Monday, 25 June 2007

ಚಿತ್ರ - 7



ಕವಿತೆ ನೇಯ್ದವರು...

ದಡದಿ ತಂಗಿರುವ ಆಸೆ ದೋಣಿಯನೇರಿ
ಬದುಕ ನೀಲಿ ಸಮುದ್ರದಲಿ ಸಾಗಿ
ಪರಿಶ್ರಮದ ಹುಟ್ಟುಹಾಕಿ ಮೀಟಿ
ಕಷ್ಟದಲೆಗಳ ಹಿಂದೆ ನೂಕಿ
ದಿನದ ಬುತ್ತಿಯ ಹಿಡಿದು ಬಲೆಬೀಸಿ
ನಾಳೆಗೂ ಒಂದಷ್ಟು ಉಳಿಸಿ

ಮತ್ತದೇ ದಡಕೆ ಹಿಂದಿರುಗಿ ಮಲಗುವ ಮುನ್ನ-
ಹೊಲಿಯಲೇಬೇಕಿದೆ ಹರಿದು ಹೋಗಿರುವ ಕನಸ ಬಲೆಗಳನ್ನ...

- ಸುಶ್ರುತ ದೊಡ್ಡೇರಿ

ನೇಯುತ್ತೇವೆ ನಾವು....

ಕನಸುಗಳ ಹೆಣೆಯುತ್ತೇವೆ, ಇಳಿಗಾಲದಲ್ಲಿ
ಹೊರೆಹೊರುವ ಬಲವೀಯುತ್ತೇವೆ ಬಲೆಗೆ
ಹೆಣೆದೇ ಹೆಣೆಯುತ್ತೇವೆ, ಬುತ್ತಿಗಳ ನೆನಪಲ್ಲಿ
ಇಂದು ತಂದಿದ್ದನ್ನು ನಾಳೆಗೆ ಉಳಿಸಿಕೊಳ್ಳುವವರೆಗೆ.

ನೆಲೆಯಿಲ್ಲದ ನೀರಿನಲ್ಲಿ ನಮ್ಮ ಜೀವ ಸೆಲೆ
ಸೆಳೆತದೊಳಗೆ ಎಳೆಯಬೇಕು ಜೀವ ಬಲೆ
ಅಲೆಯೆದುರಿನ ಬದುಕು, ಅಸಂಖ್ಯ ಜೀವ ನೆಲೆ
ಅಳೆದೂ ಅಳೆಯಲಾಗದ ಅದಮ್ಯ ಜೀವ ಕಲೆ.

"ಹೊಯ್" ಅಂದಾಗ ಸೇರಿಕೊಳ್ಳುವ ಬಲ
ಒಂದಾಗಿ ದುಡಿದಾಗ ಕೂಡಿಕೊಳ್ಳುವ ಬಲ
ಹಲವು ಹಸ್ತಗಳಲ್ಲಿ ಗುರಿಯೊಂದರ ಬಲ
ಸೇರಿ ಬಾಳುವಲ್ಲಿ ನಾಳೆಗಳಿಗೆ ಬೆಂಬಲ.

- ಸುಪ್ತದೀಪ್ತಿ

ಎರಡು ಪೂರಕ ಸ್ವಗತ

ಜಲವಾಸಿ - ಮೀನ ರಾಶಿ:
ಗೊತ್ತಿದೆ ನೀನು ಹಿಡಿಯುತ್ತೀ ಅಂತ
ಆದ್ರೂ ಬಂದು ಸಿಗುತ್ತೇನೆ ನಾನು ಗಾಳಕ್ಕೆ
ನಾನೇನೋ ತಿನ್ನಲು ಹೋಗಿ ಸಿಕ್ಕಿಬಿದ್ದೆ ನಿನಗೆ
ಎಂಬ ಭಾವದ ಆಟವೆಷ್ಟು ಚೆನ್ನ
ಅದು ಸಾವಿನಾಟವಾದರೂ.

ಸುಮ್ಮನೆ ಹೊರಟಿದ್ದೆವು ನಾವು ಗೆಳೆಯರ ಗುಂಪು
ಏನೂ ತಿನ್ನಲಲ್ಲ, ಯಾವುದನ್ನೂ ಕಚ್ಚಲಲ್ಲ
ಇದ್ದಕ್ಕಿದ್ದಂತೆ ಬಂದೆರಗಿ ಹಿಡಿದುಬಿಟ್ಟಿದೆ
ಬಲೆ ತಾನೇ ತಾನಾಗಿ, ಇದು ಬೇಕಿರಲಿಲ್ಲ
ಇಲ್ಲಿ ಆಟವಿಲ್ಲ, ಮಾಟವಿಲ್ಲ, ಬರಿಯ ಸಾವಿನ ಹೂಟ!

ನೆಲವಾಸಿ-ಧನುರ್ ರಾಶಿ:
ಬಿರುಬಿಸಲು, ಸುರಿವ ಮಳೆ-ಗಾಳಿ, ಅಬ್ಬರಿಸುವ ಕಡಲು
-ಗಳ ಮಧ್ಯೆ ನಮ್ಮ ಜೀವ ಹಿಡಿದು, ನಿಮ್ಮ ಜೀವ ಕಳಚಿ
ಮಾರ್ಕೆಟಲ್ಲಿ ಕಾಯುವ ಕೈಗಳಲ್ಲಿ ನಿಮ್ಮನ್ನೆಸೆದು
ಮನೆಯಲ್ಲಿ ಕಾಯುತ್ತಿರುವ ಕೈಗಳಿಗೆ
ಊಟ ಹಿಡಿದು ಹೋಗುತ್ತೇವೆ ನಾವು;
ಇಲ್ಲ ಇದು ಆಟವಲ್ಲ, ನಮಗೆ ಬರಿಯ ಬದುಕು.

ಅಲ್ಲಲ್ಲಿ ಹೊಲಿಗೆ ಬಿಟ್ಟ ಬದುಕಿನ ಕಿಂಡಿಗಳ
ಗೋಡೆ ಬೀಳದಿರಲು, ಹೊಲಿಯುತ್ತಿದ್ದೇವೆ-
ಹಿಡಿದಿಟ್ಟ ನೀವು ತಪ್ಪಿ ಹೊಗದಿರಲು.
ಇದು ಆಟವಲ್ಲ, ಹರುಕು
ಬದುಕಿನ ತೇಪೆ.

ಆಟ ಆಗ ಮಾತ್ರ, ಸುಮ್ಮನೆ ಹೊರಟ
ನಿಮಗರಿವಾಗದಂತೆ ಬೀಸಿ ಹಿಡಿವಾಗ,
ಕ್ಷಣ ಮಾತ್ರ ಆಟ, ಮತ್ತೆಲ್ಲ ಬದುಕು.

- ಸಿಂಧು

ಭಲೆ ಬಲೆ!

ಜೀವಜಲವ ಹುಡುಕುವಂಥ ಸಾವಿರ ಕಣ್ಣಿನ ಬಲೆ
ಬಿಡಿಸಬೇಕು ಹೆಣೆಯಬೇಕು ಬದುಕೆನ್ನುವ ಕಲೆ
ಗೋಣು ಬಗ್ಗಿಸಿ ದುಡಿಯದಿರೆ ಸುಟ್ಟೇಬಿಡುವ ಸೂರ್ಯ
ಯಾರು ಇರಲಿ ಯಾರು ಬಿಡಲಿ ನಿಲ್ಲದು ಕೈಂಕರ್ಯ.

ಹಲವು ನೀರ ತನ್ನೊಡಲಲಿ ಬಿಟ್ಟು ದೂರ ಸಾಗಿಹುದು
ಹಲವು ತೀರ ಕಂಡು ತಾನು ಪೋಣಿಸಿ ನೋಡಿಹುದು
ಭಲೆ ಬಲೆ ಎಂದವರಷ್ಟೇ ಏನೋ ಅರಿತ ಮಹಾಜಾಲ
ನೀರನಷ್ಟೇ ಅಲ್ಲ ಗಾಳಿಯನೂ ಸೋಸಿಬಿಡುವ ಛಲ.

ತೇವವೆಲ್ಲಿ ಒಣಗಿಹೋಯ್ತು ಜೀವಜಲದ ಮರೆಯೇ
ನೀರಿರದ ಕಡಲಿಗೆ ನಾವೆ ದೂಕುವುದು ಸರಿಯೇ
ತಮ್ಮ ಕೆಲಸ ತಾವು ಕಂಡು ಒಣಗುತಿಹರು ಪಾಪ
ಇವರ ನಡುವೆ ಒಂಟಿ ತಾನು ಛತ್ರಿ ಹಿಡಿದ ಭೂಪ.

ಭಲೆ ಎನ್ನುತ ಅದೇ ನೀರಿಗೆ ಬೀಸುವುದು ನಮ್ಮ ಬಲೆ
ಸಿಗುವುದು-ಬಿಡುವುದು ಎಲ್ಲ ಆ ದೇವನಿಗೆ ಬಿಟ್ಟ ಕಲೆ.

- ಸತೀಶ್

Monday, 18 June 2007

ಆರನೆಯ ಚಿತ್ರ









Satish ಚಿತ್ರದೊಳಗಿನ ನಿರಾಶೆಗೆ, ನಿರ್ಲಿಪ್ತತೆಗೆ ದನಿಯಾಗಿದ್ದಾರೆ...

ನಾವಿರುವ ದೇಶ ಹಳ್ಳಿ

ಬಡತನದಿ ಸೊರಗಿ ಬಿಸಿಲಿನಲಿ ಕರಗಿ
ಅರಿತಿಹೆವು ಇಹದ ಮರ್ಮ
ತಂಪಿನಲಿ ಕುಳಿತ ಬಿಳಿ ಅಂಗಿ ಜನರು
ಕಂಡಿಹರೆ ನಮ್ಮ ಕರ್ಮ

ಇಂದಿನಾ ಕೂಳು ಮುಂದಿನಾ ಬಾಳು
ನಮ್ಮ ನೋಟ ಕಟ್ಟ ಕಡೆಗೆ
ದಿನದಿನವು ನಿಮ್ಮ ಮುನ್ನಡೆಸುತಿರಲಿ
ನಾವು ಕೊಟ್ಟ ತೆರಿಗೆ

ಕಳವಳದ ಕಣ್ಣು ತಳಮಳವೆ ಇನ್ನು
ನೆರಳನೂ ಸುತ್ತೋ ಬಳ್ಳಿ
ಎದೆ ನಿಮದು ಎದ್ದು ಹಾರಿದರೆ ಏನು
ನಾವಿರುವ ದೇಶ ಹಳ್ಳಿ

ಕೈಗಂಟು ಮಂಡಿ ಬರಿ ಕಾಲ ಬಂಡಿ
ಸೂರಾಗೆ ಹುಲ್ಲು ಹಾಸು
ತಿಳುವಳಿಕೆ ಬೆಳೆದು ಅರಿವಳಿಕೆ ಕಳೆದು
ದೂರಾಗೆ ನಮ್ಮ ಕಾಸು

ವರುಷಗಳು ಉರುಳಿ ಪ್ರತಿ ಪಕ್ಷ ತೆರಳಿ
ದಿನಕೊಂದು ರಾಜ ಮಂತ್ರ
ನಮ್ಮೊಳಗಿನಾ ಸ್ವರವು ಬದಲಾಗದಾಯ್ತು
ಉಳಿದಿಹುದೇ ಹೊಸತು ತಂತ್ರ


ಸಿಂಧು Sindhu ಇಲ್ಲಿ ಚೋಮನದುಡಿಯ ಬೆಳ್ಳಿಯರನ್ನು ಕಂಡಿದ್ದಾರೆ, ಅವರನ್ನು ಚಿತ್ರ ತೆಗೆದವರ ಜತೆ ಮಾತಾಡಿಸಿದ್ದಾರೆ...

ಬೆಳ್ಳಿಯರು..

ನೆರಳಿನಲ್ಲಿ ಅವಳು, ಬೆಳಕಿನಲ್ಲಿ ಇವಳು
ಬೆಂಗಡೆ ಹಬ್ಬಿದ ತೊಂಡೆಬಳ್ಳಿಯ ಕುಳಿರು.
ನೆರಳ ತಂಪು ಸುಖವೊ, ಬೆಳಕ ಹೊಳಪು ಚೆಲುವೊ?
ನಕ್ಕ ನಗೆಯಲ್ಲಿ ಇಣುಕಿದ್ದು ನಾಚಿಕೆಯ ಮುಳ್ಳೊ?
ಕಡ್ಡಿಪುಡಿ ತಿಂದು ಕಪ್ಪಗಿದ್ದರು ಹೊಳೆವ ಹಲ್ಲೊ?
ಚೋಮನ ಬೆಳ್ಳಿಯ ಹಲ ರೂಪಗಳೊ?
ಫ್ಯಾಶನ್ ಬಿಚ್ಚಮ್ಮಗಳ ಅಣಕಗಳೋ?

ಉರಿಬಿಸಿಲಲ್ಲಿ, ಹೂಟಿ ಮಾಡಿ ಸುಸ್ತಾಗಿ ಆಸರಿಗೆ ಕೂತ್ರೆ ಕೂಸೆ,
ನೀ ಯೆಂತ ಕಪ್ಪು ಡಬ್ಬಿ ಹಿಡಿದು ಬಣ್ಣದ ಚಿತ್ರ ತೆಗಿಯೂದು
ಅಂದು ನಕ್ಕವರ ನಗುವಲ್ಲಿ -
ವಿಷಾದ ಕಂಡಿತೆ - ನಿಮ್ಮದು ಕೆಂಪು ಹಾದಿ, ದಲಿತ ಚಳುವಳಿಯೂ ಇರಬಹುದು..
ರಸ್ಟಿಕ್ ಬ್ಯೂಟಿ ಅನಿಸಿತೆ - ಇಂಗ್ಲಿಷ್ ಕವಿತೆ ಓದಿ ಕನ್ನಡ ಬರೆವವರ ಬೀದಿ,
ಅಯ್ಯೋ ಇದೆಲ್ಲ ನೋಡಕ್ಕೆ ಸಮಯವೆಲ್ಲಿ ಅಂದಿರೇ - ಯಶಸ್ಸಿನ ಬೆನ್ನು ಹತ್ತಿದ ಬಿಸಿನೆಸ್, ಐಟಿ-ಬೀಟಿ ಮಂದಿ..
ಬದುಕಿನ ಬನಿ ಹನಿಯಾಗಿ ಹರಿಯಿತೆ-
ಒಲವು ಚೆಲುವು ಅಳಲು ಕೂಡಿ ನಕ್ಕ ನೂರು ನೋಟ ಕಂಡಿತೆ?
ಹಾಗಿದ್ದರೆ, ನೀವು ನೊಂದ ಹೃದಯದ ಹಾಡು ಕೇಳುತ ಜೊತೆಗೂ ಹಾಡಿ,
ವರ್ಗೀಕರಣವೆಲ್ಲ ನಮಗೇಕೆ, ರಾಜಕೀಯಕ್ಕೆ, ಮಾಧ್ಯಮಗಳಿಗೆ ಬಿಡಿ.

ಅವರನ್ನೇ ಕೇಳಿ, ನಕ್ಕು, ಹಿಂದೆ ಒರಸಿಕೊಳ್ಳುತ್ತಾ ಎದ್ದು ಹೋಗುತ್ತಾರೆ,
ಆಸರಿ ಕುಡಿದಾಯಿತು, ಕೆಲಸ ಮಾಡಲು ಬಿಡಿ...