Thursday, 9 April 2009

ಚಿತ್ರ ೯೯




ತವಿಶ್ರೀ:
ನೀರ ಗುಳ್ಳೆ, ಜೀವದ ಸಂಕೇತ

ಮೊನಚು ಹುಲ್ಲಿನ ಕೊನೆಯಲಿ
ಗಟ್ಟಿ ಹಿಡಿತದಿ ಕುಳಿತಿಹ
ಮುತ್ತಿನೋಪಾದಿಯಲಿಹ
ಯಾವ ಕ್ಷಣದಲೂ ಮಾಯವಾಗಬಹುದಾದ

ಗರಿಕೆಯ ಒಣಗದಂತೆ ಕಾಪಾಡುವುದು
ದರ್ಪದ ತೋರಿಕೆಯ ಕೊಡುತಿಹುದು
ಈಗಿಹ ಗುಳ್ಳೆ ಇನ್ನೊಂದು ಕ್ಷಣ ಇರದಿರಬಹುದು
ಹಸುರು ಗರಿಕೆ ಒಣಹುಲ್ಲಾಗುವುದು

ಗುಳ್ಳೆ ಒಡೆಯಲೂಬಹುದು
ಆಸಕ್ತಿಯ ವಿರಕ್ತಿಗೊಳಿಸಬಹುದು
ಮುತ್ತಾಗಲೂಬಹುದು
ಮುಡಿಯೇರಬಹುದು

ರಾಗಕೆ ವಿರಾಗವ ತೋರುವುದು
ವಿರಾಗದಿ ತರಂಗವ ತೂರುವುದು
ಹುಟ್ಟಿಗೆ ಸಾವನು ತೋರಿಪುದು
ಜೀವ ಜೀವನ ಮರ್ಮವ ಜಗಕೆ ಸಾರುವುದು

ಬಿಳಿ ಬಣ್ಣಕೆ ಜೀವ ಕೊಡುವುದು
ಕಾಮನಬಿಲ್ಲನು ಸೃಷ್ಟಿಸಬಹುದು
ಜೀವರಾಶಿಗೆ ತಂಪೆರೆಯಬಹುದು
ಜ್ವಾಲೆಯ ನಂದಿಸಲೂ ತಿಳಿದಿಹುದು

ಆತನ ಕರುಣೆ ಇಲ್ಲದೇ
ನಿಂತಿಲ್ಲ ಈ ಹುಲ್ಲು
ನಿಲಲಾರದು - ಅಲ್ಲಾಡಲಾರದು
ಎಲ್ಲವೂ ಆತನ ಕರುಣೆಗೆ ಕಾದಿಹುದು

ಈ ಗುಳ್ಳೆ ತಿಳಿ ಹೇಳುತಿದೆ
ಜೀವನದ ಮರ್ಮ
ಅಂಟಿಯೂ ಅಂಟದಂತಿರು
ಇಂದಿಹುದು ಇಲ್ಲದಿಹುದು
ಮುಂದಿನ ಕ್ಷಣ ಇಲ್ಲದಿರಬಹುದು

Wednesday, 1 April 2009

ಚಿತ್ರ ೯೮



ತವಿಶ್ರೀ:

ಮೌನ ಗೋಪುರ (ಟವರ್ ಆಫ್ ಸೈಲೆನ್ಸ್)


ನಾನೂ ನೀನೂ ಜೋಡಿ
ಹೆಜ್ಜೆ ಇಡುವ ಅತ್ತ ಇತ್ತ ನೋಡಿ
ಕೆಳಗಿಹರು ಕುಶಾಗ್ರಮತಿಗಳು
ಸ್ವರ್ಗ ತೋರಿಸುವುದು ವಿದ್ಯುತ್ತಿನ ತಂತಿಗಳು

ಕಾಲ ಬುಡದಲ್ಲಿಲ್ಲ ಆಹಾರ
ನೆಲದ ಹುಳು ಹೊಟ್ಟೆ ಸೇರಲೊಲ್ಲ
ಹಸಿವ ಮರೆಯುವುದೆಂತು
ಹರಿದು ತಿನ್ನಲು ಕಾಯುತಿಹರು ಕೆಳಗೆ ನಿಂತು

ದೂರವಿರಲಿ ಜೋಡಿ ತಂತಿಗಳು
ಮಸಣ ಸೇರಿಸುವುವು ಅವು ಸೇರಲು
ಸೇರದಿರದಂತೆ ಜೋಪಾನವಿರಲಿ
ಬಿಸಿಲೇನು ಮಳೆಯೇನು ಕಾಲು ಗಟ್ಟಿ ಇರಲಿ

ಮಾನವನ ಹೆಣ ಬಂದು ಬೀಳಲಿ ಬಾವಿಯಲಿ
ನಮ್ಮೀರ್ವರ ನಿರೀಕ್ಷೆ ಅದೇ ಆಗಿರಲಿ
ನೀರಿರದ ಬಾವಿಯಲಿ ನಮ್ಮ ಸರಕು ಬರಲು
ಗುರಿಯಿರಲಿ ಬಾವಿಯೊಳ ನಾವು ಸೇರಲು

ನಿಸರ್ಗದಿಂದ ಬಂದ ಜೀವ ನಿಸರ್ಗ ಸೇರಲಂತೆ
ಇದೇ ಅವರ ತತ್ವವಂತೆ
ನಾವುಗಳೇ ಮೋಕ್ಷ ತೋರಿಪ ದೈವವಂತೆ
ಏನಾದರೇನಂತೆ ಎಂತಾದರೇನಂತೆ
ನಮ್ಮ ಹೊಟ್ಟೆ ತುಂಬಿದರೆ ಸಾಕಂತೆ
ಇದೇ ನಮ್ಮ ತತ್ವವಂತೆ