Sunday, 30 March, 2008

ಚಿತ್ರ- ೪೭


ಹಾರುವ ಹಕ್ಕಿಗಳ ಅಂತರಂಗವನ್ನು ತವಿಶ್ರೀ ಹೀಗೆ ತೆರೆದಿಡುತ್ತಾರೆ.

ಹಾರುವ ಬಾರಾ

ಹಾರುವ ಬಾ

ಜಂಟಿ ಹಕ್ಕಿ

ಒಂಟಿ ಹಕ್ಕಿ

ಜೋಡಿ ಹಕ್ಕಿ

ಬೋಡಿ ಹಕ್ಕಿ

ಅಕ್ಕಿಯ ಹೆಕ್ಕುವ ಹಕ್ಕಿ

ಹಕ್ಕಿಯ ಹಕ್ಕನು ಅರಿತಿಹ ಹಕ್ಕಿ

ನಾ ಹಕ್ಕಿ ನೀ ಹಕ್ಕಿ

ಅಕ್ಕನೊಬ್ಬಳು ಹಕ್ಕಿ

ಅಣ್ಣನೊಬ್ಬನು ಹಕ್ಕಿ

ಅಮ್ಮ ಅಪ್ಪ ಹಕ್ಕಿ

ಎನ್ನ ಹಿಂದೆ ನೀ ಬಾರಾ

ಅವನ ಮೇಲೆ ನೀ ಏರು

ನಿಶ್ಶಕ್ತನ ಕೈ ಹಿಡಿದೆತ್ತು

ಗುರಿಯೊಂದನೇ ಕಾಣುವಾ

ಬಾಣದೋಪಾದಿಯಲಿ ನುಗ್ಗುವ

ಇಂದ್ರಚಾಪವ ಲೋಕಕೆ ತೋರುವಾ

ಮೇಲಿರುವುದು ತಂಪಿನ ಮೇಘ

ಅದರ ಮೇಲಿಹುದು ನಿಶ್ಶಕ್ತ ರವಿ

ಸುಡು ಸುಡು ಬಿಸಿಲು

ನೇಸರನ ಸಂಚು

ರಣರಂಗವ ಮಾಡಲು ಮೋಡಗಳು

ಪ್ರಖರತೆಯ ತಡೆಯಲು

ಹೊರಟಿಹವು ಒಂದರ ಹಿಂದೊಂದು

ಸಾಥಿ ನೀಡಲು ಇರುವಾ ನಾವು ಕೆಳಗೆ

ಮೋಡಗಳು ಕಾಲು ಸೋತಾಗ

ರವಿಯ ಎದುರಿಸುವಾ

ಬನ್ನಿ ನಾವೆಲ್ಲ ಒಂದಾಗಿರುವಾ

ಬನ್ನಿ ಬನ್ನಿ ಓ ನೋಡುಗರೇ!!!

ಕತ್ತಲಾಗುತ್ತಿಲ್ಲ

ಮಲಗುವ ವೇಳೆಯಾಗುತ್ತಿಲ್ಲ

ಬಿರಿ ಬಿರಿ ಬಿರಿಯುತಿರುವಭೂಮಿಗೆ

ನೀರನುಣಿಸಲುಹೊರಟಿಹ ಮೋಡಗಳಿವು

ಸೂರಜನ ಮರೆಮಾಚುತಿಹವು

ಹೋಗದಿರಿಮೋಸ ಹೋಗದಿರಿ

ಮನೆಗೆ ಹೋಗದಿರಿ

ನಿಮ್ಮೂಟವ ಹುಡುಕಿರಿ

ನಮ್ಮೊಡನೆ ಸಾಥಿಯ ನೀಡಿರಿ

ರೋಹಿತ್ ತಮ್ಮ ಪುಟ್ಟ ಚುಟುಕದಲ್ಲಿ ಹೀಗೆ ಹೇಳುತ್ತಾರೆ.

ಮುಸ್ಸಂಜೆಯ ಹೊತ್ತಿನ ಮೋಹಕ ಸಮಯ

ದಿನದ ಖುಷಿಯಲಿ ಮಿಂದೆದ್ದ ಹರುಷ

ನಾಳೆಯ ಬಗ್ಗೆ - ಆಲೋಚನೆಯೆಲ್ಲಾ ನಾಳೆ

ಕೇವಲ ಹಾರಟಕ್ಕೆ ಗಮನ ಈ ಕ್ಷಣ

ಕುಮಾರ ಸ್ವಾಮಿ ಕಡಾಕೊಳ್ಳ ಅವರು ಹಾರುವ ಬಾರ ಅನ್ನುವ ಶೀರ್ಷಿಕೆಯಡಿಯಲ್ಲಿ ಹೀಗೆ ಹೇಳುತ್ತಾರೆ.


ಹಾರಿ ಬಾ ಜೊತೆ ಸೇರು ಬಾ

ಹಾರಿಹೋಗಿ ಗಗನದಲಿ ಆಡೋಣ ಬಾ

ಸಪ್ತಸಾಗರ ದಾಟಿದ ಮುಗಿಲು

ಚದುರಿ ಚಿತ್ತಾರದಿ ಬಿತ್ತರಗೊಂಡಿದೆ ನೋಡ


ಸುಪ್ತ ನೀಲಾಕಾಶದಲ್ಲಿ ತೇಲಿ ಹಾರಿ

ಹಾಡೋಣ ಬಾ ಜೊತೆಗೂಡಿಗೂಡಿ

ಸಪ್ತಸ್ವರಗಳನು ಸಿರಿಕಂಠದಲ್ಲಿ ಹಾಡಿ

ಭಾವಬೀರಿ ನಲಿದಾಡಿ ಮೆರೆಯೋಣ ಬಾ


ಮುಕ್ತ ಭಾವದಲಿ ರಕ್ಕೆ ಬೀಸುತ್ತ ಬಾ

ಎತ್ತರದಲ್ಲಿ ಕೂಟ ಮಾಡೋಣ ಬಾ

ಅಸೀಮ ಬಯಲಲ್ಲಿ ಅನಂತ ಚೇತನದಿ

ಸಂಚಾರ ನಡೆಸೋಣ ಹಾರಿ ಹಾರಿ ಬಾ


ಚತುರ ಚೆಲ್ಲಾಟ ಗಗನದಲಿ ಹಾರಾಟ

ಜೊತೆಸೇರಿದರೆ ನಾವೆಲ್ಲ ಎಂತಾ ಓಲಾಟ

ಸೇರು ಬಾರ ನಡೆಸೋಣ ಕಮ್ಮಟ

ಕುಶಲ ಕೇಳುತ ಒಲವ ತೋರುವ ಬಾರ


ಮೇಲೇರಿ ಬಾರ.. ತಂಪು ಬೀರಿಹುದು

ಮೋಡಗಳ ಸಂದಿಯಲಿ ಸುರುಗೋಣ ಬಾ

ತೇಲೋ ಮುಗಿಲಿನ ಜೊತೆಯಲ್ಲಿ ತೇಲೋಣ ಬಾ

ನಯಾನವನು ಸಂಘದಿ ಮಾಡೋಣ


ಇಳೆಯನ್ನ ಇಣುಕೋಣ ಮೇಲೇರಿ ಹೋಗಿ

ಕಾಣೋಣ ಸೊಬಗ ಹೊಸ ರೂಪವನ್ನ

ಪಿಸುಮಾತನಾಡುತ್ತ ಗುಟ್ಟನ್ನು ಹೇಳುತ್ತ

ಸೇರುಬಾರ ಸಾಗೋಣ ಮುಂದೆ ಮುಂದೆ


ಸಾಲು ಸಾಲಾಗಿ ಶಿಸ್ತಿನಲಿ ಸೇರಿ

ಗಾಳಿ ಗೋಪುರದಲ್ಲಿ ಏರಿ ಏರಿ

ರವಿಯ ಜೊತೆ ಕಣ್ಣು ಮುಚ್ಚಾಲೆ ಆಡಿ

ಸೋಜಿಗದ ಮೋಜು ಮಾಡುವ ಬಾರ


ಈ ತೀರದಿಂದ ಆ ತೀರಕೆ ಹೋಗಣ

ಹೊಸ ಲೋಕದಲಿ ಬದುಕ ನಡೆಸೋಣ

ಅಲ್ಲಿ ಸಂಸಾರ ಹೂಡಿ ವಂಶಬೆಳೆಸೋಣ

ಬದುಕಿನ ಬಾಂಧವ್ಯ ಸಿರಿಯಲ್ಲಿ ಬಾಳೋಣ

ಸತೀಶ್ ಅವರ ವಲಸೆ ಹಕ್ಕಿ ಕವನ ಹೀಗೆ ಹೇಳುತ್ತದೆ.

ಈವರೆಗೆ ಯಾರೂ ತುಳಿಯದ ದಾರಿ

ನಭಗಳ ಮೀರಿ ಹೋಗೋ ವಲಸೆ

ಏನೇನೋ ಇದ್ದು ಕನಸುಗಳನು ಹೊದ್ದು

ಮುಂದಿನದು ಸರಿ ಎನುವ ವರಸೆ.

ಪಲಾಯನವಲ್ಲ ಬದುಕಿನೊಂದು ಭಾಗ

ಎಲ್ಲಿ ಬೆಚ್ಚಗಿದೆಯೋ ಅಲ್ಲಿಯದೇ ಸೊಗಸು

ಮನದಾಳದ ಮೊಳಕೆ ಚಿಗುರದಿಹ ತಂಪಿರೆ

ಹುಟ್ಟುವುದು ಹೇಗೆ ಬಣ್ಣದಾ ಕನಸು.

ವಲಸೆಯ ಬದುಕಿನ ವರೆಸೆಗಳು ಹಲವು

ಮಗ್ಗುಲು ಬದಲಿಸಿ ಮಲಗುವಲ್ಲಿಂದ ಹಿಡಿದು

ಅದೆಲ್ಲೋ ಅವಕಾಶ ಕೈ ಹಿಡಿದು ಕರೆಯುವ

ಗೋಲದ ಮತ್ತೊಂದು ಮಗ್ಗುಲಿಗೆ ನಡೆದು.

ಹಿಂದು ಮುಂದಾದರೂ ಏಕೆ ನೋಡಬೇಕು

ತಮ್ಮವರೆಂಬ ಕೊರಗೇ ಇಲ್ಲದಂತಾಗಿರುವಾಗ

ಭೂಮಂಡಲದ ಮೇಲೆ ನಾವು ನಾವೇ ಬರೆದ

ಗೆರೆಗಳನ್ನು ಮೀರಿ ಹಾರುವ ನಭವಿರುವಾಗ.

ಮೋಡಗಳ ಹಿನ್ನೆಲೆ ಬರೀ ನೆಪಕ್ಕೆ ಮಾತ್ರ

ಹಾರುವ ನಮಗೂ ಗೊತ್ತು ಹಿಂದಿರುವ ನೀಲಿ

ಹಾರುತ ಹಾರುತ ದೂರದೂರನು ಸೇರಿಯೂ

ಮನದ ಮೂಲೆಯಲ್ಲಿ ಅಡಗಿದೆ ಚಿಂತೆಯ ಸೆಲೆ.

Monday, 24 March, 2008

ಚಿತ್ರ - 46

ಶ್ರೀನಿವಾಸ್ ಅವರು ಚಿಂತನೆಗೆ ಚೈತನ್ಯ ಅನ್ನುವ ಕವನದ ಮೂಲಕ ಹೀಗೆ ಹೇಳುತ್ತಾರೆ.

ಅಬ್ಬೇಪಾರಿಯಾಗಿ
ಮಲಗಿರುವೆಯಾ ನೀ ನನ್ನ ಕಂದ
ನಿನ್ನ ಎತ್ತಾಡಿದರೆ ಮನಕಾನಂದ
ಮೂಡಿಸಬಲ್ಲೆ
ಓದುಗರಲಿ
ಮಂದಹಾಸ, ಮುಗುಳ್ನಗೆ,
ಉಲ್ಕಾಪಾತಕ ಕಂಗಳು,
ಭುಗಿಲೇಳುವ ಮನಗಳು,ಭಯಾನಕ ಚಿಂತನೆಗಳು,
ಇನ್ನೂ ಹಲವಾರು ನವರಸಗಳು
ಏಳು, ಎದ್ದೇಳು
ಹರಿಬಿಡು ಹೆಪ್ಪುಗಟ್ಟುತ್ತಿರುವ
ರಕ್ತವರ್ಣದ ಓಕುಳಿಯ ಬಣ್ಣ
ಧಮನಿಗಳಲಿ ಹರಿದಾಡಲಿ
ನೆತ್ತರಿನ ಪ್ರವಾಹ
ಹೆಪ್ಪುಗಡದಿರಲಿ
ಅಂಗವೈಕಲ್ಯವ ನೀಡದಿರಲಿ
ನೀ ಮೂಡಿಸುವಅಕ್ಷರದಿ ಹರಿದಾಡಲಿ
ನೆತ್ತರಿನ ಪ್ರವಾಹ
ಭುಗಿಲೇಳಲಿ
ಚಿಂತನೆಗಳು
ಏಳು, ಎದ್ದೇಳು
ಹರಿಬಿಡು, ಮನದ ಚಿಂತನೆಗಳ
ಸಮಾಜದ ಒಳಿತಿಗಾಗಿ
ಕುಮಾರ ಕಡಕೊಳ್ಳರು ಲೇಖನಿಯ ಬಗ್ಗೆ ಹೇಳುವುದು ಹೀಗೆ:
ಚಿಕ್ಕದಾದರು ನನ್ನ ದೇಹಗಾತ್ರ
ಖಡ್ಗಕ್ಕಿಂತ ತಿಕ್ಷ್ಣ ನನ್ನ ಹರಿತ
ಕ್ರಾಂತಿಯ ಸಿಡಿಲಕಿಡಿ ಸಿಡಿಸಬಲ್ಲೆ
ಶಾಂತಿ ಮಂತ್ರವ ಸಾರಬಲ್ಲೆ
ಹಗಲು ರಾತ್ರಿಯ ಪರಿವಿಲ್ಲ
ಸುಖ ದುಃಖಗಳ ತೊಡುಕಿಲ್ಲ
ಹಿರಿಕಿರಿಯರ ಗರಿವಿಲ್ಲ
ಬರೆಯುವುದೊಂದೇ ನನ್ನ ನಿಷ್ಠೆ

ಅರ್ಥ ಕಾಮದ ಬೇಧವಿಲ್ಲ
ಉಚ್ಚನೀಚತುಚ್ಛಗಳ ತಿಳಿವಿಲ್ಲ
ರಾಗಭೋಗಸಾರದ ಸೆಳವಿಲ್ಲ
ರೂಪಾಂತರಿಸುವುದೆನ್ನ ಕಾಯಕ

ರಕ್ತಕೋಡಿ ಹರಿಯಲು ಬಹುದು
ಕ್ರಾಂತಿ ಕಹಳೆ ಮೊಳಗಲುಬಹುದು
ಸಳ್ಳುಸಾರಗಳು ಮೆರೆಯಲು ಬಹುದು
ನಾಕೊಟ್ಟ ರೂಪಕ್ಕೆ ಹತ್ತಾರು ಮುಖಗಳು

ಗತದಲ್ಲಿ ಕಳೆದ ನೂರುಕಾಲದ
ಇತಿಹಾಸ ಸೆರೆಹಿಡಿದಕ್ಷರದಲಿ
ಒತ್ತಿಗೆಯಲಿ ಒಟ್ಟಾಗಿ ಸೇರಿಸಬಲ್ಲೆ
ಜನ್ಮಜನ್ಮಾಂತರ ಮುನ್ನಡೆಸಬಲ್ಲೆ

ಮನದ ಭಾವನೆಗೆ ಪದರೂಪಕೊಡುವ
ಸಾಧನ ನಾನಾಗಿ ಕಾರ್ಯಮಾಡುವೆ
ಪ್ರೇಮಿಗಳ ಒಲವಗುಟ್ಟು ಮೊದಲು
ಕೇಳುವ ರಾಯಭಾರಿನಾನಾಗುವೆ

ತೊದಲಾಡುವ ಮುದ್ದು ಮಕ್ಕಳ
ಅಂಕುಡೊಂಕಿನಕ್ಷರಗಳ ಸಾರಥಿ
ನಾನುವೇದಸಾರ ವಿವರಿಸುವ ತತ್ವಜ್ಞಾನಿ
ಸಾರಮಾತುಗಳಿಗೆ ದಾರಿತೊರುವೆನು

ಉತ್ಕರ್ಷಿಸುವ ಕಲ್ಪನೆಯ ಉನ್ಮಾದಕೆ
ಬಂದಿಸುವೆನ್ನ ಬೆರಳಿನ ಸಂದಿಯಲಿ
ಬಿರಿದೇಳುವ ನಿನ್ನ ಭಾವಕೆ
ನನ್ನೆದೆಯ ರಸವ ಬಸಿಯುವೆ

ಕುಲ,ಧರ್ಮ ಮೇಲು ಕೀಳೆನಗಿಲ್ಲ
ಬಡವಬಲ್ಲಿದ ಹೀನಭಾವದ ಸೊಲ್ಲಿಲ್ಲ
ದೇಹ ಊನಾವಾದ ವಿಕಲಾಂಗನನ್ನೂ
ನನ್ನಜೊತೆಸೇರಿದರೆ ಯೋಧನನ್ನಾಗಿಸಬಲ್ಲೆ

ಅಪರಾಧಿಯ ಸಾವಿನ ಸೂಚಕವ ಬರೆವ
ಹಕ್ಕುದಾರ ನಾನಾಗಿಮೆರೆದಿರುವೆ,ಮೆರೆವೆ
ನಾ ಕೇವಲ ಬರೆಯುವ ಸಾಧನವಲ್ಲ
ಮೂಡಿದ ಭಾವಕ್ಕೆ ಶಾಶ್ವತ ರೂಪಕೊಡುವವನು


...ಬರೆಯುವವರು ಬೇಕು ಅನ್ನುತ್ತಾರೆ ಸತೀಶ್...

ಮೈ ಬಗ್ಗಿಸಿ ಕೈ ಕೆಸರಾಗಿಸಿ
ದುಡಿವ ದಿನಗಳು ನಮಗಿಲ್ಲ
ಕೂತು ಯೋಚಿಸುವ ದಿನವು
ಬೆನ್ನು ಬಾಗಿದ ನಿಲುವು ಹೊಸತಲ್ಲ.

ತಾಳೆಗರಿಯ ಮೇಲೆ ಅದೇನನ್ನೋ
ಬರೆದರಂತೆ ಥರಥರನ ಬಣ್ಣವಿಲ್ಲದೆ
ಹಲವಾರು ಮಾದರಿ ದೇಸೀ-ವಿದೇಶಿ
ರೂಪವಿದ್ದೂ ಒಕ್ಕಣಿಕೆಯ ಬರ ಹುಟ್ಟಿದೆ.

ಅನುಕೂಲಕ್ಕೆಂದು ಬರೆವುದರಷ್ಟುದ್ದ
ಬಿಳಿಹಲಗೆಗಳಿವೆ ಬರೆವವರು ಯಾರು
ಕೋಟೆ ಕೊತ್ತಲ ಕಾದು ಮಹಲುಗಳು
ಉರುಳಿದ ಕಥೆಯ ನಾಳೆ ಹೇಳುವರಾರು.

ಕ್ಷೋಭೆ ಇರದ ಮನ ಸ್ವಚ್ಛಂದ ಗಾನ
ಮುಗಿಲನು ಮೀರಿಸೋ ಧೀರರಿಹ ಕಾಲ
ದೂರದ ದೂರಗಳು ಹತ್ತಿರ ಹತ್ತಿರವಾಗಿ
ಜಗವೇ ಒಂದು ಸಂತೆಯ ಮಾಯಾಜಾಲ.

ಕುಟ್ಟುವ ಜನ ಶಿಲೆಯನ್ನು ಕಡೆಯದಂತೆ
ಬರೆಯುತ್ತಿದ್ದ ಮನ ಲೇಖನಿಯ ಮುಟ್ಟದಾಗಿ
ಹಿಮ್ಮೇಳದ ಹಲವಾರು ಗಾನಗಳಲ್ಲೊಂದೂ
ಹಬ್ಬದಾಗಿದೆ ಬೆಟ್ಟವನರಸುವ ಬಳ್ಳಿಯಾಗಿ.

ಬರೆಯುವವರಿಗೆ ಬೇಕು ಧೀರ ನಡವಳಿಕೆ
ನಾಗಾಲೋಟ ಎಲ್ಲವನ್ನೂ ಗೆಲ್ವೆನೆಂಬ ಬಿಮ್ಮು
ಬರೆಯುವವರು ಬೇಕು ಮಸಿಯ ಬಣ್ಣವನ್ನೂ
ಮೀರಿ ತೆಗೆದಿರಿಸಿ ಒಡಳೊಳಗಿನ ಹಮ್ಮು.

Monday, 17 March, 2008

ಚಿತ್ರ - ೪೫ಟೋಕಿಯೋದ ಉವೇನೋ ಪಾರ್ಕಿನಲ್ಲಿ ಅನಿಕೇತನ ಅವರ ಕ್ಯಾಮರಾದ ಕಣ್ಣಿಗೆ ಬಿದ್ದ ದೃಶ್ಯ


ಯಾವ ಕಿರಿಕಿರಿಗೂ ಬಗ್ಗದ ಪಿಸುಮಾತನ್ನು ಕುಮಾರ ಸ್ವಾಮಿ ಕಡಾಕೊಳ್ಳ ವರ್ಣಿಸುವುದು ಹೀಗೆ...

ಪಿಸುಮಾತು

ಹೆಜ್ಜೆ ಹೆಜ್ಜೆ ಹೆಜ್ಜೆಗೊಂದು
ಗುಜು ಗುಜು ಪಿಸುಮಾತು
ಗಟ್ಟಿಯಾಗಿ ಆಡದೆ ತಮ್ಮೊಳಗೆ
ನಡೆದಿದೆ ಗುಟ್ಟಿನ ಕಸರತ್ತು

ಯಾರಮಾತು ಯಾವಮಾತು
ಅವರಿವರ ನಡುವಿನ ಮಾತು
ಅವಕೇಳಿಸಿಕೊಂಡರೇಗೆ ಆತಂಕ
ಅನುಮಾನ ತಮ್ಮತಮ್ಮೊಳಗೆ

ಸುತ್ತೆಲ್ಲ ಬರಿ ಬೋಳುತರು
ನಡುವೆಯಲ್ಲೊಂದು ಹಸಿರ ಟೊಂಗೆ
ಮತ್ತೆಲ್ಲೊ ಕೂಗುತ್ತ ಕುಳಿತಕಾಗೆ
ಮಾಡಿತ್ತು ಕಿರಿಕಿರಿ ಪಿಸುಮಾತಿಗೆ

ಎತ್ತರದ ದೇಹದಾಂಡಿಗ
ಹೊತ್ತೊಂದು ಹಸುಗೂಸನು
ಬಿರಬಿರನೆ ಹೆಜ್ಜೆ ಹಾಕುತ
ನಡೆದಿಹನು ಅವರಿವರನು ದಾಟುತ

ಪಿಸುಮಾತು ತಮ್ಮೊಳಗೆ
ಜೊತೆಗೂಡಿದ ಪ್ರೇಮಿಗಳೊಳಗೆ
ಬಣ್ಣದ ಕನಸುಗಳಲಿ ಬೀಗುವ
ನವ ಭಾವನೆಗಳ ಜೊತೆಗೆ

ಸತೀಶ್ ’ಅವರ ಕಷ್ಟ ಅವರಿಗೆ’ ಅನ್ನುತ್ತಾರೆ...

ಬಳ್ಳಿಯ ಹಾಗೆ ತೆಳ್ಳಗೆ ಹಬ್ಬಿ
ನಭವನ್ನು ಮುಚ್ಚೋ ಹುನ್ನಾರ
ಎಲೆಗಳು ಇರದ ಮರವಾದ್ರೇನು
ಹೊಮ್ಮುವುದಕ್ಕೆ ಕಾಕ ಸ್ವರ.

ಬಾಗೋ ಹಾದಿಯ ತಾನು ನಂಬಿ
ಸುತ್ತಲು ಹಬ್ಬಿದ ಬೇಲಿ
ಎರಡೂ ಪಕ್ಕಕೂ ನೆಟ್ಟವರಂತೆ
ಥರಥರ ಗಿಡಗಳ ಮಾಲಿ.

ಅವರವರ ಕಷ್ಟ ಅವರಿಗೆ ಅನ್ನೋ
ಬೆನ್ನಿನ ಮೇಲಿನ ಭಾರ
ಕಷ್ಟಾ ಕೊಡುವ ಕಾಣದ ಮನಸಿನ
ಕರುಣೆಯ ಲೆಕ್ಕವು ಅಪಾರ.

ನಿಂತರೆ ಬದುಕು ನಡೆವುದೆಂತು
ಚಲನೆ ಪ್ರಗತಿಯ ಸ್ವರೂಪವು
ಬಳಲಿಕೆಗಳವು ಹುಟ್ಟಿದರೇನಂತೆ
ತನುಮನದಾರೈಕೆ ಕ್ಷೇಮವು.

Monday, 10 March, 2008

ಚಿತ್ರ - ೪೪


ಶ್ರೀ ಅವರು ತೆಗೆದ ಒಂದು ಛಾಯಾಚಿತ್ರನಮ್ಮೀಬಾಳು

ಬಿಳಿ,ನೀಲಿ ಒಳಹಂಗಿ ಬೆತ್ತಲೆ ಎದೆಯೊಡ್ಡಿ
ಬೆವರಿಳಿಸಿ ಮಣ್ಣಗೆವ ಕಾರುಬಾರಿನಲಿ
ನಿರತ ಅಪ್ಪ ಅಣ್ಣಂದಿರು ದಾಹವೇರಿ
ಜಲಹೀರಿ ದೇಹ ದಣಿವಾರಿಸಿತಿಹರು

ಹಸಿರ ಸೀರೆಯನುಟ್ಟು ಬಿಸಿಲಬಯಲಲಿ
ಸೆರಗುಸುತ್ತಿ ಬಿಗಿದು ಕಟ್ಟಿ ನತ್ತಿಗೆ
ಎತ್ತಿಹಾಕುತ ತುಂಬಿದಾ ಬುಟ್ಟಿಯನು
ಮಣ್ಣ ಕಸುಬಿನಲಿ ಅಮ್ಮ ದುಡಿತಿಹಳು

ಕಲ್ಲರಾಸಿಯ ಸಿಂಹಾಸನವೇರಿ
ವಲ್ಲಿ ಹೊದ್ದು ದೊಡ್ಡವರಂತೆ ಹೆಗಲಮೇಲೆ
ಮರೆತೆಲ್ಲ ಜಗದ ಆಟವನು ನಾವು
ಚರದೂರವಾಣಿಯನಿಡಿದು ಆಡುತಿಹೆವು

ಯಾರೋ ಧನಿಕನ ಅರಮನೆಯ ಪಾಯವಂತೆ
ಅಡಿಪಾಯವಾಕಲು ಗುಳಿತೋಡಬೇಕಂತೆ
ಕೊಟ್ಟೆರಡಾಣೆಗೆ ಧರೆವಗೆಯ ಕಾಯಕವ ಅವರೆಲ್ಲ
ದಣಿವಾದರು ಮೈಮುರಿದು ಮಾಡುತಿರಬೇಕಂತೆ

ಈ ಬಯಲೇ ನಮಗೆ ಶಾಲೆಯ ಬೀಡು
ಜೊತೆಸೇರಿ ಆಡುವುದು ನಮ್ಮಯ ಪಾಡು
ಮುಂದೊಂದು ದಿನ ನಮ್ಮದದುವೇಗೋಳು
ಕಡಾಯಿ ಗುದ್ದಲಿಗಂಟಿದೆ ನಮ್ಮೀಬಾಳು


- ಕುಮಾರಸ್ವಾಮಿ ಕಡಾಕೊಳ್ಳ


ಬಣ್ಣದ ಬದುಕು

ಸೆರಗನು ಕಟ್ಟಿ ಸಿಂಬೆಯ ಸುತ್ತಿ
ಬದುಕು ಬಾಣಲೆ ಹೊತ್ತಿಹುದು
ಉರಿಬಿಸಿಲಲ್ಲಿ ಅಳುಕದೆ ಇಲ್ಲಿ
ಜನಪದ ಗೊಂದಲ ಹಾಡಿಹುದು.

ಯಾರೋ ಕಟ್ಟಿದ ಕಟ್ಟಡವಿಂದು
ಅಗೆದರೆ ಕಲ್ಲನು ತೋರುವುದೇ
ಬಣ್ಣದ ಬಾಟಲಿ ಒಳಗಿನ ನೀರಿನ
ಬಣ್ಣವೆ ಜಗಕದು ತೋರಿಹುದೆ.

ಬಯಲಲಿ ಆಡುವ ಪೋರರಿಗಂತೂ
ಇದು ಬರಿ ಕಲ್ಲು ಮಣ್ಣಿನ ಸವಾಲು
ಕೈಯಲಿ ಯಂತ್ರವ ಹಿಡಿದು ಜಗವನು
ನಿರುಕಿಸೋ ಕಣ್ಣುಗಳ ಅಹವಾಲು.

ಸುಮ್ಮನೆ ಕಾಲ ತೆಗೆದಂತೆಲ್ಲ
ನಾಳೆಯು ದೂರವು ಓಡುವುದೇನು
ಇಂದಿನ ಬದುಕು ಹೀಗಿರುವಾಗ
ನಿನ್ನೆ-ನಾಳೆಗಳ ಗೋಜೇನು.

ಅಂಜಿಕೆ ಅಳುಕು ಯಾರಿಗೋ ಏನೋ
ಹೊಸ ಲೋಕವದು ಸೆಳೆದಂತೆ
ಕಣ್ಣಿಗೆ ಕಾಣುವ ಬಣ್ಣದ ಬದುಕು
ಜಗವನು ಕೈಯಲಿ ಹಿಡಿದಂತೆ.

- ಸತೀಶ

Monday, 3 March, 2008

ಚಿತ್ರ - ೪೩


ಶ್ರೀನಿಧಿ ಅವರು ತೆಗೆದ ಛಾಯಾಚಿತ್ರ


"ಹೆಜ್ಜೆ ಗುರುತು" ಎನ್ನುವ ಮನೋಜ್ಞವಾದ ಕವಿತೆಯ ಮೂಲಕ ಕುಮಾರ ಸ್ವಾಮಿ ಕಡಾಕೊಳ್ಳ ಅವರು ಈ ಛಾಯಾಚಿತ್ರವನ್ನು ಓದುಗರ ಮುಂದೆ ತೆಗೆದಿಟ್ಟಿದ್ದು ಹೀಗೆ:

ಹತ್ತು ಹಲವು ತಿರುವಿನಲ್ಲಿ
ಸುತ್ತುಹಾಕಿ ಬೆಪ್ಪನಾಗಿ
ನಡೆದು ಬಂದೆ ಹುಟ್ಟಿನಿಂದ
ಬದಕಿನ ದೂರ ದಾರಿಯಲ್ಲಿ

ಬಾಲ್ಯದಾಟ ಸೊಗಸ ದಾಟಿ
ಏರಿಬಂದ ಯವೌನ ಮೀಟಿ
ಕೂಡಿಕೊಂಡು ಸರಸ ಸತಿ
ದಾಟುತಿಹೆನು ಬದುಕ ತಟ

ಕಾಮ ಮೋಹ ಈರ್ಷ್ಯೆ ದ್ವೇಷ
ಸೆಳವಿನಲ್ಲಿ ಸೆಣಸಿ ಬಂದೆ
ಪ್ರೀತಿ ಪ್ರೇಮ ಸ್ನೇಹ ಅನುಭಂದ
ಸಮ್ಮೋಹಿತ ಸಾರ ಹೀರಿ ಬಂದೆ

ಏಳು ಬೀಳು ನಿತ್ಯ ಬಾಳು
ಹಗಲು ರಾತ್ರಿ ಎಲ್ಲ ಗೆದ್ದು
ಎದ್ದು ಬಂದೆ ನೆನಪು ತುಂಬಿ
ಇದ್ದ ದಾರಿ ನಡೆದು ಸವೆಸಲು

ಹುಟ್ಟು ಸಾವು ಎರಡು ತೀರ
ಸುಖ ದುಃಖ ಬದಿ ಅಕ್ಕ ಪಕ್ಕ
ಅರಿವು ಮರೆವು ಮೇಲೆ ಕೆಳಗೆ
ನಡುವೆ ನನ್ನ ಬಾಳ ದಾರಿ

ಹುಟ್ಟು ಅಕಸ್ಮಿಕ ಆರಂಬದಲ್ಲಿ
ಜ್ಞಾನ ದೀಪ ಬೆಳಕಿನಲ್ಲಿ
ಹುಟ್ಟು ಸಾವು ಮಿಲನದಲ್ಲಿ
ಸಾವು ನಿಚ್ಚಿತ ನೆಚ್ಚಿ ಹೊರಟೆ

ಎದ್ದು ಬಿದ್ದು ಉತ್ತು ಬಿತ್ತಿ
ನನ್ನದಲ್ಲದ ಎಲ್ಲ ಬಿಟ್ಟು
ಅನುಭವಗಳ ಹೆಜ್ಜೆ ಗುರುತು
ಬಿಟ್ಟು ಬಂದೆ ಮುಂದೆ ಮುಂದೆ

ಸತೀಶ ಅವರು ತಮ್ಮ " ಸುತ್ತಿ ಸುಳಿವ ಹಾದಿ ಪ್ರಶ್ನೆಗಳ ಏಳುಸುತಿರಬೇಕೆ " ಎನ್ನುವ ಕವನದ ಮೂಲಕ ನಡೆಯುವ ಹಾದಿ ನಮ್ಮನ್ನು ಹೇಗೆ ಅಂತರ್ಮುಖಿಯನ್ನಾಗಿ ಮಾಡಿ ನಾನಾ ವಿಧದ ಪ್ರಶ್ನೆಗಳನ್ನು ನಮ್ಮ ಎದುರಿಗೆ ತೆರೆದಿಡುವುದೆಂದು ಈ ರೀತಿ ಬರೆದಿದ್ದಾರೆ:

ಬಾಗುವ ಈ ರಸ್ತೆಗಳ ಕಥೆಯೇ ಇಷ್ಟು
ಕಂಡಕಂಡಲ್ಲಿ ಧೂಳನೆಬ್ಬಿಸಿ ಅಷ್ಟಿಷ್ಟು
ಅದೂ ತಿಳಿದವರ ಮುಖ ಇಟ್ಟುಕೊಂಡು
ಎರಡೂ ಕಡೆಗೆ ದಿಕ್ಕನು ಹಂಚಿಕೊಂಡು.

ಹಿಂತಿರುಗಿ ನೋಡಿದರೆ ಹಳೆಯ ನೆನಪು
ಮುಂಬರುವ ಹೊಸ ಹಾದಿಯ ಒನಪು
ಎತ್ತಿ ಇಳಿದು ಸುತ್ತಿ ಸುಳಿವ ಹಾದಿಯ
ಏನ ಹೇಳಲಿ ವಿಸ್ಮಯದ ಪರಿಯ.

ಇಳಿಪ್ರಾಯದವರ ಕಥೆಗಳಲಿ ಗುಲ್ಲಿಲ್ಲ
ಹಾಡಿ ಹಲಬುವ ಬಾಯಿಯಲಿ ಹಲ್ಲಿಲ್ಲ
ಮಕ್ಕಳು ದೂರದೂರಿಗೆ ಹೋದ ಕಾರಣ
ಯಾರೋ ಹೇಳಿದ ಎಲ್ಲಿಯ ಉದಾರಿಕರಣ.

ಅವಳೋ ಬೇಯಿಸುತ್ತಲೇ ಇದ್ದಾಳೆ ಕೂಳು
ನನ್ನೊಡನೆ ತೇದು ತೆವಳಿದ ಬಾಳು
ಮೂರು ಸಂಜೆಯ ಧೂಳು ತುಂಬಿದ ಕತ್ತಲೆ
ಎಂದೋ ಬರುವ ಮಕ್ಕಳ ನೆನಪಿನಲೆ.

ಹೊಸತನದ ಪ್ರತೀಕ ದೂರವಿರಲೇ ಬೇಕೆ
ಬದುಕು ಸಾಗಿಸುವುದಕೆ ಎಲ್ಲೋ ಇರಬೇಕೇಕೆ
ಮುಪ್ಪಿನಲಿ ಕಣ್ಣಾಲಿಗಳು ತುಂಬುತಿರಬೇಕೆ
ಸುತ್ತಿ ಸುಳಿವ ಹಾದಿ ಪ್ರಶ್ನೆಗಳ ಏಳುಸುತಿರಬೇಕೆ.

ನಾವೋ ಹಳಬರು ನಮಗೆ ತಿಳಿಯದಿರುವುದು ಹಲವು
ದೂರವಿದೆ ನಮ್ಮಿಂದ ನಮ್ಮ ಕಿರಿಯರ ಒಲವು.