Monday 28 May, 2007

ಚಿತ್ರ - 3



ಕವನಗಳನ್ನು ಕವನಗಳಿಗೆ ಮೀಸಲಾದ ಜಾಗದಲ್ಲಿ ಬರೆಯಿರಿ. ಆಮೇಲೆ ಕವನಗಳನ್ನು ಅಲ್ಲಿಂದ ಇಲ್ಲಿಗೆ ಎತ್ತಿಕೊಳ್ಳಲಾಗುವುದು.
..
..ಕವನಗಳು-ಬರಹಗಳು...
.
..ಸಿಂಧು Sindhu ವಿಮರ್ಶಿಸಿದ್ದು ಹೀಗೆ.....
ನೇರನೋಟದಲ್ಲಿ ಕಂಡದ್ದನ್ನು ಅರಿಯುವುದೇ ಕಷ್ಟ.
ನಾವು ಕಾರ್ಪಯಣಿಗರ ಓಟಕ್ಕೆ ಬೇಕು
ದೂರಗ್ರಾಹೀ ಹಿನ್ನೋಟದ ಕನ್ನಡಿ...
ಕಂಡದ್ದು ಕಾಣಿಸಿದ್ದಕ್ಕಿಂತ ಹತ್ತಿರವಿರಬಹುದು,
ಕಾಣಬೇಕಾದ್ದು ಮರೆಯಾಗಿರಬಹುದು..
ಭಾವಲಹರಿಯ ಕಣ್ಣು ಹಾಯಿಸಿದರೆ, ರಸ್ತೆ ಕಾಣದೆ ಹೋಗಲೂ ಬಹುದು.
ಇದು ಕಷ್ಟದ ಹಾದಿ..
ಎಚ್ಚರದ ಪಯಣಿಗನೇ ಬೇಕು.
ಬದುಕಿನಂತಲ್ಲ..
ಪಯಣಿಸುತ್ತ ಕನಸ ಕಾಣುವಂತಿಲ್ಲ..
ಲಹರಿಯಲಿ ತೇಲುವಂತಿಲ್ಲ..
ಬೇಸರ ಬೇಡ ಮಿರುಗುವ ಪುಟ್ಟ ಕನ್ನಡಿಯೇ,
ನೀನಿಲ್ಲದೆ ನಾವು ಆಧುನಿಕರ ಓಟದ ಬದುಕು ಸಾಗುವುದಿಲ್ಲ.
ಹೇಗೆ ಹೇಳಲಿ,
ಒಳ(ಆಳ)ನೋಟದ ವಾಕಿಂಗ್ ಅಭ್ಯಾಸವಾಗಲೂಬಹುದು..

SHREE ನೆನಪುಗಳಿಗೆ ಸಿಕ್ಕಾಪಟ್ಟೆ ಬೈದುಕೊಂಡರು...

ಹಗಲು-ಕನಸು..
ಬಾಳ ಹಾದಿ ಇನ್ನುಳಿದಿದೆ ದೂರ
ಆದರ್ಯಾಕೋ ಹಿನ್ನೋಟದ ಸೆಳೆತ...
ಇಂದು ನಡೆವ ದಾರಿಯಲ್ಲಿದೆ ಹಸಿರು..
ಹಿಂದೆ ತಿರುಗಿದರೆ ಕಾಣದು ಉಸಿರು..
ಖಾಲಿತನದ ಮೇಲ್ಯಾಕೀ ಮೋಹ?
ಮನದ mUಲೆಯಲಿ ಯಾಕೀ ಮೌನ?
ಮರೆಯಲು ಸಾಧ್ಯವೆ ನಮ್ಮ ನೆನ್ನೆಗಳು?
ಬೆನ್ನಟ್ಟಿ ಬರುತಿಹವು ನಿನ್ನ ನೆನಪುಗಳು...
ಬಿಟ್ಟೆ ದಾರಿ, ಹೋಗಲೊಲ್ಲವು ಮುಂದೆ,
ನಾ ಹೋಗಲೆಳಸಿದರೆ ಅಪ್ಪಿಕೊಳುವವು ಬಿಡದೆ
..............
ಬದುಕಿಗೆ ಕನ್ನಡಿ ಸಾಕ್ಷಿಯಾಗಿಹುದು
ಮನದ ಕನ್ನಡಿಗೆ ಮಬ್ಬು ಕವಿದಿಹುದು
ಒರಸಿಹೆ ನೋವು, ನಗುವಿನ ನೀರ್ ಚೆಲ್ಲಿ
ತಿಳಿಯದ ಕನ್ನಡಿ - ನೆಲಸಿಹೆ ನೀನಿಲ್ಲಿ
ಬಾನ ವಿಸ್ತರವ ಬೊಗಸೆಗಿಳಿಸುವ ಚಪಲ
ದಿಟವ ಮರೆತು ಕನವರಿಸುವ ತವಕ
ಹೃದಯ ಹಕ್ಕಿಯೊಲು ಹಾರಿದೆ ಇಂದು
ಕನಸಿಗೆಲ್ಲಿ ಕೊನೆ? ಬಾನಿರುವುದು ಮುಂದು...
ಬಾಳ ಹಾದಿ ಇನ್ನುಳಿದಿದೆ ದೂರ
ಆದರ್ಯಾಕೋ ಹಿನ್ನೋಟದ ಸೆಳೆತ.....


ಶ್ಯಾಮಾ ಕೂಡ ನೆನಪುಗಳಿಗೆ ಬೈದರು....
* * *
ನಿನ್ನ ನೆನಪುಗಳ ಗಾಳಿ
* * *
ನನ್ನ ನಿನ್ನೆಗಳನ್ನೆಲ್ಲ ಮರೆತೇ ಬಿಡಬೇಕೆಂದು ನಾ ಹೊರಟರೆ
ಮತ್ಯಾಕೆ ಅವು ನನ್ನ ಬೆನ್ನ ಬಿಡುತ್ತಿಲ್ಲ..
ಬಾಗಿ ನೋಡುತ್ತಿರುವ ಆ ಕನ್ನಡಿಯಲ್ಲಿ ಬರೀ ನಿನ್ನೆಗಳದೇ ಬಿಂಬ
ಆ ಹಸಿರು ಹಾಸಿನ ನೆಲದ ಮೇಲೆ
ನಡೆಯ ಹೊರಟರೆ ಅಲ್ಲಿ ಬೀಸುತ್ತಿದೆ
ಬರೀ ನಿನ್ನದೇ ನೆನಪುಗಳ ಗಾಳಿ...
ಒಂಟಿಯಾದರೂ ನಾ ಒಂಟಿಯಲ್ಲ
ನನ್ನ ಸುತ್ತಲಿವೆ ನಿನ್ನ ನೂರು ನೂರಾರು ನೆನಪುಗಳು
ನಿನ್ನೆಯ ಆ ನೋವುಗಳು...
ಮನವು ಏನೋ ಮಾತಡುತ್ತಿದೆ ಆದರೆ ಏನೊಂದೂ ಕೇಳುತ್ತಿಲ್ಲ
ಬರೀ ಆ ಹಸಿರು ಬಯಲಿನ ಹಾದಿಯಲ್ಲಿ
ನಿನ್ನ ನೆನಪುಗಳ ಗಾಳಿಯದೇ ಅಬ್ಬರ
ಮತ್ತೆ ಕನ್ನಡಿಯತ್ತ ತಿರುಗಿ ನೋಡಿದೆ,
ಈ ಸಾರಿ ಕನ್ನಡಿಯೆಲ್ಲ ಮಬ್ಬು ಮಬ್ಬು
ನಿನ್ನೆಗಳ ಬಿಂಬವೂ ಕಾಣಲಿಲ್ಲ
ಮುಂದೆ ಸಾಗೋಣವೆಂದು ನಡೆಯುತ್ತಿದ್ದ ದಾರಿಯತ್ತ ನೋಡಿದೆ ಅಲ್ಲೂ
ಆ ಹಸಿರು ಹಾಸಿನ ನೆಲ ಕಾಣಲಿಲ್ಲ,
ಬಹುಶಃ ನಿನ್ನ ನೆನಪಿನ ಗಾಳಿಗೆ
ಒಡ್ದಿದ ನನ್ನ ಕಣ್ಣುಗಳು ಮಂಜಾಗಿದ್ದವು.


ಭಾವಜೀವಿ... ತಮ್ಮನ್ನು ತಾವು ಕಳೆದುಕೊಂಡರು..!!

ಕಳೆದ ನಾನು!
*************
ಸೂರ್ಯ ಮುಳುಗುವ ಹೊತ್ತು, ಯೋಚಿಸಿದೆ,
ಭವದ ಹಾದಿಯೊಳು ಬಂದು ಹೋದವರೆಷ್ಟು ?
ಕನ್ನಡಿಯೊಳಗಿನ ಗಂಟಾದರು ಕೆಲವರು,
ಮುಂದೆ ಸರಿದಂತೆಲ್ಲಾ ಹಿಂದೆ ಓಟಕಿತ್ತರು ಹಲವರು,
ಚಿತ್ತದೊಳಗಣ ಚಿತ್ರ ಹೊಳೆಯುತ್ತಲೇ ನನ್ನೊಡನಿತ್ತು
ನನ್ನೊಳಗಿನ ಬೆಳಗನ್ನೂ ಮೀರಿ ಮಿಂಚುತ್ತಿತ್ತು.
ಹಿಂದಿಕ್ಕಿ ಬಂದುದೆಲ್ಲಾ ಅದರ ಎದೆಯಲ್ಲಿ
ಯಾರದೋ ಬಿಂಬ, ಆಗಸದ ಸಣ್ಣ ತುಣುಕು
ಸಾಯುತ್ತಿರುವ ಸೂರ್ಯ, ನನ್ನದೇ ದಾರಿ,
ನನ್ನ ನೆರಳು, ಎಲ್ಲವೂ ಅಲ್ಲಿತ್ತು,
ಆದರೂ ನಾನೇಕೆ ಅಲ್ಲಿ ಕಾಣುತ್ತಿಲ್ಲ!?

Satish ಹಿಂದೆ ನೋಡಿದರೆ ತಪ್ಪೇನಿಲ್ಲವೆಂದರು...
ಹಿನ್ನೋಟದ ಕಿರುತೆರೆ
ಚಿಕ್ಕದಿರಲಿ ಚೊಕ್ಕವಿರಲಿ ಹಿಂದೆ ನೋಡ್ವ ಕನ್ನಡಿ
ಹಸನಬಾಳ್ವೆಗದುವೆ ಮೂಲ ಸ್ವಚ್ಛವಾದ ನಡೆನುಡಿ
ದೂರದೃಶ್ಯ ದೊಡ್ಡದಾದ ಗಾಜಿನಲ್ಲಿ ಕಂಡರೆ
ಹಳೆಯದನೆಲ್ಲ ನೆನಪಿಸುವ ಹಿನ್ನೋಟದ ಕಿರುತೆರೆ.
ದೊಡ್ಡದನ್ನು ಚಿಕ್ಕದಾಗಿಸೊ ಪೀನ ಮಸೂರ
ಎದಿರುಬರುವ ಮುಂಬಾಳಿಗೆ ಒಂದು ಅಸರ
ಹಿತವಾದ ಬದುಕಿಗೆ ಎರಡು ಕಣ್ಣು ಸಾಲದೆ
ವೇಗವಾಗಿ ನಡೆವುದು ಹೇಗೆ ಹಿಂದೆ ನೋಡದೆ.
ಚಾಲಕನೋ ಪ್ರಯಾಣಿಕನೋ ಯಾರಾದರೇನಂತೆ
ಒಬ್ಬೊಬ್ಬರಿಗೂ ಅವರವರದೇ ಚಿಂತೆ
ಹಿನ್ನೋಟದಿಂದ ಹಲವರ ಬದುಕು ಉಲ್ಬಣ
ಕೆಲವರಿಗೆ ಹಿನ್ನೋಟವಿರದೆ ಬಣಬಣ.
ಹಿನ್ನೋಟದಿ ಬದುಕನ್ನು ನೋಡುವುದೇ ಸೊಗಸು
ಕಿರುತೆರೆಗೆ ಅಲ್ಪ ಸಮಯ ಮುಡುಪಿಡುವುದೇ ಲೇಸು
..


MD - ಜೀವನದ ಆಗುಹೋಗುಗಳು ಅತಿಸಹಜವೆಂದು ಸ್ವೀಕರಿಸುವ ನೋಟ ಬೀರುತ್ತಾರೆ...

ಜಗದ ಈ ಪಯಣದಲಿ
ಮುಂದೆ ಮುಂದ್ಮುಂದೆ ನೋಡಿಯೇ
ಚಲಿಸುತ್ತ
ರಸ್ತೆಯ ತಿರುವಿನಲ್ಲಿ ಭೇಟಿಯಾದ
ಪಯಣಿಗರನ್ನು ಮರೆಯುತ್ತ
ಸಾಗಿದೆ ಈ ಜೀವನ

ಅಚಾನಕ್ಕಾಗಿ
ಹೊಳೆದಿದೆ ಈಗ
ಇರಲಿ ಕಣ್ಣು,ಮುಂದಿನ ಅನಿರೀಕ್ಷಿತಗಳಿಗೆ !
ಮರೆಯದಿರಲಿ ದಾಟಿ ಹೋದ ಆ ಘಳಿಗೆ

ನೋಡೋಣ ಬಾ
ಕಾಣುವ ಅಪೂರ್ವ ಭೂತವನ್ನು
ಮನಸಿನ ಗಾಜಿನಲಿ

ಕೆಣಕೋಣ ಬಾ
ಮೂಡಿ ಮರೆತು ಹೋದ ಪ್ರೀತಿಯ ಚಕ್ಕೆಗಳನ್ನು
ನೆನಪಿನ ದೋಣಿಯಲಿ

ಇದ್ದುಕೊಂಡು ಸಾಗಿಕೊಂಡು ಇಂದಿನ ಉಸಿರಿನೊಂದಿಗೆ

No comments: