Monday, 28 January 2008

ಚಿತ್ರ- ೩೮



ಎರಡು ಬಗೆಯ ದೃಷ್ಟಿಕೋನದಲ್ಲಿ ಕುಮಾರಸ್ವಾಮಿ ಕಡಾಕೊಳ್ಳ ಅವರು ಚಿತ್ರವನ್ನು ನೋಡಿದ್ದು...

ಪ್ರೇರಕ

ಇರುವನೊಬ್ಬ ನನ್ನೊಳಗೆ ಪ್ರೇರಕ
ಸದಾ ನನ್ನ ಪಾಲಿಸುವ ಪಾಲಕ
ಬಿದ್ದು ಹೋದರು ಎದ್ದುನಿಲ್ಲಿಸುವ
ಹಬ್ಬಿದ ಕತ್ತಲಲ್ಲೂ ದಾರಿ ತೋರುವ
ಅಗೋಚರವಾಗಿ ಅಡಗಿ ಮುನ್ನಡೆಸುವ
ಇರುವನೊಬ್ಬ ನನ್ನೊಳಗೆ ಪ್ರೇರಕ
ಅವನೇ ನನ್ನ ಅಂತರಾತ್ಮ

ಇರುವನೊಬ್ಬ ನನ್ನೊಳಗೆ ಪ್ರೇರಕ
ಸ್ವಾಭಿಮಾನದ ಕಿಚ್ಚು ಹಚ್ಚಿ
ಬವಣೆ ಇದ್ದರು ದಿಟ್ಟತನವ ಹೊಮ್ಮಿಸಿ
ಬದುಕಿ ನಡೆಯುವ ದಾರಿ ತೋರಿಸಿ
ನನ್ನ ಸೂತ್ರದಾರಿಯು ತಾನೆ ಆದರು
ತೋರಿಸಿಕೊಳ್ಳದೆ ಅವಿತು ನನ್ನ ಮುನ್ನಡೆಸುವ
ಇರುವನೊಬ್ಬ ನನ್ನೊಳಗೆ ಪ್ರೇರಕ
ಅವನೇ ನನ್ನ ಅಂತರಾತ್ಮ

ಇರುವನೊಬ್ಬ ನನ್ನೊಳಗೆ ಪ್ರೇರಕ
ನನಗಿಲ್ಲ ಭಯ ಇವನಿರುವತನಕ
ಯಾರ ಹಂಗಿಲ್ಲ ವಶವರ್ತಿ ನಾನಲ್ಲ
ಅಂಗ ಊನ ವಿಕಲಾಂಗನಾದರು
ಭಂಗವಿಲ್ಲ ಬದುಕಿಗೆ ಜಂಗಾಬಲವೆಲ್ಲ
ಮೆಟ್ಟುವೆ ಕಷ್ಟಗಳ ದಿಟ್ಟ ದೀರನಾಗಿ
ಮಾಡುವೆ ಕಾಯಕ ಜಟ್ಟಿಯ ಪಟುವಂತೆ
ಇದ್ದರೆ ಸಾಕು ನನ್ನೊಳಗೆ ಪ್ರೇರಕ
ಅವನೇ ನನ್ನ ಅಂತರಾತ್ಮ

ಇರುವನೊಬ್ಬ ನನ್ನೊಳಗೆ ಪ್ರೇರಕ
ದುಃಖ ಭಯ ದೀನ ಭಾವ ಅಳಿಸಿ
ದೂರ ದೂಡಿ ದುಮ್ಮಳ ಉಮ್ಮಳ
ಬೆಂಬಲವಿಟ್ಟು ಹಂಬಲಿಸುವ ನನಗೆ
ಬೆಂಬಿಡದೆ ಕಾಯುತ್ತ ಬಾಳ ದಾರಿ ತೋರುತ್ತ
ನರ್ಲಿಪ್ತನಿಗೆ ಚೇತನವ ತುಂಬುತ್ತ
ನಡೆಸುವ ನನ್ನನ್ನು ಅಗೋಚರ ಪ್ರೇರಕ
ಅವನೇ ನನ್ನ ಅಂತರಾತ್ಮಕ

ಸೇವಾಕಾಂಕ್ಷಿ
ಮುಂಗೈಯ ಕಳೆದುಕೊಂಡ ಅಂಗವಿಕಲನಿವನು
ಬೀದಿ ಅಂಗಳದಲ್ಲಿ ಹರಡಿರುವ ಕಸವ ಗೂಡಿಸಿ
ಸ್ವಚ್ಚ ನಾಡನು ಕಟ್ಟುವ ಹೆಚ್ಚುಗಾರಿಕೆಯವನು
ಇಚ್ಚೆಗೆ ಅಡಿಯಿಟ್ಟ ಕೆಚ್ಚೆದೆಯವನು

ಮುಡುಹುನಾಗಿರುವ ಕುರುಹು ದೇಹಕೆ ಮಾತ್ರ
ಮನದಲ್ಲಿ ಚಿಮ್ಮಿದೆ ಅಮಿತ ಚೇತನ
ಸೇವೆ ಸಲ್ಲಿಸುವ ಸಹಸ್ರ ಸಾಹಸ ನಿಯತ
ಯಾರು ಸರಿಸಾಟಿ ಇವನ ಮುನ್ನಡೆಗೆ

ಇವನಿಗೆ ಇಲ್ಲ ಮೇಲು ಕೀಳೆಂಬ ಭಾವ
ಜಾತಿ ಧರ್ಮದ ಸೋಗು ಸೊಲ್ಲಿಲ್ಲ
ನಿತ್ಯ ಕಾಯಕ ನಿಯಮ ಯೋಗಿವರ್ಯ
ಬತ್ತಿದ ದೇಹವಿದ್ದರು ಉಕ್ಕಿದೆ ಉತ್ಸಾಹ

ವಿಧಿಯ ಅವಕೃಪೆಗೆ ಹೊತ್ತ ಹೂನ ಕಾಯ
ಕಾಡಿಲ್ಲ ಮನಸ್ಸನ್ನ ದೀನ ತಾನೆಂದು
ಧೀರತನದಿ ಬದುಕು ನಡೆಸುವ ದಿಟ್ಟ
ಕಲಿಸುತಿರುವನು ನಮಗೊಂದು ಅರಿವಿನ ಪಾಠ

ಮೂದಲಿಸುವರು ಇವನ ನೋಡಿ
ಓದು ಬರಹ ಕಲಿತ ಆಧುನಿಕ ಕಲಿಗಳು
ಹಣದ ಹಟ್ಟಹಾಸದಿ ಮೆರೆವ ಗೌಣ ಗುಣ ಸಿರಿವಂತರು
ಕೊಳಕು ದೇಹ ವಸ್ತ್ರ ಕುಷ್ಠರೋಗಿಯೆಂದು

ನಮ್ಮೆಲ್ಲ ಕೊಳಕನು ತೊಳೆಯುವ ಪಣತೊಟ್ಟವರು
ಗುರಿಯಾಗಿಹರು ಸಮಾಜದ ಕೀಳು ಜನರೆಂದು
ಅರಿಯರವರು ನಮ್ಮ ಕೊಳಕು ತೊಳೆಯುವ
ಕಾಯಕ ನಿರತ ಮೂರ್ತ ಮೂರ್ತಿಗಳಿವರೆಂದು


ಕಸವನ್ನು ತೆಗೆಯುವ ಈ ಕಾರ್ಯವೇ ಧರಣಿಗೆ ಕೊಡುಗೆಯೆಂದು ಶಾಂತಲಾ ಭಂಡಿಯವರು ಹೇಳಿದ್ದು...

ಅಲ್ಲು ಕಸವು ಇಲ್ಲು ಕಸವು
ಎಲ್ಲು ಕಸವು ತುಂಬಿದೆ
ಹಿಂದೆ ಗುಡಿಸಿ ಎಸೆದ ಕಸವೆ
ಮುಂದೆ ಚೆಲ್ಲಿ ನಿಂತಿದೆಪ

ಚಂದ ಮಾಡು ಜಗವ ನೀನು
ಒಳ್ಳೆ ಕೆಲಸವೆ ಲಭಿಸಿರೆ
ನೀನು ಗುಡಿಸಿ ಎಸೆದ ಕಸವು
ಜನತೆ ಮನಕಿದೋ ಮರಳಿತೆ೧

ಫಲವು ಇಹುದು ಜಗದಲಿದಕೆ
ನಿನ್ನ ವೃತ್ತಿ ಪ್ರೀತಿಗೆ
ನಗುತ ಕಶ್ಮಲ ತೆಗೆವ ಕಾರ್ಯವೆ
ನಿನ್ನ ಕೊಡುಗೆಯು ಧರಣಿಗೆ೨

ಎನ್ ಎಸ್ ಲಕ್ಶ್ಮೀನಾರಾಯನ ಭಟ್ ರವರಲ್ಲಿ ಕ್ಷಮೆಯಾಚಿಸುತ್ತ ....
(ಈ ಹಾಡನ್ನು ಎನ್ ಎಸ್ ಲಕ್ಷ್ಮೀನಾರಾಯಣ ಭಟ್ ಅವರ "ಈಚೆ ನಾನು ಆಚೆ ನೀನು" ಈ ಹಾಡಿನ ರೀತಿಯಲ್ಲಿ ಹಾಡಬಹುದಾಗಿದೆ.)


ಪ್ರತಿಯೊಂದು ಕೆಲಸಕ್ಕೂ ಅದರದ್ದೇ ಆದ ಮರ್ಯಾದೆ ಇದೆ ಎಂದು ಹೇಳುತ್ತ ಸತೀಶ ಹೇಳಿದ್ದು...

ಗುಡಿಸುವವನ ಹೂಟ
ಎಡಗೈಯಿಲ್ಲದ ಚೊಂಚ ಹಳದಿ ಟೋಪೀ ಅಣ್ಣಾ
ಕಸವ ಗುಡಿಸಿ ಧೂಳೆಬ್ಬಿಸಿ ಮುಚ್ಚ ಬೇಡ ಕಣ್ಣಾ.

ರಸ್ತೆ ನಾಲ್ಕು ಕೂಡಿ ಹೆಜ್ಜೆ ಹತ್ತು ಸಾಗೋವಲ್ಲಿ
ನಿನಗಂತೂ ಇಲ್ಲ ಯಾವುದೇ ಆತಂಕ ಅಡ್ಡಿಗಳು
ದಿನವೂ ನಿನ್ನೊಡನಿದ್ದು ಗುಡಿಸಿ ಎಲ್ಲವ ಓಡುತಲಿದ್ದು
ಧೂಳನು ತೆಗೆದು ತಮಗೇ ಮೆತ್ತಿದ ಪೊರಕೆ ಕಡ್ಡಿಗಳು.

ಮೆತ್ತಿ ಮುತ್ತಿನಿಂತ ಎಷ್ಟೋ ವರ್ಷದ ಧೂಳನು
ಗುಡಿಸಿ ಉಣಬಡಿಸುವೆ ಹಳೆಯ ನೋವನು
ಗುಡಿಸಿದಷ್ಟು ಬರುವವಂತೆ ಹಳೆಯದೆಲ್ಲ ಮೇಲೆ
ಎಷ್ಟೇ ಜನುಮ ಮುಗಿದರು ನಿಲ್ಲದ ಸರಮಾಲೆ.

ಕಸ ಹೊಡೆದರೂ ಕಿರೀಟ ಹೊತ್ತರೂ
ಕೆಲಸಕ್ಕಿವೆ ಅವುಗಳದೇ ಮರ್ಯಾದೆ
ಅವರವರ ಕರ್ಮ ಅವರವರು ಮಾಡಿ
ಮುಂದೆ ಹೋದರೆ ಎಲ್ಲಿದೆ ಫಿರ್ಯಾದೆ.

ಗುಡಿಸಿ ಹೊಸದ ತೋರಿಸುವ ನಿನ್ನ ಈ ಆಟ
ಬಲ್ಲವರೇ ಬಲ್ಲರೂ ನಿನ್ನ ಮನಸಿನ ಹೂಟ.


ಅಂಗವಿಕಲನಾದರೂ ಬಾಳಿಗೆ ಮುಖ ತಿರುವಿಸಿಲ್ಲ ಎಂದು ಅನಿಲ ಜೋಶಿ ಹೇಳುತ್ತಾರೆ...

ನೀಳದೇಹ ನೀಳ್ಗಡ್ಡದೊಡೆಯ
ಅಳತೆಯಲಿ ಕೈ ಗಿಡ್ಡವೆಂದು
ಹಳಹಳಿಸುತ್ತ ಕುಳಿತಿಲ್ಲ, ಬಾಳ
ಬೇಳುವೆಗೆ ಮುಖ ತಿರುವಿಲ್ಲ

ಎಳೆಬಿಸಿಲಿರಲಿ ಮರ ನೆರಳಿರಲಿ
ಕೋಲುಪೊರಕೆಯ ’ಹಿಡಿದು’
ಕಾಲ ಕೆಳಗಣ ಕಸ ಬಳಿದು ರಸ್ತೆ
ಬೆಳಗುತ ಬಾಳ ತೇರನೆಳೆವುದ ನೋಡಿ

ಎತ್ತಿದ ತೋಳು ಅರೆ ತಿರುಗಿದ ದೇಹ
ನೆಟ್ಟ ನೋಟ ನೋಡಿ ಹೇಳಿ, ಸಮ-
ಚಿತ್ತದೀ ನಿಲುವು ನೆನಪಿಸದೆ ನಾಟ್ಯ?
ಹೊಟ್ಟೆಗಾಗಿ ದುಡಿವವನಷ್ಟೇ ಅನಿಸುವದೆ?

Monday, 21 January 2008

ಚಿತ್ರ- ೩೭



ಕ್ರೂರ ಇತಿಹಾಸ

ಪ್ರೇಮಾಲಯವಲ್ಲದ ದೇವಾಲಯವಿದು
ಶಿವಾಲಯದ ಮೇಲೊಂದು ಸಮಾದಿ ಇಂದು
ಅಳಿದ ವೇದ ಮಂತ್ರ ಜಪ ತಪ ಅಂದು
ಪುಸಿ ಪ್ರೇಮಗೀತೆಯ ಹುಸಿ ಚರಣವಿಂದು

ವಿಕೃತರ ಅಟ್ಟಹಾಸ ಇತಿಹಾಸ ಮೆಟ್ಟಿನಿಂತು
ವಿಕಾರ ಮನಸ್ಸುಗಳ ರೂಪಾಂತರ ಇಂದು
ಶಿವನಾಮ ಜಪನಾಮ ಪುಣ್ಯಪೂಜೆ ಅಂದು
ಷಹಜಾನ್ ಮಮತಾಜ್ ಪ್ರೇಮ ಪೂಜೆ ಇಂದು

ತೇಜೋಮಂದಿರ ತೇಜೋವದೆಯಾಗಿ 'ತಾಜ' ಅವತಾರ
ಅರಿಯದ ಜನಸ್ತೋಮ ನೆರದಿಹದು ಸುತ್ತಲು
ಮಾಡಿದೆ ಗುಣಗಾನ ಷಹಜಾನನ ಅಮರ ಪ್ರೇಮ
ಮರುಗಿದೆ ಮಮತಾಜಳಿಲ್ಲದ ವಿರಹದ ಕ್ಷಣ ನೆನದು

ಕ್ರೂರ ಇತಿಹಾಸ ನೆನದ ಸಾಧುವಿನ ಮನಸ್ಸೊಂದು
ಕೋಟಿ ಕೋಟಿವಾರಸುದಾರರಿದ್ದರು ಅಳಿದ ತನ್ನತನವನ್ನು
ಮಿಡಿದು ನರಳುತ್ತಿದೆ ತಿರುಚಿದ ಗತನೆನೆದು
ಮೌನಿಸಿ ಧ್ಯಾನವ ಅರಿಸಿ ಕುಳಿತಿದೆ ಇಲ್ಲಿಂದು

ಯಾರು ಹೊಣೆಯಾರು ಬದಲಾದ ಇತಿಹಾಸಕ್ಕೆ
ಅಕ್ರಮ ಅಟ್ಟಹಾಸದಿ ಮೆಟ್ಟಿ ಬಂದ ಮೊಘಲರೋ
ದಿಟ್ಟತನದಿ ಮೆಟ್ಟಿ ನಿಂತು ನೀಚರ ಹುಟ್ಟಡಗಿಸದೆ
ಅತ್ಮಸಾಕ್ಷಿಯ ಮರೆತು ಸೋತುಹೋದ ನಾವೆಲ್ಲರೋ

ವಸುದೇವಕುಟುಂಬಕಮ್ ವಿಶ್ವವೇ ಕುಂಟುಂಬವೆಂದರಸಿ
ಸರ್ವೇ ಭವಂತು ಸುಖಿನ ಸರ್ವೇ ಸಂತು ನಿರಾಮಯ
ಸರ್ವೇ ಭದ್ರಾಣಿಪಶ್ಯಂತು ಮಾ ಕಶ್ಚಿದುಃಖ ಭಾಗ್ ಭವೇತ್
ಜಗವೆಲ್ಲ ಸುಖಿಯಾಗಿರಲಿ ಎಂಬ ವೇದವಾಣಿಯ ಭಾರತ ಸೋಲಲು ಕಾರಣರಾರು

ಗತವನ್ನೇ ನೆನೆಯುತ್ತ ವಾಸ್ತವ ಮರೆಯುತ್ತ
ಜಾತಿ ಮತ ಪಂತ ಮೇಲುಕೀಳಿನ ನಡುವೆ ಸಿಲುಕಿ
ನಮ್ಮತನವ ಮರೆತು ಪರನಿಂದನೆಯ ಮಾಡುತ್ತ
ಮತ್ತೆ ಭಾರತದ ಸ್ವರ್ಣ ಇತಿಹಾಸ ಕಟ್ಟವ ಕನಸು ಕಾಣದ ನಾವು ಕಾರಣರು

ಇದು ಅಲ್ಲ ಇದು ಅಲ್ಲ ನನ್ನ ಕನಸಿನ ಭಾರತ
ವೇದ ವೇದಾಂತ ಮೊಳಗಿಸಿ ಬೆಳಗಿದ ಭಾರತ
ಇಂದು ಕಾಣುತ್ತಿರುವುದು ಬರಿ ತೋರಿಕೆಯ ಬರಿದಾದ ಭಾರತ
ಬನ್ನಿ ಕೈಜೋಡಿಸಿ ಕಟ್ಟೋಣ ವೇದಾಂತ ಭಾರತ ಬರೆಯೋಣ ಮತ್ತೊಮ್ಮೆ ಹೊಸ ಇತಿಹಾಸ
- ಕುಮಾರಸ್ವಾಮಿ ಕಡಾಕೊಳ್ಳ


ಒಂದಷ್ಟು ಸ್ವಗತಗಳು

ವರ್ಷವೆಷ್ಟುರುಳಿದವೊ ಮುಮ್ತಾಜಳ ಗೋರಿಯಾಗಿ
ಮೂರುನೂರರ ಮೇಲೆ ಹತ್ತಾರಾಗಿರಬೇಕು
ಅಮೃತಶಿಲೆಯ ಬಿಳುಪು ಹೊಳಪು; ಪಚ್ಚೆ
ಹರಳು, ಮುತ್ತು ರತ್ನದ ಕುಸುರಿ ಒನಪು
ಸಿರಿ ಸಂಪತ್ತಿನ ಸೂರೆ ಅದೆಷ್ಟೆ ಇರಲಿ,
ಅರಸನೊಲವಿನ ಆಚ್ಛಾದನೆಯಾಗಿರದಿದ್ದರೆ
ಗೋರಿ ಸುತ್ತಿದ ಬಿಳಿ ಬಟ್ಟೆಯಷ್ಟೆ ತಾನೆ!

ತಾಜ್ ಮಹಲೊ ಇದು ತೇಜೋ ಮಹಾಲಯವೊ
ಗೋರಿ ಮುಮ್ತಾಜಳದ್ದೊ, ಹಿಂದೂ ಇತಿಹಾಸದ್ದೊ
ಕಾಲಗರ್ಭದೊಳಿಣುಕಿ ಹೇಳಬಾರದೆ ಕಂಡವರು
’ಕಮಂಡಲ’ದ ನೀರಿಗೆನ್ನ ತಪವನೆರೆದರೆ ಸಿಕ್ಕೀತೆ
ಇತಿಹಾಸದ ಆ ಪುಟದ ಸತ್ಯ ನನಗೇನಾದರು?

ಹಸಿರು ಹಾಸಿನ ಕೊನೆಗೆ ಹೊಳೆವ ಮಹಲು
ನೀಲಿ ಬಾನ ಬೆಳಗಿರುವ ಪರಿ ನೋಡ
ಚಿತ್ರಕಾರನ ಕೈಚಳಕವೋ ಇದೆ ನಿಜರೂಪವೊ;
ನಂಬಲಾರೆ, ಹಿಂದೊಮ್ಮೆ ಸೆಪ್ಟೆಂಬರಿನಾರ್ದ್ರತೆ,
ಉರಿವ ಸೂರ್ಯ, ಸುರಿವ ಬೆವರಿಗೆ ತೊಯ್ದ
ಅರಿವೆ ಅಂಟಿದ ಮೈ ಜಿಗಿಗೆ ಮನ ರೋಸಿ
’ಇದೇನಾ ತಾಜ್’ ಎಂದಸಡ್ಢೆಯಿಂದಂದದ್ದು
ಇದರ ಮುಂದೆ ನಿಂತೇ ಎಂದು!
- ಅನಿಲ ಜೋಶಿ


ಮಹಲು ಮನಸ್ಸು

ಯಾರು ಏನು ಬೇಕಾದರೂ ಮಾಡಲಿ
ಅವರವರ ಗೋರಿಗಳನ್ನ ಮಾತ್ರ ಚೆನ್ನಾಗಿ
ಕಟ್ಟಿಕೋಬೇಕು ಅನ್ನೋದಕ್ಕೆ ಈ ಮಹಲೇ ಸಾಕ್ಷಿ
ಬೆಳ್ಳಗೆ ಬೆಳಗೋ ಮಿನಾರಗಳಿಂದ ಸ್ವಲ್ಪ
ದೂರದಲ್ಲೇ ಬೆತ್ತಲಾಗಿ ಹೆಚ್ಚು ಜನ ನೋಡದೇ
ಬಿದ್ದುಕೊಂಡಿರುವ ಅಕ್ಬರನ ದೇಹದ ಪಕ್ಷಿ.

ಹಾಸಿಕೊಂಡ ಹಸಿರ ಮೇಲೆ ಕೂತು ಮಲಗುವ ಜನ
ಉರಿ ಬಿಸಿಲ ಜಳಕದ ಹಿಂದಿನ ಛಳಿಗೆ ಹೊದ್ದ ಮನ.

ಅಳಿದ ನಮ್ಮವರಿಗೆ ಕಟ್ಟಿದ್ದೇವೆ ಮಿನಾರಗಳನು ಕ್ಷಮಿಸಿ
ನೀವು ಕಟ್ಟುವುದೇನೂ ಬೇಡ ನಿಮ್ಮ ಕಸವನ್ನು ಎತ್ತಿ ಬೀಸಿ
ಅಷ್ಟೇ ಎಂದು ಬದಿಗೆ ತವಕದಿ ಚಿಂದಿ ಆಯುವ ಮಂದಿ
ಯಾರೋ ಉಸಿರು ತೊರೆದು ಮಲಗಿದಲ್ಲಿ ಪ್ರೇಮವಿರಬಹುದು
ಹುಡುಕುತ್ತಾ ತುಡುಗು ದನಗಳು ಹಾದು ಬರಬಹುದು
ಹಲಬುವ ಮನಸುಗಳೇನೇ ಇದ್ದರೂ ಅವು ಗುಂಬಜದ ಬಂಧಿ.

ಹರಿಯುವ ಯಮುನೆಗೆ ಗೊತ್ತು ಕರ್ಕಷ ಕಾರ್ಖಾನೆಗೆಳ ಗೋಳು
ಕಾರ್ಮೋಡವನೂ ಬಿಟ್ಟಿಲ್ಲ ಸುತ್ತಿ ತಿರುಗುವ ಧೂಳು.

ಯಾರು ಸತ್ತರೇನು ಬಿಟ್ಟರೇನು ಮಹಲಿನ ಮನಸನು ಬಲ್ಲರೇನು
ಗುಂಬಜವ ತೋರಿಸಲು ಬಾಗಿದ ಕಂಭಗಳ ಕಷ್ಟ ಅರಿತಿಹರೇನು.
- ಸತೀಶ

Monday, 14 January 2008

ಚಿತ್ರ- ೩೬


ಸತೀಶ ಕಂಡಂತೆ ಗೂಳಿ ಮತ್ತು ಬದುಕು

ಓ ಪ್ರಾಣವೇ, ರಾಮ ಕೃಷ್ಣರು ಬೆಳೆದು
ಬದುಕಿದ ನಾಡಿನ ಭಾರವನು ಹೊತ್ತ ಚಿಂತೆ
ಸಂತ ಸುಧಾರಕರು ನೆಲವನು ತಬ್ಬಿ ಹಿಡಿದೂ
ಈ ಪೀಳಿಗೆಯ ಜನಕೆ ಅವರದೇ ದೊಡ್ಡ ಕಂತೆ.

ಓ ಜೀವವೇ, ಲಂಗು ಲಗಾಮಿಲ್ಲದೆ ಅಲೆದೂ
ಕೊನೆಗೆ ನಿಂತಲ್ಲೇ ನಿಂತ ನಾಲ್ಕು ಕಾಲು
ಏಟು ತಿಂದ ಬಡಕಲು ದೇಹವನು ಹೊತ್ತೂ
ಅದೇನನ್ನೋ ಕಾಯುತ್ತಿರುವ ಸಾಲು.

ಓ ಬದುಕೇ, ಎಲ್ಲಿ ಯಾರಿಗೇನಾದರಂತೆ
ನಾವೇ ಕಂಡೂ ಕೇಳಿ ಹರಟುವ ಪರಿ
ಹೊಸ ಲೋಕದ ಮೇಲೆ ಹರಡಿದ ಕೌದಿ
ಅದೆಲ್ಲಿಂದಲೋ ಬರುವ ಬಿಸಿಲಿನಾ ಗುರಿ.

ಓ ಹಸಿರೇ, ಧೂಳು ತಿಂದ ಕಂಬಿಗಳ ಹಿಂದೆ
ಕರಿಯನ್ನು ಕಬಳಿಸಿ ಜೀವ ಜಲವನ್ನು ಸೂಸಿ
ನೆಲ ಮುಗಿಲನು ನೋಡದಿರುವ ಹಾಗಿನ ಹೊಸ
ಆಸೆಯನು ಹತ್ತಿಕ್ಕಿ ಗೆದ್ದ ತತ್ಕಾಲದ ಕಸಿವಿಸಿ.

ಯಾವುದೋ ನಿರೀಕ್ಷೆಯಲಿ ನಿಂತ ಕಾಲುಗಳ ನಡುವೆ
ದಿನವೂ ಬದುಕ ನಡೆಸುವ ಕಾಲುಗಳಿಗೆಲ್ಲಿದೆ ಬಿಡುವೆ.


ಕುಮಾರ ಸ್ವಾಮಿ ಕಡಾಕೊಳ್ಳ ಕಂಡಂತೆ ಪಯಣ

ಪಯಣ ಸಾಗಿದೆ ಗಾಲಿಯ ಮೇಲೆ
ಆವರ್ತನ ನಡದಿದೆ ಸರದಿಯ ಜೊತೆಗೆ
ಬಂದು ಹೋಗುವವು ನೂರು ಮುಖಗಳು
ಹುಡುಕಿವೆ ಹೋರಾಟದಿ ಅರಿಯದ ಅರ್ಥವನು

ಪಯಣ ದಾರಿಯಲಿ ಸಿಕ್ಕವರಾರೋ
ಸಹಾಯ ಸೇವೆ ಕೇಳುವರಾರೋ
ಸೇವಗೈಯುವ ಸೇವಕ ನಾನು
ಕಾಲನ ಸೂಚನೆ ಪಾಲಕ ನಾನು

ಒಡಲ ಚೀಲವ ತುಂಬಿಸುವ ಕಾಯ
ಅಂಟಿಸಿ ಸೇವೆಗೆ ಸ್ವಾರ್ಥದ ಭಾವ
ಸಾಗಿದೆ ಬಾಳ ಪಯಣ ನಿತ್ಯ ನಿರಂತ
ಸ್ವಾರ್ಥ ಸೇವೆ ತುಲನೆ ಮಾಡುತ್ತ

ಪಯಣವೋ ಇದು ಬದುಕಿನ ಪಯಣವೋ
ಪಯಣದ ಉದ್ದಕ್ಕೂ ನೂರು ಅನುಭವವೋ
ಪ್ರತಿ ಕ್ಷಣಕ್ಕೊಂದು ಹೊಸ ದೃಷ್ಠಿಯೋ
ಸಾಗುತಿಹುದು ಅನುಭವಿಸುತ ಏಳು ಬೀಳಿನಲಿ

ಏರಿಳಿತದ ದಾರಿ ಸಾಗಿಲು ಬಲು ಗಡಿಬಿಡಿ
ಸಾಗುತಲಿರುವುದು ಬಂದರು ಬಿರುಗಾಳಿ
ನಿಲ್ಲದು ಎಲ್ಲಿಯು ಬಂದರು ಕಷ್ಟ ನೂರು
ನೂಕುತ್ತಲಿರುವುದು ಹಂಗಿನಲಿ ಕಾಯದ ಗಾಡಿ

ಅರಿತರೆ ತಿಳಿವುದು ಜೀವದ ದಾರಿ
ದೂತರು ಬರುವರು ಕೆಡಿಸಲು ಕೂಡಿ
ಬವಣೆಯ ಭಾವನೆ ದೂಡುತ ದೂರ
ಕಂಕಣ ಕಟ್ಟಿ ಮಾಡು ಬದುಕಿನ ಪಯಣ

Monday, 7 January 2008

ಚಿತ್ರ- ೩೫



ಸುಪ್ತದೀಪ್ತಿ ಅವರ ಕಲ್ಪನೆಯಲ್ಲಿ ಕೈಯನ್ನು ಹಿಡಿದು ನಡೆಯುವ ತಮ್ಮ

ನನ್ನ ಕೈಯ ಹಿಡಿಯುತ
ಎರಡು ಹೆಜ್ಜೆ ನಡೆಯುತ
ಸಾಗು ಮುಂದು ಮುಂದಕೆ, ನನ್ನ ತಮ್ಮ.

ಪುಟ್ಟ ಪಾದ ಎತ್ತುತ
ದಿಟ್ಟ ದಿಕ್ಕ ಹುಡುಕುತ
ಜೊತೆಯಾಗಿ ನಡೆಯುವ, ನನ್ನ ತಮ್ಮ.

ಜಗದ ಅಗಲ ಅಳೆಯುವ
ಜನರ ನೋಟ ಸೆಳೆಯುವ
ಎಲ್ಲೆ ಮೀರಿ ಬೆಳೆಯುವ, ನನ್ನ ತಮ್ಮ.

ದಾರಿ ತೋರ ಬಲ್ಲೆನು
ಭಾರ ಎತ್ತಬಲ್ಲೆನು
ನಿನ್ನ ಹೆಗಲಿಗೆಣೆಯಾಗಿ, ನನ್ನ ತಮ್ಮ.

ಕಾಲ ಇಲ್ಲೆ ನಿಲ್ಲಲಿ
ನಾಳೆ ನಮ್ಮ ಕಣ್ಣಲಿ
ಸೂರ್ಯ ಚಂದ್ರ ನಾವೇ ಇನ್ನು, ನೋಡು ತಮ್ಮ.


ಕುಮಾರ ಸ್ವಾಮಿ ಕಡಾಕೊಳ್ಳ ಹೇಳಿದ್ದು ಬಾರೋ ಅಂಗಳಕೆ

ಬಾರೋ ಅಂಗಳಕೆ ಓಡುತ್ತಾ ಬಾರೋ
ಬೆಳಕು ಚೆಲ್ಲಿದೆ ಧರೆಯ ತುಂಬಾ ನೋಡೋ
ಹಸಿರ ಇಸಲೆಯ ನಡುವೆ ನುಸುಳಿ ಜಾರಿಹುದು
ಬೀಸುವ ಸುಳಿಗಾಳಿಗೆ ನಾಟ್ಯವಾಡುತ ನಕ್ಕಿಹುದು

ಕೇಕೆ ಹಾಕುತ್ತ ಗೆಳೆಯರ ಕೂಗಿ ಕರೆಯೋಣ
ಹಕ್ಕಿಯ ಹಾಡಿಗೆ ತಾಳವ ಹಾಕೋಣ
ಕುಣಿ ಕುಣಿ ಕುಣಿ ಕುಣಿದು ನಲಿಯೋಣ
ಕೈಯಿಗೆ ಕೈ ಹಿಡಿದು ಸಂಗವ ಮಾಡೋಣ

ರಾಸಿ ಮರಳಿನ ಮೇಲೆ ಮೈಯ ಹಾಸೋಣ
ಸೂಸಿ ಬೀಸುವ ಗಾಳಿಯಲಿ ತೇಲಿ ಹೋಗೋಣ
ತೇಲೋ ಮೋಡ ಹಿಡಿಯಲು ಹೊಂಚ ಹಾಕೋಣ
ಹಿಡಿದು ಇಳಿಸಿ ತಂದು ಧರೆಗೆ ನೀರ ಉಣಿಸೋಣ

ಆಲದ ಮರವೇರುತ ಮರಕೋತಿ ಆಟ ಆಡೋಣ
ಮಾವಿನ ತೊಟಕೆ ನುಗ್ಗಿ ಹಣ್ಣು ಕೀಳೋಣ
ಬೆಟ್ಟದ ತುದಿಗೆ ಏರಿ ಬುಕ್ಕಿ ಹಣ್ಣು ಹುಡುಕೋಣ
ಬಾವಿ ನೀರಗೆ ಧುಮುಕಿ ಈಜಿ ತಣಿಯೋಣ

ಕೆರೆಯ ಅಂಗಳದಾಗೆ ಚಿನ್ನಿ ದಂಡವ ಆಡಿ
ಗೌಡರ ಕೇರಿಯಾಗೆ ಲಗೋರಿಯ ಹೂಡಿ
ಗುಡಿಯ ಸಾಲಲ್ಲಿ ಅವಿತು ಕಣ್ಣು ಮುಚ್ಚಾಲೆ ಆಡಿ
ಸೇರೋಣ ಮನೆಯನ್ನ ಸರ ಸರನೆ ಓಡಿ

ಬಾರೋ ಅಂಗಳಕೆ ಬೇಗ ದುಗುಡ ದೂರ ದೂಡಿ
ಹೂಡಿ ಸಾಗಿಸೋಣ ಬದುಕು ಆಡಿ ಆಡಿ


ಬೆಲೆ ಕಟ್ಟಲಾರದ ಬಾಂಧವ್ಯದ ಬಗ್ಗೆ ಹೇಳಿದ್ದು ಸೀಮಾ

ಅಕ್ಕ- ತಂಗಿ, ಅಕ್ಕ- ತಮ್ಮ
ಅಣ್ಣ- ತಂಗಿ, ಅಣ್ಣ-ತಮ್ಮ
ಎಂಬೆಲ್ಲಾ ಬಾಂಧವ್ಯದ ಬಲೆ.

ಅನುಭವಿಸಿದವರೆನ್ನುವರು,
ಕಟ್ಟಲಾರೆವು ನಾವಿದಕ್ಕೆ ಬೆಲೆ.

ಅನುಭವಿಸದವರೆನ್ನುವರು,
ನಮಗಿಲ್ಲವಾಯಿತು ಈ ಅಮೃತದ ಸೆಲೆ.


ಸತೀಶ ಹೇಳಿದ್ದು ಚಿಂತೇ ಬೇಡಾ ತಮ್ಮಾ

ಇಬ್ರೂ ರಸ್ತೆ ದಾಟೋದ್ರಿಂದ
ದೊಡ್ಡೋಳಾದ ನಾನೇ ಆ ಕಡೆ ಈ ಕಡೆ
ನೋಡಿ ಕೈ ಹಿಡಿದ್ ನಡೆಸ್ತೀನ್ ನಿನ್ನ
ಚಿಂತೇ ಬೇಡಾ ತಮ್ಮಾ.

ಇಬ್ರೂ ಮುಂದೆ ಹೋಗೋದಿದೆ
ಸದಾ ಜೊತೆಯಾಗಿರೋ ನಾನೇ ಇಂದು
ಯೋಚಿಸಿ ಮುಂದೆ ಕರಕೊಂಡ್ ಹೋಗ್ತೀನ್ ನಿನ್ನ
ಚಿಂತೇ ಬೇಡಾ ತಮ್ಮಾ.

ಈ ಕಡೆ ಸಲೀಸೀದೆ ಆ ಕಡೆ ಏನೋ
ಎಂಬ ಯೋಚನೆ ಬಿಟ್ಟು ಕೈ ಹಿಡಿದಿರು
ನೀನೇ ಮುಂದಕೆ ಹೆಜ್ಜೆ ಹಾಕೋವಂತೆ ಏನೂ
ಚಿಂತೇ ಬೇಡಾ ತಮ್ಮಾ.