Tuesday, 27 May 2008

ಚಿತ್ರ ೫೫



ಚಿತ್ರ ೫೫ ಕ್ಕೆ ಅರುಣ್ ಮತ್ತು ಸತೀಶ್ ಅವರು ಕವನಗಳನ್ನ ಬರೆದಿದ್ದಾರೆ.


ಅರುಣ್ ರ ಕವನ -
ಹಣದಾತುರದಿಂ ಸೌಧಮಾಗಿರ್ಪುದುಮೊಳಗೆ

ಹೆಣದಾತುರದಿಂ ವಿಹರಿಪುದು ಹದ್ದು ನಭದಿ

ಹೆಣದ ನಾತ ಹೊಡೆಯಲು ಧನನುಂಗಿರ್ದ ಸ್ಥಳದಿಂ

ಹೊಣೆಯಾರಿಗೆಲೊ - ಚಿತ್ರಕವನ


ಸತೀಶ ರ ಕವನ -
ಮಹಲಿನ ಜೊತೆಗಿನ ಗತ್ತು

ನಿಂತಲ್ಲೇ ನಿಂತ ಸೌಧ ಸ್ವಚ್ಛಂದವಾಗಿ ತೆರೆದ ಮುಗಿಲು

ಕದ್ದು ಕಾಯುವ ಹದ್ದು ಕಾಣುವ ಮಲಗೆದ್ದ ಹಗಲು

ಬದುಕಿ ಸಾಯುವ ಆಹಾರ ಹೊಟ್ಟೆ ಗೋರಿಯ ಸೇರಿ

ಹಾರುವ ಪಕ್ಷಿಯ ಮನಸು ಸೌಧದ ತುದಿ ನಭವ ಮೀರಿ.

ಅಂತಹದೇನಿರಬಹುದು ಇದೆಲ್ಲದರ ವಿಶೇಷ

ಸುತ್ತಲ ಪ್ರತಿಯೊಂದೂ ಮೇಲೆ ಏರುವ ವೇಷ

ಅದ್ಯಾವುದೋ ಕಾರಣಕೆ ಮೇಲ್ಮುಖವ ಮಾಡಿ

ಮೇಲೆ ಹೋದಂತೆಲ್ಲ ತಮ್ಮ ಕೆಳಗಷ್ಟೇ ತೋಡಿ.

ಆಹಾರವೆಂದೂ ಈ ಜಗವು ಹುಡುಕುವ ರತ್ನ

ಎಲ್ಲ ಜೀವರಾಶಿಗಳ ಒಂದೊಂದು ಥರದ ಯತ್ನ

ಇಂದು ಇರದ ನಾಳೆಗಳಿಗೆ ಕೂಡಿ ಹಾಕುವರೆಷ್ಟು

ನಿನ್ನೆ ಇಂದಿನವರೆಗೆ ಹಸಿದೇ ಹಲಬುವರಷ್ಟು.

ಹಾರುವ ಹದ್ದಿನ ಕಷ್ಟ ನಿತ್ಯ ಹಸಿರಿನವರಿಗೇನು ಗೊತ್ತು

ನಾವು ಗುರುತಿಸಿಕೊಂಡ ಮಹಲಿನ ಜೊತೆಗೆ ನಮ್ಮ ಗತ್ತು.

Wednesday, 21 May 2008

ಚಿತ್ರ ೫೪



ಈ ಬಾರಿಯ ಚಿತ್ರಕ್ಕ ಕುಮಾರ ಸ್ವಾಮಿ ಕಡಾಕೊಳ್ಳರು ಮೂರು ಕವನಗಳನ್ನ ಬರೆದಿದ್ದಾರೆ.

** ಗೊಡ್ಡ ಮೇಷ್ಟ್ರುಗಳು **

ಎಂತ ಹೆಡ್ಡರೋ ಈ ಗೊಡ್ಡ ಮೇಷ್ಟ್ರುಗಳು|
ಗುಡ್ಡಗಾಡಿನೋರಿಗಿಂತ ದೊಡ್ಡ ದಡ್ಡರು||

ದೇವರೇ ಇಲ್ಲಂತ ದಿನವೆಲ್ಲ ಬೊಗಳೆ ಹೇಳ್ತಾರೆ|
ಮುಂದಿನ ದಿನ ಬೂದಿ ಬಳ್ಕಂಡ್ ಗುಡಿಗೆ ಹೋಗ್ತಾರೆ||

ಬೀಡಿ ಸಿಗರೇಟ್ ದೇಹಕ್ಕೆ ಕೆಟ್ಟದ್ದಂತ ಕೂಯ್ತಾರೆ|
ಗೋಡೆ ಮರೆಯಲ್ಲಿ ಹೋಗಿ ತಾವೆ ಹೊಗೆ ಬಿಡ್ತಾರೆ||

ತಮ್ಮ ಕೆಲಸ ತಾವೆ ಮಾಡ್ಕೋಬೇಕಂತ ಕೊರಿತಾರೆ|
ಚಹ ಕಾಫಿ ನೀರು ಬೀಡಿ ತರಲು ನಮ್ಮನೇ ಕಳಸ್ತಾರೆ||

ಅಪ್ಪ ಅಮ್ಮ ದೇವರ ಸಮಾನ ಅಂತ ವೇದಾಂತ ಹೇಳ್ತಾರೆ|
ತಮ್ಮ ಅಪ್ಪ ಅಮ್ಮನ್ನೇ ಮನೆಯಿಂದ ಆಚೆ ದೂಕಿದ್ದಾರೆ||

ರಾಮ ಕೃಷ್ಣ ಬುದ್ಧ ಬಸವ ಅಲ್ಲ ಕ್ರಿಸ್ತ ಎಲ್ಲರು ಒಂದೇ ಅಂತ್ಹೇತಾರೆ|
ಊರಲ್ಲೇಲ್ಲಾ ನಮ್ಮ ದೇವರೆ ದೊಡ್ಡದಂತ ಕೂಗಾಡ್ತಾರೆ||

ವರದಕ್ಷಿಣಿ ಮಹಾಪಾಪ ಅನ್ನೋ ಪಾಠನ ಆಪಾಟಿ ಹೇಳ್ತಾರೆ|
ಊರಲ್ಲಿ ಎಲ್ಲರಿಗಿಂತ ಇವರೆ ಜಾಸ್ತಿ ವರದಕ್ಷಿಣೆ ತೊಗೊಂತಾರೆ||

ಸುಳ್ಳು ಹೇಳ್ಬಾರ್ದು ಅಂತ ನಮಗೆ ಹೊಡೆದು ಹೊಡೆದು ಹೇಳ್ತಾರೆ|
ಮೇಲಿನ ಇಷ್ಟೆಲ್ಲ ಸುಳ್ಳನ್ನ ಮುಂಜಾನೆಯಿಂದ ಸಂಜೆವರಿಗೆ ಹೇಳ್ತಾರೆ||

ಹೇಗೆ ನಂಬೋದು ಇವರನ್ನ ನಂಗೇನು ತಿಳಿವಲ್ದೂ|
ಏನಾದರು ಆಗಲಿ ನಾಳಿಂದ ಇಂತ ಶಾಲೇಗೆ ಬರಬಾರದು||


** ಅಲ್ಲಿದೆ ನಮ್ಮೂರು **

ಅಲ್ಲಿದೆ ನಮ್ಮೂರು
ಅಂದ ಚಂದದ ತವರೂರು|
ಇಲ್ಲಿಂದ ನಡದೋದರೆ
ಘಳಿಗೆಯಲಿ ಸಿಕ್ಕುವುದು||

ಹೋಗಿ ಬರೋಣವೇ
ಆಡುತ್ತ ನಾವಿಂದು|
ಅಜ್ಜ ಅಜ್ಜಿಯ ಕೂಡಿ
ಕೇಳೋಣ ನಮ್ಮೂರಿಗೆ ಬಾ ಎಂದು||

ಕಬ್ಬು ಬೆಳೆದಿರುತೈತೆ
ನಮ್ಮ ದಿನ್ನೆಯ ಹೊಲದಲ್ಲಿ|
ಸಿಗಿಸಿಗಿದು ತಿನ್ನುತ್ತ ಸವಿಯೋಣ
ಹಿಗ್ಗಿನಲಿ ನಾವೆಲ್ಲ ಕೂಡಿಕೊಂಡು||

ನಮ್ಮನೆಯ ಬಿಳಿ ಹಸು
ಈದೈತೆ ಸಣ್ಣ ಕೆಂಗರು|
ಹಿಡಿಯಾಕೆ ಹೋದರೆ
ಚಂಗನೆ ನಗೆದೋಡುವುದು||

ಊರಚೆ ತುಂಬಿ ತುಳುಕಾಡೈತೆ
ನಮ್ಮೂರ ದೊಡ್ಡ ಕೆರೆಯು|
ತೇಲಿ ಬಿಡೋಣ ನೀರಲ್ಲಿ
ನಮ್ಮ ಕಾಗದದ ಡೋಣಿಗಳನು||

ತೆಂಗಿನ ಮರ ತುಂಬ್ಯಾವೆ
ನಮ್ಮ ತೋಟದ ತುಂಬೆಲ್ಲ|
ಕುಡಿದು ಬರೋಣವೆ
ದೊಡ್ಡ ಎಳೆಗಾಯಿ ನೀರು||

ಹಾಲುಬೆಳೆಸೆ ತುಂಬಿರುತಾವೆ
ತೂಗುವಾ ರಾಗಿಯ ಹೊಲದಾಗೆ|
ಉರಿಹಾಕಿ ಗರಿಗೊಂಚಲಿಗೆ
ಸುಟ್ಟ ಬೆಳೆಸೆ ಬಿಡಿಸಿ ತಿನ್ನೋಣ||

ಮಾವೀನ ಮರದ ತೋಪು
ಕಾಡಂತೆ ತೂಗಿ ಬೆಳೆದಿರುತೈತೆ|
ಎಲ್ಲಿ ನೊಡಿದರು ಅಲ್ಲಿ
ನವಿಲುಗಳೇ ಇರುತಾವೆ ನೋಡು||

ನಮ್ಮೂರಿಗೆ ಹೋದರೆ ಸಿಕ್ಕುವು
ನಮಗೆ ಉಪ್ಪು ಹುಣಿಸೆ ಹಣ್ಣು|
ಈ ದೊಡ್ಡ ಗುಟ್ಟು ಯಾರಿಗು
ಹೇಳೋಣ ಬ್ಯಾಡ ನೋಡು||

ಹಳ್ಳದಲಿ ಇರುತಾವೆ ಬಣ್ಣ ಬಣ್ಣದ
ಹಕ್ಕಿಗಳು ಹಿಂಡು ಹಿಂಡಾಗಿ|
ಮರ ಕೊಂಬೆ ಗಿಡ ಪೊದೆಯಲಿ
ಕಟ್ಟಿರುತ್ತಾವೆ ಸಣ್ಣ ಸಣ್ಣ ಗೂಡು||

ತೋಟದ ಬೇಲಿಯಲಿ ಇರುತಾವೆ
ಹತ್ತಾರು ಜೇನಿನ ಗೂಡು|
ನಮ್ಮೂರ ತಿಮ್ಮನಿಗೆ ಕೇಳಿದರೆ
ದೊಡ್ಡದು ಬಿಡಿಸಿ ಕೊಡುವನು ನೊಡು||

ನಮ್ಮ ಮನೆಯಲಿ ಇರುತಾವೆ
ದೊಡ್ಡ ಬಿಳಿ ಎತ್ತಿನ ಜೋಡು|
ಚಕ್ಕಡಿಗೆ ಹೂಡಿದರೆ ಅವುಗಳ
ಜೋರಿನ ಓಟ ಬಲು ಸೊಬಗು ನೋಡು||

ಅಲ್ಲಿ ಇರುವುದಿಲ್ಲ ನಮಗೆ
ಈ ಶಾಲೆಯ ತಂಟೆ ತಕರಾರು|
ನಮ್ಮೂರ ಗೆಳೆಯ ಗುಂಪಲ್ಲಿ
ನಾವೇ ಯುವರಾಣಿಯರು(ರಾಜರು) ನೋಡು||

ಅಲ್ಲಿಂಟು ಏನೆಲ್ಲ ನಮಗಿಲ್ಲಿ ಕಾಣದ್ದು
ಅಲ್ಲಿಂಟು ಏನೆಲ್ಲ ಇಲ್ಯಾರು ಹೇಳದ್ದು|
ಸ್ನೇಹ ಉಂಟು, ಸಲಿಗೆಯುಂಟು, ಸಿರಿಯುಂಟು
ಎಲ್ಲರೂ, ಎಲ್ಲದೂ ನಮ್ಮದೆಂಬ ಭಾವವುಂಟು||

ಹೋಗೋಣ ಬನ್ನಿರೇ ಗಂಗೆ, ಗೌರಿ
ಅಲ್ಲಿ ಇರುತಾರೆ ಸೀತೆ, ಸುಬ್ಬಿ, ಸುವ್ವಿ||
ದಿನವೆಲ್ಲ ತಿರುಗಾಡಿ ಜೊತೆಯಲ್ಲಿ ಕುಣಿದಾಡಿ
ಸಂಜೀಗೆ ಬರೋಣ ಗುಟ್ಟು ನಮ್ಮಲ್ಲೇ ಇರಲಿ||


** ಅಕ್ಕರೆಯ ಗೆಳತಿಯರು **

ಮುನಿಸಿ ಕೊಂಡಾಳೆ ನನ್ನ ಜೊತೆ ಯಾಕೋ ತಿಳಿಯದು
ತಿಳಿಸಿ ಹೇಳು ನಿನಾದರು ಅವಳಿಗೊಮ್ಮೆ ಇಂದು|
ಕಾರಣ ಕೇಳಿದರೆ ಊದಿಸುತ್ತಾಳೆ ಕೆಂಪಗೆ ಮಾಡಿ ಕೆನ್ನೆ
ಉರಿಗಣ್ಣಿನಲಿ ನೋಡುತ್ತ ಸುಟ್ಟು ಬಿಡುವವಳಂತೆ||

ನಿನ್ನೆ ಹೇಳಿದ್ದೆ ಇವಳಿಗೆ ಕಜ್ಜಾಯ ತರುವೆನೆಂದು
ಅಮ್ಮನ ಕೇಳಿದ್ದಕ್ಕೆ ಒದೆ ತಿಂದು ಬಂದೆ|
ಎಷ್ಟು ಹೇಳಿದರು ಇವಳಿಗೆ ಅರ್ಥವಾಗದು ಇಂದು
ನೀನೇ ತಂದು ಕೊಡು ಇವಳಿಗೆ ಎರಡು ಲಡ್ಡು ಉಂಡೆ||

ಅವಳೆಂದರೆ ನನಗೆ ಎಲ್ಲಿಲ್ಲದ ಅಕ್ಕರೆ
ಜೊತೆಗಿದ್ದರೆ ಅದುವೆ ನನಗೆ ಸಿಹಿ ಜೇನು ಸಕ್ಕರೆ|
ನಮ್ಮಲ್ಲಿದ್ದಂತೆ ಅವಳಲ್ಲಿ ಇಲ್ಲನೋಡು ಬ್ಯಾಗು
ಅದಕೆ ಕೊಟ್ಟು ಬಿಡುವೆ ಇಂದೇ ನನ್ನ ಕೆಂಪು ಬ್ಯಾಗು||

ನಾನು ಬರೆದಿಲ್ಲ ಮೇಷ್ಟ್ರುಕೊಟ್ಟ ಮನೆಕೆಲಸದ ಪಾಠ
ನೀವು ತೋರಿಸಿರಿ ಈಗಲೆ ಬರದು ಮುಗಿಸುವೆ ಪಟಪಟ|
ಯಾಕೊ ಬೇಸರಿಕೆ ನೀವಿಲ್ಲದ ಮನೆಯಲ್ಲಿನ ಪಾಠ
ನಮ್ಮ ಮನೆಯಲ್ಲಿ ಸೇರಿ ಓದೋಣ ಇದಕೆ ನಾನು ದಿಟ||

ನಮ್ಮಮ್ಮ ಮಾಡಿ ಡಬ್ಬಿಯಲಿ ಇಟ್ಟಾಳೆ ಚಿತ್ರನ್ನ ಬೋಂಡ
ನಿಮಗಾಗಿ ಕದ್ದು ತಂದಿನಿ ಚಕ್ಕುಲಿ ಕೋಡುಬಳೆ ವಡ|
ನೀವೇನು ತಂದಿರುವಿರಿ ನಾನಾಗಲೆ ಕದ್ದು ನೋಡಿರುವೆ
ತಿಂದು ಮುಗಿಸೋಣ ಅವರೆಲ್ಲ ಬರುವ ಮೊದಲೆ||

ಬಿಟ್ಟು ಹೋಗಬೇಡಿರಿ ನಾನೇನಾದರು ತಪ್ಪು ಮಾಡಿದರೆ
ತಿದ್ದಬೇಕು ಒಬ್ಬರಿಗೊಬ್ಬರು ಜೊತೆಗಿದ್ದುಕೊಂಡು|
ಯಾವಾಗಲು ಜೊತೆಗೆ ಇರೋಣ ಜಗಳವಾಡದೆ ಎಂದು
ಇದಕೆ ಸಾಕ್ಷಿಯಾಗಿ ಇರಲಿ ಈ ಕಲ್ಲುಬಂಡೆಯ ಕಟ್ಟೆಯು||


ತ್ರಿವೇಣಿಯವರ ಕವನ:

ಮುಡಿಗೇರಲಿ ಸಾಧನೆ

ಕೇಳಿರೆ ಗೆಳತಿಯರೇ, ನಿಮ್ಮಮ್ಮ, ಅಜ್ಜಿಗಿಂತ ನೀವೇ ಪುಣ್ಯವಂತರು
ಓದಿ-ಬರೆದು ಮಾಡಲು, ಅವರಿಗ್ಯಾರು ನೆರವು ಕೊಟ್ಟರು?
ಹೆಣ್ಣಿಗೇಕೆ ಶಿಕ್ಷಣ? ಅದು ಪರರ ಮನೆಯ ಬೆಳಕು
ಕಸೂತಿ, ರಂಗೋಲಿ, ಹಾಡು-ಹಸೆ ಬಂದರಾಯಿತು, ಸಾಕು

ವರ್ಷ ಎಂಟಕ್ಕೇ ಮದುವೆ, ಬಸುರು, ಬಾಣಂತನದ ಕಾಟ
ಕಸಮುಸುರೆ, ಹೊರೆಗೆಲಸ; ಮನೆಮಂದಿಗೆ ಹೊತ್ತುಹೊತ್ತಿನೂಟ
ಮೂವತ್ತಕ್ಕೇ ಮುದಿಯಾಗಿ ಅಡರಿತ್ತು ಹರಯದಲ್ಲೇ ಮುಪ್ಪು
ಹೆಣ್ಣಾಗಿ ಹುಟ್ಟಿದ್ದೊಂದೇ ಅವರು ಮಾಡಿದಂಥ ತಪ್ಪು!

ಕೇಳಿ ಮುದ್ದು ಹುಡುಗಿಯರೇ, ಇಂದು ಕಾಲ ಬದಲಾಗಿದೆ
ಗಂಡಿಗಿಂತ ಹೆಣ್ಣಿನದೇ ಒಂದು ಕೈ ಮೇಲಾಗಿದೆ
ಅಂದಾಗಿಹ ಅನ್ಯಾಯಕೆ ಇಂದು ನ್ಯಾಯ ಪಡೆಯಿರಿ
ಛಲದಿಂದ ಮುಂದೆ ನುಗ್ಗಿ ಯಶದ ಬೆನ್ನು ಹಿಡಿಯಿರಿ

ಹಾಳುಹರಟೆಯಲ್ಲಿ ನೋಡಿ, ಹೇಗೆ ಹೋಗುತಿದೆ ನಿಮ್ಮ ಹೊತ್ತು?
ತಿಳಿದಿಲ್ಲವೇ- ಕಳೆದ ಕಾಲ ಸಿಗದು, ಅದು ಒಡೆದ ಮುತ್ತು
ಇರಲಿ ನೋಟ ಗುರಿಯ ಕಡೆಗೆ, ಮುಡಿಗೇರಿಸಿ ಸಾಧನೆ
ನಿಮ್ಮ ಬದುಕೇ ನೀಡಲಿ ಉಳಿದವರಿಗೂ ಪ್ರಚೋದನೆ!



ಸತೀಶ ರ ಕವನ
ಕನಸುಗಳ ಜಮಖಾನದ ಮೇಲೆ ಕೂತು ತೇಲುತ್ತಾ

ಎರಡು ಜಡೆ ಬೆನ್ನಿಗೊಂದೊಂದು ಚೀಲ
ಸುಡುವ ಬಿಸಿಲಿದ್ದರೂ ಅಂಧಾನುಕರಣೆಯ
ಕಾಲ್ ಚೀಲ ಸಮವಸ್ತ್ರ ಸಮವನ್ನು ಸಾರಿ
ಭಿನ್ನಮತದೊಳಗೆ ಒಮ್ಮತವನು ತೋರಿ.

ನಿರೀಕ್ಷೆಯಿದೆ ಮುಂಬರುವ ನಾಳೆಗಳ ಬೆನ್ನ ಸವರುವ
ಕನಸುಗಳ ಜಮಖಾನದ ಮೇಲೆ ಕೂತು ತೇಲುತ್ತಾ
ಪರೀಕ್ಷೆಯಿದೆ ವರ್ಷಕ್ಕೊಂದೆರಡು ಮತ್ತೆ ಆಗಾಗ್ಗೆ
ಅಲ್ಲಲ್ಲಿ ಅದೇನೇನೋ ಜನ ನಮ್ಮನ್ನೇ ಕಿತ್ತು ನೋಡುತ್ತಾ
ಕೂತರೂ ತಪ್ಪು ನಿಂತರೂ ತಪ್ಪು ಎನ್ನುವ ಮನೆಯವರು
ಹೊಸತನವೆಲ್ಲದರಲಿ ಹರಡಿರುವ ಭಾವನೆಗಳು ನವಿರು.

ಹೆಣ್ಣು ಭ್ರೂಣದ ಉಳಿವಿನಿಂದ ಹಿಡಿದು ಎತ್ತರದ ನಿಲುವನ್ನು
ತಳೆಯುವುದರಲ್ಲಿಯವರೆಗೆ ನಮ್ಮ ಗುರಿ ದೂರವಿದೆ
ಪುರುಷನಿಗೆ ಸಮನಾಗಿ ದುಡಿದು ಸಂಸಾರ ನಡೆಸುವಲ್ಲಿಂದ
ಹಿಡಿದು ಆದರ್ಶ ನಾರಿಯಾಗಿ ಬದುಕುವ ಛಲವಿದೆ.

ನಾವೆಲ್ಲ ಬದಲಾಗಿದ್ದೇವೆ ಪೈಪೋಟಿ ಇದೆ ನಮ್ಮೊಳಗೆ
ಹುಟ್ಟುವಾಗಲೇ ಪಡೆದು ಬಂದ ರತ್ನ ನಾವಾದರೂ
ಅದೆಲ್ಲೋ ಬಿದ್ದು ಧೂಳಿನಲಿ ಸಿಕ್ಕಿರುವ ಕಾರಣಕ್ಕಾದರೂ
ನಾವು ನಮ್ಮೊಳಗಿನ ನಮ್ಮತನವ ಹೊರತರಬೇಕು
ಎಲ್ಲಿಟ್ಟರೇನು ಹೇಗಿದ್ದರೇನು ರತ್ನ ರತ್ನವೇ ಎಂದು
ನಂಬುವುದಕ್ಕಿಂತ ಪಡೆದಿದ್ದನ್ನು ಮಾಡಿ ತೋರಿಸಬೇಕು.

Tuesday, 13 May 2008

ಚಿತ್ರ - 53




ಪರಿಸರಪ್ರೇಮಿ ಅರುಣ ರ ಚುಟುಕು:

ಸಮುದ್ರವಲ್ಲವೋ, ಇದು ನದಿ
ಅದಕ್ಕೆ ಇರುವುದು ಎರದು ಬದಿ.
ಇಲ್ಲಿ ಎಲ್ಲಿಂದ ಬರುತ್ತೆ shark-ಉ?
ವಲಸೆ ಬರೋದು ಬರೀ painted stork-ಉ!!!

ಕುಮಾರ ಸ್ವಾಮಿ ಕಡಾಕೊಳ್ಳ ರ ಕವನ:

** ವಲೆಸೆಹಕ್ಕಿ**

ವಲೆಸೆ ಬಂದಾವೆ ನೋಡು
ದಂಡು ದಂಡಾಗಿ ಹಕ್ಕಿಗಳ ಹಿಂಡು|
ಹೊಸ ನೆಲೆಯನು ಹುಡುಕಿ|
ಬದುಕುವ ಬಯಕೆ ಹೊತ್ತು ಇಂದು||

ಹಾವಿನಂತೆ ಬಾಗಿದ ಕೊಕ್ಕರೆಯ ಕತ್ತು
ಕಡ್ಡಿಯಂತೆ ತೆಳ್ಳಗಿವೆ ಉದ್ದನೆಯ ಕಾಲು|
ಅಟ್ಟಪಟ್ಟೆ ಬಣ್ಣದ ಗೆರೆ ಮೈಮೇಲೆ ನೋಡು
ಬೆರಗಿನಿಂದ ಸೆಳೆವ ಬಣ್ಣಬಾಲದ ಜುಟ್ಟು ನೋಡು||

ಅಳಿವು ಉಳಿವಿನ ಹೋರಾಟ ಪರದಾಟ
ಅದಕೆ ನಡೆದಿದೆ ನೀರಿನಲಿ ಹುಡುಕಾಟ|
ಸಿಕ್ಕುವುದು ಕೊನೆಗೂ ಎಂದಿಂದು ನೆಂಬಿ
ಕುಕ್ಕಿ ಕುಕ್ಕಿ ಕೊಕ್ಕಿನಲಿ ಹೆಕ್ಕುತ್ತಿವೆ ನೋಡು||

ಆರ ಹಂಗಿಲ್ಲದೆ ನೀರ ಸೆಳವಿನಲಿ
ಜೊತೆಗೂಡಿ ನಡೆದಿದೆ ಬೇಟೆಯ ಅಣಿ|
ತೀರಿತೋ ಹಸಿವು ಸಿಕ್ಕರೆ ಬೇಟೆ
ಬೆಳೆದಿತೋ ತನ್ನ ಮುಂದಿನ ತಲಹು||

ಹಿಂದೊಂದು ಕೊಂಬೆಯಲಿ ಕುಳಿತಿದೇ ಬೆಳ್ಳಕ್ಕಿ
ಬಂದ ಹಿಂಡನು ನೋಡಿ ಆಗಿದೆ ಕಕ್ಕಾಬಿಕ್ಕಿ||
ಮುಂದೇನೋ ಹ್ಯಾಗೇನೋ ಮಾಡುವುದೇನೋ
ಮನಸಿನ ತೊಳಲಾಟ ನಡೆದಿದೆ ವ್ಯಸನ ಉಕ್ಕಿ||


ಸತೀಶರ ಕವನ :
ಆಹಾರ ಸರಪಳಿ

ಹೊಟ್ಟೆ ತುಂಬಿಸಿಕೊಳ್ಳುವ ಕ್ಷಣ
ಬಂದಾಗಲೆಲ್ಲ ಅಲ್ಲಿ ಗೆರೆ ಎಂಬುದಿಲ್ಲ
ಹತ್ತು ಹಲವು ಅಲೆಗಳು ಎತ್ತೆತ್ತಲಿಂದ
ಬಂದು ಬಂದು ಅಲ್ಲಿ ನಿಲುವೆಂಬುದಿಲ್ಲ.

ಹುಟ್ಟು ಸಾವುಗಳಿಗೆ ಮಿತಿ ಇರಬಹುದು
ಖಾಲಿ ಬೀಳುವ ಒಡಲು ಯಾವತ್ತೂ ಇದೆ
ನಿಲ್ಲದ ದಾಹ ಹಿಂಗದ ಹಸಿವಿನ ಬವಣೆ
ಜೊತೆಗೆ ಎಂದೂ ನಿಲ್ಲದ ಬದುಕು ಮತ್ತದೇ.

ಸಾಲು ಹಚ್ಚಿ ಗೋಣು ಬಗ್ಗಿಸಿ ಇಲ್ಲಿನ
ಇವು ಒಂದೊಂದೇ ಮೀನ ಹಿಡಿದರೇನಂತೆ
ಅದೆಷ್ಟೋ ಸಾವಿರ ಸಾವಿರ ರೂಪದಲ್ಲಿ
ಮತ್ತೆ ಮೀನ ಮರಿಗಳು ಹುಟ್ಟಿ ಬರುವವಂತೆ.

ಎಲ್ಲ ಕಡೆಗೆ ನೀರೋ ವಿಶಾಲ ಜಗವಿದ್ದೂ
ಇಲ್ಲಿ ಯಾರದೋ ಕೃಪೆಗೆ ಬದುಕುವ ಭೀತಿ
ಅದು ಯಾವತ್ತೂ ಹೀಗೆ ಕಡಿಮೆ ಜನ
ಹೆಚ್ಚು ಜನರನ್ನು ಬೇಟೇ ಆಡುವ ರೀತಿ.

ಸರಪಳಿಯ ಸೂತ್ರದಲಿ ಯಾರೋ ಬೇಟೆಗಾರರು
ಮೇಲೆ ಇದ್ದು ಸುತ್ತಲನು ನೋಡುವವರು ಹಲವು
ಅನ್ನದ ಋಣ ಕೆಲವರಿಗೆ ಅವರ ಕಾಲ ಬುಡದಲ್ಲಿ
ಇನ್ನುಳಿದವರದು ಹಾರಿ ಹೋಗಬೇಕಾದ ಮುಗಿಲು.

Wednesday, 7 May 2008

ಚಿತ್ರ -52


ಚಿತ್ರ ಕವನಕ್ಕೆ ವರುಷ ತುಂಬಿತು. ಇದು 52ನೇ ಚಿತ್ರ. ಪ್ರತಿವಾರವೂ ನಾವು ಪೋಸ್ಟ್ ಮಾಡುತ್ತ ಬಂದ ಚಿತ್ರಗಳಿಗೆ ನೀವೆಲ್ಲ ನಿಮ್ಮದೇ ಆದ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತ ಬಂದಿದ್ದೀರಿ, ಪ್ರೋತ್ಸಾಹ ನೀಡಿದ್ದೀರಿ. ಎಲ್ಲರಿಗೂ ನಾವು ಕೃತಜ್ಞರು.

- ಚಿತ್ರಕವನ ಬಳಗ.


ಕುಮಾರ ಸ್ವಾಮಿ ಕಡಾಕೊಳ್ಳ ರ ಕವನ ಹೀಗಿದೆ:

* ಕಲ್ಲು ಬಂಡೆ **

ಲಕ್ಷವರುಷಗಳಿಂದ ಸುರಿದ
ಒಂದು ಹನಿ ನಿಲ್ಲಲಿಲ್ಲ
ಜಾರಿ ಹೋದವೋ ಎಲ್ಲಿ
ಸುಳಿವುಗಳೇ ಇಲ್ಲ ||

ಕಲ್ಲು ಬಂಡೆಯ ಮೇಲೆ
ಕೂತ ಜೀವಿಗಳೆಷ್ಟೋ
ಎಣಿಸಿ ಹೇಳುವವರಿಲ್ಲ
ಮೌನವೇ ಸಾಕ್ಷಿ||

ತಾವು ಅರಸಿ ತೇಲಿ
ಬಂದ ಬೀಜಗಳೆಷ್ಟೋ
ಮೊಳೆಯೊಡೆದು ಬೆಳೆಯಲಿಲ್ಲ
ಕಳೆದು ಹೋದವು ಇಲ್ಲಿ||

ಬಂದು ಹೋದರು ಎಷ್ಟು
ಕುಂತು ಮಾತನಾಡಿದರೆಷ್ಟು
ಹತ್ತಿ ತುಳಿದರು ಎಷ್ಟು
ಬೇದವೆ ಕಾಣಲಿಲ್ಲ||

ಮೈಯ ಪರಚಿದರು ನನ್ನ
ಆರ ಮೇಲಿನ ಮೋಹಕೆ?
ಆರ ನೆನಪಿನ ಸಾಕ್ಷಿಗೆ?
ಆ ನೆನಪೇ ನನಗಿಲ್ಲ||

ಮೆತ್ತಿದರು ಕಲೆಗಳನು ನನ್ನ
ಮೈಯಮೇಲೆ ಕೆತ್ತಿ ಕೆತ್ತಿ
ಯಾವ ಉದ್ದೇಶಕೆ?
ಉಳಿದವು ಅಳಿಯಲೇ ಇಲ್ಲ||

ರಾತ್ರಿ ಹಗಲುಗಳು
ಸೂರ್ಯ ಚಂದ್ರ ಚಿಕ್ಕಿಗಳು
ಬೇರೆಯಲ್ಲ ನನಗೆ
ಬಂದು ಹೋಗುವವರು ಅಷ್ಟೆ||

ಬಿರಿಮಳೆಯೇ ಸುರಿದರೂ
ನೀರಲ್ಲಿ ಮುಳಿಗಿಸಿದರೂ
ನನ್ನೊಡಲು ತೋಯಲಿಲ್ಲ
ನಾನು ಕರಗದೇ ಉಳಿದೆ||

ಬಿಸಿಲು ಬೆಂಕಿ ಉರಿಸಿದರು
ಸಿಡಿಲುಗಳ ಸಿಡಿ ಸಿಡಿದರು
ಸುಟ್ಟು ಕರಕಲಾಗದೆ
ನಾನು ತಣ್ಣಗಾದೆನಲ್ಲ||

ದುಃಖವಾದಗ ಕಠೋರ
ಎಂದೆನ್ನ ಜೋಡಿಸಿ ದೂರಿದರು
ಆರಿಗೋ ದೈರ್ಯ ಹೇಳಲು
ಹೊಗಳಿದೆರೆನ್ನ, ನಾನು ಬದಲಾಗಲೇ ಇಲ್ಲ||

"ಘೋರ್ಕಲ್ಲ ಮೇಲೆ ನೀರು ಸುರಿದಂತೆ"
ಯಾರೋ ಮಾಡಿದ ತಪ್ಪಿಗೆ
ನಿಂದಿಸಿಸದರು ನನ್ನ ಹೆಸರಲ್ಲಿ
ತಪ್ಪು ನನ್ನದಲ್ಲವಲ್ಲ||

ಕಠೋರ ಕಲ್ಲೆಂದು
ಕಾಠಿಣ್ಯಕ್ಕೆ ಸಾಕ್ಷಿಯೆಂದೆನ್ನ
ಸಾರಿದರು ಜಗಕೆ, ಯಾಕೋ
ಕಾರಣ ನಾನಲ್ಲವಲ್ಲ||

ಬಿದ್ದ ಬಿಸಿಲಿಗೆಂದು
ಬೆದರಲೇ ಇಲ್ಲ
ಮೈಯೊಡ್ಡಿದೆ ತೆರೆದ ಬೈಲಿಗೆ
ಸೋಲಿನ ಸುಳಿವೇ ನನ್ನಲ್ಲಿಲ್ಲ||

ಸವಾಲಾಗಿದ್ದರು ನಾನು
ಸಾಯಲೇ ಬೇಕಲ್ಲ!
ಸಾಯುವೆನೊಂದು ದಿನ, ಆದರು
ಸಾವಿನೆಣಿಕೆನಗೆ ಗೊತ್ತೇ ಇಲ್ಲ||

ವಿಜಯಾರ ಚುಟುಕ:

ಗುರಿ ಕಣ್ಮುಂದಿರಲು
ಬೆಟ್ಟ ದಾಟಿ ಸಂತಸ
ಭಾವ ಮನತುಂಬಿರಲು
ಕಲ್ಲು ಮೀಟಿ ಸಂಗೀತ

ನೋವು ಬೆಟ್ಟವಾಗದೆ
ಹೃದಯ ಭಾರವಾಗದೆ
ನಗು ಬಾಳ ತುಂಬಿರಲು
ಸ್ವರ್ಗ ಸಾಟಿ ನಿಶ್ಚಿತ

ಸತೀಶ್ ರ ಕವನ ಹೀಗೆ ಹೇಳುತ್ತದೆ:

ನಮ್ಮೂರ್ ಹೈಕ್ಳು

ನಮ್ಮೂರ ಹೈಕ್ಳು ಭಾಳಾ ಶಾಣ್ಯಾ ಅದಾರ್ ನೋಡ್ರಿ
ಗುಡ್ಡಾ-ಮೇಡೂ ತಿರುಗಿ ಅವರ್ದೇ ಒಂದು ಹಾಡ್ರಿ.

ಬಿಸಿಲಾಗ ಸತ್ತ ಚಂದ್ರನ ಮುಖದಂಗಿರೋ
ನೆಲದ ಮ್ಯಾಗ ನಡದು ಏನ ಕಡದೀ ತಮ್ಮ
ಕುಡುಗೋಲ್ ನುಂಗಿ ಹಿಂಬದಿ ಹರಕಂಡ್
ಬ್ಯಾಡೇ ಬ್ಯಾಡಂದ್ರೂ ಬೆನ್ನ ಬಿಡದಾ ಗುಮ್ಮ.

ಕಾಡ ಮ್ಯಾಡ ಸುತ್ತೋ ಅಂದ್ರ
ಕಾಡಿಗ್ ಕಾಡೇ ಇಲ್ಲಾ ಅಂದಾಗ
ಕಾಡ ಬ್ಯಾಡ ಜೀವ್ನಾ ಪೂರ್ತಿ
ಯಾವ್ ಜೀವ್ನಾ ತೆಗೀ ಅತ್ಲಾಗ

ಎಲ್ಲಾರ್ ಹೋದ್ ದಾರೀಲ್ ಹೋಗೋ
ಹಳೇ ರೀತಿಗೆ ಜೋತ್ ಬಿದ್ದು
ನಿನ್ನ ದಾರೀ ನೀನೇ ಹುಡುಕೀ
ಕರ್ಮಾ ನೋಡೋರ್ ಕಣ್ ಬಿದ್ದು.

ಬೆಪ್ಪಿನ ಜೀವನ ತೆರೆದು ಹೊಸದನು ಪಡೆವುದು ಸೋಜಿಗವು
ಎತ್ತಣ ಬಾನು ಎಲ್ಲಿನ ಭುವಿಯು ಇಲ್ಲೇ ಸಿಗುವುದು ನಿಧಿಯು
ಮುಪ್ಪಿನ ಕಾಲಕೆ ಕಾಲೆಳೆಯುವುದು ಎಲ್ಲರ ಕಷ್ಟ ಇದ್ದದ್ದೇ
ಕೈಕಾಲ್ ಗಟ್ಟಿ ಇರೋವಾಗಲೇ ಹತ್ತಿ ಇಳಿಯುವುದು ದೊಡ್ಡದೆ.