್ತ ಸವಿಯೋಣ
ಹಿಗ್ಗಿನಲಿ ನಾವೆಲ್ಲ ಕೂಡಿಕೊಂಡು||

ನಮ್ಮನೆಯ ಬಿಳಿ ಹಸು
ಈದೈತೆ ಸಣ್ಣ ಕೆಂಗರು|
ಹಿಡಿಯಾಕೆ ಹೋದರೆ
ಚಂಗನೆ ನಗೆದೋಡುವುದು||

ಊರಚೆ ತುಂಬಿ ತುಳುಕಾಡೈತೆ
ನಮ್ಮೂರ ದೊಡ್ಡ ಕೆರೆಯು|
ತೇಲಿ ಬಿಡೋಣ ನೀರಲ್ಲಿ
ನಮ್ಮ ಕಾಗದದ ಡೋಣಿಗಳನು||

ತೆಂಗಿನ ಮರ ತುಂಬ್ಯಾವೆ
ನಮ್ಮ ತೋಟದ ತುಂಬೆಲ್ಲ|
ಕುಡಿದು ಬರೋಣವೆ
ದೊಡ್ಡ ಎಳೆಗಾಯಿ ನೀರು||

ಹಾಲುಬೆಳೆಸೆ ತುಂಬಿರುತಾವೆ
ತೂಗುವಾ ರಾಗಿಯ ಹೊಲದಾಗೆ|
ಉರಿಹಾಕಿ ಗರಿಗೊಂಚಲಿಗೆ
ಸುಟ್ಟ ಬೆಳೆಸೆ ಬಿಡಿಸಿ ತಿನ್ನೋಣ||

ಮಾವೀನ ಮರದ ತೋಪು
ಕಾಡಂತೆ ತೂಗಿ ಬೆಳೆದಿರುತೈತೆ|
ಎಲ್ಲಿ ನೊಡಿದರು ಅಲ್ಲಿ
ನವಿಲುಗಳೇ ಇರುತಾವೆ ನೋಡು||

ನಮ್ಮೂರಿಗೆ ಹೋದರೆ ಸಿಕ್ಕುವು
ನಮಗೆ ಉಪ್ಪು ಹುಣಿಸೆ ಹಣ್ಣು|
ಈ ದೊಡ್ಡ ಗುಟ್ಟು ಯಾರಿಗು
ಹೇಳೋಣ ಬ್ಯಾಡ ನೋಡು||

ಹಳ್ಳದಲಿ ಇರುತಾವೆ ಬಣ್ಣ ಬಣ್ಣದ
ಹಕ್ಕಿಗಳು ಹಿಂಡು ಹಿಂಡಾಗಿ|
ಮರ ಕೊಂಬೆ ಗಿಡ ಪೊದೆಯಲಿ
ಕಟ್ಟಿರುತ್ತಾವೆ ಸಣ್ಣ ಸಣ್ಣ ಗೂಡು||

ತೋಟದ ಬೇಲಿಯಲಿ ಇರುತಾವೆ
ಹತ್ತಾರು ಜೇನಿನ ಗೂಡು|
ನಮ್ಮೂರ ತಿಮ್ಮನಿಗೆ ಕೇಳಿದರೆ
ದೊಡ್ಡದು ಬಿಡಿಸಿ ಕೊಡುವನು ನೊಡು||

ನಮ್ಮ ಮನೆಯಲಿ ಇರುತಾವೆ
ದೊಡ್ಡ ಬಿಳಿ ಎತ್ತಿನ ಜೋಡು|
ಚಕ್ಕಡಿಗೆ ಹೂಡಿದರೆ ಅವುಗಳ
ಜೋರಿನ ಓಟ ಬಲು ಸೊಬಗು ನೋಡು||

ಅಲ್ಲಿ ಇರುವುದಿಲ್ಲ ನಮಗೆ
ಈ ಶಾಲೆಯ ತಂಟೆ ತಕರಾರು|
ನಮ್ಮೂರ ಗೆಳೆಯ ಗುಂಪಲ್ಲಿ
ನಾವೇ ಯುವರಾಣಿಯರು(ರಾಜರು) ನೋಡು||

ಅಲ್ಲಿಂಟು ಏನೆಲ್ಲ ನಮಗಿಲ್ಲಿ ಕಾಣದ್ದು
ಅಲ್ಲಿಂಟು ಏನೆಲ್ಲ ಇಲ್ಯಾರು ಹೇಳದ್ದು|
ಸ್ನೇಹ ಉಂಟು, ಸಲಿಗೆಯುಂಟು, ಸಿರಿಯುಂಟು
ಎಲ್ಲರೂ, ಎಲ್ಲದೂ ನಮ್ಮದೆಂಬ ಭಾವವುಂಟು||

ಹೋಗೋಣ ಬನ್ನಿರೇ ಗಂಗೆ, ಗೌರಿ
ಅಲ್ಲಿ ಇರುತಾರೆ ಸೀತೆ, ಸುಬ್ಬಿ, ಸುವ್ವಿ||
ದಿನವೆಲ್ಲ ತಿರುಗಾಡಿ ಜೊತೆಯಲ್ಲಿ ಕುಣಿದಾಡಿ
ಸಂಜೀಗೆ ಬರೋಣ ಗುಟ್ಟು ನಮ್ಮಲ್ಲೇ ಇರಲಿ||


** ಅಕ್ಕರೆಯ ಗೆಳತಿಯರು **

ಮುನಿಸಿ ಕೊಂಡಾಳೆ ನನ್ನ ಜೊತೆ ಯಾಕೋ ತಿಳಿಯದು
ತಿಳಿಸಿ ಹೇಳು ನಿನಾದರು ಅವಳಿಗೊಮ್ಮೆ ಇಂದು|
ಕಾರಣ ಕೇಳಿದರೆ ಊದಿಸುತ್ತಾಳೆ ಕೆಂಪಗೆ ಮಾಡಿ ಕೆನ್ನೆ
ಉರಿಗಣ್ಣಿನಲಿ ನೋಡುತ್ತ ಸುಟ್ಟು ಬಿಡುವವಳಂತೆ||

ನಿನ್ನೆ ಹೇಳಿದ್ದೆ ಇವಳಿಗೆ ಕಜ್ಜಾಯ ತರುವೆನೆಂದು
ಅಮ್ಮನ ಕೇಳಿದ್ದಕ್ಕೆ ಒದೆ ತಿಂದು ಬಂದೆ|
ಎಷ್ಟು ಹೇಳಿದರು ಇವಳಿಗೆ ಅರ್ಥವಾಗದು ಇಂದು
ನೀನೇ ತಂದು ಕೊಡು ಇವಳಿಗೆ ಎರಡು ಲಡ್ಡು ಉಂಡೆ||

ಅವಳೆಂದರೆ ನನಗೆ ಎಲ್ಲಿಲ್ಲದ ಅಕ್ಕರೆ
ಜೊತೆಗಿದ್ದರೆ ಅದುವೆ ನನಗೆ ಸಿಹಿ ಜೇನು ಸಕ್ಕರೆ|
ನಮ್ಮಲ್ಲಿದ್ದಂತೆ ಅವಳಲ್ಲಿ ಇಲ್ಲನೋಡು ಬ್ಯಾಗು
ಅದಕೆ ಕೊಟ್ಟು ಬಿಡುವೆ ಇಂದೇ ನನ್ನ ಕೆಂಪು ಬ್ಯಾಗು||

ನಾನು ಬರೆದಿಲ್ಲ ಮೇಷ್ಟ್ರುಕೊಟ್ಟ ಮನೆಕೆಲಸದ ಪಾಠ
ನೀವು ತೋರಿಸಿರಿ ಈಗಲೆ ಬರದು ಮುಗಿಸುವೆ ಪಟಪಟ|
ಯಾಕೊ ಬೇಸರಿಕೆ ನೀವಿಲ್ಲದ ಮನೆಯಲ್ಲಿನ ಪಾಠ
ನಮ್ಮ ಮನೆಯಲ್ಲಿ ಸೇರಿ ಓದೋಣ ಇದಕೆ ನಾನು ದಿಟ||

ನಮ್ಮಮ್ಮ ಮಾಡಿ ಡಬ್ಬಿಯಲಿ ಇಟ್ಟಾಳೆ ಚಿತ್ರನ್ನ ಬೋಂಡ
ನಿಮಗಾಗಿ ಕದ್ದು ತಂದಿನಿ ಚಕ್ಕುಲಿ ಕೋಡುಬಳೆ ವಡ|
ನೀವೇನು ತಂದಿರುವಿರಿ ನಾನಾಗಲೆ ಕದ್ದು ನೋಡಿರುವೆ
ತಿಂದು ಮುಗಿಸೋಣ ಅವರೆಲ್ಲ ಬರುವ ಮೊದಲೆ||

ಬಿಟ್ಟು ಹೋಗಬೇಡಿರಿ ನಾನೇನಾದರು ತಪ್ಪು ಮಾಡಿದರೆ
ತಿದ್ದಬೇಕು ಒಬ್ಬರಿಗೊಬ್ಬರು ಜೊತೆಗಿದ್ದುಕೊಂಡು|
ಯಾವಾಗಲು ಜೊತೆಗೆ ಇರೋಣ ಜಗಳವಾಡದೆ ಎಂದು
ಇದಕೆ ಸಾಕ್ಷಿಯಾಗಿ ಇರಲಿ ಈ ಕಲ್ಲುಬಂಡೆಯ ಕಟ್ಟೆಯು||


ತ್ರಿವೇಣಿಯವರ ಕವನ:

ಮುಡಿಗೇರಲಿ ಸಾಧನೆ

ಕೇಳಿರೆ ಗೆಳತಿಯರೇ, ನಿಮ್ಮಮ್ಮ, ಅಜ್ಜಿಗಿಂತ ನೀವೇ ಪುಣ್ಯವಂತರು
ಓದಿ-ಬರೆದು ಮಾಡಲು, ಅವರಿಗ್ಯಾರು ನೆರವು ಕೊಟ್ಟರು?
ಹೆಣ್ಣಿಗೇಕೆ ಶಿಕ್ಷಣ? ಅದು ಪರರ ಮನೆಯ ಬೆಳಕು
ಕಸೂತಿ, ರಂಗೋಲಿ, ಹಾಡು-ಹಸೆ ಬಂದರಾಯಿತು, ಸಾಕು

ವರ್ಷ ಎಂಟಕ್ಕೇ ಮದುವೆ, ಬಸುರು, ಬಾಣಂತನದ ಕಾಟ
ಕಸಮುಸುರೆ, ಹೊರೆಗೆಲಸ; ಮನೆಮಂದಿಗೆ ಹೊತ್ತುಹೊತ್ತಿನೂಟ
ಮೂವತ್ತಕ್ಕೇ ಮುದಿಯಾಗಿ ಅಡರಿತ್ತು ಹರಯದಲ್ಲೇ ಮುಪ್ಪು
ಹೆಣ್ಣಾಗಿ ಹುಟ್ಟಿದ್ದೊಂದೇ ಅವರು ಮಾಡಿದಂಥ ತಪ್ಪು!

ಕೇಳಿ ಮುದ್ದು ಹುಡುಗಿಯರೇ, ಇಂದು ಕಾಲ ಬದಲಾಗಿದೆ
ಗಂಡಿಗಿಂತ ಹೆಣ್ಣಿನದೇ ಒಂದು ಕೈ ಮೇಲಾಗಿದೆ
ಅಂದಾಗಿಹ ಅನ್ಯಾಯಕೆ ಇಂದು ನ್ಯಾಯ ಪಡೆಯಿರಿ
ಛಲದಿಂದ ಮುಂದೆ ನುಗ್ಗಿ ಯಶದ ಬೆನ್ನು ಹಿಡಿಯಿರಿ

ಹಾಳುಹರಟೆಯಲ್ಲಿ ನೋಡಿ, ಹೇಗೆ ಹೋಗುತಿದೆ ನಿಮ್ಮ ಹೊತ್ತು?
ತಿಳಿದಿಲ್ಲವೇ- ಕಳೆದ ಕಾಲ ಸಿಗದು, ಅದು ಒಡೆದ ಮುತ್ತು
ಇರಲಿ ನೋಟ ಗುರಿಯ ಕಡೆಗೆ, ಮುಡಿಗೇರಿಸಿ ಸಾಧನೆ
ನಿಮ್ಮ ಬದುಕೇ ನೀಡಲಿ ಉಳಿದವರಿಗೂ ಪ್ರಚೋದನೆ!



ಸತೀಶ ರ ಕವನ
ಕನಸುಗಳ ಜಮಖಾನದ ಮೇಲೆ ಕೂತು ತೇಲುತ್ತಾ

ಎರಡು ಜಡೆ ಬೆನ್ನಿಗೊಂದೊಂದು ಚೀಲ
ಸುಡುವ ಬಿಸಿಲಿದ್ದರೂ ಅಂಧಾನುಕರಣೆಯ
ಕಾಲ್ ಚೀಲ ಸಮವಸ್ತ್ರ ಸಮವನ್ನು ಸಾರಿ
ಭಿನ್ನಮತದೊಳಗೆ ಒಮ್ಮತವನು ತೋರಿ.

ನಿರೀಕ್ಷೆಯಿದೆ ಮುಂಬರುವ ನಾಳೆಗಳ ಬೆನ್ನ ಸವರುವ
ಕನಸುಗಳ ಜಮಖಾನದ ಮೇಲೆ ಕೂತು ತೇಲುತ್ತಾ
ಪರೀಕ್ಷೆಯಿದೆ ವರ್ಷಕ್ಕೊಂದೆರಡು ಮತ್ತೆ ಆಗಾಗ್ಗೆ
ಅಲ್ಲಲ್ಲಿ ಅದೇನೇನೋ ಜನ ನಮ್ಮನ್ನೇ ಕಿತ್ತು ನೋಡುತ್ತಾ
ಕೂತರೂ ತಪ್ಪು ನಿಂತರೂ ತಪ್ಪು ಎನ್ನುವ ಮನೆಯವರು
ಹೊಸತನವೆಲ್ಲದರಲಿ ಹರಡಿರುವ ಭಾವನೆಗಳು ನವಿರು.

ಹೆಣ್ಣು ಭ್ರೂಣದ ಉಳಿವಿನಿಂದ ಹಿಡಿದು ಎತ್ತರದ ನಿಲುವನ್ನು
ತಳೆಯುವುದರಲ್ಲಿಯವರೆಗೆ ನಮ್ಮ ಗುರಿ ದೂರವಿದೆ
ಪುರುಷನಿಗೆ ಸಮನಾಗಿ ದುಡಿದು ಸಂಸಾರ ನಡೆಸುವಲ್ಲಿಂದ
ಹಿಡಿದು ಆದರ್ಶ ನಾರಿಯಾಗಿ ಬದುಕುವ ಛಲವಿದೆ.

ನಾವೆಲ್ಲ ಬದಲಾಗಿದ್ದೇವೆ ಪೈಪೋಟಿ ಇದೆ ನಮ್ಮೊಳಗೆ
ಹುಟ್ಟುವಾಗಲೇ ಪಡೆದು ಬಂದ ರತ್ನ ನಾವಾದರೂ
ಅದೆಲ್ಲೋ ಬಿದ್ದು ಧೂಳಿನಲಿ ಸಿಕ್ಕಿರುವ ಕಾರಣಕ್ಕಾದರೂ
ನಾವು ನಮ್ಮೊಳಗಿನ ನಮ್ಮತನವ ಹೊರತರಬೇಕು
ಎಲ್ಲಿಟ್ಟರೇನು ಹೇಗಿದ್ದರೇನು ರತ್ನ ರತ್ನವೇ ಎಂದು
ನಂಬುವುದಕ್ಕಿಂತ ಪಡೆದಿದ್ದನ್ನು ಮಾಡಿ ತೋರಿಸಬೇಕು.