Wednesday 25 February 2009

ಚಿತ್ರ ೯೩ತವಿಶ್ರೀ :
ದೀಪದಿಂದ ದೀಪ ಹಚ್ಚು


ದೀಪದಿಂದ ದೀಪ ಹಚ್ಚು
ಜಗವ ಬೆಳಗಲಿ ಕಿಚ್ಚು
ರಾತ್ರಿಯೂ ತೋರುವುದು ಹಗಲು
ಮುಚ್ಚಿಟ್ಟಿದ್ದೆಲ್ಲವೂ ಬಟಾ ಬಯಲು

ದೀಪಗಳ ರಂಗವಲ್ಲಿ
ಹೂಗಳ ಮೇಲೋಗರ
ಬಣ್ಣಗಳ ಸಿಂಚನೆ
ಕಣ್ಣೋಟದಲಿ ಮನರಂಜನೆ

ಹಚ್ಚಿಹುದು ದೀಪಗಳು ಹದಿನೈದು
ಒಂದೊಂದು ದೀಪದ ಸುತ್ತ ಹೂ ಇಪ್ಪತ್ತೈದು
ಮುಸ್ಸಂಜೆಯಲಿ ಬರುವಳು ಮಹಾಲಕ್ಷ್ಮಿ
ಸುವರ್ಣವ ತರುವಳು ಕನಕಲಕ್ಷ್ಮಿ

ಪುಟ್ಟ ದೀಪಕೆ ಬತ್ತಿ ಹೊಸೆದು
ತುಪ್ಪ ಹಾಕಿ ಜಗಕೆ ಬೆಳಕ ಚೆಲ್ಲಲು
ನಲಿಯುತ ಉಲಿಯುತ ಆಡುವ ದೀಪ ಆತ್ಮದ ದ್ಯೋತಕ
ನಂದಿ ಬೆಳಕು ಆರಲು ಜಗದಲಿ ಸೂತಕ

ಸುನಾಥ :
ಮನವ ಬೆಳಗುತಿದೆ ಈ ಜ್ಯೋತಿ.

Wednesday 18 February 2009

ಚಿತ್ರ ೯೨


*ಕುಮಾರಸ್ವಾಮಿ ಕಡಾಕೊಳ್ಳ ಕಳುಹಿಸಿದ ಚಿತ್ರ

ತವಿಶ್ರೀ :
ವಾಹನ ನಿಲು ತಾಣ


ಅತ್ತ ಪೋಗಲೋ ಇಲ್ಲ
ಇತ್ತ ಬರಲೋ - ದ್ವಂದ್ವದಲೇ ಕಾಲ ಕಳೆವುದು
ಅತ್ತ ನೋಡುತಿಹನಾತ
ಇತ್ತ ನೋಡುತಿಹನೀತ
ಆತನ ದಿಟ್ಟಿ ಈತನ ಕಿಸೆಯ ಕಡೆ
ಈತನ ವಾರೆ ನೋಟ ಆಕೆಯ ಕಡೆ

ಪುಟ್ಟಕ್ಕನಿಗೊಂದು ಕೈಗೂಸು
ಆ ಕೂಸಿನ ಮೂಗಲಿ ಗೊಣ್ಣೆ
ಮುದುಕಪ್ಪನಿಗೆ ಊರುಗೋಲಂತೆ ಎಳೆ ಸತಿ
ಆತನಿಗೆ ಜರದಾ ಅರೆಯಲು ಆಕೆಯ ಕೈಯಲಿ ಬೆಣ್ಣೆ

ಒಂದೆಡೆ ಮಲಯಾಳೀ ಲುಂಗಿ
ಇನ್ನೊಂದೆಡೆ ಬಣ್ಣ ಬಣ್ಣದ ಅಂಗಿ
ಪೈಜಾಮ ಈ ಕಡೆ ಆದರೆ
ಆ ಕಡೆ ಉದ್ದನೆಯ ಷರಾಯಿ

ತೀಡಿದ ಮೀಸೆ ನುಣ್ಣಗೆ ಬೋಳಿಸಿದ ಗಡ್ಡ
ಕತ್ತರಿಯ ಮೊಗವನ್ನೇ ಕಾಣದವ ದಡ್ಡ
ಒಬ್ಬನ ಕೈಯಲಿ ಗಣೇಶ ಬೀಡಿ
ಇನ್ನೊಬ್ಬನಲಿ ವಿಲಾಯತೀ ಮೋಟು ಸಿಗರೇಟು

ನೀರೂರಿಸುವ ಪಾಲಕ್ ಪನ್ನೀರು, ಗುಲಾಬ್ ಜಾಮೂನು
ತಣ್ಣಗಿರುವ ಬೋರ್ಡಿನ ಮೇಲೆ ಬಿಸಿನೀರು ಬಾದಾಮಿ ಹಾಲು
ಎಲ್ಲ ಬೋರ್ಡಿನಲ್ಲಿ ಮಾತ್ರ ಕಾಣಲು ಲಭ್ಯ
ಬಾಯಿಗೆ ಸಿಗಲೊಲ್ಲದು ಇವುಗಳ ಸೌಲಭ್ಯ

ಊರಿನಲ್ಲೆಲ್ಲೂ ಮಳೆಯೇ ಇಲ್ಲ
ಬಿದ್ದ ಹನಿ ಹನಿಯೂ ಆವಿಯಾಗುವುದು
ಬಸ್ ಸ್ಟ್ಯಾಂಡಿನಲಿ ತೇಪೆ ಹಚ್ಚಿದ ಮಾಡು
ಹನಿಯ ಒಗ್ಗೂಡಿಸಿ ಧುಮ್ಮಿಕ್ಕುವ ಮಳೆಯನಿಲ್ಲಿ ನೋಡು

ಈ ಬಸ್ಸು ಮುಂಬಯಿಗೆ ಹೋಗುವುದೋ
ಬೆಂಗಳೂರಿಗೆ ಹೋಗುವುದೋ
ತಿಳಿಸದಾದ ಬೋರ್ಡು
ಬರುವುದು ಹೋಗುವುದು
ಹೋಗಲೆಂದೇ ಬರುವುದು

ಅಲ್ಲಿಹುದು ಬೆಂಕಿ ಆರಿಸಲು ಬಕೆಟ್ಟು
ನೀರಿಲ್ಲಿ ಮಳಲಿಲ್ಲ - ಅವುಗಳ ಸಖ್ಯದಲಿ
ಆರಿಲಿರುವ ಬೆಂಕಿಯೂ
ಆರಲೊಲಿಯದು

ಕಂಟ್ರೋಲರ್ ಬಿಟ್ಟಿ ಬೀಡಿ ಸೇದಿ,
ಪುಕ್ಕಟೆ ದೋಸೆ ತಿಂದು ಕಾಫಿ ಕುಡಿದು
ಗ್ಯಾಸ್ ಬಿಡುತಿಹನು
ಮನೆಯಲ್ಲಿದ್ದ ಸಾಮಾನೆಲ್ಲ ಮೂಟೆಕಟ್ಟಿ ಬಸ್ ಟಾಪಿಗೇರಲು ಕಾಯುತಿಹುದು

ಸುಧಾ ಮಯೂರ ತುಷಾರ ಉದಯವಾಣಿಗಳ
ಭರಾಟೆಯ ಮಾರಾಟ - ಎಲ್ಲಕ್ಕೂ ಬೆಲೆ ಇದೆ
ಮಾರಾಟ ಆಗುವುದಿದೆ - ಕಾಯುವಿಕೆಗೆ ಬೆಲೆ ಇಲ್ಲ ಕಾಲವಿಲ್ಲ
ಬಸ್ಸು ಮಾತ್ರ ಕಾಣಲೊಲ್ಲದು, ಬಂದರೂ ನಮ್ಮೂರಿಗೆ ಹೋಗಲೊಲ್ಲದು
ನಮ್ಮನು ಹೊತ್ತೊಯ್ಯಲಾರದದು
ಹೊತ್ತರೂ ಸ್ಪ್ಯಾನರ್, ಜ್ಯಾಕ್, ಸ್ಟೆಪ್ನಿಗಳ ಜಾಡು ಹುಡುಕುವುದು
ಹೀಗಿಹುದು ನಮ್ಮೂರಿನ ರಸ್ತೆ
ಎಲ್ಲೆಲ್ಲೂ ಅವ್ಯವಸ್ಥೆ

ಮೂಲೆಯಲಿ ಗಬ್ಬು
ನಾರುವ ಮೂತ್ರಾಲಯದ
ಬಗ್ಗೆ ಹೇಳುವುದೋ ಅಥವಾ ಸುಮ್ಮನಿರುವುದೋ
ಹೇಳದಿದ್ದರೆ ಸಾಕಷ್ಟೆ - ತಿಂದದ್ದು ಹೊರಬರಬಾರದು

Wednesday 11 February 2009

ಚಿತ್ರ ೯೧ತವಿಶ್ರೀ :
ಕಲಿತ ಪಾಠ


ಅಂಟಿಯೂ ಅಂಟದಂತಿಹುದು
ತನ್ನೆದೆಯ ಮೇಲಿನ ನೀರ ಗುಳ್ಳೆಯ ಹೊರುವುದು
ಹನಿ ಹನಿಯಾಗಿ ಬೀಳುವುದ ತಡೆವುದು
ತಡೆದು ಬಾಯಾರಿದವಗೆ ಉಣಿಸುವುದು

ತನಗೆ ಮಾತ್ರ ಹನಿ ಮಾತ್ರವೂ ಹಿಡಿದಿಟ್ಟುಕೊಳ್ಳದು
ಆರೈಕೆ ಇಲ್ಲದೆ ನಿಸರ್ಗದಿ ಬೆಳೆವುದು
ಮಂದಿ ಮಂದೆಗಳಿಗೆ ಉಣಿಸುವುದು
ಅನಂತ ಆಗಸ ಏರುವ ಛಾತಿ ಇದ್ದರೂ ಕೆಳಗೇ ನೋಡುತಿಹುದು

ಸ್ವಾರ್ಥಿಗೆ ನಿಸ್ವಾರ್ಥದರಿವು ಮೂಡಿಸುವುದು
ಎನಗಿಂತ ಕಿರಿಯರಿಲ್ಲ
ಎನಗೆಲ್ಲ ಹಿರಿಯರೆಲ್ಲ ಎಂದು ಸಾರುವುದು
ಇಂದಿದ್ದು ನಾಳೆಗೆ ಹೇಳಹೆಸರಿಲ್ಲದೆ ಹೋಗುವುದು

ತಡವಲು ಗಡುಸಿನಂತೆ ತೋರುವುದು
ಚಿವುಟಲು ಹಸುಗೂಸಿನಂತೆ ಕಣ್ಣೀರ್ಗರೆವುದು
ಎದುರಾಡದು, ಹಿಂಸಿಸದು
ಉತ್ತಮ ಪಾರಮಾರ್ಥಿಕ ಚಿಂತನೆಗೆ ಒತ್ತು ನೀಡುತಿಹುದು

ಅಂಟಿಯೂ ಅಂಟದಿರು
ಯಾರಿಗೆ ಯಾರೂ ಅಲ್ಲ
ಆತ್ಮಕೆ ನಂಟಿಲ್ಲ ಅಂಟಿಲ್ಲ ಎಂಬುದ
ಸುಲಭದಿ ಜೀವನ ಪರಿಯ ತಿಳಿ ಹೇಳುವುದು

ಇದರಿಂದ ಕಲಿವ ಪಾಠ ಇಹುದಲ್ಲವೇ?
ನಿಸರ್ಗದ ಅಂಶವಿದು ದೈವಾಂಶವಲ್ಲವೇ?
ಇದ ತಿಳಿವುದು ಸುಲಭವಲ್ಲವೇ
ನಿಸರ್ಗವ ರಕ್ಷಿಸೋಣ - ನಮ್ಮನು ನಾವು ರಕ್ಷಿಸೋಣ

Wednesday 4 February 2009

ಚಿತ್ರ ೯೦ತವಿಶ್ರೀ :
ದೈವಾಂಶ

ದೂರ್ ಸೆ ದೇಖಾ ತೊ ಪತ್ಥರ್ ಪಡಾ ಥ
ಓ ತೊ ಅಪನಾ ಸಾಯಿಬಾಬಾ ಥ

ತೋ ಹೈ ದಾತ ತೋ ಹೈ ವಿಧಾತಾ
ತುಮ್ಹೀ ಪಿತಾ ತುಮ್ಹೀತೊ ಮಾತಾ
ತೂನೆ ಸಬಕೀ ಬಿಗಡೀ ಬನಾಯೀ ...
ತೂನೆ ಅಪನಾ ರೂಪ ದಿಖಲಾಯಿರೇ

ರವಿಯ ಪ್ರಖರತೆ ತಾಳಲಾಗುವುದೇ!
ಹೊಂಬೆಳಕಿನ ಶಕ್ತಿಯನಾದರೂ
ತಡೆಯಲಾಗುವುದೇ?
ತೇಜೋಮಯ ಆತ್ಮಗಳೂ, ಆ ಶಕ್ತಿಯ
ಮುಂದೆ ಗೌಣವೆನಿಸದಿರದೇ?

ಮೆಟ್ಟಿಲು ಹತ್ತಲೂ ಬೇಕು ಶಕ್ತಿ
ಇಳಿಯಲೂ ಬೇಕು ಶಕ್ತಿ
ಕೂರಲೂ ಬೇಕು ಶಕ್ತಿ
ನೇಸರನೇ ಆ ಶಕ್ತಿಯ ಮೂಲ

ಶಕ್ತಿ ಇಲ್ಲದಿರೆ ಯುಕ್ತಿಯಾದರೂ ಆದೀತು
ಯುಕ್ತಿಗೆ ಬೇಕು ಮನದಲಿ ಶಕ್ತಿ
ಯುಕ್ತಿಗೂ ಬೇಕು ಶಕ್ತಿ
ಆ ಶಕ್ತಿಯೂ ನೇಸರನ ಯುಕ್ತಿ

ಏರುವವರೆಗೆ ಬೇಕು ಯುಕ್ತಿ ಶಕ್ತಿ
ಏರಿದವ ತೋರುವನು ವಿರಕ್ತಿ
ವಿರಕ್ತಿ ಮೂಡಲು ಬೇಕು ಭಕ್ತಿ
ಎಂದಿಗೂ ಆತನಲಿರಲಿ ಭಕ್ತಿ

ನೇಸರನು ನಿಸರ್ಗದ ಅಂಶ
ಆ ಅಂಶಭೂತ ದೈವಾಂಶ
ಆತನಿಗೆಂದಿಗೂ ನಾ ಶರಣ
ಧೂಳಾಗಿರುವೆ ನಿನ್ನ ಚರಣ
ನಿನ್ನ ಕೃಪೆಯವರೆಗೆ ಎನಗಿಲ್ಲ ಮರಣ
ತೋರು ದೇವ ಎನ್ನ ಮೇಲೆ ಕರುಣ