ಇದು ಕಿಶೋರ್ ಬರೆದ ತೈಲ ಚಿತ್ರ...
ಕವನಗಳನ್ನು ’ಕವನಗಳಿಗೆ' ಮೀಸಲಾದ ಜಾಗದಲ್ಲಿ ಬರೆಯಿರಿ. ಆಮೇಲೆ ಕವನಗಳನ್ನು ಅಲ್ಲಿಂದ ಇಲ್ಲಿಗೆ ಎತ್ತಿಕೊಳ್ಳಲಾಗುವುದು.
ಕವನಗಳು
ನಾಳಿನ ಬದುಕಿನ ಚಳಿಗೆ
ಇವತ್ತು ಬಾಲ್ಯದ ಬೆಚ್ಚನೆಯ ಸ್ವೆಟರ್ ತೊಟ್ಟು..
?!!!!
ಬೆಚ್ಚನೆ ಸ್ವೆಟರ್ ತೊಟ್ಟು,
ನಿಂತಿದ್ದಾಳೆ ಅಕ್ಕ,
ತೊಟ್ಟ ಅಂಗಿಯ ಕಾವಿನೊಡನೆ,
ಅಕ್ಕನ ಬೆಚ್ಚನೆ ಮಡಿಲು ಹೊದ್ದು
ನಿಂತವನು ಪುಟ್ಟ ತಮ್ಮ..
ತೂಗಿನಿಂತ ಪುಟ್ಟ ಜುಟ್ಟಿನ ಪುಟಾಣಿ ಪೋರಿ,
ತಮ್ಮನಿಗೋ ಅವಳು ದೊಡ್ಡ ಅಮ್ಮನದೇ ಇನ್ನೊಂದು ಪರಿ..
ಅವಳ ನೋಟ ಆಚೆಗೆ,
ಇವನ ನೋಟ ಈಚೆಗೆ,
ಹಿಡಿಯಲಿದ್ದಾರೆ ಇಬ್ಬರೂ ಕವಲು ದಾರಿ
ಬದುಕಿನ ಕಣ್ಣು ಮುಚ್ಚಾಲೆಯಾಟದಿ..
ನಾಳಿನ ಕತ್ತಲ ನೆರಳು ದೂರ ದಾರಿ
ಇಂದಿನ ಬಾಲ್ಯದಿ ಕನಸಲಂತೂ
ಮೊಗವ ಬೆಳಗಿದೆ, ಬೆಳಕಿನ ಕಿರಣ ತೂರಿ ತೂರಿ..
ಬೆಳಕಿನ ಚಿನ್ನಾಟವ, ಚಿನ್ನಾರಿಗಳೊಡನೆ
ತೈಲವರ್ಣದಿ ರಚಿಸಿದ್ದು ಕಿಶೋರ
ಸೃಜನತೆಗೆ ಹೊಸಹಾದಿ ತೋರಿ..
- ಸಿಂಧು Sindhu
ಬಾಳು ಇಟ್ಟಿಗೆಯ ಗೋಡೆಯಲ್ಲ, ತಮ್ಮಾ,
ಕೇಳಿಕೋ ಬೆಚ್ಚಗಿರಲು ತನು ಮನ, ಅಚ್ಚರಿಯ ಪಡಬೇಕಿಲ್ಲ
ಕಿವಿಯಲೊಂದು ಗುಟ್ಟು, ಎದೆಯೊಳಗಿಳಿಬಿಟ್ಟು
ನಮ್ಮಿಬ್ಬರ ಪ್ರೀತಿ ನಂಟು ಬಾಡದು, ನಂಬಿಕೋ.
ಇಬ್ಬನಿಯ ಮಣಿ ಕರಗುವುದು ಕಿರಣಗಳ ಗೆರೆಗೆ
ನಮ್ಮ ಚಳಿ ಕರಗುವುದು ಅಮ್ಮನಕ್ಕರೆಯ ಕರೆಗೆ
ಕಣ್ಣು ಹಾಯುವತನಕ, ಬಣ್ಣ ತೇರಿದೆ ನೋಡು
ನಿನ್ನ ಹೆಜ್ಜೆಯ ಜೊತೆಗೆ ನನ್ನ ಗೆಜ್ಜೆಯ ಜಾಡು.
ನಡೆ ಮುಂದೆ ನಡೆ ಮುಂದೆ, ಅನುಜಾ ನಿಲ್ಲದಿರು
ಮುಂದೆ ಕನಸುಗಳಿಹವು, ಹಿಂದೆಯೇ ನಾವು.
- suptadeepti
ಮುದ್ದು ತಮ್ಮ,
ನಾನೇ ನಿನ್ನಮ್ಮ!
ಪೊರೆಯುವೆ ನಿನ್ನ ಕಾಡದಂತೆ
ಕ್ರೂರ ವಾಸ್ತವದ ಗುಮ್ಮ
- sritri
ನಾಳೆಗಳ ನಿರೀಕ್ಷೆಯಲ್ಲಿ...
ಅಕ್ಕ ತಮ್ಮನ ಜೋಡಿ ನಿಂತಿಹುದು
ಮೆಟ್ಟಿಲಿನ ಬಳಿಯಲ್ಲಿ
ಹುಸಿಮುನಿಸು -ತಮ್ಮನ ಜತೆಗೆ
ಮುಗುಳುನಗೆ -ಅಕ್ಕನ ಮೊಗದಲ್ಲಿ
ನೋಡು ತಮ್ಮಾ ಏರಬೇಕಾದ ದಾರಿಯೆಡೆಗೆ
ಒಮ್ಮೆ ತಿರುಗಿ ನೋಡು..
ಮುಖತಿರುಗಿಸಿದರೆ ಹೇಗೆ ? ನಮ್ಮ ನಾಳೆಗಳು
ಇರುವುದಲ್ಲಿ! ಅತ್ತ ಓಡು..
ಒಂದರ ನಂತರ ಇನ್ನೊಂದು
ಹತ್ತಬೇಕು ಮೆಟ್ಟಲು
ಸತತ ಪ್ರಯತ್ನ , ಛಲ ಬೇಕೇ
ಬೇಕು ಗುರಿ ಮುಟ್ಟಲು
ನೋವೊ ನಲಿವೋ ಪಯಣಿಸುತಿರಬೇಕು
ಪಯಣಕೆ ಹೆದರಬೇಡ, ನೀ ಮುಂದೆ ಸಾಗು
ನ್ಯಾಯ ಮಾರ್ಗದಲಿ ಮುನ್ನಡೆದರೆ ಸಾಕು
ಧೈರ್ಯದಿಂದಲೆ ನೀ ಮುನ್ನುಗ್ಗು
ಬೇರೆಬೇರೆಯಾದರೂ ನಮ್ಮ ಪಯಣದ ಹಾದಿ
ಜತೆಗಿರುವೆ ನಾ , ನೆನಪಾದಾಗಲೆಲ್ಲ
ನಮ್ಮ ಒಡನಾಟ, ಪ್ರೀತಿ ಮರೆಯಾಗದು
ಮಮತೆ ಇಹುದು ಹೃದಯದೊಳಗೆಲ್ಲ
- ಅರ್ಚನಾ
ಬುದ್ಧಿವಾದ ತಪ್ಪು ಮಾಡಿ ಬೆರಳ ಕಚ್ಚುವುದು,
ಅಕ್ಕ ಕಿವಿ ಹಿಂಡುವುದು
ಹಿಂದಿನಿಂದಲೂ ನಡೆದು ಬಂದಿದೆ
ನೀನೇನು ಹೊಸಬನಲ್ಲ ಬಿಡು
ಅದು ಹಾಗೇ:
ಮೆಟ್ಟಿಲಿಳಿಯುವುದು ತುಂಬಾ ಸುಲಭ
ಹತ್ತುವುದು ಮಾತ್ರ ಕಷ್ಟ
ಹಾಗಂತ ಧೃತಿಗೆಡದಿರು ಮಗು,
ನಿನ್ನ ಮುಖದಲ್ಲಿರುವ ತುಂಟ ನಗು
ನಿನ್ನಕ್ಕನ ಮುಖದಲ್ಲಿರುವ ಅನುನಯದ ನಗು..
ಕಾಯಲಿವೆ ನಿನ್ನ, ನಡೆ ಮುನ್ನುಗ್ಗು
ನಿನ್ನ ತಲೆಯ ಕ್ರಾಪನ್ನು ಅಕ್ಕನ ಕೈಗಳು ತಿದ್ದಲಿವೆ
ಅದಕ್ಕೇ ನೋಡು: ಅವಳಿಗೆ ಎರಡು ಜಡೆ ಇವೆ..!
- ಸುಶ್ರುತ ದೊಡ್ಡೇರಿ
ಉಣ್ಣೆಯ ನುಣ್ಣನೆಯ ಆ ಸ್ವೆಟರ್ ಗಿಂತ
ನಿನ್ನ ಬೆಚ್ಚನೆಯ ಆ ಕೈ ಹಿಡಿತವೆ
ಹೆಚ್ಚು ಹಿತವಾಗಿದೆಯಲ್ಲ,
ಅಮ್ಮನ ಸ್ಪರ್ಶದಂತಿದೆಯಲ್ಲ
ಅದು ಯಾಕೆ? ನೀ ಹೇಳೆ ಅಕ್ಕ
ನಾ ನಿನ್ನ ಅಮ್ಮನಲ್ಲವೋ ನನ್ನ ಮುದ್ದು ತಮ್ಮ
ನೀ ಕೇಳಿಲ್ಲಿ, ನಾ ನಿನ್ನ ಅಮ್ಮನಲ್ಲ
ಆದರೂ ಒಡಲಾಳದಲ್ಲಿ ನಿನಗಾಗಿ ಅಮ್ಮನಷ್ಟೇ ಅಕ್ಕರೆಯಿದೆ,
ನನ್ನ ಕಂಗಳಲ್ಲಿ ನಿನ್ನ ನಾಳೆಗೆಳ ಕನಸುಗಳ ಬಿಂಬವಿದೆ,
ಮುಂಬರುವ ನಾಳೆಗಳ ಎದುರಿಸಲು ನಿನ್ನಲ್ಲಿ ಚೈತನ್ಯ ತುಂಬುವ ಹುರುಪಿದೆ
ನೀ ಜಗ್ಗದಿರು ಬಗ್ಗದಿರು ಕಷ್ಟಗಳಿಗೆ, ಸೋಲುಗಳಿಗೆ
ಏನೇ ಬಂದರೂ ನೀ ನಿಲ್ಲದಿರು ಓಡುತಿರು,
ನಿನ್ನೊಡನೆ ಹೆಜ್ಜೆ ಹಾಕಲು ನಾನಿರುವೆ ಎಂದೆಂದೂ
- ಶ್ಯಾಮಾ
ಆಟ
ಕಣ್ಣಾ ಮುಚ್ಚೇ ಕಾಡೇ ಗೂಡೇ ಆಡೋ ಹೊತ್ನಲ್ಲಿ
ನಮ್ಮಯ ಹಿಂದೆ ಇಟ್ಟಿಗೆ ಗೋಡೇ ಕವಿದಾ ಕತ್ಲಲ್ಲಿ
ಆಟ ಅಂದ್ರೆ ಆಟ ಅದು ಮುಚ್ಚಿದ ಕಣ್ಣನು ತೆರೆಸೋದು
ನೇರ ನೋಟಕ್ ಕಾಣೋದನ್ನು ಕಣ್ಣು ಬಿಟ್ಟು ಹುಡುಕೋದು.
ನಮ್ಮನು ನೋಡಿ ಪಾಪ ಅಂತ ಹೇಳ್ತಾರ್ ನೋಡ್ದೋರು
ಬಡತನವೆಂದ್ರೆ ಶಾಪ ಅಂತ ಯಾರದು ಅಂದೋರು
ದೇವ್ರು ಕೊಡೋ ವಿಷ್ಯಾ ವಸ್ತುಗಳಿಗೇನೂ ಹಿನ್ನೆಲೆ ಬೇಕಿಲ್ಲ
ಕೊನೆಗೆ ಮುಫತ್ತಾಗಿ ಸಿಗ್ತಾ ಇರೋ ಗಾಳೀ ನೀರೇ ಸಾಕಲ್ಲ.
ಕೈಯಲ್ಲಿರೋ ಬೆರಳಿನ ಹಾಗೆ ಬೇರೆ ನಾವೆಲ್ಲ
ಹಲವು ಕೋನದ ದೃಷ್ಟೀ ನಮದು ಎಲ್ಲೂ ತಾಗಲ್ಲ
ಆದ್ರೂ ಒಬ್ರಿಗೊಬ್ರೂ ನಾವು ಆಸರೆಯಾಗ್ತೀವಿ
ಯಾರೋ ಹೂಡಿದ್ ಆಟಗಳಲ್ಲಿ ಭಾಗೀಯಾಗ್ತೀವಿ.
ಯಾರೋ ಕಟ್ಟಿದ ಕಟ್ಟೇ ಕಟ್ಟಳೆ ಲೆಕ್ಕಕೆ ಬಾರವು
ಇಂಥಾ ಆಟ್ದಲ್ಲಿ ಸೇರೋರ್ದೆಲ್ಲ ಜಯವೇ ಜಯವು.
-Satish
೧
ಕುರುಡು ಬದುಕಿಗೆ ಬೆಂಗಾವಲಿಲ್ಲ
ಮುನ್ನಡೆಯುವ ಸಂತಸ
ನಿನ್ನ ಮುಟ್ಟಿದಾಗ
೨
ಸಿಕ್ಕಿ ಬಿದ್ದೆನೋ
ಬೆತ್ತ ತಂದಳೋ
ಎತ್ತ ಹೋಗಲೋ...
೩
ಬೆಂಗಾವಲಿಲ್ಲವೆಂದು
ಹಿನ್ನಡೆಯೇಕೆ?
ಅದು ಗೋಡೆಯಲ್ಲ, ಮೆಟ್ಟಿಲು!
-ವಿಕ್ರಮ ಹತ್ವಾರಮುದ್ದು ಮಗುವೆ,
ನಿಂಗೊಂಡು ಸತ್ಯ ಗೊತ್ತಾ?
ಅಂದು
ನಾ ಬಾಯಲ್ಲಿ ಬೆರಳಿತ್ತು
ಉಗುರು ಕಚ್ಚುತ್ತಿದ್ದಾಗ
ಅಮ್ಮ ಬೈದ ಳು ಅತ್ತ ಳು ಕರೆದ ಳು
ಕೊನೆಗೆ ಬೇಸತ್ತು ಸುಮ್ಮನಾದ ಳು
ಇಂದು
ನನ್ನ ಮಗ
ಮೂರು ಹೊತ್ತು ಬಾಯಲ್ಲಿ ಕೈ
ಉಗುರು ಕಚ್ಚಿದ್ದೆ ಕಚ್ಚಿದ್ದು
ಇದು ವ ಂಶಿಯವೋ
ಅನುವಂಶೀಯವೋ
ಇಲ್ಲ
ನೋಡಿ ಕಲಿ ಮಾಡಿ ತಿಳಿ
ಪರಿಪಾಲನೆಯೋ.............
- ಅಹರ್ನಿಶಿ.~.ಬೆಪ್ಪ.~.
ಅಕ್ಕ ನಾ ಬೆದರಿ ಬೆಪ್ಪನಾಗಿಹೆನು
ಬಾಳ ತೀರಕ್ಕೆ ಹೋಗಲಿ ಹೇಗಕ್ಕ
ಎಷ್ಟೊಂದು ಮೆಟ್ಟಿಲಿವೆ ಹತ್ತಲಿ ಹೇಗೆ
ಹತ್ತಿಹೋಗಲು ಜೊತೆಗೆ ಯಾರು ಬರುವರಕ್ಕ
ಸಾಕಿ ಸಲಹಲು ಅಪ್ಪ ಅಮ್ಮ ಇರುವರಪ್ಪ
ಆಡಿ ನಲಿಯಲು ಜೊತೆಗೆ ಗೆಳೆಯರಿಹರಪ್ಪ
ಸರಸ ವಿರಹಕ್ಕೆ ಸಂಗಾತಿ ಬರುವಳಪ್ಪ
ಕಣ್ಣಾಗಿ ಜೊತೆಗೆ ಸದಾ ನಾನಿರುವೆನಪ್ಪ
ಹಕ್ಕಿ ಪಿಕ್ಕಿಳು ಹಾಡು ಹಾಡುತ್ತಾವೆ
ಮರಗಿಡಬಳ್ಳಿಗಳು ತೂಗಿ ತಂಗಾಳಿ ಬೀಸುತ್ತಾವೆ
ಸೂರ್ಯ ಚಂದ್ರ ತಾರೆಯರು ಬೆಳಕು ಚೆಲ್ಲುತ್ತಾರಪ್ಪ
ಎಷ್ಟೆಲ್ಲ ಇದೆಯೋ ಈ ಸೃಷ್ಠಿಯ ಒಡಲಲ್ಲಿ ನೀನರಿಯೋ ಬೆಪ್ಪ
ಹಿಂದೊಂದು ಜನ್ಮದಲಿ ಜೊತೆಗಿದ್ದೆವಂತೆ
ಮುಂದೊಂದು ಜನ್ಮ ನಮಗಿದೆಯಂತೆ
ಹಿಂದು ಮುಂದುಗಳನು ನಾನರಿಯೆನಪ್ಪ
ಬೆದರದಿರು ಎಂದೆಂದು ಜನ್ಮದಂತ್ಯದವರೆಗು ನಾನಿನ್ನ ಜೊತೆಗಿರುವೆನು
ಇಷ್ಟೊಂದು ಸೊಗಸೆ ಈ ಬಾಳು ಅಕ್ಕ
ಬಾಳ ಹೊಕ್ಕಿ ನೋಡುವೆ ಇಂದೇ ನನ್ನಕ್ಕ
ಮೆಟ್ಟಿನಿಲ್ಲುವೆ ಬಂದ ನೂರು ಕಷ್ಟಗಳನ್ನೆಲ್ಲ
ಮುಟ್ಟಿ ಜಯಿಸುವೆ ಬಾಳ ತೀರವನಕ್ಕ
-
ಕುಮಾರ ಸ್ವಾಮಿ ಕಡಾಕೊಳ್ಳ