Tuesday 29 July, 2008

ಚಿತ್ರ ೬೪



ಚಿತ್ರ ೬೪ ಕ್ಕೆ ಸತೀಶ್ , ತಿರುಕ ಮತ್ತು ಕುಮಾರ ಸ್ವಾಮಿ ಕಡಾಕೊಳ್ಳ ಅವರು ಕವನಗಳನ್ನ ಬರೆದಿದ್ದಾರೆ.

ಸತೀಶ್ ಅವರ ಕವನ -
ನಿಂತಲ್ಲಿ ನಿಂತವರ ಕಷ್ಟ


ನಿಂತಲ್ಲೇ ನಿಂತವರ ಸಮಸ್ಯೆಗಳು ಒಂದಾದ್ರೆ
ಸದಾ ಚಲನೆಯಲ್ಲಿರೋ ಕಷ್ಟಾ ಇನೊಂದ್ ಥರ
ಅಲ್ಲಲ್ಲೇ ಬದಲಾಗೋ ಋತುಮಾನ ಕಾಲನ
ಮೋಡಿಗೆ ಒಳಗಾಗದೆ ಬದುಕೋದೇ ದುಸ್ತರ.

ಆನೆ ಕುದುರೆ ಓಡಾಡಿ ಸೈನ್ಯದವ್ರು ಕಾದಾಡಿ
ದೇಶಕ್ಕೆ ತಾನೇ ಬಾಗಿಲು ಅನ್ನೋ ಮಹಾದ್ವಾರ
ಇಂದು ಸೂರೇ ಇಲ್ದೇ ದಿಕ್ಕಿಗೆ ದಿಕ್ಕು ತಪ್ಪಿಸಿ ನಿಂತ
ಅವಶೇಷಗಳೆಡೆ ದಿಕ್ಕೆಟ್ಟ ಪ್ರವಾಸಿಗರ ಮಹಾಪೂರ.

ಎಲ್ಲಾ ಬದಲಾಗುತ್ತೆ, ಕಾಲ ಹೇಳೋದನ್ನ ಕೇಳಿ-ಬಿಡಿ
ಎಲ್ಲಾ ಸರಿಹೋಗುತ್ತೆ, ಸುತ್ಲೂ ಆಗೋದನ್ನ ನಂಬಿ-ನೋಡಿ.

ಗೋಪುರವನ್ನಾದ್ರೂ ಕಟ್ಟಿ ಗುಂಬಜವನ್ನಾದ್ರೂ ನಿಲ್ಲಿಸಿ
ಕೋಟಿ ವರುಷಗಳ ಲೆಕ್ಕದ ಪ್ರಕೃತಿಗೇನಾಯ್ತು
ಒಂದು ರೂಪದ ವಸ್ತುವಿನಿಂದ ಮತ್ತೊಂದನ್ನು ನಿರ್ಮಿಸಿ
ಕೆರೆಯಿಂದ ಕೆರೆಗೆ ನೀರನ್ನು ಚೆಲ್ಲಿದಂತಾಯ್ತು.

ಏನೂ ಇರದ ಜಾಗೆಯಲ್ಲಿ ಇನ್ನೊಂದೇನನ್ನೋ ಕಟ್ಟಿ
ಬರಿಗೈಯಲ್ಲಿ ಹೋಗುವವರಿಗೆ ಕೊಂಡೊಯ್ಯುವ ಬಯಕೆ
ವಿಪರ್ಯಾಸವೆನ್ನೋಣವೇ ಬಾಗಿಲುಗಳಿರದ ಗೋಡೆ ತಟ್ಟಿ
ನೋಡಿ ಹಳೆಯದರಿಂದ ಹೊಸತನ್ನು ಕಲಿವ ಉತ್ಸಾಹಕೆ.

ತಿರುಕ ಅವರ ಕವನ -
ಶಿಥಿಲ ಆಧಾರಿಯ ವ್ಯಥೆಯ ಕಥೆ

ಕೇಳುವಿರೇನು ಎನ್ನ ಕಥೆ
ನಂತರ ಹಳಿಯದಿರಿ ’ಇದು ಬರೀ ವ್ಯಥೆ’
ಹೇಳದಿರೆ ಎನ್ನ ಮನ ಕುದಿವುದು
ಹೇಳಿದರೆ ಸ್ವಲ್ಪ ದುಃಖ ತಣಿವುದು

ಒಮ್ಮೆ ನಂಬಿದ್ದರು ಎನ್ನ ಮಂದಿ ಹಲವು
ಎನ್ನ ಸಲಹಲು ಮುಂದೆ ಬಂದವರು ಕೆಲವು
ವೈರಿಗಳ ಅಟ್ಟಹಾಸ ಮೊಟಕುತ್ತಿದ್ದೆ
ನಂಬಿದವರ ನಿಶ್ಚಿಂತ ನಿದ್ರೆಗೆ ಅನುವಾಗುತ್ತಿದ್ದೆ

ಅನುಚಣ ಮೈ ಮರೆತು ಕಣ್ಮುಚ್ಚಿದ್ದೆ
ಗುಂಡು ಮದ್ದುಗಳಿಗೆ ಬಲಿಯಾಗಿದ್ದೆ
ಕೈಗಳು ನಿಸ್ಸಹಾಯಕವಾಗಿ ನೆಲದ ಮೇಲೆ ಮಲಗಿರಲು
ಚೇತನ ನಿಶ್ಚೇತನವಾಗಿ ಮರುಗುತಿರಲು

ವೈರಿಯ ದೇಶ ಭಾಷೆ ಜಾತಿ ಮತ
ಗಳ ಹೇಳಿ ಪ್ರಯೋಜನವೇನು?
ಆತ ಮತ್ತೆ ಕೈಗೆ ಸಿಗುವನೇನು?
ಆತನ ಮಕ್ಕಳು ಮಾಡಿದ ತಪ್ಪೇನು?
ಶಿಕ್ಷಿಸಲರ್ಹರೇನು?
ಕಳೆದುದ ಮತ್ತೆ ಪಡೆದೇನೇ?

ಎಮ್ಮ ಸಂತತಿಯ ನೋಡಿಹರಿಲ್ಲಿ
ಎನ್ನ ತುಂಡು ಕಾಲು ಕೈಗಳ ನೋಡಲು ಬಂದಿಹರಿಲ್ಲಿ
ಎನ್ನ ದುಃಖದ ಚಿತ್ರವ ತೆಗೆಯುತಿಹರಿಲ್ಲಿ
ಅವರಿವರಿಗೆ ತೋರಿಸಿ ನಲಿಯುವರಲ್ಲಿಲ್ಲಿ

ಎಮ್ಮ ಸಂತತಿಗಳು ದಂಡು ದಂಡಾಗಿಹರಿಲ್ಲಿ
ತಮ್ಮ ತೀಟೆಗಳ ತೀರಿಸುಕೊಳ್ಳುವರು ನನ್ನ ಬದಿಯಲ್ಲಿ
ತಮ್ಮ ನೆನಪುಗಳ ಕಲ್ಲುಗಳಲಿ ಕೆತ್ತುತ್ತಿಹರು
ಇರುವ ಅಲ್ಪ ಸ್ವಲ್ಪ ಅಂಗವನೂ ತುಂಡರಿಸುತಿಹರು

ಹಳೆಯ ಶತ್ರುವಿನ ಸಂತತಿಯ ಹೀಗಳೆಯಲೋ
ಎನ್ನ ಸಂತತಿಯ ಶಪಿಸಲೋ
ತಿಳಿಯದಾಗಿದೆ - ತಿಳಿಯ ಪಡಿಸುವಿರಾ
ಓ ಮಹಾ ಜನಗಳೇ!
ನಿಮ್ಮ ರಕ್ಷಿಸಿದವನ ರಕ್ಷಿಸುವಿರಾ?
ದಯನೀಯ ಕೂಗ ಕೇಳುತಿಹಿರಾ!

ಕುಮಾರ ಸ್ವಾಮಿ ಕಡಾಕೊಳ್ಳ ಅವರ ಕವನ -
ಗೋಡೆಯ ಕಿವಿಮಾತು

ಪಾಳು ಬಿದ್ದವು ಹೇಗೆ
ಅನಾಥವಾದವು ಏಕೆ
ಯಾವ ನೆನಪಿಗಾಗಿ
ನಿಂತಿರುವವು ಕಾಣೆ
ಗುಡಿ ಗೋಪುರವೋ
ಗುಂಬಾಜ್ ಮಸೀದಿಯೋ
ಏನೇನೋ ಹೆಸರುಗಳು
ನಾವುಗಳೇ ಇಟ್ಟೆವು
ಸಾಕ್ಷಿಯಾರು ಇದಕೆ

ನಡೆದಿತ್ತು ಒಡ್ಡೋಲಗ
ನೆರೆದ ಜನಗಳ ನಡುವೆ
ಮೆರೆವ ರಾಜನ ಮುಂದೆ
ಮಂತ್ರಿ ಮಹೋದಯನ
ಸೂತ್ರಗಳ ಜೊತೆಗೆ
ತಾಣವಾಗಿಗೆ ಇಂದು
ಗೂಬೆ ಪಾರಿವಾಳಕೆ
ಬಿಲವಾಯಿತು ಸಂದು
ಹಾವು ಇಲಿ ಓತಿಕೇತಕೆ

ಕಟ್ಟಿಸಿದರೋ ಯಾರೋ
ಯಾವ ಉದ್ದೇಶಕೋ
ಕಟ್ಟಿದರು ಯಾರೋ
ಇಟ್ಟು ಇಟ್ಟಿಗೆ ಕಲ್ಲು
ಗಾರೆ ಮಣ್ಣನ್ನು
ಗುಟ್ಟು ಬಿಟ್ಟು ಕೊಡೆನು
ಎನ್ನುವಾ ಗತ್ತಿನಲಿ
ಮೋಟಾಗಿ ಗೋಟಂತೆ
ನಿಂತಿರುವವು ಗೋಡೆಗಳು
ಘಾಟಿ ಗಾಳಿಗೆ ಅಂಜದೆ
ಸುರಿವ ಮಳೆಗೆ ಕರಗದೆ

ಬರುವರು ಜನಗಳು
ದಿನಾಲು ಹಿಂಡುಹಿಂಡಾಗಿ
ನೋಡಲು ಎಲ್ಲವನು
ಕೇಳಿದ ಕಥೆಯೊಂದರ
ಸಾಕ್ಷಿಗೆ ಇದುಎಂದು
ಯಾವುದು ಸರಿಯೋ
ಯಾವುದು ತಪ್ಪೋ
ಇತಿಹಾಸದ ಗೋಜಿಗೆ
ಈಗ ನಮಗೇಕೆ
ಗೋಡೆಯ ಕಿವಿಮಾತು
ಅಲಿಸಿ ಅರಿಯಬೇಕಷ್ಟೆ

ಯಾವುದು ಶಾಶ್ವತವಲ್ಲ
ನಶ್ವರಕೆ ಅಂಟಿದರೆ
ಯಾರಿಗೂ ಶಾಂತಿಯಿಲ್ಲ
ಇದನು ಅರಿತವರಿಗೆ
ಬದುಕೆಲ್ಲ ಬೆಳಕಂತೆ
ಇದುವೆ ಗುಟ್ಟಂತೆ
ಗುಟ್ಟು ರಟ್ಟಾಯಿತಂತೆ
ನೀ ಕಲಿ ಇದರಿಂದ
ನಾನೇಳುವುದೇ ಇಷ್ಟನ್ನ

**ಕುಕೂಊ..

Tuesday 22 July, 2008

ಚಿತ್ರ ೬೩



ಚಿತ್ರ ೬೩ ಕ್ಕೆ ತಿರುಕ,ಸತೀಶ್ ಮತ್ತು ಕುಮಾರ ಸ್ವಾಮಿ ಕಡಾಕೊಳ್ಳ ಅವರು ಕವನಗಳನ್ನ ಬರೆದಿದ್ದಾರೆ.

ತಿರುಕ ಅವರ ಕವನ -

ನಿಸರ್ಗ ಉಳಿಸಿರಿ
ಛಳಿಯಾದರೇನು
ಮಳೆ ಇದ್ದರೇನು
ತಲೆ ಎತ್ತಿ ನಿಲ್ಲಬಲ್ಲೆನೇ ನಾನು
ಬಿಸಿಲಿನ ಭರಾಟೆಗೂ ತಲೆ ಬಗ್ಗಿಸಲಾರೆ

ನೀವಿನ್ನೂ ಕಂದ
ನನ್ನ ನೆರಳಲಿ ಬೆಳೆಯಬೇಕಿಂದಿನಿಂದ
ಕಲಿಯುವುದು ಬಹಳವಿದೆಯೆಂದೆ
ನನ್ನೆತ್ತರಕೆ ಈಗಲೇ ನೀವೇರಲಾರೆ!
ಸ್ವಲ್ಪ ಕಾಲ ಯಾಕೆ ಕಾಯಲಾರೆ?

ಹಿಂದೊಮ್ಮೆ
ನಮ್ಮದೂ ಆಗಿತ್ತು
ತುಂಬಿದ ಕುಟುಂಬ
ಅಕ್ಕ ಅಣ್ಣ, ತಮ್ಮ ತಂಗಿ
ಅಪ್ಪ ಅಮ್ಮರ ಕೂಡಿದ
ತುಂಬು ಸಂಸಾರ

ಕ್ರೂರಿಗೆ ತನ್ನ ಹೊಟ್ಟೆಪಾಡಿನ ಚಿಂತೆ
ದೋಚಿದ್ದು ವನರಾಶಿಯ ಕಂತೆ ಕಂತೆ
ತುಂಬಿದ್ದು ತಮ್ಮೊಡಲೆಂಬ ಬೊಂತೆ
ಯಾರಿಗಾದರೂ ಇದೆಯಾ ನಿಸರ್ಗದ ಚಿಂತೆ

ಕಚಕ್ಕನೆ ಒಡಹುಟ್ಟಿದವರ,
ಹುಟ್ಟಿಸಿದವರ ಕತ್ತರಿಸುವಿಕೆ
ಬೆಳೆಯುವುದರ ಜೊತೆಗೆ
ಹೆಗಲ ಮೇಲೆ ಎರಡು ಕಂದಮ್ಮಗಳ ಸಲಹುವಿಕೆ

ನನ್ನೊಡನಿರುವುದೆರಡೇ ಕಂದ
ನಾ ಕಾಪಾಡಬೇಕಿರುವುದು ಇಂದಿನಿಂದ
ನಿಮ್ಮಂತೆ ನಾವೂ ತಿಳಿಯುವಿರೆಂದೆ
ನಮ್ಮೆಲ್ಲರಲಿಹ ಚೈತನ್ಯ ಒಂದೇ

ಒಂದರೆಚಣ ಚಿಂತಿಸು
ನಿನ್ನ ಚೈತನ್ಯ ಎನಗಿಂತ
ಭಿನ್ನ ಹೇಗೆಂದು?


ಎಮ್ಮ ನೆಲಸಮ ಮಾಡಹೊರಟಿರುವಿರೇ
ಅದರಿಂದ ನಿಮ್ಮ ಉಳಿಗಾಲವಿದೆಯೇ
ಮತ್ತೆ ಕಾಣಬಲ್ಲಿರೇ ನಿಸರ್ಗ ಸೌಂದರ್ಯ
ತಣ್ಣನೆ ನೀರೊಡಲ ವಾತಾವರಣದ ಔದಾರ್ಯ

ಚಿಂತಿಸಿ
ಚಿಂತಿಸಿ ಮಥಿಸಿ ಮುನ್ನಡೆಯಿರಿ
ಎಮಗೂ ಜೀವಿಸಲವಕಾಶ ನೀಡಿರಿ


ಸತೀಶ್ ಅವರ ಕವನ -

ಒಂಟಿ ಮರದ ಸ್ವಗತ
ಮೋಡದ ಮಳೆ ನಾಡಿನಲ್ಲಿ
ಹೇಳ ಹೆಸರಿಗೆ ಇರುವ ಮರ
ಸುತ್ತಲೂ ಇದ್ದವರನು ಕಳೆದುಕೊಂಡು
ಒಬ್ಬಂಟಿಯಾಗಿ ಕರೆವ ಮರ.

ದಿನವೂ ಮೋಡಗಳು ಬಂದರೇನು
ಹೋದರೇನು ಹೆಸರಿಗೆ
ಹನಿಯ ನೀರು ಸುರಿಸಲಿಲ್ಲ
ಆರ್ತನಾದೆ ಬರವಿಗೆ.

ತೆಳುವಾದ ಇಬ್ಬನಿ ಹನಿ
ತಡೆದೀತು ಸೂರ್ಯ ರಶ್ಮಿ
ಹಾಳೂರಿಗೆ ಉಳಿದ ನಾನು
ನನಗೊಬ್ಬನಿಗೇನು ಕಮ್ಮಿ.

ಎಲ್ಲೆಲ್ಲೂ ಕುರುಚಲು ಹಮ್ಮಿಕೊಂಡು
ಬೋಳು ಬೋಳಾದ ಬೆಟ್ಟ ಕಣಿವೆ
ಇದ್ದಂತೆ ಇರುವಲ್ಲಿಂದ ಹಿಡಿದು ದೂರದ
ಖಾಲಿ ನಭಕೆ ಏರುವ ಗುರಿಯ ಬಾಳ್ವೆ.

ನಾನೊಬ್ಬನೇ ಇರುವ ನಾಡಿಗೆ
ಮೋಡಗಳು ಬಂದರಷ್ಟು ಹೋದರೆಷ್ಟು
ಇರುವಷ್ಟು ದಿನವು ಇಲ್ಲಿ ಮುಂದೆ
ಬಿದ್ದು ಹೋಗುವ ಬದುಕಿಗಷ್ಟು.

ಕುಮಾರ ಸ್ವಾಮಿ ಕಡಾಕೊಳ್ಳ ಅವರ ಕವನ -

ಮುತ್ತಿತು ಮೋಡ
ಕವಿದಂತೆ ಕತ್ತಲು
ಹನಿಯಾಗಿ ಹವೆ
ಜಿನುಗಿ ಮಳೆಯಾಗಿ
ಇಳಿಯುತಿದೆ ಧರೆಗೆ
ಜೀವ ಸೆಲೆಯಾಗಿ
ಹಸಿರಾಗಿ ಮೂಡಿ
ಉಸಿರಾಯಿತು ಬದುಕು


Tuesday 15 July, 2008

ಚಿತ್ರ ೬೨



ಚಿತ್ರ ೬೨ ಕ್ಕೆ ತಿರುಕ ಮತ್ತು ಸತೀಶ್ ಅವರು ಕವನಗಳನ್ನ ಬರೆದಿದ್ದಾರೆ.
ತಿರುಕ ಅವರ ಕವನ -
ಪೋಷಣೆ.
೨೪ ಲೋಹದ ಸಲಾಕೆಗಳ ಚೌಕದೊಳಗೆ
ಹಿಡಿದಿಟ್ಟ ಚೇತನದ ಮುಖವಾಡ
ಫಳಫಳಿಸುವ ಕಂಗಳು
ಎತ್ತಲೋ ಕಣ್ ನೋಟ
ಇನ್ನೆತ್ತಲೋ ಮನದೋಟ
ಚಂಚಲ ಚಿತ್ತವಾದರೂ ಅರಸುತಿಹುದೇನು?

ಅಮ್ಮನ ಎದುರು ನೋಡುವಿಕೆಯೇ?
ತಿನಿಸು ತರಹೋದ ಅಕ್ಕನ ನಿರೀಕ್ಷೆಯಾ?
ಹೊಸ ಪಾಟಿ ಪುಸ್ತಿಕೆ ತರುವ ಅಪ್ಪನಾ?
ಒಮ್ಮಿಂದೊಮ್ಮೆಲೇ ಕಾಣದಾದ ಜಗವಾ?

ಅದೆತ್ತಲಿಂದ ಬಂತದು ಗಾಳಿ ಮಳೆ?
ಬಿಡಲಾಗದ ಕಣ್ಣನೂ ಝಗ್ಗೆನಿಸಿದಾ ಪ್ರವಾಹ
ಎವೆ ಮುಚ್ಚಿ ಬಿಡಲು
ಕಂಡಿದ್ದೆಲ್ಲವೂ ಕಾಣದಾಯಿತಲ್ಲ!
ಏನಾಯಿತು?
ಎಲ್ಲಿ ಹೋಯಿತು?

ಯಾವ ವಸ್ತುವಿನ ಪರದೆಯಲಿ ಈ ಕಣ್ಮುಚ್ಚಿದರೇನು
ಪುಟ್ಟನ ನೋಟವ ಹಿಡಿಯಲಾದೀತೇ?
ಕಂಗಳ ನೋಟ ಬದಲಿಸಲಾದೀತೇ?
ಆಸೆ ಆಕಾಂಕ್ಷೆಗಳ ಹೊತ್ತಿರುವ,
ಸಾಧಿಸದಿರುವುದ ಸಾಧಿಸುವ
ಪಣ ತೊಟ್ಟಿರುವ ಮನವ ಸೆರೆಹಿಡಿಯಲಾದೀತೇ?

ನಿಸರ್ಗ ಘೋರತೆಗೆ ಬಲಿಯಾದ ಪುಟ್ಟ ಕಂದಮ್ಮನ
ಮರಳಿ ಬಾಳ್ವೆ ಪಥದಲಿ ಇರಿಸಲು
ಇಂತಹ ಮನಕೆ, ತನುವಿಗೆ ನೀರೆರೆದು ಉಣಿಸಿ ತಣಿಸಿ ಪೋಷಿಸುವುದು
ಎಮ್ಮ ಕರ್ತವ್ಯ ಅಲ್ವೇ?

ಪೋಷಿಸಿ! ಎಮ್ಮನು ನಿಲ್ಲಿಸಿರುವ
ಈ ಜಗಕೆ ಋಣ ಸಲ್ಲಿಸುವಿಕೆ
ಪೋಷಿಸಿದವರ ನೆನಪಲಿ
ನೀಡಬಹುದಾದ ತರ್ಪಣ,
ಮುಂದಿನ ಪೀಳಿಗೆಗೆ
ನಾವು ಕೊಡಬಹುದಾದ
ಕೊಡಬೇಕಾದ ನೆರವಿನ ಹಸ್ತ
ನಮ್ಮ ಕರ್ತವ್ಯ
- ಅಲ್ವೇ?


ಸತೀಶ್ ಅವರ ಕವನ -
ಕಂಬಿಯ ಹಿಂದೆ ನಿಂತಿಹ ಪೋರ.
ಅಲ್ವೋ ಪೋರ ನಿನ್ನ ವಾರಸೆಯವರ
ಜೊತೆ ಹೊರಗೆ ಆಡಿಕೊಳ್ಳೋದ್ ಬಿಟ್ಟು
ಮಹಾ ನಿರೀಕ್ಷೆಯನು ಹೊತ್ತ ಕಣ್ಣ ಬೊಂಬೆ
ಮುಖದಲ್ಲಿ ದೊಡ್ಡ ಶಾಂತಿಗೆ ಜಾಗ ಕೊಟ್ಟು
ಹೋಗೀ ಹೋಗಿ ಯಾವುದೋ ಬಯಲಿನಲಿ
ವರಸೆಗಳ ಬಿಚ್ಚೋ ಬದಲು ಹೀಗೆ ಅಡಗೋದೇ?

ಅದ್ಯಾವ ಗಂಡಾಂತರ ಬಂದು ಬಿಡಬಹುದು
ಅದೇನು ಕೇಡು ಕಾದು ಕುಳಿತಿರಬಹುದು
ಕುಣಿದು ಕುಪ್ಪಳಿಸುವ ಬಾಲಕ ಕಂಬಿಯ ಹಿಂದೆ
ಚಕ್ರಾಧಿಪತಿ ಸ್ನಾನದ ಸಮಯಕೆ ಕಿರೀಟ ತೊಟ್ಟಂತೆ.

ಅಡ್ಡ ಉದ್ದಗಲಕ್ಕೂ ಹೆಣೆದ ತಂತಿಗಳು ಕಂಬಿಗಳು
ಯಾವ ಸ್ವಾತಂತ್ರ್ಯವನ್ನೂ ಹೊರಗೆಡುಹದ ಜಂತಿಗಳು
ತಬ್ಬಲಿತನವೆನ್ನುವುದು ಬರೀ ಮನಸಿನಾ ಸೋಗು
ಒಂದೇ ಕಡೆ ಗೂಡುಕಟ್ಟಿ ಅಲ್ಲಿಲ್ಲಿ ಸುತ್ತಿದಿಹ ಕೊರಗು
ಚಲನವೆನ್ನುವುದಕೆ ಒಂದು ನೆಲೆ ಇದ್ದಂತೇನಿಲ್ಲ
ನಿಂತಲ್ಲೇ ನಿಂತು ಚಿಂತಿಸುವುದಕೆ ಫಲವಿಲ್ಲ.

ಏನೂ ಮಾಡದೆ ಇದ್ದಲ್ಲೇ ಇರುವುದು ಒಂದು ಆಯ್ಕೆ
ಕಷ್ಟವೋ ಸುಖವೋ ಬೇರೆ ದಾರಿಯ ಹುಡುಕುವ ಬಯಕೆ
ಇಷ್ಟ ಪಟ್ಟು ಯಾವುದೋ ಒಂದು ದಾರಿಯ ಹಿಡಿದ ಮೇಲೆ
ಎಲ್ಲೋ ಬಾಗಿಲುಗಳು ತಂತಾನೆ ತೆಗೆದುಕೊಳ್ಳುವ ಲೀಲೆ.

Monday 7 July, 2008

ಚಿತ್ರ ೬೧



ಚಿತ್ರ ೬೧ ಕ್ಕೆ ಕುಮಾರ ಸ್ವಾಮಿ ಕಡಾಕೊಳ್ಳ, ತಿರುಕ, ಸತೀಶ್ ಮತ್ತು ವಿಜಯ ಅವರು ಕವನಗಳನ್ನ ಬರೆದಿದ್ದಾರೆ.

ಕುಮಾರ ಸ್ವಾಮಿ ಕಡಾಕೊಳ್ಳ ಅವರ ಕವನಗಳು -
ನನ್ನಂಗೆ ನೀನು.

ಹೇ..ನೀನು ನನ್ನಂಗೆ ಇದಿಯಲ್ಲ
ನುಂಗೋ ಹಂಗೆ ನೋಡ್ತಿಯಲ್ಲ
ನಾನು ನಿನ್ನ ಬಿಡಾಕಿಲ್ಲ
ನಕ್ಕರೆ ಸುಮ್ಮನಿರಾಕಿ ಅಲ್ಲ

ಚೋಟುದ್ದ ಇದಿಯಲ್ಲ
ನನ್ನ ಟೈ ಕೊಡ್ತೀಯೋ ಇಲ್ಲೋ
ನಕ್ಕು ನನ್ನ ಕಾಡಿಸ್ಬೇಡ
ಸಿಟ್ಟೇರಿದರೆ ನಾನು ತಡಿಯೋದಿಲ್ಲ

ನನ್ನ ಹೆಸರು ಹೆಸರು ಕಾಯಿ
ನಿನ್ನೆಸರು ಸವತೇ ಕಾಯಿ
ನೀನೇನು ಹೇಳ್ದಿದ್ರೆ ಬದನೇ ಕಾಯಿ
ನಿನ್ನ ಮೂಗು ತೊಂಡೇಕಾಯಿ

ಹೇ.. ನೀನು ಅತ್ಲಾಗೆ ಹೋಗ್ತಿಲ್ಲ
ನಾ ಕಿಸ್ದಾಂಗೆ ಕಿಸಿತೀಯಲ್ಲ
ಇನ್ನೂ ನನ್ನ ಹೀಂಗೆ ನೋಡ್ಬೇಡ
ನೀನೇನು ನನ್ನ ಕೂಡೇ ಬರಾಕಿಕಲ್ಲ

ನೀನು ಬರಿ ನನ್ನಂಗಿದೀಯ
ನಾನು ಮಾಡಿದಂಗೆ ಮಾಡ್ತೀಯಲ್ಲ
ಮೂಕಿಹಾಂಗೆ ಕಣ್ಣು ತಿರ್ವುತೀಯಲ್ಲ
ನನ್ನ ಕೂಡೆ ಯಾಕೆ ಮಾತಾಡಕಿಲ್ಲ

ನಾ ಹೇಳೋ ಹಾಡು ನೀನು ಹಾಡ್ತೀಯ?
ಶಾಲೇಗೆ ನನ್ನ ಜೊತೆಗೆ ಬರ್ತೀಯ?
ನಮ್ಮ ಕೂಡೇ ಇರ್ತೀಯ?
ಚಾಕ್ಲೇಟ್ ಕೊಟ್ರೆ ತಿಂತೀಯಾ?

ನೀನೇನು ನನ್ನ ಮಾತು ಕೇಳ್ತಿಲ್ಲ
ನಿನ್ನ ಕೂಡೆ ಸಹವಾಸ ನಾ ಮಾಡಕಿಲ್ಲ
ಅಮ್ಮನಿಗೆ ಹೋಗಿ ಹೇಳ್ತೀನಿ
ದೊಣ್ಣೆ ಏಟು ಕೊಡುಸ್ತೀನಿ

** ಕುಕೂಊ..


ತಿರುಕ
ಅವರ ಕವನ -
ಸ್ವಗತ.

ಅಪ್ಪಾ - ತತ್ತಾ ನಾಕಾಣೆ! ನಾಕಾಣೆ, ನಾ ಕಾಣೆ - ಈಗೆಲ್ಲಿದ್ಯೋ ಕಾಸು - ಎಲ್ಲೆಲ್ಲಿ ನೋಡಿದ್ರೂ ನೋಟು, ಲೋಟು, ಗಿಲಾಸು, ಬರೀ ಲಾಸು.

ಇದೇನೋ ಏರ್ ಕಟಿಂಗ್ ಸಲೂನಾ? ಅಲ್ವೊ ಲೇ ಕೋತಿ - ಒಂದೇ ಕನ್ನಡಿ ಇದ್ರೆ ಅದು ಮನೆ ಅಲ್ವೇನೋ! ಸಲೂನಿನಲ್ಲಿ ನಾಲ್ಕೂ ಕಡೆ ಕನ್ನಡಿ ಇರತ್ತಲ್ವೇನೋ ಗೂಬೆ!!

ಲೇ ಮೊಂಡು ಮೂಗು ಮೂದೇವಿ,

ಬಾಯಿ ತೆಗಿ ಅನ್ಬೇಡಲೇ! ಮುಂದಿನ ಮೂರು ಹಲ್ಲು ಅರ್ಧ ಉದುರಿವೆ - ಇಲ್ಲ ಕಣೋ, ನಿನ್ನೆ ಒದೆಸಿಕೊಂಡದ್ದಕ್ಕಲ್ಲ, ಮೋರಿ ದಾಟಕ್ಕೆ ಹೋಗಿ, ಮುಗ್ಗುರಿಸಿ ಬಿದ್ದಾಗ ಮುರಿದು ಹೋಗಿವೆ. ಇನ್ನರ್ಧ ಉಳಿದಿದೆ, ಅದೇನೋಪ್ಪ - ಹಲ್ಲು ಹಾಗೇ ಉಳಿಯತ್ತೆ, ಮತ್ತಿನ್ನು ಮುಂದಕ್ಕೆ ಹುಟ್ಟೋಲ್ಲ ಅಥವಾ ಬೆಳ್ಯೋಲ್ಲ ಅಂತ ಯಾರೋ ಹೇಳ್ತಿದ್ರು.

ನಾನೊಬ್ಬ ಹುಡುಗ - ಗೊತ್ತಾಗತ್ತಪ್ಪ ನೀನೇನ್ ಹೇಳ್ಬೇಡ ಅನ್ಬೇಡ್ರೀ, - ನನ್ನ ಹೆಸರು ಸುಂದರ - ನನ್ನಮ್ಮ ಕರೆಯೋದು ಸುರಸುಂದರಾಂಗ, ಅಯ್ಯಯ್ಯೋ ಸುಂದರಾಂಗ ಅಂತ ಹೇಳಿ, ಕೋಲ್ಮೂತಿ ಕಾಶೀನಾಥ ಅವರಿಗೆ ಹೋಲಿಸ್ಬೇಡ್ರಪ್ಪಾ, ಸುಂದ್ರೂ ಅಂದ್ರೂ ಸಾಕು, ಓಯ್ ಹುಡ್ಗ ಅಂದ್ರೂ ಸಾಕು - ನನ್ನಪ್ಪ ಕರೆಯೋದು ಅಂಗಿ ಹಾಕಿರೋ ಮಂಗ ಅಂತ.

ಶಾಲೆಯಲ್ಲಿ ಎಲ್ಲರೂ ನನ್ನನ್ನು ಕರೆಯೋದು ರಾಜಕುಮಾರ ಅಂತ - ಅಲ್ವೇ ಒಂದ್ಸಲ ನನ್ ಮುಖ ನೋಡಿ, ಅಲ್ಲಲ್ರೀ - ಕನ್ನಡಿಯಲ್ಲಲ್ಲ, ಮುಂದೆ ಬಂದು ನಿಂತ್ಕೊಂಡು ನನ್ ಮುಖ ನೋಡ್ರೀ, ನಾನ್ ಹೇಗ್ ಕಾಣ್ತಿದ್ದೀನಿ ಅಂತ. ಹೌದು - ಹುಟ್ಟಿದಾಗಿಂದ್ಲೂ ನಾ ಹಿಂಗೇನೇ! ಸ್ಫುರದ್ರೂಪಿ - ಮನ್ಮಥನಪರಾವತಾರ - ಅಯ್ಯಯ್ಯೋ ಮಣ್‍ಮೆತ್ತ ಅನ್ಬೇಡ್ರೀ, ಮನ್ಮಥ, ಮನ್ ಮಥ. ಅಪ್ಪಟ ಕನ್ನಡಿಗ, ನಮ್ಮಮ್ಮ ಕನ್ನಡದೋರು ರೀ, ಅಕ್ಕಪಕ್ಕದವ್ರೆಲ್ರೂ ಅವರನ್ನ ಕನ್ನಡಮ್ಮ ಅಂತಾನೇ ಕರ್ಯೋದು, ಯಾಕೇಂದ್ರೆ ಅಕ್ಕ ಪಕ್ಕದವರ್ಯಾರಿಗೂ ಕನ್ನಡ ಬರೋಲ್ಲ, ಹೌದಲ್ವೇ! ಬೆಂಗಳೂರಿನಲ್ಲಿ ಕನ್ನಡ ಮಾತನಾಡೋವ್ರು ಇದಾರಾ. ಭೂತಗನ್ನಡಿಯಲ್ಲಿ ನೋಡ್ಬೇಕಾ. ಹುಂ! ಏನ್ಮಾಡೋದು, ಅಕ್ಕ ಪಕ್ಕದ ರಾಜ್ಯದವ್ರನ್ನೆಲ್ಲಾ ಏನು, ದೂರದ ಬಿಹಾರಿ, ಯುಪಿಯವರನ್ನೆಲ್ಲಾ ಕರೆದು ತಂದು ನಾವು ಮಾತ್ರ ಊರ ಹೊರಗಿದ್ದೀವಿ, ಹೌದು ನಮ್ಮದು ದೊಡ್ಡ ಮನಸ್ಸು, ದೊಡ್ಡ ಹೃದಯ, ಇತರರಿಗೆ ಮನ್ನಣೆ ಕೊಟ್ಟು, ಮನೆ ಕೊಟ್ಟು, ಮಣೆ ಹಾಕಿ ಊಟಕ್ಕೆ ಹಾಕಿ, ನಾವು ಮಾತ್ರ ಮನೆಯಿಂದಾಚೆಗೆ ಹೋಗಿ, ಉಪವಾಸ ಮಲಗ್ತೀವಿ, ಇದೇ ನಮ್ಮ ದೊಡ್ಡತನ, ದಡ್ಡತನ. ಇನ್ನು ಸಾವಿರ ವರ್ಷ ಆದ್ರೂ ನಮ್ಗೆ ಬುದ್ಧಿ ಬರೋಲ್ಲ ರೀ. ಇತರೆ ಭಾಷೆಯವರನ್ನು ನೋಡಿ ಕಲೀಬೇಕು, ಆದ್ರೆ ಕಲಿಯೋಕೆ ಯಾಕೋ ಮನಸ್ಸೇ ಇಲ್ವಲ್ಲ. ತಲೇನೇ ತಿರುಗೋಲ್ಲ ಅನ್ನತ್ತೆ. ಯಾರದ್ರೂ ಶಾಕ್ ಕೊಟ್ರೆ ತಲೆ ಸ್ವಲ್ಪ ಗಿರ್ ಅನ್ಬೋದೇನೋ!!!

ಲೇ! ತಲೆ ಕೂದಲು ಮುಟ್ಬೇಡಲೇ - ಕೆದರಿಹೋಗತ್ತೆ, ಮೊದ್ಲೇ ಎಣ್ಣೆ ಬೇರೆ ಹಾಕಿಲ್ಲ. ಕಷ್ಟಪಟ್ಟು ಬಾಚ್ಕೊಂಡಿದ್ದೀನಿ. ಅಮ್ಮ ಒಂದ್‍ಕ್ಷಣದಲ್ಲಿ ಬಾಚ್ಬಿಡ್ತಾಳೆ. ಆದ್ರೆ ಇವತ್ಮಾತ್ರ, ನಾನೇ ಅವ್ಳಿಗೆ ಹೇಳ್ದೆ, ನೀನೇನ್ ಬಾಚ್ಬೇಡ, ನಾ ದೊಡ್ಡನಾಗಿದ್ದೀನಲ್ಲ, ನಾನೇ ಬಾಚ್ಕೋತೀನಿ ಅಂತ. ಈ ರೀತಿ ಸೆಟ್ಟಿಂಗ್ ಮಾಡಕ್ಕೆ ಅರ್ಧ ಘಂಟೆ ಆಗಿದೆ ಗೊತ್ತಾ? ಮತ್ತಿನ್ನೊಂದು ತಿಂಗ್ಳಾದ್ಮೇಲೆ ಮುನಿಯನ ಹತ್ರ ಸೆಟ್ ಮಾಡ್ಸ್ಕೋಬೇಕು. ಈ ಸಲ ಶಾರೂಕ್ ಕಟ್ ಮಾಡ್ಸ್ಕೊಬೇಕು. ಆದ್ರೆ ಆ ಹುಚ್ಮುಂಡೆ ಹೆಚ್‍ಎಮ್ ಇದ್ದಾಳಲ್ಲ, ಸಣ್ಣಗೆ ಕಟ್ ಮಾಡ್ಸಿಕೊಳ್ದಿದ್ರೆ, ತಲೆಗೆ ಕ್ಲಿಪ್ ಹಾಕ್ಬಿಡ್ತಾಳೆ. ಈ ದರಿದ್ರ ಸ್ಕೂಲ್ ಯಾವಾಗ ಮುಗಿಯತ್ತೋ, ಕಾಲೇಜ್ಗೆ ಯಾವಾಗ ಹೋಗ್ತೀನೋ ಏನೋ. ಕಾಲೇಜ್ನಲ್ಲಿ ಹೇಗ್ಬೇಕಾದ್ರೂ ಹೋಗ್ಬೋದಂತೆ, ಗೊತ್ತಾ. ಹರ್ದಿರೋ ಪ್ಯಾಂಟ್ ಹಾಕ್ಕೊಳೋದೂ ಒಂದು ಸ್ಟೈಲ್ ಅಂತೆ.

ಅಯ್ಯೋ ಕಾಡು ಹರಟೆ ಹೊಡ್ಯೋದೇ ಆಯ್ತು - ನನ್ಜೊತೆ ಯಾರಿದ್ದಾರೆ ಮಾತಾಡಕ್ಕೆ. ಶಾಲೆಯಲ್ಲಿ ಎಲ್ಲರೂ ನನ್ನನ್ನು ಮುಸುಂಡಿ ಅಂತ ಮಾತನಾಡಿಸೋದೇ ಇಲ್ಲ. ಈ ಕನ್ನಡಿ ಒಂದೇ ನನ್‍ಪಾರ್ಟಿ. ನನ್ನನ್ನು ನೋಡ್ಕೊಂಡು, ನಾನೊಬ್ನೇ ಮಾತಡ್ಕೋಬೋದು. ಆದ್ರೆ ಹಿಂದೆಯಿಂದ ಯಾರಾದ್ರೂ ಬಂದೋರು, ಏನೋ ಹುಚ್ಚ ಅಂತಾರೆ. ಅಮ್ಮ ಒಬ್ಳೇ ಸರಿ. ಸುಮ್ನೆ ನಕ್ಕು, ತಲೆ ಸವರಿ ಹೋಗ್ಬಿಡ್ತಾಳೆ.

ಸ್ಕೂಲಿಗೆ ಹೊರಡೋ ಸಮಯ ಆಗ್ತಾ ಬಂತು. ಕನ್ನಡಿ ಮುಂದೆ ನಿಂತೇನದು ಕೋತಿ ಮೂತಿ ಮಾಡ್ತಿದ್ದೀಯೆ? ಸರಿ ನಾನಿನ್ನು ಹೊರಡ್ತೀನಿ. ಸಂಜೆ ಬಂದ್ಮೇಲೆ ಮಾತಾಡೋಣ, ಆಯ್ತಾ?

ನಾನೇ ರಾಜಕುಮಾರ - ಕನ್ನಡ ತಾಯಿಯ ಪ್ರೀತಿಯ ಕುವರ
ಅನೀತಿ ಅಳಿಸಿ ನ್ಯಾಯವ ಉಳಿಸಿ, ಶಾಂತಿಯನಿಳಿಸಲು ಬಂದ ಪ್ರೇಮ ಕಿಶೋರ

ರಾಜ್ ಕುಮಾರ್...s


ಸತೀಶ್ ಅವರ ಕವನ -
ನಗೆಗೇನು ಗೊತ್ತು.

ಹೊಟ್ಟೆಯಲಿ ಗೊಣಗುವ ಹಲವು ಸಂಕಟಗಳಿರುವಾಗ
ಮುಖದ ಮೇಲೆ ಹುಟ್ಟುವ ಶುಷ್ಕ ನಗೆಗೇನು ಗೊತ್ತು
ಜಗವನೇ ಗೆಲ್ಲುವೆನೆಂಬ ಭಂಡ ಧೈರ್ಯ ತುಂಬಿರಲು
ಎಷ್ಟೋ ಕಷ್ಟಗಳನು ನೇಯುವ ಮತ್ತೊಂದು ಕುತ್ತು.

ಜಾಗರೂಕ ಚೇತನ ಹೊರರೂಪಿಗೆಂದು ಆಗಷ್ಟೇ
ಕಣ್ತೆರೆದ ಚಿಗುರು ಬೆಳಕಿನೊಲು ಹಿಡಿದಿರಲು ಕನ್ನಡಿ
ತಾನು ಮತ್ತು ತನ್ನ ಬಿಂಬದ ನಡುವಿನ ದೂರದ
ಹೊಸತೇನೋ ಆಟವನು ಗೆದ್ದ ಹರ್ಷವದು ಇಮ್ಮಡಿ.

ಮನಸು ತನ್ನೆದುರು ಹೊಸತೇನನೋ ಕಲ್ಪಿಸಿಕೊಂಡು
ಯಾರದೂ ಚಿತ್ರಕೆ ಇನ್ಯಾರದೋ ಮುಖವಿಟ್ಟಿರಬಹುದು
ಈ ರೂಪ ಆ ರೂಪ ಹಲವು ಬಹುರೂಪಗಳಿರುವಲ್ಲಿ
ಜನ್ಮ ಜನ್ಮದ ಪಯಣಕೆ ಬಾಲ್ಯದ ನೆಲೆ ಸಿಕ್ಕಿರಬಹುದು.

ಶುಷ್ಕ ನಗೆಗೇನು ಗೊತ್ತು ಹುಟ್ಟಿದ್ದರೆ ತಾನೆ ಸಾಯೋದು
ತಾನೇ ಒಂದು ನೆಲೆ ಕಾಣದ ಮನಸು ಚಿಂದಿ ಆಯೋದು.


ವಿಜಯ
ಅವರ ಚುಟುಕು ಸಾಲುಗಳು-

ನಗುವೆಂಬುದು ಕನ್ನಡಿಯೊಳಗಿನ ಗಂಟಲ್ಲ
ದುಗುಡ ದುಃಖಗಳು ವಾಸ್ತವದ ನೆಂಟರಲ್ಲ
ಮಗುವಿನ ಮುಗ್ಧತೆಯು ಮರೆಯಾಗದಿರಲಿ
ಸಾಗುವುದು ಬಾಳು, ಪ್ರೀತಿ ನಿನ್ನ ಭಂಟನಿಲ್ಲಿ