Monday 28 April, 2008

ಚಿತ್ರ- 51




ತ್ರಿವೇಣಿಯವರ ಸೊಗಸಾದ ಕವನ:

ರಕ್ತ ಕಣ್ಣೀರು


ಬಡವನಲ್ಲ ಸ್ವಾಮಿ ನಾನು, ಒಂದು ಕಾಲದ ಶ್ರೀಮಂತ
ಹತ್ತೂರ ಯಜಮಾನ ಹೆಸರು ಲಕ್ಷ್ಮೀಕಾಂತ
ಧನ-ಕನಕ, ಸುಖ-ಶಾಂತಿ ತುಂಬಿತ್ತು ನಮ್ಮನೆಯಲ್ಲಿ
ಸಿರಿದೇವಿ ಇದ್ದಳು ಕಾಲ್ಮುರಿದು ಮೂಲೆಯಲ್ಲಿ

ಬೆಳೆದೆ ರಾಜಕುಮಾರನಂತೆ, ಬದುಕೋ ಸುಖದ ಸುಪ್ಪತ್ತಿಗೆ
ಕೈಹಿಡಿದು ಬಂದಳು ಸುಗುಣೆ, ಸುಕುಮಾರಿ ಮಲ್ಲಿಗೆ
ದಾಂಪತ್ಯ ವಲ್ಲರಿಯಲಿ ಅರಳಿದವು ಮೊಗ್ಗೆರಡು
ನೋವೆಂಬುದಿರಲಿಲ್ಲ ಮನೆಯಾಗಿತ್ತು ನಲುಮೆ ಬೀಡು

ಏನಾಯ್ತೋ, ಹೇಗಾಯ್ತೋ ಬಿತ್ತೋ ಯಾರ ಕಣ್ಣು?
ಗಂಟುಬಿದ್ದಳು ಎಲ್ಲೋ ಥಳುಕು-ಬಳುಕಿನ ಮನೆಮುರುಕ ಹೆಣ್ಣು
ದುರ್ವ್ಯಸನ, ದುಷ್ಟ ಸಹವಾಸದಲಿ ಮುದಗೊಂಡಿತು ಮನಸ್ಸು
ಕ್ಷಯಿಸಿತ್ತು ಸಂಪತ್ತು ; ಜೊತೆಗೆ ಆರೋಗ್ಯ, ಆಯಸ್ಸು

ಮಹಾಮಾರಿಯಂಥ ರೋಗ ಅಡರಿತ್ತು ; ವಾಸಿಯಾಗದಂತೆ!
ಬಂಧು-ಬಳಗ, ಗೆಳೆಯರು ದೂರ ಓಡಿ ಮುಗಿದಿತ್ತು ಸಂತೆ
ಚಿಕಿತ್ಸೆಗೂ ಉಳಿಯದಂತೆ ನುಂಗಿ ನೊಣೆದಿದ್ದೆ ವಿತ್ತ
ಅಳಿದುಳಿದ ಬಾಳಿಗೆ ಹಳಹಳಿಕೆಯೇ ಪ್ರಾಯಶ್ಚಿತ್ತ !

ಮುನಿದರು ಮಕ್ಕಳು, ಮುದುಡಿದಳು ಮಡದಿ
ಈಗ ಮುರುಕು ಗುಡಿಸಲಿನಲ್ಲೇ ನನ್ನ ಬಿಡದಿ
ಹೊಟ್ಟೆ ಪಾಡಿಗೆ ಕೊನೆಗೆ ಈ ಭಿಕ್ಷಾಟನೆಯ ಕರ್ಮ
ನನ್ನಂತೆ ನೀವಾಗಬೇಡಿ, ಮಾಡಿ ಸ್ವಾಮಿ ಧರ್ಮ !



ಸತೀಶ್ ಈ ಬಾರಿ ಹೊಸ ಶೈಲಿಯ ಕವನದ ಮೂಲಕ ಹೀಗೆ ಹೇಳುತ್ತಾರೆ:

ಭಿಕ್ಷೆಯ ಬೇಡುವುದೇ ತಪ್ಪೇ

(ಪ್ರತಿ ಪ್ಯಾರಾದ ಎರಡನೆ ಸಾಲನ್ನು "|" ಚಿಹ್ನೆಯ ನಂತರದ ಪದವನ್ನು ಸೇರಿಸಿಕೊಂಡು ಮತ್ತೊಮ್ಮೆ ಓದಿಕೊಳ್ಳುವುದು)

ಎಲ್ಲೆಡೆ ಬೇಡುವ ಜನರಿರುವಾಗ
ತಲೆತಲೆಗೊಂದು ಹೊಸರಾಗ| ಇರುವ
ಜನರ ನಡುವೆ
ಭಿಕ್ಷೆಯ ಬೇಡುವುದೇ ತಪ್ಪೇ.

ಪ್ರೀತಿಯ ಭಿಕ್ಷೆ ಬೇಡುತ ಪಡ್ಡೇ ಹುಡುಗರು
ಹೊತ್ತುಗೊತ್ತಿರದ ಶೂರರು| ನಮ್ಮ
ಪಡ್ಡೆಗಳ ನಡುವೆ
ಭಿಕ್ಷೆಯ ಬೇಡುವುದೇ ತಪ್ಪೇ.

ರಾಮರಾಜ್ಯದ ಆಸೆಯ ತೋರಿ
ಬಡಬಾಯಿಯನು ಜಗತಿಗೆ ಸಾರಿ| ಪುಕ್ಕಲ
ಖಾದಿ ತೊಟ್ಟವರೆದುರು
ಭಿಕ್ಷೆಯ ಬೇಡುವುದೇ ತಪ್ಪೇ.

ಸರಕಾರಿ ಕೆಲಸ ದೇವರ ಕೆಲಸ
ಖಾಕಿಯ ಶಿಸ್ತನು ಕಲಿಸುವ ಕೆಲಸ| ಎನ್ನುತ
ಎಂಜಲ ಕಾಸು ಬೇಡುವರೆದುರು
ಭಿಕ್ಷೆಯ ಬೇಡುವುದೇ ತಪ್ಪೇ.

ಸಂಸಾರ ಬಿಟ್ಟು ಸನ್ಯಾಸ ತೊಟ್ಟು
ಕಾವಿಯ ತ್ಯಾಗವ ತಿಳಿಸುವರು| ಆದರೂ
ಗುಪ್ತ ಜೀವನ ಸವೆಸುವರೆದುರು
ಭಿಕ್ಷೆಯ ಬೇಡುವುದೇ ತಪ್ಪೇ.

ಇಲ್ಲದವರು ಇದ್ದವರೆದುರು ಬೇಡುವುದು ಸಹಜ
ಇದ್ದೂ ಇದ್ದೂ ಇಲ್ಲವೆನ್ನುವರು ನಿಜ| ಬುದ್ಧಿ
ತಿಳಿದ ಜನರೆದಿರು ನಾವು
ಭಿಕ್ಷೆಯ ಬೇಡುವುದೇ ತಪ್ಪೇ.


ಕುಮಾರ ಸ್ವಾಮಿ ಕಡಾಕೊಳ್ಳರ ಮನಮುಟ್ಟುವಕವನ:

* * ನನ್ನ ಗತಿ **

ಒಣಕಲಾಯಿತು ಅಟ್ಟೆ
ಸಣಕಲಾಯಿತು ಮೈ
ಗುಳಿಬಿದ್ದವು ಕಣ್ಣು
ಬಿಳಿಯೊಡೆದವು ಜವಿ
ಮಂದವಾಯಿತು ದ್ವನಿ
ಕುಗ್ಗುತಿಹ ನೋಟ
ಕರಗುತಿಹ ನೆನಪು
ಸೆಳವಿನಲಿ ಅಳವಿ
ಕೈಯಲ್ಲಿ ಊರುಗೋಲು
ಸರಿದ ಸಂಬಂಧಗಳು
ಬಿರದ ಬದುಕಿನ ದಾರಿ
ಕಣ್ಮರೆಯಾದ ಕನಸು
ದಿಶೆ ಕಾಣದ ನೋವು
ಉಕ್ಕುತಿಹ ದುಮ್ಮಳ
ಬಿಕ್ಕುತಿದೆ ಜೀವ
ಸ್ವಾರ್ಥ ಗಾಳಕ್ಕೆ ಸಿಕ್ಕಿ
ದಿಕ್ಕುಗಾಣದೆ ಬಿದ್ದಿಹೆನು
ತಿರುಪೆ ನೀಡಿರೋ
ಒಂದು
ತುತ್ತು ಕೊಡಿರೋ
ಬಿಟ್ಟು ಹೋಗದ
ಜೀವಾತ್ಮವನು
ಹೊತ್ತು ತಿರುಗಬೇಕು,

ಹಿಂದೆ ಹೇಗಿದ್ದೆ
ನನಗೆ ಯಾರು ಸಾಟಿ
ಎಂದು ಎದೆ ಮೀಟಿ
ಎಲ್ಲರೊಳು ಅಹಮ್ಮಿನಲಿ
ಕೂಗಿ ಮೆರೆದಿದ್ದೆ
ಕಾಲನ ನಿಯಮನ
ಮರೆತು ಸೆಟೆದಿದ್ದೆ
ಎಲ್ಲ ನನ್ನಹುದೆಂದು
ಕೊಂದು ತಿಂದಿದ್ದೆ
ಇಂದು ಬದುಕಲು
ಒಂದು ಅಗುಳು ಕೂಳಿಲ್ಲ
ಇಂದೆನಗೆ ನಿಮ್ಮನ್ನು
ಬೇಡದೆ ವಿಧಿಯಿಲ್ಲ
ಬೇಡುವೆನು ತಿರುಪೆ
ಕರುಣಿಸಿ ನೀಡಿರೋ
ಬದುಕಿ ಕರ್ಮ ತೀರಿಸಲು

ನನ್ನಂತೆ ನೀವಾಗದಿರಲು
ನನ್ನೊಂದು ಮಾತು ಕೇಳಿರೋ
ಸ್ವಾರ್ಥಕ್ಕಿರಲಿ ಕಿಂಚಿತ್ತು
ಬುದ್ಧಿಯಲಿ ಕಡಿವಾಣ,
ಇದೆಯೆಂದು ಅಧ್ವಾನ
ಮಾಡದೆ ನಿಧಿಯನ್ನು
ಹಾಸಿಗೆ ಇದ್ದಷ್ಟು ಕಾಲು
ಚಾಚಿ ಬದುಕಿರೋ

ಪದಗಳ ಅರ್ಥ:

ಅಟ್ಟೆ-ಚರ್ಮ, ತೊಗಲು
ಜವಿ-ಕೂದಲು
ಅಳವಿ-ಶಕ್ತಿ

Tuesday 22 April, 2008

ಚಿತ್ರ- 50





ಈ ಬಾರಿಯ ಚಿತ್ರಕ್ಕೆ ಭಿನ್ನ ಭಾವಗಳ, ಆದರೆ ಹೆಚ್ಚೂ ಕಡಿಮೆ ಒಂದೇ ವಿಷಯದ ಆಲೋಚನೆಯ ಬರಹಗಳನ್ನು ಆಸಕ್ತರು ಬರೆದಿದ್ದಾರೆ. ಅವುಗಳು ಇಂತಿವೆ:

ತವಿಶ್ರೀರವರ ಕವನ:

ಅಕ್ಕ ತಂಗಿ ಸಂವಾದ
ರಂಗಮ್ಮ

ನಿನಗೊಂದು ಆಸರೆ
ನನಗೊಂದು ಆಸರೆ
ಎನಗಿರುವುದು ನಿನಗಿಲ್ಲ
ನಿನಗಿರುವುದು ಎನಗಿಲ್ಲ
ನಿನಗಿಹುದು
ನೊಸಲಿನಲಿ ನಗುತಿಹ ಕುಂಕುಮವೇ ಆಸರೆ
ಎನಗೆ
ಕೈ ಹಿಡಿದು ನಿಲ್ಲಲು ಮರವೇ ಆಸರೆ
ಅದಿಲ್ಲವಾಗಲು ನಿನ್ನ
ಮಡಿಲ ಬೊಡ್ಡೆಯೇ ಆಸರೆ
ನಾನಾಗಬಲ್ಲೆನೇ ನಿನಗಾಸರೆ

ಲಕ್ಷ್ಮಮ್ಮ

ನಾ ನಿನಗೆ ಲಕ್ಕಿಯಾದರೇನು
ಪೂರ್ಣ ನರೆತಿಹ ಕೂದಲು
ಎನಗೆ
ಇನ್ನೂ ಎಳೆತನ ತೋರಿಸುತಿಹ
ಅರೆ ಕಪ್ಪಿರುವ ಕೂದಲು
ನಾ ಅಕ್ಕನಾದರೇನಂತೆ
ನೀನಲ್ಲವೇ ತಂಗಿ
ಜೀವನದಿ ಬೆಂದು ಬೇಯ್ದು ಬಸವಳಿದಳಿದ
ಜೀವನ ಮರ್ಮದ ಅರಿತ ನೀ ನನ್ನ ರಂಗಿ

ರಂಗಮ್ಮ

ನೀ ಅಕ್ಕ ನಾ ತಂಗಿ
ಆತ್ಮ ಒಂದೇ ಬೇರೆ ಬೇರೆ ಅಂಗಿ
ನಿನಗಿಹುದು ತಾಳಿ ಅರಿಶಿನ ಕುಂಕುಮ
ಭಾಗ್ಯ
ಹಿರಿಯ ಮುತ್ತೈದೆಗೆ ಹೂವೀಳ್ಯದಲಿ
ಮೊದಲ ಪ್ರಾಶಸ್ತ್ಯ

ಲಕ್ಷ್ಮಮ್ಮ

ನನ್ನ ಬಳಿಯಲಿರಲೇನಂತೆ
ಮಣ ಚಿನ್ನ
ಖಾಲಿ ಕೊರಳಿನ ಜೀವನವೇ ಚೆನ್ನ
ಏನಾದರೇನಂತೆ ನೀ ಅಕ್ಕ ನಾ ತಂಗಿ
ನಿನ್ನ ಪಕ್ಕದಲ್ಲಿರಲು ನಾನಾಗೆನು ಮಂಗಿ

ಕುಮಾರಸ್ವಾಮಿ ಕಡಾಕೊಳ್ಳಮುಂಡೆ ನಿಯಮ ಕವನ:

ಸಿರಿವಂತಿಕೆಯ ಹೆಣ್ಣಿನ ಮನೋಹರ ಅಂದವನ
ಅಳಿಸಿದರು, ಜೊತೆಗೆ ಅಳಿಸಿ ನನ್ನಣೆಯ ಚೆಲುವನ್ನ
ಯಾರೋ ಮಾಡಿದ ಧರ್ಮದ ನಿಯಮವಂತೆ
ಒಂಟಿ ಭಾವಕ್ಕೆ ಮುಂಡೆ ನಿಯಮದ ಬರೆಯಂತೆ

ಜೊತೆಗಿದ್ದು ಚಿಗುರಿಸಿ ನೂರು ಭಾವನೆಗಳನ್ನ
ಬೆಸಗೊಂಡು ಸರಸದಲಿ ನಲಿಸಿ ನನ್ನ ಬದುಕನ್ನ
ಬಿಟ್ಟು ಹೋದನು ಅವನು ಮರಳಿಬಾರದ ತೀರಕೆ
ಇದ್ದವರು ಕಿತ್ತುಕೊಂಡರು ಮುಡಿಯ ಚೆಲುವನ್ನ

ಬದುಕಿದ್ದರು ಸುಮಂಗಲೆ ನಾನಲ್ಲವಂತೆ
ಶುಭಕಾರ್ಯಗಳಲ್ಲಿ ನಾಸೇರಬಾರದಂತೆ
ಇದ್ದು ಎಲ್ಲ ಭಾವ ಎಲ್ಲರಿಗಿಂತ ನಾ ಬೆರೆಯಂತೆ
ಬದುಕುವ ಚಿಗುರನ್ನು ನಿಯಮದಲಿ ಮಿಟುಕುವರು

ಅವಳಂತೆ ನಾನಿರುವೆ ಅವಳ ಭಾವ ನನಗೂ ಇದೆ
ಅವಳ್ಯಾಕೆ ಮೂದಲಿಸುವಳು? ಕೊಂಕಿನಲಿ ಹಿಂದೂಡುವಳು
ಅರಿಯಳೇನು ನನ್ನೆದೆಯ ನೋವ!
ಮರೆತಳೇನು ನಾನು ಹೆಣ್ಣೆಂಬುದನ್ನ

ಯಾರು ಮಾಡಿದರು ಈ ಕುಟಿಲ ನಿಯಮ
ಬದುಕಿಸಿ ಕೊಲ್ಲುವ ಈ ಜನಗಳ ನಿಯಮ
ಬರಿ ಹೆಣ್ಣಿಗ್ಯಾಕೋ ಈ ನೀತಿ ಅನ್ವಯ
ಅರಿಯನು ನಾನು ಕರುಣಿಸೋ ದೇವ



ಸತೀಶರ ಕವನ:ನಮ್ಮ ಮನಸಿನ ನೆಲೆ

ಅನೇಕ ಕತ್ತಿ ಕೊಡಲಿ ಏಟು ತಿಂದ ಮರ
ಸುತ್ತುವರಿದೋ ಮುತ್ತುವ ಮನಸು ಭಾರ
ಹಳೆಯದದು ಮಾಗಿ ಹೊಸತನು ತೋರುವ ಕಳೆ
ಒಂದೊಂದು ಸಂಬಂಧದ ಅದೇನೇನೋ ಎಳೆ.

ಎಲ್ಲ ಸಮವೆಂದುಕೊಂಡು ಮೇಲೇರುವ ಏಣಿ
ಬೆಳಕಿನ ಹಿಂದೆಯೇ ಇರುವ ನೆರಳಿನಾ ಗಣಿ
ಎಲ್ಲ ಸ್ಥಿತಿಗತಿಗಳಲ್ಲೂ ಅಡರಿಕೊಳ್ಳುವ ಸುಕ್ಕು
ಪಕ್ಕದ ಎಂದೋ ಚಿಗುರಿ ಬೆಳೆದ ಮರವು ನಕ್ಕು
ಬೆಳೆದು ಏಟು ತಿಂದ ಹಾಗೆಲ್ಲ ಬರಬಹುದು ಅನುಭವ
ಕೆಟ್ಟದಾಗಿ ಕಲಿತದ್ದನ್ನೇ ಹೊಸತಾಗಿ ಕರೆವ ಭಾವ
ಒಂದು ಸ್ಥಿತಿಯಲಿ ಒಂದು ಎಳೆ ಇನ್ನೊಂದರಲಿ ಮೂರು
ಹಣೆಯಲಿ ಕೈಯಲಿ ಇಲ್ಲವೇ ಇಲ್ಲ ಮೂಗುತಿ ಚೂರು.

ಅನುಕಂಪವೆನ್ನುವುದು ನಮ್ಮ ಮನಸಿನ ನೆಲೆ
ನಾವು ಬದುಕಲು ಬೇಕು ಸ್ಪೂರ್ತಿಯಾ ಸೆಲೆ
ಅದರ ಬೆನ್ನಿಗೆ ಹುಟ್ಟಿದ ನಂಬಿಕೆಗಳು ಹಲವು
ಉಳಿದವರಿಗೆ ತೆರೆದುಕೊಳ್ಳಬೇಕು ನಮ್ಮ ನಾವು

ವಿಜಯಾ ರ ಚುಟುಕ:

ತಲೆ ನೆರೆತು ಮುಖ ಸುಕ್ಕಾದರೇನು
ದೇಹ ಬಳಲಿ ಮರಕ್ಕೆ ಒರಗಿದರೇನು
ಮಮತೆಗೆ ಮುಪ್ಪಿಲ್ಲ ಪ್ರೀತಿಗೆ ವಯಸಿಲ್ಲ
ಹಿರಿಯರೆರೆಯುವ ತಂಪಿಗೆ ಸಾಟಿಯೇನು

ಸುಪ್ತ ದೀಪ್ತಿಯವರ ಲಹರಿ:

ತಂಗಿಯ ಸ್ವಗತ:

ಅಕ್ಕ, ನಾನು ಎಂದಿಗೂ ನಿನ್ನ ಬೆನ್ನಿಗೆ ಬಿದ್ದವಳು. ಎಲ್ಲದರಲ್ಲೂ ನೀನೇ ನನಗೆ ಮುಂದಾಳು. ನನಗೆ ನಡೆ-ನುಡಿ ಕಲಿಸಿದವಳು, ಆಟ-ಪಾಠ ಕಲಿಸಿದವಳು ನೀನೇ. ಕಿರಿಯ ವಯಸ್ಸಿನಲ್ಲೇ ಕನಸರಿಯುವ ಮೊದಲೇ ಮದುವೆಯ ಬಂಧನಕ್ಕೆ ಇಬ್ಬರೂ ಜೊತೆಯಾಗಿಯೇ ಒಳಗಾದೆವಲ್ಲ! ಒಂದೇ ಮನೆಯ ಹಿರಿ-ಕಿರಿ ಸೊಸೆಯರಾಗಿ ಸೇರಿದಾಗಲೂ ನೀನು ನನಗೆ ಮುಂದಾಳಾಗಿಯೇ ನಡೆದೆ. ಆದರೆ, ನೋಡಕ್ಕಾ... ವಿಧಿ ವಿಲಾಸ ಹೇಗಿತ್ತು? ಕಾಲುಂಗುರವಿಟ್ಟ ವರುಷದೊಳಗೆ ನಾನು ಬಳೆ-ಹೂ ಕಳೆದುಕೊಂಡೆ, ನೀನು ಮೊದಲ ಬಾರಿಗೆ ಅಮ್ಮನಾದೆ. ಅಷ್ಟೇ ಏನು ವ್ಯತ್ಯಾಸ? ಅತ್ತೆ ಮನೆಯಿಂದ ನನ್ನನ್ನು ಕಳುಹಿಸದೆ ನಿನ್ನ ಬೆನ್ನಿಗೇ ಕಟ್ಟಿಕೊಂಡೆಯಲ್ಲ, ಯಾಕೆಂದು ನನಗೀಗ ಅರ್ಥವಾಗುತ್ತಿದೆ. ಆರು ದಶಕಗಳ ನಂತರದ ಹಿನ್ನೋಟಕ್ಕೆ ಎಷ್ಟೊಂದು ಮುಖಗಳಿರುತ್ತವೆ!?

ಮನೆಯ ಕತ್ತಲ ಮೂಲೆಗೆ ಸೇರಬೇಕಾಗಿದ್ದ ನನ್ನನ್ನು ನಿನ್ನ ಸರಿಸಮಾನವಾಗಿಯೇ ಎಳೆದುಕೊಂಡೆ. ಅತ್ತೆ-ಮಾವ-ಭಾವನವರ ವಿರೋಧಗಳ ನಡುವೆಯೇ ನಿನ್ನ ಮಕ್ಕಳ ಪೋಷಣೆಯನ್ನು ನನಗೊಪ್ಪಿಸಿದೆ. ನನ್ನ ಬಾಳಿಗೂ ಒಂದು ಸಾರ್ಥಕತೆಯನ್ನು ಕಲ್ಪಿಸಿದೆ. ಅತ್ತೆಯ ಗೊಣಗುಗಳನ್ನು ನನ್ನ ಕಿವಿಯಿಂದ ದೂರವಿರಿಸಲು ನೀನು ಮಾಡದ್ದೇನು? ನಿಜ, ನಿನ್ನಂಥ ಬಣ್ಣ, ಮಾತುಗಾರಿಕೆ, ನಾಜೂಕುತನ ನನ್ನಲ್ಲಿಲ್ಲ. ಆದರೂ ತಂಗಿಯೆನ್ನುವ ಒಂದೇ ಕಾರಣಕ್ಕೆ ನನ್ನನ್ನು ಆದರಿಸಿದ ನಿನ್ನನ್ನು ದೇವಿಯೆನ್ನಲೆ? ಅತ್ತಿಗೆ-ನಾದಿನಿಯರ ಚುಚ್ಚುಮಾತುಗಳನ್ನೂ ನೀನೇ ಎದುರಿಸಿದ್ದು ನನಗರಿವಿಲ್ಲ ಅಂದುಕೊಂಡೆಯಾ? ನನ್ನನ್ನು ಯಾಕೆ ಅಷ್ಟೊಂದು ಅಂಟಿಕೊಂಡಿದ್ದೀಯಾ? ನಾನಿಲ್ಲದಿದ್ದರೆ ನಿನಗೆ ಅಸ್ಥಿತ್ವವೇ ಇಲ್ಲವೆನ್ನುವಂತೆ ನಡೆದುಕೊಳ್ಳುತ್ತೀಯಲ್ಲ, ಅಂದಿಗೂ, ಇಂದಿಗೂ ಹಾಗೇ ಇದ್ದೀಯಲ್ಲ. ಇಂಥ ಪ್ರೀತಿಯನ್ನು ಆತ್ಮ ಸಂಗಾತವೆನ್ನಲೆ? ಅವಳಿಗಳಾಗಿ ಹುಟ್ಟದಿದ್ದರೂ ಅವಳಿ ಆತ್ಮಗಳಾಗಿದ್ದೇವೇನೋ ಅನ್ನುವಷ್ಟು ಪ್ರೀತಿ ನಿನ್ನಿಂದ. ನನ್ನ ಜೀವನ ನಿನ್ನಿಂದ ಪಾವನವಾಗಿದೆ, ಅಕ್ಕಾ. ನಿನ್ನ ಕುಂಕುಮ, ಹೂ, ಬಳೆ, ನಿನ್ನ ಕಳಿಕಳಿಯ ಕಿರುನಗುವಿನ ಜೊತೆ ಎಂದೆಂದೂ ಇರಲೆಂದು ಹಾರೈಸುವೆ. ಬೆಳಕು ಸದಾ ನಿನ್ನೆಡೆಗಿರಲಿ.

Tuesday 15 April, 2008

ಚಿತ್ರ-49




ತ್ರಿವೇಣಿಯವರು ಹೂವ ಹಾಸಿನ ಬಗ್ಗೆ ಹೀಗೆ ಹೇಳುತ್ತಾರೆ.

ಹಸುರಲ್ಲಿ ಹೋಲಿ

ಮಕಮಲ್ಲು ಹಾಸಿನ ಮೇಲೆ ಹೂವ ರಂಗೋಲಿ
ಮಾಲಿನ್ಯಕೆಡೆಯಿಲ್ಲ; ಹಸಿರ ದರಬಾರು!
ಹಾದಿಹೋಕರಿಗೆಲ್ಲಾ ಪರಿಮಳದ ಹೋಲಿ
ನಿಸರ್ಗವೇ ವಹಿಸಿಹುದು ಜಗದ ಕಾರುಬಾರು

ದೇವನಡಿಗೂ ಅಲ್ಲ; ಹೆಣ್ಣ ಮುಡಿಗೂ ಇಲ್ಲ
ಹೀಗೇಕೆ ಬಿದ್ದಿವೆ ಇಲ್ಲಿ, ಅಯ್ಯೋ ಪಾಪ!
ದೇವಲೋಕದಿಂದ ಜಾರಿ ಬಿದ್ದಿಹುದಲ್ಲ
ಯಾರು ಕೊಟ್ಟಿರಬಹುದು ಮುನಿದು ಶಾಪ?

ಬರಡು ಬಾಳನು ಹರಸಿ ಸ್ವರ್ಗಮಾಡಿದೆ ಚೆಲುವು
ಒಂದೂ ಕುಂದಿರದ ಸಹಜ ಸೌಂದರ್ಯದಿಂದ
ಅಕಳಂಕ ಸೊಬಗಿಗೆ ತಲೆಬಾಗುತಿದೆ ಮನವು
ಪ್ರಕೃತಿಯೇ ದೈವವೆಂಬನುಭೂತಿಯಿಂದ.


ವಿಜಯಾ, ತಮ್ಮ ಕವನದಲ್ಲಿ ...

ಕಣ್ಣಲ್ಲಿ ತುಂಬಿತ್ತು ಹಸಿರಾದ ನಾಳೆ
ಕರೆ ಬಂದಿತ್ತು ಹೋಗುವುದಕೆ
ಕೊಂಡಿ ಕಳಚಿ ನೆಲಕ್ಕುರುಳೆ

ಹೋಗುವುದಕೆ ಭಯವಿಲ್ಲ ಅಗಲಿಕೆಯ ತಾಳೆ
ಹೋಗುವ ಮುನ್ನ ಧರೆಯ ಚೆಲುವಾಗಿಸಿ
ಸಾರ್ಥಕ ನನ್ನ ಜೀವನ ಕೇಳೆ

ಮತ್ತೆ ಹುಟ್ಟಿ ಬರುವೆ ನಾ ನಾಳೆ
ಮೊಗ್ಗಾಗಿ, ಹೂವಾಗಿ, ಕಾಯಾಗಿ,
ಹಣ್ಣಾಗಿ ಸಂತೃಪ್ತಿಯ ಬಾಳು ಬಾಳೆ




ತವಿಶ್ರೀ ಹೂವ ಅಂತರಾಳವನ್ನು ಹೀಗೆ ಕವನದೊಳಗೆ ಹೆಣೆದಿದ್ದಾರೆ.

ಪ್ರಕೃತಿಯಂಶ

ಹುಟ್ಟಿದೆ ನಾ ಆ ಪ್ರಕೃತಿಯಿಂದ
ಸೇರುತಿಹೆ ಆ ಪ್ರಕೃತಿಯೊಳಗೆ
ಏರಿಸುವಿರೇಕೆ ನಿಮ್ಮ ಮುಡಿಯ ಕಡೆಗೆ
ಯಾಕೆ ಓಗೊಡಲಿ ಕ್ಷುಲ್ಲಕರ ಈ ಕರೆಗೆ

ವಿರಮಿಸುತಿಹೆ
ಕಾದಿಹುದು ಎನಗಾಗಿ
ತಣ್ಣನೆಯ ಹಸುರು ಹಾಸು
ನಿಮ್ಮಲೊಬ್ಬ ಛಡಿ ಹಿಡಿದಿಹನು
ಎಮ್ಮೆಲ್ಲರನು ಒಟ್ಟಿಸಿ, ಗುಡಿಸಿ
ಮೂಡಿಸುವನು ಬುರ್ನಾಸು

ನಿಮ್ಮ ಹಾಗೆಯೇ ನಾನೂ
ಲೋಕದ ಒಂದಂಶ
ನಿಮ್ಮಲಿಹ ಆತ್ಮ ಚೇತನ
ತಿಳಿಯಿರಿ, ಎನ್ನಲೂ ಇಹುದು
ನಮ್ಮೆಲ್ಲರ ಓಟ ಧ್ಯೇಯ ಒಂದೇ
ಸೇರುವ ಆ ಪರಮಾತ್ಮ

ನಾ ತಾಯೊಡನಿರಲು
ಸೆಳೆಯುವಿರಿ ಕೀಳುವಿರಿ
ಸಂತೋಷಿಸುವಿರಿ
ನಿಮ್ಮ ಕ್ಷಣಿಕ ಆನಂದಕೆ, ಸುಖಕೆ

ತಾಯಿ ವೃಕ್ಷದಿ ನಾ ಬೇರಾಗಲು
ಎನ್ನನ್ಯಾಕೆ ತುಳಿಯುವಿರಿ
ಹೀಗಳೆಯುವಿರಿ
ಮೂಲೆ ಗುಂಪಾಗಿಸುವಿರಿ
ಎನಗಿಲ್ಲವೇ
ನಿಮ್ಮಂತಿರುವ ಸ್ವಾತಂತ್ರ್ಯ

ಎನಗೂ ನೀಡಿ
ನಿಮ್ಮೊಡನಿರುವ ಅವಕಾಶ
ನಮ್ಮವರೊಡನಿದ್ದು
ಜಗವ ಮುಂದುವರೆಸಲು ಅವಕಾಶ

ಹೇಳಿ ಎನಗಿಲ್ಲವೇ
ಸಂತತಿಯ ಮುಂದುವರೆಸುವ
ಅವಕಾಶ
ಬೀಜ ಮೊಳೆಸಲು
ಪರಕಾಯ ಪ್ರವೇಶ

ನಮ್ಮಲೂ ಇಹುದು
ನಿಮ್ಮಂತೆ
ಬಿಳಿ ಕಂದು
ಕೆಂಪು ನೀಲ ವರ್ಣರಾಗ
ನಮ್ಮೆಲ್ಲರಲಿಹುದು ಅನುರಾಗ
ನಿಮ್ಮಂತಿಲ್ಲ ವರ್ಣದ್ವೇಷ

ತಿಳಿಯಬಾರದೇಕೆ
ನಮ್ಮಲಿಹ ನಿಮ್ಮಲ್ಲಿರದಿಹ ಒಂದಂಶ
ನಾವೆಲ್ಲ ಒಂದೇ
ನಮ್ಮೆಲ್ಲರದೂ ಜಗವೊಂದೇ


ಕುಮಾರ ಸ್ವಾಮಿ ಕಡಾಕೊಳ್ಳ ರು ಈ ಬಾರಿ ತಮ್ಮ ಭಾವ ಲಹರಿಯನ್ನ ಹೀಗೆ ಹರಿಬಿಟ್ಟಿದ್ದಾರೆ.

ಇದೇನಾ ನಂಬಿಕೆ?

ಯಾಕೋ ಮನಸ್ಸು ಕೆರಳಿತ್ತು. ಅವಳ ಜೊತೆ ಜಗಳ ಆದಾಗಿನಿಂದ ಮನಸ್ಸು ತುಂಬಾ ಚಟಪಟಿಸುತ್ತಿದೆ, ಸಿಡುಕುತ್ತಿದೆ, ಯಾರಮೇಲೆಂದರೆ ಅವರ ಮೇಲೆ ರೇಗುತ್ತಿದೆ.

ಸಮಯ ಮದ್ಯಾಹ್ನ ಮೂರಾಗಿತ್ತು. ಆಗತಾನೆ ಮುಂಗಾರಿನ ಮೊದಲ ವರ್ಷಧಾರೆ ಬಿರುಗಾಳಿಯ ಜೊತೆ ಸುರಿದು ಸುಮ್ಮನಾಗಿತ್ತು. ನನ್ನೂರಿನ ಹಳೆ ಗೆಳೆಯನ ಕಾಲ್ ಬಂತು ಮಳೆಬರ್ತಿದೆ ನಂತರ ಕರೆಮಾಡು ಎಂದೇಳಿ ಬಂದುಮಾಡಿದೆ. ಕೊನೆಯಲ್ಲಿರುವ ಆಲದ ಮರದಡಿಗೆ ಹೋಗಿ ನಿಂತೆ, ಮಳೆ ಬಿಟ್ಟಿದ್ದರೂ ಮರದಿಂದ ಹನಿ ತಟಗುಟ್ಟುತ್ತಿತ್ತು. ದಾರಿಯಲ್ಲಿ ಹೋಗುತಿದ್ದ ನೂರಾರು ವಾಹನಗಳ ಸದ್ದು ಕಿವಿಗೆ ಬಡಿತಿದ್ದರೂ ಏನನ್ನು ಕೇಳಿಸದವನಂತೆ ಎಲ್ಲೋ ನೋಡುತ್ತ ನಿಂತಿದ್ದೆ. ಸುಳಿಗಾಳಿ, ಬಿರಿಮಳೆಗೆ ಸಿಲುಕಿ ನೆಲಕ್ಕೆ ಬಿದ್ದಿದ್ದ ಹೂವುಗಳ ಕಡೆ ನನ್ನ ನೋಟ ನೆಟ್ಟಿತು. ವರ್ಷ ಪೂರ್ತಿ ಮಣ್ಣಿನಿಂದ ನೀರು ಸತ್ವ ಹೀರಿ, ಬಿಸಿಲು ಗಾಳಿ ಸಹಿಕೊಂಡು, ಫಲಕೊಡಲು ಹೂವರಳಿಸಿತ್ತು. ಇನ್ನೇನು ನಾಲ್ಕುದಿನ ಕಾದಿದ್ದರು ಹೂವು ಈಚಾಗಿ, ಈಚು ಬಲಿತು ಕಾಯಿಯಾಗಿ ಹಣ್ಣು ಮಾಗುತ್ತಿತ್ತು. ಹಣ್ಣು ಯಾರೇ ತಿಂದರು ಬೀಜ ತನ್ನ ವಂಶ ಬೆಳೆಸುತ್ತದೆ ಎಂಬ ಬಯಕೆಯಲ್ಲಿ ಮರ ಜೀವಿಸುತ್ತಿತ್ತು. ಆದರೆ ಮುಸಲಧಾರೆ ಮರದ ಕನಸಿಗೆ ಮಸುಕು ಹಾಕಿ ನಗುತ್ತಿತ್ತು. ಮರ ಬದುಕನ್ನೇ ಕಳೆದುಕೊಂಡ ಭಾವದಿಂದ ನರಳುತ್ತಿತ್ತು. ಆದರೆ ಬಿದ್ದ ಹೂವುಗಳು ನಗುತ್ತಲೇ ಇದ್ದವು. ಮೈಯಲ್ಲ ಸುಂದರ ಬಣ್ಣ ಹೊತ್ತು ಎಲ್ಲರನ್ನ ಸೆಳೆಯುತ್ತಿದ್ದವು. ಅವಳ ಮುಡಿಗೇರಲೇ, ದೇವರ ಪೂಜೆಗೆ ಅರ್ಪಿಸಿ ಕೊಳ್ಳಲೇ ಎಂಬ ತುಡಿತ ನನಗೆ ಇನ್ನೂ ಆ ಹೂವಲ್ಲಿ ಕಾಣಿಸುತ್ತಿತ್ತು. ಮಳೆಯ ಹನಿಗಳು ಹೂವಿನ ಪಕಳೆಯ ಮೇಲೆ ಮುತ್ತಂತೆ ಜೊಡಿಸಿದ್ದರಿಂದ ಸೊಗಸಾಗಿ ಕಾಣುತ್ತಿದ್ದವು. ನೋಟ ಆ ಹೂವುಗಳಲ್ಲೇ ನೆಟ್ಟಿತು. ಮನಸ್ಸು ತನ್ನ ವಾಸ್ತವನ್ನು ಆ ಹೂವಿನ ಜೊತೆ ತುಲನೆ ಮಾಡವುದರಲ್ಲಿ ತೊಡಗಿತು. ವರ್ಷಗಳ ಹಿಂದೆ ಮುಂಗಾರಿನ ಸಮಯ ಮೇಘಗಳು ನಭವನ್ನು ಮುತ್ತಿ ಕವಿಯುವ ಜೋರು. ನಾನೊಂದು ಸ್ನೇಹದ ಸಸಿ ನೆಟ್ಟಿದ್ದೆ. ಅವಳ ಮತ್ತು ನನ್ನ ಭಾವದ ನೀರೆರೆದು ನೆಟ್ಟ ಸಸಿ. ಮಾತು, ಮುನಿಸು, ಕಷ್ಟ, ಸುಖ, ನೋವು, ನಗು, ಬದುಕಿ ಎಲ್ಲಾ ಆಯಾಮಗಳನ್ನು ಆ ಸ್ನೇಹದ ಸಸಿಯ ನೆರಳಲ್ಲಿ ಸೇರಿಸಿದ್ದೆವು. ಆ ಸಸಿ ಹೂವನ್ನು ಬಿಟ್ಟು ಎಲ್ಲರನ್ನೂ ಸೆಳೆದಿತ್ತು ಮೋಹವನ್ನು ತನ್ನಲ್ಲಿ ಸೇರಿಸಿಕೊಂಡಿತ್ತು. ಆ ಸುಂದರ ಮಕರಂದ ತುಂಬಿಕೊಂಡು ಅರಳಿದ ಹೂವು ದುಂಬಿಗಳನ್ನ ಕರೆಯುತ್ತಿತ್ತು. ಪಾತರಗಿತ್ತಿಗಳನ್ನ ಅಣಕಿಸುತ್ತಿತ್ತು. ಸ್ನೇಹದ ಹೂವು ನೋಡಿ ಎಲ್ಲರ ಮತ್ಸರ ಹೆಚ್ಚಿತು. ಸುಂದರ ಹೂವು ಬೀಗುತ್ತಿತ್ತು. ಬಿರುಗಾಳಿ ಬರಬಹುದೆಂದು ಮರೆತು ಹಾಯಾಗಿ ತೂಗೋ ಗಾಳಿಗೆ ತಲೆದೂಗುತ್ತಿತ್ತು. ಆದರೆ ವಿಧಿಯ ಆಟ ಏನಿತ್ತೊ, ಎತ್ತಲಿಂದಲೋ ಬಂದ ಶಂಕೆ ಎಂಬ ಬಿರುಗಾಳಿ ಸುಳಿಸುಳಿದು ಬೀಸಿ ಹೂವುನ್ನು ನೆಲಕ್ಕುರುಳಿಸಿದೆ. ಹೂವು ನರಳತ್ತ ವೇದನೆಯಲ್ಲಿ ಬಾಡುತ್ತಿದೆ. ಭಾವನೆಗಳ ಮಿಲನದಿಂದ ಅರಳಿದ ಹೂವು ಇನ್ನಲ್ಲವಾಗಿದೆ. ಆದೋ ಇಲ್ಲಿರುವ ಮರ ಮತ್ತೊಮ್ಮೆ ಹೂವನ್ನು ಅರಳಿಸುವ ಆಸೆ ಹೊತ್ತು ಬಿಸಿಲು ಮಳೆಗೆ ಮೈಯೊಡ್ಡಿ ನಿಂತಂತೆ ನಾನೆಟ್ಟ ಆ ಸ್ನೇಹದ ಸಸಿಯಲ್ಲಿ ಮತ್ತೊಮ್ಮೆ ಭಾವ ನಂಟಿನ ಹೂವುನ್ನು ನೋಡುವ ನಿಚ್ಚಿತ ನಿರೀಕ್ಷೆಯಲ್ಲಿ ಬಂದ ನೋವು, ಕಷ್ಟ, ದುಃಖ, ನಿಂದನೆಗಳನ್ನು ಸಹಿಸುತ್ತ ಜೀವ ಸಾಗಿಸುತ್ತಿದೆ. ಇದೇನಾ ನಂಬಿಕೆ?



ಸತೀಶ್ ಅವರ ಚಿಂತೆ ಇರದ ಹೂಗಳು ಕವನ ಹೀಗೆ ಹೇಳುತ್ತದೆ.

ಚಿಂತೆ ಇರದ ಹೂಗಳು
ಜಾರಿ ಬಿದ್ದ ತಂಗಳು
ಕಂಡು ಕಾಣದಂತೆ ಕರುಳು
ಎರಚಿ ಹೋದ ಸಿರಿಗಳು.

ನಿನ್ನೆ ಎಲ್ಲ ಮರೆಯುವ
ಮುಂದೆ ನಾಳೆ ಎನ್ನುವ
ಬರಿ ಬವಣೆಯ ಅವಯವ
ಕಂಡು ಮುಂದುವರೆಯುವ.

ಹಿರಿದು ಅರಳಿ ಎದ್ದೆವು
ನಮ್ಮತನವ ಹೊದ್ದೆವು
ನಾಳೆ ಇರದ ಕನಸ ನಾವು
ಇಂದು ತಾನೆ ಕಂಡೆವು.

ಭೂಮಿಯಿಂದ ಭೂಮಿಗೆ
ಬಾನಿನಾಚೆ ಬದುಕಿಗೆ
ಹುಟ್ಟು-ಸಾವು ಹೀಗಿದೆ
ನಮ್ಮ ಪಯಣ ಸಾಗಿದೆ.



ಕುಮಾರ ಸ್ವಾಮಿ ಕಡಾಕೊಳ್ಳ ರು ಕವನದ ಮೂಲಕವೂ ತಮ್ಮ ಭಾವವನ್ನ ಹಂಚಿಕೊಂಡಿದ್ದಾರೆ.

ಮಾಸಿತು ಭಾವನೆ ಬಣ್ಣ **

ಮೊನ್ನೆ ಮೊಗ್ಗಾಗಿ ಕುಡಿಯಲ್ಲಿ ಚಾಚಿ
ನಿನ್ನೆ ಬಣ್ಣದ ಹೂವಾಗಿ ಅರಳಿ ನಕ್ಕು
ತುಂಬಿಸಿ ಸುತ್ತೆಲ್ಲ ಪರಿಮಳದ ಮತ್ತು
ಇಂದು ಜೀವನ ಯಾತ್ರೆಯ ಮುಗಿಸುವ ತಯಾರಿ!!

ನಿನ್ನೆ ಪಾತರಗಿತ್ತಿಯ ಅಣಕಿಸಿದ ಗತ್ತು
ಅಂದಿನಿಂದ ಸುಂದರಿಯ ಮುಡಿಗೇರುವ ಮಸಲತ್ತು
ದೇವರಗೆ ನಿನ್ನ ನೀನು ಅರ್ಪಿಸಿಕೊಳ್ಳುವ ನೆಚ್ಚು
ಇಂದು ಹಸಿರ ಹುಲ್ಲಮೇಲೆ ನೆಲಕಚ್ಚಿತು ಯ್ಯಾಕೋ?

ದುಂಬಿಯು ಬಳಸುತ ನಿನ್ನ ಕಚಕುಳಿಯನಿಡುತ್ತಿತ್ತು
ಸೂರ್ಯನು ನೋಡುತ್ತ ಕಣ್ಣು ಹೊಡೆಯುತಿದ್ದ
ನನ್ನ ಮನಸು ಕದ್ದು ಮೋಡಿಮಾಡಿತ್ತಲಿದ್ದ, ನಿನಗೆ
ಈಗ ಸಿಡುಕ್ಯಾಕೋ ದೂರ ಹೋಗುವ ಮನಸ್ಯಾಕೋ

ಮುಂಜಾನೆ ಮಂಜ ಹನಿಯ ಪಕಳೆಯಲಿಡಿದು
ಮುತ್ತುಗಳನೆ ಮಾಡಿ ಪೋಣಿಸಿ ಮೆರೆದಿದ್ದೆ
ಹನಿಯಲ್ಲಿ ಒಲವಿನ ಗೆಳತಿಯ ಬಿಂಬ ತೋಸಿಸಿದ್ದೆ
ಈಗ್ಯಾಕೋ ಹಾಗೆ ಬಾಡುತ ಅಲ್ಲಿ ಬಿದ್ದೆ

ನಾನೊಂದು ಕನಸು ನಿನ್ನ ನಂಬಿ ಕಟ್ಟಿದ್ದೆ
ನನ್ನ ಒಲವಿನ ಗೆಣತಿಗೆ ನಿನ್ನ ಮುಡಿಗೆ ಮುಡಿಸುವೆನೆಂದಿದ್ದೆ
ಅಂದಿನಿಂದ ಇಂದಿನವರೆಗೆ ಕಾಯುತಲೇ ಕೂತಿದ್ದೆ
ಅವಳು ಬರುವ ಮೊದಲೇ ನೀ ಜಾರಿಬಿದ್ದೆ

ಏಸೊಂದು ದಿನದಿಂದ ಬೀಸುವಾ ಗಾಳಿಗೆ
ಮೂಗು ತಿವಿಯುತ್ತ ಠೀವಿಯಿಂದ ಕೂತಿದ್ದೆ
ಅದುಯಾಕೋ ಇಂದು ಬುಡಕಳಚಿ ಬಿದ್ದೆ
ನನ್ನ ಭಾವನೆಯ ಬಣ್ಣವನು ಮಾಸಿಸಿ ಬಿಟ್ಟೆ

ಯಾರು ಬಲ್ಲರು ನಡೆಯುವ ವಿಧಿಯಾಟವ
ಬಲ್ಲವರು ಇಲ್ಲ ಅರಿಯಲು ಆಗುವುದಿಲ್ಲ
ಎಲ್ಲದರ ಅರಿವಿದ್ದರು ನಂಬಿ ಕಟ್ಟಿದರು
ಬದುಕುವ ನೂರು ಕನಸುಗಳನು, ಇದವೇ ಏನಾ ಬದುಕು??

Monday 7 April, 2008

ಚಿತ್ರ -48





ಅನ್ನಪೂರ್ಣ ದೈತೋಟರ ಚುಟುಕು ಹೀಗಿದೆ...

ಅದೋ ಅಲ್ಲಿಹುದೆನ್ನ ಕನಸುಗಳು !
ಹೂವಿನ ಹಾದಿಯಿದೆ ರವಿಯ ಪ್ರಭೆ ಇದೆ
ಆ ಪ್ರಭೆ ನನ್ನ ಕಣ್ಣುಗಳಲ್ಲಿ ಬೆಳಗುತಿದೆ
ಅಲ್ಲಿರುವೆ ಒಂದು ದಿನ ನನ್ನ ಕನಸುಗಳ ನನಸಿನಲ್ಲಿ..

ಶ್ರೀನಿವಾಸ್ ಹಸಿಮನಸಿನ ಕಾತರವನ್ನು ಹೀಗೆ ಹಿಡಿದಿಟ್ಟಿದ್ದಾರೆ..

ನಿನ್ನೆ ನೋಡಲು ಬಂದವರು
ಮಲ್ಲಿಗೆಯ ದಂಡ ಇತ್ತವರು
ನಾಚಿ ತಗ್ಗಿದ ಮೊಗವೆತ್ತಿದವರು
ಅದೇಕೋ ಅದುಹೇಗೋ
ಮನದೊಳಗಚ್ಚಳಿಯದೇ
ನಿಂದಿಹರು

ಬೇಗ ಬರುತ್ತೀನೆಂದವರು
ಯಾಕೋ ಇನ್ನೂ ಬರಲಿಲ್ವೇ?
ಬೆಳಗಿನ ಗಾಡಿ ಬಂದಾಗಿದೆ
ಸಂಜೆಯ ಗಾಡಿ ಹೊರಡಲನುವಾಗಿದೆ

ಎಡಗಣ್ಯಾಕೋ ಅದುರುತಿಹುದಲ್ಲ
ಅಧರ ನಡುಗುತಿಹುದಲ್ಲ
ಎದೆ ಬಡಿತ ಮುಗಿಲೆಡೆ ಓಡುತಿದೆ
ಅದಾಗಬಾರದಲ್ಲ
ಹಾಗಾಗಬಾರದಲ್ಲ
ಹುಸಿಯಾಗಸಲು
ನೀ ಬೇಗ ಬಾರೆಯಲ್ಲ

ನಿನ್ನೆ ಮುಡಿದ ಹೂ
ಅರಳಿದ್ದ ಜಾಜಿ ಮೊಲ್ಲೆ ಮಲ್ಲಿಗೆಯ ದಂಡು
ನಿನ್ನೆ ಅರಳಿತು
ಮುಡಿಯಲಿ ನಗುತಿತ್ತು
ಇಂದು ಕಿಟಕಿಯ ಸರಳಿನ ಮೇಲೆ
ಮುದುಡಿದೆ, ತೂಗಾಡಿದೆ
ಅವುಗಳ ಮೊಗವೇಕೋ ಬಾಡಿದೆ

ಮಲ್ಲಿಗೆ ಜಾಜಿ ನಿಮ್ಮ ಹಾಗೆ
ನಾ ಆಗಬಾರದಲ್ಲವೇನೇ?
ಹೀಗಾಗಬಾರದಲ್ಲವೇನೇ
ಮನದಲಿ ಮೂಡುತಿಹುದು
ಸುಳ್ಳಾಗಲಿ ತಾನೆ?

ಸಮಯ ಓಡುವುದು ಬೇಡ
ಸವಿಗಳಿಗೆಯ ಇನ್ನೂ ಸವಿಯುವುದಿದೆಯಲ್ಲ
ಗಡಿಯಾರ ನಿಂತು ಹೋಗಬಾರದೇ
ಮುಳ್ಳು ಮುನ್ನಡೆಯಬಾರದೇ!
ಮುದುಡಿದ ಹೂ ಅರಳಬಾರದೇ
ಸುಕ್ಕಿಡುತಿಹ ಮೊಗವರಳಬಾರದೇ!

ಎನ್ನ ಕಾಪಾಡು ಹರಿಯೇ
ನಾ ಹೊಗುವೆ ನಿನ್ನ ಮೊರೆಯೇ
ಯಾರ ಬಳಿ ಸುರಿಯಲಿ ಎನ್ನ ಅಳಲು
ಬೇಗ ಬಂದು ತುಂಬಬಾರದೇ ನನ್ನೊಡಲು

ವಿಜಯಾರ ಹಾರೈಕೆ ಹೀಗಿದೆ...

ನಿತ್ಯ ನೂತನ ಹೂವು ದಿವ್ಯ ಮುಡಿಯನು ಅರಸಿ
ದಿಟ್ಟ ನೋಟ ಬೆಚ್ಚನೆಯ ಬೆಳಕಿನೆಡೆಗೆ ನಡೆಸಿ
ನಿಂತ ನೋವನು ಮರೆಸಿ, ನಲಿವನ್ನು ಕೈಚಾಚಿ ವರಿಸಿ
ಇಟ್ಟ ಹೆಜ್ಜೆ ಧೃತಿಗೆಡದೆ ಹಸನಾಗಲಿ ಬಾಳು ... ಹರಸಿ :-)


ಭಾವ ದರ್ಪಣ ವಿರಹವನ್ನು ವಿವರಿಸುವ ಪರಿ ಇದು...

ಈಗಷ್ಟೇ ಬಂದು ಹೋದ ನೀನು..
ಈಗಷ್ಟೇ ಮುಡಿದು ತೆಗೆದ ಮಲ್ಲಿಗೆ..
ಮಲ್ಲಿಗೆ ಘಮವಿನ್ನೂ ತಾಜಾ..
ನೀನೇಕೆ ಅಷ್ಟು ದೂರ ಹೋದೆ ನನ್ನ ರಾಜ..??

ಸರಳುಗಳು, ಸರಪಳಿಗಳು
ಕಾಣವು ನನಗೆ ಅವುಗಳೆಲ್ಲವೂ..
ಯಾವ ಬಂಧನವಿಲ್ಲ ಈ ಮಲ್ಲಿಗೆ ಘಮಕೆ
ಅಂತೆ ಯಾವ ಬೇಲಿಗಳಿಲ್ಲ ಎನ್ನೊಲವಿನ ನೋಟಕೆ..

ಹೀಗೆ ಬಂದು ಹಾಗೆ ಹೋಗುವ ನಿನ್ನೊಲವ ರೀತಿ
ಆದರೂ ಕಂಗಳಲೇಕೋ ತುಳುಕುತಿದೆ
ನಿನಗಾಗೇ ನನ್ನ ಪ್ರೀತಿ..

ಈ ನನ್ನ ಪ್ರೀತಿ ಒರತೆ
ಕಣ್ಣ ಹನಿಯಾಗುವ ಮುಂಚೆ
ಮತ್ತೆ ಬಂದೆನ್ನ ಸೇರು ಗೆಳೆಯ
ಇನ್ನೆಂದೂ ಬೇರೆಯಾಗದಂತೆ ಮೆಲ್ಲಗೆ..
ನೀನಾಗು ನನ್ನ ಬಾಳಲಿ ನಗುವ ಸದಾ-ಮಲ್ಲಿಗೆ..

ಕುಮಾರ ಸ್ವಾಮಿ ಕಡಾಕೊಳ್ಳ ಈ ಚಿತ್ರದಲ್ಲಿ ಕಾಯುವಿಕೆಯನ್ನು ಕಂಡಿದ್ದಾರೆ.....

** ಕಾದಿರುವೆ ಅಭಿಸಾರಿಕೆ **

ಇನಿಯ ನಿನ್ನ ಕನಸನ್ನು ಕಂಗಳಲಿ ಕಟ್ಟಿ
ಕಾದಿಹೆನು ಎವೆಮುಚ್ಚದೆ ಕಾತುರದಿಂದ
ನಿದ್ದೆಯಲಿ ಜಾರಿಬಿಡುವೆನೆಂಬ ಆತಂಕ
ಕಂಗಳ ತೆರೆದು ನಿನ್ನ ಹುಡುಕುತಿರುವೆನು

ನಿನ್ನೆ ನೀ ತಂದು ಮುಡಿಸಿದ ಮಲ್ಲೆ
ಮುದುಡಿ ಬಾಡಿ ಮುನಿಸಿ ಮಾಸಿಹವು
ಇಂದು ತರುವೆಯ ಬಿಳಿದುಂಡು ಮಲ್ಲಿಗೆ?
ಎಂದು ಮನಸು ಮೌನದಲಿ ಕೇಳಿಹುದು

ಕಂಗಳ ಕೊಳದೊಳಗೆ ನಿನ್ನದೇ ಬಿಂಬ
ಸನಿಹವಿರದ ನಿನ್ನನ್ನು ಅಲ್ಲಿ ಕಾಣುತಿಹೆನು
ವಿರಹ ವಡಬಾನಲವಾಗಿ ಕುದಿಯುತಿಹುದು
ಬಾರೋ ಕಾಂತ ಕೊಳಬತ್ತುವ ಮೊದಲು

ಒಂಟಿಯಾಗಿ ಕುಳಿತಿರುವೆ ಗೋಡೆಗಳ ನಡುವೆ
ನೆನವುತ್ತ ಮುದದಿ ನೀಕೊಟ್ಟ ಚುಂಬನ
ಆದರದಿ ನೀನು ಬಿಗಿದಪ್ಪಿದ ಬಿಸಿ ಆಲಿಂಗನ
ಮೈಯಲ್ಲಿ ನವುರು ಯಾತನೆ, ಅಣೆಯಲ್ಲಿ ಬೆವರು

ಹಸಿವಿನ ಅರಿವಿಲ್ಲ ಉದರ ಬರಿದಾದರು
ಬರಿ ನಿನ್ನದೇ ನೆನಪು ಕ್ಷಣಕ್ಷಣವು ಕನವರಿಕೆ
ಕಾಲಸೂಚಕನ ಮುಳ್ಳು ತಿರುಗದೆ ತಡದಂತೆ
ಗಳಿಗೆ ಯುಗವಾಗಿ ಬಳಲಿರುವೆ ಬಾರೋ

ಹಲ್ಲಿ ಲೊಚಗುಟ್ಟಿದರೂ, ಕರು ನೆಗೆದರೂ
ಇರುವೆ ನಡೆವ ಶಬ್ದ ಸುಳಿದರೂ ಸಾಕು
ಮನಕೆ ನೀ ನಡೆದು ಬಂದೆಂಬ ತಳವೆಳಗು
ಮುನಿಸು ಮನದಲ್ಲಿ ಜಗದ ಜಂಜಾಟದಲ್ಲಿ

ಇಣುಕಿದೆ ಸೂರ್ಯ ರಶ್ಮಿ ತೆರದ ಕಿಟಕಿಯಲಿ
ಸುಯ್ಯುತಿದೆ ಗಾಳಿ ಸುಳಿ ಸುಳಿಯಾಗಿ
ವಾಲುತ್ತ ಪಡುವಣದಿ ನಿತ್ಯ ನಡೆದಿಹನು
ತಡ ಇನ್ನುಯಾಕೋ ಇನಿಯ ನೀಬಾರೋ ಬೇಗ

ಕಾಲಲ್ಲಿ ಕಿರುಗೆಜ್ಜೆಯ ಗಲಿರು ಗಲಿರು ನಾದ
ಕೋಣೆಯಲಿ ಕೈ ಬಳೆಯ ಮನ ಮೋಹಕ ಸದ್ದು
ಉಸಿರ ಬಿಸಿ ಏರುತಿದೆ ನೆನಪಿನ ಸುಳಿದಾಟಕೆ
ರತಿಬಯಕೆಯ ಬಸಿರು ಕ್ಷಣಗಣಿಕೆಯ ನಡೆಸಿದೆ

ಬಿಸಿಕೂಳ ಕೈತುತ್ತು ಉಣಿಸುವ ಬಯಕೆ
ಜೇನುತುಪ್ಪ ಸೇರಿಸಿ ಹಾಲುಸಕ್ಕರೆ ಬೆರಸಿ
ನಿನಗೆ ಕುಡಿಸುವ ಹಂಬಲವು ಮನದಲ್ಲಿ
ಅಂಗನೆ ಅಭಿಸಾರಿಕೆ ನಾನು, ಕಾದಿರುವೆ ಬಾರೋ

ಮನಸ್ವಿನಿ ನೆನಪುಗಳನ್ನು ಮರೆಯಲಾರದೆ ಚಡಪಡಿಸಿದ್ದಾರೆ...:)

ಮರೆತೇನೆ!

ಮರೆತೇನು, ಮನಸಾ ಮರೆತೇನು
ಇದು ಬರಿ ಭ್ರಮೆಯೇನು!
ಮರೆತೆನೆಂಬ ಅರಿವು ನಿಜವಲ್ಲ
ನಿನ್ನ ನೆನಪು ನನ್ನ ಬಿಡದಲ್ಲ!

ಕನಸು ಕಪ್ಪಾಯ್ತು, ಅಸೆಗಳು ಬತ್ತಾಯ್ತು
ಬರಿ ನೆನಪು ಮಾತ್ರ ನನದಾಯ್ತು
ನೀ ಬರುವ ಹಾದಿಯಲಿ, ನಿನ್ನ ಕಾಯುತ ನಾನು
ಕಳೆದಾಯ್ತು ಇನಿಯ, ಯುಗವನ್ನು

ಬತ್ತಿದ ಮನವಿತ್ತು, ಬಾಡಿದ ಮುಖವಿಟ್ಟು
ನೀ ತೊರೆದ ಸತ್ಯವನೂ ಮುಚ್ಚಿಟ್ಟು
ಕಾದು ಕೂತಿಹೆನು ಶಬರಿಯಂತೆ
ಬಾ ನನ್ನ ಉಸಿರಿಗೆ ಉಸಿರಂತೆ

ಸತೀಶ್-ರದ್ದು ವಾಸ್ತವಕ್ಕೆ ಶರಣು ಹೋಗುವ ತಂತ್ರ...:)

...ಶರಣು ಹೋಗಿಹ ಕೂಗು

ಮುಂಬರುವ ಬಾಳ್ವೆಯ ಬೆಳಕಿನ
ದಾರಿಯ ಅಡ್ಡಡ್ಡ ಸೀಳುವ ಕಂಬಿಗಳಿವೆ
ನೆಟ್ಟ ನೋಟದ ತೆರೆದಂಕದ ಪರದೆಯ
ಮುಂದೆ ಅದೆಲ್ಲೋ ಹುದುಗಿಹ ಕಥೆಯಿವೆ.

ಕತ್ತಲೊಳಗೆ ಕುಳಿತು ಕನಸ ಹೆಣೆಯುವ
ಮನಕಂಜಿ ಹೆದರಿದಂತಿಹ ಆಸೆಗಳು
ಬೆಳಕಿನ ಕತ್ತನು ಅಲ್ಲೇ ಹಿಸುಗಿಹ ಪರದೆಯ
ಕೊನೆಯಿಂದ ಕೊನೆಗೆ ಚಾಚಿಕೊಂಡ ಗಳು.

ಬಿಡಿಸಿ ಪೋಣಿಸಿ ಮುಡಿದು ಬದಿಗೊತ್ತಿದ
ಹೂಗಳ ಗುಂಪಿನಲ್ಲೂ ಇನ್ನೂ ಉಳಿದ ನಗು
ಕಾಲವನು ಕತ್ತಲೆಯೊಳಗೆ ಸೇರಿಸಿ ಸುಪ್ತತೆ
ತಪ್ತತೆಗಳಿಗೆ ಶರಣು ಹೋಗಿಹ ಕೂಗು.

ನಿರೀಕ್ಷೆಗಳೇ ಹೀಗೆ ನಾವಂದುಕೊಂಡ ಹಾಗೆ
ಎಂದಾದರೂ ಏನಾದರೂ ಆದದ್ದಿದೆಯೇ
ಬೇಡವೆಂದರೂ ಸುಮ್ಮನೇ ಮುಂದೆ ಹೋಗುತ್ತಲೇ
ಇರುವ ಕಾಲ ಚಿಂತಿಸುವವರನ್ನು ತಡೆದದ್ದಿದೆಯೇ.

ಇರು ನೀನು ಹೇಗೆ ಎಲ್ಲಿ ಬೇಕಾದರೂ
ನನ್ನ ಮನದಾಳದಲ್ಲಿ ಸದಾ ಸುಪ್ತವಾಗಿ
ನಿನ್ನೊಡನೆ ನಾನು ನನ್ನೊಡನೆ ನೀನು
ಎಂದು ಹಾಡುವ ದಿನಗಳು ಶಾಶ್ವತವಾಗಿ.