Wednesday 25 March, 2009

ಚಿತ್ರ ೯೭



ತವಿಶ್ರೀ:
ಅಮ್ಮ-ಮಗಳು


ಅಮ್ಮ ನಾ ನಿನ್ನ ಮೊರೆ ಹೋಗುವೆ
ನೀನಲ್ಲದೆ ನನಗಿನ್ಯಾರೇ?
ತಲೆಯ ನಾಲಗೆಯಲಿ ನೇವರಿಸುವವರಾರೇ?
ಎನಗೆ ಉಣಗೊಡುವವರಾರೇ?

ಮಗಳೇ ನೀ ನನ್ನ ಜಗವೇ
ನಿನ್ನ ಬಿಟ್ಟು ಎನ್ನ ಜೀವ ಇರುವುದೇ?
ನಿನಗಾಗೇ ಹಾಲನು ತುಂಬಿರುವೆ
ಪಾಪಿಗಳು ಬರುವ ಮೊದಲೇ ನೀ ಕುಡಿಯೇ!

ಸೂಚ್ಯವಾಗಿ ನಾನಾಡಿಸುವೆ ಕತ್ತಿನ ಗೆಜ್ಜೆ
ಕೋಪದಲಿ ಮೂಡಿಸುವೆ ಹೆಜ್ಜೆಯ ಘಾಢ
ಪಾಪಿಗಳೆಲ್ಲೆಂದು ಅತ್ತಿತ್ತ ನೋಡುತಿಹ ಕಂಗಳು
ಬಳಿ ನೀನಿರಲು ಮೊಗದಲಿ ಮುದದಲಿ ಅರಳಿದ ಮುಗುಳು

ಕಾಲಿಗೆ ಸಿಲುಕುತಿಹ ಅಂಬೆಗಾಲ ಕಂದ
ಜೋಡಿ ಹಲ್ಲಿನ ನಗುವು ಎಂತಹ ಚಂದ
ತಂಟೆಕೋರಗೆ ನಾ ಕೊಡುವೆ ಮುದ್ದಿನ ಗುದ್ದು
ಕೇಕೆ ಹಾಕಿ ನಗುವುದೇ ಅಂಗಳದಿ ಸದ್ದು

ವಿ.ಸೂ: ಸ್ವಲ್ಪ ವ್ಯಸ್ತನಿರುವ ಕಾರಣ ಬರವಣಿಗೆಯ ಕಡೆಗೆ ಗಮನ ಹರಿಸಲಾಗಿಲ್ಲ.

Thursday 19 March, 2009

ಚಿತ್ರ ೯೬



ತವಿಶ್ರೀ:
ಚೈತ್ರೋದಯ

ತಣ್ಣನೆಯ ಹಳದಿ ಕೆಂಪು ನಸು ಹಸುರು ಚಿಗುರು
ಚಿಗುರೆಡೆದು ಹೂವ ತೋರುವವು ಮಾವು ಹೊಂಗೆ
ತುಂಬಿ ತುಳುಕಲಿ ಬತ್ತುತಿಹ ಕಾವೇರಿ ತುಂಗೆ
ಹಾಡಿ ಪಾಡಲಿ ಮರೆಯಾಗುತಿಹ ಕೋಗಿಲೆ

ಕಾಲ ಉರುಳಿ ಉರುಳಿ ಸಾಗುತಿದೆ
ತಡೆಯಲ್ಯಾರಿಂದಲೂ ಆಗದೇ?
ಆಗದು, ಏನೇ ಮಾಡಬಲ್ಲ, ಏನನೂ ತಡೆಯಬಲ್ಲ
ಹುಲುಮಾನವನಿಂದಂತೂ ಅದಾಗದು!

ಸರ್ವಜಿತುವಿನಂತಿರಲಿಲ್ಲ ಸರ್ವಧಾರಿ
ಸರ್ವಧಾರಿಯಂತಲ್ಲ ವಿರೋಧಿ
ಎಲ್ಲ ವರುಷಗಳಲ್ಲೂ ಏಳು ಬೀಳು
ಬರುವ ವರುಷದಲಿ ಹಾಗಾಗದಿರಲೆಂದು ಕೇಳು

ಕಣ್ಣಿಗೆ ಕಂಡುದು ನೋವು ಸಾವುಗಳು ಸಾವಿರಾರು
ಕಣ್ಣಿಗೆ ಕಾಣದದು ನಲಿವು ಜನನಗಳು ಲಕ್ಷಾಂತರ
ಕಂಡುದರಿಂದ ಮನಕೆ ದುಃಖ ದುಮ್ಮಾನ ಆತಂಕ
ಕಾಣದುದರಿಂದ ಎಲ್ಲವೂ ನಿರಾತಂಕ

ಬಲ್ಲವರು ನುಡಿದುದು
ಬದಲಾವಣೆಯೇ ಜಗದ ನಿಯಮ
ಮೋಡದಿ ಕಾಲೂರಿ ನಡೆಯುವುದೂ
ಇನ್ನೊಂದು ಆಯಾಮ

ಹರಿದು ಹಂಚಿ ಹೋಗಿಹುದು ಈ ದಿರಿಸು
ತೇಪೆ ಹಚ್ಚಿ ಒಟ್ಟು ಮಾಡಿದರೆ ನೋಡಲು ಸೊಗಸು
ಏರಲಿ ಮೈ ಮೇಲೆ ಹೊಸ ವರುಷದ ಹೊಸ ಬಟ್ಟೆ
ಹಳೆಯ ನೆನಪು ಮಾಸದಿರುವಂತೆ ಮೂಲೆಯಲಿರಲಿ ಹಳೆ ಬಟ್ಟೆ

ಹೊಸ ವರುಷದಾಗಮನದಿ ಮನಗಳಲಿ ಹರುಷ
ಇದೇ ಎಲ್ಲರ ನಿರೀಕ್ಷೆ
ಕಳೆದುದ ಮತ್ತೆ ನಿರೀಕ್ಷಿಸುವುದು ಬೇಡ
ಹರುಷಕಾಗಿ ಎದುರಿಸಬಲ್ಲೆವು ಎಲ್ಲ ತೆರದ ಪರೀಕ್ಷೆ

Thursday 12 March, 2009

ಚಿತ್ರ ೯೫



ತವಿಶ್ರೀ:

ನನ್ನಳಲು


ಜಗವು ಮದವೇರಿದ ಬಿಸಿಯಾರುವಿಕೆಯ ಆಲಯ
ಮನದಲಿ ಭುಗಿಲೇಳುವಿಕೆಯ ಸಮಯ
ತಂಬೆಳಕಿನಲಿ ತಂಪೆರೆಯುತಿಹ ತಂಗಾಳಿ
ಮನ ಸೋತುಹೋಗುತಿದೆ ನಿಸರ್ಗದ ಬಳಿ

ದಿಗಂತವ ಸೇರುತಿಹುದು ಕಲ್ಪವೃಕ್ಷದ ಬೀಡು
ಕಾಣ ಹೊರಟಿಹೆ ಕಾಣದ ಕಾಡು
ಕಾಯಕದಿ ಪಡೆದದ್ದೇ ಬೆನ್ನ ಹಿಂದೆ
ಕರ್ಮಫಲ ಅರುಹಬೇಕಿದೆ ಸರ್ವಶಕ್ತನ ಮುಂದೆ

ಬಳಿ ಸಾಗಲು ದಾಟಿಯೇನೇ ಆಳದ ನದಿಪಾತ್ರ
ಆಸರೆಯೊಂದೇ ಅಂಬಿಗ ಆತನ ದೋಣಿ
ನಂಬದಿರಲಾದೀತೇ ಆತನ ದೋಣಿ
ನಂಬದಿರೆ ಬಾಳಿಲ್ಲ ನಂಬಿದುದೇ ಬದುಕೆಲ್ಲ

ಆಳದ ನದಿಯ ದಾಟಿಸಲು ನಂಬಿಹೆನು
ಅಂಬಿಗನ ಉದ್ದನೆಯ ಊರುಗೋಲು
ಜಗವ ಪಾರಿಸಲು ಬಿಡದೆ ಉಸುರುತಿಹೆ
ಶ್ರೀಹರಿಯ ಬಳಿ ನನ್ನಳಲು

Wednesday 4 March, 2009

ಚಿತ್ರ ೯೪



ತವಿಶ್ರೀ:

ಬೇಡಕ್ಕಾ ಬೇಡ


ಅಕ್ಕ

ಬಾರೋ ತಮ್ಮ ಏರಿ ಏರಿ ಹೋಗುವಾ
ಏರಿ ಇಳಿದು ನೀರ ಕಡೆಗೆ ಸಾಗುವಾ
ನೀರಲಿಳಿದು ದೋಣಿಗಿಳಿದು
ತೇಲಿ ತೇಲಿ ಹೋಗುವಾ

ಮನೆಯಲಾರಿಗೂ ಹೇಳಬೇಡ
ನೀರಗಿಳಿದು ಮುತ್ತು ತರುವ ಬಾರ
ಕಾಣದೂರಿಗೆ ಹೋಗಿ ಬರುವ
ಕ್ಷಣ ಕಾಲ ಜಗವ ಮರೆವ ಬಾರ

ತಮ್ಮ

ಬೇಡಾಕ್ಕ ಬೇಡ
ಯಾರಿಗೂ ಹೇಳದೇ ಹೋಗುವುದು ಬೇಡ
ನೀರಿಗಿಳಿಯುವುದು ಬೇಡ
ಜಗವ ಮರೆಯುವುದು ಬೇಡ

ನಾ ಅಮ್ಮನ ಬಿಡುಲಾರೆ
ಅಪ್ಪನ ಬಿರುಗಣ್ಣಿಗೆ ತುತ್ತಾಗಲಾರೆ
ನಿನ್ನನೂ ನಾ ಬಿಡಲಾರೆ
ಇಬ್ಬರೂ ಹೋಗುವುದು ಬೇಡ

ಅಕ್ಕ

ಬೆಳೆಯೋ ಕಂದಾ!
ಎತ್ತರಕೆ ಬೆಳೆ
ಆಲದ ಮರದಂತೆ ಬೆಳೆ
ಜಗವ ನೋಡು
ಅತ್ತಿತ್ತ ಓಡು
ಅದೋ ಕರೆಯುತ್ತಿದೆ ಕಾಡು
ಒಮ್ಮೆಯಾದರೂ ಅಲ್ಲಿ ಬಿಡೋಣ ಬೀಡು
ಅವುಚಿದ ಮೈ ಕೈ ಝಾಡಿಸು
ಹೆದರಿಕೆಯ ಹೋಗಲಾಡಿಸು
ಅಪ್ಪನಂತೆ ನೀ ಎತ್ತರಕೆ ಬೆಳೆ

ತಮ್ಮ

ಯಾಕೋ ಹೆದರಿಕೆಯಾಗುತಿದೆ
ನಿನ್ನ ಮೇಲಿನ ನಂಬಿಕೆ ಮಾಯವಾಗುತ್ತಿದೆ
ಸಂಜೆಯೂಟವ ಕೊಡುವವರಾರೆ
ಪುಸ್ತಕ ಬಳಪ ಕೊಡಿಸುವವರಾರೆ
ಪಾಠವ ಹೇಳಿಕೊಡುವವರಾರೆ
ನಿದ್ರೆ ಬರಲು ಹೊದಿಸುವವರಾರೆ
ಬೇಡಕ್ಕಾ ಬೇಡ
ನೀನೂ ಹೋಗಬೇಡ
ನನ್ನ ಜೊತೆ ಎಂದಿಗೂ ನೀನಿರು
ನಾವೆಲ್ಲಿಗೂ ಹೋಗುವುದು ಬೇಡ


ಸುನಾಥ:
ವಿಶ್ವಾಸ ತುಂಬಿದ, ನಗುಮುಖದ ಪುಟ್ಟ ಪಯಣಿಗನೆ,
ನಿನ್ನ ದೀರ್ಘಪ್ರಯಾಣಕ್ಕೆ ಶುಭಾಶಯಗಳು.