Friday 26 June 2009

ಚಿತ್ರ ೧೦೮


ತವಿಶ್ರೀ:

ಕರ್ಣಕುಂಡಲ

ಕೃಪಾ ತಾಯಿಯಿಲ್ಲದ ತಬ್ಬಲಿ. ಹುಟ್ಟಿದ ಕೂಡಲೇ ಆಕೆಯ ತಾಯಿ ತೀರಿ ಹೋದಳು. ತದನಂತರದಿಂದ ತಂದೆಯೇ ತಾಯಿಯ ಸ್ಥಾನವನ್ನೂ ಹೊತ್ತು ಸಾಕಿ ಸಲುಹುತ್ತಿರುವನು. ಕಡುಬಡತನದಲ್ಲಿರುವ ತಂದೆಯ ನೊಗಕ್ಕೆ ಸಾಥಿ ಕೊಟ್ಟು ಜೀವನಬಂಡಿಯನ್ನು ಸಾಗಿಸಲು ಮುಂದೆ ಬಂದಿದ್ದವಳು ಕರುಣಾ. ಆಕೆಯ ಅಕಾಲಿಕ ಮರಣದಿಂದ ಕಂಗೆಟ್ಟ ತಂದೆ ಕೃಷ್ಣಪ್ಪ, ಮಗುವಿಗೆ ಮಲತಾಯಿಯ ಸೋಂಕು ತಟ್ಟದಿರಲೆಂದೆ ಮರು ಮದುವೆ ಆಗಲಿಲ್ಲ.

ಕರುಣಾ ಸಾಯುವ ಸಮಯದಲ್ಲಿ ಅವಳ ಮೈ ಮೇಲಿದ್ದ ಆಭರಣವೆಂದರೆ ಒಂದು ಜೊತೆ ಕಿವಿಯೋಲೆ. ಮದುವೆಯ ಸಮಯದಲ್ಲಿ ತನ್ನ ತಾಯಿಯ ಮನೆಯಿಂದ ಬಳುವಳಿಯಾಗಿ ಬಂದ ಕಿವಿಯೋಲೆಯನ್ನು ಅವಳು ತನ್ನ ಪ್ರಾಣಕ್ಕಿಂತಲೂ ಹೆಚ್ಚಾಗಿ ಪ್ರೀತಿಸುತ್ತಿದ್ದಳು. ಆಕೆಯ ನೆನಪಾಗಿ ತಂದೆ ಕೃಷ್ಣಪ್ಪ ಪುಟ್ಟ ಕೃಪಾಳಿಗೆ ಓಲೆಯನ್ನು ಕಿವಿಗೇರಿಸಿದ್ದನು. ಎಂದಿಗೂ ಬಿಟ್ಟಿರಲಾರದ ಆ ಕಿವಿಯೋಲೆ, ಮಹಾಭಾರತದ ಕರ್ಣನ ಪ್ರೀತಿಯ ಕರ್ಣಕುಂಡಲಗಳಷ್ಟೇ ಅಪ್ರತಿಮವಾದುದೆಂದರೆ ಅತಿಶಯೋಕ್ತಿಯಲ್ಲ.

ಒಂದು ದಿನ ಬೆಳಗ್ಗೆ ಕೃಪಾ ಎದ್ದು ಹಲ್ಲುಜ್ಜುತ್ತಿರುವಾಗ, ಅವಳ ಕಿವಿಯಲ್ಲಿ ಕಿವಿಯೋಲೆ ಕಾಣದೇ, ಕೃಷ್ಣಪ್ಪನಿಗೆ ಘಾಬರಿಯಾಯಿತು. ಇದರ ಬಗ್ಗೆ ಇನ್ನೂ ತಿಳಿವರಿಯದ ಆಕೆಯ ಮನಸ್ಸಿಗೆ ಎಷ್ಟು ನೋವಾಗಬಹುದೆಂಬುದನ್ನು ಅರಿತ ಆತ, ತಕ್ಷಣ ಮನೆಯೆಲ್ಲವನ್ನೂ ಜಾಲಾಡಿದನು. ಆದರೂ ಕಾಣಸಿಗದ, ಕಿವಿಯೋಲೆಯಂತೆಯೇ ಇರುವ ಇನ್ನೊಂದು ಜೊತೆ ಓಲೆಯನ್ನು. ಆಕೆಗೆ ತಿಳಿಯದಂತೆ ಬೇಗ ಅಂಗಡಿಯಿಂದ ತರಲೆಂದು ಹೊರಟನು. ಆ ಬೆಳಗಿನ ಜಾವದಲ್ಲಿ ಯಾವ ಅಂಗಡಿ ತಾನೇ ತೆರೆದಿರುತ್ತದೆ. ಚಿಂತಿತನಾದ ಕೃಷ್ಣಪ್ಪ, ತನ್ನ ಮಗಳ ಅಳು ಮೋರೆಯನ್ನು ನೋಡುವ ಶಕ್ತಿಯಿರದೇ, ಓಲೆಯ ಅಂಗಡಿ ತೆರೆದು, ತಾನು ಮನೆಗೆ ಅದನ್ನು ತರುವವರೆವಿಗೂ ಮಗಳ ಕಣ್ತಪ್ಪಿಸುವುದೇ ಕ್ಷೇಮವೆಂದೆ ಹೊರಗೇ ಉಳಿದನು.

ಈ ಮಧ್ಯೆ ರಾತ್ರಿ ಇದ್ದಕ್ಕಿದ್ದಂತೆ ಕಿವಿನೋವು ಹೆಚ್ಚಾಗಿ, ಕೃಪಾ ನಿದ್ರೆಯಿಂದ ಎಚ್ಚತ್ತಳು. ತನ್ನನ್ನು ತಾಯಿ ತಂದೆ ಎರಡೂ ಸ್ಥಾನದಲ್ಲಿ ಕಾಪಾಡುತ್ತಿರುವ ಕೃಷ್ಣಪ್ಪನನ್ನು ಎಬ್ಬಿಸಿ ತೊಂದರೆ ಕೊಡಬಾರದೆಂದು ತಾನೇ, ಕಿವಿನೋವಿನ ಔಷಧಿಯನ್ನು ಹಾಕಿಕೊಂಡಳು. ಹೀಗೆ ಹಾಕಿಕೊಳ್ಳುವಾಗ, ಓಲೆ ಅಡ್ಡ ಬಾರದಿರಲೆಂದು ಅದನ್ನು ತೆಗೆದು, ದಿಂಬಿನ ಕೆಳಗಿಟ್ಟಿದ್ದಳು. ಬೆಳಗ್ಗೆ ಎದ್ದು ಹಲ್ಲುಜ್ಜಿದ ನಂತರ ಓಲೆಯನ್ನು ಹಾಕಿಕೊಳ್ಳೋಣವೆಂದುಕೊಂಡಿದ್ದಳು.

ಹಲ್ಲುಜ್ಜಿ ಓಲೆ ಏರಿಸಿಕೊಂಡು, ಅಡುಗೆ ಮನೆಯೊಳಗೆ ಕಾಲಿಟ್ಟ ಕೃಪಾ ತನ್ನ ತಂದೆಯನ್ನು ಕಾಣದಾದಳು. ಮನೆಯೆಲ್ಲಾ ಹುಡುಕಿದರೂ, ಅಕ್ಕ ಪಕ್ಕದವರೆಲ್ಲ್ರರಲ್ಲೂ ಕೇಳಿದರೂ, ತಂದೆಯ ಸುದ್ದಿ ತಿಳಿಯದೇ ಹೋಗಿ, ಆತನ ಪ್ರಾಣಕ್ಕೇನಾದರೂ ಅಪಾಯವಾಯಿತೇ ಎಂಬ ಭಯ ಆಕೆಯನ್ನಾವರಿಸತೊಡಗಿತು.

ಮುಂದಿನದು ... ಓದುಗರ ತಲೆಯೊಳಗೆ ಬಿಟ್ಟದ್ದು ... :)

Wednesday 17 June 2009

ಚಿತ್ರ ೧೦೭ತವಿಶ್ರೀ:

ತಲೆಯ ಮೇಲೆ ಕುಟ್ಟಿ
ಒಳಗೆ ಬಾ ಕುಟ್ಟಿಗನೇ
ಪ್ಲಾಸ್ಟಿಕ್ಕಲ್ಲವೋ ಇದು
ಚಿಂತನೆಯ ಚಿಲುಮೆಯು

ಕುಟ್ಟಿಸಿಕೊಳ್ಳಲು
ಕಾಯುತಿಹುವು ಎನ್ನೆದೆಯ ೧೦೪ ಕೀಲಿಗಳು
ಏಟು ತಿಂದರೂ ಓಡಿಹೋಗದಂತಿರಲು
ಗಟ್ಟಿಯಾಗಿ ಹಿಡಿದಿಹುದು
ಒಂದು ಮಣೆಯು

ಯಾವುದೇ ಭಾಷೆಯ ಅರಿವಿಲ್ಲದಿದ್ದರೇನಂತೆ
ಕುಟ್ಟಿ ಕುಟ್ಟಿ ತೋರಿಸಬಹುದು
ಅದರಲೂ ಮನ ಬಂದಂತೆ
ತನು ತೋರಿದಂತೆ
ನಿನ್ನ ತಲೆಯಲಿರದ ಜಾಣ್ಮೆಯ

ನಿನ್ನ ಅಣತಿಯೇ ಎನಗೆ ಪ್ರಾಪ್ತಿ
ಅದರದೂ ಕೊಡುವೆ ಗಣತಿ
ನಿನಗೆ ತಿಳಿದಿಹುದು ಡಾಸು ಲೈನಕ್ಸು
ಎನಗೆಲ್ಲವೂ ಬೂಸು ಬುರ್ನಾಸು

Wednesday 10 June 2009

ಚಿತ್ರ ೧೦೬ತವಿಶ್ರೀ:

ಕಣ್ಣು ಕೋರೈಸುತಿಹುದು
ಶಕ್ತಿಯ ತೋರುತಿಹುದು
ನೇಸರನಿಗೆ ಸಡ್ಡು ಹೊಡೆಯುವ ಸವಾಲೆಸೆಯುತಿಹುದು

ಅಪರಂಜಿ ಚಿನ್ನದ
ತಲೆಯ ಮೇಲೆ ಹೊಡೆದಂತಿಹುದು
ನಕಲೀ ರೋಲ್ಡ್ ಗೋಲ್ಡ್

ನೀ ಸವಾಲೆಸೆಯಬಲ್ಲೆಯೋ
ನಾ ಸವಾಲೆಸೆಯಬಲ್ಲೆನೋ
ನೋಡೇ ಬಿಡೋಣ

ಅಸಲೀ ಮಾಲು
ಮಾಡಬೇಕು ಜಾಗ ಖಾಲಿ :D

******************

ಬೆಳಗಾದೊಡೆ
ನೇಸರನ ಪ್ರಖರತೆ
ಮಂಕಾಯಿತು ದೀಪ
ಬಯಲಾಯಿತು ನಕಲೀ ಚಿನ್ನ

Wednesday 3 June 2009

ಚಿತ್ರ ೧೦೫ಜಲನಯನ:

ಎಚ್ಚೆತ್ಕೋಳಿ ಮುಂಚೇಯ

ಎಚ್ಚೆತ್ಕೋಳಿ ಮುಂಚೇಯ
ಇಳಿವಯಸ್ನಾಗ್ ಇವ್ನಿ
ದುಡ್ಯಾಕಾಯ್ತದಾ ನಿಮ್ಮಂಗೆ ?
ನಾನಲ್ಲೇಯವ್ವಾ ಜವ್ನಿ
ಒಟ್ಟೆ-ಬಟ್ಟೆ ಕಟ್ಟೀ ಸಾಕ್ದೆ
ದುಡ್ದು ಮದ್ವಿ ಆಗೋಗಂಟ
ಅಗ್ಲು-ರಾತ್ರೆ ಅನ್ದೇ ತಂದಾಕ್ದೆ
ಸಾಲನೋವಾಲನೋ ಮಾಡಿ
ನೂರ್ ಸುಳ್ಳೇಳಿ ನಿನ್ಮದ್ವೆ ಮಾಡ್ದೆ
ಗಂಡ ಓದ್ಮ್ಯಾಲೆ ನಿನ್ನಣ್ಣನ್ ಓದ್ಗೆ
ಅಡ ಇಟ್ಟ ಬೂಮಿ ಬುಡ್ಸ್ಕಳ್ಳಾಕಾಗ್ದೆ
ಅವನ್ಮದ್ವೇಗೆ ಅಂತ ಮಾರಾಕ್ದೆ
ಅವ್ನೋ ಇದ್ ಮನೆ ಬರ್ಸ್ಕಂಡ
ಇದ್ಬದ್ದ ವಡ್ವೆ ಹೆಂಡ್ತಿಗಂತ ಕಸ್ಕೊಂಡ
ಇಳೀವಯಸ್ನಾಗೆ ಕಲ್ಲೊರ್ತೀನಿ
ಮರ ಚೆಕ್ಕೆ ಮಾರಿ ಒಟ್ಟೆ ಒರ್ಕೋತಿವ್ನಿ
ಕಡೀತಾ ಇಲ್ವೇ ನೀವೂ
ಅಣ್ಣೂ ಅಂಪ್ಲೂ ಕೊಡೋ ಮರಾವ
ಬಗೀತಾ ಇಲ್ವಾ ಅನ್ನಾಕೊಡೋ
ತಾಯಿ ಒಟ್ಟೇಯ....
ಜ್ವಾಕೆ ಕಣ್ರಪ್ಪಾ ಜ್ವಾಕೆ..!!
ಉರಿಸ್ಬ್ಯಾಡಿ ಅಡ್ದ್ ಒಟ್ಟೇಯಾ
ಏನ್ ಆಕ್ಕಂಡೀರಿ ಕಡ್ದ್ ಕಟ್ಟೇಯಾ?
ಅದ್ಕೇ ಏಳ್ತಿವ್ನಿ ಎಚ್ಚೆತ್ಕೊಳ್ಳಿ
ನೀವು ಎತ್ತೋರ್ಗೆ ಬೂತಾಯ್ಗೆ
ಮಾಡ್ದಂಗೆ ನಿಮ್ಮಕ್ಕ್ಳೂ ನಿಮಗೆ
ಮಾಡೋದಕ್ಕೆ ಮುಂಚೇಯಾ