Thursday 17 May 2007

ಮೊದಲ ಚಿತ್ರ

ಚಿತ್ರ ೧.

ನಿಮ್ಮ ಕವನವನ್ನ ಕವನಗಳಿಗೆ ಇರುವ ಜಾಗದೊಳಗೆ ಬರೆಯಿರಿ, ನಂತರ ಅದನ್ನ ಇಲ್ಲಿಗೆ ಎತ್ತಿಕೊಳ್ಳಲಾಗುವುದು.

ದೀಪದ ಬೆಳಕು
ನೀಲಾಂಜನದ ಬಳಿ ಕುಳಿತಿದ್ದಾನೆ ನಿರಂಜನ
ದೀಪದ ಬೆಳಕು ಮುಖದ ಮೇಲೆ ರಂಜನ
ಪೋರನ ಕಣ್ಣ ಭಾವ ಅರ್ಥವಾಗುತ್ತಿಲ್ಲ
ಮುಖ ಕೆಂಪೇರಿರುವುದು ನಾಚಿಕೆಯಿಂದಲ್ಲ
ಈ ದೀಪದ ಬೆಳಕು ಏನೇನನ್ನೆಲ್ಲಾ ತೋರಿಸುತ್ತಿದೆ...
ಕವಿತೆಯ ಬದಲು ಕತೆ ಹೇಳುತ್ತಿದೆ... (!)
ಹೊರಗೆಲ್ಲೋ ಆಟವಾಡಿಕೊಂಡಿದ್ದ ತಮ್ಮನನ್ನು
ಮೊದಲು ಸೆರೆಹಿಡಿದು ತಂದದ್ದು ಅಕ್ಕ
ನಂತರ ಸೆರೆಹಿಡಿದದ್ದು ಕೆಮೆರಾ
ಕತ್ತಲಾಗುತ್ತಿದ್ದಂತೆ ಹಚ್ಚಿದ ದೀಪ..
ಹಚ್ಚಿದ್ದು ಒಂದೇ ದೀಪ;
ಆದರೆ ಆ ಕೋಣೆಯಲ್ಲೀಗ ಅದೆಷ್ಟು ದೀಪಗಳಿವೆ ನೋಡಿ:
ಪೋರನ ಕಣ್ಣಲ್ಲೊಂದು,
ಕೆಮೆರಾದ ಕಣ್ಣಲ್ಲೊಂದು,
ಕೆಮೆರಾ ಹಿಡಿದ ಜೀವದ ಕಣ್ಣಲ್ಲೊಂದು,
ಅಷ್ಟೇ ಅಲ್ಲ; ಬೆಳಗುತಿರುವ ದೀಪದ ಹಿಂದೆ ಮತ್ತೊಂದು ನೆರಳ ದೀಪ...!
(ಈಗ ನೋಡುತಿರುವ ನನ್ನ ಕಣ್ಣಲ್ಲೂ.. ಹಾಂ, ನಿಮ್ಮ ಕಣ್ಣಲ್ಲೂ..!)
ಈ ಚಿತ್ರದ ದೀಪದಲ್ಲಿ ಒಂದು ಮಜಾ ಇದೆ.
ಇದು ಬೆಳಗುವುದನ್ನು ನಿಲ್ಲಿಸುವುದೇ ಇಲ್ಲ..!
ಇದರ ಒಡಲ ಎಣ್ಣೆ ಎಂದೂ ಬತ್ತುವುದಿಲ್ಲ..
ಪೋರನ ಮುಖದ ಮೇಲಿನ ಕಾಂತಿ ನಿರಂತರವಾಗಿರುತ್ತೆ..
ನೋಡುವ ಕಣ್ಣಿರುವವರೆಗೆ...
ದೀಪ ಹಚ್ಚುವ ಮನಸು ಮನುಷ್ಯನಲ್ಲಿ ಇರುವವರೆಗೆ...
ದೀಪ ಬೆಂಕಿಯಾಗದೇ ಇರುವವರೆಗೆ...
- ಸುಶ್ರುತ ದೊಡ್ಡೇರಿ

ತಿಂಗಳಿನ ಅಂಗಳದಿ ಮಂಗಳವೆ ತುಂಬಿರಲಿ
ಕಂಗಳಲಿ ಇಂಗದಿರಲೆಂದೆಂದು ಕಾಂತಿ
ದೀಪಗಳ ಸಾಲಿನಲಿ ಹಣತೆಗಳ ಓಣಿಯಲಿ
ತಾಪಗಳ ಬದಿಗಿರಿಸಿ ಕಳೆದುಬಿಡು ಭ್ರಾಂತಿ
ಆಗಸದಿ ಆಡುತಿಹ ಬಿಳಿಮೋಡದಿಂದೆಲ್ಲ
ನಗುವರಳಿ ಹರಹರಡಿ ಹರುಷದಲೆ ಶಾಂತಿ
ಮತ್ತೊಂದು ಕಾರ್ತೀಕ ಸಡಗರದಿ ಬಯಸುವೆನು
ನೆತ್ತಿಯಲಿ ತಂಪೆಣ್ಣೆ, ಗೂಡಿನಲಿ ಪ್ರಣತಿ.
(೧೮-ಅಕ್ಟೋಬರ್-೨೦೦೦)

-suptadeepti
ಬೆಳದಿಂಗಳ ಹಂಬಲದಿ ನಾನು
ನಟ್ಟಿರುಳ ಬದುಕಲ್ಲಿ ಹಣತೆ ಹಚ್ಚಿ ಕಾದಿದ್ದೇನೆ
ಅಲ್ಲಿ ಬಾಗಿಲ ಸಂದಿಯಿಂದ ಇಣುಕುತ್ತಿರುವುದೇನು
ಜೀವನ್ಮುಖೀ ಬೆಳ್ದಿಂಗಳಾ?
ಬಾಗಿಲ ಸಂದಿಗೆ ಬಂದವಳು
ಮನೆಯೊಳಗೆ ಬರಳಾ?
ಕೊಡಲೇನುಂಟು ಇಲ್ಲಿ,
ನಿನ್ನ ಬೆಳಕಲ್ಲಿ ತೋಯುವ ಕತ್ತಲೆಯಷ್ಟೆ!
ಕತ್ತಲಿನಿಂದ ಬೆಳಕಿನೆಡೆಗೆ
ದೀಪ ತೋರುತಿದೆ ದಾರಿ...
ಓ ಬಾಲಕ,
ನಿನ್ನ ಆ ಮುಗುಳುನಗೆಯೋ ಚೇತೋಹಾರಿ..
ದೀಪದ ಕಾಂತಿ ನಿನ್ನ ಮುಖದ ಮೇಲೋ?
ಇಲ್ಲ ನಿನ್ನ ಮಂದಹಾಸದ ಪ್ರಭೆಯಲ್ಲಿ
ದೀಪ ಬೆಳಗುತಿದೆಯೋ?
ಹಚ್ಚು ನೀ ದೀಪದಿಂದ ಮತ್ತೆಷ್ಟೋ ದೀಪಗಳ
ಇತ್ತು ಮುಖದಲ್ಲಿ ಆ ಮೆಲುನಗೆಯ
ಬೆಳಗು ನೀ ಮನೆ ಮನಗಳ
- ಶ್ಯಾಮಾ

ಹೊಳೆವ ನಕ್ಷತ್ರ ಕಂಗಳ ಪೋರ
ದೀಪದಡಿ ಏನಿದೆ, ಎಂದಿನಂತೆ ಕತ್ತಲು!
ಅಗೊ ನೋಡು, ಬೆಳಕು ಹೊರಟಿದೆ
ಕತ್ತಲನ್ನು ನುಂಗುತ್ತಾ ,ದಾರಿ ತೋರುತ್ತಾ,
ಕಣ್ಣಿನ ಜೋಳಿಗೆಯಲ್ಲಿ ಒಂದಿಷ್ಟು
ಕನಸ ಬೊಂತೆಗಳನ್ನು ತುಂಬಿಕೋ,
ಕಂಡಷ್ಟು ದೂರ, ಕನಸುಗಳು
ಖಾಲಿಯಾಗುವವರೆಗೆ ಸಾಗು,
ಬೆಳಕು ಆರಿದರೂ ನಿನ್ನ ಕಣ್ಣ ನಕ್ಷತ್ರ ಸದಾ ಉರಿಯಲಿ
ಇನ್ನಷ್ಟು ದೀಪಗಳ ಹೊತ್ತಿಸಲಿ, ಮತ್ತಷ್ಟು ನಕ್ಷತ್ರ ಅಂಟಿಸಲಿ,
ಬಗಲ ಕನಸುಗಳು ಮರಿ ಈಯಲಿ..
ಹೊರಟು ಬಿಡು ಬೆಳಕ ಬಯಲಿನಲಿ
ದಾರಿ ಮುಗಿವವರೆಗೆ ಗುರಿಯು ಕರೆವ ಕಡೆಗೆ !

- ಭಾವಜೀವಿ...
ಕಾಲುದೀಪ
ಇನ್ನೂ ಯಾಕೆ ಕುಳಿತೇ ಇದ್ದೀ ಓಡು ಓಡು ಓಡು

ದೊಡ್ಡದೈತೆ ಬೆಳಕಿನ ವೇಗ ನೋಡು ನೋಡು ನೋಡು.
ಬೆಳಕಿನ ಬಣ್ಣ ಕಣ್ಣಲಿ ತುಂಬ್ಕೊಂಡ್ರಷ್ಟೇ ಸಾಲಂಗಿಲ್ಲ
ಸುತ್ತಲ ಕತ್ತಲು ಮುತ್ತದೆ ತಾನು ಸುಮ್ಕೇ ಇರಂಗಿಲ್ಲ.
ಗೂಡಲ್ಲಿದ್ರೂ ದೀಪಾ ತಾನು ಸುತ್ಲನ್ನೆಲ್ಲ ಬೆಳಗೀನೂ
ಕತ್ಲನ್ನ್ ತನ್ನ ಬುಡಕ್ಕೊತ್ತಿ ಕರಗೋದಿಲ್ವೇ ತಾನೂ.
ಎಲ್ಲಿದ್ರೂನೂ ಎತ್ತರಕ್ಕ್ ಬೆಳೀಲಿ ನಿನ್ ಮನೆ ಕಾಲುದೀಪ
ಬೆಳಕಿನ್ ಜೊತೆ ಇರೋ ಕತ್ಲು ಆಗ್ದೇ ಇರ್ಲಿ ಶಾಪ.

- Satish

ಕಣ್ಣಲ್ಲೇ ಅಷ್ಟೊಂದು ಬೆಳಕಿದೆ
'ದೀಪದ ಬಳಿ ಯಾಕೆ ಮಗೂ?
ಒಳಗೊಳಗೇ ಬೆಳಕಿದೆ ಅಷ್ಟೊಂದು
ದೀಪದ ಬೆಳಕು ಯಾಕೆ ಮಗೂ?

No comments: