Monday 29 October 2007

ಚಿತ್ರ - ೨೫
ಸಾಂಗತ್ಯದ ರಾಗವ ಹಾಡೋಣ ಎಂದು ಸತೀಶ ಪರಿಸರದ ಬಗ್ಗೆ ಕಳಕಳಿಯನ್ನು ಸೂಚಿಸಿದ್ದು...

ಬೆಟ್ಟವ ಕಡಿದು ಬೋಳು ಮಾಡಿದರು
ತುಂಬದು ತೀರದು ಹಾಹಾಕಾರ
ಮನೆಯನು ಮಾಡಲು ಜಾಗವ ಕೊಟ್ಟರು
ಮರೆಯುವ ಮಾನವ ಉಪಕಾರ.
ನುಣ್ಣಗೆ ಇದ್ದ ದೂರದ ಬೆಟ್ಟವು

ಮೋಡದ ಮಿತ್ರನು ಆಗಿತ್ತು
ಇದ್ದ ಕಾಡನು ಕಳೆಯಲು ನಾವು
ಜಲವದು ದೂರವೇ ಹೋಗಿತ್ತು.

ಕೋಟೆ ಕೊತ್ತಲ ಜೈಲಿನ ಕಂಬಿ
ಎಲ್ಲವು ಮನುಷ್ಯನ ಸೃಷ್ಟಿಗಳು
ದೂರದಿ ನಗುವ ದೇವನ ನಂಬಿ
ಹಾದು ಹೋಗುವವು ಮೋಡಗಳು.

ಆಗಿದ್ದಾಯ್ತು ಏತಕೆ ಚಿಂತೆ
ಬೆಳಕಿನೆಡೆಗೆ ನಾವು ನೋಡೋಣ
ಸೃಷ್ಟಿಯ ಸೊಬಗಿಗೆ ಕೈ ಮುಗಿಯುತೆ
ನಾವು ಸಾಂಗತ್ಯದ ರಾಗವ ಹಾಡೋಣ.


ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಎಂಬ ಗಾದೆಯನ್ನು ನೆನೆಪಿಸುವಂತೆ ಸೀಮಾ ಬರೆದಿದ್ದು...

ದೂರದಲ್ಲಿ ಕಾಣುತ್ತಿರುವ ಗುಡ್ಡಗಳಲ್ಲಿ ಹಸಿರು ಹಾಸು,
ಇಲ್ಲಿಯ ಗುಡ್ಡಗಳಲ್ಲೋ ಬರಿದೇ ಕಲ್ಲು, ಮಣ್ಣು, ಬಿಸಿಲು.
ಅಲ್ಲಿ ಹೋಗಿ ವಿರಮಿಸುವೆ ಎಂದುಕೊಂಡಿತು ಹೃದಯ.
ಅಷ್ಟರಲ್ಲಿಯೇ ಹೃದಯಕ್ಕೆ ತಿಳಿ ಹೇಳಿತು ಮನಸ್ಸು.
ಸುಮ್ಮನಿರು,
'ದೂರದಲ್ಲಿರುವುದು ಯಾವತ್ತೂ ಸುಂದರ.
ಹತ್ತಿರ ಹೋದರೆ ಅದಕ್ಕೂ ಇದಕ್ಕೂ ಇಲ್ಲ ಹೆಚ್ಚಿನ ಅಂತರ.'

Monday 22 October 2007

ಚಿತ್ರ - ೨೪
"ಪ್ರಾರ್ಥನೆ" ಎನ್ನುವ ಕವನದಲ್ಲಿ ಶಾಂತಲಾ ಭಂಡಿಯವರು ಈ ಚಿತ್ರದ ಬಗ್ಗೆ ಹೇಳಿದ್ದು ಹೀಗೆ:

ಕನವರಿಸದ ನೆನಪಿಲ್ಲದ
ಮುಗ್ಧ ಖಾಲಿ ಕಣ್ಣುಗಳು
ಮುಚ್ಚಿ ಪ್ರಾರ್ಥಿಸಿದರೆ ಒಳಗಡೆ ಇನ್ನೇನೋ!

ತುಂಬುವಾ ಮನಸ್ಸು ಹಾಡುತ್ತಿದೆ ಮತ್ತೇನೋ
ಬಾಯಲ್ಲಿ ಗುನುಗುನು ಸದ್ದು
ಬಾಲಿಶದ ಕಣ್ಣು
ಒಂದಿಷ್ಟು ಕಲ್ಪನಾರಹಿತ ವಾಸ್ತವ
ಮತ್ತೊಂದಿಷ್ಟು ಮಾತ್ರ ಖಾಲಿ ಖಾಲಿ
ಜೊತೆ ಒಂದಿಷ್ಟು ರೆಡಿಮೇಡ್ ಖುಷಿ!
ಪ್ರಾರ್ಥಿಸುವ ಕೆಲಸಕ್ಕೆ ಮನಸಿಲ್ಲ,
ಜಾರುಬಂಡಿಯು ಅಲ್ಲಿ ಕಾಯುತ್ತಿದೆ
ಇಲ್ಲಿ ಮೈಮನಸು ಕಟ್ಟಿ ಗಟ್ಟಿಆಗಿ ಎಲ್ಲೆಲೂ ಕತ್ತಲು
ಬಿಡು ಎಂದಾಗ ಮತ್ತದೇ ಬೆಳಕು
ಹುಳಿಮಾವು ಕೊಯ್ದು ತಿಂದಷ್ಟು ಖುಷಿ

ಕಣ್ಮುಚ್ಚಿ ಕನಸುಂಡು, ನೆನಪಿಸಿ, ಪ್ರಾರ್ಥಿಸಿ
ಅಳುವ ಕೆಲಸ ಯೌವನದಿ ಕಟ್ಟಿಟ್ಟ ಬುತ್ತಿ.
ನಮ್ಮೀ ಬಾಲ್ಯಕ್ಕಿದು ಬರಿ ಶಿಸ್ತು ಅನಿಸದಾ?
ಮಾಸ್ತರೇ ಕಣ್ಣು ಬಿಡಲಾ ಒಂದುಸಲ?

ಸಿಂಧು ಅವರು ಬರೆದಿದ್ದು ಹೀಗೆ :

ಪ್ರೀತಿಯೇ ದೇವರೆಂದವನ ನೆನೆದು..
------------------------------

ಗುಣವಿರುವ ಮಕ್ಕಳೆಲ್ಲರ ಪ್ರಾರ್ಥನೆ
ಎಲ್ಲಿಯೂ ಇರಬಹುದಾದ ಗುಡಿಯ ದೇವಗೆ.

ಪ್ರಾರ್ಥಿಸಲು ಕೇಳಿಕೊಂಡವರಾರೋ,
ಅವರ ಅಹವಾಲೇನಿದೆಯೋ
ಇವರು ಮಾತ್ರ..
ತೆರೆದುಕೊಂಡು ಜಗವ ನೋಡಲು ಹಟ ಮಾಡುವ
ಕಣ್ಣು ಮುಚ್ಚಿ
ಕೈಮುಗಿದು..
ಒಂದು ಕ್ಷಣ ಹಿಂಚುಮುಂಚಾದರೆ
ಪ್ರಾರ್ಥಿಸುವವರೇ ದೇವರಾಗಿಬಿಡಬಹುದು..!

ಕಣ್ಣು ಮುಚ್ಚಿ
ಕೈ ಮುಗಿದರೆ
ಸಿಕ್ಕೇ ಸಿಗಬಹುದೆಂಬ
ನಿಮ್ಮ ನಂಬಿಕೆಯ ಪಂಚಾಮೃತ
ನನಗೂ ಬೇಕಲ್ಲ ಕಿನ್ನರ ಜೀವಗಳೇ

ಹಿರಿಯರ ಜಗತ್ತಿನ ತರ್ಕಸಮುದ್ರದ
ಮೊಣಕಾಲುದ್ದ ನೀರಿನಲ್ಲಿ
ನಿಮ್ಮ ಹೊಳೆಗೆ ಸೇರುವ
ಹಿನ್ನೀರ ಮೆಟ್ಟಲು ಹುಡುಕುತ್ತಿರುವೆ
ಸಿಗಬಹುದೇ?!

ಸತೀಶ ಬೇಡುವುದಾದರೂ ಏಕೆ? ಎನ್ನುವ ಕವನದಲ್ಲಿ ಚಿತ್ರವನ್ನು ಸೆರೆಹಿಡಿದಿದ್ದು ಹೀಗೆ :

ಒಳಗಿರುವ ದೇವನ ನೋಡಲು ಕಣ್ಣ ಮುಚ್ಚಬೇಕೇಕೆ
ಬೇಕಿರುವ ವರವ ಬೇಡಲು ಕೈಯ ಜೋಡಿಸಬೇಕೇಕೆ

ಎಂದೋ ತೋರಿಸಿ ಯಾರೋ ಹೇಳಿಕೊಟ್ಟ ಮಾತ್ರಕ್ಕೆ
ಬಡವ-ಬಲ್ಲಿದರ ಒಡಲೊಳಗಿನ ಆಕ್ರಂದನದ ಸೂತ್ರಕ್ಕೆ
ಒಂದೇ ವಾರಿಗೆಯವರೆಲ್ಲ ಬೇಡಿಕೆಯನೆಂದು ನಿಲ್ಲಿಸುವೆವು
ಅನುದಿನವೂ ನಮ್ಮಯ ಪ್ರಾರ್ಥನೆಯೇಕೆ ಸಲ್ಲಿಸುವೆವು.

ಎಲ್ಲಾ ಕಡೆಗೂ ಇರುವ ದೇವರನು ಬೇಡುವುದಾದರೂ ಏಕೆ
ಸೃಷ್ಟಿಯು ತೋರಿಸೋ ಆಟದ ಜೊತೆಗೆ ಬೇರೆಯ ಪಾಠ ಬೇಕೆ
ಯಾರೂ ಕಾಣದ ದೇವನ ಕುರಿತು ಏತಕೆ ನಮಗೆ ಮೋಹ
ಎಷ್ಟೇ ಬೇಡಿ ಎಲ್ಲೇ ಹೋದರು ಹಿಂಗದು ತೀರದ ದಾಹ.

ವರವನು ಪಡೆಯಲು ಮೌನದ ಮೊರೆಯನು ಹೊಕ್ಕೆವು ನಾವು
ತಿರುತಿರುವಲ್ಲು ರೋಚಕವೆನಿಸುವ ಬದುಕದು ದೊಡ್ಡ ತಾವು
ನಾವೂ ನೀವೂ ಕಲಿಯುವ ಪಾಠ ಎಂದಿಗೂ ಎಲ್ಲೂ ನಿಲ್ಲೋಲ್ಲ
ಸವಾಲನು ಎಸೆವ ತಂತ್ರದ ಎದಿರು ನಮ್ಮಯ ಆಟ ನಡೆಯೋಲ್ಲ.

Monday 15 October 2007

ಚಿತ್ರ - ೨೩
ಸತೀಶ ಕನಸುಗಳು ಹಾರಿ ಹೋದಾವು ಜೋಕೆ ಎಂದು ಮನೋಜ್ಞವಾಗಿ ಬರೆದಿದ್ದು ಹೀಗೆ;

ಇಲ್ಲದ ತಾವಿನಿಂದ ಇರುವ ಭೂಮಿಗೆ ಗುಳೆ ಬಿದ್ದ ಹೆಣ್ಣೇ
ಅಂದು ಬಿಸಿಲಲಿ ಬಳಲಿ ಇಂದು ತಂಪಿನಲಿ ಕರಗುವ ಕಣ್ಣೇ
ಜೋಡಿಸದಿರು ಕಣ್ಣಾಲಿಗಳ ಕನಸುಗಳು ಹಾರಿ ಹೋದಾವು ಜೋಕೆ.

ಹೊಸ ಕೈಂಕರ್ಯಕೆ ತೊಡಗಿಕೊಂಡು ಬಿರುಸಾದ ಕೈ
ಹಿಂದಿನ ಸಂಪ್ರದಾಯದವನು ಹೊತ್ತು ತರಲಾರದ ಮೈ
ಮರುಗದಿರು ಹಳೆಯದಕೆ ಕನಸುಗಳು ಹಾರಿ ಹೋದಾವು ಜೋಕೆ.

ಇರುವಷ್ಟು ದಿನ ಹೆಚ್ಚು ಗೋಚುವುದೇ ನಿಯಮ
ಕಂಡಿದೆಲ್ಲವ ಬಾಚಿ ಬದಿಗಿಡುವುದೇ ಸಂಭ್ರಮ
ಯೋಚಿಸದಿರು ನಾಳೆಗೆ ಕನಸುಗಳು ಹಾರಿ ಹೋದಾವು ಜೋಕೆ.

ಗುಳೆ ಬಂದವರಿಗೆ ಸಿಗುಬಹುದಾದ ಕಳೆಗುಂದದ ವೇಷ
ಹಿನ್ನೆಲೆಯಲಿ ಹೊಳೆಯುವ ಚಹಾದ ಎಲೆಗಳ ಮೋಹ ಪಾಶ
ಹಿಂತಿರುಗಿ ಹೋಗದಿರು ಕನಸುಗಳು ಮತ್ತೆ ಹುಟ್ಟದಿರಬಹುದು ಜೋಕೆ.


ಎಮ್. ಡಿ. ಅವರು ನಾನು ಏನಾದೆ ಎಂದು ಬರೆದಿದ್ದು...

ನಾನು ಏನಾದೆ !
ಕಣ್ಣ ನೀರಾದೆ
ನೀರ ಹನಿಯಾದೆ
ಹನಿಯ ನೋವಾದೆ
ನೋವಿನ ಗಾಯಾದೆ
ಗಾಯ ಹೂವಾದೆ
ಹೂವು ಮುಳ್ಳಾದೆ
ಮುಳ್ಳ ಕೊನೆಯಾದೆ
'ಕೊನೆ'ಯ ವಿಷವಾದೆ
ವಿಷದ ಮತ್ತಾದೆ
ಮತ್ತಿನ ಮುತ್ತಾದೆ
ಮುತ್ತಿನ ಸರವಾದೆ
ಸರದ ಕೊರಳಾದೆ
ಕೊರಳ ಉರುಳಾದೆ
ಉರುಳ ಉಸಿರಾದೆ
ಉಸಿರ ಭಾರವಾದೆ
ಭಾರ ಮರವಾದೆ
ಮರದ ಬೇರಾದೆ.
ಬೇರಿಗೆ ನೀಡಿದ
ನೀರು,
ಅದು ನೀನಾದೆ
ನಾನು ನೀನಾದೆ
ನಾನು ನೀನಾದೆ

Monday 8 October 2007

ಚಿತ್ರ - ೨೨ಹೊತ್ತಿರೋ ಅಮ್ಮನ ಹಿಡಕೊಂಡು (ಅರ್ಥಾಥ್ ಮರ್ಕಟ ಕಿಶೋರ ನ್ಯಾಯ) ಅಂತ ಸತೀಶ ಹೇಳಿದ್ದು...

ತನ್ನಾ ಮರಿಯನು ಬೆನ್ನಾ ಮೇಲೆ ಹೊತ್ತು ಸಾಗೋ ಕಾಯ್ಕ
ಕುದಿಯೋ ರಸ್ತೆ ಬೆದರ್ಸೋ ವಾಹನ ಸದಾ ಅದೇ ಮಾಯ್ಕ
ದಾಟ್ ಬೇಕ್ ಅನ್ನೋದ್ ಬದ್ಕು ನಿಲ್ ಬೇಕ್ ಅನ್ನೋ ದೃಷ್ಟಿ.

ಅರ್ಧಾ ರಸ್ತೆ ಸೀಳ್ಕೊಂಡ್ ಹೋಗೋ ಹಳದೀ ಪಟ್ಟೇ ಸಾಲು
ಬರೀ ಅರ್ಧಾ ಸವಾಲ್ ತೋರ್ಸೋ ನೋಡೋರ್ ನೋಟದ್ ಪಾಲು
ಓಡ್ ಬೇಕ್ ಅನ್ನೋದ್ ಮನ್ಸು ಹಾರ್ ಬೇಕ್ ಅನ್ನೋ ಮತಿ.

ಹೆತ್ತು ಹೊತ್ತು ದಾರೀ ತೋರ್ಸಿ ನಡೀ ಬೇಕ್ ಅಮ್ಮ ಮುಂದೆ
ಹೊತ್ತಿರೋ ಅಮ್ಮನ ಹಿಡಕೊಂಡ್ ಮರಿ ಕೂತಿರೋದೇ ದಂದೆ
ನಡೀ ಬೇಕಾದ್ದು ಅಮ್ಮ ಕೈ ಜಾರಿ ಬಿದ್ರೇನಾದ್ರೂ ಬರ್ತಾನಂತೆ ಗುಮ್ಮ.

ಮಂಗಗಳೆಲ್ಲ ಮಾನವ್ರಾಗಿ ಕಾಡ್‌ಗಳ್ ಹೋಗೀ ಊರ್‌ಗಳ್ ಬೆಳ್ದೂ
ಯಾವ್ದೋ ಊರು ಎಲ್ಲೋ ದಾರಿ ಹುಡುಕೋದೇಕೆ ಸಿಕ್ಕಿರೋದ್ ಕಳ್ದೂ
ಈ ಕಡೆ ಮಂಗ್ಯಾ ಆ ಕಡೆ ಮನ್ಶಾ ಬಟ್ಟೇ ಇಲ್ಲದ ಬದ್ಕು ಬಿಳಿಕಪ್ಪಿನ ಚಳಕು.


ಜೀವನವೆಂದರೆ ಹೀಗೇನಾ? ಎಂದು ಸೀಮಾ ಹೇಳಿದ್ದು...

ಎದುರಿಸುತ್ತಾ ಹೋಗಬೇಕು ಗಂಡಾಂತರ
ಆಗದಂತೆ ನೋಡಿಕೊಳ್ಳಬೇಕು ಆವಾಂತರ.

ಒಂಟಿಯಾಗಿ ಸಾಗುವುದು ಸಾಧ್ಯವಿಲ್ಲ ಎಂದೆಂದೂ
ಹೊತ್ತೊಯ್ಯಬೇಕು ಅವಲಂಬಿಸಿದವರನ್ನೂ.

ಇರುವುದೊಂದೇ ಜೀವನದಲ್ಲಿ ಏನು ಮಾಡಲು ಸಾಧ್ಯ?
ಆತ್ಮಬಲವೊಂದಿದ್ದರೆ ಅಸಾಧ್ಯ ಎನಿಸಿದ್ದೊ ಕೂಡ ಸಾಧ್ಯ.

ಜೀವನದಲ್ಲಿ ಎದುರಿಸದಿದ್ದರೆ ಗಂಡಾಂತರ
ಇರುವೆವು ನಾವು ಈಚೆ ತೀರ.
ಹೋಗುವರು ನಮ್ಮಿಂದ ಎಲ್ಲರೂ ದೂರ ದೂರ
ಮಹತ್ವಾಕಾಂಕ್ಷೆ ಎಂಬ ಆಚೆ ತೀರ.

Monday 1 October 2007

ಚಿತ್ರ - ೨೧


' ಹಳದಿ ಹಾಸು ' ಎನ್ನುವ ಕವನದ ಮೂಲಕ ಸತೀಶ ತಮ್ಮ ಎಂದಿನ ಮನೋಜ್ಞವಾದ ಶೈಲಿಯಲ್ಲಿ ಬರೆದಿದ್ದು ಹೀಗೆ :

ಜಗಕೆ ಬಿಳಿಯ ಬಣ್ಣವ ಹೊಮ್ಮಿಸುವ ಬಾನಿಗೆ
ತಿಳಿ ಹಳದಿ ಹೊದಿಸುವ ಹುಚ್ಚು ನಿನಗೇಕೆ
ತನ್ನೊಳಗೆ ಇಹವನ್ನೇ ಮುಚ್ಚಿಕೊಳುವ ಗೂಡಿಗೆ
ಕೆಳಗಿನವರು ನೋಡದ ಹಾಗೆ ಮಾಡುವೆ ಏಕೆ.

ನಿನ್ನೊಳಗಿನಾಸೆ ಆಂತರ್ಯಗಳು ಹೊಮ್ಮುವುದಕೆ
ಇದ್ದಿರಬಹುದು ಜೊತೆಯಾಗಿ ಪೀನ ಬಣ್ಣ
ನಿನ್ನಾಸೆ ಅಮಲುಗಳು ಹುಚ್ಚೆದ್ದು ಕುಣಿವುದಕೆ
ಮೈ ಮರೆಸುವುದೇಕೆ ಜನರ ಕಣ್ಣ.

ಸೂರ್ಯ ಪ್ರಭೆ ಜಗಕೆಲ್ಲ ಹಂಚುತಿಹ ಕಾಲದಲಿ
ಹಳದಿಯ ಹೊರತು ನೀನೇಕೆ ಎಲ್ಲವನು ಹೀರಿಕೊಳುವೆ
ಮನ ಬಂದಂತೆ ಹರಡಿ ಬಿಡುಬೀಸಾದ ನಭದಲ್ಲಿ
ನಿನ್ನ ಸತ್ಯವನು ನೀನೇ ಏಕೆ ಮಾರಿಕೊಳುವೆ.

ತೆರೆದಿರುವ ಅಂಗಳಕೆ ಹೊಚ್ಚಿಹುದು ಸಾಕು ಹಳದಿ ಹಾಸು
ಸಂಭ್ರಮದ ಒಳಗಿನ ತುಮುಲಗಳ ತೆರೆದು ನಗೆಯ ಸೂಸು.

ಸೀಮಾ ಹೇಮಂತ ಋತುವಿನ ಬಗ್ಗೆ ಬರೆದಿದ್ದು ಹೀಗೆ :

ಮರಯವಿರೇಕೆ ಹೇಮಂತನ?

ಹೇಮಂತ ಓಕುಳಿಯಾಡಿದ್ದಾನೆ ತಂದು ಬಣ್ಣ;
ಬಾನಿಗೆಲ್ಲ ಮೆತ್ತಿದ್ದಾನೆ ಅರಿಶಿಣ.
ಎಲ್ಲಾ ಋತುಗಳೂ ಹೊಂದಿವೆ ಚಂದದ ಬಣ್ಣ;
ತೆರೆದು ನೋಡಬೇಕು ಮನದ ಕಣ್ಣ.
ಜೀವನದಿ ಪ್ರತಿಯೊಂದು ಕ್ಷಣವೂ ತಂದು ಅದರದೇ ಬಣ್ಣ;
ಅರಳಿಸುವಂತೆ ಮಾಡುತ್ತದೆ ಕಣ್ಣ.
ವಸಂತ ಹಸಿರಾದರೆ, ಹೇಮಂತ ಉಸಿರಾದಾನು,
ಹಾರೈಸುವಿರೇಕೆ ಕೇವಲ ವಸಂತನ?
ಮರೆಯದಿರಿ ಸ್ವಾಗತಿಸಲು ಹೇಮಂತನ.

ಸಿಂಧು ‘ ಹೂವ ಚೆಲ್ಯಾರೆ ಬಾನಿಗೆ?! ‘ ಎನ್ನುವ ಕವನದಲ್ಲಿ ನಮ್ಮೆದುರಿಗೆ ಚಿತ್ರವನ್ನು ಬಣ್ಣಿಸಿದ್ದು ಹೀಗೆ :

ಕಣ್ಣೆತ್ತಿ ನೋಡಿದಾಗ
ಕಂಡಿದ್ದರೆ ಹೀಗೊಂದು ಹೂಚೆಲ್ಲಿದ ಆಕಾಶ,
ನಮ್ಮ ನೋಟದ ಮೊನಚಷ್ಟು ಕಡಿಮೆಯಾಗುತ್ತಿತ್ತೇನೋ?
ಯಾರಿಗೆ ಗೊತ್ತು
ಎಲ್ಲಿ ಹೂಬಿರಿದ ಮರ ಕಂಡರೂ
ನೆನಪಾಗುತ್ತದೆ
ಬಾಲ್ಯದ ಹಸಿರುಗುಡ್ಡದಲ್ಲಿ
ಹೂವರಳಿ ನಿಂತ ದೇವಕಣಗಿಲು,
ಶಾಲೆಯ ದಾರಿಯ ರಂಜಲು
ಅವನು ಕಾದು ನಿಂತಿರುತ್ತಿದ್ದ,
ಆಕಾಶಮಲ್ಲಿಗೆಯ ಮರದಿಂದ ಬಾಗಿದ
ಹೂ ಗೊಂಚಲು ಗೊಂಚಲು..
ಮತ್ತು
ಹೂವಿನ ಕಂಪನ್ನ ಬದುಕಿನ ತಂಪನ್ನ
ಜೋಡಿಸಿ ನೇಯ್ದ ಕೆ.ಎಸ್.ನ ಕವಿತೆಯ ಸಾಲುಗಳು..

ಮನಸ್ವಿನಿಯವರು ಈ ಕೆಳಗಿನಂತೆ ಹೇಳಿದ್ದಾರೆ :

ಹೂಮಳೆ
**************
ಯಾರಿಟ್ಟಿಹರು ಹಳದಿ ಗೊಂಚಲ
ಮೋಡಗಳಾಗಿ?
ಭುವಿಗೆ ಚಪ್ಪರವಾಗಿ
ಸುರಿದೀತೆ ಹೇಮ ಮೇಘ!
ಹೂಮಳೆಯಾಗಿ
ನನಗಾಗಿ, ನಿನಗಾಗಿ
ಮತ್ತೆ ಧಾರಿಣಿಗಾಗಿ
ಮೈ ಮನಗಳ ತಣಿಸೀತೆ!
ಗಗನ ಕುಸುಮ ಬಿರಿದು, ಸುರಿದು
ಮನದಂಗಳಗಳ ತಣಿಸೀತೆ!
ಹೂಮಳೆಯಾಗಿ