Tuesday 26 August, 2008

ಚಿತ್ರ ೬೭



ಚಿತ್ರ ೬೭ ಕ್ಕೆ ತಿರುಕ,ಸತೀಶ್ ಮತ್ತು ಕುಮಾರ ಸ್ವಾಮಿ ಕಡಾಕೊಳ್ಳ ಅವರು ಬರೆದ ಕವನಗಳು ಹೀಗಿವೆ

ತಿರುಕ ಅವರ ಕವನ-
ಸಿದ್ಧತೆಗೆ ಚಿಂತನೆ


ಎತ್ತಲೋ ದೃಷ್ಟಿ - ಯಾವುದೋ ಚಿಂತೆ
ಹಳೆಯ ಕಡತದಲ್ಲಿ ಸಿಲುಕಿದ ನೋಟ
ಮೆಲುಕು ಹಾಕುತ್ತಲೇ ಕರಿಗೂದಲು
ಬಿಳಿಯಾಯಿತು
ಅದನೂ ಮನ ತಿಳಿಯದಾಯಿತು
ತಿಳಿದೊಡನೆ ಮನ ತಿಳಿಯಾಯಿತು
ಮುಂದಿನ ಅವಘಡವ
ಚಿಂತಿಸಿ ಮನ ಹೆಪ್ಪುಗಟ್ಟುತ್ತಿತ್ತು

ತಲೆಯ ಮಾಸಿದ ಬಟ್ಟೆ
ಯೊಳಗಣ ತಿಗಣೆ ತಿಳಿಯದಾಯಿತು
ಕಚ್ಚಿ ನೆತ್ತರು ಹೀರಿ
ನವೆಯಾದೊಡೆ - ಚಿಂತೆಯ ಕ್ಷಣ
ಗಳು ನಲಿವಾಯಿತು

ಗಾಡಿಯ ಹಿಡಿಯುವುದೇ ಒಂದು
ಚಿಂತೆಯಾಗಿತ್ತು
ಗಾಡಿಯೊಳಗೆ ಕುಳಿತೆಡೆ
ಮುಂದಾಗುವುದರ
ಚಿಂತೆ ಮನೆ ಮಾಡಿತ್ತು

ಕೊಟ್ಟ ಹೆಣ್ಣು ಕುಲಕ್ಕೆ ಹೊರಗು
ಮಗಳ ಕಳುಹಿಸಿದೆಡೆ ಅಂದುಕೊಂಡದ್ದು
ತಪ್ಪಾಗಿತ್ತು
ಹೀನರ ದುಷ್ಕೃತ್ಯಕ್ಕೆ ಮಗು ಬಲಿಯಾಗಿತ್ತು
ಮುಂದಾಗುವುದರ
ಚಿಂತೆ ಮನೆ ಮಾಡಿತ್ತು

ಅಂದು - ಕೂಸುಗಾಣದ ಮನೆಗೆ
ಅಂಬೆಗಾಲಿಟ್ಟು ಬಂದು
ಮನವೆಂಬ ದುಕಾನು
ಮನೆಯೆಂಬ ಉಗ್ರಾಣವ ತುಂಬಿತ್ತು
ನಕ್ಕು ನಲಿದು ಎಲ್ಲರ ಹಸಿವು ಹಿಂಗಿಸಿತ್ತು

ಇಂದು - ಕೂಸುಕಾಣದ ಮನೆಯ
ತುಂಬಿತ್ತು
ಗಂಡ, ಮಾವ, ಅತ್ತೆಯರ
ಹೀಗಳಿಕೆಗೆ ತುತ್ತಾಗಿತ್ತು
ತನ್ನ ಬಾಳಿಗೆ ತಾನೇ ಕುತ್ತಾಗಿತ್ತು


ಸತೀಶ್ ಅವರ ಕವನ -
ಎತ್ತಲೋ ಓಡುತಲಿರುವ ಮನಸ


ಇಣಕಿ ಹಾಕೋ ಮುಖಗಳು ಇರಲಿ
ಹಣಕಿ ಹಾಕೋ ಯೋಚನೆ ಸಾಕು
ಮೈ ಮನ ಸೇರಿಸಿ ಎಲ್ಲ ಆವರಿಸಿ
ಹೊಚ್ಚಿದ ದುಗುಡ ತೆಗೆದು ಬಿಸಾಕು.

ದೂರದ ದೃಷ್ಟಿ ನಿರಿಗೆಯ ಮುಖವು
ಎತ್ತಲೋ ಓಡುತಲಿರುವ ಮನಸು
ಒಟ್ಟಿಗೆ ಸಾಲಲಿ ನಿಂತು ನೋಡುತಿಹ
ಹಾಯಿ ದೋಣಿಯ ಗಾಳಿಯ ಕನಸು.

ಹತ್ತಿರದ ನಿಲುವಿಗೆ ಇನ್ನಷ್ಟು ದೂರ
ಮತ್ತೆ ಬಾರವು ನಿನ್ನೆಯ ನೋಟಗಳು
ಇಂದನು ಹಾರಿಸಿ ಕರೆದೊಯ್ಯುತಿವೆ
ಕಾಳಜಿ ನಾಳೆ ಎನ್ನುವ ಸಂತೆಗಳು.

ಏತಕೆ ಚಿಂತೆ ಸೊರಗುವುದಂತೆ
ಮನಸೆಂಬುವ ದೊಡ್ಡ ಬಡಪಾಯಿ
ಕಷ್ಟವೋ ಸುಖವೋ ಅಳಿಯದೆ ಇರಲಿ
ಗೆದ್ದೇ ಗೆಲ್ಲುವೆನೆಂಬ ಸಿಪಾಯಿ.


ಕುಮಾರ ಸ್ವಾಮಿ ಕಡಾಕೊಳ್ಳ ಅವರ ಕವನ -
ನೆಚ್ಚಿಕೆ

ಬಿಳಿ ಚಿಮ್ಮುರಿಯ
ಹುರಿಮಾಡಿ ಬಿಗಿದಿರಲು
ಎಂತ ಠೀವಿಯ ನೋಟ
ಸುಕ್ಕಾದರೂ ಮೈಮಾಟ

ಹುರಿ ಮೀಸೆ ಇಲ್ಲ
ಹುರಿಯಾಯಿತು ಗಲ್ಲ
ತೊದಲಾಯಿತು ಸೊಲ್ಲು
ಈತ ಬದುಕೆಲ್ಲ ಬಲ್ಲ

ನೆಟ್ಟ ನೋಟಕ್ಕಿಲ್ಲ
ಬೆದರಿಕೆಯ ಕಾಟ
ಇಳಿ ವಯಸ್ಸಿನಲ್ಲೂ
ಪದುಳವಾದ ನೋಟ

ಸುತ್ತುವರಿದರು ಸುತ್ತ
ಬವಣೆಗಳ ಗುಚ್ಚ
ಬದಲಾಗಲಿಲ್ಲ ಈತನ
ಬದುಕಿನ ಬಯಲಾಟ

ಇದ್ದರೆಷ್ಟು ಸಿರಿ
ಸಾವು ತಪ್ಪುವುದಿಲ್ಲ
ತಪ್ಪಿಸುವರು ಯಾರಿಲ್ಲ ಇದ
ತಿಳಿದು ತೆಪ್ಪಗೆ ಕುಂತನಲ್ಲ

ಯಾರೀಗೋ ದಾರಿಯಲಿ
ಕಾದಿರಲು ಬಾಳಿನಲಿ
ಕಾಣರೊಬ್ಬರು ಇಲ್ಲಿ
ಕಂಡೆನೆಂಬ ನೆಪದಲ್ಲಿ

ಗಲ್ಲಕ್ಕೆ ಕೈಯುಂಟು
ಆತು ಕುಂತಿರಲು
ಗೆಲುವಿನಲಿ ಕುಳಿತಿಹನು
ಗೆಲುವೆನೆಂಬ ನಂಬುಗೆಯಲಿ

** ಕುಕೂಊ...

Wednesday 20 August, 2008

ಚಿತ್ರ ೬೬

I

ಚಿತ್ರ ೬೬ ಕ್ಕೆ ಸ್ಪಂದಿಸಿದವರು ತಿರುಕ, ಶ್ರೀಕಾಂತ ಮತ್ತು ಸತೀಶ್.

ತಿರುಕ ಅವರ ಕವನ -
ಅಂತರಾಳದ ಅನಿಸಿಕೆ


ನಾ ಬಿರಿದ ಹೂ
ನೀ ಹಸಿದ ದುಂಬಿ
ಎಮ್ಮದೆಲ್ಲಿಗೆಲ್ಲಿಯ ನಂಟು?
ನಮ್ಮಿಬ್ಬರಲಿರುವುದು ವೈರತ್ವವೋ?
ಸ್ನೇಹವೋ?
ಎನ್ನ ರಸವ ಹೀರುವುದು ನಿನ್ನ ಕರ್ಮ
ನಿನ್ನ ಪಾದ ಸ್ಪರ್ಶಕೆ ಹಾತೊರೆವುದು ನನ್ನ ಧರ್ಮ
ಜಗಕೆ ಬೇಕಿಹುದು
ನಾವಿಬ್ಬರು ಕೂಡಿಡುವ ಗಂಟು

ಕಷ್ಟಕಾಲಕೆ ಕೂಡಿಡುವುದು
ನಮ್ಮ ಧರ್ಮ
ಸುಲಭದಲಿ ಅದ ಕಳೆದುಕೊಳ್ಳುವುದೂ
ನಮ್ಮ ಕರ್ಮ
ಪ್ರತಿ ಸಲವೂ ನನ್ನ ನಿನ್ನ
ಸಮುದಾಯವ ಮೋಸಿಸುವರೇ
ಈ ಮಹಾಜನರು
ನಮ್ಮ ಕುಡಿಕೆಯು ಅವರದೇ ಆಸ್ತಿ
ಎಂದು ತಿಳಿದವರು

ಎನ್ನ ಮಕರಂದವೇ ನಿನಗೆ ಆಸರೆ
ನೀ ಮಾಡುವ ಪರಾಗ ಸಂಚಲನೆಗೇ ಎನ್ನ ಕಾತರ
ಎನ್ನ ಸಂತತಿಯ ಬೆಳವಣಿಗೆಯ ನಿನ್ನ ಧರ್ಮ
ಜಗಕೆ ಆಸರೆಯ ನೀಡುವುದೇ ನಮ್ಮೀರ್ವರ ಕರ್ಮ

ಕಾಣದ ದೇವನ ಮುಡಿಗೆ ಎನ್ನದೇ ಅಲಂಕಾರ
ಅಭಿಷೇಕಕೆ ನಿನ್ನದೇ ಮಧುವಿನ ಪರಿಕಾರ
ನಾವಿಬ್ಬರೂ ಕೂಡಿ ಸಾರಬಹುದೇ ಸಮರ
ಆಗಲಿ ಸರಿಯೇ ನಮ್ಮೀರ್ವರ ಹೆಸರು ಅಮರ

ಕೊಡು ನಿನ್ನ ಸಮ್ಮತಿ!
ಮಾಡುವೆ ಮಧುವ ವಿಷದ ಬಟ್ಟಲು
ಮೊನಚು ಕೊಂಡಿಯಿಂದ ಆತನಲಿ ಜಾರಲು
ಕಾಣುವನು ಹಂತಕನು ಕೊನೆ ಗತಿ


ಶ್ರೀಕಾಂತ ಅವರ ಕವನ -
ಜೇನುನೊಣದ ಕಲೆಯ ಕಲಿ!

ಜೇನುನೊಣವು ಸುಮದ ಮೇಲೆ
ಕುಳಿತಿಹುದನು ನೋಡು ಅಲ್ಲಿ!
ಜೇನುತುಪ್ಪದಾಸೆ ಬಿಟ್ಟು
ಜೇನುನೊಣದ ಕಲೆಯ ಕಲಿ!

ಸುಮದ ನಗುವು ನಂದದಂತೆ
ಜೋಪಾನದಿ ನೋಡಿಕೊಂಡು
ಮಕರಂದವ ಹೀರುತಿರುವ
ಜೇನುನೊಣದ ಕಲೆಯ ಕಲಿ!

ಹಲವು ಸುಮಗಳಿಂದ ತಾನು
ಮಕರಂದವ ಆಯ್ದು ತಂದು
ಜೇನುತುಪ್ಪ ಮಾಡ ಹೊರಟ
ಜೇನುನೊಣದ ಕಲೆಯ ಕಲಿ!

ಸುಮದಲಿಹುದು ಹಲವು ರುಚಿ;
ಬೇರೆ ರುಚಿಯ ಹೀರಿಕೊಳದೆ
ಸಿಹಿಯು ಮಾತ್ರ ಹೀರಿಕೊಳುವ
ಜೇನುನೊಣದ ಕಲೆಯ ಕಲಿ

ಸುಮದ, ನೊಣದ ಸೊಗಸು ಮಾತ್ರ
ಕಂಡು ತೃಪ್ತಿಯಾಗಬೇಡ!
ನರಗೆ ಪಾಠವಿಹುದಿಲ್ಲಿ!
ಜೇನುನೊಣದ ಕಲೆಯ ಕಲಿ!

ಜಗದ ಜನದಿ ಹಲವು ಗುಣ;
ಸಿಹಿಗುಣಗಳ ಮಾತ್ರ ಹೀರಿ
ಉಳಿದುದನು ತ್ಯಜಿಸೆಂಬ
ಜೇನುನೊಣದ ಕಲೆಯ ಕಲಿ!

ಹೀರಿಕೊಂಡ ಸಿಹಿಗುಣಗಳು
ಸೇರಿ ನಿನ್ನ ಗುಣವಾಗಲಿ
ಎಂದು ಪಾಠ ಹೇಳುತಿರುವ
ಜೇನುನೊಣದ ಕಲೆಯ ಕಲಿ!

ಯಾವ ಹಾನಿ ಮಾಡದಂತೆ
ಸುಗುಣಗಳನು ಸಂಪಾದಿಸು;
ನನ್ನ ನೋಡಿ ಕಲಿ ಎಂಬ
ಜೇನುನೊಣದ ಕಲೆಯ ಕಲಿ!

ಜೇನುತುಪ್ಪದಾಸೆ ಬಿಡು!
ಜೇನುನೊಣವು ನರಗೆ ಗುರು!
ಜೇನುನೊಣದ ಪಾಠ ಕೇಳಿ
ಜೇನುನೊಣದ ಕಲೆಯ ಕಲಿ!


ಸತೀಶ್ ಅವರ ಕವನ -
ಹೂವು-ದುಂಬಿ

ಒಂದೇ ಒಂದು ನೆಲೆಯಲ್ಲಿ ಇದ್ದು
ಒಂದೇ ದಳದಲ್ಲಿ ಒಟ್ಟೊಟ್ಟಿಗೆ ಎದ್ದು
ಬಣ್ಣಗಳ ಆಗರ ಹೂಗಳ ಪಾಲು.
ಅದೆಲ್ಲೋ ಬೀರಿ ಮತ್ತಿನ್ನೆಲ್ಲೋ ಹಾರಿ
ಹಲವು ಮಕರಂದವನು ಕುಟ್ಟಿ ಹೀರಿ
ಒಂದರ ನಂತರ ಬರುವ ದುಂಬಿ ಸಾಲು.

ಸಿಕ್ಕ ಬೆಳಕಿನ ಕ್ಷಣಗಳನು ಎಣಿಸುವ
ಚಿಕ್ಕ ಮೊಗ್ಗಾಗಿ ಹಿಗ್ಗಿ ಹಾತೊರೆಯುವ
ಒಂದೇ ಗಿಡದಲಿ ಕಂಗೊಳಿಸುವ ಹೂಗಳು.
ಒಂದೇ ರಾಣಿಯ ಮೊಟ್ಟೆಯ ಕೂಸು
ಅವಳು ಹೇಳಿದ್ದೇ ಇವರ ಆಜ್ಞೆಯ ಹಾಸು
ಸಾಮ್ರಾಜ್ಯವನು ಕೊಳ್ಳೆ ಹೊಡೆವ ದುಂಬಿಗಳು.

ಇಂದು ಇದ್ದು ನಾಳೆ ಇರದ ನಮ್ಮದೇ ತತ್ವ
ನಾವು ನಮ್ಮವರೊಳಗೆ ನಮ್ಮ ಅಂತಃಸತ್ವ
ಕೊರಗು-ಮರುಗು ಇರದೆ ಸದಾ ನಗುವ ಜೀವ.
ದಿನವು ಅಲ್ಲಲ್ಲಿ ಬಿದ್ದು ಅದೆಲ್ಲಿಂದಲೋ ಕದ್ದು
ಸಾವಿರ ಸರದಾರರು ಸದಾ ಸಿಹಿಯ ಮೆದ್ದು
ರೆಕ್ಕೆ ಬಡಿದಂತೆಲ್ಲಾ ಸದಾ ಕುರ್ರೆನ್ನುವ ಭಾವ.

ನಾವು ನಮ್ಮದೆಂಬ ಸೃಜನಶೀಲತೆ ದೊಡ್ಡದು
ಒಂದಿದ್ದು ನಾಳೆ ನೂರಾಗುವ ಬದುಕು ಸಣ್ಣದು
ಎಲ್ಲಿರಲಿ ಬಿಡಲಿ ನಮ್ಮತನವೆನ್ನುವುದು ಮುಖ್ಯ.
ಹತ್ತು ಹಲವು ಕಡೆ ಹಾರಿ ಹೀರುವ ಬಾಳು ಚೆನ್ನ
ಇದ್ದಷ್ಟು ದಿನ ಆದಷ್ಟು ಹೆಚ್ಚು ಕೂಡಿ ಕಳೆವ ಮುನ್ನ
ಹೂಂಕರಿಸಿ ನಮ್ಮತನವನು ತೋರುವ ಸಖ್ಯ.


Friday 8 August, 2008

ಚಿತ್ರ ೬೫



ಅನ್ನದಾತ ಚಿತ್ರಕ್ಕೆ ಸ್ಪಂದಿಸಿದವರು ಸತೀಶ್ ,ಕುಮಾರ ಸ್ವಾಮಿ ಕಡಾಕೊಳ್ಳ ಮತ್ತು ತಿರುಕ.

ಸತೀಶ್ ಅವರ ಕವನ-
ರೈತನ ಹಾಡು


ಇಷ್ಟಾ ಇರ್ಲಿ ಕಷ್ಟಾ ಇರ್ಲಿ
ದಿನವೂ ಗೆಯ್ಯೋ ಕಾಯ್ಕ
ದೇವ್ರು ಕೊಟ್ಟ ಭೂಮೀ ಮೇಲೆ
ಈ ಮನ್ಷನ್ದೇನು ಮಾಯ್ಕ.

ಮಣ್ಣಿಗ್ ನೀರು ಹಾಯ್ಸಿ ತೊಯ್ಸಿ
ನಾಟಿ ನೆಡೋ ಕೆಸ್ರು
ಬೀಜಾ ಬಿತ್ತಿ ಪಸ್ಲು ಬೆಳೆದು ಒಂದೇ
ದಿನಕ್ ಬರೋದಿಲ್ಲ ಹಸ್ರು.

ಸೂರ್ಯಾ ಹುಟ್ಟಿ ಬರೋಕ್ ಮುನ್ನ
ಎದ್ದು ಹೊಲದ್ ಕಡೆ ನಡ್ದು
ಇಂದು ದುಡ್ದು ಎಂದೋ ತಿನ್ನೋ
ನಮ್ ಬಾಳೇ ದೊಡ್ದು.

ಕೈಯಲ್ ಕಸುವು ಮೈಯಲ್ ಉಸ್ರು
ಇರೋವಾಗ್ಲೇ ಕಾಲ
ಇಂದು ದುಡ್ದು ಇಡ್ದೇ ಹೋದ್ರೆ
ತುಂಬೇಕಲ್ಲ ಹೊಟ್ಟೇ ಅನ್ನೋ ಚೀಲ.

ಆಟಕ್ಕುಂಟು ಲೆಕ್ಕಕ್ಕಿಲ್ಲ
ಈ ರೈತಾಪಿ ಸಂಸಾರ
ಸತ್ಯಾ-ನ್ಯಾಯಕ್ ಎಂದೂ ಉಳಿವು
ಅನ್ನೋ ಪಾಪಿ ವಿಚಾರ.

ದೇಶ ದೊಡ್ಡಕ್ ಮೇಲಕ್ ಬಂದ್ರು
ಎಲ್ರೂ ತಿನ್ನೋದ್ ಅನ್ನಾನೇ
ಅನ್ನವ ಕೊಟ್ಟ ಕೈಯನು ಮರೆತವ
ತನ್ನನು ತಾನೇ ಮರಿತಾನೆ.

ಕುಮಾರ ಸ್ವಾಮಿ ಕಡಾಕೊಳ್ಳ ಅವರ ಕವನ -
ಶ್ರಾವಣ ಮಳೆ

ಶ್ರಾವಣ ಬಂತು
ಹದಮಳೆ ತಂದಿತು
ಒಡ್ಡೆಲ್ಲ ತುಂಬಿತು
ಗದ್ದೆ ಕೆಸರಾಯಿತು

ತಪ್ಪಿದರೆ ಹದ
ಕೈಕೊಟ್ಟೀತು ಪೈರು
ಇಲ್ಲವಾದೀತು ಮುಂದೆ
ಸುಗ್ಗಿಯ ಕೂಳು

ನೇಗಿಲ ಹೊಡೆಯೋಣ
ಹೊಲ ಹದಮಾಡೋಣ
ಒಡ್ಡು ಹಾಕೋಣ
ಮಡಿಗಳ ಕಟ್ಟೋಣ

ಹಸಿರು ಸರಬು
ತುಳಿಯುತ್ತ ಮಡಿಯಲ್ಲಿ
ಬದುವು ಸವರುತ್ತ
ಎಂಡೆ ಹಾಕೋಣ

ಬತ್ತದ ಅಗೆ ಕೀತ್ತು
ಗೊಬ್ಬರ ಹಾಕುತ್ತ
ನಾಟಿ ಮಾಡೋಣ
ಪೈರು ಬೆಳೆಯೋಣ

ಕೈಕೆಸರಾದರೆ
ಬಾಯಿಮೊಸರಂತೆ
ಕೆಸರಲ್ಲಿ ನೆಟ್ಟು ಸಸಿಯ
ಬೆಳೆಯೋಣ ನಾವು ಬತ್ತ

ಕೂತು ಉಂಡರೆ
ಕುಡಿಕೆ ಹೊನ್ನು ಸಾಲದು
ಮೈಬಗ್ಗಿಸಿ ದುಡಿಯೋಣ
ದೇಶಕೆ ಅನ್ನವ ನೀಡೋಣ

** ಕುಕೂಊ...

ತಿರುಕ ಅವರ ಕವನ -
ನಾ ಹೆಚ್ಚೋ ಇವ ಹೆಚ್ಚೋ?!


ಆಗಸ ತೂತಾಗಿದೆ
ಜಾಲರಿಯಿಂದ ನೀರು ತೊಟ್ಟಿಕ್ಕುತ್ತಿದೆ
ಕೈ ತುಂಬಾ ಕೆಲಸ ಕಾಯುತ್ತಿದೆ
ಆಗಬೇಕಿದೆ
ಸಮಯಕೆ ಸರಿಯಾಗಿ ಉತ್ತು ಬಿತ್ತುವಿಕೆ
ನಾನಲ್ಲ ಕೆಲಸಗಳ್ಳ
ಮೈ ಮುರಿದು ಕಾಯಕ ಮಾಡುವೆ
ಉಣಿಸಿ ತಣಿಸಿ ಭೂತಾಯಿಯ ಕಾಪಾಡುವೆ
ಕೈತುಂಬ ಅನ್ನ ಉಣುವೆ
ನಂಬಿದವರ ಕಾಪಾಡುವೆ
ಮುಂಬರುವ ಬಿತ್ತನೆಗೆ
ಬೀಜ ಗೊಬ್ಬರ ಅಣಿ ಮಾಡುವೆ
ಹೆಚ್ಚಾದುದ ಮಂಡಿಗೆ ಹಾಕುವೆ
ಉಣ್ಣಲು ಉಡಲು ಕೈ ಬಿಚ್ಚುವೆ
ಎನ್ನ ಜೇಬು ಮಾತ್ರ ಖಾಲಿ ಖಾಲಿ
ತಲೆಯಿಟ್ಟಲ್ಲಿ ಹೊಡೆಯುವೆ ಜೋಲಿ

ಮಂಡಿಯವ ಹೆಚ್ಚಿನ ಹಣಕೆ ಮಾರುವ
ಕುಂಡಿ ಎತ್ತದೇ ಒಂದೆಡೆ ಕುಳಿತಿರುವವ
ಒಂದೂ ಹನಿ ಬೆವರು ಸುರಿಸಿದವ
ಬೊಕ್ಕಸ ಮೇಲೆ ಮೇಲೆ ಏರಿಸುತಿಹ
ಎನ್ನ ಹೆಚ್ಚಿನ ಖರ್ಚಿಗೆ ಹಣ ಕೊಡುವ
ಚಕ್ರಬಡ್ಡಿ ಸುಸ್ತಿಬಡ್ಡಿ ಹೇರಿ ಸುಸ್ತಾಗಿಸುವ
ದುಡಿದು ಬೆಳೆದ ಸಿರಿಯ
ಹೀನಾಯ ಬೆಲೆಗೆ ಸೆಳೆವ
ಮನ ಬಂದ ಬೆಲೆಗೆ ಮಾರಿ ದೊಡ್ಡವನಾಗುವ
ಕಾಣದ ದೇವನ ಕೃಪೆ ಪಡೆಯುವ
ಮತದಾರನ ಒಡೆಯನ ಸಲಹುವ
ತನ್ನ ಸಂತತಿಯ ತನ್ನಂತೆ ಇರಿಸುವ
ನನ್ನ ಸಂತತಿಯ ನನ್ನಂತೆ ಇಳಿಸುವ

ನಾ ಹೆಚ್ಚೋ ಇವ ಹೆಚ್ಚೋ?!