Monday, 25 June, 2007

ಚಿತ್ರ - 7ಕವಿತೆ ನೇಯ್ದವರು...

ದಡದಿ ತಂಗಿರುವ ಆಸೆ ದೋಣಿಯನೇರಿ
ಬದುಕ ನೀಲಿ ಸಮುದ್ರದಲಿ ಸಾಗಿ
ಪರಿಶ್ರಮದ ಹುಟ್ಟುಹಾಕಿ ಮೀಟಿ
ಕಷ್ಟದಲೆಗಳ ಹಿಂದೆ ನೂಕಿ
ದಿನದ ಬುತ್ತಿಯ ಹಿಡಿದು ಬಲೆಬೀಸಿ
ನಾಳೆಗೂ ಒಂದಷ್ಟು ಉಳಿಸಿ

ಮತ್ತದೇ ದಡಕೆ ಹಿಂದಿರುಗಿ ಮಲಗುವ ಮುನ್ನ-
ಹೊಲಿಯಲೇಬೇಕಿದೆ ಹರಿದು ಹೋಗಿರುವ ಕನಸ ಬಲೆಗಳನ್ನ...

- ಸುಶ್ರುತ ದೊಡ್ಡೇರಿ

ನೇಯುತ್ತೇವೆ ನಾವು....

ಕನಸುಗಳ ಹೆಣೆಯುತ್ತೇವೆ, ಇಳಿಗಾಲದಲ್ಲಿ
ಹೊರೆಹೊರುವ ಬಲವೀಯುತ್ತೇವೆ ಬಲೆಗೆ
ಹೆಣೆದೇ ಹೆಣೆಯುತ್ತೇವೆ, ಬುತ್ತಿಗಳ ನೆನಪಲ್ಲಿ
ಇಂದು ತಂದಿದ್ದನ್ನು ನಾಳೆಗೆ ಉಳಿಸಿಕೊಳ್ಳುವವರೆಗೆ.

ನೆಲೆಯಿಲ್ಲದ ನೀರಿನಲ್ಲಿ ನಮ್ಮ ಜೀವ ಸೆಲೆ
ಸೆಳೆತದೊಳಗೆ ಎಳೆಯಬೇಕು ಜೀವ ಬಲೆ
ಅಲೆಯೆದುರಿನ ಬದುಕು, ಅಸಂಖ್ಯ ಜೀವ ನೆಲೆ
ಅಳೆದೂ ಅಳೆಯಲಾಗದ ಅದಮ್ಯ ಜೀವ ಕಲೆ.

"ಹೊಯ್" ಅಂದಾಗ ಸೇರಿಕೊಳ್ಳುವ ಬಲ
ಒಂದಾಗಿ ದುಡಿದಾಗ ಕೂಡಿಕೊಳ್ಳುವ ಬಲ
ಹಲವು ಹಸ್ತಗಳಲ್ಲಿ ಗುರಿಯೊಂದರ ಬಲ
ಸೇರಿ ಬಾಳುವಲ್ಲಿ ನಾಳೆಗಳಿಗೆ ಬೆಂಬಲ.

- ಸುಪ್ತದೀಪ್ತಿ

ಎರಡು ಪೂರಕ ಸ್ವಗತ

ಜಲವಾಸಿ - ಮೀನ ರಾಶಿ:
ಗೊತ್ತಿದೆ ನೀನು ಹಿಡಿಯುತ್ತೀ ಅಂತ
ಆದ್ರೂ ಬಂದು ಸಿಗುತ್ತೇನೆ ನಾನು ಗಾಳಕ್ಕೆ
ನಾನೇನೋ ತಿನ್ನಲು ಹೋಗಿ ಸಿಕ್ಕಿಬಿದ್ದೆ ನಿನಗೆ
ಎಂಬ ಭಾವದ ಆಟವೆಷ್ಟು ಚೆನ್ನ
ಅದು ಸಾವಿನಾಟವಾದರೂ.

ಸುಮ್ಮನೆ ಹೊರಟಿದ್ದೆವು ನಾವು ಗೆಳೆಯರ ಗುಂಪು
ಏನೂ ತಿನ್ನಲಲ್ಲ, ಯಾವುದನ್ನೂ ಕಚ್ಚಲಲ್ಲ
ಇದ್ದಕ್ಕಿದ್ದಂತೆ ಬಂದೆರಗಿ ಹಿಡಿದುಬಿಟ್ಟಿದೆ
ಬಲೆ ತಾನೇ ತಾನಾಗಿ, ಇದು ಬೇಕಿರಲಿಲ್ಲ
ಇಲ್ಲಿ ಆಟವಿಲ್ಲ, ಮಾಟವಿಲ್ಲ, ಬರಿಯ ಸಾವಿನ ಹೂಟ!

ನೆಲವಾಸಿ-ಧನುರ್ ರಾಶಿ:
ಬಿರುಬಿಸಲು, ಸುರಿವ ಮಳೆ-ಗಾಳಿ, ಅಬ್ಬರಿಸುವ ಕಡಲು
-ಗಳ ಮಧ್ಯೆ ನಮ್ಮ ಜೀವ ಹಿಡಿದು, ನಿಮ್ಮ ಜೀವ ಕಳಚಿ
ಮಾರ್ಕೆಟಲ್ಲಿ ಕಾಯುವ ಕೈಗಳಲ್ಲಿ ನಿಮ್ಮನ್ನೆಸೆದು
ಮನೆಯಲ್ಲಿ ಕಾಯುತ್ತಿರುವ ಕೈಗಳಿಗೆ
ಊಟ ಹಿಡಿದು ಹೋಗುತ್ತೇವೆ ನಾವು;
ಇಲ್ಲ ಇದು ಆಟವಲ್ಲ, ನಮಗೆ ಬರಿಯ ಬದುಕು.

ಅಲ್ಲಲ್ಲಿ ಹೊಲಿಗೆ ಬಿಟ್ಟ ಬದುಕಿನ ಕಿಂಡಿಗಳ
ಗೋಡೆ ಬೀಳದಿರಲು, ಹೊಲಿಯುತ್ತಿದ್ದೇವೆ-
ಹಿಡಿದಿಟ್ಟ ನೀವು ತಪ್ಪಿ ಹೊಗದಿರಲು.
ಇದು ಆಟವಲ್ಲ, ಹರುಕು
ಬದುಕಿನ ತೇಪೆ.

ಆಟ ಆಗ ಮಾತ್ರ, ಸುಮ್ಮನೆ ಹೊರಟ
ನಿಮಗರಿವಾಗದಂತೆ ಬೀಸಿ ಹಿಡಿವಾಗ,
ಕ್ಷಣ ಮಾತ್ರ ಆಟ, ಮತ್ತೆಲ್ಲ ಬದುಕು.

- ಸಿಂಧು

ಭಲೆ ಬಲೆ!

ಜೀವಜಲವ ಹುಡುಕುವಂಥ ಸಾವಿರ ಕಣ್ಣಿನ ಬಲೆ
ಬಿಡಿಸಬೇಕು ಹೆಣೆಯಬೇಕು ಬದುಕೆನ್ನುವ ಕಲೆ
ಗೋಣು ಬಗ್ಗಿಸಿ ದುಡಿಯದಿರೆ ಸುಟ್ಟೇಬಿಡುವ ಸೂರ್ಯ
ಯಾರು ಇರಲಿ ಯಾರು ಬಿಡಲಿ ನಿಲ್ಲದು ಕೈಂಕರ್ಯ.

ಹಲವು ನೀರ ತನ್ನೊಡಲಲಿ ಬಿಟ್ಟು ದೂರ ಸಾಗಿಹುದು
ಹಲವು ತೀರ ಕಂಡು ತಾನು ಪೋಣಿಸಿ ನೋಡಿಹುದು
ಭಲೆ ಬಲೆ ಎಂದವರಷ್ಟೇ ಏನೋ ಅರಿತ ಮಹಾಜಾಲ
ನೀರನಷ್ಟೇ ಅಲ್ಲ ಗಾಳಿಯನೂ ಸೋಸಿಬಿಡುವ ಛಲ.

ತೇವವೆಲ್ಲಿ ಒಣಗಿಹೋಯ್ತು ಜೀವಜಲದ ಮರೆಯೇ
ನೀರಿರದ ಕಡಲಿಗೆ ನಾವೆ ದೂಕುವುದು ಸರಿಯೇ
ತಮ್ಮ ಕೆಲಸ ತಾವು ಕಂಡು ಒಣಗುತಿಹರು ಪಾಪ
ಇವರ ನಡುವೆ ಒಂಟಿ ತಾನು ಛತ್ರಿ ಹಿಡಿದ ಭೂಪ.

ಭಲೆ ಎನ್ನುತ ಅದೇ ನೀರಿಗೆ ಬೀಸುವುದು ನಮ್ಮ ಬಲೆ
ಸಿಗುವುದು-ಬಿಡುವುದು ಎಲ್ಲ ಆ ದೇವನಿಗೆ ಬಿಟ್ಟ ಕಲೆ.

- ಸತೀಶ್

Monday, 18 June, 2007

ಆರನೆಯ ಚಿತ್ರ

Satish ಚಿತ್ರದೊಳಗಿನ ನಿರಾಶೆಗೆ, ನಿರ್ಲಿಪ್ತತೆಗೆ ದನಿಯಾಗಿದ್ದಾರೆ...

ನಾವಿರುವ ದೇಶ ಹಳ್ಳಿ

ಬಡತನದಿ ಸೊರಗಿ ಬಿಸಿಲಿನಲಿ ಕರಗಿ
ಅರಿತಿಹೆವು ಇಹದ ಮರ್ಮ
ತಂಪಿನಲಿ ಕುಳಿತ ಬಿಳಿ ಅಂಗಿ ಜನರು
ಕಂಡಿಹರೆ ನಮ್ಮ ಕರ್ಮ

ಇಂದಿನಾ ಕೂಳು ಮುಂದಿನಾ ಬಾಳು
ನಮ್ಮ ನೋಟ ಕಟ್ಟ ಕಡೆಗೆ
ದಿನದಿನವು ನಿಮ್ಮ ಮುನ್ನಡೆಸುತಿರಲಿ
ನಾವು ಕೊಟ್ಟ ತೆರಿಗೆ

ಕಳವಳದ ಕಣ್ಣು ತಳಮಳವೆ ಇನ್ನು
ನೆರಳನೂ ಸುತ್ತೋ ಬಳ್ಳಿ
ಎದೆ ನಿಮದು ಎದ್ದು ಹಾರಿದರೆ ಏನು
ನಾವಿರುವ ದೇಶ ಹಳ್ಳಿ

ಕೈಗಂಟು ಮಂಡಿ ಬರಿ ಕಾಲ ಬಂಡಿ
ಸೂರಾಗೆ ಹುಲ್ಲು ಹಾಸು
ತಿಳುವಳಿಕೆ ಬೆಳೆದು ಅರಿವಳಿಕೆ ಕಳೆದು
ದೂರಾಗೆ ನಮ್ಮ ಕಾಸು

ವರುಷಗಳು ಉರುಳಿ ಪ್ರತಿ ಪಕ್ಷ ತೆರಳಿ
ದಿನಕೊಂದು ರಾಜ ಮಂತ್ರ
ನಮ್ಮೊಳಗಿನಾ ಸ್ವರವು ಬದಲಾಗದಾಯ್ತು
ಉಳಿದಿಹುದೇ ಹೊಸತು ತಂತ್ರ


ಸಿಂಧು Sindhu ಇಲ್ಲಿ ಚೋಮನದುಡಿಯ ಬೆಳ್ಳಿಯರನ್ನು ಕಂಡಿದ್ದಾರೆ, ಅವರನ್ನು ಚಿತ್ರ ತೆಗೆದವರ ಜತೆ ಮಾತಾಡಿಸಿದ್ದಾರೆ...

ಬೆಳ್ಳಿಯರು..

ನೆರಳಿನಲ್ಲಿ ಅವಳು, ಬೆಳಕಿನಲ್ಲಿ ಇವಳು
ಬೆಂಗಡೆ ಹಬ್ಬಿದ ತೊಂಡೆಬಳ್ಳಿಯ ಕುಳಿರು.
ನೆರಳ ತಂಪು ಸುಖವೊ, ಬೆಳಕ ಹೊಳಪು ಚೆಲುವೊ?
ನಕ್ಕ ನಗೆಯಲ್ಲಿ ಇಣುಕಿದ್ದು ನಾಚಿಕೆಯ ಮುಳ್ಳೊ?
ಕಡ್ಡಿಪುಡಿ ತಿಂದು ಕಪ್ಪಗಿದ್ದರು ಹೊಳೆವ ಹಲ್ಲೊ?
ಚೋಮನ ಬೆಳ್ಳಿಯ ಹಲ ರೂಪಗಳೊ?
ಫ್ಯಾಶನ್ ಬಿಚ್ಚಮ್ಮಗಳ ಅಣಕಗಳೋ?

ಉರಿಬಿಸಿಲಲ್ಲಿ, ಹೂಟಿ ಮಾಡಿ ಸುಸ್ತಾಗಿ ಆಸರಿಗೆ ಕೂತ್ರೆ ಕೂಸೆ,
ನೀ ಯೆಂತ ಕಪ್ಪು ಡಬ್ಬಿ ಹಿಡಿದು ಬಣ್ಣದ ಚಿತ್ರ ತೆಗಿಯೂದು
ಅಂದು ನಕ್ಕವರ ನಗುವಲ್ಲಿ -
ವಿಷಾದ ಕಂಡಿತೆ - ನಿಮ್ಮದು ಕೆಂಪು ಹಾದಿ, ದಲಿತ ಚಳುವಳಿಯೂ ಇರಬಹುದು..
ರಸ್ಟಿಕ್ ಬ್ಯೂಟಿ ಅನಿಸಿತೆ - ಇಂಗ್ಲಿಷ್ ಕವಿತೆ ಓದಿ ಕನ್ನಡ ಬರೆವವರ ಬೀದಿ,
ಅಯ್ಯೋ ಇದೆಲ್ಲ ನೋಡಕ್ಕೆ ಸಮಯವೆಲ್ಲಿ ಅಂದಿರೇ - ಯಶಸ್ಸಿನ ಬೆನ್ನು ಹತ್ತಿದ ಬಿಸಿನೆಸ್, ಐಟಿ-ಬೀಟಿ ಮಂದಿ..
ಬದುಕಿನ ಬನಿ ಹನಿಯಾಗಿ ಹರಿಯಿತೆ-
ಒಲವು ಚೆಲುವು ಅಳಲು ಕೂಡಿ ನಕ್ಕ ನೂರು ನೋಟ ಕಂಡಿತೆ?
ಹಾಗಿದ್ದರೆ, ನೀವು ನೊಂದ ಹೃದಯದ ಹಾಡು ಕೇಳುತ ಜೊತೆಗೂ ಹಾಡಿ,
ವರ್ಗೀಕರಣವೆಲ್ಲ ನಮಗೇಕೆ, ರಾಜಕೀಯಕ್ಕೆ, ಮಾಧ್ಯಮಗಳಿಗೆ ಬಿಡಿ.

ಅವರನ್ನೇ ಕೇಳಿ, ನಕ್ಕು, ಹಿಂದೆ ಒರಸಿಕೊಳ್ಳುತ್ತಾ ಎದ್ದು ಹೋಗುತ್ತಾರೆ,
ಆಸರಿ ಕುಡಿದಾಯಿತು, ಕೆಲಸ ಮಾಡಲು ಬಿಡಿ...

Monday, 11 June, 2007

ಐದನೆಯ ಚಿತ್ರ
Alpaznaನಿರೀಕ್ಷೆ ಹೀಗಿದೆ...

ನಿರೀಕ್ಷೆ

ಬಂದೀತೆ ಹೊಸಬೆಳಕು
ತೊಳೆದೀತೆ ಹಳೆ ಕೊಳೆಯ?

ಮರಳೀತೆ ಉಸಿರು
ಅರಳೀತೆ ಹಸಿರು?

ಈಡೇರುವುದೇ ಆಸೆ?
ಇಲ್ಲಾ, ಬದುಕು ಬರಿ ಕನಸೆ?


Srikanth.K.S(ಶ್ರೀಕಾಂತ) ಕೆಲ ಕ್ಷಣಗಳಷ್ಟೇ ಉಳಿದಿವೆ ಎನ್ನುತ್ತಾರೆ...

ಬಾಳ ಸಂಜೆಯ ಸೂರ್ಯಾಸ್ತದಲಿ,
ಹಸುರೆಲೆಯುದುರಿ ಕಳೆಯಿತು ಮನ್ವಂತರ,
ಮತ್ತೆ ಜಲವನು ಕಂಡು ಹಿಗ್ಗಿಲ್ಲ, ನಿಟ್ಟುಸಿರೊಂದು ಜಾರುವುದು ಸುಮ್ಮನೆ,
ಮಿಂಚಿದ ಕಾಲ, ಉಳಿದಿರುವುದು ಕೆಲ ಕ್ಷಣಗಳಷ್ಟೇ...

ಸಿಂಧು Sindhu ಹೊಸ ನೋಟ ಕಾಣದೆ? ಕೇಳುತ್ತಾರೆ...

ಸಾವಿರಗಟ್ಟಳೆ ಮನೆಯಲ್ಲಿ ದೀಪ ಹೊತ್ತಿಸಬೇಕಿದೆ,
ತಂತ್ರಜ್ಞಾನದ ಕೈ ಹಿಡಿದು ದೇಶ ಮುನ್ನಡೆಯಬೇಕಿದೆ..,
ಹಲವರಿಗಾಗುವ ನೂರ್ಮಡಿ ಅನುಕೂಲಕ್ಕೆ
ಕೆಲವರು ಕಷ್ಟಗಳ ಹಲ್ಲುಕಚ್ಚಿ ಭರಿಸಬೇಕಿದೆಯಮ್ಮಾ.. ಎಂದಿರಿ.
ಮಕ್ಕಳ ಕೊರಳಿಗೆ ಯಾವತ್ತೂ ಕಿವಿಯಾದವಳಲ್ಲವೆ ನಾನು..


ಹರಿವ ನೀರು ಹಿನ್ನೀರಾಯಿತು,
ಜೀವಜಲದ ಸ್ಪರ್ಶದಿಂದ ಹಸಿರಾಗಿ ನಗುತ್ತಿದ್ದ ಕಾಡು-
ನಿಂತ ನೀರಿನ ಭಾರ ಹೊತ್ತು ಮುಳುಗಡೆಯಾಯಿತು.
ಅಮ್ಮ ಎಂದ ಮಕ್ಕಳ ಕೈಹಿಡಿದೆ ನಾನು,
ಮಾತು ಬಾರದ ಸಂತಾನದ ಹಸಿರು ಒಣಗಿ ಉರುವಲಾಯಿತು.

ಸಾವಿರಗಟ್ಟಲೆ ಮನೆಗಳ ಬೆಳಕಿನ ಮೂಲ-
ಹಲ್ಲು ಕಚ್ಚಿ ಒಣಗಿ ನಿಂತಿದೆ ನೋಡು;

ಗುಡಿ ಕಟ್ಟುವುದು ಬೇಡ ಮಗೂ,
ಕೃತಜ್ಞತೆಯಿಂದೊಮ್ಮೆ ತಲೆ ಬಾಗಿಸಬಾರದೆ?
ಮುಳುಗಿಸಿ ನಿಂತ ಹೊನಲೇ ಬಿಡದೆ ಜೊತೆ ಕೊಟ್ಟಿದ್ದಾಳೆ-
ಒಣಗಿ ಕೊರಡಾದ ಹಸಿರಿನ ದುಃಖ ಒರೆಸಲು!
ಬೆಳಕಿನಿಂದ ಕೋರೈಸಿದ ನಿನ್ನ ಕಣ್ಣಿಗೆ ಹೊಸ ನೋಟ ಕಾಣದೆ?!


ಶ್ಯಾಮಾ ಒಂಟಿ ಮರದ ಸ್ವಗತವನ್ನು ಹೀಗೆ ಹೇಳುತ್ತಾರೆ...

** ಒಂಟಿ ಮರದ ಸ್ವಗತ **

ಬಾಳ ಮುಸ್ಸಂಜೆಯಲ್ಲಿ ನಿಂತ ಒಂಟಿ ಮರ ನಾನು
ಹಸಿರೆಳೆಗಲುದುರಿ ಬರೀ ಒಣ ರೆಂಬೆ ಕೊಂಬೆಗಳೊಡೆಯ ನಾನು
ನನಸಾಗದ ಕನಸುಗಳನ್ನೆಲ್ಲ ಕಣ್ಣ ಮುಂದೆ ಹರವಿಕೊಂಡು,
ಸಂಜೆಗಣ್ಣಿನ ಹಿನ್ನೋಟದಲ್ಲಿ
ದಿನ ದೂಡುತ್ತಿರುವೆ ನಾನು
ನನ್ನ ಒಡನಾಡಿಗಳಿಲ್ಲ ನನ್ನೊಡನೆ, ಎಲ್ಲ ಕಥೆಯಾಗಿ ಹೋದರು,
ಯಾರದೋ ಮನೆಯ ದೀಪ ಬೆಳಗಲೆಂದು ತಾವು ಬಲಿಯಾಗಿ ಹೋದರು,
ಆ ಕಾಲದ ಹಸಿರು ವೈಭವ ಈಗ ಬರೀ ಕಥೆ, ನಾನೇ ಕಥೆಗಾರ
ನಾಳೆ ನಾನಿದ್ದರೂ ಇರದಿದ್ದರೂ,ಆ ಸೂರ್ಯನೆ ಎಲ್ಲದಕ್ಕೂ ಸಾಕ್ಷಿದಾರ,
ನಾಳೆ ನಾನಿರುವೆನೆಂಬ ಭರವಸೆ ಇಲ್ಲ ನನಗೆ,
ಆದರೂ ಮನದಲ್ಲಿನ್ನೂ ಆಸೆ ಬತ್ತಿಲ್ಲ ಕಣ್ಣೆದುರಿಗೆ ಹೊಳೆಯುವ ಕನಸು ಸತ್ತಿಲ್ಲ,
ಮತ್ತೊಮ್ಮೆ ಹಸಿರು ಚಿಗುರೊದೆಯುವುದು,
ಆ ಹಸಿರು ವೈಭವ ಮರುಕಳಿಸುವುದು

ಏಕೆಂದರೆ ಇಂದು ಸೂರ್ಯ ಮುಳುಗಿದರೇನಾಯಿತು
ಭರವಸೆಯಿದೆ ನನಗೆ
ನಾಳೆ ಮತ್ತೆ ಬಂದೇ ಬರುತ್ತಾನೆ ಸೂರ್ಯ
ಜೀವ ಕಳೆಯ ತುಂಬಲೆಂದು....


suptadeepti "ಬೇಕಾಗಿತ್ತು...." ಅನ್ನುತ್ತಾರೆ...

"ಬೇಕಾಗಿತ್ತು...."

ಬೇಕಾಗಿತ್ತು ಒಂದಿಷ್ಟೇ ಇಷ್ಟು
ನೀರು, ಗಾಳಿ, ಬೆಳಕು
ಕರಗುವಷ್ಟು ಕೊಟ್ಟೆಯಲ್ಲ
ಉಸಿರಾರುವವರೆಗೂ

ಯಾರಿಗೂ ಇಲ್ಲವೆನ್ನದೆ
ನೆರಳಾದೆ, ಮನೆಯಾದೆ
ಕರುಳು ನೆನೆಯುವಂತೆ
ನಿಂತಿದ್ದೇನೆ, ಖಾಲಿ ಮನ.

ದೇವರಾಜ್ಯದಲ್ಲಿ ತಾಳ್ಮೆಯಿದೆ
ಕತ್ತಲಿಲ್ಲ, ಸತ್ಯವಿದೆ
ಆವರಿಸುವ ನಿರ್ಲಿಪ್ತದಲ್ಲೂ
ಇನ್ನಾರದೋ ಬಾಳ್ವೆಯಿರಲಿ

ಬೇಕಾಗಿತ್ತು ಇನ್ನೊಂದೇ ಒಂದು
ದಿನ, ಘಂಟೆ, ನಿಮಿಷ
ನಗುವಿಗೆ ದನಿಯಾಗಲು
ಮಡಿಲ ಮಗುವಾಗಲು.


Satish 'ಸುತ್ಲೂ ಗಂಗೆ ತುಂಬ್ಕಂಡಿದ್ರೂ ಕಳೆಯೋದಿಲ್ಲ ಶಾಪ' ಎಂದು ಹಪಹಪಿಸುತ್ತಾರೆ....:-)

ಬರೀ ಖ್ಯಾತಿ ಬಂದೋಯ್ತು

ಒಬ್ನೇ ನಾನು ಸುಮ್ನೆ ನಿಂತಿದ್ದೇನೆ ಹೀಗೆ
ಭೂತ ಮೈಮೇಲ್ ಬಂದು ಬದುಕಿ ಸತ್ತೋರ್ ಹಾಗೆ
ಸುತ್ಲೂ ಗಂಗೆ ತುಂಬ್ಕಂಡಿದ್ರೂ ಕಳೆಯೋದಿಲ್ಲ ಶಾಪ
ಜೊತೇಲಿದ್ದೋರ್ನ್ ಕೇಳ್ಲೇ ಬೇಡಿ, ದೇವ್ರೇ ಗತಿ ಪಾಪ

ಎಲ್ಗೋ ನೀರು ಯಾರ್ಗೋ ಬೆಳೆ
ಬೆಟ್ಟಾ-ಗುಡ್ಡದ್ ಮಧ್ಯೆ ನಮ್ಮನ್ ಹೊತ್ಗಂಡ್ ಇಳೆ
ಪ್ರಾಣಿ-ಪಕ್ಷೀ ಒಂದ್ ಕಾಲ್ದಲ್ಲಿ ಆಡ್ಕೊಂಡಿದ್ವು ಇಲ್ಲಿ
ನೀರಿನ್ ಕೆಳಗೆ ಪಟ್ನಾ ಇದ್ರೂ ಖಾಲಿಯಾದ ಗಲ್ಲಿ

ಹರಿಯೋ ನೀರ್ಗೆ ಕಟ್ಟೇ ಕಟ್ಟೋದೇನೂ
ಹಿನ್ನೀರ್ಗೆ ಜನಾ ಹೆದರಿ ದಿನಾ ಸಾಯೋದಂದ್ರೇನು
ಹೊಟ್ಟೇ ತುಂಬೋ ಮಾತೂ ದೂರಾ ಉಳ್ದೋಯ್ತು
ಎಲ್ರ ಕಣ್ಗೂ ಹಸ್ರು ಕಂಡು ಬರೀ ಖ್ಯಾತಿ ಬಂದೋಯ್ತು

ಎಲ್ಲಾ ನೆನಪೂ ಕೂಡಿ-ಕಳೆದು ನಿಂತಿದ್ದೇನೆ ನಿತ್ಯಾ
ಮೋಟ್ ಮರ ಗಾಳಿಗ್ ಮಿಂಡಾ ಅನ್ನೋ ಮಾತು ಸತ್ಯಾ

Monday, 4 June, 2007

ನಾಲ್ಕನೆಯ ಚಿತ್ರ


ಈ ಚಿತ್ರ ಭಾಗವತರ ಸಂಚಿಯಿಂದ ಹೊರಬಂದಿದೆ...

ನಿಮ್ಮ ಕವನಗಳನ್ನು ಅಥವಾ ಬರಹಗಳನ್ನು ಕವನಗಳಿಗೆ / ಬರಹಗಳಿಗೆ ಮೀಸಲಾದ ಜಾಗದಲ್ಲಿ ಬರೆಯಿರಿ. ಆಮೇಲೆ ಅವೆಲ್ಲವನ್ನೂ ಅಲ್ಲಿಂದ ಇಲ್ಲಿಗೆ ಎತ್ತಿಕೊಳ್ಳಲಾಗುವುದು.

ಈ ಚಿತ್ರ ಸೃಷ್ಟಿಸಿದ ಭಾವ-ಬೆರಗು-ಬೆಡಗು ಇಲ್ಲಿದೆ...

ಸುಶ್ರುತ ದೊಡ್ಡೇರಿ ಚಿತ್ರವೇ ಕವನವಾದ ಹೊತ್ತು ಹೇಗಿತ್ತೆಂದು ಹೀಗೆ ವರ್ಣಿಸುತ್ತಾರೆ...

ಆಗತಾನೇ ಮಳೆ ಬಂದು ಹೋಗಿತ್ತು

ಭಾರವಾಹನಗಳಿಂದ ರಾತ್ರಿಯಿಡೀ ಮೈನೇವರಿಸಿಕೊಳ್ಳುವ ಕಪ್ಪು
ರಸ್ತೆ ಸ್ನಾನ ಮಾಡಿ ಸುಸ್ತಾರಿಸಿಕೊಳ್ಳುತ್ತಿತ್ತು;
ಬಿಸಿಯುಸಿರು ಬಿಡುತ್ತಿತ್ತು;
ಹಬೆಯಾಡುತ್ತಿತ್ತು

ಇಕ್ಕೆಲದ ಮರಗಳಿಂದ ನೀರಿನ್ನೂ ತೊಟ್ಟಿಕ್ಕುತ್ತಿತ್ತು
ಮಳೆ ನೀರ ಮುತ್ತಿಗೆ ಮಣ್ಣು ಕೆಂಪಾಗಿತ್ತು;
ಘಮ್ಮೆನ್ನುತ್ತಿತ್ತು;
ಗಾಳಿಗೆ ಮತ್ತೇರಿಸುತ್ತಿತ್ತು

ಅಲ್ಲಿ ಪ್ರಕೃತಿಯೇ ಚಿತ್ರವಾಗಿತ್ತು
ಮತ್ತು,
ಅದು ಚಿತ್ರವೇ ಕವನವಾದ ಹೊತ್ತು!!


ಶ್ಯಾಮಾ ವರ್ತಮಾನಕ್ಕೂ ಭೂತಕ್ಕೂ ಭವಿಷ್ಯಕ್ಕೂ ಸೇತುವೆ ಕಟ್ಟಿದ್ದಾರೆ...

**ಒಂದು**
ಆಗಷ್ಟೇ ಹೊಯ್ದು ನಿಂತ ಮಳೆಗೆ
ಒದ್ಡೆಯಾದ ಆ ನೆಲ
ಇಕ್ಕೆಲಗಳಲ್ಲಿ ಬಿದ್ದ ಆ ಎಲೆ ಹೂಗಳೊಡಗೂಡಿ
ಮಣ್ಣು ಸೂಸುತ್ತಿರುವ ಆ ಕಂಪು...
ಮುಗಿಲೆತ್ತರಕ್ಕೆ ಬೆಳೆದು ನಿಂತ ಆ ಮರಗಳು ಎಲೆಗಳ ಸಂದಿನಿಂದ
ಉದುರಿಸುತ್ತಿರುವ ಆ ಪುಟ್ಟ ಪುಟ್ಟ ಹನಿಗಳು
ಆಹಾ ಸ್ವರ್ಗವೆಂದರೆ ಇದೇ ಇರಬೇಕು..

**ಎರಡು**
ಮನವು ವರುಷಗಳಷ್ಟು ಹಿಂದೆ ಓಡಿ ಯೋಚಿಸುತ್ತಿದೆ
ಹಿಂದೊಮ್ಮೆ ಇಂಥದೆ ದಾರಿಯಲ್ಲಿ ಬೆನ್ನಿಗೊಂದು ಚೀಲ ಏರಿಸಿ
ಶಾಲೆಯಂಗಿ ತೊಟ್ಟು ಎತ್ತಿ ಕಟ್ಟಿದ ಆ ಎರಡು ಜಡೆಗಳನ್ನು ಕುಣಿಸುತ್ತಾ
ದಣಿವರಿಯದೇ ಓಡುತ್ತಿದ್ದೆ...
ಪಟ ಪಟನೆ ಮರವುದುರಿಸಿದ ಹನಿಗಳನ್ನು ಬೊಗಸೆಯಲ್ಲಿ ಹಿಡಿದು ಕುಣಿಯುತ್ತಿದ್ದೆ
ಈಗ ನಿಧಾನವಾಗಿ ಹೆಜ್ಜೆ ಮೇಲೆ ಹೆಜ್ಜೆ ಹಾಕುತ್ತಿದ್ದೇನೆ
ಓಡಬೇಕೆಂದರೂ ಓಡಲಾಗುತ್ತಿಲ್ಲ

** ಮೂರು **
ಮಳೆ ಬಿದ್ದು ಹೋದ ಮೇಲೆ ಬೀಸುವ ಆ ತಂಪು ಗಾಳಿಗೆ ಮುಖವೊಡ್ದಿ
ನಿಂತಿದ್ದೇನೆ.... ರಸ್ತೆಯನ್ನು ಕಣ್ಣು ಹಾಯುವ ವರೆಗೂ
ನೋಡಿದಾಗ, ಮನದಲ್ಲಿ ಒಂದು ಪ್ರಶ್ನೆ ಮೂಡಿತು
ಒಂದು ರಸ್ತೆಗೆ ಗೆರೆ ಎಳೆದು ಎರಡು ಭಾಗ ಮಾಡಿದ್ದಾರೆ ಯಾಕೋ?
ನಿನ್ನೊಡನೆಯೇ ಹೆಜ್ಜೆ ಹಾಕಬೇಕೆಂದುಕೊಂಡಿದ್ದ ನನಗೆ,
ನಂಗೊಂದು ದಾರಿ ನಿಂಗೊಂದು ದಾರಿ ಅಂತ ತಿಳಿ ಹೇಳುವುದಕ್ಕೋ?


ಮನಸ್ವಿನಿ ಹಳೆಯ ದಾರಿ ಮುಂದೆ ಸಿಕ್ಕೀತು ಅನ್ನುತ್ತಾರೆ...

ಎಲ್ಲೋ ಸಾಗಬೇಕಿದ್ದ ದಾರಿ
ಮತ್ತೆಲ್ಲೋ ತಿರುವ ತೋರಿ
ಹಳೆಯ ದಾರಿಯಿಂದ ಸರಿದು
ತಿರುವ ಸುತ್ತಿ ಮುಂದುವರಿದು
ಬಹು ದೂರ ಬಂದಾಗ
ಹಿಂದೆ ತಿರುಗಿ ನೋಡಿದಾಗ
ಹಳೆಯದೆಲ್ಲ ನೆನಪಾಗಿ
ಮನಸು ಮತ್ತೆ ಭಾರವಾಗೆ
ನಗುತಲೆ ಮುಂದುವರಿವೆ
ಹಳೆಯ ದಾರಿ ಮುಂದೆ
ಮತ್ತೆ ಸಿಕ್ಕೀತೆಂದು

ಸಿಂಧು Sindhu ’ಕಂಡ ಎಲ್ಲವನ್ನೂ ಹೇಳಲಾಗುವುದಿಲ್ಲ’ ಎನ್ನುತ್ತಾರೆ...

ಅಲ್ಲಿ ಫ್ರೇಮಿನೊಳಗೆ ಮಳೆಗೆ ತೋಯ್ದ ಹಾದಿ,
ಇಲ್ಲಿ ಫ್ರೇಮಿನಾಚೆ ಎಂದೂ ಇಂಕಿನಿಂದ ನೆನೆಯದ
ಈ-ಅಕ್ಷರಗಳ ಶರಧಿ.

ಕಂಡ ಚಿತ್ರವನ್ನೇ ಕಾಣಲಾಗುವುದಿಲ್ಲ,
ವಿವರಿಸುವುದು ಹೇಗೆ?
ಅಲ್ಲಿ ನೆನೆದ ಮರಗಿಡಗಳ ಸಾಲಿನ
ತಂಪನ್ನ ಇಲ್ಲಿ ಬೆಂದ ಮನಕ್ಕೆ ಹಾಯಿಸುವುದು ಹೇಗೆ?

ನಡೆಸಿಕೊಂಡು, ಓಡಿಸಿಕೊಂಡು, ಟಾರಿಸಿಕೊಂಡು, ಬಣ್ಣದ ಗೆರೆ ಹಚ್ಚಿಸಿಕೊಂಡು,
ಸುಸ್ತಾದ ದಾರಿ, ಮಲಗಿದೆ ಮಳೆಗೆ ಮೈಯೊಡ್ಡಿ,
ಮಾತು, ಕತೆ, ಕವಿತೆ ಯಾಕೆ ಮಾಡಬೇಕು ಅಡ್ಡಿ..

ಮಳೆ,ಬರಿಯ ದಾರಿ,ಒದ್ದೆ,ಶುಷ್ಕತೆ, ಬೆಳಕು-ನೆರಳು,
ಬಂದ ದಾರಿ, ಹೋಗಬೇಕಿರುವ ದೂರ..
ಯಾವುದೂಂತ ಬರೆಯುವುದು..?!

ಕಣ್ಣ ಪ್ರತಿಫಲನ, ಕಂಡ ವಸ್ತುವಿಗಿಂತ ನೂರು ಪಟ್ಟು,
ಅದಕ್ಕೇ ಕಂಡ ಚಿತ್ರವನ್ನಷ್ಟೇ ಕಾಣಲಾಗುವುದಿಲ್ಲ..
ಹಾಗೇ, ಕಂಡ ಎಲ್ಲವನ್ನೂ ಹೇಳಲಾಗುವುದಿಲ್ಲ.


Satish ನುಣ್ಣಗಿನ ರಸ್ತೆ ತಮಗೆ ಹೊಸದೆನ್ನುತ್ತಾರೆ...

ನುಣ್ಣಗಿನ ರಸ್ತೆ

ಇಷ್ಟು ನುಣ್ಣಗಿನ ರಸ್ತೆ, ನಮಗದು ಹೊಸದು
ನಮ್ಮ ಊರುಗಳಲ್ಲಿ ಇಲ್ಲಿನ ಹಾಗಿರದು
ಪ್ರಗತಿಪರ ದೇಶಗಳಲ್ಲಿನ ನಾಯಕರ ನೆನಸುವ ಹಾಗೆ
ನಮ್ಮಲ್ಲಿಲ್ಲದಿರುವ ಈ ಮರಗಳ ಸೋಗೆ!

ನಮ್ಮಲ್ಲಿನ ರಸ್ತೆಗಳು ಬಣ್ಣ ಬಳಿದುಕೊಳುವುದಿಲ್ಲ
ಹಾಗಾಗಿ ತಮ್ಮ ಬಣ್ಣವನೆಂದೂ ಕಳೆದುಕೊಳುವುದಿಲ್ಲ
ಒಮ್ಮೊಮ್ಮೆ ಆ ಕ್ಷಣಕ್ಕೆ ಬಣ್ಣ ಬಳಿದುಕೊಂಡೂ
ಹೆಚ್ಚುತನ ಮೆರೆದಿವೆ ಬಿಳಿ-ಹಳದಿ-ಕಪ್ಪುಗಳ ಕಂಡು!

ಹಾದಿಯನ್ನು ಸವೆಸಬಲ್ಲ ಬದಿಯ ಆಕರ್ಷಣೆ
ಆ ಕ್ಷಣಕ್ಕೆ ಹಾಕಬಹುದಾದ ತೋರ್ ಮಣೆ
ಎಲ್ಲಿ ಒಣಗಿದ ಎಲೆ-ಹುಲ್ಲು ಮಣ್ಣಿಗೆ ವ್ಯತ್ಯಾಸವಿಲ್ಲವೋ
ಅಲ್ಲಿ ಇನ್ಯಾವ ಕ್ರಾಂತಿ ಅದು ಹೇಗೆ ಸಾಧ್ಯವೋ!

ಈ ಎತ್ತರಕೆ ಮುಸುಕಿದ ಮೋಡವನು ಇಬ್ಬನಿಯೆಂದು ಕರೆದು
ಇನ್ನೆಷ್ಟೋ ಹೊತ್ತು ಬಿಟ್ಟು ಹುಟ್ಟಬಹುದಾದ ಕಿರಣಗಳ ಜರೆದು!