Monday 30 July, 2007

ಚಿತ್ರ - 12




ಸಿಂಧು ಆಸ್ಪತ್ರೆಗೆ ಭೇಟಿನೀಡಿದ ಹಿರಿಯ ದಂಪತಿಗಳ ಮನಸನ್ನು ಬಿಚ್ಚಿಡುತ್ತಾರೆ...

ನಾವಿಬ್ಬರು..
-----------
ನಾವಿಬ್ಬರೂ ಇಲ್ಲಿ
ಮಾರ್ಥಾಸ್ ಆವರಣದ ಬೆಂಚಿನಲ್ಲಿ
ಸುತ್ತ ಜಂಗುಳಿ
ಗುಂಪಿನಲ್ಲೂ ಒಬ್ಬರಿನ್ನೊಬ್ಬರ
ಕೈಹಿಡಿದು, ತಬ್ಬಿ ಸಾಂತ್ವನದ ಹೊರಳು

ನಾವಿಬ್ಬರೂ ಇಲ್ಲಿ
ಹೊಳೆವ ಬೆಳಗಿನ ಚುರುಚುರು ಬಿಸಿಲಲ್ಲಿ
ಡಾಕ್ಟರ್ ದೇವತೆಯ ಟೋಕನ್ ಪಡೆದು
ದರ್ಶನಕೆ ಕಾದು
ಮುಂದೇನು ಎಂಬ ಧಾವಂತವ
ದಬ್ಬಿ ಚೀಲದಲ್ಲಿಟ್ಟು
ಪತ್ರಿಕೆಯ ಸುದ್ದಿಯ ಕುತೂಹಲದ ಓದು,
ಈ ಬಾಗಿಲಲ್ಲಿ ಬಂದವರು ಎಮ್ಮವರೆ
ಅಲ್ಲಿ ನಿಂತು ಕೂಗುವುದು ನಮಗೆಯೇ
ಸುತ್ತೆಲ್ಲ ನೋಟದ ಹೊರಳು..

ನಾವಿಬ್ಬರೂ ಇಲ್ಲಿ,
ಜಂಗುಳಿಯಲ್ಲಿ, ಎಳೆಬಿಸಿಲಿನಲ್ಲಿ..
ಇಳಿಸಂಜೆ ಮನದಲ್ಲಿ.
ಮನಕಿಳಿವ ಕತ್ತಲೆಯಲಿ
ನಕ್ಷತ್ರವೋ ಮೋಡಮುಸುಕೋ
ರಿಪೋರ್ಟು ಹೇಳಬೇಕಿದೆ..

ಎಲ್ಲರೊಡನೆ ಕಾದು ಕೂತಿದ್ದರೂ
ನಾವಿಬ್ಬರೇ ಇಲ್ಲಿ,
ಇಲ್ಲ ನಾನು ಹೇಳುವುದಿಲ್ಲ
ಬಹುಶಃ ಮಕ್ಕಳಿರಬೇಕು ಆಫೀಸಿನಲ್ಲಿ..

ಪಾರಿಜಾತ ಬಾಳಸಂಜೆಯ ಪಯಣಿಗರನ್ನು ಹೀಗೆ ಬಣ್ಣಿಸುತ್ತಾರೆ...

೧.
ಜನ್ಮಜನ್ಮಗಳ ಸಹಚರರಿವರು
ಜೀವನಯಾತ್ರೆಯ ಪಯಣಿಗರು
ಬಾಳಿನ ಸಂಜೆಯ ಸೊಬಗ ಹೀರುವರು
ಜೊತೆಜೊತೆಯಾಗಿಯೆ ನಲಿಯುವರು

೨.
ಕಣ್ಣಲಿ ಸೋಡ ಇದ್ದರೇನಂತೆ
ಚೆಲುವು ನೋಡುವರ ಕಣ್ಣಲ್ಲಿ!
ಅವರ ಕಣ್ಣಿಗಿವರೆಂದೂ ತರುಣಿಯೆ,
ಇವರ ಕಣ್ಣಿಗವರೂ ತರುಣ!

ಚಿತ್ರದಲ್ಲಿರುವವರ ನಿರ್ವಿಕಾರತೆಯನ್ನು ಸತೀಶ್ ವಿವರಿಸುವುದು ಹೀಗೆ...

ನೀವೂ ಮತ್ತು ನಿರ್ವಿಕಾರತೆ
---------------------
ಏನ್ ಸಾರ್ ಫುಟ್‌ಪಾತ್ ಮಧ್ಯೇ ಕೂತಿದ್ದೀರಲ್ಲಾ ಚೇರ್ ಹಾಕಿ
ನಿಮ್ ಸುತ್‌ಮುತ್ಲೂ ಅದೇನೇನೋ ಆಗ್ತಾ ಇದ್ರೂ
ನಿಮ್ ನಿರ್ವಿಕಾರತೇನೇ ಎಲ್ರನ್ನೂ ಹೆದರಿಸೋ ಹಾಗಿದೆ ನೋಡಿ.

ನಿಮ್ ಹಿಂದೇ, ಅಲ್ಲೇನೋ ಸಿನಿಮಾ ಶೂಟಿಂಗ್ ನಡೀತಿರೋ ಹಾಗಿದೆ
ಇಲ್ಲಾಂದ್ರೆ ಈ ಕಾಲ್ದಲ್ಲಿ ಒಬ್ರನ್ನ್ ಒಬ್ರು ಆಲಂಗಿಸೋ ಮಾತಿದೆಯೇ?
ಕಾಲ ಕೆಟ್ಟೋಯ್ತು ಅಂದ್ರಾ, ಆ ಕಾಲ ಯಾವಾಗ್ ಕೆಡ್ಲಿಲ್ಲಾ ಹೇಳಿ?

ಹೌದು, ಈಗಿನ್ ಕಾಲ್ದಲ್ಲಿ ನೀವು ಎಲ್ಲವನ್ನೂ ಗಟ್ಟಿಯಾಗಿ ಹಿಡ್ಕೊಂಡಿರಬೇಕು
ನಿಮ್ ಚೇರೂ ನಿಮ್ ಚೀಲ ನಿಮ್ ಛತ್ರಿ ಜೊತೆಯಲ್ಲಿರೋ ನಿಮ್ಮನೆಯವರನ್ನೂ,
ಕಾಯ್ತಾ ಇರೋ ನಿಮ್ಮನ್ನ ಏಮಾರಿಸೋಕೆ ಎಷ್ಟೋ ಜನ ಕಾಯ್ತಾ ಇರ್ತಾರೆ.

ಮಗಳು ಮದುವೆ ಮಾಡೋ ಯೋಚ್ನೆ ನಿಮ್ ತಲೇಲಿರಬಹುದು
ಸವೆದ ಬದುಕಿಗೆ ಬಸವಳಿದ ಜೀವ್ನಾ ನಿಮ್ಮದಾಗಿರಬಹುದು
ಹಾಗಿದ್ದೂ ದೈನಂದಿನ ವಿದ್ಯಮಾನಕ್ಕೆ ಸ್ಪಂದಿಸೋ ನಿಮ್ಮ ನೀತಿ ದೊಡ್ದೇ.

ನಾನಾ ಸವಾಲುಗಳಿಗೆ ಒಗ್ಗಿಕೊಂಡಿರೋ ನಿಮಗೆ ಸಾಂತ್ವನವಿದೆಯೋ ಗೊತ್ತಿಲ್ಲ
ಇನ್ನೂ ಕಣ್‌ಬಿಡ್ತಾನೆ ಕೊರಗ್ತಿರೋ ನಮಗೆ ಮಸ್ಸಾಜ್ ಪಾರ್ಲರ್ ಇದೆಯಲ್ಲಾ!

Monday 23 July, 2007

ಚಿತ್ರ - 11



ರಾಘವೇಂದ್ರ ಪ್ರಸಾದ್ ಪಿ. ಕಾಯುವುದೇ ಜೀವನದ ಧ್ಯೇಯ ಎನ್ನುತ್ತಾರೆ...

ಕಾಯುವುದೇ ಜೀವನದ ಧ್ಯೇಯ
ನಂಬಿಕೆಯಲ್ಲೇ ತೇಲುವುದು ಈ ಪಯಣ
ಬಂದೇ ಬರುವುದು ನಮ್ಮ ಜೀವನದ ರೈಲು
ತಂದೆ ತರುವುದು ಸಂತಸ ನೆಮ್ಮದಿಯ ಹುಯಿಲು.


ಸತೀಶ್ ಕಾಯುವ ಬಗೆಯ ಆಯಾಮಗಳನ್ನು ವಿವರಿಸುವುದು ಹೀಗೆ...

ಹೋಯಿತು ಬಂಡಿ ಎಂದು ಚಿಂತೆ ಮಾಡುವ ಹೊತ್ತು ಇದಲ್ಲ
ಮುಂದೆ ಬರಬಹುದಾದ ಬಂಡಿಯ ದಾರಿಯ ನೋಡಲ್ಲ
ಕಾಯುವಾಗ ಕಲ್ಪನೆ ನೂರು ಭಾವನೆ ಹಲವು ಬಗೆ
ಕೈ ಕಾಲ್ ಮೈ ಚಾಚಿಕೊಂಡು ಕೂರುವ ನಮ್ಮೊಳಗೆ.

ನಮ್ಮ ನಿಲುವಿಗೆ ತಕ್ಕ ನಮ್ಮ ಚೀಲ, ಚೀಲಕ್ಕೆ ತಕ್ಕ ನಿಲುವು
ಒಂದೇ ಒಂದು ದೃಶ್ಯದಲ್ಲಿ ವೈವಿಧ್ಯತೆ ಹತ್ತು ಥರವು
ಭಿಕ್ಷುಕನಿಂದ ಹಿಡಿದು ಧೀಮಂತನವರೆಗೆ ವಿಧವಿಧ ಯೋಚನೆ
ಹಿನ್ನೆಲೆಯಲ್ಲಿ ಹೊಸವಿನ್ಯಾಸದ ಹಲವು ರಚನೆ.

ಹತ್ತು ಜನ ನಾವು ಇಹೆವು ಹತ್ತು ರೀತಿ
ಗಾಡಿ ಬರದಿಹುದೇ ಇಂದು ಎನ್ನೋ ಭೀತಿ
ಸುಮ್ಮನೇ ಕೂತು ಕಾಲ ಕಳೆವುದೇ ಸರಿ
ಇರುವೊಬ್ಬ ಮಹಿಳೆಗೂ ಸ್ಥಾನವಿರದ ಪರಿ.

ಬೆತ್ತಲೆ ತಂತಿ ತಿರುಗದ ಪಂಖ ಒತ್ತಾಸೆಯ ಮನಗಳು
ಚೌಕದ ಅಂಕದ ದೀನತೆಯ ಜೊತೆಗೆ ಹೊರಗಿನಿಂದ ಬಂದ ಕರೆಗಳು.


ನಿರಂತರ ಚಲಿಸುವ ರೈಲಿಗೆ ಕಾಣುವ ವಿವಿಧ ಚಿತ್ರಗಳನ್ನು ಹೀಗೆ ಬಣ್ಣಿಸಿದ್ದಾರೆ ಸುಶ್ರುತ ದೊಡ್ಡೇರಿ ...

ಬರುವ ರೈಲಿಗಾಗಿ ಕಾಯುತ್ತಿರುವ ಜೀವಗಳು;
ಸರಕು ಸಾಗಿಸುವ ಹಮಾಲಿಗಳು;
ಗಡ್ಡದವನ ಚಪ್ಪಲಿಗಳು;
ಎಲ್ಲಿಯದೋ ದನಿಯನ್ನು ಆಲಿಸುತ್ತಿರುವ ಇಲ್ಲಿಯ ಕಿವಿ;
ದೊಣ್ಣೆಯ ಅಜ್ಜನ ಮುಖದಲ್ಲಿನ ಬಳಲಿಕೆಯ ಸಹಿ;
...ಕಣ್ಣಿಗೆ ಕಾಣುವ ಚಿತ್ರಗಳು

ಯುವಕನ ಕವರಿನಲ್ಲಿರುವ ಬಿಸಿ ಚಪಾತಿ;
ಟ್ರಾಲಿ ಬ್ಯಾಗಿನ ಸವೆದ ಗಾಲಿ;
ಎಂದೂ ತಿರುಗದ ಫ್ಯಾನಿನ ಪಂಕದ ಪಕ್ಕದ ಗಾಳಿ;
ಯುವಕನ ಕನ್ನಡಕದ ಬಿಂಬವಾಗಿರುವ ಮ್ಯಾಗಜೀನಿನ ಫೋಟೋ;
...ಕಷ್ಟ ಪಟ್ಟರೆ ಕಾಣುವ ಚಿತ್ರಗಳು

ಇನ್ನೂ ದೂರದಲ್ಲಿರುವ ರೈಲಿನಲ್ಲಿ ಇದೇ
ಸ್ಟೇಷನ್ನಿಗಾಗಿ ಕಾಯುತ್ತಿರುವ ಜೀವಗಳು;
ಅಳುತ್ತಿರುವ ಮಗುವಿಗೆ ಹಾಲೂಡಿಸುತ್ತಿರುವ ತಾಯಿ;
ಕಡಲೇಕಾಯಿ ಮಾರುವವನ ಚೀರು;
ಚಾಲಕನ ಸಹಾಯಕನ ಆಕಳಿಕೆ;
ಟಾಯ್ಲೆಟ್ಟಿನಲ್ಲಿ ಸೋರುತ್ತಿರುವ ನಲ್ಲಿ;
ಒಡೆಯನ ನಿದ್ರೆಗೆ ದಿಂಬಾಗಿರುವ ಏರ್‌ಬ್ಯಾಗ್;
...ಕಲ್ಪಿಸಿಕೊಂಡರೆ ಕಣ್ಣಮುಂದೆ ಬರುವ ಚಿತ್ರಗಳು

ನಿರಂತರ ಚಲಿಸುವ ರೈಲಿಗೆ ಇವೆಲ್ಲಾ ನಿರತ ಚಿತ್ರಗಳು..

Monday 16 July, 2007

ಚಿತ್ರ - 10


ಇದು ಶ್ರೀನಿಧಿಯ ಕ್ಯಾಮರಾದಲ್ಲಿ ಸೃಷ್ಟಿಯಾದ ಚಿತ್ರ.
ದೇವಸ್ಥಾನಕ್ಕೆ ಬರುವ ಭಕ್ತನು ಭಿಕ್ಷುಕನೇ ಅಲ್ಲವೇ ಎನ್ನುತ್ತಾರೆ ಪಾರಿಜಾತ
1.ಜಗವ ಕಾಯುವನನ್ನು ಬೇಡುತಿರುವರು ಒಳಗೆ
ಅವರನ್ನು ಕಾದಿಹೆವು ನಾವಿಲ್ಲಿ ಹೊರಗೆ
ಕೋಟಿಗಟ್ಟಲೆ ಹಣವು, ಬಂಗಲೆಯು ಬೇಕಿಲ್ಲ
ಹಸಿವ ತಣಿಸಲು ಸಾಕು ಕಾಸೈದು ನಮಗೆ
2.ಒಳಗೆ ಇರುವವರನ್ನು "ದಾನಿಗಳು" ಎನ್ನುವರು
ಆದರೂ ಅವರೆಲ್ಲ ಭಿಕ್ಷುಕರೆ ತಾನೆ?
ನಮಗೇಕೆ ಈ ಪಟ್ಟಿ, ತಿಳಿಯದಾದೆವು ನಾವು
ನಿಮಗೆ ತಿಳಿದರೆ, ನಮಗೆ ತಿಳಿಹೇಳಿ ನೀವು !
ಭಿಕ್ಷುಕರ ವೇದನೆಯನ್ನು ಮನೋಜ್ಞವಾಗಿ ಹೇಳಿದ್ದು ಗುಹೆ

ಅ)
ಬೇಡುತಿಹೆವು ಬಾಗಿಲಲಿ
ಬಾಡುತಿಹೆವು ಬಿಸಿಲಿನಲಿ
ಇದು ನಾವು ನೀಡುವ ಕಾಟವಲ್ಲಯ್ಯ
ನಮ್ಮ ಹೊಟ್ಟೆಪಾಡಿನ ಪೀಕಲಾಟವಯ್ಯ

ಬ)
ಫೋಟೊ ತೆಗೆಯೆಯುವಾ ಶ್ರೀನಿಧಿ?
ಬದಲಾಗದು ನಮ್ಮೀ ದುರ್ವಿಧಿ...

ಸಣ್ಣ ಕಥೆಯ ಮೂಲಕ ಸುಶ್ರುತ ಹೇಳಿದ್ದು

ನಾವೂ ನಿಮ್ಮವರೇ..



ನಿನ್ನೆ ರಾತ್ರಿ ಆಫೀಸಿನಿಂದ ಮನೆಗೆ ಮರಳುತ್ತಿದ್ದಾಗ ಬಸ್‍ಸ್ಟಾಂಡಿನಲ್ಲಿ ಒಂದು ಅಪರಿಚಿತ ಮಗು ನನ್ನ ಪ್ಯಾಂಟನ್ನು ಜಗ್ಗಿ 'ಅಣ್ಣಾ' ಅಂತು. ಒಡ್ಡಿದ ಅದರ ಕೈಯಲ್ಲಿ ಒಂದು ರೂಪಾಯಿ, ಐವತ್ತು ಪೈಸೆಯ ನಾಣ್ಯಗಳಿದ್ದವು. ಅದರ ಮುಖವನ್ನು ಎಲ್ಲೋ ನೋಡಿದಂತಿದೆ ಅನ್ನಿಸಿತು. ತಕ್ಷಣ ನನಗೆ ಈ ಚಿತ್ರ ನೆನಪಾಯಿತು. ಇಲ್ಲಿ ಕುಳಿತಿರುವ ಜನರ ಪೈಕಿಯದೇ ಈ ಮಗು ಅಂತ ನನಗೇಕೋ ಬಲವಾಗಿ ಅನ್ನಿಸಿತು. ಈ ಎದುರಿಗೆ ಕುಳಿತ ಅಜ್ಜನ ಮುಖವನ್ನೇ ಹೋಲುತ್ತಿದೆ ಈ ಕೂಸಿನ ಮುಖ. ಅಂದರೆ ಈ ಕೂಸು ಈ ಅಜ್ಜನ ಮಗಳ ಮಗು ಆಗಿರಬಹುದು. ಅಥವಾ ಸೊಸೆಯ ಮಗು ಆಗಿರಬಹುದು. ಇಲ್ಲವೇ ತಂಗಿಯ ಅತ್ತಿಗೆಯ ಮಗಳ ಅತ್ತೆಯ ಮೊಮ್ಮಗುವೂ ಆಗಿರಬಹುದು. 'ಆಗಿರಬಹುದು' ಏನು, ಆಗಿರಲೇಬೇಕು.

ನಾನು ಆ ಮಗುವಿನ ಕೈ ಹಿಡಿದು ಕೇಳುತ್ತೇನೆ: 'ಏನು ನಿನ್ನ ಹೆಸರು?' ಮಗು ಗಾಭರಿಯಾಗುತ್ತದೆ. ನನ್ನ ಕಣ್ಣು ತಪ್ಪಿಸುತ್ತದೆ. ಕೈ ಬಿಡಿಸಿಕೊಂಡು ಓಡಲು ಅಣಿಯಾಗುತ್ತದೆ. ನಾನು ಮತ್ತೆ ಅದನ್ನು ಹಿಡಿದುಕೊಳ್ಳುತ್ತೇನೆ. 'ನಿನ್ನ ಊರು ಯಾವುದು?' -ಕೇಳುತ್ತೇನೆ. ನನ್ನ ಭಾಷೆ ಅರ್ಥವೇ ಆಗುವುದಿಲ್ಲವೇನೋ ಎಂಬಂತೆ ಪಿಳಪಿಳನೆ ಹೊಸ ಜೀವಿಯನ್ನು ನೋಡುವಂತೆ ಕಣ್ಣು ಮಾಡುತ್ತದೆ ಮಗು. 'ಹೀಗೆ ಭಿಕ್ಷೆ ಬೇಡುವುದು ತಪ್ಪು, ಶಾಲೆಗೆ ಹೋಗಬೇಕು ನೀನು' ಎನ್ನುತ್ತೇನೆ. ಮಗು ನನ್ನನ್ನು ಪಕ್ಕಕ್ಕೆ ತಳ್ಳಿ (ಅಬ್ಬ! ಎಷ್ಟು ಶಕ್ತಿ!) ಓಡತೊಡಗುತ್ತದೆ. ಸಾವರಿಸಿಕೊಂಡ ನಾನೂ ಹಿಂಬಾಲಿಸಿಕೊಂಡು ಓಡುತ್ತೇನೆ. ಮಗು ತನ್ನ ಜಾರುವ ಜೋಳಿಗೆಯನ್ನು ಹೆಗಲಿಗೇರಿಸಿಕೊಳ್ಳುತ್ತ, ಬೆನ್ನಟ್ಟಿಕೊಂಡು ಬರುತ್ತಿರುವ ನನ್ನನ್ನು ಹಿಂದಿರುಗಿ ನೋಡುತ್ತ ನೋಡುತ್ತ ಓಡುತ್ತಿದೆ... ಪ್ರಾಣಭೀತಿಯಿಂದ ಓಡುತ್ತಿದೆ...

ಓಡಿ ಓಡಿ ಅದು ಸೀದಾ ಇದೇ ದೇವಸ್ಥಾನದ ಬಳಿ ಬಂದಿದೆ. ಪುಟಪುಟನೆ ಈ ಮೆಟ್ಟಿಲುಗಳನ್ನೇರಿ, ಅಗೋ, ಆ ಆರನೇ ಮೆಟ್ಟಿಲಿನ ಮೇಲಿನ ತಾಯಿಯ ಬೆನ್ನ ಹಿಂದೆ ಅವಿತುಕೊಂಡಿದೆ. ಏದುಸಿರು ಬಿಡುತ್ತಾ ಬಂದ ನಾನು ಆರನೇ ಮೆಟ್ಟಿಲನ್ನೂ ದಾಟಿ ಮುಂದುವರೆದಿದ್ದೇನೆ... ದೇವಳದ ಹೊರಗೆ ಬಿಡೋಣವೆಂದು ನೋಡಿದರೆ ಕಾಲಲ್ಲಿ ಚಪ್ಪಲಿಯೇ ಇಲ್ಲ! ಹಾಗೇ ಒಳನಡೆದಿದ್ದೇನೆ. ಕೈ ಮುಗಿದು ಮಂಗಳಾರತಿ ಪಡೆದಿದ್ದೇನೆ. ಕಾಣಿಕೆ ಹಾಕೋಣವೆಂದು ಜೇಬಿಗೆ ಕೈ ಹಾಕಿದರೆ ಬಿಡಿಗಾಸೂ ಇಲ್ಲ! ಓಡುವ ಭರದಲ್ಲಿ ಎಲ್ಲಾ ದಾರಿಯಲ್ಲೇ ಬಿದ್ದುಹೋಗಿದೆ. ನನ್ನ ಮೊಬೈಲು, ವಾಚು, ವ್ಯಾಲೆಟ್ಟು, ಬಾಚಣಿಕೆ, ಪೆನ್ನು, ಕರ್ಚೀಫು.. ಎಲ್ಲಾ ಎಲ್ಲೋ ಬಿದ್ದುಹೋಗಿವೆ. ನನ್ನ ಬಟ್ಟೆಯನ್ನೆಲ್ಲಾ ಒಮ್ಮೆ ನೋಡಿಕೊಳ್ಳುತ್ತೇನೆ: ಪೂರ್ತಿ ಧೂಳು, ಮಣ್ಣು, ಅಲ್ಲಲ್ಲಿ ಹರಿದು ಹೋಗಿದೆ..

ಯಾಕೋ ನನಗೆ ಅಳು ಬರುತ್ತದೆ.. ನಾನು ಅನಾಥನೆಂಬ ಭಾವ ಆವರಿಸಿಕೊಳ್ಳುತ್ತದೆ.. ವಾಪಸು ಮನೆಗೆ ಹೋಗುವ ದಾರಿ ಸಹ ಗೊತ್ತಿಲ್ಲ.. ಒಂದೊಂದೇ ಮೆಟ್ಟಿಲು ಇಳಿಯುತ್ತೇನೆ.. ಆರನೇ ಮೆಟ್ಟಿಲಿಗೆ ಬಂದಾಗ ಅದೇ ಕೂಸು 'ಬಾ ಮಾವಾ.. ಕೂತುಕೋ..' ಎನ್ನುತ್ತದೆ. ಕುಡಿಯಲು ನೀರು ಕೊಡುತ್ತದೆ.. ತನ್ನ ಜೋಳಿಗೆಯಿಂದ ರೊಟ್ಟಿಯ ಚೂರು ತೆಗೆದು ಕೊಡುತ್ತದೆ.. ನನ್ನ ಜೀವಮಾನದಲ್ಲೇ ತಿಂದಿರದ ಒಣಕಲು ರಾಗಿ ರೊಟ್ಟಿ.. ನಾನದನ್ನು ಮುಕ್ಕುತ್ತೇನೆ.. ನನ್ನನ್ನು ನಿಧಾನಕ್ಕೆ ಕೈ ಹಿಡಿದು ನಡೆಸಿಕೊಂಡು ಹೋಗಿ ಈ ಅಜ್ಜನ ಪಕ್ಕ ಕೂರಿಸುತ್ತದೆ. 'ಬಾರಪ್ಪಾ ಕೂತುಕೋ.. ನೀನೂ ನಮ್ಮವನೇ.. ಇಲ್ಲಿ ಎಲ್ಲಾ ನಮ್ಮವರೇ.. ಯಾರೂ ಅನಾಥರಲ್ಲ.. ಒಬ್ಬರಿಗೊಬ್ಬರು ಹೇಗೋ ಸಂಬಂಧಿಕರು..' ಎನ್ನುತ್ತಾನೆ ಅಜ್ಜ. ನನಗೂ ಅದು ಹೌದೆನಿಸುತ್ತದೆ. ಬಹುಶಃ ನಾನು ಈ ಅಜ್ಜನ ನಾದಿನಿಯ ತಮ್ಮನ ಹೆಂಡತಿಯ ಅಣ್ಣನ ಭಾವನ ಷಡ್ಡಕನ ಮಗನಿರಬೇಕು ಎನಿಸುತ್ತದೆ.. ಅಜ್ಜನ ಪಕ್ಕ ಕೂತ ನಾನು ಜನ ಕಂಡದ್ದೇ ಜೋರಾಗಿ ಅರಚುತ್ತೇನೆ: 'ಅಮ್ಮಾ.. ಅಣ್ಣಾ.. ಭಿಕ್ಷಾ..' ಮತ್ತೂ ಜೋರಾಗಿ ಅರಚುತ್ತೇನೆ: 'ದಾನ ಮಾಡೀ ತಾಯೀ..' ಇನ್ನೂ ಜೋರಾಗಿ, ನನ್ನ ಕನಸಿನ ಲೋಕದಿಂದ ಹೊರಬರುವಷ್ಟು ಜೋರಾಗಿ ಅರಚುತ್ತೇನೆ: 'ನಾನೂ ನಿಮ್ಮವನೇ.. ದೂರದ ಸಂಬಂಧಿಕ.. ಸ್ವೀಕರಿಸಿ ಸ್ವಾಮೀ..'

md ಹೇಳಿದ್ದು

"ವಕ್ತ್ ಸೆ ದಿನ್ ಔರ್ ರಾತ್
ವಕ್ತ್ ಸೆ ಕಲ್ ಔರ್ ಆಜ್
ವಕ್ತ್ ಕಾ ಹರ್ ಶಯ್ ಗುಲಾಮ್
ವಕ್ತ್ ಕಾ ಹರ್ ಶಯ್ ಪೆ ರಾಜ್ .."

ಎಷ್ಟೊಂದು ನೋವು ಆ ಮುದುಕನ ದನಿಯಲ್ಲಿ. ಗೋಣೆತ್ತದೆ ಜೀವನದ ಬಗ್ಗೆ ಗೊಣಗುತ್ತಲೇ ಹಾಡುತ್ತಿದ್ದಾನೆ, ಆ ಆರನೆ ಅಗಲವಾದ ಮೆಟ್ಟಿಲಲ್ಲಿ ಕುಳಿತಿರುವ ಪಿಚ್ಚು ಕಣ್ಣಿನ ಭಿಕ್ಷುಕ.
"ಭಿಕ್ಷುಕ ಅವನು ! ಹಾಗಾದರೆ ನೀನು?" ಎಂದು ಕೇಳಿತು ನನ್ನ ಒಳಮನಸ್ಸು.
"ನಾನು ಭಿಕ್ಷುಕನ ಹಾಗೆ ಕಾಣಿಸುತ್ತೀನೋ?". ಅರೆ ಯಾರದು ಕೇಳಿದ್ದು? ಯಾರೋ ಮೂರ್ಖರು ಇರಬೇಕು.
'ನಾನು' ಮೂರು ಡಿಗ್ರೀ, ಎರಡು ಮನೆ (ಹಳೆಯದ್ದು ಮತ್ತು ಹೊಸದೊಂದು), ಒಂದು ಕಾರು, ಲಕ್ಷಗಳಲ್ಲಷ್ಟೇ ಇರುವ ಬ್ಯಾಂಕ್ ದುಡ್ಡು, ಇವುಗಳೆಲ್ಲದರ ಮಾಲೀಕ, ಕಂಪನಿಯ ಅಧಿಕಾರಿ, ಸಾಕಷ್ಟು ಗೆಳೆಯರು ಸಂಪಾದಿಸಿರುವ ಸ್ನೇಹ ಜೀವಿ, ಹೆಂಡತಿ-ಮಕ್ಕಳೊಂದಿಗೆ ಸುಖ ಸಂಸಾರಿ. ನನ್ನನ್ನು ಈ ಪ್ರಶ್ನೆ ಕೇಳುವವನು ಮೂರ್ಖನೇ ಇರಬೇಕು.

"ಪಾಪಾ, ೧ ರುಪಿ ಪ್ಲೀಸ್. ಆ ಬೆಗ್ಗರಗೆ ಡೊನೇಟ್ ಮಾಡ್ತೀನಿ"
"ಒ.ಕೆ. ಮೈ ಸ್ವೀಟ್ ಚೈಲ್ಡ್. ಯು ಸೀ ದೆ ಆರ್ ಪೂರ್ ಪೀಪಲ್. ಬಟ್ ಬ್ಲಡಿ ಬೆಗ್ಗರ್ಸ್."
"ಶ್ರೀನಿ ಇದೆಲ್ಲ ಭಾಷಣ ಮಗೂಗೆ ತಿಳಿಯುತ್ತಾ? ನೀವೊಂದು. ಹೇ ಚಿನ್ನು ಬಾ ಇಲ್ಲಿ. ಇದು ತಗೊ ೫ ರುಪೀಸ್. ಗಿವ್ ಇಟ್ ಟು ದ್ಯಾಟ್ ಸಿಂಗಿಂಗ್ ಬೆಗ್ಗರ್. ಮ್ಮ್"

"ನಿಶಾ, ನಿನಗೆ ಗೊತ್ತಲ್ಲ. ನಾನು ಹೇಗೆ ಅಂತ. ಏನಾದರೂ ಕೆಲಸ ಮಾಡಿ ದುಡ್ಡು ಗಳಿಸಿ ಹೊಟ್ಟೆ ಹೊರಕೋಳ್ಳೋಕಾಗದಿರೋ ಲೇಜಿ ಬುಲ್ಲ್ ಶಿಟ್ ಅವರು. ಅವರಿಗೆ ಹೀಗೆ ಐದೈದು ರೂಪಾಯಿ ದಾನ ಧರ್ಮ ಅಂತ ಕೊಟ್ರೆ ಹೇಗೆ. ಆ ದುಡ್ಡು ಈ ಹೆಸರು, ಮನೆ, ಕಾರು, ಈ ೩೫೦೦೦ ರೂ ಮೊಬೈಲು ಇವನ್ನೆಲ್ಲಾ ನಾನು ಗಳಿಸಿದ್ದೇನೆ. ಯಾರೋ ಬಂದು ನನಗೆ ಭಿಕ್ಷೆ ಕೊಟ್ಟು ಹೋಗಿಲ್ಲ. ತಿಳೀತಾ?"

"ಶ್ರೀನಿ, ಪ್ಲೀಸ್"

"ಲಿಸನ್ ಲಿಸನ್ ಟು ಮಿ. ಈ ಕೆಲಸ ನನ್ನ ಕೈಲಿರದಿದ್ರೆ ನಿನ್ನ ತಂದೆ ನಮ್ಮ ಪ್ರೀತಿನ ಒಪ್ಪಿಕೊಂಡು ನಮ್ಮ ಮದುವೆಗೆ ಹೂಂ ಅಂತಿದ್ದ್ನಾ? ಇಲ್ಲ. ನೋಡು ನಾನು ಹೇಳಿದ್ದರಲ್ಲಿ ತಪ್ಪೇನಿಲ್ಲ. ಈ ನನ್ನ ಯಶಸ್ಸು, ನಾನು ಇಂಡಷ್ಟ್ರಿಯಲ್ಲಿ ಮಾಡಿದ ಹೆಸರು, ಈ ಬಂಧು-ಬಳಗ, ಗಳಿಸಿದ ದುಡ್ಡು ಇದೆಲ್ಲ ನನ್ನ ಕೇವಲ ನನ್ನ ಪರಿಶ್ರಮದ ಫಲ. ಇದನ್ನ ನನ್ನಿಂದ ಯಾರು ಕಿತ್ತುಕೊಳ್ಳೋಕಾಗಲ್ಲ. ಅಂಡರ್ಸ್ಟಾಂಡ್"

"ಆಯ್ತು ನಿಮ್ಮ ವಿಚಾರಧಾರೆ ನಿಮಗೆ ಇರಲಿ. ನನಗೆ ಅವನು ಕುಳಿತಿದ್ದಾನಲ್ಲ ಆ ಮುದುಕ ಅವನು ಭಿಕ್ಷುಕ, ನಾನು ಆ ದೇವರಿಗೆ ಭಿಕ್ಷುಕಿ.ಇದು ನನ್ನ ವಿಚಾರಧಾರೆ. ಸಿಂಪಲ್. ಚಿನ್ನು...."

ಮರದ ಮೇಲಿರುವ ಎಲೆ ಆ ಸೃಷ್ಟಿಕರ್ತನ ಅಪ್ಪಣೆಯೊಂದಿಗೆ ಅಲ್ಪ ಸ್ವಲ್ಪ ಭಯದಿಂದ ಓಲಾಡಿ ಸುಮ್ಮನಾಯಿತು. ಇರುವೆಗಳ ಸಾಲು ಮುಂಬರುವ ಮಾಸಕ್ಕೆ ಅಂತ ಕಾಳು-ಕಡಿ ಕೂಡಿಡುವಲ್ಲಿ ನಿರತವಾಗಿವೆ. ಗಾಡಿಗಳು ಜೀವನವನ್ನು 'ಬೇಗ ಬೇಗ ಕೆಲಸವಾಗಬೇಕು, ತಲುಪಬೇಕು' ಅನ್ನುವವರಿಗೆ ಸಾಧನಗಳಾಗಿ ಓಡುತ್ತಿವೆ. ಆ ಲಾರಿಗಾಡಿ ಚಕ್ರಕ್ಕೆ ಒಂದು ಚಿಕ್ಕ ತೊಡಕಾಗಿ ಶ್ರೀನಿಯ ರುಂಡ ಬಂದಿದೆ. ಅಷ್ಟೆ.

ಯಾವುದರ ಮಾಲೀಕ ಯಾರು ಅನ್ನೋದು ಗೊತ್ತಿರೋನಿಗೆ, ಎಲ್ಲದರ ಮಾಲೀಕ ಯಾರು ಅನ್ನೋದು ತಿಳಿಯಳಿಲ್ಲ.
ನಾನಂತೂ ಮೂರ್ಖನಲ್ಲ !!. ಯಾರದು ಹೇಳಿದ್ದು?? ಬರೆಯುವವನೋ ಅಥವಾ ಓದುವವನೋ

"ಶ್ರೀನೀ............" ಚೀತ್ಕಾರ.

ನೀಲಗ್ರಿವ ಹೇಳಿದ್ದು
ಶ್ರೀನಿಧಿಯೆಂಬ ಹೆಸರನ್ನು ಇಟ್ಟು
ನತ-ಭಾಗ್ಯರ ಚಿತ್ರವ ಸೆರೆಹಿಡಿದಿರಲ್ಲ! :)
ಹೆಸರಲ್ಲಿ ಏನುಂಟು ಚಿತ್ರವನು ನೋಡಿ
ಅನ್ನುವಿರಿ ನೀವೆಂದು ನನಗೆ ಗೊತ್ತು

ಶ್ರೀಕಲಾ ಹೇಳಿದ್ದು
ಆ ವೃದ್ಧ...

ಎದುರಿಗೆ ಕುಳಿತ ವೃದ್ಧನನ್ನು ನೋಡುವಾಗ ಆ ವೃದ್ಧನದೇ
ನೆನಪಾಗುತ್ತದೆ. ಆತನೂ ಹೀಗೆ ಕುಳಿತಿರುತ್ತಿದ್ದ. ಕುಕ್ಕರುಗಾಲಿನಲ್ಲಿ,
ತಲೆಗೊಂದು ಟವೆಲ್ ಸುತ್ತಿಕೊಂಡು, ಮಾಸಲು ಬಟ್ಟೆ ತೊಟ್ಟು..
ಬದುಕ ನೋಡುತ್ತಿದ್ದುದು ಆತ ಇಂತಹುದ್ದೇ ಮಬ್ಬು
ಕನ್ನಡಕದೊಳಗಿಂದ. ಕೈಗಳಲ್ಲಿ ಇದೇ ಹಿಂಜರಿಕೆ. ಮುಖದಲ್ಲಿ
ಇಂತಹುದ್ದೇ ನಿರ್ಭಾವ.
ದಿನವೂ ಆತನನ್ನು ನೋಡುತ್ತಿದ್ದೆ. ಇದೇ ಭಂಗಿ,ಇದೇ ಭಾವ.
ಆದರೆ ಒಂದು ವ್ಯತ್ಯಾಸ.
ಈತನಿಗೆ ಒಂದು ಮೆಟ್ಟಿಲು ಸವೆದಾಗ ಇನ್ನೊಂದು ಮೆಟ್ಟಿಲು. ಗುಡಿಸಲ
ಕನಸ ಹಂಚಿಕೊಳ್ಳಲು ಜತೆಗಾರರು.
ಆತ ಕುಳಿತಿರುತ್ತಿದ್ದುದು ವಸಂತದಲ್ಲಿ ಕೆಂಪು ಹೂ ಬಿಡುವ ಒಂಟಿ
ಮರದ ಕೆಳಗೆ ಒಂಟಿಯಾಗಿ!

ಶ್ಯಾಮಾ ಅವರ ಅನಿಸಿಕೆ
"ಅಮ್ಮ ತಾಯಿ ಭಿಕ್ಷೆ ಹಾಕಿ"
ಯಾರದ್ದೋ ಧ್ವನಿ ಮನೆ ಬಾಗಿಲ ಹತ್ತಿರ ಕೇಳುತ್ತಲೇ ಅಮ್ಮ ಹೆಳುತ್ತಿದ್ದಳು "ನೋಡು ಯಾರೋ ಭಿಕ್ಷುಕರು, ಭಿಕ್ಷೆ ಹಾಕಿ ಕಳ್ಸು".

ಕಿಟಕಿಯಿಂದಲೇ ಹೊರಗೆ ನೋಡಿ ಹೆಳುತ್ತಿದ್ದೆ "ಅಮ್ಮ ಅವಳೇ ನಮ್ಮ ಫ್ರೆಂಡ್ ಭಿಕ್ಷುಕಿ ಅಜ್ಜಿ"

ಇದೇನಿದು ಭಿಕ್ಷುಕರೂ ಫ್ರೆಂಡ್ಸಾ ಅಂತ ಅನ್ನಿಸಬಹುದು. ಹೌದು. ಆ ಭಿಕ್ಷುಕಿ ಅಜ್ಜಿ ವಾರಕ್ಕೊಂದು ದಿನ ಖಾಯಂ ಆಗಿ ಭಿಕ್ಷೆ ಬೇಡಲು ಬರುತ್ತಿದ್ದಳು ಮನೆ ಬಾಗಿಲಿಗೆ. ತುಂಬಾ ಒಳ್ಳೇ ಅಜ್ಜಿ. ಜಾಸ್ತಿ ಕಾಟ ಕೊಡುತ್ತಿರಲಿಲ್ಲ. ಕೊಟ್ಟಷ್ಟು ತೆಗೆದುಕೊಂಡು ಸುಮ್ಮನೇ ಹೋಗುತ್ತಿದ್ದಳು. ಒಮ್ಮೊಮ್ಮೆ "ಕುಡಿಯಲು ನೀರು ಕೊಡೆ ಮಗಳೆ" ಅಂತಲೂ ಕೇಳುತ್ತಿದ್ದಳು. ಅಂಥ ಸಮಯದಲ್ಲಿ ಅವಳು ಮನೆಯ ಕಟ್ಟೆಯ ಮೇಲೆ ಕೂತರೆ ಏನಾದರೂ ತನ್ನ ಬಗ್ಗೆ ಹೇಳಿಕೊಳ್ಳುತ್ತಿದ್ದಳು.
"ಇಷ್ಟು ವಯಸ್ಸಾಗಿದೆಯಲ್ಲ ಯಾಕೆ ಭಿಕ್ಷೆ ಬೇಡುತ್ತಿಯ. ನಿಂಗೆ ಮಕ್ಕಾಳಿಲ್ವಾ ನೋಡಿಕೊಳ್ಳೋಕೆ" ಅಂತ ಕೆಳಿದ್ದಕ್ಕೆ ಅವಳ ಮಗ ಸೊಸೆ ಸತ್ತುಹೋಗಿರುವುದಾಗಿಯೂ, ಅವರ ಮಗುವನ್ನು ಇವಳೇ ಸಾಕುತ್ತಿರುವುದಾಗಿಯೂ ದುಃಖ ತೋಡಿಕೊಂಡಿದ್ದಳು.

ಮಳೆಗಾಲದಲ್ಲಿ ಆಕೆ ಭಿಕ್ಷೆ ಬೇಡಲು ಬರುತ್ತಿರಲಿಲ್ಲ. ಆಗೆಲ್ಲ ಯಾವಾಗಲಾದರೂ ದೇವಸ್ಥಾನಕ್ಕೆ ಹೋದಾಗ ಇದೆ ಈ ಚಿತ್ರದಲ್ಲಿರುವಂತೆ ಮೆಟ್ಟಿಲ ಮೇಲೆ ಕೂತಿದ್ದವಳು ನಮ್ಮನ್ನು ನೋಡಿ ಗುರುತಿಟ್ಟು ಮಾತಾಡಿಸುತ್ತಿದ್ದಳು. ಅವಳನ್ನು ನೋಡಿದಾಗಲೆಲ್ಲ ಇಂಥವರ ಕಷ್ಟಕ್ಕೆ ಕೊನೆಯಿಲ್ಲವೆ? ಬಾಳ ಮುಸ್ಸಂಜೆಯಲ್ಲಿ ಇವರ ಕಣ್ಣಿಂದ ಜಾರುವ ಹನಿಗಳನ್ನು ಒರೆಸುವ ಕೈಗಳಿಲ್ಲವೇ? ಅನ್ನಿಸುತ್ತಿತ್ತು. ಈಗ ವಾರಕ್ಕೊಮ್ಮೆ ಬರುವ ಆ ಅಜ್ಜಿ ನಮ್ಮನೆ ಬಾಗಿಲಿಗೆ ಬರುವುದೇ ಇಲ್ಲ. ದೇವಸ್ಥಾನದ ಮೆಟ್ಟಿಲ ಬಳಿಯೂ ಕಾಣುವುದಿಲ್ಲ. ಆಕೆ ಇಲ್ಲದಿರಬಹುದು ಈ ಲೋಕದಲ್ಲಿ, ಆದರೆ ಅಂಥ ಇನ್ನೆಷ್ಟೋ ಜನ ಇನ್ನೂ ಆ ಮೆಟ್ಟಿಲ ಮೇಲೆ ದಿನಾ ಕಾಣುತ್ತಾರೆ. ಆ ಮೆಟ್ಟಿಲುಗಳ ಮೇಲೆ ಅವಳ ಹೆಜ್ಜೆ ಗುರುತುಗಳ ಮೇಲೆ ಇನ್ನೆಷ್ಟೋ ಅಂಥದೆ ಹೆಜ್ಜೆ ಗುರುತುಗಳು. ಬರೀ ನೋಟದಲ್ಲಿ ಮರುಕ ಸೂಸಿ ಮುಂದೆ ಹೋಗುವ ನಮ್ಮಂಥ ಅದೆಷ್ಟೋ ಕಣ್ಣುಗಳು.
ಸತೀಶ ಹೇಳಿದ್ದು

ಕೂಡ್ ಹಾಕಿರೋ ದೇವ್ರು
ಇಪ್ಪತ್ತೊಂದು ಮೆಟ್ಲನ್ನ್ ದಾಟಿ ಕೂಡ್ ಹಾಕಿರೋ ದೇವ್ರನ್ನ
ಕದ್ಕೊಂಡ್ ಯಾರೂ ಹೋಗ್ದೇ ಇರ್ಲಿ ಎಂದು ಕಾಯ್ತಾ ಇರೋ ನಮ್ಮನ್ನ
ಭಿಕ್ಷುಕರೆಂದು ಕರ್‌ದವ್ರ್ ಯಾರು, ಬೇಡ್ದವರೆಂದು ಜರೆದೋರ್ ಯಾರು?

ನಮ್ ದೇಶ್‌ದೋರೇ ನಮ್ ನಮ್ ಚಿತ್ರಾ ತೇಗೀತಾ ಹೋದ್ರೆ ಹೇಗೆ
ದೀನತೆಯನ್ನು ಎಂದೂ ಯಾರೋ ನೋಡ್ಲೇ ಇಲ್ಲಾ ಅನ್ನೋ ಹಾಗೆ
ಬಿಸಿಲಿಗೆ ನೆರಳಾ ಆಸರೆ ಎಲ್ಲಿ, ಹೊಟ್ಟೆಯ ತುಂಬಿಸೋ ಒಸಗೆ ಎಲ್ಲಿ?

ದೇವ್ರು ದರ್ಶನಕ್ ಬರೋ ಜನ ಹೊತ್ತು ತರೋ ಅಂತಃಕರಣ
ನಮ್ಮನ್ನಿಲ್ಲಿ ದಿನಂಪ್ರತಿ ಕೂರೋ ಹಾಗ್ ಮಾಡಿರೋ ಕಾರಣ
ಇನ್ನುಳಿದ ಪ್ರಶ್ನೆಗಳಿಗೆ ಉತ್ತರವೇನು, ನಮ್ಮಯ ಚಿತ್ರ ಮೆಚ್ಚುಗೆಯೇನು?

ಸೋಂಬೇರಿಗಳೆಂದು ಜರೀ ಬೇಡಿ
ಹಾಳ್ ಹೊಟ್ಟೇ ಸಂಕ್ಟಾ ಮರೀಬೇಡಿ
ನಮ್ ಮಕ್ಳೆಲ್ಲಾ ಕೈ ಕೊಟ್ಟ್ ಹೋದ್ವು ಯಾವ್ದೋ ರಾಗಾ ಹಾಡಿ
ಇಂದಿನ ಸ್ಥಿತಿಗೆ ನೀವೂ ಕಾರ್ಣಾ ನಮ್ಮಯ ದುಸ್ಥಿತಿ ನೋಡಿ.

ಯೋಚಿಸ್‌ಬೋದೂ ನೀವು ಕೆಲವು ಖಾಲಿ ಮೆಟ್ಲೂ ಯಾಕೆ
ಮೇಲಕ್ ಹತ್ತಿ ಹೋದವ್ರು ಇಲ್ಲಿಗೆ ಬರ್‌ಬಹುದು ಮುಂದೆ ಜೋಕೆ!

ಸನತ್ ಕೂಡ ಸಣ್ಣ ಕಥೆಯ ಮೂಲಕ ಹೇಳಿದ್ದು


"ಅಯ್ಯಾ...ಅಮ್ಮಾ....."

"ಅಯ್ಯಾ...ಅಮ್ಮಾ.....ಧರ್ಮಾ ಮಾಡಿ"
" ಏಯ್ ನಿಂಗಣ್ಣಾ, ಯಾರೋ ಅಲ್ಲಿ ಫೋಟೋ ಓಡಿತಾವ್ರೆ"
"ಅಯ್ಯಾ ಸುಮ್ಕಿರು ,ಈ ಫೋಟೋದವರೆಲ್ಲಾ ಅಂಗೇಯಾ,ಸುಮ್ಕೆ ನಿತ್ತು ನಮ್ಮ ಪೊಟೋ ಒಡ್ದು ಮಜಾ ನೋಡ್ತಾರೆ"
"ಒಡ್ಕೊಂಡೂಗ್ಲಿ ಬುಡಣ್ಣ"
"ಒಡ್ಕೊಂಡೂಗ್ಲಿ ಅಂತೆ ಒಡ್ಕೊಂಡೂಗ್ಲಿ..ಅದನ್ನ ಯಾರ್ಗಾರು ಮಾರಿ ಯಾವುದಾರು ಪೇಪರ್ ಗೆ ಮಾರ್ಕಂಡು ಕಾಸ್ ಮಾಡ್ಕೊತಾರೆ"
"ಕಾಸು ಮಾಡ್ಕೊತಾರೆ ,ಅವರ ನಸೀಬು"
"ನಸೀಬಂತೆ ನಸೀಬು..ನಮ್ಮ ಪೊಟೋ ತಗಂಡಿ ಕಾಸ ಮಾಡೋದು ತಪ್ಪಲ್ಲಾ ಕಣಣ್ಣಾ.. ನಮಗೆ ಒಂದು ಪೈಸೆನೂ ಹಾಕದೇ ಓಗ್ತಾರೆ, ಮನುಸ್ಸತ್ವ ಇಲ್ಲದ ಜನಾ"
"ಈ ಕಲಿಕಾಲದಾಗೆ ಎಲ್ಲಾರೂ ಒಳ್ಳೇರು ಇರೋಕಾಯಿತದ ಹೇಳು"
"ಹುಂ ಹೂಂ ನೀನು ಹೇಳೂದು ಸರಿನೇ ಅನ್ನು ಅದ್ರೂ...ಈ ಪ್ಯಾಟೆ ಜನ ಯಾಕೋ ಸರಿ ಯಿಲ್ಲ"
"ಸರಿ ಇರ್ಲಿ ಇಲ್ಲದೇ ಇರ್ಲಿ ..ನಿಂಗ್ಯಾಕೆ ಯಾರೋ ಪುನ್ಯಾತ್ಮರು ಹಾಕೋ ಧರ್ಮದಲ್ಲಿ ನಮ್ಮ ಜೀವನ ಸಾಗೋತ್ತೆ ಅದೇ ಸಾಕು"
"ಎನೋಪ್ಪಾ ಭಗ್ವಂತ ಇಟ್ಟಂಗೆ ನಮ್ಮದೇನೈತೆ"
"ಅಲ್ಲಾ ಕಣಣ್ಣ್ಸಾ..ಈ ಹಳ್ಳೀ ಹೈಕಳು ಸರಿ ಇದಾವೆ ಅಂತ ನೀನು ಯೋಳೋದಾ..ಈಗ ನೋಡು ನಿನ್ನ ಮಗ ನಿನ್ನ ಮನೆಯಿಂದ ಹೊರಗಡೆ ಹಾಕಿ ಎಲ್ಲಾ ಕಾಸು ಲಾಟ್ರಿಗೆ ಹಾಕಿಲ್ವಾ"
"ಬೇ***,ಅದು ಯಾವ ಕಾಲದಲ್ಲಿ ಹುಟ್ಟಿದ್ನೋ ಶನಿ..ನಮ್ಮ ವಂಸನೇ ಹಾಳ್ಮಾಡೋಕೆ..ಥಥ್"
"ಈ ಮಗನೆಲ್ಲಾ ಈ ತರ ಬೈಬಾರ್ದು ಕಣಣ್ಣಾ"
"ನೀ ಸುಂಕಿರಮ್ಮಾ..ನಿಂಗೇನು ಗೊತ್ತಾಯಿತದೇ ನನ್ನ ಕಷ್ಟ"
"ಏ..ನಿಂಗೊಬ್ಬಂಗೇಯಾ ಕಸ್ಟ ಇರೋದು ನಾವೆಲ್ಲಾ ಇಲ್ಲಿ ಮಾರಾಜರ್ ತರ ಅದೀವಿ.."
"ಹುಂ ಇವತ್ತುಗು ನಾನು ಹಳ್ಳಿಲಿದ್ರೆ ಮಾರಾಜಂತರನೇ ಬದೀಕಂಡಿರ್ ತಿದ್ದೇ"
"ಆಯ್ತಾ..ನಿಮ್ಮುದೆಲ್ಲಾ..ಅಯ್ಯನೋರು ಮೆಟ್ಟಿಳಿದು ಬರ್ತಾವ್ರೆ ಪ್ರಸಾದನೋ ಎನಾದ್ರು ಹಾಕಿದ್ರೆ ಸಾಕು ಒಟ್ಟೆ ಚುರ್ರ್ ಅಂತದೇ"
"ಅಯ್ಯಾ...ಅಮ್ಮಾ....."

Monday 9 July, 2007

ಚಿತ್ರ ೯


ಕಿಶೋರ್ ಕೈ ಚೀಲದಿಂದ ಬಂದಿದೆ ಈ ಚಿತ್ರ...
-----------------------------------------------------------------------
ಮುದ್ದುಕರಡಿಗಳ ಮೇಲಿನ ವೈವಿಧ್ಯಮಯ ನೋಟಗಳು...

ಪಾರಿಜಾತರ ನೋಟದಲ್ಲಿ ತುಂಟು ಕರಡಿಚಿಣ್ಣರು ಅಮ್ಮನಿಂದ ತಪ್ಪಿಸಿಕೊಳ್ಳುವ ಹುನ್ನಾರ ಹಾಕಿದ್ದಾರೆ...

ಕಿಟಕಿಯ ಸರಳುಗಳಾಚೆಯ ಜಗವದು

ಎಷ್ಟು ಸುಂದರವು, ನೋಡಿದೆಯಾ?

ಚಿಗುರಿದ ಮರಗಳು, ಅರಳಿದ ಹೂಗಳು

ಕರೆದಿವೆ ನಮ್ಮನು, ಕೇಳಿದೆಯಾ?


ಮಾವಿನ ಮರದಲಿ ಜೇನಿನ ಗೂಡಿದೆ

ಜೇನನು ಕೀಳಲು ಹೋಗೋಣವೇ?

ಹಲಸಿನ ಹಣ್‍ಗಳು ಕಳಿತಿವೆ ಮರದಲಿ

ಹಣ್ಣನು ಬಿಡಿಸುತ ಮೆಲ್ಲೋಣವೇ?


ನಮ್ಮ ಚೇಷ್ಟೆಗಳು ಮೀರಿದವೇ ಮಿತಿ?

ಚಿಣ್ಣರ ಮೇಲೆಯೆ ಹಠ ಸರಿಯಾ?

ಕೂಡಿ ಹಾಕಿಹಳು ಅಮ್ಮನು ನಮ್ಮನು

ಏನ ಮಾಡುವುದು, ಯೋಚಿಸೆಯಾ?


ಸರಳುಗಳ ಪರಿಧಿ ದಾಟಿ ಹಾರುವ ಹಂಬಲವನ್ನು ದೀಪಕ್ ಚುಟುಕಿಸಿದ್ದಾರೆ...

ಹಕ್ಕಿಯಾಗಿ ನಲೀಬೇಕು

ಮುಂದಿನ ಮರದಿ

ಬೇಡವಾಗಿದೆ

ಈ ಸರಳುಗಳ ಪರಿಧಿ

ಶ್ರೀತ್ರೀಯ ಸಣ್ಣ ದುನಿಯ... :)

ನಾನು ಮತ್ತು ನನ್ನ ಗೆಳೆಯ
ಬಲು ಸಣ್ಣದಿದೆ ನಮ್ಮ ದುನಿಯ!

ಅರಿವಿಗೆ ನಿಲುಕುವ ಎಲ್ಲವೂ ನೋಟಕನದೇ ಎನ್ನುತ್ತಾರೆ ಸುಪ್ತದೀಪ್ತಿ ...

ನೋಟ ಮತ್ತು ನೋಟಕ
----------------------
ಓಡುವ ಬಂಡಿಯ ಕಿಟಕಿಯ ಒಳಗೆ
ನೀನು, ನಾನು;
ನೋಡುವ ನೋಟಕೆ ಎಲ್ಲಿದೆ ಪರಿಧಿ
ಭೂಮಿ, ಬಾನು;
ಅರಿವಿಗೆ ನಿಲುಕುವ ಎಲ್ಲವೂ ನಮದೆ
ಊರು, ಕಾನು;
ಓಡುವ ಬಂಡಿಯ ಕಿಟಕಿಯ ಹೊರಗೆ
ಆನು, ತಾನು.

ಸುಶ್ರುತ ದೊಡ್ಡೇರಿ ನೋಟಕ್ಕೆ ಚೌಕಟ್ಟು ಬೇಡವೆನ್ನುತ್ತಾರೆ...

ಶ್..! ಸದ್ದು ಮಾಡಬೇಡಿ..
ಪುಟ್ಟ ಗೊಂಬೆಗಳು ಜಗವ ನೋಡುತಿವೆ..

ಹೇಳಿಕೊಡದಿರಿ:
ಅಗೋ ಅದು ಮರ,
ಅಲ್ಲಿ ಹಾರುತಿರುವುದು ಹಕ್ಕಿ,
ಬಗ್ಗಿ ಮೇಯುತಿರುವುದು ಕುರಿ,
ಜೋರು ನಡೆಯುತಿರುವವನು ಮನುಷ್ಯ
...ಬೇಡ, ಹೇಳಿಕೊಡದಿರಿ.

ಅವಕ್ಕೆ ಕಂಡಂತೆ ನೋಡಲಿ ಅವು;
ಯಾರಿಗೆ ಗೊತ್ತು, ಅಲ್ಲಿ ಕಾಣುತಿರುವುದು
ಮರವಷ್ಟೇ ಅಲ್ಲದೇ ಎಲೆಯ ಮೇಲಿನ ಇಬ್ಬನಿ ಹನಿಯನ್ನು
ಕುಡಿಯುತ್ತಿರುವ ಅಳಿಲ ದಾಹವಾಗಿರಬಹುದು;
ಹಕ್ಕಿಯಷ್ಟೇ ಆಗಿರದೆ ಅದರ ಕಣ್ಣಲ್ಲಿನ
ಕಳೆದುಹೋದ ಸಂಗಾತಿಯ ಹುಡುಕಾಟವಾಗಿರಬಹುದು;
ಕುರಿಯಷ್ಟೇ ಆಗಿರದೆ ಅದರ ಮೈಮೇಲೆ ಕುಳಿತು
ಉಣುಗು ಹೆಕ್ಕುತ್ತಿರುವ ಕಾಗೆಯ ಹಸಿವಾಗಿರಬಹುದು;
ಮನುಷ್ಯನಷ್ಟೇ ಆಗಿರದೆ ಈ ಜಗವನ್ನೆಲ್ಲ ಕೊಳ್ಳೆ ಹೊಡೆಯಬೇಕೆಂಬ
ಅವನ ಜೋರು ನಡಿಗೆಯಲ್ಲಿನ ಆತುರವಾಗಿರಬಹುದು;
ಏನು ಬೇಕಾದರೂ ಕಂಡೀತು ಗೊಂಬೆಗಳ ಕಣ್ಣಿಗೆ..

ಇದು ಇದೇ, ಇದು ಇಷ್ಟೇ, ಎಂದು
ಚೌಕಟ್ಟು ಹಾಕಬೇಡಿ.
ಅದು ಕಿಟಕಿಯಾಚೆಗಿನ ಲೋಕ:
ಏನು ಬೇಕಾದರೂ ಇದ್ದೀತು ಅಲ್ಲಿ..

ಶ್ಯಾಮಾ ಸೃಷ್ಟಿಸಿದ ಪುಟ್ಟಿ, ಮುನಿಸಿಕೊಂಡ ಮುದ್ದು ಕರಡಿಗಳನ್ನು ಹೀಗೆ ಒಲಿಸಿಕೊಳ್ಳುತ್ತಾಳೆ..

ಪುಟ್ಟಿಯ ಹಾಡು
-------------
ಮುನಿಸೇಕೆ ನನ್ನ ಮೇಲೆ
ಓ ಚಿನ್ನಾರಿ ಕಿನ್ನರಿ,
ಕಿಟಕಿಯಾಚೆ ನೋಡಿದ್ದು ಸಾಕಿನ್ನು
ತಿರುಗಿ ನನ್ನೆಡೆಗೆ ನೋಡಿರಿಲ್ಲಿ
ನಾ ನಿಮ್ಮ ಪುಟ್ಟಿ ಕರೆಯುತ್ತಿದ್ದೇನೆ ನಿಮ್ಮನ್ನು,
ಆ ಸರಳುಗಳ ಬಂಧನವೇಕ ನಿಮಗೆ?
ಸರಳುಗಳ ಆಚೆ ಚೆನ್ನಾದ ಲೋಕವಿದೆ,
ಬನ್ನಿ ಮುನಿಸು ಬಿಟ್ಟು ಅಲ್ಲಿ ಆಡೋಣ ನಾವು
ಅಗೋ ಅಲ್ಲಿ ಓಡೋಣ ಹಾರೋಣ ಕುಣಿಯೋಣ,
ಅಮ್ಮ ಕೊಟ್ಟ ಮಿಠಾಯಿ
ಇಗೋ ಇಲ್ಲಿದೆ ನನ್ನ ಕೈಯಲ್ಲಿ,
ಅದನು ಸವಿಯುತ್ತಾ ನಲಿಯೋಣ ನಾವು

ವಿಕ್ರಮ್ ಹತ್ವಾರ್ ಕಿಟಕಿಯಾಚೆಗೂ ಕಣ್ಣಿದೆ, ಸ್ವಲ್ಪ ಹೊರಹೋಗಿ ಅಡ್ಡಾಡಿ - ಎನ್ನುತ್ತಾರೆ...

ಹೊಸಿಲು ಮೀರಬೇಕಿಲ್ಲ
ಕಿಟಕಿಯಾಚೆಗೂ ಕಣ್ಣಿದೆ,
ಮನೆಯೊಳಗೆ ಕತ್ತಲೆಯೋ ಬೆಳಕೋ ತಿಳಿದಿಲ್ಲ
ಹೊರಗೊಂದಿಷ್ಟು ಮಜವಿದೆ.

ಒಳಗೇ ಇದ್ದೇವೆ,
ಬೆನ್ನು ಹಾಕಿದ್ದಲ್ಲ,
ಮುಖ ತೋರುವುದಿಲ್ಲ,
ಸ್ವಲ್ಪ ಹೊರ ಹೋಗಿ
ಅಡ್ಡಾಡಿಕೊಂಡು ಬನ್ನಿ.

ಸತೀಶ್ ಬಟ್ಟೆಯ ಮುದ್ದು ಕರಡಿಗಳಿಗೆ ಜೀವ ತುಂಬಿ, ಕರಡಿಯ ಪಾಡಿಗೊಂದು ಶಬ್ದಚಿತ್ರ ಬರೆಯುತ್ತಾರೆ...

ಯಾರೂ ಕೊಳ್ದೇ ಹಾಗೆ ಇರ್ಲಿ ಜೊತೇಲಿರೋ ಬಂಟ
---------------------------------------

ನಾಡಿನೊಳಗೆ ತರುವಾ ಮುನ್ನ ಕಾಡ್ನಲ್ಲಿದ್ವಿ ನಂಬಿ
ನಮ್ಮಲ್ಲಿದ್ದ ನಿಜವನ್ ತೆಗೆದು ಹೊಟ್ಟೇಲ್ ಹತ್ತಿ ತುಂಬಿ
ಬೆಳಕೇ ಬೀಳ್ದೇ ಇದ್ದೋರನ್ನ ಹೊಳೆಯೋ ಹಾಗೆ ಮಾಡಿ
ಕಣ್ಣಲ್ಲಿ ಜೀವಾ ಇರದೇ ಇದ್ರೂ ನಮ್ದೇ ಒಂದು ಮೋಡಿ.

ಬೆನ್ನ ತೋರ್ಸಿ ಕುಳಿತಿದ್ದೇಕೆ ಅಂತ ಕೇಳ್ತೀರೆನೋ
ಬೆಳಕನ್ ಕಾದು ಕುಳಿತಾ ನಮ್ಮನ್ ಕೊಳ್ತೀರೇನೋ
ದೊಡ್ಡ ದೊಡ್ಡ ಸರಳಿನ್ ನಡುವೆ ನಾವೇ ನುಸುಳೋದಿಲ್ಲ
ನಡೆಸೋರ್ ಯಾರೂ ಇಲ್ದೇ ನಾವೇ ನಡೆಯೋದಿಲ್ಲ.

ಹೊರಗಡೆ ಇರೋದ್ ಕಾಡೇ ಅಂತ ಹೇಳೋದ್ ಕೇಳಿದ್ದೀವಿ
ಹೊರಗಿನ್ ಜನ ನಮ್ಮನ್ ದುರುಗುಟ್ಟಿ ನೋಡೋದ್ ನೋಡಿದ್ದೀವಿ
ಇಷ್ಟೊಂದು ಬೆಳಕು ಬಿದ್ದಿದ್ರೂನೂ ಅವ್ರ ಕಣ್ಣಣ್ಣೆಲ್ಲಾ ಕತ್ಲೆ
ಮೈ ಮೇಲ್ ಬಟ್ಟೇ ಹಾಕ್ಕೋಂಡಿದ್ರೂ ಮನ್ಸಲ್ಲೆಲ್ಲಾ ಬತ್ಲೆ.

ಬೆನ್ನಿಗ್ ಆಸ್ರೆ ಇಲ್ದಂಗ್ ಆಗಿ ಬಗ್ ಹೋಗ್ತಿದೆ ಸೊಂಟ
ಯಾರೂ ಕೊಳ್ದೇ ಹಾಗೆ ಇರ್ಲಿ ಜೊತೇಲಿರೋ ಬಂಟ.

ಪುಟ್ಟ ಪುಟ್ಟ ಅಳತೆಗಳೇ ಕಣಜ ತುಂಬಿಸುತ್ತವೆ ಅನ್ನುತ್ತಾರೆ ಸಿಂಧು ...

ಸೇರು-ಪಾವು...
-------------
ಸೇರು ಪಾವು
ಕೂತಿದೀವಿ ನಾವು ಕಿಟಕಿಯಲ್ಲಿ
ನಮ್ಮ ಪುಟ್ಟ ನೋಟದಲ್ಲಿ
ಕಂಡಿದ್ದನ್ನು ಅಳೆಯುತ್ತಾ
ಕಾಣದ್ದು ನಿಮ್ಮ ಕಣ್ಣಿಗೆ ಬಿಟ್ಟ ಚಿತ್ರ
ಪುಟ್ಟ ಪುಟ್ಟ ಅಳತೆ
ಅಳೆದು ತುಂಬಿದಾಗಲೆ ಕಣಜ.. !

ಪುಟ್ಟದೊಂದು ಹಸಿರ ಮೊಳಕೆ,
ಚಿಟ್ಟದೊಂದು ಹಕ್ಕಿ ಉಲಿ,
ಸುತ್ತ ಚದುರ ಜಾಗದಲ್ಲಿ ಪ್ಲಾಸ್ಟಿಕ್ ಎಸೆಯದೆ
ಹರಿವ ಮಳೆಯ ಹನಿಗಳನ್ನ ಇಂಗಲು ಬಿಟ್ಟರೆ
ಪುಟ್ಟ ಪುಟ್ಟ ಅಳತೆಯ
ದೊಡ್ಡ ಕಣಜ ತುಂಬಿ ತುಳುಕದೆ!

ಚಿತ್ರಕವನಕ್ಕೊಂದು ಪುಟ್ಟ ಮೈಲಿಗಲ್ಲು...

MD ಹಿಂದಿಯಲ್ಲಿ ಕವನ ಬರೆದು ಚಿತ್ರಕವನಕ್ಕೊಂದು ಪುಟ್ಟ ಮೈಲಿಗಲ್ಲು ಹಾಕಿದ್ದಾರೆ, ತಮ್ಮ ಕವನದಲ್ಲಿ ಅವರು ದಿವ್ಯವಾಗಿ ಮೈಮರೆಸಿದ ಪ್ರೀತಿ ಏನೂ ಅಲ್ಲದೆ ಹಗಲುಗನಸಾಗಿ ಭೂತಕಾಲ ಸೇರಿದ್ದಕ್ಕೆ ನುಡಿಚಿತ್ರ ಕಟ್ಟಿದ್ದಾರೆ...

बादलों पे उडते आसमान
उससे आगे अपने सितारों का जहां
न रात थी न गहन था वहां
बस हम ही हम थे किसी का क्या वहां

दिलें, अरमान, ख्वाब, प्यार और साथ

एक दूजे के हम थे
सोचो क्या कम थे
कहने को हम थे, जब सोचा तो लगा
न मैं था ना तुम थे

एक धडकन, एक सांस, एक ख्वाब और एक मौत
---------------------------------------------
ದೀಪಕ್, ಮತ್ತು MD - ಇವರ್ಯಾಕೋ ತಮ್ಮ ಗುರುತು ಹೇಳಿಕೊಳ್ಳಲು ನಾಚಿಕೊಳ್ಳುತ್ತಿದ್ದಾರೆ, ಇದಕ್ಕೆ ಏನು ಹೇಳಲಿ? ಹೊಸ ನೋಟಗಳನ್ನು ನೀಡಿದ ಕವಿ/ಕವಯಿತ್ರಿಯರ ಪರಿಚಯ ಚಿತ್ರಕವನದ ಮೂಲಕ ಆದರೆ ಎಲ್ಲರಿಗೂ ಸಂತೋಷ...

Sunday 1 July, 2007

ಚಿತ್ರ - ೮

ಈ ವಾರ ಮತ್ತೆ ಜಗಲಿ ಭಾಗವತರ ಸಂಚಿಯಿಂದ ಬಂದ ಚಿತ್ರ. ಕವನವಲ್ಲದೆ ಪುಟ್ಟ ಬರಹಗಳನ್ನೂ ಬರೀಬಹುದು.

=======================================
ಈ ಪುಟಾಣಿಗಳು ಪ್ರೇರೇಪಿಸಿದ ಭಾವದೋಟ ಇಲ್ಲಿದೆ...
=======================================

ಬಾಲ್ಯದ ಸ್ವಚ್ಛಂದವನ್ನು ನಿರಾತಂಕವಾಗಿ ಅನುಭವಿಸಲು ಹೇಳುತ್ತಾರೆ ಸುಪ್ತದೀಪ್ತಿ...

ಆನಂದ, ಸ್ವಚ್ಛಂದ ಈಗಲೇ ಅನುಭವಿಸು ಕಂದ
ಮುಂದೆ ಇದ್ದದ್ದೇ ಕಟ್ಟುಪಾಡುಗಳ ಬಂಧ
ಅದು ಸರಿ, ಇದು ತಪ್ಪುಗಳ ಹೊರೆ
ತೊಳೆಯದಿರಲಿ ನಿನ್ನ ಕ್ರಿಯಾಶೀಲತೆಯ ತೊರೆ

ಪ್ರಭೆ ಮುಗ್ಧ ಮಕ್ಕಳಿಗೆ ಶುಭ ಹಾರೈಸುತ್ತಾರೆ...

ಹರಿವ ನೀರ ತೊರೆಯಲಾಟ
ಆಡುತಿಹರು ಚಿಣ್ಣರು,
ಕಾಣದಿವರ ಮೊಗದಿ ಕಪಟ
ಮಕ್ಕಳೆಂದೂ ಮುಗ್ಧರು.

ಹೊಟ್ಟೆ ಬಟ್ಟೆ ಚಿಂತೆಯಿಲ್ಲ ಇವಕೆ
ಆಟವೊಂದೆ ಜೀವನ,
ಕೆಸರ ನೀರ ಮದ್ಯದಲ್ಲು
ಕಾಣ್ವರಿವರು ನಲಿವನ.

ಮಂದಹಾಸ ಹೀಗೆ ಇರಲಿ
ಇವರ ಮುಖದಲೆಂದಿಗೂ,
ಹರಿವ ನೀರಿನಂತೆ ಇರಲಿ
ಇವರ ಬದುಕು ಎಂದಿಗೂ.

ಮಕ್ಕಳ ತುಂಟತನ, ತರ್ಕರಹಿತ ವಿಚಾರಲಹರಿಗಳ ಮೇಲೆ ವಿನೂತನ ಸಂಭಾಷಣೆ ರೂಪದ ಪುಟ್ಟ ಕಥೆ ಹೆಣೆದಿದ್ದಾರೆ ಸುಶ್ರುತ...

ಚಿತ್ರಕ್ಕೂ ಮುಂಚೆ:

"ಏ, ನೀರಾಟ ಆಡನ ಬಾರಾ ಮಹೇಶಾ..."
"ಎಲ್ಲಿ?"
"ಕಾದ್ಗೆಲಿ.. ಯಾವ್ಥರ ನೀರು ಹರೀತಾ ಇದ್ದು ಗೊತ್ತಿದಾ?"
"ಹೂಂ, ನಾ ಆಗ್ಲೆ ಅಪ್ಪಯ್ಯನ ಜೊತಿಗೆ ತ್ವಾಟಕ್ಕೆ ಹೋಗಕ್ಕರೆ ನೋಡಿದಿ.."
"ನಾನೂ ಅಷ್ಟೇ.. ಸುಮಾರು ಮೀನೂ ಇದ್ವಲೇ.."
"ಏ, ಮೀನು ಹಿಡಿಯನಾ?"
"ಅಪ್ಪಯ್ಯಂಗೆ ಗೊತ್ತಾದ್ರೆ ಬೈತ.."
"ಏ ಬಾರಾ ಮಾರಾಯಾ.. ಬೇಗ ಬಪ್ಪನ.."
"ಅಮ್ಮ ಸ್ನಾನ ಮಾಡುಸ್ತಿ ಅಂತ ಹೇಳಿ ಅಂಗಿ-ಚಡ್ಡಿ ಎಲ್ಲ ಬಿಚ್ಸಿ ಹಾಕಿದ್ದು..!"
"ಥೋ ಅಡ್ಡಿಲ್ಲೆ ಬಾರಾ ಮಾರಾಯಾ... ನಾನೂ ದುಂಡಗೇ ಇಲ್ಯನಾ?"
"ನೆಡಿ ಹಂಗರೆ ಹೋಪನ.."
"ಏ ಗೌತಮಾ, ನಿಮ್ಮನೆಲಿ ಒಂದು ದೊಡ್ಡ ಸೌಟು ಇದ್ದಲಾ.. ಭಟ್ರು ಜಿಲೇಬಿ ಎತ್ತೋ ಸೌಟು.. ಜಾಲ್ರಿ ಸೌಟು.. ಅದ್ನ ತಗಂಬಾರಲೇ.."
"ಅದು ಎಂಥಕೆ?"
"ಅದ್ರಗೆ ಮೀನು ಹಿಡಿಯದು ಸುಲ್ಭ.."
"ಓಹ್ ಹೌದು..! ತರ್ತಿ ತಡಿ.."

ಚಿತ್ರದಲ್ಲಿ:

"ಏ ಇಲ್ಲಿ ಬಾರಾ.. ಇಲ್ಲಿ ಸುಮಾರು ಮೀನು ಇದ್ದು.."
"ಏ ನಂಗೆ ಹೆದ್ರಿಕೆ ಆಗ್ತು.. ಮೀನು ಕಚ್ತಲ್ಯನಾ?"
"ಥೋ ಎಂಥು ಆಗ್ತಲ್ಲೆ ಮರಾಯ.. ನಮ್ಮನೆ ಆಳು ದ್ಯಾವಪ್ಪ ಅವ್ರೆಲ್ಲ ಇದ್ನೇ ತಿಂತ"
"ಶೀ! ಹೆಂಗೆ ತಿಂತ್ವೇನ ಮೀನು..!"
"ನಾವು ಹಿಡ್ದು ನಮ್ಮನೆ ಬಾವಿಗೆ ಹಾಕನ.. ಚನಾಗಿರ್ತು.."
"ಹೌದು ಹೌದು, ಬಾ.. ಏ, ಇದೇ, ಇಲ್ನೋಡು.. ಗುಂಪಿಗೆ ಗುಂಪೇ ಇದ್ದು ಇಲ್ಲಿ.. ಇಲ್ಲಿ ಬಾರಾ ಗೌತಮಾ.."
"ವ್ಹಾವ್! ತಡಿ, ಸೌಟು ಹಾಕ್ತಿ... ಶ್... ಸುಮ್ನಿರು.. ನೀರು ಕಲಕಡ.."
"ಸಿಕ್ಚನಾ?"
"ಹಾ! ಬಂತು ನೋಡು.. ಎರ್ಡು ಪುಟಾಣಿ ಮೀನು.. ಹೇ..!"
"ಅಯ್ಯೋ.. ಒದ್ದಾಡ್ತಾ ಇದ್ದು.."
"ಆ ಹೊಂಬಾಳೆ ತಗಳಲೇ.. ಅದ್ರಗೆ ಇಟ್ಕಂಡು ಹೋಪನ.."

ಮನದಲ್ಲಿ ಮುಂದುವರೆದ ಚಿತ್ರ:

"ಇವತ್ತು ಅಮ್ಮ ನೀರು ಸೇದಕ್ಕರೆ ಕೊಡಪಾನದಲ್ಲಿ ಒಂದು ಮೀನು ಬಂದುಬಿಟ್ಟಿತ್ತು..!!"
"ಓಹ! ಇದು ಹಂಗರೆ ನಾವು ಅವತ್ತು ತಂದು ಬಿಟ್ಟಿದ್ದೇ ಮೀನು..?"
"ಹೂಂ, ಅದೇಯ.. ಅವತ್ತು ಮರಿ ಇತ್ತಲಾ? ಇವತ್ತು ಸುಮಾರು ದೊಡ್ಡಕಾಗಿತ್ತು.."
"ಕೊನಿಗೆ ಎಂಥ ಮಾಡಿದಿ ಅದನ್ನ?"
"ಅಮ್ಮಂಗೆ ಗಾಭ್ರಿ ಆಗಿ ಮತ್ತೆ ಬಾವಿಗೇ ಹಾಕ್ಬುಡ್ಚು!"
"ಓಹ್! ಇನ್ನೊಂದು ದಿನ ಸಿಕ್ಕಿರೆ ಅದ್ನ ಹೊಂಬಾಳೆಲಿ ಹಾಕ್ಯಂಡು ಮತ್ತೆ ತಗಂಡ್ ಹೋಗಿ ಕಾದ್ಗೆಲೆ ಬಿಡನ ಅಕಾ?"
"ಹೂಂ, ಅಡ್ಡಿಲ್ಲೆ, ಹಂಗೇ ಮಾಡನ.."


ಬಟ್ಟೆ - ಬೆತ್ತಲೆ - ಬಾಲ್ಯ - ಮುಪ್ಪುಗಳ ಸರಪಣಿಯ ಬಗ್ಗೊಂದು ಸ್ಥಿತಪ್ರಜ್ಞ ನೋಟ ವಿಕ್ರಮ್ ಹತ್ವಾರ್-ರಿಂದ

ಬೆತ್ತಲೆ

ನೀರಿದ್ದರೆ ಸಾಕು ಆಟಕ್ಕೆ,
ನೋಟದೆಲ್ಲೆಡೆ ಬೆರಗು
ಬಾಲ್ಯ ಬದುಕಿರುವವರೆಗೆ.

ಬೆತ್ತಲೆಯ ಮುಜುಗರ,
ಕೆಟ್ಟ ಕುತೂಹಲ,
ಬಟ್ಟೆ ಮೇಲಿನ ಮೋಹ-
ಬಾಲ್ಯ ತೀರಿದ ಮೇಲೆ
ಮುಪ್ಪು ಹುಟ್ಟುವವರೆಗೆ.

’ಮುಪ್ಪು ಹುಟ್ಟುವವರೆಗೆ’,
ಕೆಲವರಿಗದು ಹುಟ್ಟುವುದೇ ಇಲ್ಲ.


ಸತೀಶ್ ಬರಹದಲ್ಲಿ ಅಣ್ಣ ತಮ್ಮನಿಗೆ 'ಈಗೇಕೆ ಯೋಚ್ನೆ' ಅನ್ನುತ್ತಾನೆ...

ಈಗೇಕೆ ಯೋಚ್ನೆ

ಏನ್ ಅಣ್ಣಾ ನೀನು, ಮೀನ್ ಹಿಡಿಯೋಕೆ ಅಂತ
ಕರಕೊಂಡ್ ಬಂದು ಹರಿಯೋ ನೀರಿಗೆ ದೊಣ್ಣೇ
ನಾಯ್ಕನ ಅಪ್ಪಣೇ ಯಾಕೆ ಅಂತ ಕೇಳೋದೂ ಅಲ್ದೇ
ಈಗ ರೂಲರ್ ಹಾಕಿ ಹರಿತಾ ಇರೋದನ್ನ ಅಳಿತೀನೀ ಅಂತ
ಕೂತಿದ್ದೀಯ್ಯಲ್ಲಾ...
ನಿನಗೇನಾದ್ರೂ ಬುದ್ಧೀ ಇದೆಯಾ ಅಂತ
ನಾನೇನಾದ್ರೂ ಕೇಳಿ
ನೀನೇನಾದ್ರೂ ಸಿಟ್ನಲ್ಲಿ ನನ್ನ ಹೊಡೆಯೋಕಂತ
ಬರೋದಿಲ್ವಲ್ಲಾ, ಕೊನೆಗೆ...ಏನಾದ್ರೂ ಆಗ್ಲಿ
ನಾವ್ ಮೀನ್ ಹಿಡಿಯೋಕ್ ಹೋಗಿದ್ವೀ ಅಂತ
ಯಾರ್ ಹತ್ರಾನೂ ಹೇಳ್ದೇ ಇದ್ರೆ ಸಾಕು, ಅಷ್ಟೇ.

ತಮ್ಮಾ ಕೇಳು, ಬಗ್ಗಡದ ನೀರಲ್ಲಿ ಬಗ್ಗಿಸಿ ಸೊಂಟಾ
ಕೆಲ್ಸಾ ಮಾಡೋರ್ ಗೋಳು
ಗದ್ದೇ ನಾಟಿ ಮಾಡೋರೆಲ್ಲ, ಬೀಜ ಬಿತ್ತಿ ಬೆಳೆಯೋರೆಲ್ಲ
ಇಂಥಾ ಕೆಸರನ್ನ ನಂಬಿ ನಾಚೋದಿಲ್ಲ... ಅಲ್ದೇ
ಬೇರೆ ದೇಶದ್ ಜನ್ರೆಲ್ಲ ಅದೇನೇನೆಲ್ಲ ತಿಂದ್ಕೊಂಡು
ಎಲುಬಿನ್ ಹಂದ್ರಾನ್ ಮುಚ್ಕೊಂಡು
ಉಳಿದೋರ್ ಕಷ್ಟಾನ್ ಅರಿದೋರ್ ಹಾಗೆ
ದಪ್ಪಾ ಚರ್ಮಾನ್ ಬೆಳೆಸ್ಕೊಂಡು
ಬತ್ತಲೆಯಾಗಿ ನಿಲ್ಲೋದಕ್ಕೂ ಹೇಸೋದಿಲ್ಲ ಅಂತ
ನಮ್ಮ್ ಮೇಷ್ಟ್ರು ಹೇಳ್ತಿದ್ರು... ಜೊತೆಗೆ
ನಾನೂ ನೀನೂ ಈ ದಿನ
ನಮ್ಮಯ ನೋಟವ ನೋಡೋಣ
ನೀರಲಿ ಆಟವ ಆಡೋಣ
ಸಿಕ್ಕೋ ಮೀನು ಸಿಕ್ಕಿದ್ರೂನೂ
ತಗೊಂಡ್‌ಹೋಗಿ ಸಾಕೋದಿನ್ನೂ
ನಮ್ಮಲಿ ಉತ್ತರವಿರದಂಥ ಬಲುದೊಡ್ಡಾ ಪ್ರಶ್ನೆ
ಅಂಥಾ ಕಷ್ಟದ ಕೆಲ್ಸಕ್ಕೀಗೇಕೆ ಯೋಚ್ನೆ.

ನೀರಲ್ಲಿ ಆಡುತ್ತಿರುವ ಮಕ್ಕಳನ್ನು ತಡೆಯದಂತೆ ಸಿಂಧು ಮಕ್ಕಳ ಅಮ್ಮನಿಗೆ ಹೇಳುತ್ತಾರೆ..

ನೀರಾಡಲಿ, ಥಂಡಿಯಾದ್ರೆ ಕಷಾಯ ಕೊಡಬಹುದು..

ಬೆರಗು ಕಣ್ಣು ಕಂಡ ನೋಟ
ಒದ್ದೆ ಮೈಲಿ ಹೊಳೆವ ಮಾಟ
ಚಳಿಯಲ್ಲೂ ಏನೋ ಆಟ,
ಅಣ್ಣನ ಕೈಗೆ ಸಿಕ್ಕಿಬಿದ್ದ ಅಚ್ಚರಿ-
-ಯನ್ನು, ತಮ್ಮನ ಅರ್ಥವಾಗದ ಕುತೂಹಲ
ಮುದ್ದಿಸುತ್ತಿದೆ..
ಒಂದೇ ಅಚ್ಚರಿಗೆ ಹಲನೋಟ
ಮತ್ತೆ ಮತ್ತೆ ನೋಡಬೇಕೆನಿಸುವ ಸೆಳೆತ

ಬೇಡ ಮಕ್ಕಳ ಅಮ್ಮಾ
ಸ್ವಲ್ಪ ಹೊತ್ತು ಅಲ್ಲೇ ನಿಲ್ಲು,
ನೀರಾಡಲಿ, ಥಂಡಿಯಾದ್ರೆ ಕಷಾಯ ಕೊಡಬಹುದು,
ಇವತ್ತು ಅವರ ಚಿಲ್ಟೂ ಕೈಗಳಲ್ಲಿ
ನೀರು,ಮರಳು,ಪುಟ್ಟ ಗಪ್ಪಿ ಮೀನು ಹಿಡಿಯಲು ಬಿಡದೇ ಇದ್ದರೆ,
ನಾಳೆ ನಮ್ಮಂತೆಯೇ ದೊಡ್ಡವರಾಗಿ
ಬಾಲ್ಯದ ಖುಷಿ ಬೆರಳ ಸಂದಿಯಲ್ಲಿ ಸೋರಿಹೋಗಿ
ಆ ಪುಟ್ಟ ಕೈಗೆ ಲೇಖನಿ ಮಾತ್ರ ಗೊತ್ತಿರುತ್ತದೆ,
ನೀರಿನಾಳ, ಮೀನಿನ ನುಣುಪು, ಮರಳ ಬಿಸುಪು,
ಬದುಕಿನ ತಂಪು,
ಮನದಲ್ಲಿ ನೆಲಸದೆ
ಅಲ್ಲೆ ಹೊಳೆಬದಿಯಲ್ಲೆ ಉಳಿದುಬಿಡುತ್ತದೆ.

ಸ್ವಲ್ಪ ಹೊತ್ತು ಅಲ್ಲೇ ನಿಲ್ಲು,
ನೀರಾಡಲಿ, ಥಂಡಿಯಾದ್ರೆ ಕಷಾಯ ಕೊಡಬಹುದು