Wednesday 24 September, 2008

ಚಿತ್ರ ೭೧



ಚಿತ್ರ ೭೧ ಕ್ಕೆ ತವಿಶ್ರೀ ಮತ್ತು ಸತೀಶ್ ಅವರು ಬರೆದ ಕವನಗಳು ಹೀಗಿವೆ

ತವಿಶ್ರೀ ಅವರ ಕವನ -
ಸಿರಿ ನಾಡು


ಇತ್ತ ನೋಡು ಕಲ್ಪವೃಕ್ಷಗಳ ನಾಡು
ಸುತ್ತಲೂ ಹರಡುತಿದೆ ರವಿಯ ತಂಪಿನ ಜಾಡು
ಕಂಗೊಳಿಸುತಿಹುದು ಲಲಿತ ಕಲೆಗಳ ಬೀಡು
ಜಾನುವಾರು ಹಕ್ಕಿಗಳು ಸೇರುತಿವೆ ಗೂಡು

ಯಾರೆಂದರು - ಸಾಯುತಿಹುದು ಈ ನಾಡು
ಬೆಳಗಿ ಜಗಮಗಿಸುತಿಹುದು ಕಗ್ಗತ್ತಲೆಯ ಕಾಡು
ಬೆಳಕ ಮೂಡಿಸಿದುದು, ರವಿ ಮೀರಿಸಿದ ಕವಿ
ಬೆಳಕಿನ ಜಾಡ ಹುಡುಕು ಹೊರಟಿಹನು ರವಿ

ಎಂದಿನಂತೆ ಬೈಗಿನಲಿ ಕಣ್ಬಿಟ್ಟನು ನಮ್ಮ ರವಿ
ಸುತ್ತಲೂ ಕತ್ತಲಿನ ಬದಲು ಕಂಗೊಳಿಸುವ ಸವಿ
ಮೂಗಿಗೆ ಬಡಿಯುತಿಹುದು ಶ್ರೀಗಂಧದ ಹವೆ
ಭೂತಾಯಿಯ ಮಡಿಲಿನಿಂದ ಹೊರಹೊಮ್ಮುತಿಹುದು ಹಬೆ

ಹಸಿದು ಬಳಲಿದವಗೆ ತಂಪೆರೆಯುವ ಬೊಂಡ
ಉಡುಗುತಿಹ ಶಕ್ತಿಗೆ ಚೈತನ್ಯ ತುಂಬುವ ಹಯನು
ಜಗವ ಸಾಗಿಸುತಿಹ ಚಕ್ರದ ಚಕ್ಕದ ಬಂಡಿ
ಯಾರೂ ಕಂಡಿರದ ಹೊನ್ನಿನ ಗಿಂಡಿ

ನಗರಗಳ ಜಂಜಾಟದ ಸೋಂಕಿರದ
ಹಳ್ಳಿನಾಡಿದು ನಾಗರೀಕತೆಯ ಬುನಾದಿ
ಯಾವುದಿದೀ ವಿಪರೀತದ ಶಕ್ತಿ?
ಪಂಚಭೂತಗಳಿಗೂ ಸಡ್ಡೊಡೆಯುವ ಯುಕ್ತಿ
ಸಿರಿಯ ಮಡಿಲಲಿ ತುಂಬಿ ತುಳುಕಿಸಿಹ ಕನ್ನಡಮ್ಮ
ಅಹರ್ನಿಶಿ ಇರಲಿ ಇವಳ ಮೇಲೆ ನಮ್ಮೆಲ್ಲರ ಭಕ್ತಿ


ಸತೀಶ್ ಅವರ ಕವನ -
ಎಲ್ಲೂ ನಿಲ್ಲದ ನಡೆ

ಕಗ್ಗತ್ತಲು ಕಾಡುವಾಗ ನೆಲೆಸಿತ್ತು ಶಾಂತಿ
ಬಾನ ರವಿ ಬಂದ ಕ್ಷೋಭೆಗಳ ತಂದ
ಭುವಿಯನ್ನು ಬೆಳಗಿ ಓಟದಲಿ ಪಳಗಿ
ಮತ್ತೆ ಕತ್ತಲಾಗುತ್ತಿದ್ದಂತೆ ನಾಚಿ ನೀರಾಗಿ
ತನ್ನ ಆವರಣದಲಿ ಓಕುಳಿ ಚೆಲ್ಲಿ
ಎಲ್ಲಾ ಕಡೆಗೂ ಕಿರಣಗಳು ಚೆಲ್ಲಾಪಿಲ್ಲಿ
ಹರಡುವಂತೆ ಮಾಡಿ ದಿನನಿತ್ಯದ ಮೋಡಿ
ಕತ್ತಲನು ಸುತ್ತ ಹರವಿ ಮತ್ತೆಲ್ಲೋ ಓಡುತಿಹನು ರವಿ.

ಇವನ್ನೆಲ್ಲಾ ನೋಡಿಯೂ ನೋಡದೆಯೇ
ತಲೆತೂಗುವ ತೆಂಗುಗಳ ತಪ್ಪೇನು
ಮುಗಿಲಿನೆಡೆಗೆ ಚಿಮ್ಮುವ ಮರದುತ್ಸಾಹಕೆ
ಅಡ್ಡ ಬೀಸುವ ಗಾಳಿ-ಕಿರಣಗಳ ಒಪ್ಪೇನು.

ಇಲ್ಲಿ ಸತ್ತು ಮತ್ತಿನ್ನೆಲ್ಲೋ ಹುಟ್ಟುವ ಸೂರ್ಯ
ದಿನ ಸಾಯುವವರಿಗೆ ಅಳುವ ಕಾರ್ಯ
ಜೋಪಡಿಯಲ್ಲಿ ಜೊಂಪಿನಲಿ ಮಲಗಿ
ಆಸೆ ಕಂಡಂತೆ ಸುಖನಿದ್ರೆಯಲಿ ಮುಲುಗಿ
ಕಂಡೂ ಕೈಗೆ ಸಿಗದ ಕನಸುಗಳ ನಂಬಿ
ಕಿರಣಗಳು ಹಾಯಿ ದೋಣಿಯ ತುಂಬಿ
ಒಂದು ಎಡೆಯಿಂದ ಮತ್ತೊಂದು ಕಡೆಗೆ
ಎಂದೋ ಹೊರಟ ಎಲ್ಲೂ ನಿಲ್ಲದ ನಡೆಗೆ.

Tuesday 16 September, 2008

ಚಿತ್ರ ೭೦



ಚಿತ್ರ ೭೦ ಕ್ಕೆ ತವಿಶ್ರೀ, ಕುಮಾರ ಸ್ವಾಮಿ ಕಡಾಕೊಳ್ಳ ಮತ್ತು ಸತೀಶ್ ಅವರು ಬರೆದ ಕವನಗಳು ಹೀಗಿವೆ

ತವಿಶ್ರೀ ಅವರ ಕವನ -

ಯಾಕುಂದೇಂದು ತುಷಾರ ಹಾರ ಧವಳಾ
ಯಾ ಶುಭ್ರ ವಸ್ತ್ರಾನ್ವಿತಾ
ಯಾ ವೀಣಾ ವರದಂಡ ಮಂಡಿತ ಕರಾ
ಯಾ ಶ್ವೇತ ಪದ್ಮಾಸನಾ ...

ಕಂಡಲ್ಲೆಲ್ಲಾ ಕಾಣುವುದು ಕಪ್ಪು ಬಿಳುಪು
ಕೆಳಗೆ ಜಾರುತಿಹುದು ಜಾರಿಸುತಿಹುದು ಹಿಮ
ಅಲ್ಲಲ್ಲಿ ಅದರಡಿ ಕಾಣುತಿಹುದು ಕರಿಕಲ್ಲು
ದಿಗಂತದಲಿ ಕಣ್ಮುಚ್ಚಾಲೆ ಆಡುತಿಹುದು ಕಾಮನಬಿಲ್ಲು

ಅಪ್ಪ ಅಮ್ಮ ಅಣ್ಣ ಅಕ್ಕ ತಮ್ಮ ತಂಗಿ
ಎಲ್ಲರೂ ಏರಿಸಿರುವುದು ಕಪ್ಪನೆಯ ಚೊಣ್ಣ ಷರಾಯಿ
ಇವಗೆ ಏರಿಸಿರುವುದು ಕೆಂಪನೆಯ ದಿರಿಸು
ಕೆಲವರಿಗೆ ಮಾತ್ರವಂತೆ ಕೈಗೆ ಗವಸು

ಅಲ್ಲಲ್ಲಿ ಅಬ್ಬೇಪಾರಿಯಾಗಿ ನಿಂತಿಹವು ಬೋಳು ಮರಗಳು
ಎಂದು ನೆಲಕಚ್ಚುವೆನೋ ಎಂಬ ಹೆದರಿಕೆ
ಕಾಲಿಟ್ಟ ಕಡೆ ಜೊರ್ರನೆ ಜಾರುವ ಜಾರಿಕೆ
ಮಜ ಮಾಡಲು ಏಕೆ ಹಿಂಜರಿಕೆ

ದೀಪವಿರದ ಕಂಬಗಳು
ಬೆಳಗಿನ ಹೊತ್ತಿನಲ್ಲೂ ಆವರಿಸಿರುವುದು ಕತ್ತಲು
ಅಲ್ಲಲ್ಲಿ ಕಾಂಬರುವ ನೆಲದಲಿನ ಹೊಂಡಗಳು
ಭೂ ತಾಯಿಯ ಮೊಗದಲಿ ಸಿಡುಬಿನ ಕಲೆಗಳು

ಕುಹಕರದೂ ತಲೆಯ ಕಾಯಲು
ಕುಹಕವರಿಯದ ಛತ್ರಿಗಳು
ಎಲ್ಲಿದ್ದರೇನ್ ಯಾರಾದರೇನ್
ತನು ಬಿಚ್ಚಿ ನಿಲ್ಲುವುದು ಕಾಯಕವಲ್ಲವೇನ್

ಅಲ್ಲಿ ನಿಂತಿರುವುದೊಂದು ಮುರುಕು ಮಂಟಪ
ಯಾರೂ ಹೇಳುವವರಿಲ್ಲ ಅಯ್ಯೋ ಪಾಪ!
ಕೈಯಿಲ್ಲ ತನುವಿಲ್ಲ
ರಕ್ಷಕನಾಗಿರಲು ಕಾಲು ತಲೆ ಎರಡೇ ಸಾಕಲ್ಲ

ಆರ್ತಸ್ವರದಲ್ಲಿ ಕೇಳಿಬರುತಿದೆ
’ಎಮ್ಮ ಪ್ರಾಣ ಸಂಕಟ
ನಿಮಗೆ ಮೋಜಿನ ಕೋಣೆಯಾ?’


ಕುಮಾರ ಸ್ವಾಮಿ ಕಡಾಕೊಳ್ಳ ಅವರ ಕವನ -

ಬೆಳ್ಳಿಯಂತೆ ಹರಡಿದೆ
ಸುತ್ತಲೂ ಬಿಳಿ ನೀರ್ಗಲ್ಲು
ಮುತ್ತಿದೆ ಆಡಲು ಮಂದಿ
ಸುರಿವ ಮಂಜನಲ್ಲೂ

ಬಾನು ಕವಿದಿದೆ ಮಂಜು
ನೆಲವು ಮುತ್ತಿದೆ ಮಂಜು
ಮರೆಯಾಗಿದೆ ಮರದೆಲೆ
ಹುದುಗಿ ಹೋಗಿದೆ ಮನೆ

ಮಯ್ಕೊರೆವ ಚಳಿಯಲ್ಲೂ
ಮಯ್ಮರೆತಿದೆ ಮಂದಿ
ಮಾತೆಲ್ಲ ನಡುಗುತಿರೆ
ಆವಿಯಾಗುತಿದೆ ಉಸಿರು

ಆಟಕ್ಕೆ ಅಣಿಯಾಗಿ
ತುಂಟರು ಜೊತೆಯಾಗಿ
ಹೊದ್ದು ಬಂದಿಹರು
ದಪ್ಪ ತುಪ್ಪಳ ಅಂಗಿ

ಗಾಳಿಯ ಸುಳಿವಿಲ್ಲ
ಬೆಳಗಿನ ಸೆಳಪಿಲ್ಲ
ಕವಿದಂತೆ ಕಾವಳು
ತಳವೆಳಗು ತಲೆಯೋಳು

ನೀರ್ಗಲ್ಲು ಬಿರಿಯಾದರು
ಕರಗುವುದು ಬಿಸಿತಾಗಲು
ಮೂಡ ನನ್ನೀ ಮನವು
ಅರಿಯದೊ ನಿಸರ್ಗವನು

** ಕುಕೂಊ....
ಪುಣೆ


ಸತೀಶ್ ಅವರ ಕವನ -
ಏನು ಮಾಯೆ ಯಾವ ಮೋಹ


ಒಂದು ರೂಪ ಆಕಾರದಿಂದ ಇನ್ನೊಂದಕೆ
ಬದಲಾಯಿಸುವ ಎಲ್ಲೆಡೆ ನೀರು ನೀರು
ಒಂದು ಕಾಲ ಆಕಾಶದಿಂದ ಮತ್ತೊಂದಕೆ
ಹರಿ ಹಾಯುವ ನೀರಿನ ಜೋರು ಜೋರು.

ಒಂದು ಚಿತ್ರ ಮತ್ತೊಂದನು ಬೇರ್ಪಡಿಸುವ
ಭ್ರಮೆಯ ನೆರಳನು ದೂರುವ ಏಕ ಚಿತ್ತ
ಒಂದು ಕಣ ಅದರ ಗುಂಪನು ಹೋಲದಿರುವ
ಕೊಳೆಯ ಮೇಲೆ ಬಿಳಿ ಹಾಸು ಸುತ್ತ ಮುತ್ತ.

ಕಪ್ಪು ಕತ್ತಲ ಕಣಗಳ ಒಡಲಲ್ಲಿ ಹುದುಗಿಕೊಂಡು
ಬರಿ ಬೆಳಕನ್ನು ಬಿಂಬಿಸೋ ಭ್ರೆಮೆಯೇ
ಕಪ್ಪು ಆಕಾಂಕ್ಷೆಗಳ ಕುದಿಸಿ ಒಳಗಿಟ್ಟುಕೊಂಡು
ಸುಕ್ಕಿನ ಮುಖವನ್ನು ಸಮನಾಗಿಸೋ ಕ್ಷಮೆಯೆ.

ಏನು ಲೀಲೆ ಯಾವ ಚಿತ್ತ ದಿನಕೊಂದರ ವಿಶೇಷ
ಬೆಚ್ಚಗೆ ಹೊದ್ದ ನೆಲವ ಬೆಚ್ಚಗೆ ಹೊದ್ದು ನೋಡುವ ಪರಿ
ಏನು ಮಾಯೆ ಯಾವ ಮೋಹ ಉಳಿದ ಅವಶೇಷ
ಸಮನಾದ ಧೃವ ಪ್ರದೇಶ ಮುಚ್ಚಿಕೊಂಡ ಒರಟು ಗಿರಿ.

Tuesday 9 September, 2008

ಚಿತ್ರ ೬೯



ಚಿತ್ರ ೬೯ ಕ್ಕೆ ತವಿಶ್ರೀ, ಸತೀಶ್ ಮತ್ತು ಕುಮಾರ ಸ್ವಾಮಿ ಕಡಾಕೊಳ್ಳ ಅವರು ಬರೆದ ಕವನಗಳು ಹೀಗಿವೆ

ತವಿಶ್ರೀ ಅವರ ಕವನ -
ದೇವನ ಕನ್ನಡಿ


ಹೋಗುತಿಹೆ ನೀ ಎತ್ತ
ನಿನಗೆ ನಾ ಹಾದಿ ತೋರಿಸಿದತ್ತ
ಅದೋ ಹೊರಡು ದಿಗಂತದತ್ತ
ನಾನಿಲ್ಲದೇ ನೀನಿಲ್ಲ
ಒಬ್ಬಂಟಿಯೆಂಬ ಹೆದರಿಕೆ ಸಲ್ಲ

ನಿನ್ನ ಮೈಮೇಲೆ ಹರಿದಾಡುವವರಿನ್ನೆಷ್ಟು?
ಎಲ್ಲರ ಭಾರವ ತಡೆಯಬಲ್ಲೆಯೇನು?
ಒಳಿತಲ್ಲವೀ ನಿನಗೀ ಅಹಂಕಾರ
ನೀ ಆಗಿರುವೆ ಪರಾವಲಂಬಿ
ಈ ಭುವಿಯ ಮೇಲೆ

ನೋಡತ್ತ ಸುಂದರ ಕಾನನ ಸಿರಿ
ಇಂದಿಹುದು ನಾಳೆ ಇರುವುದಾ?
ಬಾ ಇಂದೇ ನಿನಗೆ ಅದರ ರುಚಿ ಉಣಿಸುವೆ
ನಾಳೆ ಮೆಲುಕಾದರೂ ಹಾಕುವಿಯಂತೆ
ಇಂದು ಉಣದಿದ್ದರೆ ನಾಳೆಗಿನ್ನೆಲ್ಲಿಯ ಮೆಲುಕು
ಸಮುದ್ರ ತೀರದಲಿ ಹೆಜ್ಜೆ ಛಾಪಿಸಿದ ಉಸುಕು

ಹೊಕ್ಕುವೆ ಸುರಂಗದಲಿ
ನಿನ್ನ ನಂಬಿದವರಿಗೆ ಹಾದಿ ತೋರುವೆ
ಕಾಲಿಡದ ಕಾನನದಲಿ
ಹೊರತರುವೆ ಕತ್ತಲಲಿ
ಕಣ್ಣಿದ್ದರೂ ಕಾಣದವಗೆ ಬೆಳಕ ತೋರಿಸುವೆ

ತೋರು ನೀ ನಿಸರ್ಗ ದೇವಿಯ ಸಿರಿ
ಜನ ಕಾಣದ ದೇವನ ಪರಿ
ನಿನಗಿಲ್ಲವೇ
ಜೀವ
ಹೀಗಳೆಯುವ ಭಾವ
ಎಲ್ಲವನೂ ಸಹಿಸಿ
ಓಡುವೆ, ಓಡುತಲಿರುವೆ
ಒಂದೆಡೆ ನಿಲ್ಲದಿರುವೆ
ನೀನಾದರೂ ಸಮಾಜದ ಕಣ್ಣ ತೆರೆ
ಕಾಣದ ದೇವನ ಮರ್ಮವ ತೋರೆ


ಸತೀಶ್ ಅವರ ಕವನ -
ಕೊನೆಯಾಗದ ಅಹವಾಲು

ಇಲ್ಲಿ ತೆರೆ ಸರಿದಿಹ ಸರಿ ಸವಾಲು
ನಿಲ್ಲದೆ ಓಡುವ ನೋಟದ ಪಾಲು.

ಕತ್ತಲೆಯಿಂದ ಬೆಳಕಿನವರೆಗೆ
ಬೆಳಕಿನಿಂದ ಬಲು ದೂರದವರೆಗೆ
ನಿಲುಕಿಹ ದೃಷ್ಟಿ ಎಲ್ಲೋ ದೂರ
ಹತ್ತಿರ ಕತ್ತಲು ನೆಳಲು ಅಪಾರ
ಬಾನೂ ಭೂಮಿ ಕೂಡುವ ಸ್ಥಳವು
ಹತ್ತಿರ ಸಿಕ್ಕೂ ಕೈಗೆ ದೂರವು.

ಜೊತೆಜೊತೆಯಾಗಿಹ ಉಕ್ಕಿನ ಕಂಬಿ
ಹತ್ತಿರವಿದ್ದೂ ಸೇರವು ನಂಬಿ
ಯಾರಲಿ ನಂಬಿಕೆ ಏನೋ ಕಷ್ಟ
ಜಾಡಿರದ ಗೂಡಿಗೆ ಏನೋ ನಷ್ಟ
ಗುಡ್ಡವ ಸೀಳುವ ಸುರಂಗ ಮಾರ್ಗ
ಬೇಗುದಿಯಲ್ಲಿ ಕೊಳೆಯುವ ವರ್ಗ.

ಎಲ್ಲೋ ತೆರೆದು ಹೊರಟಿಹ ದೂರಕೆ
ತಿಳಿ ಹೇಳುವ ಜಾಡಿನ ಕುಹಕಕೆ
ಗಾಳಿಯ ತೀಡಿ ಸ್ವಾಗತ ಬೀರೋ
ಹಚ್ಚನೆ ಹಸಿರಿನ ಎಲೆಗಳ ತೇರೋ
ಮಾರ್ಗವು ಕೊನೆಯಾದಂತೆ ಕಂಡೂ
ತಿರುಗಿ ನೋಡದೆ ಹೊರಟಿಹ ದಂಡು.

ಅಲ್ಲಿ ತೆರೆ ಸರಿಸಿಹ ಸರಿ ಸವಾಲು
ಕೊನೆಯಾಗದ ಪರಿ ಅಹವಾಲು.


ಕುಮಾರ ಸ್ವಾಮಿ ಕಡಾಕೊಳ್ಳ ಅವರ ಕವನ -
ಹಳಿ ಬಂಡಿ

ಉದ್ದುದ್ದ ಕಬ್ಬಿಣದ ಎರಡು ಹಳಿ
ಹಡ್ಡಡ್ಡ ಹಳಿ ಬಿಗಿ ಹಿಡಿತಕೆ ಬೆಲಗು
ಒಟ್ಟಿಗೆ ಬಿಗಿಯಾಗಿ ಹಿಡಿದು ಕಟ್ಟಿರಲು
ನಾನು ಹಳಿಬಂಡಿ ಓಡಲು ಅಣಿನೋಡು

ತೆವಳ ಬೇಕು ಹಳಿಯ ಮೇಲೆ
ನುಸುಳ ಬೇಕು ನೆಲದಿಡ್ಡಿಯೊಳಗೆ
ತಪ್ಪಿದರೆ ದಾಯ ಮುಕ್ಕುವುದು ಬದುಕು
ತಪ್ಪಿಗೆ ಹೊಣೆಯಾರು ತಿಳಿಸುವರು ಯಾರು?

ಗುಡ್ಡ ಏರುವೆನು ಅಡ್ಡ ಬಂದರೇನು
ಹಳ್ಳ ದಾಟುವೆನು ಅಗಲ ಆಳ ಇದ್ದರೇನು
ಸುತ್ತು ಬಳಸು ಎನ್ನುವ ಪರಿವೆನಗಿಲ್ಲ
ಗಾಲಿಯ ಹಡಿಯಲ್ಲಿ ಹಳಿ ನೀನು ಮಲಗಿರಲು ಸಾಕು

ಹಿಂದೆ ಅಮರಿ ಅಡರಿದೆ ಕಾವಳು
ಮುಂದೆ ನುಸುಳಿದರೆ ಬೆಂಬೆಳಗು
ಬೆಳಗು ಕಾವಳುಗಳ ತೆರಹು ತಿಳಿಯದೆನಗೆ
ನೀ ತೋರಿದಂತೆ ತೆವಳುವುದೆನ್ನ ಕೆಲಸ

ಅದು ಇದು ಎಂಬ ಗೆಂಟು ಮಡಿ ಎನಗಿಲ್ಲ
ಹೊತ್ತು ಸಾಗುವೆನು ಒಡಲಲ್ಲಿಟ್ಟದನ್ನು
ತೋರಿಸಿದಂತೆ ನಡೆಯುವುದೆನ್ನ ದಿಟ
ಸೋಲಿಗೆ ನೆಪ ನೀನಲ್ಲದೆ ನಾನಾಲ್ಲವಲ್ಲ

ನನ್ನ ಬದುಕಿನ ಎಳೆ ಮನುಜ ನಿನ್ನ ಹಿಡಿತದಲಿ
ಎಳೆವಾಡಿಸಿದಂತೆ ಅಡುವನು ನಾನು
ಓಡಲು ಅಣಿಯಾಗಿಹೆನು ಈಗ ಓಡಲೇನು
ನೀನೇಳಿದಂತೆ ನುಗ್ಗುವುದೊಂದೆನ್ನ ಬದುಕು

ಕುಕೂಊ...
ಪುಣೆ

ಒರೆ ತಿಳಿವು:
ಗೆಂಟು-->ತೆರಹು--> ಭೇದ
ಬೆಲಗು--> ಕಟ್ಟಿಗೆ, ಲೋಹದ ಅಡ್ಡ ಪಟ್ಟಿ
ನೆಲದಿಡ್ಡಿ---> ಸುರಂಗ
ಹಳಿಬಂಡಿ-->ರಯ್ಲು, ಉಗಿಬಂಡಿ, ಹೊಗೆಬಂಡಿ

Tuesday 2 September, 2008

ಚಿತ್ರ ೬೮



ಚಿತ್ರ ೬೮ ಕ್ಕೆ ತ್ರಿವೇಣಿ,ತಿರುಕ ಮತ್ತು ಸತೀಶ್ ಅವರು ಬರೆದ ಕವನಗಳು ಹೀಗಿವೆ

ತ್ರಿವೇಣಿ ಅವರ ಕವನ -
ಕಾಲದ
ಗಂಟೆ


ತುಂಬಿದ ಶಾಂತಿಯ ಕೆಣಕುವ ಹಾಗೆ
ಮನಸನು ತಲ್ಲಣ ಗೊಳಿಸುವ ಹಾಗೆ
ಎಲ್ಲಿಂದಲೇ ತೂರಿ ಬಂದಿತು ಶಬ್ದ
ಕಲಕೇ ಹೋಯಿತು ದಿವ್ಯ ನಿಶ್ಯಬ್ದ !

ಅಂತರಾಳದ ಆಳಕ್ಕಿಳಿದು
ಮೊಳಗುತ್ತಲಿದೆ ಕಾಲದ ಕೂಗು
ಹನಿಹನಿ ಆಯುವು ಸೋರುವ ಮುನ್ನ
ಜನ್ಮ ಸಾರ್ಥಕಗೊಳಿಸಿಕೊ ಚಿನ್ನ !

ಆಯಿತೇ ಮಗನಿಗೆ ವಿದ್ಯಾಭ್ಯಾಸ ?
ಆದೀತು ಮಗಳ ಮದುವೆಯೂ ನಿರಾಯಾಸ
ತೀರಿತು ತಾನೇ ಮಾಡಿದ ಸಾಲ ?
ಬರಿ ಕನವರಿಕೆಯಲಿ ಕಳೆಯಿತೇ ಕಾಲ ?

ಆಗಿತ್ತೇ ನಿನ್ನಿಂದ ಅನ್ಯರಿಗುಪಕಾರ ?
ಆಗಿರಲಿಲ್ಲ ತಾನೇ ನೀನಾರಿಗೂ ಮಣಭಾರ ?
ನಿನ್ನ ಬಾಳಿಗೂ ಒಂದು ಅರ್ಥವಿತ್ತೇ ?
ಇಲ್ಲ, ಬರೀ ಕುಯುಕ್ತಿಯಲಿ ವ್ಯರ್ಥವಾಯ್ತೇ?

ಅರೆಬರೆದಿಟ್ಟ ಗ್ರಂಥ ಏನಾಯ್ತು ?
ಆಪ್ತ-ಮಿತ್ರರ ಭೇಟಿ ಎಂದಾಯ್ತು ?
ಪ್ರಪಂಚ ಪರ್ಯಟನ, ಕಾಶಿ ಯಾತ್ರೆ ?
ಮುಗಿಸಿರಿ ಬೇಗ ; ಮುಗಿಯಲಿದೆ ಜಾತ್ರೆ !

ಗಣಗಣ ಬಡಿದಿದೆ ಕಾಲದ ಗಂಟೆ
ಅದಕೆದುರಾಡುವ ಧೀರರು ಉಂಟೇ?
ಬಂದ ದಾರಿಯಲ್ಲಿ ಇರಲಿ ಹೆಜ್ಜೆ ಗುರುತು
ಒಯ್ಯುವುದೇನಿಲ್ಲ ಸುಕೃತಗಳ ಹೊರೆ ಹೊರತು!

- ತ್ರಿವೇಣಿ


ತಿರುಕ ಅವರ ಕವನ -
ಒಂದು ಗಂಟೆಯ ಕಥೆ


ಕಾಲದ ಪರಿವೆ ಇಲ್ಲದೇ ಮಲಗಿದವರ
ಬಡಿದೆಬ್ಬಿಸುವ ಗಂಟೆ
ತಾನೇ ಮಲಗಿದೆಯೇ?
ಕಾಲವೊಂದಿತ್ತು - ಊರಿಗೊಂದೇ ಗಂಟೆ
ಕೋಟೆ ಬಾಗಿಲಲಿ ಜೊತೆ ಇರುತ್ತಿತ್ತೊಂದು ಹೆಂಟೆ
ಬೋರಜ್ಜಿಯ ಕನಸಿನೊಂದಿಗೆ
ಮರೆಯಾಯಿತು ಆ ಹೆಂಟೆ
ಒಬ್ಬಂಟಿಗನಾಗಿ ಬಿಟ್ಟು ಹೋಗಿತ್ತು

ಮಾದೇಶನ ಮಾಲೀಶು ತಾಲೀಮಿನೊಂದಿಗೆ
ನಡೆದಿತ್ತು ನನ್ನ ಕೈಂಕರ್ಯ
ಅಲಾರಮ್ಮು ಪಟಾಲಮ್ಮುಗಳ ಹಾವಳಿ
ಎಲ್ಲರ ಕೈಗಳಲ್ಲಿ ಬಗೆ ಬಗೆಯ ಗಡಿಯಾರದ ಸರಪಳಿ
ಮಾದೇಶನಿಗೆ ವಯೋಧರ್ಮದ ಬವಳಿ
ಪಿಂಚಣಿ ಇಲ್ಲದ ನಿವೃತ್ತೊ ನನಗೆ ಬಂದ ಬಳುವಳಿ

ಮಾಲಿಕನಿಲ್ಲದೇ ಕಿಲುಬುಗಟ್ಟುತ್ತಿದೆ
ಕೇಳುವವರಿಲ್ಲವೆಂದು ಹಲುಬುತ್ತಿದೆ
ಒಂದು ಕಾಲಕೆ ಗಟ್ಟಿಯಾಗಿ ಹೊಸೆದಿದ್ದ
ಮಜಬೂತವಾಗಿದ್ದ ಹಗ್ಗ
ಉಸಿರಿಲ್ಲದ ಪುಗ್ಗದಂತೆ ಸುರುಟಿಹೋಗುತ್ತಿದೆ
ಎಳೆ ಮಗುವೂ ಕತ್ತರಿಸಬಹುದಂತಾಗುತ್ತಿದೆ

ಎನಗೀಗ ಉಳಿಗಾಲವಿಲ್ಲ
ಕಾಲಕಸಕ್ಕಿಂತ ಕಡೆಯಾಗಿಹೆನಲ್ಲ
ಎನ್ನತ್ತ ಒಂದು ದೃಷ್ಟಿಯೂ ಮೂಡುತ್ತಿಲ್ಲವಲ್ಲ

ಅಗ್ನಿಶಾಮಕ ದಳದಲಿ
ನನಗೂ ಉಂಟು ಭಾಗ
ದೇಗುಲ ಇಗರ್ಜಿ ಮಂದಿರಗಳಲ್ಲಿ
ದಾಸಯ್ಯನ ಜೋಳಿಗೆಯ ಬದಿಯಲ್ಲಿ
ಭಾಗಮ್ಮನ (ಹಸು) ಕೊರಳಿನಲ್ಲಿ
ವಿರಾಜಿಸುತಿಹೆ
ಅಲ್ಲೆಂದು ಬರುವುದೋ ಎನಗೆ
ಕೊನೆಗಾಲ!
ಸವಕಳಿಸುತ್ತಿಹ ನನಗೆಂದು
ದೊರೆವುದು ವಿಶ್ರಾಂತ ಜೀವನ
ಪಿಂಚಣಿ
ಮುಂದೊಮ್ಮೆ ನಾನೂ
ದರ್ಜಿಸುವೆ ಎನ್ನ ಪಳೆಯುಳಿಕೆ.


ಸತೀಶ್ ಅವರ ಕವನ -
ಸದ್ದು ಮಾಡದ ಘಂಟೆ


ಸುಮ್ಮನಿರುವವರು ಮಾಡುವರೆ ಸದ್ದು
ಚಲಿಸುವಿಕೆಗೇ ತಗುಲಿಕೊಂಡಿಹ ಮದ್ದು

ಗುಡಿ ಇಲ್ಲದ ಘಂಟೆ ಪಡೆ ಇಲ್ಲದ ಸೈನ್ಯ
ಹಳೆಯದನು ಈವರೆಗೆ ನೆಚ್ಚಿಕೊಂಡಿಹ ದೈನ್ಯ

ಸೆಣಬು ನಾರು ಹತ್ತಿ ಎಳೆಗಳಿಗೆ ಜೋತುಕೊಂಡು
ಹೊಸ ಸೂರು ತಲೆಮಾರುಗಳಿಗೆ ಆತುಕೊಂಡು

ದೂರದವರೆಗೆ ಪಸರಿಸುವ ಗಾಳಿ ಬದಲಾಯ್ತೆ
ಗಳಘಂಟೆಯೊಳಗಿನ ಲೋಹ ಸರಿಹೋಯ್ತೆ

ಹಿಂದಿನದಕು ಇಂದಿನದಕು ತಳುಕಿಕೊಂಡಂತೆ
ಹಳೆ ನಾದವನು ಆಲಿಸುವ ಕಿವಿಗಳು ಬದಲಂತೆ

ನಿಂತಲ್ಲೇ ನಿಂತವುಗಳಿಗೆ ಸ್ಪಂದಿಸುವ ಹಕ್ಕಿಲ್ಲ
ಬೇಕು ಬೇಕೆಂದಲ್ಲಿ ಓಡುವವುಗಳಿಗೆ ದಿಕ್ಕಿಲ್ಲ

ಇಂದಿನ ಸೂರ್ಯನು ಮರೆಯಾಗುವ ಮುನ್ನ
ಹಲವನ್ನು ಬೆಸೆವ ಇಂದನ್ನು ನೋಡುವುದು ಚೆನ್ನ.