Wednesday, 11 February 2009

ಚಿತ್ರ ೯೧



ತವಿಶ್ರೀ :
ಕಲಿತ ಪಾಠ


ಅಂಟಿಯೂ ಅಂಟದಂತಿಹುದು
ತನ್ನೆದೆಯ ಮೇಲಿನ ನೀರ ಗುಳ್ಳೆಯ ಹೊರುವುದು
ಹನಿ ಹನಿಯಾಗಿ ಬೀಳುವುದ ತಡೆವುದು
ತಡೆದು ಬಾಯಾರಿದವಗೆ ಉಣಿಸುವುದು

ತನಗೆ ಮಾತ್ರ ಹನಿ ಮಾತ್ರವೂ ಹಿಡಿದಿಟ್ಟುಕೊಳ್ಳದು
ಆರೈಕೆ ಇಲ್ಲದೆ ನಿಸರ್ಗದಿ ಬೆಳೆವುದು
ಮಂದಿ ಮಂದೆಗಳಿಗೆ ಉಣಿಸುವುದು
ಅನಂತ ಆಗಸ ಏರುವ ಛಾತಿ ಇದ್ದರೂ ಕೆಳಗೇ ನೋಡುತಿಹುದು

ಸ್ವಾರ್ಥಿಗೆ ನಿಸ್ವಾರ್ಥದರಿವು ಮೂಡಿಸುವುದು
ಎನಗಿಂತ ಕಿರಿಯರಿಲ್ಲ
ಎನಗೆಲ್ಲ ಹಿರಿಯರೆಲ್ಲ ಎಂದು ಸಾರುವುದು
ಇಂದಿದ್ದು ನಾಳೆಗೆ ಹೇಳಹೆಸರಿಲ್ಲದೆ ಹೋಗುವುದು

ತಡವಲು ಗಡುಸಿನಂತೆ ತೋರುವುದು
ಚಿವುಟಲು ಹಸುಗೂಸಿನಂತೆ ಕಣ್ಣೀರ್ಗರೆವುದು
ಎದುರಾಡದು, ಹಿಂಸಿಸದು
ಉತ್ತಮ ಪಾರಮಾರ್ಥಿಕ ಚಿಂತನೆಗೆ ಒತ್ತು ನೀಡುತಿಹುದು

ಅಂಟಿಯೂ ಅಂಟದಿರು
ಯಾರಿಗೆ ಯಾರೂ ಅಲ್ಲ
ಆತ್ಮಕೆ ನಂಟಿಲ್ಲ ಅಂಟಿಲ್ಲ ಎಂಬುದ
ಸುಲಭದಿ ಜೀವನ ಪರಿಯ ತಿಳಿ ಹೇಳುವುದು

ಇದರಿಂದ ಕಲಿವ ಪಾಠ ಇಹುದಲ್ಲವೇ?
ನಿಸರ್ಗದ ಅಂಶವಿದು ದೈವಾಂಶವಲ್ಲವೇ?
ಇದ ತಿಳಿವುದು ಸುಲಭವಲ್ಲವೇ
ನಿಸರ್ಗವ ರಕ್ಷಿಸೋಣ - ನಮ್ಮನು ನಾವು ರಕ್ಷಿಸೋಣ

Wednesday, 4 February 2009

ಚಿತ್ರ ೯೦



ತವಿಶ್ರೀ :
ದೈವಾಂಶ

ದೂರ್ ಸೆ ದೇಖಾ ತೊ ಪತ್ಥರ್ ಪಡಾ ಥ
ಓ ತೊ ಅಪನಾ ಸಾಯಿಬಾಬಾ ಥ

ತೋ ಹೈ ದಾತ ತೋ ಹೈ ವಿಧಾತಾ
ತುಮ್ಹೀ ಪಿತಾ ತುಮ್ಹೀತೊ ಮಾತಾ
ತೂನೆ ಸಬಕೀ ಬಿಗಡೀ ಬನಾಯೀ ...
ತೂನೆ ಅಪನಾ ರೂಪ ದಿಖಲಾಯಿರೇ

ರವಿಯ ಪ್ರಖರತೆ ತಾಳಲಾಗುವುದೇ!
ಹೊಂಬೆಳಕಿನ ಶಕ್ತಿಯನಾದರೂ
ತಡೆಯಲಾಗುವುದೇ?
ತೇಜೋಮಯ ಆತ್ಮಗಳೂ, ಆ ಶಕ್ತಿಯ
ಮುಂದೆ ಗೌಣವೆನಿಸದಿರದೇ?

ಮೆಟ್ಟಿಲು ಹತ್ತಲೂ ಬೇಕು ಶಕ್ತಿ
ಇಳಿಯಲೂ ಬೇಕು ಶಕ್ತಿ
ಕೂರಲೂ ಬೇಕು ಶಕ್ತಿ
ನೇಸರನೇ ಆ ಶಕ್ತಿಯ ಮೂಲ

ಶಕ್ತಿ ಇಲ್ಲದಿರೆ ಯುಕ್ತಿಯಾದರೂ ಆದೀತು
ಯುಕ್ತಿಗೆ ಬೇಕು ಮನದಲಿ ಶಕ್ತಿ
ಯುಕ್ತಿಗೂ ಬೇಕು ಶಕ್ತಿ
ಆ ಶಕ್ತಿಯೂ ನೇಸರನ ಯುಕ್ತಿ

ಏರುವವರೆಗೆ ಬೇಕು ಯುಕ್ತಿ ಶಕ್ತಿ
ಏರಿದವ ತೋರುವನು ವಿರಕ್ತಿ
ವಿರಕ್ತಿ ಮೂಡಲು ಬೇಕು ಭಕ್ತಿ
ಎಂದಿಗೂ ಆತನಲಿರಲಿ ಭಕ್ತಿ

ನೇಸರನು ನಿಸರ್ಗದ ಅಂಶ
ಆ ಅಂಶಭೂತ ದೈವಾಂಶ
ಆತನಿಗೆಂದಿಗೂ ನಾ ಶರಣ
ಧೂಳಾಗಿರುವೆ ನಿನ್ನ ಚರಣ
ನಿನ್ನ ಕೃಪೆಯವರೆಗೆ ಎನಗಿಲ್ಲ ಮರಣ
ತೋರು ದೇವ ಎನ್ನ ಮೇಲೆ ಕರುಣ