Monday, 30 June, 2008

ಚಿತ್ರ ೬೦ಚಿತ್ರ ೬೦ ಕ್ಕೆ ತಿರುಕ,ಸತೀಶ್, ವಿಜಯ ಮತ್ತು ಕುಮಾರ ಸ್ವಾಮಿ ಕಡಾಕೊಳ್ಳ ಅವರು ಕವನಗಳನ್ನ ಬರೆದಿದ್ದಾರೆ.

ವಿಜಯ ಅವರ ಚುಟುಕು ಸಾಲುಗಳು.

ದೂಡದಿರಲಿ ಮುಗಿಲ ಬೀಸಿ ಗಾಳಿ
ಬಾರದಿರಲಿ ಬಿಸಿಲು ಮೋಡ ಸೀಳಿ
ನೀರಾಗಿ ಸುರಿಯಲಿ ಕಪ್ಪಿಟ್ಟ ಬಾನು
ಮನದ ಮುಗಿಲಾಗಲಿ ಹಗುರ ತಾನು.

ಕುಮಾರ ಸ್ವಾಮಿ ಕಡಾಕೊಳ್ಳ ಅವರ ಕವನಗಳು -
ಕರೆ

ಬಾನು ತೇಜನು
ಸುತ್ತಿ ನಭವನು
ನಿತ್ಯ ಕಾಯಕ
ಮಾಡಿ ನಡೆದಿಹನು

ಬೆಳಗಿ ಇಳೆಯನು
ಕಿರಣ ಕುಂಜದಿ
ಕತ್ತೆಲೆಯ ಗೂಡಿನು
ಸೇರುವ ನಿರತನು

ಹೊನ್ನ ರಶ್ಮಿಯ
ಗೋಧೂಳಿ ಸಮಯ
ಕಾರ್ಮೋಡ ಮುತ್ತಿ
ಹನಿಯಾಗುವ ಕ್ಷಣಗಣನೆ

ಸುಳಿಯಾಗಿ ಗಾಳಿ
ಬೋರೆಂದು ಬೀಸಿ
ತರುಲತೆ ಬಾಗಿತೂಗಿ
ವನವೆಲ್ಲ ತಲ್ಲಣ

ಸಿರಿಯಲ್ಲಿ ಧರೆಯು
ಉಸಿರಾಗಿ ಹಸುರು
ಬೀಗಿದೆ ಹರ್ಷದಿ
ಸುರಿವ ಮಳೆಯಲ್ಲಿ

ಪ್ರಕೃತಿಯ ಮೈಸಿರಿ
ಮನೋಹರ ನೋಟ
ನೀನೋಡಲು ಬಾಗೆಳೆಯ
ಗಿರಿಶಿಕರದ ತುದಿಗೆ

** ಕುಕೂಊ...

ಕವಿಸಮಯ

ಆಕಾಶ ಮುತ್ತಿರಲು
ಮೋಡಗಳ ದಂಡು
ರವಿಯು ಮರೆಯಲ್ಲಿ
ಕೆಂಪಾಗಿ ಕಾಣಲು
ಬೆಟ್ಟದ ತುದಿಯಲ್ಲಿ
ಅವಳು ಬರುವಳೆಂದು
ನಾನಿಂತು ಕಾದಿರಲು
ಕಾಣುವುದೆಲ್ಲ ಅವಳ
ರೂಪದಂತೆ ತಳವೆಳಗು

ಮೋಡಕ್ಕೆ ಹನಿಯಾಗಿ
ಸುರಿಯುವ ತವಕ
ಹನಿಯು ನದಿಯಾಗಿ
ಹರಿಯುವ ನೆನಹು
ನದಿಯು ಸಾಗರವನು
ಸೇರುವ ಕನಸು
ಬೆಳಕು ಬಣ್ಣವಾಗಿ
ಬಾನಲ್ಲಿ ಬಾಗಿಬಿಲ್ಲಾಗಿ
ನನ್ನವಳ ಮೊಗವನ್ನು
ತೋರುವ ಸಿರಿಯು

ಸಂಜೆ ಸಂಭ್ರದಲಿ
ಸೃಷ್ಠಿ ನಾಚಿರಲು
ತುತ್ತ ತುದಿಯಲ್ಲಿ
ನಾನಿಂತು ನೋಡಲು
ಅವಳ ನೆನಪೊಂದು
ಮನದಾಗಸದಲ್ಲಿ ಮೂಡಲು
ಮಾತು ಮೌನವಾಗಿ
ಕೊರಳು ಮೂಕವಾಗಲು
ನನ್ನೆದಯ ಕವಿಭಾವ
ಕಾವ್ಯವಾಗಿ ಚಿಮ್ಮಲು
ಬರೆದೆ ನಾನಾಗ
ಅವಳ ಮೌನರಾಗ

**ಕುಕೂಊ...

ತಿರುಕ
ಅವರ ಕವನ -
ಯಾರೀತ?

ಎಂದೂ ಬರಡಾಗದ
ವಸುಂಧರೆಯ ಕಂದ
ನಂಬಿದ
ಆ ದೇವರನೆಂದೂ ಪೊರೆವ
ಪೋರ
ಅಣುವ ನೋಡಿ
ಚರಿತೆಯ ಮೂಡಿಸಬಲ್ಲ
ಚತುರ
ತಾಯ ಭಾಷೆಯೇ ಸರ್ವಸ್ವ
ವೆಂದು ತಿಳಿದ, ತಿಳಿಸುವ
ಕುವರ
ಒಮ್ಮೆ ಕಣ್ಣಲಿ ಕಣ್ಣಿಡಲು
ಮನ ಗೆಲುವ
ಪೋರ

ತನ್ನ ಕೋಣೆಯ ಕತ್ತಲಲ್ಲಿಟ್ಟು
ಜಗಕ್ಕೆಲ್ಲಾ ಬೆಳಕನೀಯುವ
ದೀಪ
ಪಾಪ
ತಾನುರಿದು
ಶಕ್ತಿಯನೆಲ್ಲವನೂ ಕಳೆದು
ನಂಬಿದ ನಂಬದವರಿಗೆಲ್ಲರಿಗೂ
ಚೇತನವೀಯುವ ಪುಟ್ಟ ಪಾಪ
ಬೆಳಕಿನ ಸ್ವರೂಪ
ಶಕ್ತಿಯ ಜನಕ

ಉಜ್ಜಿದಷ್ಟೂ ಹೊಳಪನೀವ
ಅನರ್ಘ್ಯ ರತ್ನ
ತಾನು ಅನ್ನ ಕಾಣ
ದಿದ್ದರೂ ಪರವಾಗಿಲ್ಲವೆನ್ನುವ
ಜಗಕೆ ಅನ್ನವೀಯುವ
ಕಾಯಕವ ತೊರೆಯದ
ಅನ್ನದಾತ
ನಂಬಿದ ಭೂತಾಯಿಯ ಪೊರೆದು, ಹೊರೆದು
ಮೆರೆಸುವ

ಯಾರೀತ?

ಸತೀಶ್ ಅವರ ಕವನ -
ಮುಸುಗುಗಟ್ಟಿದ ಬಾನದಾರಿ

ಮೋಡದ ಮರೆಯಲಿ ಸೂರ್ಯ ಜಾರಿದಂತೆ
ಅದೆಲ್ಲಿಂದಲೋ ಕಾರ್ಮೋಡಗಳು ಬಂದವಲ್ಲ
ಈಗಾಗಲೇ ಕಿಚ್ಚೆದ್ದು ಬೆಳ್ಳಗೆ ಹೊಳೆದ ಜಗಕೆ
ಮಳೆಯ ಸೂಸುವ ನೆಪದೆ ಕಪ್ಪು ಮುಸುಕಿತಲ್ಲ.

ಅದೇನೋ ಬುಗುರಿಯ ಹಾಗೆ ತಿರುಗೋ ಜಗವಂತೆ
ಇಂದಿಲ್ಲಿ ಕಪ್ಪು ಮತ್ತೆ ಇನ್ನೆಲ್ಲೋ ಬಿಳುಪು ಸಹಜ
ಇನ್ನೇನು ಇಲ್ಲಿ ಬಿದ್ದೇ ಹೋದ ಸೂರ್ಯ ಎನ್ನುವಾಗ
ಇನ್ಯಾವುದೋ ನೆಲೆಯಲ್ಲಿ ಆಗಷ್ಟೆ ಉದಯಿಸುವ ನಿಜ.

ನಿನ್ನೆ ಶಾಂತಿ ಇಂದು ಆರ್ಭಟ ಹಲವು ರೀತಿನೀತಿ
ಅಬ್ಬರವ ತೋರೋ ಮುಸುಗುಗಟ್ಟಿದ ಬಾನದಾರಿ
ಹಳೆಯದನೆಲ್ಲವ ಬೇಡವೆಂದರೂ ಹೊತ್ತು ತಿರುಗೋ
ಈ ಸಮಯದ ತತ್ವವ ನೆತ್ತಿಯ ಮೇಲಿಟ್ಟ ಬಾಳದಾರಿ.

ಬರೀ ತಿರುಗುತಿರುವ ಸೂರ್ಯ ಮಂಡಲಕೋ ಹಲವು ಬಗೆ
ನಾಳೆ ಎನ್ನುವ ನಮ್ಮದೋ ಹೊಟ್ಟೆಯಲಿ ಹೂತಿಟ್ಟ ನಗೆ.

Tuesday, 24 June, 2008

ಚಿತ್ರ ೫೯
ಚಿತ್ರ ೫೯ ಕ್ಕೆ ತಿರುಕ,ಸತೀಶ್ ಮತ್ತು ಕುಮಾರ ಸ್ವಾಮಿ ಕಡಾಕೊಳ್ಳ ಅವರು ಕವನಗಳನ್ನ ಬರೆದಿದ್ದಾರೆ.

ಕುಮಾರ ಸ್ವಾಮಿ ಕಡಾಕೊಳ್ಳ ಅವರ ಕವನ -
ಎತ್ತಿನಾ ಗಾಡಿ

ನಮ್ಮ ತಾತ ಮಾಡಿಸಿದ್ದು
ಇದು ಗುಂಬದ ಚಕ್ಕಡಿ|

ಚಂದಾಗಿ ಉರುಳುತೈತೆ
ಯಾರು ಇದಕೆ ಸಾಟಿ|

ಬಿತ್ತಲು ಬೀಜ ಹೊತ್ತು ಬಂದೈತೆ
ನಮ್ಮ ಎತ್ತಿನಾ ಗಾಡಿ|

ನಿನ್ನೆ ತಾನೆ ಸುರಿದೈತೆ
ವೈನಾಗಿ ರೋಹಿಣಿ ಮಳೆ|

ಎತ್ತು ಹೆಗಲು ಊಡ್ಯಾವೆ
ಕೂರಿಗೆಯ ನೊಗಕೆ|

ಹೆಜ್ಜೆ ಇಡುತ ನಡೆದಾವೆ
ಸಾಲುಗಳ ನಡುವೆ|

ಗಾಳಿ ಸುಳಿದಾಡೈತೆ
ತಿರುಗಿ ಸುಳಿಸುಳಿಯಾಗಿ|

ಬತ್ತದುಲ್ಲು ಅರಡ್ಯಾತೆ
ಅತ್ತಿತ್ತ ಎತ್ಯತ್ತಲಾಗೆ|

ನೀಲಿ ಆಗಸದಾಗೆ ತೇಲಾವೆ
ನೋಡು ಬಿಳಿ ಬಿಳಿ ಮೋಡ|

ಇಂದು ಸಂಜೆ ಬರಬೌದು
ನಿನ್ನೆಯಂತೆ ಜೋರು ಮಳೆ|

ಬದುವಿನಾಗೆ ಬೆಳೆದಾವೆ
ಆಲ ಹಲಸು ಹುಣಿಸೆ ಮರ|

ಹಸುರಿನಲ್ಲಿ ತುಂಬಿ ಬೀಗ್ಯಾವೆ
ಎಂಷ್ಟು ಚಂದ ನೋಡ|

ಬಾರೋ ಗೆಳೆಯ ನೋಡಿ ಬರುವ
ನಮ್ಮ ಹಳ್ಳಿಯ ಸೊಬಗ|

ನಾವು ಕುಂತು ಓಡಿಸೋಣ
ಪುಳಕದಿ ನಮ್ಮ ಎತ್ತಿನ ಗಾಡೀ|

**ಕುಕೂಊ...


ತಿರುಕ
ಅವರ ಕವನ -

ಮೊಗವೆತ್ತಿ ನೀ ಹೇಳೇ
ನೊಗವೆತ್ತಿ ನಡೆದುದು ಸಾಕಾಯಿತೇ!
ಹಿಡಿದು ಬಂದ ಹಾದಿಯ ಒಮ್ಮೆ ಅವಲೋಕಿಸು
ಹರಿದ ಪಾದಗಳ ಚರ್ಮವೊಮ್ಮೆ ನಿರುಕಿಸು

ಹರಿದುದು ಮತ್ತೆ ಸೇರುವುದು
ಕಳೆದುದಕೆ ಮತ್ತೆ ಕೂಡುವುದು
ಇದುವೇ ಜಗದ ನಿಯಮ
ಜೀವನ ಪರಿಯ ತಿಳಿ ಹೇಳುವ ಆಯಾಮ

ಬೆನ್ನ ಮೇಲಿನ್ನೂ ಹೊರೆ ಇರುವುದು
ಬಗಲಿನ ಹಯನು ಜೀವ ಹೊರೆವುದು
ಕಾಯಕವಿನ್ನೂ ಕಾಯುತಿಹುದು
ಅರೆಕ್ಷಣದ ಬಳಲಿಕೆ ಆರುತಿಹುದು

ಏಳು ಏಳಿನ್ನು, ನಡೆ ನಡೆ
ಕಟ್ಟು ಆ ಹೆಡೆಮುಡೆ
ಸಂಸಾರದ ಗಾಡಿಯ ಎಳೆಯುವಾ
ದಿಗಂತಕೆ ಕೊನೆಯ ತೋರುವಾ


ಸತೀಶ್
ಅವರ ಕವನ -
ಹಳಿ ಕಟ್ಟಿದ ಗಾಲಿ

ನಿಂತಿರುವ ಗಾಡಿ ಚಲನೆಯನೆ ತೀಡಿ
ನೊಗಕಡ್ಡಲಾಗಿ ಮಲಗಿ ದೊಡ್ಡ ಕಂಬ
ಅಲ್ಲಲ್ಲಿ ಚೆದುರಿ ಹೊಡೆ ಹಾರಿ ಮೋಡ
ಮುಕ ಹಾರಿ ಕುಂತಿತ್ತು ಚಂದ್ರ ಬಿಂಬ.

ನೊಗ ಕಟ್ಟಿ ಎಳೆದು ಮಿಣಿ ಕಣ್ಣಿ ಮೀಟಿ
ಒಣ ನೆಲವು ಮೆಂದ ಹುಲ್ಲ ಹರಿವು
ಚೆದುರಿದಾ ಹುಲ್ಲು ಹರಡಿದಾ ನೆರಳು
ಅಗೆದಂತೆ ಮಣ್ಣಿನ ಬಣ್ಣ ಅರಿವು.

ಇದ್ದಾರೆ ಬಹವು ಎರೆಡೆರಡು ಗಾಲಿ
ಒಡನೆ ಸಮತೂಕ ಸಂಸಾರ ನೌಕೆ
ಹಳಿ ಕಟ್ಟಿ ಸುತ್ತ ಕೋಲುಗಳ ಪಾತ್ರ
ಉರಿ ಬಿಸಿಲಿನಲಿ ಹಿಂಗದಾ ಬಯಕೆ.

ಇತ್ತ ಎತ್ತು ಇಲ್ಲ ಅತ್ತ ಗೊತ್ತೇ ಇಲ್ಲ
ನಿಂತು ಹಾಡುವರ ತತ್ವ ಸಮವೋ
ಅರೆ ಸುಟ್ಟ ಸೌದೆ ಬರೆ ಕಟ್ಟ ಕಾಯ್ದೆ
ಒಳಗೆ ಏನಿಹುದು ಬಾಹ್ಯತಮವೋ.

Friday, 13 June, 2008

ಚಿತ್ರ ೫೮ಚಿತ್ರ ೫೮ ಕ್ಕೆ ತಿರುಕ ಮತ್ತು ಸತೀಶ್ ಅವರು ಕವನಗಳನ್ನ ಬರೆದಿದ್ದಾರೆ.

ತಿರುಕ ಅವರ ಕವನ -

ಪಾಣಿಗ್ರಹಣ

ಗೃಭ್ಣಾಮಿ ತೇ ಸೌಭಗತ್ಯಾಯ ಹಸ್ತಂ ಮಯಾ ಪತ್ಯಾ ಜರದಷ್ಟಿರ್ಯತಾ ಸಃ|
ಭಗೋ ಅರ್ಯಮಾ ಸವಿತಾ ಪುರಂಧಿರ್ಮಹ್ಯಂ ತ್ವಾದುರ್ಗಾರ್ಹಪತ್ಯಾಯ ದೇವಾಃ||
ಗೃಭ್ಣಾಮಿ ತೇ ಸೌಭಗತ್ಯಾಯ ಹಸ್ತಂ ಮಯಾ ಪತ್ಯಾ ಜರದಷ್ಟಿರ್ಯತಾ ಸಃ|
ಭಗೋ ಅರ್ಯಮಾ ಸವಿತಾ ಪುರಂಧಿರ್ಮಹ್ಯಂ ತ್ವಾದುರ್ಗಾರ್ಹಪತ್ಯಾಯ ದೇವಾಃ||

ಋಗ್ವೇದ ಸಂಹಿತಾ 10.85.36


ಆಹಾಆ ನನ್ಮದ್ವೆಯಂತೆ| ಆಹಾಆ ನನ್ಮದ್ವೆಯಂತೆ ...

ಹೆಜ್ಜೆಯ ಗುರುತ ನೀ ಛಾಪಿಸುತಿರೆ
ಅದರೊಳು ಎನ್ನ ಹೆಜ್ಜೆ ಇಟ್ಟು
ಹಿಂದೆ ಹಿಂದೆ ಬರುವೆ ನಾ

ನೂರ್ಕಾಲ ಜೊತೆ ಜೊತೆಯಾಗಿ ಬಾಳುವ
ಜೋಡಿ ಬೇರ್ಪಡುವುದು ಬೇಡ ಎಂದು ಬೇಡುವ
ಮುಕ್ಕೋಟಿ ದೇವತೆಗಳ ಕರುಣೆಯ ಕೋರುವ
ಸಂಸಾರ ಸಾಗರದಲಿ ಜೊತೆಜೊತೆಯಾಗಿ ಈಸುವಾ

ಹತ್ತು ಹತ್ತು ಪವನು ಬಳೆಗಳು
ತೊಡಿಸಿಹೆ
ಆಗಲಿ ಅದು ಎನಗೆ ಕೈಕೋಳ
ನನ್ನಲಿಯ ಕೋಳ ನಿನ್ನ ಸುಪರ್ದಿಯಲಿ
ನಿನ್ನಲಿಹ ಕೋಳ ನನ್ನ ಸುಪರ್ದಿಯಲಾಗಲಿ
ಅದರ ಕೀಲಿ ಕೈ ಕೈಗೆ ಸಿಗದಂತಿರಲಿ


ನಕಲೀ ಶಶಿರೇಖನಾಗಿ ದುರ್ಯೋಧನ
ಪುತ್ರ ಲಕ್ಷ್ಮಣಕುಮಾರನ ಲೇವಡಿಪಡಿಸಿದ
ಅಭಿಮನ್ಯು ವಿವಾಹಕೆ ಸಹಾಯಿಸಿದ
ಕೈ ಹಿಂಡುವ ಆ ಚೇಷ್ಟೆಯ ಮಾಡದಿರು ವೀರ
ನೀ ಎಂದಿಗೂ ನನ್ನ ಜೊತೆಗಾರ


ಸತೀಶ್ ಅವರ ಕವನ -
ಇಂದಿನ ಜೋಡಿಯ ಸವಾಲುಗಳು ಹಲವು

ಇಂದಿನ ಜೋಡಿಯ ಸವಾಲುಗಳು ಹಲವು
ನೊಗವನು ಕಟ್ಟಿ ಒಟ್ಟಿಗೆಳೆದರಷ್ಟು ಸಾಲದು
ಜೀವನ ಪೂರ್ತಿ ಬಿಗಿ ಜೋಡಿಯ ಬದುಕನು
ಎದುರಿಸಿ ಮುಂದೆ ಏನೇ ಬರಲಿ ಆದದ್ದು.

ಈ ಬಂಧಕೆ ಯಾವುದೇ ದೃಷ್ಟಿ ತಾಗದಿರಲಿ
ಸಂಸಾರದಲಿ ಅನ್ಯೋನ್ಯತೆ ಬಲು ಮುಖ್ಯ
ಏನೇ ಏಳು ಬೀಳು ಬಂದರೂ ಎದುರಿಸುತಿರಲಿ
ಒಬ್ಬರಿಗೊಬ್ಬರು ಅರಿತು ಬಾಳುವ ಸಖ್ಯ.

ಹೊಸತು ಹಳೆಯದರ ನಡುವೆ ಬೆರೆತು ಬಾಳುವ
ಜೋಡಿಗೋ ಹಲವು ಅವಿನಾಭಾವ ಸಂಬಂಧಗಳು
ಇಬ್ಬದಿಯ ನೆಂಟರು ಇಷ್ಟರು ಮೂಗು ತೋರಿಸದಿರಲಿ
ಇನ್ನೂ ಬೆಳೆದು ಬಾಳಬೇಕು ಮೊಳೆತ ಚಿಗುರುಗಳು.

ಬಿಳುಪಿನ ಬೆನ್ನಲೆ ಕಪ್ಪಿರೊ ಹಾಗೆ ಮುಪ್ಪಿನ ಮಾತು
ನೋಟಕೆ ಹೀಗೆ ಬೆರೆತು ಬಾಳುವುದಾಗಲಿ ದಿನಮಂತ್ರ
ಅಲ್ಲಲ್ಲಿ ಕಷ್ಟಗಳು ಬರುವುದು ಸಹಜವೆನ್ನುವುದಾದರೆ
ಅವಕೆ ಒಡನೆಯೇ ಹುಟ್ಟಲಿ ಎದುರಿಸೋ ಜಯತಂತ್ರ.

Monday, 9 June, 2008

ಚಿತ್ರ ೫೭ಚಿತ್ರ ೫೭ ಕ್ಕೆ ಟೀನಾ, ತವಿಶ್ರೀ ,ಸತೀಶ್ ಮತ್ತು ಕುಮಾರ ಸ್ವಾಮಿ ಕಡಾಕೊಳ್ಳ ಅವರು ಕವನಗಳನ್ನ ಬರೆದಿದ್ದಾರೆ.

ಟೀನಾ ಅವರ ಕವನ -
ಬೆಳಕು ಮುಗಿವ ಮುನ್ನ
.

ಇಲ್ಲಿ ನಾನು ಪುಸ್ತಕ ದೀಪ
ಜತೆಯಾಗಿ
ಕತ್ತಲೆಯ ಅನುಭೂತಿ
ಇನ್ನೇನು ಮುಗಿದೇಹೋಯಿತು ಎಣ್ಣೆ
ಅಕ್ಷರ ನುಂಗುವ
ಕಣ್ಣ ನೋಟ
ಕಾಣದ್ದ ಕಂಡುಕೊಂಡೇನೆ ನಾನು
ಎಂದಾದರು?
ಮುಗಿದು ಹೋಗಬಹುದು
ಪುಟ್ಟ ಹುಳಗಳ ಭರಾಟೆ
ಅಮ್ಮ ಎದ್ದು
ನಿದ್ದೆಯಲೆ ಮುದ್ದಾಗಿ
'ಎಣ್ಣೆ ತುಂಬಿಸಲೆ ಮಗು?
ಮಂದವಾಗಿದೆ ಬೆಳಕು
ಕಣ್ಣಿಗೆ ಪೆಟ್ಟು
ಕಾಫಿ ಬೇಕೆ?'
ಅಂದಂತೆ
ಅನ್ನಿಸಿ
ನಾನು ನೋಡುವೆ
ಬೆನ್ನಹುರಿಯಲ್ಲೇಳುವ
ನೋವ ಅದುಮಿ
ಆಕಳಿಸಿ
ಇದೆಲ್ಲವ ಒಳಗಿಳಿಸಬೇಕು
ಜೋಪಾನವಾಗಿ
ದೀಪದಲಿ
ಬೆಳಕು ಮುಗಿವ ಮುನ್ನ.


ತವಿಶ್ರೀ ಅವರ ಕವನ -

ಚಂಗನೆ ನೆಗೆಯುವ
ಮೃಗ, ಮನೆ ಮನಗಳ ಹಿಗ್ಗಿಸುವ
ಕಸ್ತೂರಿ
ಎನಗೆ ತಿಳಿದಿಹುದಿದೊಂದರದೇ ಅಕ್ಕರಗಳು
ಕನ್ನಡ ಎಂಬ ಕಸ್ತೂರಿ ಆಕರಗಳು
ಕಣ್ಮುಚ್ಚಿಯೂ ಓದಬಲ್ಲೆ
ಆ ಪದಗಳ
ಮುದ್ರಿಸಿರದ - ಮನಗಳು ಮೂಡಿಸುವ
ಆ ಮಾತುಗಳ

ಆದರೇನು!
ಪರೀಕ್ಷೆಯ ಎದುರಿಸಲು
ಅಮ್ಮನ ಕೆಂಗಣ್ಣ ತಂಪಾಗಿಸಲು
ಹಿಡಿಯಲೇಬೇಕು ಹೊತ್ತಿಗೆಯ
ನೆಡಲೇಬೇಕು ದೃಷ್ಟಿಯ
ಅಕ್ಷರಗಳ ಮೇಲೆ
ಓಡಿಸಲೇಬೇಕು ಪುಟಗಳ
ನನಗೇ ಮೋಸಿಸುವೆಯಾ
ಬೆಳಕೆಂಬ ರವಿಯ ಬಂಟ

ಹಿಗ್ಗಬೇಡ!
ನೀ ನೇಸರನ ಬಂಟನೆಂದು
ತಿಳಿಯದೇ ನಿನ ಶಕ್ತಿಯ
ನಾ ತಿಳಿಯನೇ ನಿನ್ನ

ಎತ್ತಲೋ ನೋಡುತಿಹ
ಎನಗೆ ಒಂದಗುಳು
ಬೆಳಕ ನೀಡದವ
ನೀ ನಿಷ್ಕರುಣಿ
ಕತ್ತಲಿಗ್ಯಾಕೆ ಬೇಕಿಹುದು
ನಿರುಪಯೋಗಿ ನಿನ್ನ ಕರುಣೆ

ತಿಳಿಯದೇ ನಾನೆಲ್ಲಿ
ನೋಡುತಿಹೆ
ಸಹಾಯಿಸಬಾರದೇ
ಎನ ಕಂಗಳಿಗೆ ದೃಷ್ಟಿಯ ನೀಡಲು
ಎತ್ತಲೋ ನೋಡುವ ನಿನಗಿರಲಿ
ಎನ ಬಹಿಷ್ಕಾರ
ಇಗೋ ಮುಚ್ಚುವೆ ಪುಸ್ತಕವ
ಹೊದೆಯುವೆ ಚಾದರವ
ಕಾಣುವೆ ಹಗಲು ಕಾಣದ ಕನಸ :P

ಸತೀಶ್ ಅವರ ಕವನ -
ಬೆಳಕಿನ ನಂಟು ಕತ್ತಲ ಗಂಟು.

ಅಂದು ಬ್ರಾಹ್ಮೀ ಮಹೂರ್ತದೆ ಎದ್ದು
ಆಗಾಗ್ಗೆ ಅಲ್ಲಲ್ಲಿ ತೂಕಡಿಸಿ ಬಿದ್ದು
ಹೊತ್ತಿಗೆಯ ಭಾರವನು ತಾ ಹೊತ್ತು
ಓದಿದ್ದೆಲ್ಲವು ತಲೆಗೆ ಹತ್ತದೆ ಬೇಸತ್ತು.

ಬುದ್ದಿವಂತರೊಳಗೆ ದಡ್ಡ ತಾನಾಗಿ
ದಡ್ಡರೊಳಗೆ ತನ್ನ ದಡ್ಡತನವ ನೀಗಿ
ಏನೋ ಹೇಳಿ ಇನ್ನೇನನ್ನೋ ಮಾಡಿ
ಪುಸ್ತಕದ ಬದನೆಕಾಯಿ ಪಲ್ಯದಿ ಬಾಡಿ.

ಓದಿ ಕಡಿದು ಕಟ್ಟಿ ಹಾಕಿದ ಸಮಯವೇ
ಇತಿಹಾಸ ಮರುಕಳಿಸುತಲೇ ಇಲ್ಲವೇ
ಮೈ ಮುರಿದು ಕೆಲಸ ಮಾಡುವ ಬದಲು
ಪುಸ್ತಕದ ನೆಪ ಹಾಸಿಗೆಯ ಸಂಗ ಹಗಲು.

ಈ ಹೊತ್ತಿಗೆಯ ಪದರಗಳು ಮೇಲೆ ಕೆಳಗೆ
ಬೆಳಕು ಕಾಣುವುದು ಒಂದೊಂದೇ ಪುಟಗಳಿಗೆ
ಒಂದು ಪುಟ ಬೆಳಕಿಗಾದಂತೆ ನಂಟು
ಉಳಿದವಕ್ಕಂತೂ ಸದಾ ಕತ್ತಲ ಗಂಟು.

ಕುಮಾರ ಸ್ವಾಮಿ ಕಡಾಕೊಳ್ಳ ಅವರ ಕವನ -
ಜ್ಞಾನದ ಸುಳಿವು.

ಕತ್ತಲೆಯ ನಮ್ಮ ಬದುಕನ್ನು
ಜ್ಞಾನ ತಿರೆಗೊಯ್ಯವ
ಅದೋ ಅಲ್ಲಿ ಹೊನಲು ಚೆಲ್ಲಿದೆ
ಇದೋ ಇಲ್ಲಿ ಹೊತ್ತಿಗೆ ಸಾರದೊಂದಿಗೆ

ಬಾಳು ಅಜ್ಞಾನದ ಸೆಳವು
ಬಿಡಿಸಿಕೊಳ್ಳಲು ಬೇಕು ಜ್ಞಾನದ
ಸುಳಿವು, ಅನುಭವಗಳ ತೆವಳು
ಎದೆಗುಂದದೆ ಹುಡುಕುವ ಗೀಳು

ಹುಡುಕೋಣ ಜ್ಞಾನವನ್ನು
ಅನುಭಗಳನು ಅಡಗಿಸಿಕೊಂಡು
ಹೊತ್ತಿಗೆಯಲ್ಲೂ ಭಿತ್ತಿಗಳಲ್ಲೂ
ಬಿತ್ತಿ ಬೆಳೆಸೋಣ ಜ್ಞಾನ ಬುದ್ಧಿಯನ್ನು

ಬೆಳಕಿನ ಬಲದಿಂದ ಕತ್ತಲೆಯ ಕೇಡು
ಜ್ಞಾನದ ಬಲದಿಂದ ಅಜ್ಞಾನದ ಕೇಡು
ಮೌನದ ಬಲದಿಂದ ಜಂಜಾಟದ ಕೇಡು
ಪ್ರೀತಿಯ ಬಲದಿಂದ ದ್ವೇಷದ ಕೇಡು

** ಕುಕೂಊ...

Monday, 2 June, 2008

ಚಿತ್ರ ೫೬
ಚಿತ್ರ ೫೬ ಕ್ಕೆ ಕುಮಾರ ಸ್ವಾಮಿ ಕಡಾಕೊಳ್ಳ, ತವಿಶ್ರೀ ಮತ್ತು ಸತೀಶ್ ಅವರು ಕವನಗಳನ್ನ ಬರೆದಿದ್ದಾರೆ.

ಕುಮಾರ ಸ್ವಾಮಿ ಕಡಾಕೊಳ್ಳ ಅವರ ಕವನ -
ಹಸುಳೆ

ಹಾಲುಗಲ್ಲದ ಹಸುಳೆ
ತೂಗಾಡುವ ತಲೆಯೆ
ತೊದಲಾಡುವ ನುಡಿಯೆ
ಹಾಲು ಮೆತ್ತಿದ ತುಟಿಗಳೇ
ತೊಡಕಾಗುವ ಹೆಜ್ಜೆಗಳೇ
ಕಾಂತಿಯುಕ್ಕುವ ಕಂಗಳೇ
ಕಿಲಕಿಲ ಮಂಜುಳ ನಗುವೆ
ಕೆದರಿದ ನಯ ಕೂದಲೇ
ಕರಿ ಕಾಡಿಗೆ ಸಿಂಚಿತೆ
ಕಿವಿಯ ಓಲೆಯ ಭೂಷಿತೆ
ಸುಕೋಮಲ ಸ್ಪರ್ಷವೆ
ನೆಲದ ಮೇಲೆ ತೆವಳುವೆ
ಬಿಸಿಲ ಕುದುರೆ ಏರುವೆ
ಹಸಿವನು ಕಣ್ಣೀರಲೇ ತೋರುವೆ
ಕೋಪಕೆ ನಿನಗಾರು ಸರಿಯೇ
ಸಿಕ್ಕಿದ್ದೆಲ್ಲ ನಿನ್ನ ಆಯುಧವೆ
ಚಂದ್ರನನೇ ಬೇಕೆನ್ನುವೆ
ಬೆಂಕಿಯಲ್ಲಿಯು ನುಗ್ಗುವೆ
ಹುಲಿಯ ಬೆನ್ನನ್ನಾದರು ಏರುವೆ
ಅಂಜಿಕೆ ನಿನಗೆಲ್ಲಿದೆ?
ಅಮ್ಮನನು ಬಿಡದಪ್ಪುವೆ
ಅವಳೇ ಬೇಕು ಸಧಾ ನಿನಗೆ
ಎಲ್ಲರಲು ಪ್ರೀತಿಯುಕ್ಕಿಸುವೆ
ನಿನಗೆ ಆದೇವನು ಸಮವೆ?

** ಕುಕೂಊs....
ಪುಣೆ


ತವಿಶ್ರೀ ಅವರ ಕವನ -
ಮಗುವಿನ ಕೋರಿಕೆ

ಕೈನಲಿರುವುದು ಏನದು
ಆಟದ ಸಾಮಾನಿನಂತೆ ತೋರುವುದು
ನನ್ನ ಕೈಗೆ ಕೊಡೋ
ಕೊಡದಿರೆ ಅಮ್ಮನ ಕರೆವೆ

ನೀ ಚಿತ್ರ ತೆಗೆಯುವೆಯಾ
ಅಮ್ಮ ಮೊಗವ ತೊಳೆವರೆಗೆ ಕಾಯುವೆಯಾ
ಮೊಗದಲಿ ಲೇಪಿಸಿಲ್ಲ ಪವುಡರು
ಬದಲಿಸಿಲ್ಲ ಬೆಳಗಿನ ದಿರಿಸು
ಸ್ವಲ್ಪ ಕಾಲ ತಡೆಯುವೆಯಾ?

ಮೊಂಡಂತೆ ನನ್ನ ಮೂಗು
ಬೊಚ್ಚಂತೆ ನನ್ನ ಬಾಯಿ
ಕೆದರಿದೆಯಂತೆ ತಲೆಗೂದಲು
ಪಿಸಿರು ಕಾಣುವುದಂತೆ ಕಣ್ಣಲಿ
ಇವಾವುದೂ ಬಾರದ ಚಿತ್ರ ತೆಗೆಯುವೆಯಾ?

ಅವರಿವರ ಮಾತಿಗೆ ನೀ ಹೆದರಬೇಡ
ಎನ್ನ ಚಿತ್ರ ತೆಗೆಯಲು ದೃಷ್ಟಿಯಾಗದು
ತಗುಲದಂತೆ ಹಚ್ಚಿದೆಯಲ್ಲ ಬೊಟ್ಟು
ನೋಡುವೆಯಾ!
ಒಮ್ಮೆ ಆ ಡಬ್ಬ ನನ್ನ ಕೈಗೆ ಕೊಟ್ಟು

ಸುಂದರ ಚಿತ್ರ ನೀ ತೆಗೆದುಕೊಡಲು
ರೂಪದರ್ಶಿ ನಾನಾಗಬಲ್ಲೆ
ಒಂದೆಳೆ ಸರವ ನೂರೆಳೆ ಮಾಡಬಲ್ಲೆ
ಅದರಲಿ ನಿನಗೂ ಪಾಲು ಕೊಡಬಲ್ಲೆ
ತೆಗೆಯುವೆಯಾ ಸುಂದರ ಚಿತ್ರ ಒಂದನು?


ಸತೀಶ್ ಅವರ ಕವನ -
ನಮ್ಮ ಮನೆಯ ಪುಟ್ಟ ಪಾಪ

ಎನೇನೋ ಬೊಟ್ಟುಗಳನ್ನು ತಿದ್ದಿ ತೀಡಿದ ಅಮ್ಮ
ಮುದ್ದಿಸಿ ಮಲಗದಿರೆ ಹೆದರಿಸಿ ಬರುವನೆಂದು ಗುಮ್ಮ
ಸಂಪ್ರದಾಯವೆಂದು ದೊಡ್ಡ ರೂಪವೊಂದನು ಕೊಟ್ಟು
ಆಸೆ ಮೋಡಗಳ ಕುರುಳನು ಹಾಗೇ ಹಾರಲು ಬಿಟ್ಟು.

ಮಲಗಿದಲ್ಲೇ ಹಣೆ ನೇವರಿಸಿ ದಿವ್ಯ ದಿರಿಸು ತೊಟ್ಟ ತಂದೆ
ಹುಟ್ಟುವ ಸೂರ್ಯನ ಜೊತೆ ಆರಂಭವಾಗುವ ದಂದೆ
ವಾರಕ್ಕೆರಡೇ ದಿನ ಮುಖ ನೋಡುವುದಕ್ಕೆ ಸಿಕ್ಕು
ರಾತ್ರಿ ಉಂಡು ಮಲಗಿದ ನಂತರ ನೋಡಿ ನಕ್ಕು.

ಕುಟುಂಬ ಯೋಜನೆಯ ಫಲವೋ ಜಾಗತಿಕರಣದ ಒಲವೋ
ನಮ್ಮ ಚಿಕ್ಕ ಕುಟುಂಬಗಳ ಬೆರಳೆಣಿಕೆಯ ಜನರ ಬಲವೋ
ತಮ್ಮನಿದ್ದರೆ ತಂಗಿಯಿಲ್ಲ, ತಂಗಿಯಿರೆ ಅಕ್ಕನಿಲ್ಲದ ಬಳಗ
ಅತ್ತು ಕರೆಯುವುದಿರಲಿ ಕಿತ್ತು ಖುಷಿ ಪಡಲೂ ಬಾರದ ವಾಲಗ.

ದಿವ್ಯತೆ ಇರಲಿ ಇಲ್ಲದಿರಲೀ ದೂರದೃಷ್ಟಿ ಇರಲೇ ಬೇಕಾದ ಕಾಲ
ಸುತ್ತಲೂ ಸ್ಪರ್ಧೆಯನು ಮೈಗೂಡಿಸಿಕೊಂಡಿರುವ ನೆಲ-ಜಲ.